ಅಥವಾ

ಒಟ್ಟು 66 ಕಡೆಗಳಲ್ಲಿ , 4 ವಚನಕಾರರು , 66 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾಲ್ಕು ವೇದವನೋದಿದನಂತರ ಮನೆಯ ಬೋನವ ಶಿವಭಕ್ತರ ಮನೆಯಲ್ಲಿರುವ ನಾಯಿ ಮೂಸಿ ನೋಡಲಾಗದು. ಸಾಮವೇದಿ ಹೋಗುತ್ತಿರಲು ಶ್ವಪಚಯ್ಯಗಳು ತಮ್ಮ ಪಾದುಕದಿಂದ ಪಾಕವ ಮುಚ್ಚಿದರು. ``ಶ್ವಾನೋ ಶ್ರೇಷ*ವೆಂದು ಇಕ್ಕಿದೆನು ಮುಂಡಿಗೆಯ. ಎತ್ತಿರೋ ಜಗದ ಸಂತೆಯ ಸೂಳೆಯ ಮಕ್ಕಳು. ಜಗಕ್ಕೆ ಪಿತನೊಬ್ಬನಲ್ಲದೆ ಇಬ್ಬರೆಂದು ಬೊಗಳುವರ ಮೋರೆಯ ಮೇಲೆ ಹೊಡೆ ಎಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು.
--------------
ಅಂಬಿಗರ ಚೌಡಯ್ಯ
ಶೀಲವಂತನೆಂಬವ ಶಿವದ್ರೋಹಿ, ಭಾಷೆವಂತನೆಂಬವ ಬ್ರಹ್ಮೇತಿಕಾರ, ನೇಮಸ್ತನೆಂಬವ ನೇಮಕ್ಕೆ ಗುರಿಯಾದ, ಅಚ್ಚ ಪ್ರಸಾದಿ ನಿಚ್ಚಕುನ್ನಿ. ಇವರು ನಾಲ್ವರು ಹೋದಲ್ಲಿ ಹೊಗಲಾಗದು, ಬಂದಲ್ಲಿ ಬರಲಾಗದು, ನಿಂತಲ್ಲಿ ನಿಲಲಾಗದು, ಕುಳಿತಲ್ಲಿ ಕುಳ್ಳಿರಲಾಗದು. ಈ ನಾಲ್ವರಿಗೂ ಲಿಂಗವಿಲ್ಲ, ಗುರುವಿಲ್ಲ, ಜಂಗಮವಿಲ್ಲ, ಪಾದೋದಕ ಪ್ರಸಾದವಿಲ್ಲ, ನಾ ಮೊದಲೇ ಇಲ್ಲ. ಅದೇನು ಕಾರಣವೆಂದಡೆ, ನಿರಂತರ ಜಂಗಮ ಕೈ ಕಡ[ವಸ]ವಾಗಿ ಬರುತ್ತಿರಲು ಅವರ ಕಪ್ಪರ ಬಟ್ಟಲು ನಮ್ಮ ಭಾಜನ ಭಾಂಡವ ಮುಟ್ಟಬಾರದು ಎಂಬ [ಮನದ]ಹೊಲೆಯರಿಗೆಲ್ಲಿಯ ಶೀಲವೋ ಅಂಬಿಗರ ಚೌಡಯ್ಯ!
--------------
ಅಂಬಿಗರ ಚೌಡಯ್ಯ
ಕೇಳಿದೇನೆಲೆ ಮಾನವ, ಪಂಚಮಹಾಪಾತಕ ದೋಷಾದಿಗಳನ್ನು ಮಾಡಿ ಬಾಯಿಲೆ `ಶಿವ ಶಿವ ಎಂದು ಶಿವನ ನೆನೆದರೆ ಭವ ಹರಿಯಿತೆಂಬ ವಿಚಾರಗೇಡಿಗಳ ಮಾತು ಕೇಳಲಾಗದು. ಜ್ಯೋತಿಯ ನೆನೆದರೆ ಕತ್ತಲೆ ಹಿಂಗುವುದೇ ? ರಂಭೆಯ ನೆನೆದರೆ ಕಾಮದ ಕಳವಳ ಹೋಗುವುದೇ ? ಮೃಷ್ಟಾನ್ನವ ನೆನೆದರೆ ಹೊಟ್ಟೆ ತುಂಬುವುದೆ ? ಮಾಡಿದಂತಹ ದೋಷವು ಹೋಗಲಾರದು. ಇಂತಪ್ಪ ದುರಾಚಾರಿಗಳ ಪಡಿಹಾರಿ ಉತ್ತಣ್ಣಗಳ ಪಾದುಕೆಯಿಂದ ಹೊಡಿ ಎಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು.
--------------
ಅಂಬಿಗರ ಚೌಡಯ್ಯ
ಭಕ್ತ ನಂಬಿದರೆ ಕೊಪ್ಪದ ರಾಮಯ್ಯನಂತೆ ನಂಬಬೇಕಯ್ಯಾ, ಭಕ್ತ ನಂಬಿದರೆ ಕೆಂಭಾವಿ ಭೋಗಣ್ಣನಂತೆ ನಂಭೀಕಯ್ಯಾ, ಭಕ್ತ ನಂಬಿದರೆ ಚೇದಿರಾಜಯ್ಯನಂತೆ ನಂಬಬೇಕಯ್ಯಾ, ಭಕ್ತ ನಂಬಿದರೆ ಏಣಾದಿನಾಥನಂತೆ ನಂಬಬೇಕಯ್ಯಾ. ಇಂತಪ್ಪ ನಂಬಿಗೆಗೆ ತಾನು ಸರಿಯೆಂದು, ಬೀದಿಯ ಪೋರನಂತೆ ತನ್ನಯ ಮನದೊಳಗೊಂದು ಮಾತು, ಹೊರಗೊಂದು ಮಾತು, ತುದಿನಾಲಗೆಯಲ್ಲಿ ಭಕ್ತರ ನಂಬಿದೆನೆಂದು ಗಳಹುವ ಗೊಡ್ಡ ಹೊಲೆಯನ ಕಂಡೊಡೆ ಎದೆ ಎದೆಯನು ಒದ್ದೊದ್ದು ತುಳಿಯೆಂದಾತ ನಮ್ಮ ಅಂಬಿಗರ Zõ್ಞಡಯ್ಯ.
--------------
ಅಂಬಿಗರ ಚೌಡಯ್ಯ
ತುತ್ತಿನಾಸೆಗೆ ಲಿಂಗವ ಕೊಟ್ಟುಹೋಹ ವ್ಯರ್ಥ ಮೂಳ ನಿಮಗೆ ಗುರುವಾದನೈಸೆ? ಸತ್ಯಸದಾಚಾರವ ಬಲ್ಲಡೆ ತತ್ವಜ್ಞಾನವ ಬೋಧಿಸಿ, ಆ ಮಹಾಲಿಂಗಕ್ಕೂ ನಿಮಗೂ ಸಂಬಂಧವ ಮಾಡದಿಹ ಕತ್ತೆ ಗುರುವಿನ ಪಾದವ ಹಿಡಿದು ಕೆಟ್ಟಿರಲ್ಲಾ! ಹತ್ತಿಲಿದ್ದ ಲಿಂಗವ ಕಿರಿದು ಮಾಡಿ, ಕ್ಷೇತ್ರದ ಲಿಂಗವ ಹಿರಿದು ಮಾಡಿ; [ಕಂಕುಳ ಹತ್ತಿದ]ಲಿಂಗವ ಕಿರಿದು ಮಾಡಿ, ಕೊಂಕಣ ಹತ್ತಿ ಲಿಂಗವ ಹಿರಿದು ಮಾಡಿ; ಎಂತುಟೋ ನಿನ್ನ ಲಿಂಗವ ಕೊಡಲಾರದಿದ್ದಡೆ! ಹರುಗೋಲು ಹೊರಲಾರ, ಭೋಂಕನೆ ಮುಳುಗುವನೆಂದಾತ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಅರಿವ ಆತ್ಮ; ಕಂಗಳ ಮರೆಯಲ್ಲಿ ಕಾಂಬಂತೆ, ಕಿವಿಯ ಮರೆಯಲ್ಲಿ ಕೇಳುವಂತೆ_ ಕಂಗಳು ನಷ್ಟವಾದಲ್ಲಿ ಕರ್ಣ ಬಧಿರವಾದಲ್ಲಿ ಕಾಂಬುದು ಕೇಳುವುದು ಅಲ್ಲಿಯೆ ನಿಂದಿತ್ತು. ಆತ್ಮನ ಅರಿವಾವುದು ? ಗುಹೇಶ್ವರನೆಂಬ ಕುರುಹಾವುದು; ಅಂಬಿಗರ ಚೌಡಯ್ಯ ?
--------------
ಅಲ್ಲಮಪ್ರಭುದೇವರು
ಕುರಿಕೋಳಿ ಕಿರುಮೀನ ತಿಂಬವರ ಊರೊಳಗೆ ಇರು ಎಂಬರು. ಅಮೃತಾನ್ನವ ಕರೆವ ಗೋವ ತಿಂಬವರ ಊರಿಂದ ಹೊರಗಿರು ಎಂಬರು. ಆ ತನು ಹರಿಗೋಲಾಯಿತ್ತು, ಬೊಕ್ಕಣ, ಸಿದಿಕೆ, ಬಾರುಕೋಲು, ಪಾದರಕ್ಷೆ ದೇವರ ಮುಂದೆ ಬಾರಿಸುವುದಕ್ಕೆ ಮದ್ದಳೆಯಾಯಿತ್ತು. ಈ ಬುದ್ಧಲಿಕೆಯೊಳಗಣ ತುಪ್ಪವ ಶುದ್ಧಮಾಡಿ ತಿಂಬ ಗುಜ್ಜ ಹೊಲೆಯರ ಕಂಡಡೆ ಉದ್ದನ ಚಮ್ಮಾಳಿಗೆಯ ತೆಕ್ಕೊಂಡು ಬಾಯ ಕೊ[ಯ್ಯು]ವೆನು ಎಂದಾತ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಅನ್ಯದೇಹಿಯೆಂದು ಎನ್ನ ಕಳೆಯದಿರು, ಕರ್ಮದೇಹಿಯೆಂದು ಕೈಯ ಬಿಡದಿರು, ಮತ್ರ್ಯನೆಂದು ಮಾಯಕ್ಕೆ ಗುರಿಮಾಡದಿರು, ಮದಡನೆಂದು ಮನವಿಕಾರಕ್ಕೆ ಗುರಿಮಾಡದಿರು, ಅಜ್ಞಾನಿಯೆಂದು ಅಹಂಕಾರಕ್ಕೆ ಗುರಿಮಾಡದಿರು, ಮದದೇಹಿಯೆಂದು ಮಾಯಾತಮಂಧಕ್ಕೆ ಗುರಿಮಾಡದಿರು, ಜಲ ಅಗ್ನಿಯ ಗುಣವಿರಲೊ ಎನ್ನಯ್ಯ. ಅದು ಎಂತೆಂದೊಡೆ : ಜಲ ಹರಿವೆಡೆಯಲ್ಲಿ ಹೊಲಗೇರಿ ಉತ್ತಮಗೇರಿ ಅಮೇಧ್ಯದಗೇರಿಯೆಂದು ನೋಡಿ ಹರಿವುದೆ ? ಹರಿಯದು ; ಅದಕ್ಕೆಲ್ಲ ಸಮ. ಅಗ್ನಿ ಶ್ವಪಚರ ಮನೆ, ಗೃಹಸ್ಥರ ಮನೆ, ಬೇಡ ಮಾದಿಗ ಹದಿನೆಂಟು ಜಾತಿ ಎಂದು ಅಡಿಯಿಡಲು ಮುನಿವುದೆ ? ಮುನಿಯದು. ಎನ್ನ ಅನ್ಯದೇಹಿಯೆಂದು, ಕರ್ಮದೇಹಿಯೆಂದು, ಮತ್ರ್ಯದೇಹಿಯೆಂದು, ಮದಡದೇಹಿಯೆಂದು, ಅಜ್ಞಾನಿಯೆಂದು ಕಳೆದಡೆ ಹುರುಳಿಲ್ಲ. ಅತ್ತಿಯಹಣ್ಣು ಬಿಚ್ಚಿದರೆ ಬಲು ಹುಳು. ಎನ್ನ ಚಿತ್ತದೊಳವಗುಣವ ವಿಸ್ತರಿಸಿದರೇನು ? ಫಲವಿಲ್ಲ. ನೋಡದೆ ಕಾಡದೆ ಮಾಯಾತಮವಕಳೆದು ಜ್ಞಾನಜ್ಯೋತಿಯ ತೀವು. ಎನ್ನ ನಿಮ್ಮಯ ಶರಣರು ಚೆನ್ನಬಸವಣ್ಣ ಅಕ್ಕನಾಗಮ್ಮ ನೀಲಲೋಚನೆ ನಿಂಬವ್ವೆ ಮಹಾದೇವಿ ಮುಕ್ತಾಯಕ್ಕ ಅಜಗಣ್ಣ ಅಂಬಿಗರ ಚೌಡಯ್ಯ ಕಲಿಕೇತಯ್ಯ ಬ್ರಹ್ಮಯ್ಯ ನಿರ್ಲಜ್ಜಶಾಂತಯ್ಯ ನಿಜಗುಣದೇವರು ಸಿದ್ಧರಾಮಿತಂದೆ ಮರುಳಶಂಕರದೇವರು ಕಿನ್ನರಿಬ್ರಹ್ಮಯ್ಯ ವೀರಗಂಟೆಯ ಮಡಿವಾಳಯ್ಯ ಮೇದರ ಕೇತಯ್ಯಗಳು ಅರವತ್ತುಮೂವರು ಪುರಾತನರು ತೇರಸರು ಷೋಡಶರು ದಶಗಣರು ಮುಖ್ಯವಾದೈನೂರಾ ಎಪ್ಪತ್ತು ಅಮರಗಣಂಗಳ ಆಳಿನಾಳಿನಾ ಮನೆಯ ಕೀಳಾಳ ಮಾಡಿ ಅವರ ಲೆಂಕನಾಗಿ, ಅವರುಟ್ಟ ಮೈಲಿಗೆ, ಉಗುಳ್ದ ತಾಂಬೂಲ ಪಾದೋದಕ, ಅವರೊಕ್ಕ ಪ್ರಸಾದಕೆನ್ನ ಯೋಗ್ಯನಮಾಡೆ ಏಳೇಳು ಜನ್ಮದಲ್ಲಿ ಬರುವೆ ಕಂಡಾ, ಭವವಿರಹಿತ ತಂದೆ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಬ್ರಹ್ಮನ ಘನವೆಂತೆಂಬಿರಯ್ಯ, ಬ್ರಹ್ಮನು ಘನವಲ್ಲ, ಬ್ರಹ್ಮನು ಕಮಲದಲ್ಲಿ ಹುಟ್ಟಿದ. ಆ ಕಮಲವು ಘನವೆಂತೆಂಬಿರಯ್ಯ, ಕಮಲವು ಘನವಲ್ಲ, ಕಮಲ ಕೆಸರಿನಲ್ಲಿ ಹುಟ್ಟಿತು. ಕೆಸರು ಘನವೆಂತೆಂಬಿರಯ್ಯಾ, ಕೆಸರು ಘನವಲ್ಲ, ಕೆಸರು ನೀರಿನಲ್ಲಿ ಹುಟ್ಟಿತು. ನೀರು ಘನವೆಂತೆಂಬಿರಯ್ಯ, ನೀರು ಘನವಲ್ಲ, ನೀರು ಸಮುದ್ರದಲ್ಲಿ ಹುಟ್ಟಿತು. ಸಮುದ್ರವು ಘನವೆಂತೆಂಬಿರಯ್ಯ, ಸಮುದ್ರವು ಘನವಲ್ಲ, ಸಮುದ್ರವು ಅಗಸ್ತ್ಯಮುನಿಯ ಕುಡಿತೆಗೆ ಸಾಲದಾಗಿ ಹೋಯಿತ್ತು. ಅಗಸ್ತ್ಯನು ಘನವೆಂತೆಂಬಿರಯ್ಯ, ಅಗಸ್ತ್ಯನು ಘನವಲ್ಲ, ಅಗಸ್ತ್ಯನು ಕು-ಂಭದಲ್ಲಿ ಹುಟ್ಟಿದ. ಕುಂಭವು ಘನವೆಂತೆಂಬಿರಯ್ಯ, ಕುಂಭವು ಘನವಲ್ಲ, ಕುಂಭವು ಭೂಮಿಯಲ್ಲಿ ಹುಟ್ಟಿತು. ಭೂಮಿಯು ಘನವೆಂತೆಂಬಿರಯ್ಯ, ಭೂಮಿಯು ಘನವಲ್ಲ, ಭೂಮಿಯು ಆದಿಶೇಷನ ತಲೆಗೆ ಸಾಲದಾಗಿ ಹೋಯಿತ್ತು. ಆದಿಶೇಷನು ಘನವೆಂತೆಂಬಿರಯ್ಯ, ಆದಿಶೇಷ ಘನವಲ್ಲ, ಆದಿಶೇಷನು ಪಾರ್ವತಿದೇವಿಯ ಕಿರುಬೆರಳಿನುಂಗುರಕೆ ಸಾಲದಾಗಿ ಹೋಗಿದ್ದ. ಪಾರ್ವತಿದೇವಿಯು ಘನವೆಂತೆಂಬಿರಯ್ಯ, ಪಾರ್ವತಿದೇವಿ ಘನವಲ್ಲ, ಪಾರ್ವತಿದೇವಿಯು ಪರಮೇಶ್ವರನ ಎಡಗಡೆಯ ತೊಡೆಯ ಬಿಟ್ಟು ಬಲಗಡೆಯ ತೊಡೆಯನರಿಯಳು, ಪರಮೇಶ್ವರನು ಘನವೆಂತೆಂಬಿರಯ್ಯ, ಪರಮೇಶ್ವರನು ಘನವಲ್ಲ, ನಮ್ಮ ಪರಮೇಶ್ವರನು ಭಕ್ತನಾದ ಬಸವಣ್ಣನ ಎದೆಯೊಳಗೆ ಅಡಗಿರ್ದನೆಂದು ವೇದಗಳು ಸಾರುವವು ಎಂದಾತ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಅಂತರಂಗವ ಬಿಟ್ಟು ಮಂಡೆ ಬೋಳಾದ ಮೇಲೆ ಅಂಗಕೆ ಚೆಂದವುಂಟೆ ಚೆಂದ ಅಲಂಕಾರವುಂಟೆ ತಮ್ಮಂಗದ ಸಂಗವನರಿಯದೆ ಭಂಡರನೇನೆಂಬೆನೆಂದಾತ ನಮ್ಮ ದಿಟ್ಟ ವೀರಾಧಿವೀರ ನಿಜ ಭಕ್ತ ಅಂಬಿಗರ ಚವುಡಯ್ಯನು
--------------
ಅಂಬಿಗರ ಚೌಡಯ್ಯ
ಭವಿತನಕ್ಕೆ ಹೇಸಿ ಭಕ್ತನಾದ ಬಳಿಕ ಕೊರಳಿಗೆ ಕವಡೆಯ ಕಟ್ಟಿ ನಾಯಾಗಿ ಬೊಗಳುವರು! ಅದಾವ ವಿಚಾರವಯ್ಯ? ಭವಿತನಕ್ಕೆ ಹೇಸಿ ಭಕ್ತನಾದ ಬಳಿಕ ಬೇವಿನುಡಿಗೆಯನುಟ್ಟು ಹಡಲಿಗೆಯ ಹೊತ್ತು `ಉಧೋ ಉಧೋ ಎಂಬರು! ಅದಾವ ವಿಚಾರವಯ್ಯ? ಭವಿತನಕ್ಕೆ ಹೇಸಿ ಭಕ್ತನಾದ ಬಳಿಕ ಹಗ್ಗಹುರಿ-ಬೆನ್ನಸಿಡಿ-ಬಾಯಬೀಗದಲ್ಲಿ ಹೋಗುವರು! ಅದಾವ ವಿಚಾರವಯ್ಯ? ಇಂಥ ಭವಿಮಾರ್ಗದಲ್ಲಿ ಚರಿಸುವ ಶಿವದ್ರೋಹಿಗಳಿಗೆ ಲಿಂಗಧಾರಣವ ಮಾಡುವನೊಬ್ಬ ಗುರುದ್ರೋಹಿ, ಅವರಿಗೆ ಚರಣೋದಕವ, ತಾ ಧರಿಸುವ ವಿಭೂತಿ-ರುದ್ರಾಕ್ಷಿಯ ಕೊಡುವನೊಬ್ಬ ಲಿಂಗದ್ರೋಹಿ! ಅವನು ಭಕ್ತನೆಂದು ಅವನ ಮನೆಯ ಹೊಕ್ಕು, ಮಂತ್ರವ ಹೇಳಿ, ಅನ್ನವ ತಿಂದವನೊಬ್ಬ ಜಂಗಮದ್ರೋಹಿ! ಇಂತೀ ನಾಲ್ವರಿಗೆ ಸೂರ್ಯಚಂದ್ರರುಳ್ಳನ್ನಕ್ಕ ಎಕ್ಕಲಕೊಂಡದಲ್ಲಿಕ್ಕದೆ ಮಾಣ್ಬನೆ ಅಂಬಿಗರ ಚೌಡಯ್ಯನು?
--------------
ಅಂಬಿಗರ ಚೌಡಯ್ಯ
ತೋಯವಿಲ್ಲದ ಕುಂಭ, ಜ್ಞಾನವಿಲ್ಲದ ಘಟ, ದೇವರಿಲ್ಲದ ಗುಡಿ ಇವು ಹಾಳು ದೇಗುಲ ಸಮವು. ಎಲೆ ಪರವಾದಿಗಳಿರಾ: ಗುರುವು ಎಂಬ ನಾಮವು ಪರಶಿವನು, ಪರಶಿವನೆ ಇಷ್ಟಲಿಂಗವು. ಆ ಇಷ್ಟಲಿಂಗದ ಪೂಜೆಯಲ್ಲಿ ಲೋಲುಪ್ತನಾಗಿರಬೇಕು, ಆ ಗುರುಮಂತ್ರದಲ್ಲಿ ಮಗ್ನನಾಗಿರಬೇಕು, ಚರಭಕ್ತಿಯಲ್ಲಿ ಯುಕ್ತನಾಗಿರಬೇಕು. ಈ ತ್ರಿವಿಧವ ಬಿಟ್ಟು, ಮಲತ್ರಯಕ್ಕೆ ಒಳಗಾಗಿ ಬಂಧನಕ್ಕೆ ಹೋಗುವರ ನೋಡಿ ಮನ ನಾಚಿತ್ತೆಂದ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು.
--------------
ಅಂಬಿಗರ ಚೌಡಯ್ಯ
ನೇಮಸ್ಥನೇನು ಬಲ್ಲನಯ್ಯ ಲಿಂಗದ ಕುರುಹ ? ಸೂಳೆಯ ಮಗನೇನು ಬಲ್ಲನಯ್ಯ ತಂದೆಯ ಕುರುಹ ? ಜಂಗಮದ ಅನುವ ತೊತ್ತಿನ ಮಗನೇನು ಬಲ್ಲನಯ್ಯ ? ಇಂತಪ್ಪ ಅಂಗವೇ ಲಿಂಗ, ಲಿಂಗವೇ ಅಂಗ, ಲಿಂಗವೇ ಜಂಗಮವು, ಜಂಗಮವೇ ಲಿಂಗವೆಂದರಿಯದವನ ಭಕ್ತರೆಂದರೆ ಅಘೋರನರಕವೆಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು.
--------------
ಅಂಬಿಗರ ಚೌಡಯ್ಯ
ಪರಪುರುಷಾರ್ಥವನರಿಯದೆ ಕೆಟ್ಟ ನರಗುರಿಗಳು ನೀವು ಕೇಳಿರೋ: ಪರಪುರುಷಾರ್ಥಕ್ಕೆ ಪ್ರಾಣವ ಕೊಟ್ಟವರುಂಟು. ಮರಳಿ ಕೊಟ್ಟದ್ದಕ್ಕೆ ಕೀರ್ತಿದೇಹವ ಪಡೆದವರ ಪರಿಯ ಕೇಳು ಎಲೇ ಮನವೇ: ಪರಪುರುಷಾರ್ಥಿಯಾದರೆ, ವೀರವಿಕ್ರಮನಂತಾಗಬೇಕು, ಪರಪುರುಷಾರ್ಥಿಯಾದರೆ, ಬಸವಕುಮಾರನಂತಾಗಬೇಕು, ಪರಪುರುಷಾರ್ಥಿಯಾದರೆ, ಕಪೋತಪಕ್ಷಿಯಂತಾಗಬೇಕು, ಇಂತೀ ಪರಪುರುಷಾರ್ಥಕ್ಕೆ ಪ್ರಾಣವ ಕೊಟ್ಟವರುಂಟು. ಹಣವೇನು ದೊಡ್ಡಿತ್ತುರಿ ಹೆಣ್ಣೇನು ದೊಡ್ಡಿತ್ತುರಿ ಮಣ್ಣೇನು ದೊಡ್ಡಿತ್ತುರಿ ಅನ್ನವೇನು ದೊಡ್ಡಿತ್ತುರಿ ಇಂತಿವುಗಳೊಳು ಒಂದನಾದರೂ ಪರಪುರುಷಾರ್ಥಕ್ಕೆ ನೀಡದೆ ಮಾಡದೆ, ತನ್ನ ಶರೀರವ ಹೊರೆದುಕೊಂಡು ಬದುಕುವೆನೆಂಬ ಹೊಲೆ ಮಾದಿಗರುಗಳಿಗೆ ಇಹ-ಪರ ನಾಸ್ತಿ ಎಂದಾತ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಕಾಸಿನ ಕಲ್ಲ ಕೈಯಲ್ಲಿ ಕೊಟ್ಟು ಹೇಸದೆ ಕೊಂದ ಗುರುವೆಂಬ ದ್ರೋಹಿ. ಬಿಟ್ಟಡೆ ಸಮಯವಿರುದ್ಧ, ಹಿಡಿದಡೆ ಜ್ಞಾನವಿರುದ್ಧ. ಇದ್ದಂತೆಂಬೆನಯ್ಯ ಅಂಬಿಗರ Zõ್ಞಡಯ್ಯ.
--------------
ಅಂಬಿಗರ ಚೌಡಯ್ಯ
ಇನ್ನಷ್ಟು ... -->