ಅಥವಾ

ಒಟ್ಟು 22 ಕಡೆಗಳಲ್ಲಿ , 15 ವಚನಕಾರರು , 22 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಯವಳಿದು ಲಿಂಗವ ಕಂಡು ಕಾಯವನು ಜರೆಯುತಿರ್ದೆ. ಮನವಳಿದು ಲಿಂಗವ ಕಂಡು ಮನವ ಜರೆಯುತಿರ್ದೆ. ಪ್ರಾಣವಳಿದು ಲಿಂಗವ ಕಂಡು ಪ್ರಾಣವ ಜರೆಯುತಿರ್ದೆ. ಭಾವವಳಿದು ಲಿಂಗವ ಕಂಡು ಭಾವವ ಜರೆಯುತಿರ್ದೆ. ಶ್ರುತಿಗುರುಸ್ವಾನುಭಾವದಿಂದೆ ಆಚಾರವಳಿದು ಲಿಂಗವ ಕಂಡು ಆಚಾರವ ಜರೆಯುತಿರ್ದೆ. ಗುರುನಿರಂಜನ ಚನ್ನಬಸವಲಿಂಗ ಸನ್ನಿಹಿತ ಭಿನ್ನವಳಿದು ಗುರುಲಿಂಗಜಂಗಮವ ಕಂಡು ಗುರುಲಿಂಗಜಂಗಮದಲ್ಲಿ ಜರೆಯುತಿರ್ದೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ನಾನು ಗುರುಲಿಂಗಜಂಗಮದಲ್ಲಿ ನಿಷೆ*ವಿಡಿದು ಬೇಡಿಕೊಂಡು ಬದುಕಿದೆನಯ್ಯಾ. ನಾನು ಪಾದೋದಕ ಪ್ರಸಾದದಲ್ಲಿ ನಿಷೆ*ವಿಡಿದು ಬೇಡಿಕೊಂಡು ಬದುಕಿದೆನಯ್ಯಾ. ನಾನು ಮೂರು ಪ್ರಣವಗಳಲ್ಲಿ ನಿಷೆ*ವಿಡಿದು ಬೇಡಿಕೊಂಡು ಬದುಕಿದೆನಯ್ಯಾ. ನಾನು ಪುರಾತನರ ಮೇಲುಪಂಕ್ತಿಗಳಲ್ಲಿ ನಿಷೆ*ವಿಡಿದು ಬೇಡಿಕೊಂಡು ಬದುಕಿದೆನಯ್ಯಾ. ನಾನು ಶರಣರುಗಳಲ್ಲಿ ನಿಷೆ*ವಿಡಿದು, ಬೇಡಿ ಹಾಡಿ ಹೊಗಳಿ ಐದು ಬಗೆಯ ಜಪವ ಜಪಿಸಿ ಬೇಡಿಕೊಂಡು ಬದುಕಿದೆನಯ್ಯಾ. ಗುಹೇಶ್ವರಾ ನಿಮ್ಮ ಶರಣ ಬಸವಣ್ಣನ ಸನ್ನಿಧಿಯಿಂದ ನಾನು ಕೃತಾರ್ಥನಾದೆನಯ್ಯಾ.
--------------
ಅಲ್ಲಮಪ್ರಭುದೇವರು
ಸಟೆದಿಟವೆಂಬ ಎರಡುವಿಡಿದು ನಡೆವುದೀ ಲೋಕವೆಲ್ಲವು. ಸಟೆದಿಟವೆಂಬ ಎರಡುವಿಡಿದು ನುಡಿವುದೀ ಲೋಕವೆಲ್ಲವು. ಸಟೆದಿಟವೆಂಬ ಎರಡುವಿಡಿದು ನಡೆವನೆ ಶರಣನು ? ಗುರುಲಿಂಗಜಂಗಮದಲ್ಲಿ ಸಟೆಯ ಬಳಸಿದಡೆ ಅವನು ತ್ರಿವಿಧಕ್ಕೆ ದ್ರೋಹಿ, ಅಘೋರ ನರಕಿ. ಉಂಬುದೆಲ್ಲ ಕಿಲ್ಬಿಷ, ತಿಂಬುದೆಲ್ಲ ಅಡಗು, ಕುಡಿವುದೆಲ್ಲ ಸುರೆ. ಹುಸಿಯೆಂಬುದೆ ಹೊಲೆ, ಶಿವಭಕ್ತಂಗೆ ಹುಸಿಯೆಂಬುದುಂಟೆ ಅಯ್ಯಾ ? ಹುಸಿಯನಾಡಿ ಲಿಂಗವ ಪೂಜಿಸಿದಡೆ ಹೊಳ್ಳ ಬಿತ್ತಿ ಫಲವನರಸುವಂತೆ,
--------------
ಅಕ್ಕಮಹಾದೇವಿ
ಭಕ್ತಂಗೆ ಗುರುಲಿಂಗಜಂಗಮದಲ್ಲಿ ಗುಣದೋಷಂಗಳನರಸದಿಪ್ಪುದು. ಮಹೇಶ್ವರಂಗೆ ಆಚಾರಕ್ಕೆ ಅಣುಮಾತ್ರದಲ್ಲಿ ತಪ್ಪದೆ ಕ್ಷಣಮಾತ್ರದಲ್ಲಿ ಸೈರಿಸದಿಪ್ಪುದು. ಪ್ರಸಾದಿಗೆ ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಸಾದವನರಿದಿಪ್ಪುದು. ಪ್ರಾಣಲಿಂಗಿಗೆ ಅರ್ಪಿತ ಅವಧಾನಂಗಳಲ್ಲಿ, ಸುಗುಣ ದುರ್ಗಣ ಗಂಧಂಗಳಲ್ಲಿ ಮಧುರ ಖಾರ ಲವಣ ಕಹಿ ಮೃದು ಕಠಿಣಂಗಳಲ್ಲಿ ನಿರೀಕ್ಷಣೆಯಿಂದ ಸೋಂಕುವಲ್ಲಿಯ ಸ್ಪರ್ಶನದಲ್ಲಿಯೆ ಅರಿದರ್ಪಿತ ಮುಂತಾಗಿ ಸ್ವಾದಿಸಬೇಕು. ಶರಣನಾದಡೆ ಭೇದಭಾವವಿಲ್ಲದೆ ವಂದನೆ ನಿಂದನೆ ಉಭಯವೆನ್ನದೆ ಸುಖದುಃಖಂಗಳ ಸರಿಗಂಡು ರಾಗವಿರಾಗನಾಗಿಪ್ಪುದು. ಐಕ್ಯನಾದಡೆ ಚಿನ್ನದೊಳಗಡಗಿದ ಬಣ್ಣದಂತೆ, ಸರ್ವವಾದ್ಯದಲ್ಲಿ ಅಡಗಿದ ನಾದದಂತೆ, ಮಂಜಿನ ರಂಜನೆ ಬಿಸಿಲ ಅಂಗದಲ್ಲಿ ಅಡಗಿದಂತೆ. ಸದ್ಯೋಜಾತಲಿಂಗವು ಕ್ರೀಯಲ್ಲಿಪ್ಪ ಭೇದ.
--------------
ಅವಸರದ ರೇಕಣ್ಣ
ಅಂದಿನವರಿಗೆ ಅಷ್ಟಾವರಣವು ಸಾಧ್ಯವಪ್ಪುದಲ್ಲದೆ ಇಂದಿನವರಿಗೆ ಅಷ್ಟಾವರಣವು ಸಾಧ್ಯವಾಗದೆಂಬರು. ಅದೇನು ಕಾರಣ ಸಾಧ್ಯವಿಲ್ಲ ಶ್ರೀಗುರುವೆ ? ಅಂದಿನ ಸೂರ್ಯ ಚಂದ್ರ ಆತ್ಮ ಆಕಾಶ ವಾಯು ಅಗ್ನಿ ಅಪ್ಪು ಪೃಥ್ವಿ ಎಂಬ ಅಷ್ಟತನುಮೂರ್ತಿಗಳು ಅಂದುಂಟು ಇಂದುಂಟು. ಅಂದು ಬೆಳೆವ ಹದಿನೆಂಟು ಜೀನಸಿನ ಧಾನ್ಯಗಳು ಇಂದು ಬಿತ್ತಿದರೆ ಬೆಳೆವವು. ಅಂದು ವಾರ ತಿಥಿ ನಕ್ಷತ್ರ ಸಂವತ್ಸರಗಳು ನಡೆದುದುಂಟು. ಇಂದು ವಾರ ತಿಥಿ ನಕ್ಷತ್ರ ಸಂವತ್ಸರಗಳು ನಡೆವುದುಂಟು. ಅಂದಿನ ಅಷ್ಟಾವರಣಸ್ವರೂಪ ಇಂದುಂಟು. ಅಂದು ಇಂದೆಂಬ ಸಂದೇಹದ ಕೀಲವ ಕಳೆದು ನಿಂದರೆ ಸಾಕು ದಯಮಾಡು ಸದ್ಗುರುವೆ. ಕೇಳೈ ಮಗನೆ : ದೃಢವಿಡಿದು ಏಕಚಿತ್ತದಲ್ಲಿ ನಂಬಿಗೆಯುಳ್ಳ ಶಿವಭಕ್ತಂಗೆ ಅಂದೇನು, ಇಂದೇನು ? ಗುರುಲಿಂಗಜಂಗಮದಲ್ಲಿ ಪ್ರೇಮ ಭಕ್ತಿ ಇದ್ದವರಿಗೆ, ವಿಭೂತಿ ರುದ್ರಾಕ್ಷಿಯಲ್ಲಿ ವಿಶ್ವಾಸ ಇದ್ದವರಿಗೆ, ಶಿವಮಂತ್ರವಲ್ಲದೆ ಎನಗೆ ಬೇರೆ ಮಂತ್ರವಿಲ್ಲವೆಂಬವರಿಗೆ ಅಂದೇನೊ, ಇಂದೇನೊ ? ಗುರುಲಿಂಗಜಂಗಮಕ್ಕೋಸ್ಕರವಾಗಿ ಕಾಯಕ ಮಾಡುವವರಿಗೆ ಪಂಚಾಚಾರವೇ ಪ್ರಾಣವಾಗಿ, ಅಷ್ಟಾವರಣವೇ ಅಂಗವಾಗಿಪ್ಪವರಿಗೆ ಅಂದೇನೊ, ಇಂದೇನೊ ? ಪುರಾತರ ವಚನವಿಡಿದು ಆರಾಧಿಸುವವರಿಗೆ, ಆದಿ ಮಧ್ಯ ಅವಸಾನ ತಿಳಿದವರಿಗೆ, ಅಂದು ಇಂದೆಂಬ ಸಂದೇಹವಿಲ್ಲವೆಂದು ಹೇಳಿದಿರಿ ಸ್ವಾಮಿ ಎನ್ನಲ್ಲಿ ನೋಡಿದರೆ ಹುರಿಳಿಲ್ಲ, ಹುರುಳಿಲ್ಲ. ಎನ್ನ ತಪ್ಪಿಂಗೇನೂ ಎಣೆಯಿಲ್ಲ, ನಿಮ್ಮ ಸೈರಣೆಗೆ ಲೆಕ್ಕವಿಲ್ಲ. ಮೇರುಗುಣವನರಸುವುದೆ ಕಾಗೆಯಲ್ಲಿ? ಪರುಷಗುಣವನರಸುವುದೆ ಕಬ್ಬುನದಲ್ಲಿ? ನೀವು ಎನ್ನ ಗುಣವನರಸಿದರೆ ಎಂತು ಜೀವಿಸುವೆನಯ್ಯಾ, ಶಾಂತಕೂಡಲಸಂಗಮದೇವ, ನಿಮ್ಮ ಧರ್ಮ, ನಿಮ್ಮ ಧರ್ಮ.
--------------
ಗಣದಾಸಿ ವೀರಣ್ಣ
ಬಹುಜಲವಂ ಬಿಟ್ಟಲ್ಲಿ ಅದು ಶೀಲವಲ್ಲ. ಪರಪಾಕ ಮುಂತಾದ ದ್ರವ್ಯವ ಬಿಟ್ಟಲ್ಲಿ ಶೀಲವಂತನಲ್ಲ. ಅದೆಂತೆಂದಡೆ ; ಅದು ಮನದ ಅರೋಚಕ, ಆ ಗುಣ ಜಗದ ಮಚ್ಚು, ಸರ್ವರ ಭೀತಿ, ದ್ರವ್ಯದ ಒದಗು ; ಈ ಗುಣ ವ್ರತಕ್ಕೆ ಸಲ್ಲ. ವ್ರತವಾವುದೆಂದಡೆ ; ಪರಾಪೇಕ್ಷೆಯ ಮರೆದು, ಪರಸತಿಯ ತೊರೆದು, ಗುರುಲಿಂಗಜಂಗಮದಲ್ಲಿ ತಾಗು ನಿರೋಧಮಂ ತಾಳದೆ, ಹೆಣ್ಣು ಹೊನ್ನು ಮಣ್ಣಿಗಾಗಿ ತಪ್ಪಿ ನುಡಿಯದೆ, ಒಡೆಯರು ಭಕ್ತರಲ್ಲಿ ತನ್ನ ಕುರಿತ ಗೆಲ್ಲ ಸೋಲಕ್ಕೆ ಹೋರದೆ, ತನಗೊಂದು ಬೇಕೆಂದು ಅನ್ಯರ ಕೈಯಲ್ಲಿ ಹೇಳಿಸದೆ, ಬಹು ಢಾಳಕತನವಂ ಬಿಟ್ಟು ಸರ್ವರ ಆತ್ಮ ಚೇತನವನರಿತು, ತಾ ಮರೆದುದ ಅರಿದು ಎಚ್ಚತ್ತು ನೋಡಿ, ಅಹುದಾದುದ ಹಿಡಿದು ಅಲ್ಲದುದ ಬಿಟ್ಟು, ಬಹುದುಃಖಮಂ ಮರೆದು ಇಂತೀ ಸರ್ವಗುಣಸಂಪನ್ನನಾಗಿ ಆತ್ಮಂಗೆ ಅರಿವಿನ ಶೀಲವ ಮಾಡಿ, ಕಾಯಕ್ಕೆ ಮರವೆ ಇಲ್ಲದ ಆಚಾರವನಂಗೀಕರಿಸಿ, ಇಂತೀ ಕಾಯ, ಮನ, ಅರಿವಿನ ಆಚಾರದಲ್ಲಿ ನಿಂದಲ್ಲಿ ನಿಂದು, ಏತಕ್ಕೂ ಮರವೆಯಿಲ್ಲದೆ ಸರ್ವ ಅವಧಾನಂಗಳಲ್ಲಿ ಹೊರಗಣ ಮಾಟ ಒಳಗಣ ಕೂಟ ಉಭಯ ಶುದ್ಧವಾದಲ್ಲಿ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ಜಿಡ್ಡು ಹರಿಯಿತ್ತು.
--------------
ಅಕ್ಕಮ್ಮ
ಘನವನರಿದು ಘನವ ವೇಧಿಸಿ ಘನಗುರುವ ತನ್ನೊಳಗೆ ಬೈಚಿಟ್ಟ ಪರಿಣಾಮಿಯ ನೋಡಾ ! ಗುರುಲಿಂಗಜಂಗಮದಲ್ಲಿ ತನುಮನಧನವ ವೇಧಿಸುವ ಪರಿಯ ನೋಡಾ ! ಕಾಯಪ್ರಸಾದದಲ್ಲಿ ಸ್ವಾಯತವ ಮಾಡಿಕೊಂಡಿಪ್ಪ ಪರಿಯ ನೋಡಾ ! ಷಡುಸ್ಥಲದಲ್ಲಿ ಸ್ವಾಯತವಾದ, ಕೂಡಲಸಂಗಮದೇವರಲ್ಲಿ ಚೆನ್ನಬಸವಣ್ಣನು.
--------------
ಬಸವಣ್ಣ
-->