ಅಥವಾ

ಒಟ್ಟು 19 ಕಡೆಗಳಲ್ಲಿ , 13 ವಚನಕಾರರು , 19 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಗಳೊಳಗೆ ಕರುಳಿಲ್ಲ, ಕಾಯದೊಳಗೆ ಮಾಯವಿಲ್ಲ, ಮನದೊಳಗೆ ಅಹಂಕಾರವಿಲ್ಲ. ದೇಹವೆಂದರಿಯೆ, ನಿರ್ದೇಹವೆಂದರಿಯೆ ಜಂತ್ರದ ಸೂತ್ರದಂತೆ ಇಪ್ಪ ನಿಬ್ಬೆರಗಿನ ಮೂರ್ತಿಯ ನೋಡಾ ! ಲಿಂಗಜಂಗಮದ ಒಕ್ಕುಮಿಕ್ಕ ಪ್ರಸಾದವ ಕೊಂಡು, ಮಿಕ್ಕು ಮೀರಿ ನಿಂದ ಮಹಾಪ್ರಸಾದಿಯ ನೋಡಾ ! ತನ್ನನರಿದಹರೆಂದು ಜಗದ ಕಣ್ಣಿಂಗೆ ಮಾಯದ ಮಂಜು ಕವಿಸಿ, ನಿಜಪದದಲ್ಲಿ ತದುಗತನಾದನು. ಕೂಡಲಸಂಗಮದೇವರಲ್ಲಿ ಮರುಳುಶಂಕರದೇವರ ನಿಲವ ನೋಡಾ, ಚೆನ್ನಬಸವಣ್ಣಾ.
--------------
ಬಸವಣ್ಣ
ಭಕ್ತಿಸ್ಥಲವನರಿದು ತಮ್ಮ ಭಕ್ತಿ ಸ್ಥಲದಲ್ಲಿ ಬಯಲಾದರು ಸಂಗನ ಬಸವರಾಜದೇವರು. ಮಾಹೇಶ್ವರ ಸ್ಥಲವನರಿದು ತಮ್ಮ ಮಾಹೇಶ್ವರ ಸ್ಥಲದಲ್ಲಿ ಬಯಲಾದರು ಮಡಿವಾಳ ಮಾಚಿತಂದೆಗಳು. ಪ್ರಸಾದಿಸ್ಥಲವನರಿದು ತಮ್ಮ ಪ್ರಸಾದಿಸ್ಥಲದಲ್ಲಿ ಬಯಲಾದರು ಬಿಬ್ಬಬಾಚಯ್ಯಗಳು. ಪ್ರಾಣಲಿಂಗಿಸ್ಥಲವನರಿದು ತಮ್ಮ ಪ್ರಾಣಲಿಂಗಿಸ್ಥಲದಲ್ಲಿ ಬಯಲಾದರು ನುಲಿಯ ಚಂದಯ್ಯಗಳು. ಶರಣಸ್ಥಲವನರಿದು ಶರಣಸ್ಥಲದಲ್ಲಿ ಬಯಲಾದರು ಘಟ್ಟಿವಾಳಯ್ಯಗಳು. ಐಕ್ಯಸ್ಥಲವನರಿದು ತಮ್ಮ ಏಕ್ಯಸ್ಥಲದಲ್ಲಿ ಬಯಲಾದರು ಅಜಗಣ್ಣಯ್ಯಗಳು. ಇಂತೀ ಷಡ್ವಿಧಸ್ಥಲವನರಿದು ತಮ್ಮ ಷಡ್ವಿಧಸ್ಥಲದಲ್ಲಿ ಬಯಲಾದರು ಚೆನ್ನ ಬಸವೇಶ್ವರ ದೇವರು. ನಿಜಸ್ಥಲನರಿದು ತಮ್ಮ ನಿಜಸ್ಥಲದಲ್ಲಿ ಬಯಲಾದರು ಅಲ್ಲಮಪ್ರಭುದೇವರು. ನಿರ್ವಯಲಸ್ಥಲವನರಿದು ತಮ್ಮ ನಿರ್ವಯಲಸ್ಥಲದಲ್ಲಿ ಬಯಲಾದರು ಏಳ್ನೂರೆಪ್ಪತ್ತಮರಗಣಂಗಳು. ಇಂತಿವರ ಒಕ್ಕುಮಿಕ್ಕ ಬಯಲಪ್ರಸಾದವ ಕೊಂಡು ನಾನು ಬಯಲಾದೆನು ಕಾಣಾ ಮಹಾಲಿಂಗ ತ್ರಿಪುರಾಂತಕದೇವಾ.
--------------
ಕಿನ್ನರಿ ಬ್ರಹ್ಮಯ್ಯ
ಗುರುಭಕ್ತರಾದವರು ಶಿವಭಕ್ತರಾದವರ ದಣಿವ ಕಂಡು ಸುಮ್ಮನಿರಲಾಗದು. ಅದೇನು ಕಾರಣವೆಂದಡೆ : ಒಬ್ಬ ಗುರುವಿನ ಮಕ್ಕಳಾದ ಮೇಲೆ ತನಗೆ ಗುರುವು ಕೊಟ್ಟ ದ್ರವ್ಯವ ಸವೆಸಲೇಬೇಕು. ಮತ್ತೆ ಪ್ರಪಂಚಿನ ತಂದೆ ಒಬ್ಬನಿಗೆ ಮಕ್ಕಳೈವರು. ಅವರು ತಂದೆಯ ಬದುಕು ನ್ಯಾಯದಿಂದ ಸರಿಮಾಡಿಕೊಂಬರು. ಈ ದೃಷ್ಟವ ಕಂಡು ನಮಗೆ ಭಕ್ತಿಪಕ್ಷವಾಗದಿದ್ದಡೆ ಈ ಪ್ರಪಂಚರಿಗಿಂತ ಕಡಿಮೆಯಾಯಿತಲ್ಲಾ ಗುರುವೆ ಎನ್ನ ಬಾಳುವೆ. ಒಂದಗಳ ಕಂಡರೆ ಕಾಗೆ ಕರೆಯದೆ ತನ್ನ ಬಳಗವನೆಲ್ಲವ ? ಒಂದು ಗುಟುಕ ಕಂಡರೆ ಕೋಳಿ ಕೂಗಿ ಕರೆಯದೆ ತನ್ನ ಕುಲವನೆಲ್ಲವ ? ಇಂತಪ್ಪ ದೃಷ್ಟವ ಕಂಡು ನೋಡಿ ಆ ಭಕ್ತರಿಗೆ ಭಕ್ತಿಪಕ್ಷವಾಗದಿದ್ದಡೆ ಆ ಕಾಗೆ ಕೋಳಿಗಿಂದ ಕರಕಷ್ಟವಾಯಿತಲ್ಲಾ ಎನ್ನ ಬಾಳುವೆ. ಭಕ್ತರಿಗೆ ಕಡಬಡ್ಡಿ ಕೊಟ್ಟ ಮೇಲೆ ಕೊಟ್ಟರೆ ಲೇಸು, ಕೊಡದಿರ್ದಡೆ ಲೇಸು. ಬೇಡಲಾಗದು, ಅದೇನು ಕಾರಣವೆಂದಡೆ ಅವರಲ್ಲಿ ಗುರು-ಲಿಂಗ-ಜಂಗಮವು ಇಪ್ಪರಾಗಿ. ಗುರುವಿನ ದ್ರವ್ಯ ಗುರುವಿಗೆ ಮುಟ್ಟಿತಲ್ಲದೆ, ಮತ್ತೆ ನ್ಯಾಯಕಿಕ್ಕಿ ಅನ್ಯರಿಗೆ ಹೇಳಿ ಅವರ ಭಂಗವ ಮಾಡಿಸಿದರೆ ಗುರುಹಿರಿಯರೆಂಬರು, ನಮ್ಮ ಮನೆಯ ಬೆಕ್ಕು ನಾಯಿಗೆ ಮನ್ನಿಸಬೇಕಲ್ಲದೆ, ಮನ್ನಿಸದಿದ್ದಡೆ ಅವರಿಗೆ ಅವರ ತಕ್ಕ ಶಿಕ್ಷೆಯಾದೀತು. ಮತ್ತೆ ಭಕ್ತಾಭಕ್ತರಿಗೆ ಕೊಟ್ಟು ಕೊಂಬ ಉದ್ಯೋಗವಾಗಲಿ ಆಚಾರ-ವಿಚಾರವಾಗಲಿ, ಬೈದರಾಗಲಿ, ಹೊಯ್ದರಾಗಲಿ ಮತ್ತೆ ಏನಾದರು ತೊಡಕು ಬರಲಿ ತಮ್ಮ ಮನೆಯೊಳಗೆ ಸುಮ್ಮನೆ ಇರುವುದು ಲೇಸು. ಮತ್ತೆ ಭಕ್ತಗಣಂಗಳು ಇದ್ದಲ್ಲಿಗೆ ಇಬ್ಬರೂ ಹೋಗಿ ತಮ್ಮಲ್ಲಿ ಇರುವ ಸ್ಥಿತಿಯ ಹೇಳಿ, ಅವರು ಹೇಳಿದ ಹಾಗೆ ಕೇಳಿಕೊಂಡು ಇಪ್ಪುದೇ ಲೇಸು. ಇಲ್ಲಿ ಭಕ್ತಗಣಂಗಳು ಒಪ್ಪಿದರೆ ಅಲ್ಲಿ ಒಪ್ಪುವರು. ಕಡ ಒಯ್ದದ್ದು ಕೊಡದಿದ್ದಡೆ, ಮತ್ತೆ ಭಕ್ತರು ಬೈದರೆ ನಮಗೆ ದುಮ್ಮಾನವಾಗುವದು ಸ್ವಾಮಿ. ಅನ್ಯರು ಒಯ್ದ ದ್ರವ್ಯ ಮುಳುಗಿದಡೆ ಚಿಂತೆಯಿಲ್ಲವು, ಭವಿಜನಾತ್ಮರು ಬೈದಡೆ ಎಳ್ಳಷ್ಟು ಸಿಟ್ಟಿಲ್ಲವು. ಇಂಥ ಬುದ್ಧಿಯ ಕೊಡಬಹುದೆ ಲಿಂಗವೆ ! ನೀವು ಬೇಡಿದುದನೀವೆನೆಂಬ ನಿಮ್ಮ ತಮ್ಮಟ ಬಿರಿದನು ಕೇಳಿ ಬೇಡಿಕೊಂಬೆನು. ಏನೆಂದಡೆ : ಉದ್ಯೋಗ ವ್ಯಾಪಾರ ಮಾಡುವಲ್ಲಿ ಹುಸಿ [ಬರೆಹವ] ಮಾಡಿ ಒಬ್ಬರ ಮನೆಯ ದ್ರವ್ಯವ ಒಬ್ಬರ ಮನೆಗೆ ಹಾಕಿ, ಅಹುದಲ್ಲದ ಮಾಡುವದ ಬಿಡಿಸು. ನಿಮ್ಮ ನೆನಹಿನೊಳಗೆ ಇಟ್ಟ ಮೇಲೆ ಮತ್ತೆ ರೊಕ್ಕ ಕೊಟ್ಟು ಉದ್ಯೋಗವ ಮಾಡದಿರಯ್ಯ. ಈ ರೊಕ್ಕವು ತಂದೆ-ಮಕ್ಕಳಿಗೆ ವಿರೋಧ. ಕೊಂಬಲ್ಲಿ ವಿರೋಧ, ಕೊಟ್ಟಲ್ಲಿ ವಿರೋಧ. ಇಂತಿದ ತಿಳಿದ ಮೇಲೆ ಹೇಸಿಕೆಯಾಯಿತ್ತು. ರೊಕ್ಕವ ಕೊಡಬೇಡ, ಸಿರಿತನ ಬೇಡ, ಬಡತನ ಕೊಡಿರಯ್ಯ. ಹಿರಿತನ ಬೇಡ ಕಿರಿತನ ಕೊಡಿರಯ್ಯ. ಒಡೆತನ ಬೇಡ ಬಂಟತನ ಕೊಡಿರಯ್ಯ. ಭಕ್ತಗಣಂಗಳ ಸೇವೆಯ ಕೊಡಿರಯ್ಯ. ಭಕ್ತರ ನೆರೆಯಲ್ಲಿ ಇರಿಸಯ್ಯ. ಅವರು ಒಕ್ಕುಮಿಕ್ಕ ಪ್ರಸಾದವ ಕೊಡಿಸಯ್ಯ. ಅವರು ತೊಟ್ಟ ಮೈಲಿಗೆಯ ಕೊಡಿಸಯ್ಯ. ಅವರ ಬಾಗಿಲ ಕಾಯಿಸಯ್ಯ. ಅವರ ಬಂಟತನ ಮಾಡಿಸಯ್ಯ. ಅವರ ಸಂಗ ಎಂದೆಂದಿಗೂ ಅಗಲಿಸದಿರಯ್ಯ. ನಾಲಗೆಯಲ್ಲಿ ಪಂಚಾಕ್ಷರವ ನಿಲಿಸಯ್ಯ. ನೇತ್ರದೊಳಗೆ ನಿಮ್ಮ ರೂಪವ ನಿಲಿಸಯ್ಯ. ಇಷ್ಟನು ಕೊಡದಿರ್ದಡೆ ನೀವು ಬೇಡಿದ್ದನೀವನೆಂಬ ನಿಮ್ಮ ತಮ್ಮಟ ಬಿರಿದು ಕೇಳಿ ನಮ್ಮ ಗಣಂಗಳು ಹಿಡಿತಿಯ ಹಿಡಿದಾರಯ್ಯ ! ಎಂದಾತ ನಮ್ಮ ಶಾಂತಕೂಡಲಸಂಗಮದೇವ.
--------------
ಗಣದಾಸಿ ವೀರಣ್ಣ
ಇನ್ನು ಪ್ರಾಣಲಿಂಗಿಸ್ಥಲದ ವಚನ: ಪ್ರಾಣಲಿಂಗವ ಬಲ್ಲೆವೆಂಬ ಅಣ್ಣಗಳು ನೀವು ಕೇಳಿರೊ. ಪವನದ ಮೂಲವನರಿಯಬಲ್ಲರೆ ಭಕ್ತನೆಂದೆನಿಸಬಹುದು. ಪ್ರಾಣನಿದ್ದ ನೆಲೆಯನರಿತು ಪ್ರಣಮದ ಸಂಬಂಧದ ಮಾಡಬಲ್ಲರೆ ಪ್ರಾಣಲಿಂಗಿಯೆಂದೆನಸಿಬಹುದು. ಹಿಂದಣ ದ್ವಾರವಂ ತೆರೆದು, ಮುಂದಣ ಮುಪ್ಪುರದ ಬಟ್ಟೆಯಂ ಮೆಟ್ಟಿ, ತ್ರಿಕೂಟವೆಂಬ ಸಂದಿಯಲ್ಲಿ ಹೊಕ್ಕು, ಮಹಾಲಿಂಗವ ನಿರೀಕ್ಷಣವ ಮಾಡಿ, ಶ್ರೀಗುರುವಿನ ಚರಣಾಂಬುಜವ ನೋಡಲಿಕ್ಕಾಗಿ ಮಹಾಜ್ಯೋತಿರ್ಮಯವೆಂಬ ಜಂಗಮವು ಸಿಕ್ಕಿತಯ್ಯಾ. ಆ ಜಂಗಮದ ಒಕ್ಕುಮಿಕ್ಕ ಪ್ರಸಾದವಂ ಸವಿದು ನಿತ್ಯಶರಣರ ಚರಣಕ್ಕೆ ನಮೋ ನಮೋ ಎನುತಿರ್ದೆ ಕಾಣಾ ಗೊಹೇಶ್ವರಪ್ರಿಯ ನಿರಾಳಲಿಂಗ.
--------------
ಗುಹೇಶ್ವರಯ್ಯ
-->