ಅಥವಾ

ಒಟ್ಟು 83 ಕಡೆಗಳಲ್ಲಿ , 26 ವಚನಕಾರರು , 72 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭವಿಯಾಚಾರವ ಬಿಡದೆ ಭಯಾಗರವ ಹೊಗದೆ, ಶಿವಾಚಾರದಲ್ಲಿ ನಡೆವ ನಾಯಿಗಳು ಬರಿದೆ ನಾವು ಶಿವಾಚಾರಿಗಳೆಂದರೆ ನಮ್ಮ ಶಿವಾಚಾರಿ ಶರಣ ಬಸವಣ್ಣ ಮೆಚ್ಚ ನೋಡಯ್ಯ. ಶಿವಾಚಾರದ ಮಾರ್ಗವನು, ಶಿವಾಚಾರದ ಮರ್ಮವನು, ಶಿವಾಚಾರದ ವಿಸ್ತಾರವನು ನಮ್ಮ ಶರಣ ಬಸವಣ್ಣ ಬಲ್ಲನಲ್ಲದೆ ಉದರವ ಹೊರವ ವೇಷಧಾರಿಗಳೆತ್ತಬಲ್ಲರಯ್ಯ ? ಅಂತಪ್ಪ ಶಿವಾಚಾರದ ವಿಸ್ತಾರ ಸಕೀಲ ಹೇಳಿಹೆ ಕೇಳಿರಣ್ಣ. ಅದೆಂತೆಂದೊಡೆ v ಲಿಂಗಾಚಾರವೆಂದು, ಸದಾಚಾರವೆಂದು, ಶಿವಾಚಾರವೆಂದು, ಭೃತ್ಯಾಚಾರವೆಂದು, ಗಣಾಚಾರವೆಂದು ಶಿವಾಚಾರವು ಐದುತೆರನಾಗಿಪ್ಪುದು ನೋಡಯ್ಯಾ. ಶ್ರೀ ಗುರು ಕರುಣಿಸಿಕೊಟ್ಟ ಲಿಂಗವನಲ್ಲದೆ ಅನ್ಯದೈವಂಗಳಿಗೆರಗದಿಹುದೇ ಲಿಂಗಾಚಾರ ನೋಡಯ್ಯ. ತಾ ಮಾಡುವ ಸತ್ಯ ಕಾಯಕದಿಂದ ಬಂದ ಅರ್ಥಾದಿಗಳಿಂದ ತನ್ನ ಕುಟುಂಬ ರಕ್ಷಣೆಗೊಂಬ ತೆರದಿ ಗುರುಲಿಂಗಜಂಗಮ ದಾಸೋಹಿಯಾಗಿಪ್ಪುದೇ ಸದಾಚಾರ ನೋಡಯ್ಯ. ಶಿವಭಕ್ತರಾದ ಲಿಂಗಾಂಗಿಗಳಲ್ಲಿ ಪೂರ್ವದ ಜಾತಿಸೂತಕಾದಿಗಳನ್ನು ವಿಚಾರಿಸದೆ ಅವರ ಮನೆಯಲ್ಲಿ ತಾ ಹೊಕ್ಕು ಒಕ್ಕು ಮಿಕ್ಕ ಪ್ರಸಾದವ ಕೊಂಬುದೇ ಶಿವಾಚಾರ ನೋಡಯ್ಯ. ಲಿಂಗಾಂಗಿಗಳಾದ ಶಿವಭಕ್ತರೇ ಮರ್ತ್ಯದಲ್ಲಿ ಮಿಗಿಲಹರೆಂದು ತಾನು ಅವರ ಭೃತ್ಯನೆಂದರಿದು ಅಂತಪ್ಪ ನಿಜಲಿಂಗಾಂಗಿಗಳ ಚಮ್ಮಾವುಗೆಯ ಕಾಯ್ದಿಪ್ಪುದೇ ಭೃತ್ಯಾಚಾರ ನೋಡಯ್ಯ. ಗುರುಲಿಂಗಜಂಗಮ ಪಾದೋದಕ ಪ್ರಸಾದ ರುದ್ರಾಕ್ಷಿ ಮಂತ್ರಗಳೆಂಬಷ್ಟಾವರಣಂಗಳು ತನ್ನ ಪ್ರಾಣಸ್ವರೂಪವಾಗಿ ಅವುಗಳ ನಿಂದೆಯನ್ನು ಕೇಳಿ ಸೈರಿಸದೆ ಶಿಕ್ಷಿಸುವೆನೆಂಬ ನಿಷ್ಠೆಗೊಂಡುದೇ ಗಣಾಚಾರ ನೋಡಯ್ಯ. ಇದಕ್ಕೆ ಸಾಕ್ಷಿ - ಪರಮರಹಸ್ಯೇ- 'ಲಿಂಗಾಚಾರಸ್ಸದಾಚಾರಶ್ಶಿವಾಚಾರಸ್ತಥವಚ ಭೃತ್ಯಾಚಾರೋ ಗಣಾಚಾರಃ ಪಂಚಾಚಾರಃ ಪ್ರಕೀರ್ತಿತಃ || ಗುರೂಣಾ ದತ್ತಲಿಂಗಂಚ ನಾಸ್ತಿ ದೈವಂ ಮಹೀತಲೇ' ಇತಿ ಭಾವಾನುಸಂಧಾನೋ ಲಿಂಗಾಚಾರಸ್ಸಮುಚ್ಯತೇ || ಧರ್ಮಾರ್ಜಿತವಿತ್ತೇನ ತೃಪ್ತಿಶ್ಚ ಕ್ರಿಯತೇ ಸದಾ ಗುರುಜಂಗಮಲಿಂಗಾನಾಂ ಸದಾಚಾರಃ ಪ್ರಕೀರ್ತಿತಃ || ಅವಿಚಾರೇಷು ಭಕ್ತೇಷು ಜಾತಿಧರ್ಮಾದಿ ಸೂತಕಾನ್ ೀ ತದ್ಗøಹೇಷ್ವನ್ನಪಾನಾದಿ ಭೋಜನಂ ಕ್ರಿಯತೇ ಸದಾ || ತಚ್ಫಿವಾಚಾರಮಿತ್ಯಾಹುರ್ವೀರಶೈವಪರಾಯಣಾ ಶಿವಭಕ್ತಜನಾ ಸರ್ವೇ ವರಿಷ್ಠಾಃ ಪೃಥಿವೀತಲೇ || ತೇಷಾಂ ಭೃತ್ಯೋಹಮಿತ್ಯೇತದ್ಭೃತ್ಯಾಚಾರಸ್ಸ ಉಚ್ಯತೇ ೀ ಗುರುಲಿಂಗ ಜಂಗಮಶ್ಚೈವ ಪಾದತೀರ್ಥಃ ಪ್ರಸಾದತಃ ೀ ಇತಿ ಪಂಚಸ್ವರೂಪೋ[s]ಯಹಂ ಗಣಾಚಾರಃ ಪ್ರಕೀರ್ತಿತಃ ||ú ಎಂದುದಾಗಿ, ಇಂತಪ್ಪ ಶಿವಾಚಾರದ ಆಚಾರವನರಿಯದೆ ನಾ ಶಿವಭಕ್ತ ನಾ ಶಿವಭಕ್ತೆ ನಾ ಶಿವಾಚಾರಿ ಎಂದು ಕೊಂಬ ಶೀಲವಂತರ ನೋಡಿ ಎನ್ನ ಮನ ನಾಚಿ ನಿಮ್ಮಡಿಮುಖವಾಯಿತ್ತಯ್ಯ ಶ್ರೀಗಿರಿ ಚೆನ್ನಮಲ್ಲಿಕಾರ್ಜುನಯ್ಯ.
--------------
ಅಕ್ಕಮಹಾದೇವಿ
ಅಡುವ ಮಡಕೆಯ ತೋರಿ ಶಿಶುವಿನ ಹಸುವಅಡಗಿಸುವವಳಂತೆ, ಬರಿದೆ ಗುಮ್ಮನಿದೆಯೆಂದು ಶಿಶುವ ಬೆದರಿಸಿ ಹಸುಳೆಯ ಅಡಗಿಸುವವಳಂತೆ, ಎನ್ನ ಗಸಣಿಗಾರದೆ ಗುರುಚರವೆಂಬ ಬರಿಯ ಇರವ ತೋರಿ, ನೀನು ಎಲ್ಲಿ ಅಡಗಿದೆ? ನಿನ್ನ ಕುರುಹ ತ್ರಿವಿಧದಲ್ಲಿಯೂ ಕಾಣೆ. ಅದು ನಿನ್ನ ಗನ್ನವೊ? ಎನ್ನ ವಿಶ್ವಾಸದ ಹೀನವೊ? ಉಭಯವೂ ನಿನ್ನ ಕೇಡು. ಆಳಿನ ಅಪಮಾನ ಆಳ್ದಂಗೆ ತಪ್ಪದು. ನೀನೆ ಕೆಡುವೆ, ನಿನ್ನೊಳಗೆ ಮುನ್ನವೆ ನಾ ನಷ್ಟ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
--------------
ದಾಸೋಹದ ಸಂಗಣ್ಣ
ಕಾಮಿಸಿ ಕಲ್ಪಿಸಿ ಭಾವಿಸಿ ಬರಿದೆ ಬಳಲಿದೆ. ಚಿಂತೆ ಮರುಳುತನಂ ಅದೆಂತು ಬಂದುದನಂತೆ ಕಾಬುದು. ಚಿಂತೆ ಮರುಳುತನಂ ಅಚಿಂತ್ಯ ಸಕಳೇಶ್ವರ ಮಾಡಿದಂತೆ. ಅಂತೆಯಲ್ಲದೆ ಎಂತೂ ಆಗದು ಚಿಂತೆ ಮರುಳುತನಂ.
--------------
ಸಕಳೇಶ ಮಾದರಸ
ಮಂಡೆ ಬೋಳಾದಡೇನೊ ! ಹುಟ್ಟು ಬೋಳಾಗದನ್ನಕ್ಕರ, ತನು ನಿರ್ವಾಣವಾದಡೇನೊ ! ಆಸೆ ನಿರ್ವಾಣವಾಗದನ್ನಕ್ಕರ, ಇಂದ್ರಿಯ ನಿಗ್ರಹಿಯಾದಡೇನೊ ! ಷಟ್ಸ್ಥಲಾನುಗ್ರಹವಾಗದನ್ನಕ್ಕರ, ಸೌರಾಷ್ಟ್ರ ಸೋಮೇಶ್ವರಲಿಂಗವು ಬರಿದೆ ಒಲಿವನೆ ?
--------------
ಆದಯ್ಯ
ಗುರುವಿನಲ್ಲಿ ಭಕ್ತಿಯಿಲ್ಲ, ಲಿಂಗದಲ್ಲಿ ನಿಷೆ*ಯಿಲ್ಲ, ಜಂಗಮದಲ್ಲಿ ವಿಶ್ವಾಸವಿಲ್ಲ, ಪಾದೋದಕ ಪ್ರಸಾದದಲ್ಲಿ ಪ್ರೇಮವಿಲ್ಲ. ಬರಿದೆ ಭಕ್ತರೆಂಬ ಭವಭಾರಿಗಳ ಮುಖವ ನೋಡಲಾಗದಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಗುರು ಕರುಣವ ಹಡೆದುದಕ್ಕೆ ಚಿಹ್ನವಾವುದೆಂದಡೆ: ಅಂಗದ ಮೇಲೆ ಲಿಂಗಸ್ವಾಯತವಾಗಿರಬೇಕು. ಅಂಗದ ಮೇಲೆ ಲಿಂಗ ಸ್ವಾಯತವಿಲ್ಲದೆ ಬರಿದೆ ಗುರುಕರಣವಾಯಿತ್ತೆಂದಡೆ ಅದೆಂತೊ? ಲಿಂಗವಿಹೀನವಾಗಿ ಗುರುಕರುಣವುಂಟೆ? ಇಲ್ಲ. ಆ ಮಾತ ಕೇಳಲಾಗದು. ಇದು ಕಾರಣ, ಲಿಂಗಧಾರಣವುಳ್ಳುದೆ ಸವಾಚಾರ, ಇಲ್ಲದಿರೆ, ಅನಾಚಾರವೆಂಬೆನಯ್ಯಾ ತೆಲುಗೇಶ್ವರಾ.
--------------
ತೆಲುಗೇಶ ಮಸಣಯ್ಯ
ಅಂಗದೊಳಗಣ ಅಷ್ಟಮದಮೋಹಿನಿಗಳನಾರನೂ ಕಾಣೆ. ಭಂಗಿಯ ಸೊಪ್ಪು ತಿಂದ ಬಳ್ಳು ಉಳ್ಳಿಟ್ಟು ಒದರುವಂದದಿ ದೇಹ ಆತ್ಮದ ತಲೆಗೇರಿ, ಬರಿದೆ ವೇದಶಾಸ್ತ್ರಪುರಾಣವೆಂದೋದಿ ಬಲ್ಲವರೆನಿಸಿಕೊಂಬರು ಲಜ್ಜೆಭಂಡರು. ನುಡಿಯಂತೆ ನಡೆಯಲರಿಯದ ಜಡದೇಹಿಗಳ ಮೆಚ್ಚುವನೆ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಎಲಾ ಶಿವಭಕ್ತನೇ ನೀ ಕೇಳು : ಬರಿದೆ 'ನಾ ಶಿವಭಕ್ತ' 'ನೀ ಶಿವಭಕ್ತನೆ'ಂದು ತಿರುಗುವಿರಲ್ಲ ಶಿವಭಕ್ತಿಯ ನೆಲೆಯ ಬಲ್ಲಿರೇನಯ್ಯಾ ? ಅದು ಎಂತೆಂದರೆ : ಶಿವಭಕ್ತನಾದ ಬಳಿಕ ತ್ರಿವಿಧ ಪದಾರ್ಥವನ್ನು ತ್ರಿವಿಧರಿಗೆ ದಾನವ ಕೊಡಬೇಕು : ತನುವ ಕೊಡಬೇಕು ಗುರುವಿಗೆ ; ಮನವ ಕೊಡಬೇಕು ಲಿಂಗಕ್ಕೆ ; ಧನವ ಕೊಡಬೇಕು ಜಂಗಮಕ್ಕೆ]. ತ್ರಿವಿಧ ಪದಾರ್ಥವನ್ನು ತ್ರಿವಿಧರಿಗೆ ದಾನವ ಕೊಟ್ಟು, ನಿಷ್ಕಳಂಕವೇ ತಾನಾಗಿ, ಆರು ಚಕ್ರವ ಹತ್ತಿ, ವಿೂರಿದ ಸ್ಥಲದೊಳಗಿರ್ಪ ಲಿಂಗಮಂ ಪೂಜಿಸಿ, ಮೋಕ್ಷಮಂ ಪಡೆದಡೆ, ಶಿವಭಕ್ತನೆಂದು ನಮೋ ಎಂಬುವೆನಯ್ಯಾ. ಬರಿದೆ 'ನಾ ಶಿವಭಕ್ತ' 'ನೀ ಶಿವಭಕ್ತನೆ'ಂದು ತಿರುಗುವ, ಮೂಳ ಹೊಲೆಯರ ಮುಖವ ನೋಡಲಾಗದು ಕಾಣೋ ಕೂಡಲಾದಿ ಚನ್ನಸಂಗಮದೇವಾ !
--------------
ಕೂಡಲಸಂಗಮೇಶ್ವರ
ಬಂದುದ ಕಿರಿದು ಮಾಡಿ ಬಾರದುದ ಹಿರಿದು ಮಾಡಿ ಆವಾಗ ಚಿಂತಿಸಿ ಬಳಲುತ್ತಿ[ಹಿ]ರೇಕೆ? ಇರುಹೆ ಅರುದಿಂಗಳ ದವಸವ ಕೂಡಹಾಕುವಂತೆ ತಾ ಕಿರಿದಾದರೂ ಆಸೆ ಹಿರಿದಾಯಿತ್ತು. ಸ್ಥೂಲಕಾಯವಾದ ಮದಗಜಕ್ಕೇನು, ಮುಂದಕ್ಕೆ ಬೇಕೆಂಬ ಆಸೆಯುಂಟೆ? ಇಲ್ಲ. ಇರುಹೆಯ ಆನೆಯ ಅಂತರವ ನೋಡಿರಣ್ಣ. ಅರಿದು ಸಲಹುವ ಶಿವನಿದ್ದ ಹಾಗೆ ಬರಿದೆ ಆಸೆಯಿಂದಲೇಕೆ ಸಾವಿರಿ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಾಧೀನವನರಿಯದೆ?.
--------------
ಸ್ವತಂತ್ರ ಸಿದ್ಧಲಿಂಗ
ಅಯ್ಯಾ, ನಾವು ಪರಮವಿರಕ್ತರು, ಪಟ್ಟದ ಅಯ್ಯನವರು, ಚರಮೂರ್ತಿಗಳು, ಪರದೇಶಿಗಳು ಎಂದು ಶಂಖ ಗಿಳಿಲು ದಂಡಾಗ್ರ ಎಂಬ ಬಿರುದು ಪಿಡಿದು, ಕಾವಿ ಕಾಷಾಯಾಂಬರವ ಹೊತ್ತು, ಸರ್ವಕಾರ್ಯದಲ್ಲಿ ಶ್ರೇೀಷ*ರೆಂದು ಗರ್ವದಲ್ಲಿ ಕೊಬ್ಬಿ, ಕಾಮನಾಟದಲ್ಲಿ ಕಲಕಿ, ಮನಸ್ಸಿನಲ್ಲಿ ದುರ್ಗುಣವನ್ನಿಟ್ಟುಕೊಂಡು ಮಾತಿನಲ್ಲಿ ನೀತಿಯ ಸೇರಿಸುತ್ತ ಕಪಟದಲ್ಲಿ ಚರಿಸುವಂತಹ ತೊನ್ನ ಹೊಲೆಮಾದಿಗರ ಸಂಗಮಾಡಲಾಗದು, ಅವರ ಪ್ರಸಂಗವ ಕೇಳಲಾಗದು. ಅದೇನು ಕಾರಣವೆಂದಡೆ: ಗುರುಲಿಂಗಜಂಗಮವಾದ ಬಳಿಕ ಅಷ್ಟಾವರಣದಲ್ಲಿ ನಿಷಾ*ಪರವಾಗಿರಬೇಕು. ಪರಧನ ಪರಸತಿಯರ ಹಿಡಿಯೆನೆಂಬ ನೇಮದಲ್ಲಿ ಬಲ್ಲಿದರಾಗಿರಬೇಕು. ಶಿವಭಕ್ತರಾದವರ ಭವವ ಗೆಲಿಸಿ ಮೋಕ್ಷವ ಹೊಂದಿಸಬೇಕು. ಶಿವಲಾಂಛನವ ಹೊತ್ತ ಬಳಿಕ ಶಿವನಂತಿರಬೇಕು ಬರಿದೆ, ನಾನು ಮಾಹೇಶ್ವರನೆಂದು, ನಾನು ಶಿವಭಕ್ತನೆಂದು ತನ್ನ ಹೃನ್ಮಂದಿರದಲ್ಲಿ ನೆಲಸಿದ ಚಿನ್ಮಯಜಂಗಮಲಿಂಗಕ್ಕೆ ತನು-ಮನ-ಧನವೆಂಬ ತ್ರಿವಿಧಪದಾರ್ಥವನರ್ಪಿಸಿ, ತ್ರಿವಿಧಪ್ರಸಾದವ ಗರ್ಭೀಕರಿಸಿಕೊಂಡು, ಪ್ರಸನ್ನಪ್ರಸಾದವ ಸ್ವೀಕರಿಸಿ ಪರತತ್ವಪ್ರಸಾದದಲ್ಲಿ ತಾನು ತಾನಾಗಲರಿಯದೆ ಉಚ್ಚಂಗಿದುರ್ಗಿಗೆ ಬಿಟ್ಟ ಪೋತರಾಜನಂತೆ ಮೂರು ಮೂರು ಜಡೆಗಳ ಬಿಟ್ಟು, ಆಡಿನೊಳಗಿರುವ ಹಿರಿಯ ಹೋತಿನಂತೆ ಮೊಳ ಮೊಳ ಗಡ್ಡವ ಬಿಟ್ಟು, [ಡಂ]ಬ ಜಾತಿಗಾರನಂತೆ ವೇಷವ ತೊಟ್ಟು, ಮೀಸೆಯ ಬೋಳಿಸಿಕೊಂಡು, ಕೈಪವ ಧರಿಸಿ, ಸಂಸ್ಕೃತ ಗೀರ್ವಾಣಭಾಷೆಯ ಕಲಿತು, ಕಾಕ ಕುಟಿಲ ಕುಹಕದ ಗಾಳಿಪೂಜೆಯಿಂದ ಬಂದ ಸುಡಗಾಡು ಸಿದ್ಧಯ್ಯಗಳಂತೆ, ಗಿಡಮೂಲಿಕೆಗಳು ತಂತ್ರ ಮಂತ್ರ ಯಂತ್ರದ ಭಾಷೆಗಳ ಕಲಿತುಕೊಂಡು ಪುರಜನರ ಮೆಚ್ಚಿಸಬೇಕೆಂದು ಅಯ್ಯಾ, ನಾವು ಕೆರೆ ಭಾವಿಯನಗೆಸಬೇಕೆಂದು, ಮಠ ಗುಡಿಯ ಕಟ್ಟಿಸಬೇಕೆಂದು, ಮಾನ್ಯದಲಿ ಬಿಲ್ವಗಿಡಗಳ ಹಚ್ಚಬೇಕೆಂದು, ಮದುವೆ ಅಯ್ಯಾಚಾರವ ಮಾಡಬೇಕೆಂದು, ಅನ್ನಕ್ಷೇತ್ರ ಅರವಟ್ಟಿಗೆಯ ಇಡಿಸಬೇಕೆಂದು, ಪುರಾಣಗಳ ಹಚ್ಚಿಸಬೇಕೆಂದು, ಇಂತಪ್ಪ ದುರಾಸೆಯ ಮುಂದುಗೊಂಡು ನಾನಾ ದೇಶವ ತಿರುಗಿ, ಅರಸರ ಮದದಂತೆ ಗರ್ವದಿಂದ ಹೆಚ್ಚಿ, ಹೇಸಿ ಹೊಲೆ ಮಾದಿಗರ ಕಾಡಿ ಬೇಡಿ, ಹುಸಿಯನೆ ಬೊಗಳಿ ಒಬ್ಬನ ಒಲವ ಮಾಡಿ[ಕೊಂ]ಡು, ವ್ಯಾಪಾರ ಮರ್ಯಾದೆಯಲ್ಲಿ ಪೇಟೆಯಲ್ಲಿ ಕುಳಿತು ಅನಂತ ಮಾತುಗಳನಾಡುತ್ತ, ಸೆಟ್ಟಿ ಮುಂತಾದ ಅನಂತ ಕಳ್ಳ ಹಾದರಗಿತ್ತಿಯ ಮಕ್ಕಳ ಮಾತಿನಿಂದೊಲಿಸಿ, ಅವರು ಕೊಟ್ಟಡೆ ಹೊಗಳಿ, ಕೊಡದಿರ್ದಡೆ ಬೊಗಳಿ, ಆ ಭ್ರಷ್ಟ ಹೊಲೆಮಾದಿಗರು ಕೊಟ್ಟ ದ್ರವ್ಯಗಳ ತೆಗೆದುಕೊಂಡು ಬಂದು ಕಡೆಗೆ ಚೋರರು ಒಯ್ದರೆಂದು ಮಠದೊಳಗೆ ಮಡಗಿಕೊಂಡು ಪರಸ್ತ್ರೀಯರ ಹಡಕಿ ಯೋನಿಯೊಳಗೆ ಇಂದ್ರಿಯ ಬಿಟ್ಟು, ಕಾಮಕ್ರೋಧದಲ್ಲಿ ಮುಳುಗಿ ಮತಿಗೆಟ್ಟು, ಶಿವಪಥಕ್ಕೆ ದೂರಾಗಿ, ದುರಾಚಾರವ ಆಚರಿಸಿ, ನಡೆನುಡಿಗಳ ಹೊರತಾಗಿ, ವ್ಯರ್ಥ ಹೊತ್ತುಗಳೆದು, ಸತ್ತುಹೋಗುವ ಜಡದೇಹಿ ಕಡುಪಾತಕ ಕತ್ತೆ ಹಡಿಕರಿಗೆ ಪರಮ ನಿರಂಜನ ಜಂಗಮಲಿಂಗದೇವರೆಂದು ಕರೆತಂದು, ಪಾದತೀರ್ಥ ಪ್ರಸಾದವ ತೆಗೆದುಕೊಂಬುವರಿಗೆ ಇಪ್ಪತ್ತೊಂದು ಯುಗಪರಿಯಂತರ ನರಕಕೊಂಡದಲ್ಲಿಕ್ಕುವ. ಇಂತಪ್ಪ ಜಂಗಮವನು ಪೂಜೆ ಮಾಡುವಂತಹ ಶಿವಭಕ್ತನ ಉಭಯತರ ಮೂಗ ಸೀಳಿ ಮೆಣಸಿನ ಹಿಟ್ಟು ತುಪ್ಪವ ತುಂಬಿ, ಪಡಿಹಾರಿ [ಉತ್ತಣ]ಗಳೆಡದ ಪಾದುಕೆಯಿಂದ ಪಡಪಡನೆ ಹೊಡಿ ಎಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು.
--------------
ಅಂಬಿಗರ ಚೌಡಯ್ಯ
ಅರಿವು ಅರಿವು ಎನುತಿಪ್ಪಿರಿ, ಅರಿವು ಸಾಮಾನ್ಯವೆ ? ಹಿಂದಣ ಹೆಜ್ಜೆಯ ನೋಡಿ ಕಂಡಲ್ಲದೆ ನಿಂದ ಹೆಜ್ಜೆಯನರಿಯಬಾರದು. ಮುಂದಣ ಹೆಜ್ಜೆಯಳಿದಲ್ಲದೆ, ಒಂದು ಪಾದ ನೆಲೆಗೊಳ್ಳದು. ನೆಲನ ಬಿಟ್ಟು ಆಕಾಶದಲ್ಲಿ ನಿಂದು ಮುಗಿಲೊಳಗೆ ಮಿಂಚಿದಲ್ಲದೆ ತಾನಾಗಬಾರದು._ಗುಹೇಶ್ವರನೆಂಬುದು ಬರಿದೆ ಬಹುದೆ ಹೇಳಿರೆ ?
--------------
ಅಲ್ಲಮಪ್ರಭುದೇವರು
ಕಾಯ ಖಂಡಿಸದೆ ಮನ ಹರಿಯದೆ ಪ್ರಾಣ ತೊರೆಯದೆ ಭಾವ ಬಿಚ್ಚದೆ ಬರಿದೆ ಹೆಚ್ಚಿ ಬಂಧನಕ್ಕೊಳಗಾದರಲ್ಲ ! ಈ ಭಾವವೇನು ಅಷ್ಟತನು ಮದಭಾವವೊ ? ಅಷ್ಟಕುಲಾದಿ ಮದಭಾವವೊ! ಅಷ್ಟ ಸಂಸ್ಥಿತಾದಿ ಮದಭಾವವೊ ? ಚೌರಾಸಿ ಲಕ್ಷ ಯೋನಿಯಲ್ಲಿ ತಿರುಗುವ ಸಾಮಥ್ರ್ಯಭಾವವೊ ? ಹೇಳಾ ! ಧರ್ಮಕರ್ತುವಿನ ಭಾವರಸವಿನೋದಮಯನೆಂದು ಬಂದ ಬಳಿಕ ಅತಿಶಯದ ಸತಿಪತಿರತಿಭಾವದಂತಿರಬೇಕಲ್ಲದೆ ಸುರೆಭಾಂಡದ ಸಿರಿಯಂತೆ ಕಾಣಿಸಿಕೊಂಡರೇನು ? ಪರಿಕಿಸಿದರೆ ದುರ್ಗಂಜಳ, ಸೋಂಕದಿಪ್ಪರು ಹಿರಿಯರು. ಪರಿಕಿಸಿದರೆ ಇಂಥ ಅಂಗಹೀನ ಭವಿಗಳ ಸಂಗವನೊಲ್ಲದಿರ್ದನು ಗೌರವಾಂಗದ ಘನಚರಿತೆಯೊಳಗೊಲಿದು ಚನ್ನ ತನುಮನಭಾವ ಪ್ರಸನ್ನಲಿಂಗವು.
--------------
ದೇಶಿಕೇಂದ್ರ ಸಂಗನಬಸವಯ್ಯ
ಈರೇಳು ಭವನ ಹದಿನಾಲ್ಕು ಲೋಕಕ್ಕೆ ಶ್ರೀ ಮಹಾ ಸಾಂಬಶಿವನೇ ಘನವೆಂದು ನಾಲ್ಕು ವೇದಗಳು ಸಾರುತಿರ್ದವು. ಅಂತಪ್ಪ ಸಾಂಬಶಿವನು ತನ್ನ ಭಕ್ತನ ಏನೆನುತಿರ್ದನಯ್ಯಾ ? 'ಭಕ್ತಂ ಮಹೇಶಗಿನ್ನಧಿಕ', 'ನನಗಿಂತಾ ನನ್ನ ಭಕ್ತನೇ ದೊಡ್ಡವನೆ'ಂದು ಸಾಂಬಶಿವನು ಹೇಳುತ್ತಿಹನು. 'ಭಕ್ತಂ ಮಹೇಶಗಿನ್ನಧಿಕ'ವೆಂಬ ನಾಮಾಂಕಿತ ಎಂತಪ್ಪ ಭಕ್ತಂಗೆ ಸಲುವದೆಂದರೆ : ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ ಇಂತೀ ಆರು ಗುಣಂಗಳಳಿದು, ಅಷ್ಟಮದಂಗಳ ತುಳಿದು, ತ್ರಿವಿಧ ಪದಾರ್ಥವನ್ನು ತ್ರೈಮೂರ್ತಿಗಳಿಗೆ ಕೊಟ್ಟು, ಇಷ್ಟಲಿಂಗನಿಷಾ*ಪರರಾಗಿ, ಜಂಗಮವೇ ಮತ್ಪ್ರಾಣವೆಂದು ನಂಬಿ, ಪೂಜಿಸುವ ಸದ್ಭಕ್ತಂಗೆ 'ಭಕ್ತಂ ಮಹೇಶಗಿನ್ನಧಿಕ'ವೆಂಬ ನಾಮಾಂಕಿತ ಸಲುವದು. ಬರಿದೆ ಡಂಬಾಚಾರಕ್ಕೆ ಪ್ರಾತಃಕಾಲಕ್ಕೆ ಎದ್ದು, ಮೇಕೆ ಹೋತಿನ ಬಂಧುಗಳಾಗಿ ಆಡಿನ ಬೀಗಪ್ಪಗಳಾಗಿ ಪತ್ರೆಗಿಡಕೆ ಹಿಡಿಯ ತೊಪ್ಪಲನ ತೆರಕೊಂಡು ಬಂದು ಲಿಂಗದ ಮಸ್ತಕದ ಮೇಲೆ ಇಟ್ಟು, ಮಧ್ಯಾಹ್ನ ಕಾಲದಲ್ಲಿ ಒಂದು ಶಿವಜಂಗಮಮೂರ್ತಿ ಹಸಿದು ಬಂದು 'ಭಿಕ್ಷಾಂದೇಹಿ' ಎಂದರೆ 'ಅಯ್ಯ ಕೈಯಿ ಅನುವು ಆಗಿಯಿಲ್ಲ', 'ಮನೆಯಲ್ಲಿ ಹಿರಿಯರು ಇಲ್ಲ', 'ಮುಂದಲಮನೆಗೆ ದಯಮಾಡಿರಿ' ಎಂಬ ಹಂದಿಮುಂಡೇಮಕ್ಕಳಿಗೆ 'ಭಕ್ತಂ ಮಹೇಶನಿಂದಧಿಕ'ವೆಂಬ ನಾಮಾಂಕಿತ ಸಲ್ಲದೆಂದಾತನಾರು ? ನಮ್ಮ ಕೂಡಲಾದಿ ಚನ್ನಸಂಗಮದೇವ.
--------------
ಕೂಡಲಸಂಗಮೇಶ್ವರ
ಈ ಕೈಯಲೆ ಸುಖವು, ಈ ಕೈಯಲೆ ದುಃಖವು. ಏಕಯ್ಯಾ, ನೀ ನಮ್ಮ ಬರಿದೆ ಬಳಲಿಸುವೆ ನಾನಾರ ಸೇರುವೆನಯ್ಯಾ ಆರೂ ಇಲ್ಲದ ದೇಸಿಗ ನಾನು, ಕೂಡಲಸಂಗಮದೇವಾ.
--------------
ಬಸವಣ್ಣ
ಎಲಾ, ಶಿವಪೂಜೆಯ ಮಾಡುವ ಶಿವಪೂಜಕರು ನೀವು ಕೇಳಿರಯ್ಯಾ ; ನಿಮ್ಮ ಶಿವಪೂಜೆ[ಯ]ವಿಧ ಯಾವುದೆಲಾ ? ಜಲದಿಂದ ಮಜ್ಜನವ ನೀಡುವಿರಿ ; ಜಲ ಮೀನಿನೆಂಜಲು. ಅಡವಿಯಂ ತಿರುಗಿ, ಪುಷ್ಪವಂ ತಂದು, ಶಿವಗಂ ಅರ್ಪಿ[ಸುವಿರಿ]; ಪುಷ್ಪ ಭೃಂಗದೆಂಜಲು. ಪಂಚಾಭಿಷೇಕ[ವ]ಮಾಡುವಿರಿ; ಕ್ಷೀರ ಕರುವಿನೆಂಜಲು. ಮಧು[ವ] ಅಭಿಷೇಕವ ಮಾಡುವಿರಿ; [ಮಧು] ಮಧು[ಕ]ರಮಯಂ. [ಇಂ]ತೀ ನೈವೇದ್ಯವಂ ಮಾಡುವೆಯಲ್ಲದೆ ಶಿವಪೂಜೆಯ ವಿಧವ ಬಲ್ಲೆ ಏನಯ್ಯಾ ? ಅದು ಎಂತೆಂದಡೆ: ಮಾನಸ ಪೂ[ಜಕ]ಸ್ಯ ಸರ್ವಪಾಪಃ [ಪರಿಹರತಿ] | ಸಾ[ಮೀ]ಪ್ಯ[ಂ] ಸದ್ಗು[ರೋಃ] ಪ್ರಾ[ಪ್ಯ] ಪುನರ್ಭವ ವಿನಶ್ಯತಿ || ಇಂತೀ ಆಗಮ ಗ್ರಂಥವುಂಟಲ್ಲಾ ಇದನ್ನರಿತು ಮಾನಸವೆಂಬೋ ಕಲ್ಲಿನ ಮೇಲೆ ಮದಮಚ್ಚರವೆಂಬೋ ಗಂಧ ಕೊರಡಿನಿಂದ ತೇಯ್ದು, ಸತ್ಯವೆಂಬೋ ಗಂಧವಂ ಹಚ್ಚಿ, ನಿತ್ಯತ್ವ ಎಂಬೋ ಅಕ್ಷತೆಯನಿಟ್ಟು, ಗುರುಕೀಲೆಂಬೋ ಒರಳಿನಲ್ಲಿ ಮದಮಚ್ಚರವೆಂಬೋ ತಂಡಿಲಂ ಕುಟ್ಟಿ, ಬುದ್ಧಿಯೆಂಬೋ ಮೊರದಿಂದ ಝಾಡಿಸಿ ಕೇರಿ, ನಿಜವೆಂಬೋ ಅನ್ನವಂ ಮಾಡಿ, ನಿರ್ಮಳ ಚಿತ್ತವೆಂಬೋ ತುಪ್ಪವಂ ನೀಡಿ, ನಿರುಪಮ ಅವಸ್ಥೆಗಳಿಂದ ನೈವೇದ್ಯವಂ ಕೊಟ್ಟು, ಕಾಮಕ್ರೋಧವೆಂಬೋ ಬತ್ತಿಯ ಹೊಸೆದು, ಗುರುಪ್ರಣುತವೆಂಬೋ ಪಣತಿಯೊಳಗೆ ನಿರ್ಮಳವೆಂಬೋ ತೈಲವಂ ಎರೆದು ಜ್ಯೋತಿಯ ಮುಟ್ಟಿಸಿ, ನಿರ್ಮಳ ಲಿಂಗಕ್ಕಂ ಅರ್ಪಿಸಿ ಮೋಕ್ಷವ ಕಂಡಡೆ ಶಿವಪೂಜಕನೆಂದು ನಮೋ ಎಂಬುವೆನಯ್ಯಾ ಬರಿದೆ 'ನಾ ಶಿವಪೂಜೆ' 'ನೀ ಶಿವಪೂಜಕ'ನೆಂದು ತಿರುಗುವ ಮೂಳ ಹೊಲೆಯರ ಮುಖವ ನೋಡಲಾಗದು ಕಾಣಾ ಕೂಡಲಾದಿ ಚನ್ನಸಂಗಮದೇವಾ.
--------------
ಕೂಡಲಸಂಗಮೇಶ್ವರ
ಇನ್ನಷ್ಟು ... -->