ಅಥವಾ

ಒಟ್ಟು 31 ಕಡೆಗಳಲ್ಲಿ , 1 ವಚನಕಾರರು , 31 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಲಚಕ್ರದ ವಚನ : ಏಕಂ ಏಕವಾದ ವಸ್ತುವ ಲೋಕಾಲೋಕಂಗಳರಿಯವು ಸ್ಥೂಲ ಸೂಕ್ಷ್ಮವೆನುತಿರ್ಪರೆಲ್ಲರೂ, ಆತನೀತ ಬೇರೆ ಮತ್ತೊಬ್ಬಾತನೆಂಬ ಭ್ರಮೆಯಲ್ಲಿ ಭೂತಪ್ರಾಣಿಗಳವರೆತ್ತ ಬಲ್ಲರು ಆತನ ಘನವ. ಚಿಟುಕು ಮುನ್ನೂರರವತ್ತು ಕೂಡಿದಡೆ ಒಂದು ವಿಘಳಿಗೆ, ಆ ವಿಘಳಿಗೆ ಅರುವತ್ತು ಕೂಡಿದೊಡೆ ಒಂದು ಘಳಿಗೆ, ಆ ಘಳಿಗೆ ಅರುವತ್ತು ಕೂಡಿದೊಡೆ ಒಂದು ದಿನ. ದಿನ ಮೂವತ್ತು ಕೂಡಿದೊಡೆ ಒಂದು ಮಾಸ ಮಾಸ ಹನ್ನೆರಡು ಕೂಡಿದೊಡೆ ಒಂದು ವರುಷ ವರುಷ ಅರುವತ್ತು ಕೂಡಿದೊಡೆ ಒಂದು ಸಂವತ್ಸರ_ ಇಂತೀ ಕಾಲಚಕ್ರಂಗಳು ಈ ಪರಿಧಿಯಲ್ಲಿ ತಿರುಗಿ ಬರುತ್ತಿಹವು ಕಾಣಿರೆ. ನಾಲ್ಕು ಯುಗಂಗಳು ಬೇರೆ ಬೇರೆ ಕಟ್ಟಿದ ಕಟ್ಟಳೆಯೊಳು, ತಿರುಗಿ ಬರುತ್ತಿಹವು ಕಾಣಿರೆ. ಕೃತಯುಗ ಹದಿನೇಳು ಲಕ್ಷವು ಇಪ್ಪತ್ತೆಂಟುಸಾವಿರವರ್ಷ ವರ್ತಿಸಿ ನಿಂದಿತ್ತು. ತ್ರೇತಾಯುಗ ಹನ್ನೆರಡು ಲಕ್ಷವು ತೊಂಬತ್ತಾರುಸಾವಿರ ವರ್ಷ ವರ್ತಿಸಿ ನಿಂದಿತ್ತು. ದ್ವಾಪರಯುಗ ಎಂಟು ಲಕ್ಷವು ಅರುವತ್ತುನಾಲ್ಕುಸಾವಿರ ವರ್ಷ ವರ್ತಿಸಿ ನಿಂದಿತ್ತು. ಕಲಿಯುಗ ನಾಲ್ಕುಲಕ್ಷವು ಮೂವತ್ತೆರಡುಸಾವಿರ ವರ್ಷ ವರ್ತಿಸಿ ನಿಂದಿತ್ತು. _ಇಂತೀ ನಾಲ್ಕು ಯುಗಂಗಳು ಕೂಡಿ ಒಂದಾಗಿ ಮೇಳಯಿಸಿದೊಡೆ, ನಾಲ್ವತ್ತು ಮೂರು ಲಕ್ಷವು ಇಪ್ಪತ್ತುಸಾವಿರ ವರುಷ ಕಟ್ಟಳೆಯಾಯಿತ್ತು. ಈ ನಾಲ್ಕುಯುಗಂಗಳು ಇಪ್ಪತ್ತೊಂದು ಬಾರಿ ತಿರುಗಿದಡೆ ಸುರಪತಿಗೆ ಪರಮಾಯು, ಬ್ರಹ್ಮಂಗೆ ಜಾವ, ಅಷ್ಟಾಶಿತಿ ಸಹಸ್ರ ಋಷಿಯರು ಸಾವಿರಬಾರಿ ತಿರುಗಿದಡೆ ಬ್ರಹ್ಮಂಗೆ ಆಯುಷ್ಯ ನೂರಪ್ಪುದು, ವಿಷ್ಣುವಿಂಗೆ ಜಾವಪ್ಪುದು. ಆ ವಿಷ್ಣುವಿನ ಒಂದು ದಿನ(ಜಾವ?)ದೊಳಗೆ ನಾಲ್ಕು ಬಾರಿ ಹುಟ್ಟಿ ನಾಲ್ಕು ಬಾರಿ ಹೊಂದುವ ಬ್ರಹ್ಮನು, ಆ(ದಿ) ವಿಷ್ಣುವಿನ ಒಂದು ದಿನವಪ್ಪುದು, (ಅಂಥ ವಿಷ್ಣುವಿನ ಒಂದು ದಿನದಲ್ಲಿ) ಸಮಸ್ತ ಈರೇಳು ಭುವನಂಗಳೆಲ್ಲ ಭೂತಸಂಹಾರ , ಅಂಥಾ ಭೂತಸಂಹಾರಗಳು ಹದಿನೆಂಟು ಲಕ್ಷವು ಇಪ್ಪತ್ತೆಂಟುಸಹಸ್ರ ವರುಷ ತಿರುಗಲು ಪೃಥ್ವಿಯೆಲ್ಲಾ ಜಲಪ್ರಳಯ. ಅಂಥಾ ಜಲಪ್ರಳಯವೆಂಟು ಬಾರಿ ತಿರುಗಿದಡೆ ವಿಷ್ಣುವಿಂಗೆ ಮರಣ, ರುದ್ರಂಗೆ ನಿಮಿಷ. ಅಂಥಾ ರುದ್ರನ ಒಂದು ನಿಮಿಷದಲ್ಲಿ ಅತಳ ವಿತಳ ಸುತಳ ಮಹೀತಳ ರಸಾತಳ ತಳಾತಳ ಪಾತಾಳ_ ಇಂತು ಕೆಳಗೇಳು ಭುವನಂಗಳು, ಮೇಲೆ, ಸತ್ಯಲೋಕ ಜನರ್ಲೋಕ ತಪೋಲೋಕ ಮಹರ್ಲೋಕ, ಸ್ವರ್ಲೋಕ ಭುವರ್ಲೋಕ ಭೂಲೋಕ ಮೊದಲಾಗಿ_ಇಂತೀ ಲೋಕಾಲೋಕಂಗಳೆಲ್ಲ ಮುಳುಗಿ ಮಹಾಪ್ರಳಯವಾದಲ್ಲಿ ರುದ್ರಲೋಕವೊಂದುಳಿಯೆ, ಆ ರುದ್ರಂಗೆ ಒಂದುದಿನ. ಅಂಥಾದಿನ ಮುನ್ನೂರರವತ್ತು ಕೂಡಿದಡೆ ಒಂದು ವರುಷ. ಅಂಥಾ ವರುಷ ಶತಕೋಟಿ ಕೂಡಿದಡೆ ರುದ್ರಂಗೆ ಪರಮಾಯು. ಅಂಥಾ ರುದ್ರರು ಅನೇಕರು ಹೋದರಲ್ಲಾ, ಮತ್ತಂ ಪಶುಪತಿ, ಶಂಕರ, ಶಶಿಧರ, ಸದಾಶಿವ, ಗೌರೀಪತಿ, ಮಹಾದೇವ ಈಶ್ವರರೆಂಬವರು ಆ ದಿನದಲ್ಲಿ ಇವರು ಪ್ರಮಥಗಣೇಶ್ವರರು, ತಪೋರಾಜ್ಯವನುಂಬರು. ತಪಕ್ಕೆ ಬಿಜಯಂಗೈವರು ಆ ರುದ್ರರು. ಲೋಕಾಲೋಕಂಗಳು ಕೂಡಿ ಭೂತ ವರ್ತಿಸುತ್ತಿದ್ದಿತ್ತೊಂದು ಕೆಲವು ಕಾಲ, ಅದು ತೊಡೆದು ಹೋಯಿತ್ತು. ಬಳಿಕ ಶೂನ್ಯವರ್ತಿಸುತ್ತಿದ್ದಿತ್ತೊಂದು ಕೆಲವು ಕಾಲ, ಅದು ತೊಡೆದು ಹೋಯಿತ್ತು ಬಳಿಕ ಕಾಳಾಂಧರ ವರ್ತಿಸುತ್ತಿದ್ದಿತ್ತೊಂದು ಕೆಲವು ಕಾಲ, ಅದು ತೊಡೆದು ಹೋಯಿತ್ತು_ಬಳಿಕ ಮಹಾ ಪ್ರಕಾಶದ ಬೆಳಗು. ಇಂತಹ ಕಾಲಂಗಳು ಈ ಪರಿಯಲ್ಲಿ ತಿರುಗಿ ಬರುತ್ತಿಹವು ಕಾಣಿರೆ ! ಅಂತಹ ಕಾಲಂಗಳೂ ಅರಿಯವು, ಅಂತಹ ದಿನಂಗಳೂ ಅರಿಯವು ಅಂತಹ ದೇವತೆಗಳೂ ಅರಿಯರು,_ ಅಪ್ರಮಾಣ ಅಗಮ್ಯ ಅಗೋಚರ ಉಪಮಿಸಬಾರದು ಅಂತಿಂತೆನಲಿಲ್ಲ ಗುಹೇಶ್ವರಲಿಂಗ ನಿರಂಜನ ನಿರಾಳ ! ನಿರಾಮಯ !
--------------
ಅಲ್ಲಮಪ್ರಭುದೇವರು
ಅಂಗಕ್ಕೆ ಆಚಾರವಾಗಿ ಕಳೆಗಳುಳ್ಳನ್ನಕ್ಕ ಸಕಲ ಪದಾರ್ಥವ ಲಿಂಗಕ್ಕೆ ಕೊಟ್ಟಲ್ಲದೆ ಕೊಳಲಾಗದು. ಲಿಂಗವ ಬಿಟ್ಟು ಕಳೆ ಹಿಂಗಿದ ಬಳಿಕ ಅಂಗವೇನು ಬಲ್ಲುದೊ ? ಕಪ್ಪಡಿಯ ಸಂಗಮನಾಥನಲ್ಲಿ ಐಕ್ಯವಾದಂದಿಂಗೆ ನಿಜವ ಮರೆ. ಗುಹೇಶ್ವರಲಿಂಗ ಸಾಕ್ಷಿಯಾಗಿ, ಸಂಗನಬಸವಣ್ಣಾ ಅರ್ಪಿತವಿಲ್ಲದೆ ಕೊಳದಿರು ಅನರ್ಪಿತವ.
--------------
ಅಲ್ಲಮಪ್ರಭುದೇವರು
ಅರ್ಧನಾರೀಶ್ವರನೆಂಬರು ಅನುವನರಿಯದವರು. ತ್ರಿಪುರವಿಜಯನೆಂಬರು ವಿರೋಧಿಗಳಾದವರು. ಕಾಮಾರಿಯೆಂಬರು ಕಣ್‍ಕಾಣದವರು. ಜಟಾಜೂಟಕೋಟೀರಭಾರನೆಂಬರು ಜಾಣರಲ್ಲದವರು. ನಮ್ಮ ಗುಹೇಶ್ವರಲಿಂಗ ಇಂತಹ ಬಹುರೂಪದವನಲ್ಲ !
--------------
ಅಲ್ಲಮಪ್ರಭುದೇವರು
ಪದ್ಯದಾಸೆಯ ಹಿರಿಯರು ಕೆಲಬರು. ಬುದ್ಧಿಯಾಸೆಯ ಹಿರಿಯರು ಕೆಲಬರು. ಸಮತೆಯಾಸೆಯ ಹಿರಿಯರು ಕೆಲಬರು. ಇವರೆಲ್ಲರು ತಮ್ಮ ನಿಜವ ತಾವರಿಯದೆ ತಪವನಾಚರಿಸಿದರು. ವೇಷ ನಿರ್ವಯಲಾಗಿ ಆಸೆ ರೋಷವ ಬಿಟ್ಟು ದಾಸೋಹಿಯಾಗಿದ್ದಡೆ ತಾನೆ ಗುಹೇಶ್ವರಲಿಂಗ.
--------------
ಅಲ್ಲಮಪ್ರಭುದೇವರು
ಮನ ಸಂದಲ್ಲಿ ಬೇರೊಂದು ನೆನಹುಂಟೆ ? ನೆನಹು ನಿಷ್ಪತಿಯಾದಲ್ಲಿ ಉಭಯವೆಂಬುದಕ್ಕೆ ಒಡಲಿಲ್ಲ, ಅದು ಸಲ್ಲದ ನೇಮ. ಗುಹೇಶ್ವರಲಿಂಗ ಅಲ್ಲಿ ಇಲ್ಲವೆಂಬುದಕ್ಕೆ ಅದೇ ಕುರುಹು.
--------------
ಅಲ್ಲಮಪ್ರಭುದೇವರು
ಸಂಗಿಯಲ್ಲದ ನಿಸ್ಸಂಗಿಯಲ್ಲದ, ರೂಪಿಲ್ಲದ ನಿರೂಪಿಲ್ಲದ ಸುಳುಹು ನೋಡಾ ! ದ್ವೈತವಿಲ್ಲದ ಅದ್ವೈತವಿಲ್ಲದ, ಸೀಮೆಯಿಲ್ಲದ ನಿಸ್ಸೀಮೆಯಿಲ್ಲದ ಸುಳುಹು ನೋಡಾ ! ನಡೆಯಿಲ್ಲದ ನುಡಿಯಿಲ್ಲದ ಒಡಲಿಲ್ಲದ ಸುಳುಹು ನೋಡಾ ! ಕಡೆ ಮೊದಲೆಡೆದೆರಹಿಲ್ಲದಖಂಡ ಗುಹೇಶ್ವರಲಿಂಗ ನಿರಾಳ ನಿಜೈಕ್ಯ ನೋಡಾ.
--------------
ಅಲ್ಲಮಪ್ರಭುದೇವರು
ಅನಂತಕೋಟಿ ಪ್ರಕಾಶವೆಂದು ಗಣಿಸಬಾರದ ಬ್ರಹ್ಮದಾ ಬೆಳಗು, ನೋಡಬಾರದ ಘನವು ತೆರಹಿಲ್ಲದ ಬೆಳಗು, ಮಹಾಬೆಳಗು ! ತನ್ನಿಂದ ತಾನಾದ ಸ್ವಯ ಸುಖದ ನಿಜ, ನಿತ್ಯ ನಿಜ; ರೂಪು ನಿರಂಜನ, ನಿಗಮಕ್ಕತೀತ ! ಹರಿಯಜರಿಗೆಟುಕದ ಜ್ಯೋತಿರ್ಮಯ ತಾನೆ ಲೀಲೆಗೆ ಮೂಲವಾದ. ಗುಹೇಶ್ವರಲಿಂಗ ಘನಕ್ಕೆ, ಘನವಾದುದು !
--------------
ಅಲ್ಲಮಪ್ರಭುದೇವರು
ಭಕ್ತಿಭಾವದ ಭಜನೆ ಎಂತಿದ್ದುದಂತೆ ಅಂತರಂಗದಲ್ಲಿ ಅರಿವು, ಆ ಅಂತರಂಗದಲ್ಲಿ ಅರಿವಿಂಗೆ ಆಚಾರವೆ ಕಾಯ, ಆ ಆಚಾರಕಾಯವಿಲ್ಲದೆ ಅರಿವಿಂಗಾಶ್ರಯವಿಲ್ಲ. ಅರಿವು ಆಚಾರದಲ್ಲಿ ಸಮವೇಧಿಸಿದ ಲಿಂಗೈಕ್ಯ, ಕ್ರಿಯಾಬದ್ಧನೆಂದು ನುಡಿದಡೆ ಪಂಚಮಹಾಪಾತಕ. ನಿನ್ನ ಅರಿವಿಂಗಚ್ಚಾಗಿ ಆಚಾರಕ್ಕೆ ಆಳಾಗಿ ನಮ್ಮ ಗುಹೇಶ್ವರಲಿಂಗ ನಿನ್ನ ಕೈವಶಕ್ಕೊಳಗಾದನು. ನಿನ್ನ ಸುಖಸಮಾಧಿಯ ತೋರು ಬಾರಾ ಸಿದ್ಧರಾಮಯ್ಯಾ.
--------------
ಅಲ್ಲಮಪ್ರಭುದೇವರು
ನಿದ್ರೆಯಿದ್ದಡೆಯಲ್ಲಿ ಬುದ್ಧಿಯೆಂಬುದಿಲ್ಲ ನೋಡಾ. ಕಾಯವೊಂದೆಸೆ, ಜೀವವೊಂದೆಸೆ, ಗುಹೇಶ್ವರಲಿಂಗ ತಾನೊಂದೆಸೆ !
--------------
ಅಲ್ಲಮಪ್ರಭುದೇವರು
ನೆನೆ ಎಂದಡೆ ಏನ ನೆನೆವೆನಯ್ಯಾ? ಎನ್ನ ಕಾಯವೆ ಕೈಲಾಸವಾಯಿತ್ತು, ಮನವೆ ಲಿಂಗವಾಯಿತ್ತು, ತನುವೆ ಸೆಜ್ಜೆಯಾಯಿತ್ತು. ನೆನೆವಡೆ ದೇವನುಂಟೆ? ನೋಡುವಡೆ ಭಕ್ತನುಂಟೆ? ಗುಹೇಶ್ವರಲಿಂಗ ಲೀಯವಾಯಿತ್ತು.
--------------
ಅಲ್ಲಮಪ್ರಭುದೇವರು
ಆಚಾರವಂಗಲೇಪವಾಗಿ, ಕಾಯಮುಕ್ತನು ನೀನು ನೋಡಯ್ಯಾ. ಅರಿವು ಅಂತರಂಗದಲ್ಲಿ ಭರಿತವಾಗಿಪ್ಪುದಾಗಿ, ಮನೋಮುಕ್ತನು ನೀನು ನೋಡಯ್ಯಾ. ಅರ್ಪಿತ ಪರಿಣಾಮದಲ್ಲಿ ಅವಿರಳವಾಗಿಪ್ಪುದಾಗಿ ಸರ್ವಾಂಗಲಿಂಗೈಕ್ಯನು ನೀನು ನೋಡಯ್ಯಾ. ಮುಕ್ತನಲ್ಲೆಂಬ ಬಳಕೆಯ ಮಾತಂತಿರಲಿ, ಬಯಲ ಭ್ರಮೆಯ ಕಳೆದು ಭವದ ಬಟ್ಟೆಯ ಹರಿದಿಪ್ಪುದ ನಮ್ಮ ಗುಹೇಶ್ವರಲಿಂಗ ಬಲ್ಲನು ನೀನು ಮರೆಯಾಗಿ ನುಡಿವರೆ ಸಂಗನಬಸವಣ್ಣಾ.
--------------
ಅಲ್ಲಮಪ್ರಭುದೇವರು
ಕದಳಿಯ ಬನವ ಹೊಕ್ಕು ಹೊಲಬ ತಿಳಿಯದನ್ನಕ್ಕ, ಬಯಲ ಗಾಳಿಯ ಹಿಡಿದು ಗಟ್ಟಿ ಮಾಡದನ್ನಕ್ಕ, ಬರಿದೆ ಬಹುದೆ ಶಿವಜ್ಞಾನ? ಷಡುವರ್ಣ(ರ್ಗ?)ವಳಿಯದನ್ನಕ್ಕ, ಬರಿದೆ ಬಹುದೆ? ಅಷ್ಟಮದವಳಿಯದನ್ನಕ್ಕ ನಬರಿದೆ ಬಹುದೆ? ಮದಮತ್ಸರ ಮಾಡಲಿಲ್ಲ, ಹೊದಕುಳಿಗೊಳಲಿಲ್ಲ, ಗುಹೇಶ್ವರಲಿಂಗ ಕಲ್ಪಿತದೊಳಗಿಲ್ಲ.
--------------
ಅಲ್ಲಮಪ್ರಭುದೇವರು
ಕಂಗಳಾಲಿಯ ಕರಿಯ ನಾಳದಲ್ಲಿ, ಈರೇಳು ಭುವನಂಗಳಡಗಿದವು! ನಾಟಕ ನಾಟಕವ ರಚಿಸುತ್ತ, ಆಡಿಸುವ ಸೂತ್ರದ ಪರಿ, ಗುಹೇಶ್ವರಲಿಂಗ ನಿರಾಳಚೈತನ್ಯ.
--------------
ಅಲ್ಲಮಪ್ರಭುದೇವರು
ಇಹಲೋಕ ಪರಲೋಕ ತಾನಿರ್ದಲ್ಲಿ, ಗಗನ ಮೇರುಮಂದಿರ ತಾನಿರ್ದಲ್ಲಿ, ಸಕಲಭುವನ ತಾನಿರ್ದಲ್ಲಿ, ಸತ್ಯ ನಿತ್ಯ ನಿರಂಜನ ಶಿವತತ್ವ ತಾನಿರ್ದಲ್ಲಿ, ಅಂತರ ಮಹದಂತರ ತಾನಿರ್ದಲ್ಲಿ, ಸ್ವತಂತ್ರ ಗುಹೇಶ್ವರಲಿಂಗ ತಾನಿರ್ದಲ್ಲಿ.
--------------
ಅಲ್ಲಮಪ್ರಭುದೇವರು
ಅಯ್ಯ ಸದಾಚಾರ ಸದ್ಭಕ್ತಿವಿಡಿದಾಚರಿಸಿದ ಗುರುವೆ ಪರಾತ್ಪರಬ್ರಹ್ಮನೋಡಾ. ಆ ಗುರುವಿನಿಂದ ತ್ರಿವಿಧದೀಕ್ಷೆಯ ಪಡೆದ ಶಿಷ್ಯೋತ್ತಮನೆ ಮೋಕ್ಷಮಂದಿರನೋಡಾ. ಆ ಶಿಷ್ಯೋತ್ತಮನ ಕರ_ಮನ_ಭಾವದಲ್ಲಿ ಪೂಜೆಗೊಂಬ ಲಿಂಗ_ಜಂಗಮವೆ ನಿಷ್ಕಲ ಪರಶಿವತತ್ವನೋಡಾ. ಆ ಗುರು_ಶಿಷ್ಯ_ಲಿಂಗ_ಜಂಗಮದಡಿದಾವರೆಯೆ ಗುಹೇಶ್ವರಲಿಂಗ ಸಾಕ್ಷಿಯಾಗಿ ಎನಗೂ ನಿನಗೂ ಅವಿಮುಕ್ತ ಕ್ಷೇತ್ರ ನೋಡಾ ಚೆನ್ನಬಸವಣ್ಣ.
--------------
ಅಲ್ಲಮಪ್ರಭುದೇವರು
ಇನ್ನಷ್ಟು ... -->