ಅಥವಾ

ಒಟ್ಟು 330 ಕಡೆಗಳಲ್ಲಿ , 62 ವಚನಕಾರರು , 263 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುಪ್ರಸಾದಿ ಆ ಪ್ರಸಾದವ ಲಿಂಗಕ್ಕೆ ಅರ್ಪಿಸಲಾಗದು, ಲಿಂಗಪ್ರಸಾದಿ ಆ ಪ್ರಸಾದವ ಜಂಗಮಪ್ರಸಾದದಲ್ಲಿ ಕೂಡಲಾಗದು. ಇಂತೀ ತ್ರಿವಿಧಪ್ರಸಾದವ ತಾ ಸ್ವೀಕರಿಸುವಲ್ಲಿ ತನ್ನ ದೃಷ್ಟದ ಇಷ್ಟಕ್ಕೆ ಅರ್ಪಿಸದೆ ಮುಟ್ಟಲಾಗದು. ಇಂತೀ ಭಾವ ಅಮೃತದಲ್ಲಿ ವಿಷ ಬೆರೆದಂತೆ: ಅಮೃತವ ಚೆಲ್ಲಬಾರದು, ವಿಷವ ಮುಟ್ಟಬಾರದು. ಗೋವು ಮಾಣಿಕವ ನುಂಗಿದಂತೆ: ಗೋವ ಕೊಲ್ಲಬಾರದು, ಮಾಣಿಕವ ಬಿಡಬಾರದು. ಗೋವು ಸಾಯದೆ ಮಾಣಿಕ ಕೆಡದೆ ಬಹ ಹಾದಿಯ ಬಲ್ಲಡೆ ಆತ ತ್ರಿವಿಧ ಪ್ರಸಾದಿಯೆಂಬೆ. ಆ ಗುಣ ಏಲೇಶ್ವರಲಿಂಗಕ್ಕೂ ಅಸಾಧ್ಯ ನೋಡಾ!
--------------
ಏಲೇಶ್ವರ ಕೇತಯ್ಯ
ಹುಟ್ಟುಗುರುಡ ಕತ್ತೆಯನೇರಿ ಬಪ್ಪಾಗ, ಮತ್ರ್ಯದ ಮಹಾಗಣಂಗಳು ಕಂಡು, ಕತ್ತೆಯನೇರಿ ಬಂದಡೆ, ಕತ್ತೆಯನೇರಿದ ಕುರುಡ ಹೊತ್ತುಕೊಂಡು, ಕತ್ತೆಯ ಕಾಲೇ ಕುರುಡಂಗೆ, ಕುರುಡನ ಕಾಲೇ ಕತ್ತೆಗೆ. ಈ ಗುಣ ಅಚ್ಚುಗವಾಯಿತ್ತು ಭಕ್ತರೆಲ್ಲರಿಗೆ. ಕತ್ತೆಯ ಕಣ್ಣು ಕಿತ್ತು, ಕುರುಡನ ಕಾಲ ಮುರಿದು, ಭಕ್ತಿ ಮುಕ್ತಿಯೆಂಬುದು ಸತ್ತಿತ್ತು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ವಿಶ್ವಾಸದಿಂದ ಭಕ್ತ, ವಿಶ್ವಾಸದಿಂದ ಮಾಹೇಶ್ವರ, ವಿಶ್ವಾಸದಿಂದ ಪ್ರಸಾದಿ, ವಿಶ್ವಾಸದಿಂದ ಪ್ರಾಣಲಿಂಗಿ, ವಿಶ್ವಾಸದಿಂದ ಶರಣ, ವಿಶ್ವಾಸದಿಂದ ಐಕ್ಯ. ಇಂತೀ ವಿಶ್ವಾಸವಿಲ್ಲದವಂಗೆ ವಿರಕ್ತಿಯೆಂಬ ಗೊತ್ತಿನ ಠಾವ ತೋರಾ. ಪ್ರಭುವಿನ ಕೈಯಲ್ಲಿ, ನಿಜಗುಣನ ನೆನಹಿನಲ್ಲಿ, ಅಜಗಣ್ಣನ ಐಕ್ಯದಲ್ಲಿ ಕುರುಹಿಲ್ಲದೆ ವಸ್ತುವ ಬೆರೆದ ಠಾವಾವುದಯ್ಯಾ ? ಎತ್ತ ಸುತ್ತಿ ಬಂದಡೂ ಅಸ್ತಮಕ್ಕೆ ಒಂದು ಗೊತ್ತಿನಲ್ಲಿ ನಿಲ್ಲಬೇಕು. ಇಂತೀ ವಿಶ್ವಾಸದಿಂದಲ್ಲದೆ ವಸ್ತುವ ಕೂಡುವುದಕ್ಕೆ ನಿಶ್ಚಯವಿಲ್ಲ. ಈ ಗುಣ ಸಂಗನಬಸವಣ್ಣ ತೊಟ್ಟತೊಡಿಗೆ, ಬ್ರಹ್ಮೇಶ್ವರಲಿಂಗವ ಮುಟ್ಟುವ ಭೇದ.
--------------
ಬಾಹೂರ ಬೊಮ್ಮಣ್ಣ
ಕಳ್ಳ, ಹಾದರಿಗ, ಸೂಳೆಗಾರ, ತಳವಾರನಲ್ಲಿ ಮಿಥ್ಯವಿಲ್ಲದಿರಬೇಕು. ಸತ್ಯಸದಾಚಾರಿಗಳಲ್ಲಿ ಸದ್ಭಕ್ತ ಮಿಥ್ಯತಥ್ಯವಿಲ್ಲದಿರಬೇಕು. ಈ ಗುಣ ನಿತ್ಯ ನಿಜೈಕ್ಯನ ಯುಕ್ತಿಯೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಶಿವ ಶಿವ! ಮಹಾದೇವ, ಎನ್ನ ಗುಣಾವಗುಣವರಿಯದೆ ಇದಿರ ಗುಣವ ವಿಚಾರಿಸುವೆ. ಅವರು ವಂಚಿಸಿಹರೆಂದು ಕೊಡರೆಂದು ನಿಂದಿಸಿಹರೆಂದು ಮಾತಾಪಿತ ಸತಿಸುತರುಗಳಿಗೆ ಸ್ನೇಹಿಸಿಹರೆಂದು ಶಿವ ಶಿವಾ! ಬುದ್ಧಿಯನರಿಯದೆ ನಾ ನಿಮಗೆ ವಂಚನೆಯಿಲ್ಲದೆ ಒಲಿದೆನಾದಡೆ ನೀವೆನಗೆ ಒಳ್ಳಿದರು. `ಸತ್ಯಭಾವಿ ಮಹತ್ಸತ್ಯಂ' ಎಂಬುದಾಗಿ, ನಿಮ್ಮಡಿಗಳ ಸ್ನೇಹಿತರು, ಎನಗೆ ಒಳ್ಳಿದರು. ಸ್ನೇಹ ತಾತ್ಪರ್ಯವ ಮಾಡಿ ಬೇಡಿತ್ತನಿತ್ತು ದೇವಾ ಎನುತಿಪ್ಪರು. ಒಳ್ಳಿತ್ತು ಹೊಲ್ಲೆಹ ಎನ್ನಲ್ಲಿ, ಇದಿರಿಂಗೆ ಅದು ಸ್ವಭಾವ ಗುಣ. ಎನ್ನ ದುರ್ಗುಣಂಗಳ ಕಳದು ಸದ್ಗುಣವ ಮಾಡಿ ನಿನ್ನೊಳಗು ಮಾಡಿಕೊಳ್ಳಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಅಗ್ನಿಯ ಅಡಕವ, ನೀರಿನಲ್ಲಿ[ಯ] ಸಾರವ ನಿರವಯದ ಹೊರೆಯ ಭೇದಿಸಿ ಕಾಬಂತೆ ಅಗ್ನಿಗೆ ಮಥನದಿಂದ, ನೀರಿನ ಸಾರಕ್ಕೆ ಮಧುರದಿಂದ ನಿರವಯದ ಹೊರೆಯಕ್ಕೆ ತನ್ನರಿವಿನ ಭೇದದಿಂದ ಕಾಣಿಸಿಕೊಂಬುದು ತ್ರಿವಿಧಲಿಂಗಭೇದ, ಪ್ರಾಣಲಿಂಗಿಯ ಸಂಗ. ಈ ಗುಣ ಸಂಗನಬಸವಣ್ಣನ ಸುಸಂಗ. ಬ್ರಹ್ಮೇಶ್ವರಲಿಂಗವ ಕೂಡುವ ಕುರುಹಿನ ನಿರಂಗ.
--------------
ಬಾಹೂರ ಬೊಮ್ಮಣ್ಣ
‍ಋಣ ತಪ್ಪಿದ ಹೆಂಡಿರಲ್ಲಿ ಗುಣ ತಪ್ಪಿದ ನಂಟರಲ್ಲಿ ಜೀವವಿಲ್ಲದ ದೇಹದಲ್ಲಿ ಫಲವೇನೋ? ಆಳ್ದನೊಲ್ಲದಾಳಿನಲ್ಲಿ ಸಿರಿತೊಲಗಿದರಸಿನಲ್ಲಿ ವರವಿಲ್ಲದ ದೈವದಲ್ಲಿ ಫಲವೇನೋ? ಕಳಿದ ಹೂವಿನಲ್ಲಿ ಕಂಪನು ಉಳಿದ ಸೊಳೆಯಲ್ಲಿ ಪೆಂಪನು ಕೊಳೆಚೆನೀರಿನಲ್ಲಿ ಗುಣವನರಸುವಿರಿ! ಮರುಳೆ ವರಗುರು ವಿಶ್ವಕ್ಕೆಲ್ಲ ಗಿರಿಜಾಮನೋವಲ್ಲಭ ಪರಮ ಕಾರುಣಿಕ ನಮ್ಮ ಕೂಡಲಸಂಗಮದೇವ
--------------
ಬಸವಣ್ಣ
ಒಮ್ಮೆಗೆ ಸುರಿದು, ಮತ್ತೊಮ್ಮೆಗೆ ಬೇಡದಿಪ್ಪುದೆ ಭರಿತಾರ್ಪಣವೆ ? ಮುಟ್ಟಿ ಮುಟ್ಟಿ ಅರ್ಪಿಸಲಾರದೆ ಗುಪ್ಪೆಯಾಗಿ ಸುರಿಯಿಸಿ ಕೊಂಡು ಕೊಂಬುದು ಇದು ಕೃತ್ಯದ ನೇಮ, ಭರಿತಾರ್ಪಣವೆ? ಭರಿತಾರ್ಪಣವಾವುದೆಂದಡೆ: ಪರಸ್ತ್ರಿ ಒಲಿದು ಬಂದಲ್ಲಿ, ನೇಮಕಲ್ಲದ ದ್ಯವ್ಯನೆರೆದು, ನಿಕ್ಷೇಪ ಕೈಲೆಡೆಯ ಕಡವರ ವಿಶ್ವಾಸಿಸಿದಲ್ಲಿ, ಘಾತಕತನವ ಬಿಟ್ಟು ಇಂತೀ ಅವಗುಣದಲ್ಲಿ ಮಲಿನನಲ್ಲದೆ ಸ್ವಾನುಭಾವಸಿದ್ಧಾನಾಗಿ ಕಾಯಕರ್ಮಕ್ಕೊಳಗಲ್ಲದೆ, ಜೀವ ನಾನಾ ಜೀವಂಗಳಲ್ಲಿ ಹುಟ್ಟಿ ಹೊಂದದೆ, ಆತ್ಮನ ವಸ್ತುವಲ್ಲದೆ ಮತ್ತೇನನೂ ಅರಿಯದೆ, ಪರಿಭ್ರಮವ ಹರಿದುದು ಭರಿತಾರ್ಪಣ. ಈ ಗುಣ ಚೆನ್ನ ಚೆನ್ನ ಕೂಡಲ ರಾಮೇಶ್ವರಲಿಂಗ ಸಂಗ.
--------------
ಭರಿತಾರ್ಪಣದ ಚೆನ್ನಬಸವಣ್ಣ
ತರುಗಿಡು ಗುಣನಾಮವಾದಡೇನು, ಸ್ಥಾಣುವಿನ ಒಲವರದ ತೆರ ಬೇರೆ. ದರ್ಶನ ಸುಖಸಂಪತ್ತಾದಡೇನು, ಅರಿವಿನ ಒಲವರದ ತೆರ ಬೇರೆ. ಎಲೆಯ ಹಾಕಿ ತನ್ನಲ್ಲಿಗೆ ಕರೆವವನ ಗುಣ ಲೇಸೆ ? ಶಬರನ ವೇಷ, ಮೃಗದ ಹರಣದ ಕೇಡು. ಹಿರಿಯತನವ ತೋರಿ, ತ್ರಿವಿಧವ ಬೇಡುವ ಅಡಿಗರಿಗೇಕೆ, ಬಂಕೇಶ್ವರಲಿಂಗವ ಅರಿದ ಅರಿವು ?
--------------
ಸುಂಕದ ಬಂಕಣ್ಣ
ಮರನುರಿದು ಬೆಂದು ಕರಿಯಾದ ಮತ್ತೆ ಉರಿಗೊಡಲಾದುದ ಕಂಡು, ಆತ್ಮ ಪರಿಭವಕ್ಕೆ ಬಪ್ಪುದಕ್ಕೆ ಇದೆ ದೃಷ್ಟ. ಕರಿ ಭಸ್ಮವಾದ ಮತ್ತೆ ಉರಿಗೊಡಲಿಲ್ಲ, ಅರಿಕೆ ನಿಂದಲ್ಲಿ ಆತ್ಮ ಪರಿಭವಕ್ಕೆ ಬರಲಿಲ್ಲ, ಉರಿಯೊಳಗೊಡಗೂಡಿದ ತಿಲಸಾರ ತುಪ್ಪ ಮರಳಿ ಅಳೆತಕ್ಕುಂಟೆ ? ವಸ್ತುವಿನಲ್ಲಿ ಕರಿಗೊಂಡ ಚಿತ್ತ, ತ್ರಿವಿಧಮಲಕ್ಕೆ ಹೊರಳಿ ಮರಳುವದೆ ? ಈ ಗುಣ ನಡೆ ನುಡಿ ಸಿದ್ಧಾಂತವಾದವನ ಇರವು, ಗಾರುಡೇಶ್ವರಲಿಂಗವ ಕೂಡಿದವನ ಕೂಟ.
--------------
ಉಪ್ಪರಗುಡಿಯ ಸೋಮಿದೇವಯ್ಯ
ಧ್ಯಾನವಿಲ್ಲದೆ ಲಿಂಗವ ನಿಧಾನಿಸಬಹುದೆ? ಲಿಂಗವಿಲ್ಲದೆ ಧ್ಯಾನಕ್ಕೆ ಸಂಗ ಸನ್ಮತವುಂಟೆ? ಈ ಗುಣ ಶ್ರುತ ದೃಷ್ಟ ಕೂಡಿ ಅನುಮಾನಕ್ಕೆ ಒಳಗಾದಂತೆ. ಈ ಗುಣ ಅಂಗಲಿಂಗ ಆತ್ಮಲಿಂಗ ಸಂಗ ಸುಸಂಗಿಯ ಸಂಗ, ಉಭಯಸ್ಥಲ ಸಂಬಂಧ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 51 ||
--------------
ದಾಸೋಹದ ಸಂಗಣ್ಣ
ವೇದಶಾಸ್ತ್ರಪುರಾಣಾಗಮಗ್ರಂಥಂಗಳ ನೋಡಿದವರೆಲ್ಲರೇನು ಹಿರಿಯರೆಂಬೆನೆ ? ಅಲ್ಲಲ್ಲ, ನಿಲ್ಲು, ಮಾಣು. ಅವರೇ ಹಿರಿಯರಾದಡೆ, [ಟ್ಟುನವೆ], ಗಳೆಯಾಟ, ಮಿಣಿಯಾಟ, ಅದೃಶ್ಯಕರಣ, ಅಗ್ನಿಸ್ತಂಭ, ಆಕರ್ಷಣ, eõ್ಞಷಷ್ಠಿಕಲಾವಿದ್ಯೆಯ ಸಾದ್ಥಿಸಿದ ಡೊಂಬನೇನು ಕಿರಿಯನೇ ? ಇದು ಹಿರಿದು ಕಿರಿದಿನ ಪರಿಯಲ್ಲ. ಹಿರಿದು ಕಿರಿದಿನ ಪರಿ ಬೇರೆ ಕಾಣಿರಣ್ಣಾ. ಇದು ಉದರಪೋಷಣವಿದ್ಯೆ ಎನಿಸುವುದು. ಅವರನೆಂತು ಸರಿ ಎಂಬೆನಯ್ಯ, ಲಿಂಗವಂತಂಗೆ ? ಇದು ಕಾರಣ, ಗುಣ, ಜ್ಞಾನ, ಧರ್ಮ, ಆಚಾರ, ಶೀಲ ಸಾದ್ಥಿಸಿದಾತನೇ ಹಿರಿಯ ಕಾಣಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ತವನಿದ್ಥಿಯ ಬೆಳೆವಂಗೆ ಕಣಜದ ಹಂಗುಂಟೆ ? ವಿರಕ್ತಂಗೆ ಆರೈಕೆಗೊಂಬವರುಂಟೆ ? ಕಾಯಕವ ಮಾಡುವ ಭಕ್ತಂಗೆ ಇನ್ನಾರುವ ಕಾಡಲೇತಕ್ಕೆ ? ಆ ಗುಣ ಅಮರೇಶ್ವರಲಿಂಗಕ್ಕೆ ದೂರ.
--------------
ಆಯ್ದಕ್ಕಿ ಮಾರಯ್ಯ
ವೈಶೇಷಿಕವೇ ದ್ರವ್ಯ ಗುಣ, ಕರ್ಮ ಸಾಮಾನ್ಯ ವಿಶೇಷ ಸಮವಾಯವೆಂಬ ಷಟ್ಪದಾರ್ಥ ಪ್ರತಿಪಾದಕತ್ವದಿಂ, ಪ್ರಪಂಚ ಸ್ವರೂಪಮಂ ವಿಭಾಗಿಸುತ್ತಿರ್ಕುಂ, ಬಳಿಕ ಕಪಿಲ ಪತಂಜಲಿ ವ್ಯಾಸರೆಂಬ ಮುನಿಗಳಿಂ ಕ್ರಮದಿಂ ನಿರೂಪಿತಂಗಳಾದ ಸಾಂಖ್ಯ ಪಾತಂಜಲ ವೇದಾಂತಗಳೆಂಬ ಆತ್ಮಜ್ಞಾನಫಲವಾಗುಳ್ಳವೆ ಆದ್ಯಾತ್ಮಿಕ ಶಾಸ್ತ್ರ ತ್ರಯಂಗಳವರಲ್ಲಿ ಸಾಂಖ್ಯವೆ ನಿತ್ಯನಿರ್ಮಲರಾದಾತ್ಮರ ಸನ್ನಿಧಾನದಿಂ ಗುಣ ತ್ರಯಾತ್ಮಿಕ ಪ್ರಕೃತಿಯೆ ಪಂಚವಿಂಶತಿತತ್ವಾತ್ಮಕ ಸನ್ನಿಧಾನದಿಂ ಗುಣ ತ್ರಯಾತ್ಮಿಕ ಪ್ರಕೃತಿಯೆ ಪಂಚವಿಂಶತಿತತ್ವಾತ್ಮಕ ಜಗವಾಗಿ ವ್ಯವಹರಿಸೂದೆ ಸಂಸಾರ ಬಂಧವೆಂಬುದಂ ಸತ್ವಾದಿ ಗುಣತ್ರಯಾನುಕ್ರಮದಿಂ ಶ್ಲೇಷ್ಮಪ್ರಕೃತಿ ಪಿತ್ತಪ್ರಕೃತಿ ವಾತಪ್ರಕೃತಿ[ಗಳುಳ್ಳ] ಶಾಂತಿಕ್ರೋಧಮೂಢತ್ವಾದಿ ಗುಣಾದಿಗಳಾದ ಉತ್ತಮ ಮಧ್ಯಮ ಅಧಮ....ತ್ರಯದ....ಮೊದಲಾದವಂ ವಿಭಾಗಿಸೂ ದಯ್ಯಾ ಶಾಂತವೀರೇಶ್ವರಾ.
--------------
ಶಾಂತವೀರೇಶ್ವರ
ಆ ನಿಜದರಿವು ತಾನೊಂದು ಬಂಧನದಿಂದ ಮರೆಯಾದುದ ತಾನರಿಯದೆ, ಮರವೆಯ ಗುಣ ಇದಿರಿಗೆ ಅದೆಯೆಂದು ಸಂಪಾದಿಸುವಾಗ, ಆ ತೆರ ಶಿಲೆಯ ನೆಳಲಿನ ಮರೆಯಲ್ಲಿ ತನ್ನಂಗ ಬಿಂಬಿಸಲಿಂತಾಗಿ, ಅರಿ ಇದಿರಾಯಿತ್ತೆಂದು, ಶಿಲೆಯ ಕೊಂಡು, ತಾನೊಂದು ಚೇತರಿಸಿಕೊಂಡು ನಿಂದ ಗಜದಂತೆ, ನಿಜದರಿವು ತ್ರಿಗುಣಾತ್ಮಕದಲ್ಲಿ ಬೆರಸಿ, ತ್ರಿದೋಷದ ದೆಸೆಯಿಂದ ನಾನಾದರುಶನ ಪಕ್ಷಪಾತಂಗಳಲ್ಲಿ ಹೊತ್ತು ಹೋರಿ, ಅಧ್ಯಾತ್ಮ, ಆದಿಭೌತಿಕ, ಆದಿದೈವಿಕಂಗಳ ತಿಳಿಯಬೇಕೆಂದು, ಭೂತಭವಿಷ್ಯದ್ವರ್ತಮಾನವ ವಿಚಾರಿಸಿಹೆನೆಂದು, ಷಡುದರುಶನವ ಸಂಪಾದಿಸಿಹೆನೆಂದು, ಪಂಚಭೌತಿಕ ಭೇದ, ಪಂಚವಿಂಶತಿತತ್ವ ಮೂವತ್ತಾರು ಕ್ರಮ, ಐವತ್ತೊಂದು ಮೆಟ್ಟು, ನೂರೊಂದರ ಲಕ್ಷ. ಇಂತಿವ ಪ್ರಮಾಣಿಸಿ ತಿಳಿದಲ್ಲಿ, ಅದಕ್ಕೆ ಬೇರೆ ಬೇರೆ ಸೂರ್ಯ ಚಂದ್ರ ಆಕಾಶ ವಾಯು ಆಗ್ನಿ ಉದಕ ಪೃಥ್ವಿ ಬೇರೊಂದು ನೆಲಹೊಲಬುಂಟೆ ? ಇಂತಿವೆಲ್ಲವು ವಸ್ತುಮಯದೊಳಗಿದ್ದ ಲಕ್ಷ. ಊರೊಳಗಣ ಹಲವು ಕುಲವೆಲ್ಲವೂ ಅರಸಿನ ದೆಸೆ ಕುಲದಲ್ಲಿ ಎಸಕವ ತಿಳಿದಡಗಿದ ತೆರದಂತೆ, ಅರಿದು ನಡೆವ ಪರಮವಿರಕ್ತಂಗೆ ಹಲವುಮಾತಿನ ಬಲೆಯ ಭ್ರಮೆಯಿಲ್ಲ. ಗೆಲ್ಲಸೋಲದ ಕಲ್ಲೆದೆಯವನಲ್ಲ. ಅಲ್ಲಿಗಲ್ಲಿಗೆ ಬಲ್ಲರಿಯರೆಂದು ಕೋಲಾಟಿಗರಂತೆ ಥೆಕಾವ್ಯವೆಲ್ಲವ ಹೇಳುವನಲ್ಲ. ತ್ರಿವಿಧಮಲವಿಲ್ಲದಡೆ ಒಲ್ಲೆನೆಂದು ತನ್ನಲ್ಲಿಗೆ ಬಂದಡೆ, ಕೂಡಿ ಕದಂಬನಾಗಿ, ಮಧು ಮಕ್ಷಿಕನಂತೆ ಸಂಸಾರದಲ್ಲಿಯೆ ಸಾವನಲ್ಲ. ಕಲ್ಲಿಯೊಳಗಣ ಮಕರದ ಜೀವದಂತೆ, ಸಂಸಾರದಲ್ಲಿಯೆ ಹೋದ ಕುಳಿಗೊಂಬನಲ್ಲ. ಆತನ ಇರವು ದಗ್ಧಪಟದಂತೆ, ರತ್ನದೀಪ್ತಿಯ ಹೊದ್ದಿಗೆಯ ತೆರದಂತೆ, ಸ್ಫಟಿಕದ ನಿರ್ದೇಹದ ವರ್ಣದ ಹೊದ್ದಿಗೆಯಂತೆ, ಇಂತು ಚಿದ್ರೂಪನ ಇರವು. ಊಧ್ರ್ವರೇತೋಮೂರ್ತಿ ಶ್ವೇತಸ್ವಯಂಭು ಕಪಿಲೇಶ್ವರಲಿಂಗದೊಳಗಾದವನ ಇರವು
--------------
ಮಹಾಲಿಂಗ ಶಶಿಮೌಳಿ ಸದಾಶಿವ
ಇನ್ನಷ್ಟು ... -->