ಅಥವಾ

ಒಟ್ಟು 59 ಕಡೆಗಳಲ್ಲಿ , 23 ವಚನಕಾರರು , 50 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಿಘ್ನೇಶ್ವರ ಹರನ ಮಗನೆಂಬ ಪಂಚಮಹಾಪಾತಕರ ನುಡಿಯ ಕೇಳಲಾಗದು. ಪಾರ್ವತಿ ಹರನ ಸತಿಯೆಂಬ ಲಿಂಗದ್ರೋಹಿಗಳ ನೆನೆಯಲಾಗದು. ಬಹುರೂಪಿ ಹರನ ಸರಿಯೆಂಬ ಗುರುದ್ರೋಹಿಗಳ ನೆನೆಯಲಾಗದು. ಅಂದೆಂತೆಂದಡೆ:`ಯತ್ರ ಜೀವಾತ್ಮ ತತ್ರ ಶಿವ' ಎಂದೆನಿಸಿಕೊಂಬಾತನೊಬ್ಬ ಗಣೇಶ್ವರನು. ಭೂಮಿಪೀಠಾಕಾಶವಾಗಿರ್ದಾತನೊಬ್ಬ ಗಣೇಶ್ವರನು. ಸಿರಿಯಾಳನ ಮಗನ ಬಾಣಸವ ಮಾಡಿಸಿದಾತನೊಬ್ಬ ಗಣೇಶ್ವರನು. ಅರ್ಜುನನ ಕೂಡ ಯುದ್ಧವ ಮಾಡಿ, ತನ್ನ ಸತಿಯಳಿಗೆ ತೋರಿಸಿದಾತನೊಬ್ಬ ಗಣೇಶ್ವರನು. ಅಂಗಜನ ಸಂಹಾರವ ಮಾಡಿದಾತನೊಬ್ಬ ಆದಿರುದ್ರನೆಂಬ ಗಣೇಶ್ವರನು. ದಕ್ಷನ ಸಂಹಾರವ ಮಾಡಿದಾತನೊಬ್ಬ ವೀರಭದ್ರನೆಂಬ ಗಣೇಶ್ವರನು. ಹತ್ತು ಅವತಾರ ವಿಷ್ಣುವಿಂಗೆ, ಅನಂತ ಅವತಾರ ಬ್ರಹ್ಮಂಗೆ. ಇಂತಿವರೆಲ್ಲರಿಗೂ ಕಾಲಚಕ್ರ ಕರ್ಮಚಕ್ರ ನಾದಚಕ್ರ ಬಿಂದುಚಕ್ರ. ಈ ನಾಲ್ಕೂ ಪ್ರಳಯಚಕ್ರವೆಂದೆನಿಸಿಹವು. ಇಂತಿವರೊಳಗಾದವರೆಲ್ಲರು ಇನ್ನುಳಿದವರು ನರದೇಹಿಗಳಿಗೆ ಪ್ರಳಯವು. ಉಪಮಿಸಲಾಗದು, ಅಜಾತ ಪವಿತ್ರ ನಿರ್ಲೇಪ [ಜಂಗಮಲಿಂಗ ಪ್ರಭುವೆ].
--------------
ಮಾರೇಶ್ವರೊಡೆಯರು
ಹರನ ಕೊರಳಲಿಪ್ಪ ಕರೋಟಿಮಾಲೆಯ ಶಿರದ ಲಿಖಿತವ ಕಂಡು, ಮರುಳ ತಂಡಗಳು ಓದಿ ನೋಡಲು, ಇವನಜ ಇವ ಹರಿ ಇವ ಸುರಪತಿ ಇವ ಧರಣೇಂದ್ರ ಇವನಂತಕನೆಂದು ಹರುಷದಿಂದ ಸರಸವಾಡಿತ ಕಂಡು, ಹರ ಮುಕುಳಿತನಾಗಿ ನಕ್ಕ, ನಮ್ಮ ಕೂಡಲಸಂಗಮದೇವ.
--------------
ಬಸವಣ್ಣ
ಶಿವಪ್ರಸಾದವ ಬೀಸರವೋಗಬಾರದೆಂದು ಎಚ್ಚರಿಕೆ ಅವಧಾನದಿಂದರ್ಪಿಸಿ ಪ್ರಕ್ಷಾಳನ ಲೇಹ್ಯ ಅಂಗಲೇಪನದಿಂದ ಅವಧಾನವ ಮಾಡುತಿಪ್ಪ ಪರಮ ವಿರಕ್ತರೇ ಪದಾರ್ಥವಂ ತಂದು ಕರದಲ್ಲಿ ಕೊಟ್ಟರೇನ ಮಾಡುವಿರಯ್ಯ? ಭಕ್ತರು ಕ್ರೀವಿಡಿದು ಪದಾರ್ಥವ ಪರಿಯಾಣದಲ್ಲಿ ತಂದರೆ ಭಕ್ತಿ ಭಕ್ತಿಯಿಂದ ವೈಯಾರದಲ್ಲಿ ಪ್ರಸಾದವ ಸಲಿಸುವುದೇ ಎನ್ನ ಕ್ರೀಗೆ ಸಂದಿತು. ಅದಲ್ಲದೆ ಎನ್ನ ಕರಪಾತ್ರೆಗೆ ತಂದು ಭಿಕ್ಷವ ನೀಡಿದರೆ ಕೊಂಡುದೇ ಪ್ರಸಾದ ಒಕ್ಕುದೇ ಪದಾರ್ಥ. ಅದು ಎನ್ನ ಜ್ಞಾನಕ್ಕೆ ಸಂದಿತು. ಅದು ಹೇಗೆಂದೊಡೆ ಹರಿಶಬ್ದವ ಕೇಳೆನೆಂದು ಭಾಷೆಯಂ ಮಾಡಿದ ಶಿವಭಕ್ತೆ ಸತ್ಯಕ್ಕನ ಮನೆಗೆ ಶಿವನು ಜಂಗಮವಾಗಿ ಭಿಕ್ಷಕ್ಕೆ ಬಂದು `ಹರಿ' ಎನ್ನಲೊಡನೆ ಹರನ ಬಾಯ ಹುಟ್ಟಿನಲ್ಲಿ ತಿವಿದಳು. ಅದು ಅವಳ ಭಾಷೆಗೆ ಸಂದಿತು. ಅವಳು ಶಿವದ್ರೋಹಿಯೇ? ಅಲ್ಲ. ನಾನು ಸಂಸಾರ ಸಾಗರದಲ್ಲಿ ಬಿದ್ದು ಏಳುತ್ತ ಮುಳುಗುತ್ತ ಕುಟುಕುನೀರ ಕುಡಿಯುವ ಸಮಯದಲ್ಲಿ ಶಿವನ ಕೃಪೆಯಿಂದ ನನ್ನಿಂದ ನಾನೇ ತಿಳಿದು ನೋಡಿ ಎಚ್ಚತ್ತು ಮೂರು ಪಾಶಂಗಳ ಕುಣಿಕೆಯ ಕಳೆದು ಭೋಗ ಭುಕ್ತ್ಯಾದಿಗಳನತಿಗಳೆದು ಅಹಂಕಾರ ಮಮಕಾರಗಳನಳಿದು ಉಪಾಧಿಕೆ ಒಡಲಾಶೆಯಂ ಕೆಡೆಮೆಟ್ಟಿ ಪೊಡವಿಯ ಸ್ನೇಹಮಂ ಹುಡಿಗುಟ್ಟಿ ಉಟ್ಟುದ ತೊರೆದು ಊರ ಹಂಗಿಲ್ಲದೆ ನಿರ್ವಾಣಿಯಾಗಿ ನಿಜಮುಕ್ತಿ ಸೋಪಾನವಾಗಿಪ್ಪ ಕರಪಾತ್ರೆ ಎಂಬ ಬಿರಿದು ಬಸವಾದಿಪ್ರಮಥರರಿಕೆಯಾಗಿ ಶಿವನ ಮುಂದೆ ಕಡುಗಲಿಯಾಗಿ ನಾನು ಕಟ್ಟದೆ ಆ ಬಿರುದಿಂಗೆ ಹಿಂದು ಮುಂದಾದರೆ ಶಿವನು ಮೂಗುಕೊಯ್ದು ಕನ್ನಡಿಯ ತೋರಿ ಅಣಕವಾಡಿ ನಗುತಿಪ್ಪನೆಂದು ನಾನು ಕರಪಾತ್ರೆಯಲ್ಲಿ ಸಂದೇಹವಿಲ್ಲದೆ ಸಲಿಸುತ್ತಿಪ್ಪೆನು. ಆ ಸಮಯದಲ್ಲಿ ಕೊಂಡುದೇ ಪ್ರಸಾದ ಒಕ್ಕುದೇ ಪದಾರ್ಥ ಇದು ಎನ್ನ ಸಮ್ಯಜ್ಞಾನದ ಬಿರುದಿಗೆ ಸಂದಿತು. ನಾನು ಪ್ರಸಾದದ್ರೋಹಿಯೆ? ಅಲ್ಲ. ಇಂತಲ್ಲದೆ. ನಾನು ಮನಸ್ಸಿಗೆ ಬಂದಂತೆ ಉಂಡುಟ್ಟಾಡಿ ರೂಪ ರಸ ಗಂಧವೆಂಬ ತ್ರಿವಿಧಪ್ರಸಾದದಲ್ಲಿ ಉದಾಸೀನವ ಮಾಡಲಮ್ಮೆನು. ಮಾಡಿದೆನಾದಡೆ ವರಾಹ ಕುಕ್ಕುಟನ ಬಸುರಲ್ಲಿ ಬಪ್ಪುದು ತಪ್ಪದು. ಇದ ಕಡೆಮುಟ್ಟಿ ನಡೆಸು ನಡೆಸಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಗುರುವ ನರನೆಂದು ನುಡಿವ ಕುರಿಮಾನವರ ನೆರೆಹೊರೆಯಲ್ಲಿರಲಾಗದು. ದೊರೆಸಂಗವಾದರೂ ನುಡಿಸಲಾಗದು. ನುಡಿಸಿದರೆ ಮಹಾನರಕವಯ್ಯಾ ! ಗುರುವೆ ಪರಶಿವನು, ಗುರುವೆ ಪರಬ್ರಹ್ಮ, ಗುರುವು ಹರನಿಂದಲಧಿಕ. ಗುರುವಿನಿಂದ ಹರನ ಕಾಣ್ಬರಲ್ಲದೆ, ಹರನಿಂದ ಗುರುವ ಕಾಣಬಾರದು. ಅದು ಎಂತೆಂದರೆ : ಮತ್ರ್ಯಲೋಕಕ್ಕೆನ್ನ ಮಾನವಶರೀರಿಯ ಮಾಡಿ ಕಳುಹಿ, ಎನ್ನ ಮಾನವಜನ್ಮದ ಬಂಧನ ಕಳೆದು, ಗುರುವಾಗಿ ಬಂದು ಮುಕ್ತಿಯ ತೋರಿಸಿ ಕೈಲಾಸಕೆನ್ನ ಯೋಗ್ಯನ ಮಾಡಿದ. ಇಹದಲ್ಲಿ ಪುಣ್ಯ, ಪರದಲ್ಲಿ ಮುಕ್ತಿಯೆಂಬ ಇವನೆರಡು ಗುರುಪಾದದಲ್ಲಿಯೆ ಕಂಡೆನಯ್ಯಾ, ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಏಕೋದೇವ ಶಿವನದ್ವಿತೀಯ. ಶಿವನಲ್ಲದೆ ಬೇರೆ ದೈವವಿಲ್ಲವೆಂದು ಸಾರಿ ನುಡಿವುತ್ತಿ(ವೆ), ಶ್ರುತಿ ಶಾಸ್ತ್ರ ಪುರಾಣ ಆಗಮಂಗಳೆಲ್ಲವು. ಶಿವನಲ್ಲದೆ ಬೇರೆ ದೈವವಿಲ್ಲವೆಂದು ಸಾರಲು, ಮರಳಿ ವಿಷ್ಣು ದೇವರೆಂದು ನುಡಿವುತ್ತಿಪ್ಪರು. ದೈವಕ್ಕೆ ಉತ್ಪತ್ತಿ ಸ್ಥಿತಿ ಲಯಂಗಳೆಂಬುದುಂಟೆ. ದೃಷ್ಟಾಂತರ ಜಾಯತೆ ಅಷ್ಟಮಿ ಸಾಕ್ಷಿ. ಆ ವಿಷ್ಣುವಿಂಗೆ ಲಯವುಂಟೆಂಬುದಕ್ಕೆ ಕಾಡಬೇಡನೆಚ್ಚಂಬು ಅಂಗಾಲಲ್ಲಿ ನೆಟ್ಟು ಪ್ರಾಣವ ಬಿಟ್ಟುದೇ ಸಾಕ್ಷಿ. ಅಚ್ಯುತಂಗೆ ಅನೇಕ ಭವವುಂಟೆಂಬುದಕ್ಕೆ ಮತ್ಸ್ಯ ಕೂರ್ಮ ವರಾಹವತಾರವಾದುದೇ ಸಾಕ್ಷಿ. ಆ ಹರಿ, ಹರನ ಭೃತ್ಯನೆಂಬುದಕ್ಕೆ ರಾಮೇಶ್ವರ ಆದಿಯಾದ ಪ್ರತಿಷೆ*ಗಳೇ ಸಾಕ್ಷಿ. ಇಂತಪ್ಪ ಹರಿಯನು ಹರಂಗೆ ಸರಿಯೆಂದು ನುಡಿವರು ಅಜ್ಞಾನಿಗಳು. ಆತಂಗಿಲ್ಲದ ಮಹತ್ವದ ತಾವು ನುಡಿವುತ್ತಿಹರು. ಬಲಿಯ ಮೂರಡಿ ಭೂಮಿಯ ಸ್ಥಾನವ ಬೇಡಿದಲ್ಲಿ ಪಂಚಾಶತಕೋಟಿ ಭೂಮಿ ಸಾಲದೆ ಹೋಯಿತೆಂದು ನುಡಿವುತ್ತಿಹರು. ಮಗಧನೆಂಬ ರಾಕ್ಷಸನನಟ್ಟುವಲ್ಲಿ ಅದೆಲ್ಲಿ ಬಂದಿತೊ, ಓಡುವುದಕ್ಕೆ ಭೂಮಿ. ವಿಷ್ಣುವಿನ ಹೃದಯದಲ್ಲಿ ವಿಶ್ವವೆಲ್ಲಾ ಇದ್ದೀತೆಂದು ನುಡಿವುತ್ತಿಹರು. ಆ ವಿಷ್ಣುವಿನ ಹೃದಯದಲ್ಲಿ ವಿಶ್ವವೆಲ್ಲವು ಇದ್ದರೆ, ಸೀತೆ ಹೋದಳೆಂದು ಅರಸಿ ಸೇತುವೆ ಕಟ್ಟಿ ದಣಿಯಲೇಕೊ. ವಿಷ್ಣುವಿನ ಬಾಣದ ಮೊನೆಯಲ್ಲಿ ಸಪ್ತಸಮುದ್ರಂಗಳೆಲ್ಲವೂ ಬಂದವೆಂದು ನುಡಿವುತ್ತಿಹರು. ಆ ವಿಷ್ಣುವಿನ ಬಾಣದ ಮೊನೆಯಲ್ಲಿ ಸಪ್ತಸಮುದ್ರಂಗಳೆಲ್ಲವು ಬಂದರೆ, ಕಪಿಗಳ ಕೂಡಿ ಸೇತುವೆ ಕಟ್ಟುವುದಕ್ಕೇನು ಕಾರಣ. ಇಂತಪ್ಪ ಹರಿಯನು ಹರಗೆ ಸರಿಯೆಂದು ನುಡಿವ ದ್ವಿಜರ ನುಡಿಯನು ಪ್ರಮಾಣಿಸಿದರೆ, ಅಘೋರ ನರಕದಲ್ಲಿ ಇಕ್ಕದೆ ಮಾಣ ನಿಜಗುರು ಶಾಂತಮಲ್ಲಿಕಾರ್ಜುನ.
--------------
ನಿಜಗುರು ಶಾಂತಮಲ್ಲಿಕಾರ್ಜುನ
ಹರಿ ಹರಗೆ ಸರಿಯೆಂಬ ಎಲೆ ನೀಚ ಪರವಾದಿಗಳಿರಾ ನೀವು ಕೇಳಿರೊ. ಹರಿ ಹತ್ತು ಭವದಲ್ಲಿ ಹುಟ್ಟಿ ಬಂದು ನಮ್ಮ ಹರನ ಶ್ರೀಚರಣವನರ್ಚಿಸಿ ವರವ ಪಡೆದನಲ್ಲದೆ ನಮ್ಮ ಹರನು ಆವ ಭವದಲ್ಲಿ ಹುಟ್ಟಿದ ? ಆವ ದೇವರ ಪೂಜಿಸಿ ಆವ ಆವ ಫಲಪದವ ಪಡೆದನು ಬಲ್ಲರೆ ನೀವು ಹೇಳಿರೊ ? ಇದನರಿಯದೆ ಹರಿ ಹರಗೆ ಸರಿಯೆಂಬ ಪರವಾದಿಗಳ ಬಾಯ ಕೆರಹಿನಟ್ಟೆಯಲ್ಲಿ ಹೊಯ್ದಲ್ಲದೆ ಎನ್ನ ಸಿಟ್ಟು ಮಾಣದು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಗುರುವ ನರಭಾವದಲ್ಲಿ ಕಂಡಡೆ, ನರಕ ತಪ್ಪದು ನೋಡಯ್ಯಾ. ಗುರುವ ಹರಭಾವದಲ್ಲಿ ಕಂಡಡೆ, ಮೋಕ್ಷ ತಪ್ಪದು ನೋಡಯ್ಯಾ. ಗುರುಪೂಜೆಯೆ ಹರಪೂಜೆಯೆಂದರಿದು, ಗುರುಪೂಜೆಯ ಮಾಡಿದಡೆ, ಹರಪೂಜೆ ತಪ್ಪದು ನೋಡಯ್ಯ. ಗುರುವಿನ ಒಲುಮೆಯೇ ಹರನ ಒಲುಮೆ. ಇದು ಸತ್ಯ. ನೀನೇ ಬಲ್ಲೆ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮ ಭಕ್ತನ, ಗುರುಭಕ್ತಿಯಿದು.
--------------
ಸ್ವತಂತ್ರ ಸಿದ್ಧಲಿಂಗ
ಸಾಮವೇದಿಗಳು ಶ್ವಪಚಯ್ಯಗಳ ಹಸ್ತದಲ್ಲಿ ಗುರುಕಾರುಣ್ಯವ ಪಡೆದು, ಅವರೊಕ್ಕುದ ಕೊಂಡು ಕೃತಾರ್ಥರಾದಂದು ಎಲೆ ವಿಪ್ರರಿರಾ ನಿಮ್ಮ ಕುಲಂಗಳೆಲ್ಲಿಗೆ ಹೋದವು ? ಕೆಂಬಾವಿ ಭೋಗಯ್ಯಗಳ ಮನವ ಶಿವನಂದು ನೋಡಲೆಂದು ಅನಾಮಿಕ ವೇಷವ ಧರಿಸಿ ಬರಲು, ಅವರನಾರಾಧಿಸಲು, ಭೋಗತಂದೆಗಳ ನೆರೆದ ದ್ವಿಜರೆಲ್ಲರು ಪುರದಿಂದ ಪೊರಮಡಿಸಲು, ಪುರದ ಲಿಂಗಗಳೆಲ್ಲವು ಬೆನ್ನಲುರುಳುತ್ತ ಪೋಗಲು, ದುರುಳ ವಿಪ್ರರೆಲ್ಲರು ಬೆರಳ ಕಚ್ಚಿ ತ್ರಾಹಿ ತ್ರಾಹಿ, ಕರುಣಾಕರ ಮೂರ್ತಿಯೆಂದು ಶರಣುಹೊಕ್ಕು ಮರಳಿ ಬಿಜಯಂಗೈಸಿಕೊಂಡು ಬಾಹಂದು, ನಿಮ್ಮ ಕುಲಾಭಿಮಾನವೆಲ್ಲಿಗೆ ಹೋದವು ಹೇಳಿರೆ ? ಈಶನೊಲಿದು ಚೆನ್ನಯ್ಯಗಳ ಏಕೋನಿಷೆ*ಯ ಸ್ಥಾನದಾನ ಸಮರ್ಪಣಭಾವ ಬಲಿದು, ಅಭವ ಪ್ರತ್ಯಕ್ಷನಾಗಿ ಕೈದುಡುಕಿ ಸಹಭೋಜನವ ಮಾಡುವಂದು, ನಿಮ್ಮ ವೇದಾಗಮ ಶ್ರುತಿಮಾರ್ಗದಾಚಾರವೆಲ್ಲಿಗೆ ಹೋದವು ಹೇಳಿರೆ ? ಬೊಬ್ಬೂರಲ್ಲಿ ಬಿಬ್ಬಿ ಬಾಚಯ್ಯಗಳು ಹರನ ಗಣಂಗಳ ನೆರಹಿ, ಪರಮಾನಂದದಿಂ ಗಣಪರ್ವವಂ ಮಾಡಿ, ಗಣಪ್ರಸಾದಮಂ ಪುರದವೀಥಿಗಳೊಳು ಮೆರಸುತ್ತ ಬರಲು, ನೆರೆದ ವಿಪ್ರರೆಲ್ಲರು ಉಚ್ಛಿಷ್ಟಾ ಚಾಂಡಾಲವೆಂದು ದೂಷಿಸಿ, ಬಂಡಿಯಂ ಮುರಿದು ತಂಡತಂಡದ ಭಕ್ತರನೆಲ್ಲನವಗಡಿಸುತ್ತಿರಲು, ಹರಹರ ಮಹಾದೇವ ಮಹಾಪ್ರಸಾದ ಪರಂಜ್ಯೋತಿಯೆಂದು ಪ್ರಸಾದಮಂ ಕೈಯೆತ್ತಿ ಸೂಸಲು, ಪುರವೆಲ್ಲ ಬೆಂದು ಗಡ್ಡದ ಜನರೆಲ್ಲರು ಘರಿಘರಿಲ್ಲದೆ ಉರಿದು ಕರಿಯಾಗಲು, ಉಳಿದ ವಿಪ್ರರೆಲ್ಲರೂ ತ್ರಾಹಿ ತ್ರಾಹಿ, ಶರಣಾಗತ ರಕ್ಷಕರಿರಾ ಒಮ್ಮೆಗೆ ಕಾವುದೆಂದು ಧರೆಯೊಳು ಬಿದು ಬೆರಳಕಚ್ಚುವಂದು, ಅಂದು ನಿಮ್ಮ ಆಗಮಾರ್ಥದ ಕುಲಾಚಾರ ಮಾರ್ಗವೆಲ್ಲಿಗೆ ಹೋದವು ಹೇಳಿರೆ. ಸಾಕ್ಷಿ: ಸ್ತ್ರೀ ವಾಚsಧಪುರುಷಃ ಷಂಡಶ್ಚಾಂಡಾಲೋ ದ್ವಿಜವಂಶಜಃ | ನ ಜಾತಿಭೇದೋ ಲಿಂಗಾರ್ಚೇ ಸರ್ವೇ ರುದ್ರಗಣಾಃ ಸ್ಮೃತಾಃ || ಇದು ಕಾರಣ, ಶರಣರಿಗೆ ಪ್ರತಿಯಿಲ್ಲ. ಬೆರಳನೆತ್ತದೆ ಇಕ್ಕಿದ ಮುಂಡಿಗೆಯನಾ ಸರ್ವರೆತ್ತಿಕೊಳ್ಳರೆ ದ್ವಿಜರು, ಬಸವಪ್ರಿಯ ಕೂಡಲಚೆನ್ನಸಂಗಯ್ಯನೊಬ್ಬನೆಂದು.
--------------
ಸಂಗಮೇಶ್ವರದ ಅಪ್ಪಣ್ಣ
ಶಿವಶಿವಾ ಎಂದು ಶಿವನ ಕೊಂಡಾಡಿ ಭವಪಾಶವ ಹರಿದೆನಯ್ಯ. ಹರಹರಾ ಎಂದು ಹರನ ಕೊಂಡಾಡಿ ಹರಗಣತಿಂತಿಣಿಯೊಳಗೆ ನಿಂದೆನಯ್ಯ. ಇದು ಕಾರಣ ಹರಾಯ ಶಿವಾಯ ಶ್ರೀ ಮಹಾದೇವಾಯ ಓಂ ನಮಃಶಿವಾಯ ಎಂದೆನುತಿರ್ದೆನಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಹರಿಯ ಬಾಯ ಹಾಲು, ಉರಿಯ ಕೈಯ ಬೆಣ್ಣೆ ಗಿರಿಯ ಮೇಲಣ ಶಿಶು ಹರಿದಾಡುತ್ತಿದೆ, ಕರೆಯಿಂ ಭೋ ಹಾಲುಗುಡಿ[ಯೆ]. ಸುರಪತಿಯ ಗಜವೇರಿ ಮರಳಿ ಹೋಹನ ಕಂಡು ಕರೆಯಿಂ ಭೋ. ಹರನ ಮಂತಣಿಯ ಶೂಲದಲ್ಲಿ, ಶಿರದಲುಂಗುಟ ಊರಿ, ನೆರೆವುತ್ತಿರ್ದುದ ನಾನೇನೆಂಬೆ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಮುನ್ನ ಮಹಾನಂದಿನಿಯೆಂಬ ವೇಶ್ಯಾಂಗನೆಯ ದೆಸೆಯಿಂದೆ ಕುಕ್ಕಟ ವಾನರ ರುದ್ರಾಕ್ಷಿಯ ಧರಿಸಿ ರಾಜಪದವಿಯ ಪಡೆದುವು ನೋಡಾ. ಮುನ್ನ ಬೇಂಟೆಗಾರನ ದೆಸೆಯಿಂದೆ ಶುನಿಯು ರುದ್ರಾಕ್ಷಿಯ ಧರಿಸಿ ರುದ್ರಪದವಿಯಲ್ಲಿ ನಿಂದಿತ್ತು ನೋಡಾ. ಮುನ್ನ ಹರದನ ದೆಸೆಯಿಂದೆ ಕತ್ತೆ ರುದಾಕ್ಷಿಯ ಪೊತ್ತು ಕರ್ತೃ ಶಿವನ ಸಾಯುಜ್ಯಪದವ ಸಾರಿತ್ತು ನೋಡಾ. ಮುನ್ನ ಚೇರಮರಾಯನು ರುದ್ರಾಕ್ಷಿಯ ಧರಿಸಿ ಹರನ ಕೈಲಾಸಕ್ಕೆ ದಾಳಿವರಿದನು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಇಕ್ಕಿದೆನು ಮುಂಡಿಗೆಯ ಹರಿಕುಲದ ವಿಪ್ರರು ಬೆಕ್ಕನೆ ಬೆರಗಾಗುವಂತೆ. ಇಕ್ಕಿದೆನು ಮುಂಡಿಗೆಯ ಸೊಕ್ಕಿದ ರಕ್ಕಸರ ಸಂಹರಿಸಿದ ಶಿವನೇ ಅಧಿಕನೆಂದು. ಇಕ್ಕಿದೆನು ಮುಂಡಿಗೆಯ ಹರಿಯಜಸುರಾಸುರರೆಲ್ಲ ಹರನ ಆಳುಗಳೆಂದು. ಇಕ್ಕಿದೆನು ಮುಂಡಿಗೆಯ ದಿಕ್ಕು ದಿಕ್ಕಿನೊಳಗೆ ಅಖಂಡೇಶ್ವರನೆಂಬ ಮುಕ್ಕಣ್ಣ ಪರಶಿವನೆ ಘನ ಘನವೆಂದು.
--------------
ಷಣ್ಮುಖಸ್ವಾಮಿ
ನೀರ ಒರಳ ಮಾಡಿ, ನೆರಳ ಒನಕೆಯ ಮಾಡಿ, ಆಕಾರವಿಲ್ಲದಕ್ಕಿಯ ಥಳಿಸುತ್ತಿರಲು, ಮೇರುಗಿರಿಯಾಕಳ ಕರೆದ ಕ್ಷೀರದಲ್ಲಿ ಅಡಿಗೆಯ ಮಾಡಿ ನಾರಿಯ ಬಸುರೊಳಗೆ ಗಂಡ ಬಂದು ಕುಳ್ಳಿರಲು, ಮಾಡಿದಡಿಗೆಯ ಮನವುಂಡು ಹೋಗಲು, ಮೇಲು ಕೈ ತಲೆ ಹಿಡಿದು ಸಂತೋಷದಿಂದ, ಪ್ರಾಣಸಖಿ ತನ್ನ ಗಂಡಂಗೆ ನೀಡುತ್ತಿರಲು, ಅರಳ ಹುಟ್ಟಿಗೆಯಲ್ಲಿ ಹೊರಳಿ ಕೂಡುವ ಭೇದ, ಮರಳಿ ಕೂಡಲಿಕೆಂತು ಪಣವಿಲ್ಲ. ಕೆರಳಿ ಮುನಿದು ಘುಡುಘುಡಿಸಿ ಗರ್ಜಿಸಲೊಡನೆ ಕೆರಳಲಮ್ಮದೆ ಅಂಜಿ ಒಳಗಡಗಿದ, ಶರಣಸತಿ ಲಿಂಗಪತಿಯೆಂಬ ಭಾಷೆ. ನೀನು ಹರನ ಬಟ್ಟೆಯ ನೋಡಿ ಸುಯ್ಯಬೇಡ, ಜನನ ಮರಣವಿರಹಿತ ಕೂಡಲಸಂಗನ ಅನುಭಾವ, ಪ್ರಭುವಿನ ಶ್ರೀಪಾದದೊಳಗಿದ್ದು ಸುಖಿಯಾದೆನು.
--------------
ಬಸವಣ್ಣ
ಸರ್ವದೇವಪಿತ ಶಂಭುವೆಂಬ ನಾಮ ಹರಗೆ ಸಲ್ಲುವುದಲ್ಲದೆ ಹರಿಗೆ ಸಲ್ವುದೆ ? ಸಲ್ಲದು. ಅದೇನು ಕಾರಣವೆಂದರೆ : ಸರ್ವದೈವ[ವ] ಹುಟ್ಟಿ[ಸ]ಬಲ್ಲ, ಕೊಲ್ಲಬಲ್ಲ, ಸರ್ವದೈವದಿಂದ ಪೂಜೆ ಪುನಸ್ಕಾರವ ಕೊಳಬಲ್ಲ ಪರಮಾತ್ಮನಿಗೆ ಕುರಿದೈವ ಸರಿಯೆನಬಹುದೆ ? ಬಾರದು. ತಾ ಸಾವದೇವರು, ನಿಮ್ಮ ವಿಷ್ಣು ಮತ್ತಾರ ಕಾಯಬಲ್ಲುದು, ಹೇಳಿರೌ ? ಹರಿ ಹತ್ತು ಪ್ರಳಯಕ್ಕೆ ಗುರಿಯಾದಲ್ಲಿ ಹರನೆ ಲಿಂಗವಾಗಿ ರಕ್ಷಣ್ಯವ ಮಾಡಿದುದು ಸಟೆಯೆನಿಪ್ಪ ಹರನ ಕಿರಿWದುಘೆ ಮಾಡಿ ಹರಿಯ ಹಿರಿದೆಂದು ನುಡಿವ ಚಾಂಡಾಲಿಯ ಬಾಯಲ್ಲಿ ಕಾದ ಸುಣ್ಣದ ಗಾರೆಯ ಹೊಯ್ಯದೆ ಬಿಡುವನೆ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಕಾಲ ಕಾಮ ಮಹಾಕಾಲ ಪ್ರಳಯಕಾಲ, ಕಾಲನ ಕೊಂದು, ಹರ ಲೀಲೆಯನಾಡುವಂದು, ಬ್ರಹ್ಮ ವಿಷ್ಣು ಜಿನಪಾಲರೆಂಬವರೆಲ್ಲಿದ್ದರೊ ? ಸರಿಯೆಂಬ ನಾರಸಿಂಹನ ಶಿರವರಿದು, ಹರನ ಶಿವಾಲಯಕ್ಕೆ ಕೀರ್ತಿಮುಖವಾಗಿದೆ. ಹರಿಯ ಚರ್ಮವ ಸೀಳಿ, ಹರನ ಖಟ್ವಾಂಗವಾಗಿದೆ. ಮತ್ಸ್ಯಾವತಾರನ ಕರುಳಂ ತೆಗೆದು, ಹರನ ಜಡೆಯಲ್ಲಿ ಉತ್ತರಿಗೆಯಾಗಿದೆ. ಸರಿಯೆಂಬ ಹೆಸರಿನ್ನಾರಿಗೊ, ಮುಕ್ಕಣ್ಣ ಸೊಡ್ಡಳಂಗಲ್ಲದೆ.
--------------
ಸೊಡ್ಡಳ ಬಾಚರಸ
ಇನ್ನಷ್ಟು ... -->