ಅಥವಾ

ಒಟ್ಟು 66 ಕಡೆಗಳಲ್ಲಿ , 4 ವಚನಕಾರರು , 66 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉಂಡರೆ ಭೂತನೆಂಬರು, ಉಣದಿದ್ದರೆ [ಚಾತಕ]ನೆಂಬರು. ಭೋಗಿಸಿದರೆ ಕಾಮಿಯೆಂಬರು, ಭೋಗಿಸದಿದ್ದರೆ ಮುನ್ನ ಮಾಡಿದ ಕರ್ಮಿ ಎಂಬರು. ಊರೊಳಗಿದ್ದರೆ ಸಂಸಾರಿ ಎಂಬರು, ಅಡವಿಯೊಳಗಿದ್ದರೆ ಮೃಗಜಾತಿ ಎಂಬರು. ನಿದ್ರೆಗೈದರೆ ಜಡದೇಹಿ ಎಂಬರು, ಎದ್ದಿದ್ದರೆ ಚಕೋರನೆಂಬರು. ಇಂತೀ ಜನಮೆಚ್ಚಿ ನಡೆದವರ ಎಡದ ಪಾದ ಕಿರಿ ಕಿರುಗುಣಿಯಲ್ಲಿ ಮನೆ ಮಾಡು, ಮನೆ ಮಾಡು ಎಂದಾತ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ನಮಗೊಬ್ಬರೆಂಜಲು ಸೇರದೆಂದು, ಶುಚಿತನದಲ್ಲಿ ಬದುಕುತ್ತೈ[ದೇ]ನೆ ಎಂದುಯೆಂಬ ಬರಿಯ ಮಾತಿನ ರಂಜಕರು ನೀವು ಕೇಳಿರೋ ಅಣ್ಣಗಳಿರಾ: ನೀವು ತಂದು ಕುಡಿವ ನೀರು ಜಲಚರದೆಂಜಲು, ಮೃಗಪಶುಪಕ್ಷಿಯ ಎಂಜಲು. ಭಾವಿಗೆ ಹೋಗಿ ಕೈಕಾಲು ತೊಳೆದು ಬಾಯಿ ಮುಕ್ಕಳಿಸುವಲ್ಲಿ ಮಾನವರೆಂಜಲು. ಇಂತೀ ಹಲವೆಂಜಲ ಬೆರಸಿದ ಆ ಎಂಜಲ ತಿಂದು ಬೆಳೆದು, ಬೆ[ಳೆ]ಸಿದ ಆ ಎಂಜಲಿಂದ ಬೆಳೆವ ಪದಾರ್ಥಂಗಳು, ಆ ಎಂಜಲಿಂದಾದ ಪಾಕವನು, ನಲಿನಲಿದುಂಡು ಕುಡಿವಲ್ಲಿ ಎಂಜಲು ಹಿಂಗಿದಠಾವ ತೋರಿರಣ್ಣಾ! ಇದ ಬಲ್ಲ ಭಕ್ತರು ಸರ್ವಪದಾರ್ಥಂಗಳನು ಶಿವಮಂತ್ರದಲೆ ಹಸ್ತಸ್ಪರ್ಶನವ ಮಾಡಿ, ವಿಭೂತಿಯಿಂದ ಶುದ್ಧಮಾಡಿ, ಲಿಂಗಕ್ಕೆ ಕೊಟ್ಟು ಕೊಂಬಲ್ಲಿ ಗುರುಪ್ರಸಾದವಾಯಿತ್ತು. ಇಂತೀ ಶುದ್ಧ ಸಿದ್ಧ ಪ್ರಸಿದ್ಧ ಪ್ರಸಾದವ ಕೊಂಬಲ್ಲಿ ಸರ್ವ ಎಂಜಲ ಹೊಲೆಯುವ ನೀಗಿದ. ಇದನರಿಯದಿರ್ದಡೆ ಮಿಕ್ಕಿನವರೆಲ್ಲರು ಹಲವರೆಂಜಲ ಹೊಲೆಯೊಳಗೆ ಮುಳುಗಿ ಉಂಡರೆಂದಾತ ನಮ್ಮ ಅಂಬಿಗರ ಚೌಡಯ್ಯ
--------------
ಅಂಬಿಗರ ಚೌಡಯ್ಯ
ಶುಕ್ಲಶೋಣಿತಪಿಂಡೈಕ್ಯನ ಚಿತ್ತವಾಯು ಆರು ದಳದ ಪದ್ಮದಲ್ಲಿಹುದು. ಮೊಲೆ ಮುಡಿ ಬಂದರೆ ಆ ಪಿಂಡವನು ಹೆಣ್ಣೆಂಬರು. ಗಡ್ಡ ಮೀಸೆಗಳು ಬಂದರೆ ಆ ಪಿಂಡವನು ಗಂಡೆಂಬರು, ಆ ಇಬ್ಬರ ನಡುವೆ ಸುಳಿದ ಆತ್ಮನು ಹೆಣ್ಣು ಅಲ್ಲ, ಗಂಡು ಅಲ್ಲ ನೋಡಾ. ಇದರಂತುವ ತಿಳಿದು ನೋಡಿಹೆನೆಂದರೆ ಶ್ರುತಿಗಳಿಗೋಚರೆಂದ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಓಟೆ ಇದ್ದಂತೆ ಕಾಯಿ ಮೆದ್ದವರುಂಟೆ ? ಕಾಯದ ಗುಣವಿದ್ದಂತೆ ಲಿಂಗವನರಿದವರುಂಟೆ ? ಜೋಡು ಹರಿದಲ್ಲದೆ ಕಾಯವನಿರಿಯಲರಿಯದು ಕೈದು. ಆ ಭಾವವ ತಿಳಿದಲ್ಲದೆ ನಮ್ಮ ಗುಹೇಶ್ವರಲಿಂಗವನರಿಯಬಾರದು ಕಾಣಾ, ಎಲೆ ಅಂಬಿಗರ Zõ್ಞಡಯ್ಯ.
--------------
ಅಲ್ಲಮಪ್ರಭುದೇವರು
ಕಲ್ಲದೇವರ ಪೂಜೆಯ ಮಾಡಿ, ಕಲಿಯುಗದ ಕತ್ತೆಗಳಾಗಿ ಹುಟ್ಟಿದರು. ಮಣ್ಣದೇವರ ಪೂಜಿಸಿ ಮಾನಹೀನರಾದರು. ಮರನ ದೇವರೆಂದು ಪೂಜಿಸಿ ಮಣ್ಣ ಕೂಡಿದರು. ದೇವರ ಪೂಜಿಸಿ ಸ್ವರ್ಗಕ್ಕೇರದೆ ಹೋದರು! ಜಗದ್ಭರಿತವಾದ ಪರಶಿವನೊಳಗೆ ಕಿಂಕರನಾದ ಶಿವಭಕ್ತನೆ ಶ್ರೇಷ*ನೆಂದಾತ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಊರ ಸುತ್ತಿ ಬಂದ[ಡೇ]ನಯ್ಯ, ಸೇರಬೇಕು ಹೆಬ್ಬಾಗಿಲಲ್ಲಿ. ಹೊರಬೇಕು, ಗುರುಲಿಂಗಜಂಗಮದ ಪಾದವ. ಶ್ವಾನಜ್ಞಾನದ ಮಾತ ಕಲಿತು ಅರಿಕೆಯ ಮಾತಿಗೆ ಹೋರಾಟಕ್ಕೆ ಹೋದರೆ, ಸೇರಿದ್ದ ಲಿಂಗ ದೂರವಾಯಿತು, ಎಂದ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
-->