ಅಥವಾ

ಒಟ್ಟು 26 ಕಡೆಗಳಲ್ಲಿ , 15 ವಚನಕಾರರು , 26 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಡಲು ಒಡವೆ ಧರೆ ನಿನಗಾಯಿತ್ತೆಂದು ಉಣಲೊಲ್ಲದಿಪ್ಪ ಮರುಳೆ ಕೇಳಾ! ಅಡವಿಯನೆ ಕೆಳೆಗೊಂಡು ನೆಲದೊಳಗೆ ಬೈಚಿಟ್ಟು. ಹೊಲಬುದಪ್ಪಿ ಭೂತ ಕೊಡಲೊಲ್ಲದವೆಯೊ. ಹಾಗಕ್ಕೆ ಹಾಗವ ಗಳಿಸಿ ಆಗಾಯಿತ್ತೆಂದು ಉಣಲೊಲ್ಲದಿಪ್ಪ ಮರುಳೆ ಕೇಳಾ! ಇದನರಿದು ಕಲ್ಯಾಣದ ತ್ರಿಪುರಾಂತಕ ಲಿಂಗದಲ್ಲಿ ಗಾವುದಿ ಮಾಚಯ್ಯ ಹೇಳಿದುದ ಕೇಳು ಮಾನವಾ.
--------------
ಗಾವುದಿ ಮಾಚಯ್ಯ
ವೇದ ಪ್ರಣವದ ಶೇಷ. ಶಾಸ್ತ್ರ ಸಂಕಲ್ಪದ ಸಂದು. ಪುರಾಣ ಪುಣ್ಯದ ತಪ್ಪಲು. ಇಂತೀ ವೇದ ಶಾಸ್ತ್ರ ಪುರಾಣ ಆಗಮಂಗಳಲ್ಲಿ ವಾದಕ್ಕೆ ಹೋರುವ ವಾಗ್ವಾದಿಗಳು ಭೇದವನರಿಯದೆ ಹೋರಲೇಕೆ? ಹೊಲಬುದಪ್ಪಿ ಬೇವಿನ ಮರನ ಹತ್ತಿ ಬೆಲ್ಲವ ಮೆದ್ದಡೆ ಕಹಿಯೊ? ಸಿಹಿಯೊ? ಎಂಬುದನರಿತಾಗ, ಆವ ಬಳಕೆಯಲ್ಲಿದ್ದಡೂ ದೇವನ ಕಲೆಯನರಿತಲ್ಲಿ ಆವ ಲೇಪವೂ ಇಲ್ಲ, ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಶರಣಸ್ಥಲದ ಕುರುಹಿನ ಮಾರ್ಗವನರಿಯದೆ, ನಾನು ಶರಣ ತಾನು ಶರಣನೆಂದು ನುಡಿವ ಕರ್ಮಜೀವಿಗಳ ಮುಖವ ನೋಡಲಾಗದು. ಅದೇನು ಕಾರಣವೆಂದೊಡೆ : ತಾವು ಶರಣರಾದಡೆ ತಮ್ಮ ಚಿತ್ತಿನ ಕೊನೆಯಲ್ಲಿ ಮುಸುಕಿದ ಕತ್ತಲೆಯ ಕಳೆಯಬೇಕು. ತಾವು ಶರಣರಾದಡೆ ತಮ್ಮ ಆತ್ಮನ ಸುತ್ತಿದ ಅಷ್ಟಮದಂಗಳ ಕತ್ತರಿಗಡಿಯಬೇಕು. ತಾವು ಶರಣರಾದಡೆ ತಮ್ಮ ಲಿಂಗದಲ್ಲಿ ಅತ್ತಿತ್ತ ಹರಿದಾಡುವ ಮನವ ನಿಕ್ಷೇಪವ ಮಾಡಬೇಕು. ತಾವು ಶರಣರಾದಡೆ ನಿತ್ಯಾನಿತ್ಯವನರಿದು ತತ್ತಾ ್ವತತ್ತ್ವಂಗಳ ವ್ಯಕ್ತೀಕರಿಸಿ ಮಹಾಜ್ಞಾನದ ಮೊತ್ತದಲ್ಲಿ ಸುಳಿಯಬೇಕು. ಇಂತೀ ಭೇದವನರಿಯದೆ ತುತ್ತು ಸವಿಯೆಂದುಂಡು ಮರ್ತ್ಯದ ವಿಷಯಪ್ರಪಂಚಿನ ಸುಖದಲ್ಲಿ ವ್ಯವಹರಿಸಿ, ಅಜ್ಞಾನದ ಕತ್ತಲೆಯಲ್ಲಿ ಸೆರೆಯ ಸಿಕ್ಕಿ ಮುಂದುಗಾಣದೆ ಮುಕ್ತಿಯ ಹೊಲಬುದಪ್ಪಿ ಹೋಗುವ ವ್ಯರ್ಥಪ್ರಾಣಿಗಳ ಕಂಡು ನಗುತಿರ್ದನು ನೋಡಾ ನಮ್ಮ ಅಖಂಡೇಶ್ವರ.
--------------
ಷಣ್ಮುಖಸ್ವಾಮಿ
ರಸ ಗಂಧ ರೂಪ ಸ್ಪರ್ಶವೆಂಬ ಪಂಚೇಂದ್ರಿಯಂಗಳಲ್ಲಿ, ಲಿಂಗಕರ್ಪಿತವ ಮಾಡಬೇಕೆಂಬ ಭಂಗಿತರ ನೋಡಾ. ಅಂಗುಷ*ದಲ್ಲಿ ಸರ್ಪದಷ್ಟವಾದಡೆ, ಸರ್ವಾಂಗದಲ್ಲಿ ವಿಷಾವರ್ತಿಸುವುದಲ್ಲದೆ, ಖಂಡಿತವಾಗಿ ನಿಂದುದಿಲ್ಲ. ಸರ್ವಾಂಗಲಿಂಗಿಗೆ ಬೇರೆ ಐದು ಸ್ಥಾನದಲ್ಲಿ, ಅರ್ಪಿತವ ಮಾಡಬೇಕೆಂಬುದಿಲ್ಲ. ಇಷ್ಟಕ್ಕೂ ಪ್ರಾಣಕ್ಕೂ ಕಟ್ಟಿದ ಈಡ ನೋಡಾ ಅಯ್ಯಾ, ಪರುಷಸರ ಕೈಯಲ್ಲಿದ್ದು ಹೇಮವನರಸಿ ತಿರುಗುವನಂತೆ. ಖೇಚರತ್ವದಲ್ಲಿ ಬಹ ಸಾಮಥ್ರ್ಯವಿದ್ದಡೇನೊ, ಅಂಬಿಗನ ಹಂಗನರಸುವನಂತೆ. ನಿತ್ಯನಿತ್ಯ ತೃಪ್ತಂಗೆ ಉಂಡೆಹೆನೆಂದು ತಳಿಗೆ ಕಂಕುಳೊಳಗಿನ ತೆರನಂತೆ. ಸ್ವಯಂಜ್ಯೋತಿಯ ಬೆಳಗುಳ್ಳವಂಗೆ, ಜ್ಯೋತಿಯ ಹಂಗಿನಲ್ಲಿ ಕಂಡೆಹೆನೆಂಬ ಭ್ರಾಂತನಂತೆ. ವಾಯುಗಮನವುಳ್ಳವಂಗೆ ತೇಜಿಯನರಸುವಂತೆ. ಅಮೃತದ ಸೇವನೆಯುಳ್ಳವಂಗೆ ಆಕಳನರಸಿ ಬಳಲಿ ಬಪ್ಪವನಂತೆ. ತಾ ಬೈಚಿಟ್ಟ ನಿಕ್ಷೇಪದ ಹೊಲಬುದಪ್ಪಿ ಬಳಲುವನಂತೆ. ಇದು ಕಾರಣ, ಐದರ ಗುಣದಲ್ಲಿ ಅರ್ಪಿತವೆಂಬ, ಮೂರರ ಗುಣದಲ್ಲಿ ಮುಕ್ತಿಯೆಂಬ, ಆರರ ಗುಣದಲ್ಲಿ ಆಧಾರವೆಂಬ, ಎಂಟರ ಗುಣದಲ್ಲಿ ಸಂತೋಷವೆಂಬ, ಭ್ರಾಂತ ಹರಿದು ಕಾಳಿಕೆಯೊಳಗಿಪ್ಪ ಕರಿಯ ಬಣ್ಣವ ಕಳೆದು, ಬೆಳಗಿನೊಳಗಿಪ್ಪ ಜ್ವಲಿತಮಂ ಕಡಿದು ತಾನು ತಾನಾಗಬಲ್ಲಡೆ, ಆತನೆ ನಿರ್ಮುಕ್ತ, ನಿಃಕಳಕಂ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಒಂದು ಬಾಲೆ ಕಂದನ ಹೊತ್ತು ಬಂದಿತ್ತು. ಕಂದ ಹುಟ್ಟಿ, ಎಡದ ಕೈಯಲ್ಲಿ ಗಡಿಗೆ, ಬಲದ ಕೈಯಲ್ಲಿ ಕಟ್ಟಿಗೆ. ಮಂಡೆಯ ಮೇಲೆ ಕಿಚ್ಚು ಸಹಿತವಾಗಿ ಅಟ್ಟುಂಬುದಕ್ಕೆ ನೆಲಹೊಲನ ಕಾಣದೆ, ತಿಟ್ಟನೆ ತಿರುಗಿ, ಗಟ್ಟದ ಒತ್ತಿನಲ್ಲಿ, ಕಟ್ಟಕಡೆಯಲ್ಲಿ, ಒಂದು ಬಟ್ಟಬಯಲು ಮಾಳವಿದ್ದಿತ್ತು. ಕೈಯಕಂದನನಿರಿಸಿ ಕಟ್ಟಿಗೆಯ ಹೊರೆಯ ಕಟ್ಟ ಬಿಟ್ಟು, ಮಸ್ತಕದ ಬೆಂಕಿಯ ಕಟ್ಟಿಗೆಯ ಒತ್ತಿನಲ್ಲಿರಿಸಿ, [ಒತ್ತಿನ ಕಾಲ] ಕಾಣದೆ ಹೊಲಬುದಪ್ಪಿ, ಆ ಹೊಲದೊಳಗೆ ತಿರುಗಿನೋಡಿ, ಪಶ್ಚಿಮದಲ್ಲಿ ಕಂಡ ಪಚ್ಚೆಯ ಕಲ್ಲ, ಉತ್ತರದಲ್ಲಿ ಕಂಡ ಪುಷ್ಕರದಲ್ಲಿ ಕಲ್ಲ, ಪೂರ್ವದಲ್ಲಿ ಕಂಡ ಬಿಳಿಯಕಲ್ಲ ಮೂರೂ ಕೂಡಿ, ಮಡಕೆಯ ಮಂಡೆಯ ಮೇಲಿರಿಸಲಾಗಿ, ಕಂಡಿತ್ತು ಕಲ್ಲಿನ ಇರವ. ಉದಕವನರಸಿ ಅ[ಳಲು] ತ್ತಿರ್ದಿತ್ತು [ಬೆಂಕಿ.ಆ] ಬೆಂಕಿ ಬೇಗೆಗಾರದೆ, ಉದಕ ಒಡೆದು ಮಡಕೆ ನಿಂದಿತ್ತು. ನಿಂದ ಮಡಕೆಯ ಅಂಗವ ಕಂಡು, ಇದರ ಹಂಗೇನೆಂದು ಕೈ ಬಿಡಲಾಗಿ, ಮಡಕೆಯಡಗಿತ್ತು ಮೂರುಕಲ್ಲಿನ ಮಧ್ಯದಲ್ಲಿ ಕಟ್ಟಿಗೆ ಸುಟ್ಟ [ವನ] ಮಕ್ಕಳುಂಡರು ಮಿಕ್ಕವರೆಲ್ಲಾ ಹಸಿದರು. ಹಸಿದವರ ಸಂಗ ಗಸಣೆಗೊಳಿಸಿತ್ತು. ಇಂತೀ ಹುಸಿಯ ದೇಹವ ತೊಟ್ಟು ದೆಸೆಗೆಟ್ಟೆನಯ್ಯ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಮಾಧವನ ಮನೆಯ ಬಾಗಿಲಿನಲ್ಲಿ ಮಹಾಜನಂಗಳೆಲ್ಲರು ಕೂಡಿ ಹೋಮವನಿಕ್ಕಲಾಗಿ, ಎದ್ದಿತ್ತು ಉರಿ. ಮೂವರ ಮಸ್ತಕವ ಮುಟ್ಟಿ, ಆ ಹೋಮದ ಹೊಗೆ ತಾಗಿ ನಾಲ್ವರ ಕಣ್ಣು ಕೆಟ್ಟಿತ್ತು. ಆ ಹೋಮದ ದಿಕ್ಕಿನ ಕುಂಭ ಉರುಗಿಹೋಗಲಾಗಿ ತೊರೆ ಹರಿಯಿತ್ತು. ಕಾಲ ಕಡಹು ಆರಿಗೂ ಆಗದು. ಎಲ್ಲಾ ಠಾವಿನಲ್ಲಿ ಮಡುಮಯವಾಯಿತ್ತು. ಮಡುವಿನ ಮೊಸಳೆ ತಡಿಯಲ್ಲಿ ಆರನೂ ನಿಲಲೀಸದೆ ಕಡಿದು ನುಂಗಿಹುದಿನ್ನೇವೆ. ಮೊಸಳೆಯ ಹಿಡಿವರ ಕಾಣೆ, ಮಡುವ ಒಡೆವರ ಕಾಣೆ, ಹೋಮವ ಕೆಡಿಸುವರ ಕಾಣೆ, ಮಾಧವನ ಬಾಗಿಲಿನಲ್ಲಿ ನಿಂದು ಹೋದರು ಹೊಲಬುದಪ್ಪಿ, ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಅಂಗವೆಂಬ ಮೊರದಲ್ಲಿ ವಿಕಾರವೆಂಬ ಕೋಣನನೇರಿ ತಾಯಿ ಬಂದಳಯ್ಯಾ ಮೂರು ಮುಖವಾಗಿ. ಮೂರು ಮುಖದವ್ವೆಯ ಬಾಗಿಲಲ್ಲಿ ಬಾಧೆಬಡುವರೆಲ್ಲರೂ ಹೋದರು ಹೊಲಬುದಪ್ಪಿ ಕಾಲಾಂತಕ ಭೀಮೇಶ್ವರಲಿಂಗವನರಿಯದೆ.
--------------
ಡಕ್ಕೆಯ ಬೊಮ್ಮಣ್ಣ
ಕಯ್ಯ ಲಿಂಗ ಕಯ್ಯಲ್ಲಿ ಮಯ್ಯ ಲಿಂಗ ಮಯ್ಯಲ್ಲಿ ತಲೆಯ ಲಿಂಗ ತಲೆಯಲ್ಲಿ ಮತ್ತೆ ಹೊಲಬನರಸಲೇತಕ್ಕೆ? ಹೊಲಬುದಪ್ಪಿ ಬಿದ್ದಿರಿ ಮೂರರ ಬಲೆಯಲ್ಲಿ. ಬಲುಹೇತಕ್ಕೆ, ಸಾಕು. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ.
--------------
ಘಟ್ಟಿವಾಳಯ್ಯ
ಹೊಂಬಣ್ಣವ ಹಿಮ್ಮೆಟ್ಟದೆ ಕಂಡು, ಮುಂಬಣ್ಣವ ಮುಂದರಿತು ಕಂಡು, ನಿಂದ ಬಣ್ಣವ ನಿಂದಂದಿಗೆ ಕಂಡು, ಹಲವು ಬಣ್ಣದ ಬಳಕೆಯ ಹೊಲಬುದಪ್ಪಿ, ಸಂದ ಬಣ್ಣದಲ್ಲಿ ಸಂದಿಲ್ಲದೆ ನಿಂದ ನಿರಾಳ ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣರು.
--------------
ಆದಯ್ಯ
ಕಾಯ ಜೀವವನರಿದೆನೆಂಬವರೆಲ್ಲರೂ ಹೋದರಲ್ಲಾ ಹೊಲಬುದಪ್ಪಿ. ಹೆಣ್ಣು ಹೊನ್ನು ಮಣ್ಣಿಗೆ ಹೋರಾಡುವ ಅಣ್ಣಗಳೆಲ್ಲರೂ ಬಸವಣ್ಣನ ಮನೆಯ ಬಾಗಿಲಲಿ ಬಂಧಿಕಾರರಾಗಿ ಕಾಯ್ದು ಕೊಂಡಿದ್ದು ಆ ಹೆಣ್ಣು ಹೊನ್ನು ಮಣ್ಣು ತಮ್ಮ ಕಣ್ಣ ಮುಂದಕೆ ಬಾರದಿದ್ದಡೆ ತಮ್ಮ ಮನದಲ್ಲಿ ನೊಂದು ಬೆಂದು ಕುದಿದು ಕೋಟಲೆಗೊಂಡು ಮತ್ತೆಯೂ ತಾವು ಅರುಹಿರಿಯರೆಂದು ಬೆಬ್ಬನೆ ಬೆರತುಕೊಂಡಿಪ್ಪವರಿಗೆ ನಮ್ಮ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ.
--------------
ಘಟ್ಟಿವಾಳಯ್ಯ
ಶಬ್ದ ಸ್ಪರ್ಶ ರೂಪು ರಸ ಗಂಧಂಗಳೆಂಬ ಪಂಚೇಂದ್ರಿಯಂಗಳಲ್ಲಿ ಲಿಂಗಾರ್ಪಿತವ ಮಾಡಬೇಕೆಂಬ ಭಂಗಿತರ ನೋಡಾ. ಅಂಗುಷ*ದಲ್ಲಿ ಸರ್ಪದಷ್ಟವಾದಡೆ, ಸರ್ವಾಂಗಲಿಂಗಿಗೆ ಬೇರೆ ಐದುಸ್ಥಾನದಲ್ಲಿ ಅರ್ಪಿತವ ಮಾಡಬೇಕೆಂಬ ಜಡಸಂಕಲ್ಪವಿಲ್ಲ. ಇಷ್ಟಕ್ಕೂ ಭಾವಕ್ಕೂ ಪ್ರಾಣಕ್ಕೂ ಕಟ್ಟಿದ ಈಡ ನೋಡಯ್ಯಾ. ಪರುಷದ ರಸ ಕೈಯಲ್ಲಿರ್ದು ಹೇಮವನರಸಿ ತಿರುಗುವವನಂತೆ, ಖೇಚರತ್ವದಲ್ಲಿ ಹೋಹ ಸಾಮಥ್ರ್ಯವಿರ್ದು, ಅಂಬಿಗನ ಹಂಗನರಸುವ ಅವಿಚಾರಿಯಂತೆ, ನಿತ್ಯತೃಪ್ತನಾಗಿರ್ದು ಅಂಬಲಿಯ ಬಯಸುವ ಕಾಳ್ವಿಚಾರಿಯಂತೆ, ಸ್ವಯಂಜ್ಯೋತಿ ಪ್ರಕಾಶದೊಳಗಿರ್ದು, ಜ್ಯೋತಿಯ ಹಂಗಿನಲ್ಲಿ ಕಂಡೆಹೆನೆಂಬ ಭ್ರಾಂತನಂತೆ, ವಾಯುಗಮನವುಳ್ಳಾತ ತೇಜಿಯನರಸುವಂತೆ, ಅಮೃತ ಸೇವನೆಯ ಮಾಡುವಾತ ಆಕಳನರಸಿ ಬಳಲುವಂತೆ, ತಾ ಬೈಚಿಟ್ಟ ನಿಕ್ಷೇಪವ ಹೊಲಬುದಪ್ಪಿ ಅರಸುವನಂತೆ ಆಗಬೇಡ. ಇದು ಕಾರಣ, ವೇದಗುಣದಲ್ಲಿ ಅರ್ಪಿತವೆಂಬ, ಮೂರರ ಗುಣದಲ್ಲಿ ತೃಪ್ತಿಯೆಂಬ, ಆರರ ಗುಣದಲ್ಲಿ ಆಧಾರವೆಂಬ, ಎಂಟರ ಗುಣದಲ್ಲಿ ಸಂತೋಷವೆಂಬ ಭ್ರಾಂತು ಹರಿದು, ಬೆಳಗಿನೊಳಗಿಪ್ಪ ಜ್ವಲಿತವಂ ಕಡಿದು, ತಾನು ತಾನಾಗಬಲ್ಲಡೆ, ಆತನೆ ನಿರ್ಮುಕ್ತ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
-->