ಅಥವಾ

ಒಟ್ಟು 35 ಕಡೆಗಳಲ್ಲಿ , 1 ವಚನಕಾರರು , 35 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕತ್ತೆಯಂತೆ ಬತ್ತಲೆಯಿದ್ದಡೆನು, ಇಷ್ಟಲಿಂಗಸಂಬಂಧಿಯಾಗಬಲ್ಲನೆ ? ಕಟ್ಟಿದ್ದ ಲಿಂಗವ ಕೈಯಲ್ಲಿ ಹಿಡಿದಡೇನು, ನಿತ್ಯನಾಗಬಲ್ಲನೆ ? ಅನಿತ್ಯವ ಹೊತ್ತುಕೊಂಡು ತಿರುಗುವ ಅಘೋರಿಗಳ ಕಂಡಡೆ ಮಾಗಿಯ ಕೋಗಿಲೆಯಂತೆ ಮೋರೆಯ ತೋರೆನು ಅಮುಗೇಶ್ವರಾ.
--------------
ಅಮುಗೆ ರಾಯಮ್ಮ
ನಿಜವನರಿದ ವಿರಕ್ತನು ನಿಜಾನುಭಾವಿಯೆಂದು ನುಡಿವನೆ ? ಅತ್ಯತಿಷ್ಠದ್ದಶಾಂಗುಲನೆಂಬ ಘನವನರಿದು ಕತ್ತಲೆಯ ಮನೆಯಲ್ಲಿ ಮಧುರವ ಸವಿದಂತೆ ಇರಬೇಕು, ಕಾಣಾ ಅಮುಗೇಶ್ವರಾ.
--------------
ಅಮುಗೆ ರಾಯಮ್ಮ
ಕಾಲಾಡಿಯಂತೆ ದೇಶದೇಶಕ್ಕೆ ತಿರುಗಲೇತಕ್ಕೆ ? ಪರಸಮಯದ ಜೈನನಂತೆ ನುಡಿಯಲೇತಕ್ಕೆ ? ಅರಿವುಳ್ಳವರ ಕಂಡು ಅಗಮ್ಯವ ನುಡಿಯಲೇತಕ್ಕೆ ? ಲಿಂಗವನಪ್ಪಿದ ನಿಜಮಹಿಮರ ಮಾತ ಕಲಿತು ಮಂಡೆಯ ಬೋಳಿಸಿಕೊಂಡು ಈಶನ ವೇಷವ ತೊಟ್ಟು, ಗ್ರಾಸಕ್ಕೆ ತಿರುಗುವ ವೇಷಧಾರಿಗಳ ಲಿಂಗೈಕ್ಯರೆಂದಡೆ ಅಘೋರನರಕ ತಪ್ಪದು ಕಾಣಾ, ಅಮುಗೇಶ್ವರಾ.
--------------
ಅಮುಗೆ ರಾಯಮ್ಮ
ನಿತ್ಯನಾಗಿ ಇಷ್ಟಲಿಂಗವನಪ್ಪಿದ ಶರಣನಿರವ ಭ್ರಷ್ಟಭವಿಗಳೆತ್ತ ಬಲ್ಲರೊ ? ನೆಟ್ಟನೆ ನಿಂದು ಮುಟ್ಟಿದೆನು ಶಿವನ ಪಾದವ; ಎನ್ನಲಿ ಕೆಟ್ಟಗುಣ ಹೊದ್ದಲಿಲ್ಲವೆಂದು ಮುಟ್ಟಿದೆನು ಎನ್ನ ಇಷ್ಟಲಿಂಗವ. ಕೆಟ್ಟ ಭವಭಾರಿಗಳ ಕಂಡಡೆ ಭ್ರಷ್ಟರೆಂದು ನಿಮ್ಮನಪ್ಪಿಕೊಂಬೆನು ಅಮುಗೇಶ್ವರಾ.
--------------
ಅಮುಗೆ ರಾಯಮ್ಮ
ದೇಶದೇಶವ ತಿರುಗಿ ಮಾತುಗಳ ಕಲಿತು, ಗ್ರಾಸಕ್ಕೆ ತಿರುಗುವ ದಾಸಿವೇಶಿಯ ಮಕ್ಕಳ ವಿರಕ್ತರೆಂಬೆನೆ ? ತನುವಿನಲ್ಲಿಪ್ಪ ತಾಮಸವ ಕಳೆಯದೆ ಕಾಬವರ ಕಂಡು ವಿರಕ್ತರೆಂದಡೆ, ಕುಂಭೀಪಾತಕ ನಾಯಕನರಕ ತಪ್ಪದು ಅಮುಗೇಶ್ವರಾ.
--------------
ಅಮುಗೆ ರಾಯಮ್ಮ
ಒಡೆಯರ ಕಂಡಡೆ ಬಡಿವುದಯ್ಯಾ ಬಾಲವನು ಸುನಿ. ಕೊಡುವ ಕೊಂಬುವರ ಕಂಡು ಅವರಡಿಗೆರಗುವರಯ್ಯಾ. ಮೃಡನ ವೇಷವ ತೊಟ್ಟು ಕುರಿಗಳಂತೆ ತಿರುಗುವ ಜಡಜೀವಿಗಳ ಕಂಡಡೆ, ಮೃಡನ ಶರಣರು ಮೋರೆಯನೆತ್ತಿ ನೋಡರು ಕಾಣಾ ಅಮುಗೇಶ್ವರಾ.
--------------
ಅಮುಗೆ ರಾಯಮ್ಮ
ಚಿನ್ನಗಣೆಯ ಕಟ್ಟಿದವರೆಲ್ಲ ಹೊನ್ನಿನ ನೋಟವ ಬಲ್ಲರೆ ? ಕರ್ಮಕೆ ಗುರಿಯಾದವರು ನಿಮ್ಮನೆತ್ತ ಬಲ್ಲರೊ ಅಮುಗೇಶ್ವರಾ ¯
--------------
ಅಮುಗೆ ರಾಯಮ್ಮ
ಒಡೆಯನ ಹೆಸರ ಹೇಳಿ ಒಡಲ ಹೊರೆವವರು ಕೋಟ್ಯಾನುಕೋಟಿ. ಮೃಡನ ವೇಷವ ಧರಿಸಿ ಕಡುಗಲಿಗಳಾಗಿ ಚರಿಸುವರ ಕಣ್ಣಿನಲ್ಲಿ ಕಾಣೆ. ನುಡಿವರು, ಮಾತಿನಲ್ಲಿ ಬ್ರಹ್ಮವ ನುಡಿದಲ್ಲಿ ಫಲವೇನು ¯ ಎನ್ನೊಡೆಯಾ, ಎನ್ನ ಬಿಡದೆ ಕಡುಗಲಿಯ ಮಾಡಯ್ಯಾ ಅಮುಗೇಶ್ವರಾ.
--------------
ಅಮುಗೆ ರಾಯಮ್ಮ
ಸಂತೆಗೆ ಬಂದವರೆಲ್ಲ ಸಾವಧಾನಿಯಾಗಬಲ್ಲರೆ ? ಪಸರವ ಹರಡುವರೆಲ್ಲ ರತ್ನದ ಬೆಲೆಯ ಬಲ್ಲರೆ ? ಕುದುರೆಯ ಹಿಡಿದವರೆಲ್ಲ ರಾವುತಿಕೆಯ ಮಾಡಬಲ್ಲರೆ ಅಮುಗೇಶ್ವರಾ ?
--------------
ಅಮುಗೆ ರಾಯಮ್ಮ
ಉದರಪೋಷಣಕ್ಕೆ ಗಿಡುಗಿಡುದಪ್ಪದೆ ತಿರುಗುವ ಕುನ್ನಿ ಒಡೆಯನ ಗುರುತಬಲ್ಲುದೆ ? ಮಳೆಗಾಲದಲ್ಲಿ ಮೀನು ಮಿಡಿಚೆಯ ತಿಂಬ ನರಿ ಕತ್ತಲೆಯಬಲ್ಲುದೆ ? ಸತ್ತ ಹಂದಿಯ ತಿಂಬ ನಾಯಿ ಬೆಳುದಿಂಗಳಬಲ್ಲುದೆ ? ಕರ್ತನನರಿಯದ ವೇಷಧಾರಿಗಳು ನಿಮ್ಮನೆತ್ತ ಬಲ್ಲರು ಅಮುಗೇಶ್ವರಾ ?
--------------
ಅಮುಗೆ ರಾಯಮ್ಮ
ಅಂಗದ ಆಪ್ಯಾಯನಕ್ಕೆ ಲಿಂಗವ ಮರೆದು ತಿರುಗುವ ಭಂಡಭವಿಗಳನೇನೆಂಬೆನಯ್ಯಾ ? ಲಿಂಗದಲ್ಲಿ ನಿತ್ಯರಲ್ಲ ; ಜಂಗಮದಲ್ಲಿ ಪ್ರೇಮಿಗಳಲ್ಲ ; ಹಿಡಿದ ಛಲದಲ್ಲಿ ಕಡುಗಲಿಗಳಲ್ಲ. ಮೃಡನ ಕಂಡೆಹೆನೆಂಬ ಮೂರ್ಖರ ಮುಖವ ನೋಡಲಾಗದು ; ಅವರಡಿಯ ಮೆಟ್ಟಲಾಗದು ಕಾಣಾ ಅಮುಗೇಶ್ವರಾ.
--------------
ಅಮುಗೆ ರಾಯಮ್ಮ
ಎಲ್ಲರೂ ಓದುವುದು ವಚನಂಗಳು; ಎಲ್ಲರೂ ನುಡಿವರು ಬೊಮ್ಮವ. ಎಲ್ಲರೂ ಕೇಳುವುದು ವಚನಂಗಳು ; ಹೇಳುವಾತ ಗುರುವಲ್ಲ, ಕೇಳುವಾತ ಶಿಷ್ಯನಲ್ಲ. ಹೇಳಿಹೆ ಕೇಳಿಹೆನೆಂಬನ್ನಕ್ಕರ ವಿರಕ್ತಿಸ್ಥಲಕ್ಕೆ ಭಂಗನೋಡಾ, ಅಮುಗೇಶ್ವರಾ.
--------------
ಅಮುಗೆ ರಾಯಮ್ಮ
ನಿಶ್ಚಿಂತಂಗೆ ಅಚ್ಚುಗದ ಮಾತೇಕೆ ? ಬಟ್ಟಬೋಳರಂತೆ ಹುಚ್ಚುಗೆಲೆಯಲೇಕೆ ? ಹೋಗಿ ಬರುವವರ ಮಚ್ಚಿ ಒಂದೂರಲ್ಲಿ ಇಚ್ಫೆಯ ನುಡಿದವಂಗೆ ಬಿಚ್ಚಬಣ್ಣನೆಯ ಮಾತೇಕೆ, ಅಮುಗೇಶ್ವರಾ ?
--------------
ಅಮುಗೆ ರಾಯಮ್ಮ
ಚಂದ್ರಸೂರ್ಯರಿಬ್ಬರೂ ಬಂಧನಕ್ಕೆ ಬಪ್ಪುದ ಕಂಡೆ. ಬ್ರಹ್ಮ ವಿಷ್ಣು ಭವಕ್ಕೆ ಗುರಿಯಾದುದ ಕಂಡೆ. ದೇವ ದಾನವ ಮಾನವರು ಮಾಯಾಯೋನಿಮುಖವಾದುದ ಕಂಡೆ. ಬಟ್ಟಬಯಲಲ್ಲಿ ನಿಂದು ನಿಮ್ಮ ಮುಟ್ಟಿದೆನಯ್ಯಾ ಅಮುಗೇಶ್ವರಾ.
--------------
ಅಮುಗೆ ರಾಯಮ್ಮ
ಮೊತ್ತದ ಮಾಮರ ಉರಿಯಿತ್ತ ಕಂಡೆ. ಉಪ್ಪರಿಗೆ ಬೆಂದು ಕರ್ಪೂರವಾದುದ ಕಂಡೆ. ಬೆಟ್ಟಸುಟ್ಟು ಸರ್ಪನ ಶಿರ ಹರಿದುದ ಕಂಡೆ. ನೋಡಿ ನೋಡಿ ನಿಮ್ಮ ಕೂಡಿಕೊಂಡೆನಯ್ಯಾ ಅಮುಗೇಶ್ವರಾ.
--------------
ಅಮುಗೆ ರಾಯಮ್ಮ
ಇನ್ನಷ್ಟು ... -->