ಅಥವಾ

ಒಟ್ಟು 101 ಕಡೆಗಳಲ್ಲಿ , 1 ವಚನಕಾರರು , 101 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯೋನಿಯಿಲ್ಲದ ಆಕಳಿನಲ್ಲಿ, ಬಾಯಿಯಿಲ್ಲದ ಕರು ಹುಟ್ಟಿತ್ತು. ಮೊಲೆಯಿಲ್ಲದ ಹಾಲ ಕುಡಿದು, ಒಡಲಿಲ್ಲದೆ ತಿರುಗಾಡುತ್ತದೆ. ಏಣಾಂಕಧರ ಸೋಮೇಶ್ವರಲಿಂಗ, ಇದೇನು ಸೋಜಿಗವೆಂದರಿಯೆ.
--------------
ಬಿಬ್ಬಿ ಬಾಚಯ್ಯ
ಉದಕ ಹಲವು ತೆರದಲ್ಲಿ ಏರಿಯ ಕೂಡಿ ದ್ವಾರವೊಂದರಲ್ಲಿಯೈದುವಂತೆ, ನಾನಾ ಭವಂಗಳಿಂದ ಇಷ್ಟದ ಗೊತ್ತಿನಲ್ಲಿ ನಿಂದು ನಿಶ್ಚಯವನರಿದು, ಮತ್ತಾ ಗುಣ ಬಚ್ಚಬಯಲು ಏಣಾಂಕಧರ ಸೋಮೇಶ್ವರಲಿಂಗದಲ್ಲಿ
--------------
ಬಿಬ್ಬಿ ಬಾಚಯ್ಯ
ಬೀಜವಿಲ್ಲದೆ ಬಿತ್ತು ಹುಟ್ಟುವ ತೆರನಾವುದು ? ತೊಟ್ಟಿಲ್ಲದೆ ಹಣ್ಣು ಇಪ್ಪ ತೆರನಾವುದು ? ಇಷ್ಟವಿಲ್ಲದೆ ಚಿತ್ತ ಅಪ್ಪುವ ಠಾವಾವುದು ? ಇಂತೀ ಭೇದದಲ್ಲಿ ಭೇದಕನಾಗಿ ಎರಡಳಿದು ವೇದ್ಥಿಸಿ ನಿಂದಲ್ಲಿಯೆ ಏಣಾಂಕಧರ ಸೋಮೇಶ್ವರಲಿಂಗದಲ್ಲಿ ಪ್ರಾಣಲಿಂಗಿಯ ಸ್ಥಲ.
--------------
ಬಿಬ್ಬಿ ಬಾಚಯ್ಯ
ಕಾಯದ ಮರೆಯ ಜೀವ, ಹೇಗಿಹುದೆಂಬುದನರಿ. ಜೀವದ ತ್ರಾಣದ ಕಾಯ, ಹೇಗಳಿವುದೆಂಬುದನರಿ. ಇಂತೀ ಉಭಯಸ್ಥಲ. ಕ್ರೀ ನಿಃಕ್ರೀ ಎಂಬಲ್ಲಿ ಅದೊಂದು ಭೇದ, ಏಣಾಂಕಧರ ಸೋಮೇಶ್ವರಲಿಂಗ ಸ್ವರೂಪನಾದ ಕಾರಣ.
--------------
ಬಿಬ್ಬಿ ಬಾಚಯ್ಯ
ಲೋಹಂಗಳ ರೂಪು ಒಡೆಯೆ, ಕರಗಿ ಮುನ್ನಿನಂತಾಗೆ, ಮತ್ತೆ ಪ್ರತಿರೂಪಿಂಗೆ ಒಡಲಾಗಿರೆ, ತದ್ಭಾವ ನಿಜವಸ್ತು ಜಗಹಿತಾರ್ಥ ಕೂಟಸ್ಥನಾಗಿ ಏಣಾಂಕಧರ ಸೋಮೇಶ್ವರಲಿಂಗನಾದ.
--------------
ಬಿಬ್ಬಿ ಬಾಚಯ್ಯ
ಆಕಾಶದುರಿ, ನೆಲದ ಮಡಕೆಯಲ್ಲಿ ಬಯಲ ನೀರ ತುಂಬಿ, ಇಲ್ಲದ ಅಕ್ಕಿಯ ಹಾಕಿ ಮೂರು ನೆಲೆಯಲ್ಲಿ ಕುದಿವುತ್ತಿದ್ದಿತ್ತು. ಪಾವಕನರಿದು ನೀರ ಹೊಯಿದು, ಗಂಜಿ ಅಲ್ಲಿ ಇಂಗಿತ್ತು, ಏಣಾಂಕಧರ ಸೋಮೇಶ್ವರಲಿಂಗಕ್ಕೆ ಓಗರ ಬೇಕೆಂದು.
--------------
ಬಿಬ್ಬಿ ಬಾಚಯ್ಯ
ಉರಿದು ಬೇವದು ಉರಿಯೋ, ಮರನೋ ? ಹರಿದು ಕೊರೆವದು ನೆಲನೋ, ನೀರೋ ? ನೆಲ ನೀರಿನಂತಾದುದು ಅಂಗಲಿಂಗಸಂಬಂಧ. ಉರಿ ಮರನಂತಾದುದು ಪ್ರಾಣಲಿಂಗಸಂಬಂಧ. ಈ ನಾಲ್ಕರ ಗುಣ ಉಭಯಕೂಟವಾದುದು ಶರಣಸ್ಥಲ. ಆ ಸ್ಥಲ ಸುರಧನುವಿನ ಕೆಲವಳಿಯಂತೆ, ಮರೀಚಿಕಾಜಲವಳಿಯಂತೆ, ಮಂಜಿನ ರಂಜನೆಯ ಜಂಝಾಮಾರುತನಂತೆ, ಆ ಸಂಗ ನಿಸ್ಸಂಗ ಐಕ್ಯಸ್ಥಲ, ನಿಃಕಳಂಕ ಮಲ್ಲಿಕಾರ್ಜುನ ರೂಪಳಿದು ನೀರಾದಂತೆ ಅಂಗಲಿಂಗಸಂಬಂಧಿ ಏಣಾಂಕಧರ ಸೋಮೇಶ್ವರಲಿಂಗದಲ್ಲಿ.
--------------
ಬಿಬ್ಬಿ ಬಾಚಯ್ಯ
ಆತ್ಮ ಘಟದಲ್ಲಿ ನಿಂದಿಹ ಭೇದ : ನೀರು ಮಣ್ಣಿನಂತೆ, ಬೇರು ಸಾರದಂತೆ ಗಂಧ ತರುವಿನಂತೆ ಒಂದ ಬಿಟ್ಟೊಂದ ಹಿಂಗಿರವಾಗಿ, ಅಂಗ ಲಿಂಗ ಪ್ರಾಣಯೋಗ ಸಂಬಂಧ ಸಂದಿಲ್ಲ ಏಣಾಂಕಧರ ಸೋಮೇಶ್ವರಲಿಂಗದಲ್ಲಿ.
--------------
ಬಿಬ್ಬಿ ಬಾಚಯ್ಯ
ತನುವಿನಲ್ಲಿ ಹಿಡಿದು, ಮನದಲ್ಲಿ ಅರಿದು ಜ್ಞಾನದಲ್ಲಿ ಕಂಡು, ಮಹಾಪ್ರಕಾಶದಲ್ಲಿ ಕೂಡಿ ಭೇದಭಾವವಿಲ್ಲದಿರಬೇಕು, ಏಣಾಂಕಧರ ಸೋಮೇಶ್ವರಲಿಂಗದಲ್ಲಿ ಪ್ರಾಣಲಿಂಗಸಂಬಂಧಿಯಾಗಬಲ್ಲಡೆ.
--------------
ಬಿಬ್ಬಿ ಬಾಚಯ್ಯ
ಮನಕ್ಕೆ ಸಾಹಿತ್ಯವಾದಲ್ಲದೆ, ಕಾಯಕ್ಕೆ ಸಾಹಿತ್ಯವಾಗಬಾರದು. ಆತ್ಮ ಘಟದಲ್ಲಿ ನಿಂದಲ್ಲದೆ, ಚೇತನರೂಪಾಗಿ ನಡೆಯಬಾರದು. ಇಂತೀ ದ್ವಯ ಘಟಿಸಿ ನಿಂದಲ್ಲಿ, ಏಣಾಂಕಧರ ಸೋಮೇಶ್ವರಲಿಂಗ ತಾನೆ.
--------------
ಬಿಬ್ಬಿ ಬಾಚಯ್ಯ
ಕುರುಡ ಕನ್ನಡಿಯ ಪಿಡಿದಲ್ಲಿ ಅದೇನ ಒಡಗೂಡುವ ? ಬಧಿರಂಗೆ ಗಾಂಧರ್ವವಿರಲಿ ಸ್ವರಸಂಚವುಂಟೆ ? ಅರಿವುಹೀನಂಗೆ ಘಟಧರ್ಮದ ಪೂಜೆಯಲ್ಲದೆ ಏಣಾಂಕಧರ ಸೋಮೇಶ್ವರಲಿಂಗದಲ್ಲಿ ಅರಿವು ಸನ್ನದ್ಧವಾಗಬೇಕು.
--------------
ಬಿಬ್ಬಿ ಬಾಚಯ್ಯ
ಇಷ್ಟ ಆತ್ಮನೆಂದು ಮುಟ್ಟಲುಂಟೆ ಭಿನ್ನವಾಗಿ ? ಮುಟ್ಟಿ ಮುಟ್ಟಿಸಿಕೊಂಬುದು ಇಷ್ಟವೋ, ಮನವೋ? ಉಭಯವ ಹಿಂಗಿಸಿದಲ್ಲಿ ಕಾಬುದು ಇನ್ನೇನು ? ಏಣಾಂಕಧರ ಸೋಮೇಶ್ವರಲಿಂಗ ಅನ್ಯಭಿನ್ನವಿಲ್ಲ.
--------------
ಬಿಬ್ಬಿ ಬಾಚಯ್ಯ
ಹುತ್ತದೊಳಗಣ ಹಾವ, ಮಡುವಿನೊಳಗಣ ಮತ್ಸ್ಯವ, ಮಹಾಕಾನನದ ವಾನರವ, ಹಿಡಿವ ಪರಿಯಿನ್ನೆಂತೊ ? ಹುತ್ತವನಗೆದು, ಮಡುವ ಹೂಳಿ, ಕಾನನವ ತರಿದು, ಇಂತಿವ ಹಿಡಿಯಬೇಕು. ಸಕಲೇಂದ್ರಿಯದೊಳಗಿರ್ದು ವಸ್ತುವನರಿದನೆಂಬ ಮಿಟ್ಟೆಯ ಭಂಡರನೊಪ್ಪ ಏಣಾಂಕಧರ ಸೋಮೇಶ್ವರಲಿಂಗ.
--------------
ಬಿಬ್ಬಿ ಬಾಚಯ್ಯ
ಕಾಯಿ ಒಂದರಲ್ಲಿ ಶಾಖೆ ಹಲವಹ ತೆರದಂತೆ, ಅರಿವು ಒಂದೆ, ರೂಪು ಭಿನ್ನಂಗಳಾಗಿ ತೋರುವ ತೆರದಂತೆ, ಘಟದ ವಾರಿಯಲ್ಲಿ ತೋರುವ ಇಂದುವಿನಂತೆ, ಅದೊಂದೆ ಭೇದ, ಏಣಾಂಕಧರ ಸೋಮೇಶ್ವರಲಿಂಗದಲ್ಲಿ.
--------------
ಬಿಬ್ಬಿ ಬಾಚಯ್ಯ
ಮಂಜಿನ ಮನೆಯಲ್ಲಿ ಸಂದೇಹದ ಸತಿ ಬಂದ ಬಂದವರ ಕೊಂದು ತಿನ್ನುತ್ತೈದಾಳೆ. ಅವಳಿಗೆ ಗಂಡನಾಗಲಮ್ಮರು, ಏಣಾಂಕಧರ ಸೋಮೇಶ್ವರಲಿಂಗವಲ್ಲದೆ.
--------------
ಬಿಬ್ಬಿ ಬಾಚಯ್ಯ
ಇನ್ನಷ್ಟು ... -->