ಅಥವಾ

ಒಟ್ಟು 83 ಕಡೆಗಳಲ್ಲಿ , 26 ವಚನಕಾರರು , 72 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಲಿಂಗಾಂಗಿಯೆಂದು ಪೇಳುವ[ವ]ನೇ ನೀ ಕೇಳು : ಬರಿದೆ ಲಿಂಗಮಂ ಕಟ್ಟಿ, ಅಂಗದಲ್ಲಿ ಧರಿಸಿ, ಮಂಗದೈವಂಗಳಿಗೆ ಅಡ್ಡ ಬಿದ್ದ ಬಳಿಕ ನಿನಗೆ ಲಿಂಗಾಂಗದೇಹವೆಲ್ಲೈತೆಲಾ ? ಲಿಂಗಾಂಗದೇಹದ ಲಕ್ಷಣವ ಪೇಳುವೆನು ಕೇಳೆಲಾ : ಲಿಂಗಾಂಗದೇಹಿಯಾದ ಬಳಿಕ, ಲಿಂಗ ಪೋದಡೆ ಅಂಗ ಬಹಿಷೆ* ; ಅದರಿಂದ ಪೋಗಬೇಕು. ಎಲ್ಲಾ ದೇವರಿಗೊಲ್ಲಭನಾದ ದೇವರು ಲಿಂಗವು. ಅಂತಪ್ಪ ಲಿಂಗವು ನಿನ್ನ ಕರಸ್ಥಲ[ಕೆ] ಉರಸ್ಥಲಕೆ ಬಂದ ಬಳಿಕ ಪರದೈವದ ಹಂಗೇಕಲಾ ? ಮನೆಯಲ್ಲಿ ಪರುಷವ ಇಟ್ಟುಕೊಂಡು ಹೆರರ ಪದಾರ್ಥಕ್ಕೆ ಹಲ್ಲು ತೆರೆವನಂದದಿ ಗುರುವು ಕೊಟ್ಟ ಲಿಂಗವು ಅಂಗದಲ್ಲಿ ಇದ್ದ ಬಳಿಕ ಗುರುಮಂತ್ರವು ಶ್ರವಣದಲ್ಲಿ ಉಪದೇಶವಾದ ಬಳಿಕ, ಗುರುವಾಕ್ಯ ಜಿಹ್ವೆಯಲ್ಲಿ ಉದ್ಭವಿಸಿದ ಬಳಿಕ, ಗುರುಪ್ರಣುತವು ಪಣೆಗೆ ಲಿಪ್ತವಾದ ಬಳಿಕ, ಇದಂ ಮರೆದು ಮಾಯಾ ಮೋಹಕೊಳಗಾಗಿ, ಅನಂತ ಪ್ರಪಂಚದೊಳು ತೇಲಾಡಿ, ತನಗೆ ವಿಪತ್ತು ಬಂದಡೆ ಕೋಟಿ ಶೀಲವಂ ಕೇಳುವ ಹೇಳುವ ತಾಟಕ ಹೊಲೆಯರ ಮುಖವ ನೋಡಲಾಗದು ಕಾಣಾ ಕೂಡಲಾದಿ ಚನ್ನಸಂಗಮದೇವಾ.
--------------
ಕೂಡಲಸಂಗಮೇಶ್ವರ
ಶೀಲದ ತುದಿಯ ಮೊದಲನರಿಯದೆ, ವ್ರತದಾಚರಣೆಯ ಕ್ರಮವನರಿಯದೆ, ಆಚಾರದ ನೆಲೆಯನರಿಯದೆ, ಬರಿದೆ ವ್ರತ ಶೀಲಾಚಾರವೆಂದೆಂಬಿರಿ. ವ್ರತಶೀಲಾಚಾರದ ಸ್ವರೂಪವನರಿಯದ, ಅದರಾಚರಣೆಯನರಿಯದ ಶೀಲವಂತರು ನೀವು ಕೇಳಿ ಭೋ. ತನುವಿನ [ಗುಣವ] ಮನದಲ್ಲಿಗೆ ತಂದು, ಆ ಮನದ ಅನುವನರಿದು, ಶುಚಿ ಶೀಲ ಉಚ್ಯತೆಯೆಂದುದಾಗಿ, ಸಚ್ಚರಿತ್ರವನುಳ್ಳ ಆಚಾರವೆ ಸ್ವರೂಪವಾದ ಘನಲಿಂಗವ ಬೆರಸಬಲ್ಲಡೆ ಅದು ಶೀಲ. ಮನದ ತನುವ ಮಹಾಘನದರುವಿನಲ್ಲಿಗೆ ತಂದು ಅರಿವಿನ ಆಚಾರವೆ ಗುರುಲಿಂಗಜಂಗಮ ಪ್ರಸಾದ ಪಾದತೀರ್ಥ ಭಕ್ತಿ ಎಂದರಿದು, ಅವರ ಸ್ವರೂಪವನರಿದು, ಆಚರಿಸಿದ ಘನ ಶರಣರ ಬೆರಸಬಲ್ಲಡೆ ಅದು ವ್ರತ. ಸದಾಚಾರ ನಿಯತಾಚಾರ, ಭಕ್ತ್ಯಾಚಾರ ಶಿವಾಚಾರ ಸಮಯಾಚಾರ ಗಣಾಚಾರವೆಂಬವುಗಳ ಸ್ವರೂಪವನರಿದು ಆಚರಿಸಬಲ್ಲಡೆ ಅದು ಆಚಾರ. ವ್ರತ ಶೀಲಾಚಾರದ ಅನುವನರಿಯದೆ, ಘನ ಶರಣರ ಬೆರಸದೆ, ತನುಮನಧನವ ಗುರುಲಿಂಗಜಂಗಮಕ್ಕೆ ಸವೆಸದೆ ಬರಿದೆ ಅನುವಿನ ತನುವಿನ ಕೊನೆಯ ಮೊನೆಯ ಮೇಲಣ ಜ್ಯೋತಿಯ ತಮ ತಮಗೆ ಅರಿದೆಹೆನೆಂಬವರೆಲ್ಲರೂ ಅನುಮಾವನನರಿಯದೆ ಕೆಟ್ಟರು ಕಾಣಾ, ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನ ದೇವಯ್ಯಾ. ನಿಮ್ಮ ಶರಣರ ಅನುವನರಿದು, ಘನವ ಬೆರಸಬಲ್ಲ ಶರಣ ಸಂಗನಬಸವಣ್ಣನು, ಇಂತಪ್ಪ ಮಹಾಲಿಂಗವಂತರ ನಿಲವಿನ ಪರಿಯ ನೀವೇ ಬಲ್ಲಿರಲ್ಲದೆ, ನಾನೆತ್ತ ಬಲ್ಲೆನಯ್ಯಾ ? ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಮರುಳಶಂಕರದೇವ
ಗುರುಲಿಂಗಜಂಗಮವ ನಂಬಿ ಕರೆದಡೆ, ಓ ಎಂಬ ಶಿವನು. ನಂಬದೆ ಕರೆದಡೆ ಓ ಎಂಬನೇ ಶಿವನು ನಂಬಲರಿಯರು, ನಚ್ಚಲರಿಯರು ಡಂಭಿನ ಭಕ್ತರು. ನಂಬದೆ ನಚ್ಚದೆ ಬರಿದೆ ಕರೆದಡೆ ಶಂಭು ಮೌನದಲ್ಲಿಪ್ಪ ನಮ್ಮ ಕೂಡಲಸಂಗಮದೇವರು.
--------------
ಬಸವಣ್ಣ
ಎಲಾ ಬ್ರಾಹ್ಮಣಾ ನೀ ಕೇಳು : ಬರಿದೆ 'ನಾ ಬ್ರಾಹ್ಮಣ' 'ನೀ ಬ್ರಾಹ್ಮಣನೆ'ಂದು ತಿರುಗುವಿರಲ್ಲದೆ, ಬ್ರಹ್ಮದ ನೆಲೆಯ ಬಲ್ಲಿರೇನಯ್ಯಾ? ಅದು ಎಂತೆಂದಡೆ : ವೇದಮಯವಾಗಿರ್ಪುದೇ ಬ್ರಹ್ಮ; ಬ್ರಹ್ಮಮಯವಾಗಿರ್ಪುದೇ ವೇದ. ಇಂತೀ ಚತುರ್ವೇದ ಪ್ರಕರಣಮಂ ಓದಿ ಹಾದಿಯಂ ತಪ್ಪಿ ಬೀದಿಯ ಸೂಳೆ[ಯ] ಹಿಂದೆ ತಿರುಗಿದ ಬಳಿಕ ನಿನಗೆ ಬ್ರಹ್ಮತ್ವವು ಎಲೈತೆಲಾ? ಬ್ರಹ್ಮತ್ವವು ದಾವುದೆಂದಡೆ ಪೇಳುವೆನು ಕೇಳೆಲಾ: ವೇದದೊಳಗಣ ತತ್ತ್ವಸಾರವನು ತೆಗೆದು, ಗುರುಪಥವು ಅನುಸರಣೆಯಾಗಿ, ನಿಜಮಾರ್ಗವ ಕಂಡು ನಿತ್ಯತ್ವ ನೀನಾಗಿ, ನಿರುಪಮ ನಿರ್ಮಾಯ ನಿರ್ವೇದ ವಸ್ತುವ ತಿಳಿದು, ಸಾಧುಸಜ್ಜನರೊಡನಾಡಿ ಸಾಕ್ಷಾತ್ಕಾರವಾಗಿ, ಸಾಯುಜ್ಯ ಸಾಮಿಪ್ಯ ಪಥಮಂ ಕಂಡುಳಿದು, ಆರು ಚಕ್ರವ ಹತ್ತಿ, ವಿೂರಿದ ಸ್ಥಲದೊಳಗಿರ್ಪ ಲಿಂಗಮಂ ಪೂಜಿಸಿ, ಮೋಕ್ಷಮಂ ಪಡೆದಡೆ, ಬ್ರಾಹ್ಮಣನೆಂದು ನಮೋ ಎಂಬುವೆನಯ್ಯಾ. ಬರಿದೆ ಬಡಿವಾರಕ್ಕೆ ಮಿಂದುಟ್ಟು 'ನಾ ಬ್ರಾಹ್ಮಣ' 'ನೀ ಬ್ರಾಹ್ಮಣನೆ'ಂದು ತಿರುಗುವ ಮೂಳ ಹೊಲೆಯರ ಮುಖವ ನೋಡಲಾಗದು ಕಾಣೋ, ಕೂಡಲಾದಿ ಚೆನ್ನಸಂಗಮದೇವಾ !
--------------
ಕೂಡಲಸಂಗಮೇಶ್ವರ
ಅಷ್ಟತನುವಿನೊಳಗೊಂದು ತನುವಾಗಿ, ಜೀವಾತ್ಮನು ಪಾಶಬದ್ಧನು ಪಶುಪಾಗತಂತ್ರನು ಸ್ವತಂತ್ರವೆಲ್ಲಿಯದೊ ? ಸ್ವತಂತ್ರ ಶಿವನೊಬ್ಬನೆ ತನ್ನ ಇಚ್ಛಾಲೀಲೆಯಿಂದಾಡಿಸುವ ಘೋರಸಂಸಾರ ಭವವಾರಿಧಿಯೊಳಗೆ ರಾಟಾಳದ ಗುಂಡಿಗೆಯೊಳಗಣ ಜಲದ ತೆರದಿ ತುಂಬುತ್ತ ಕೆಡಹುತ್ತವಿರುಹವೈಸಲ್ಲದೆ ತೆರಹಿಲ್ಲ. ಪುಣ್ಯಪಾಪಂಗಳ ಮಾಡಿ ಸ್ವರ್ಗನರಕಂಗಳ ಭೋಗಿಸಿ ಪರತಂತ್ರವಲ್ಲದೆ ಸ್ವತಂತ್ರವೆಲ್ಲಿಯದೊ ? ಪುನರ್ಜನ್ಮ ಪುನರ್ಮೃತ್ಯುಃ ಪುನಃ ಕ್ಲೇಶಃ ಪುನಃ ಪುನಃ | ಸಗರಸ್ಥಘಟನ್ಯಾಯೋ ನ ಕದಾಚಿದವೈದೃಶಃ || ಎಂದುದಾಗಿ, ಜೀವಾತ್ಮಂಗೆ ಪರಮಾತ್ಮತ್ವ ಸಲ್ಲದಾಗಿ, ಅಷ್ಟತನುವಿನೊಳಗೊಂದು ತನು ಕಾಣಿಭೋ, ಎಲೆ ಅದ್ವೈತಿಗಳಿರಾ. ಹುಟ್ಟುಕುರುಡನು ತನ್ನ ಹಿರಿಯಯ್ಯ ಹೆತ್ತಪ್ಪಂಗೆ ಮುಖವೆಲ್ಲ ಕಣ್ಣೆಂದಡೆ, ತನಗಾದ ಸಿದ್ಧಿ ಯಾವುದು ? ಆದಿ ಸಿದ್ಧಾಂತ ವೇದಾಂತ ಶಾಸ್ತ್ರವನೋದಿ ಕೇಳಿ ಹೇಳಿದಡೆ, ತನಗೇನು ಸಿದ್ಧಿಯಾದುದೆಲೆ ಆತ್ಮತತ್ತ್ವವಾದಿಗಳಿರಾ ಹೇಳಿರೆ ? ಅಷ್ಟತನುಗಳೆಲ್ಲ ಪರತಂತ್ರವೆಂಬುದ ಶ್ರುತದೃಷ್ಟಾನುಮಾನಂಗಳಿಂ ನಿಮ್ಮ ತಿಳುಪುವದೆ ? ಆತ್ಮಾಂತರಾಣಿ ಪಶವಃ ಪರತಂತ್ರಭಾವಾತ್ಸತಸ್ವತಂತ್ರಃ ಪಶುಪತೇ ಪಸುಧೇಶ್ವರಸ್ವಂ | ಆತ್ಮಾನಮಾಷನಿಷದಾ ಪ್ರವದಂತ್ಯನೀಶ ಈಶಂ ಭವಂತ ಮುಖಯೋರುಭಯಂ ಸ್ವಭಾವಃ || ಇಂತೆಂದುದಾಗಿ, ಆತ್ಮಂಗೆ ಪಶುತ್ವವೆ ಸ್ವಭಾವ, ಶಿವಂಗೆ ಪತಿತ್ವವೆ ಸ್ವಭಾವ, ಇದು ಶ್ರುತ. ಇನ್ನು ದೃಷ್ಟವೆಂತೆನಲು, `ಜೀವಶ್ಶಿವಶಿವೋ ಜೀವಸ್ಯ ಜೀವಃ', ಜೀವನೆ ಶಿವನು, ಶಿವನೆ ಜೀವನು. ಬರಿದೆ ಶಿವನೆಂದು ನುಡಿವರು, ಮೇಲಣ ಪದಾರ್ಥವ ನುಡಿಯರು. `ಪಾಶಬದ್ಧೋ ಪಶುಪ್ರೋಕ್ತಃ ಪಾಶಮುಕ್ತಃ ಪರಶ್ಶಿವಃ' ಎಂಬ ಪದಾರ್ಥವ ನುಡಿಯರು. ಪಾಶಬದ್ಧ ಜೀವನರಾಗಿ ಪಶುವೆನಿಸುವನು ಪಾಶಮುಕ್ತನು. ಶಿವನಾಗಿ ಆ ಪಶುವಿಂಗೆ ಪರನಾದ ಶಿವನು ಪತಿಯೆನಿಸುವನು. `ಬ್ರಹ್ಮದ ಸರ್ವದೇವಃ ವೇಷವಃ'ಯೆಂಬ ಶ್ರುತ್ಯಾರ್ಥವನು ಪ್ರಮಾಣಿಸಿ, ಪಶುವೆ ಪತಿಯೆಂದು ನುಡಿವರು ಅನಭಿಜ್ಞರು. || ಶ್ರುತಿ || `ರುದ್ರಃ ಪಶುನಾಮಧಿಪತಿರಿತಃ' ಪಶುಗಳಿಗೆ ಶಿವನೆ ಒಡೆತನವುಳ್ಳ ತನ್ನಾಧೀನವುಳ್ಳ ಮಾಯಾಪಾಶದಿಂ ಕಟ್ಟಲು ಬಿಡಲು, ಶಿವನೆ ಪತಿಯೆಂಬ ತಾತ್ಪರ್ಯಾರ್ಥವ ನುಡಿಯರು. ಇದು ದೃಷ್ಟಾಂತ, ಇನ್ನು ಅನುಮಾನವೆಂತೆನಲು ಕೇಳಿರೆ. ಮಾನುಷಂಗೆ ಪ್ರಸನ್ನಭಕ್ತಿ ಪ್ರಸಾದವ ಕೃಪೆ ಮಾಡಲು, ಮಾನುಷ್ಯಂಗೆ ಕಾಮಿತ ನಿಃಕಾಮಿತ ಭಕ್ತಿಯಿಂದ ಭೋಗಮೋಕ್ಷವನೀವನಾ ಶಿವನು. ನರನೊಳಗಾಗಿ ನರಪತಿಯ ಸೇವೆಯ ಮಾಡುವಲ್ಲಿ, ನಿರುಪಾಧಿಕಸೇವೆಯಿಂದ ಅತಿಶಯ ಪದವನೀವನು. ಉಪಾಧಿಕಸೇವೆಯಿಂದ ಸಾಧಾರಣಪದವನೀವನು. ಇದೀಗ ಅನುಮಾನ ಕಂಡಿರೆ. ಇಂತೀ ಅಷ್ಟತನುಗಳೊಳಗಾದ ಸಮಸ್ತರು ಪಶುಗಳು. ಇವಕ್ಕೆ ಪತಿ ಶಿವನೆಂಬುದಕ್ಕೆ ಕೇಳಿರೆ. ಪೃಥಿವ್ಯಾಭವ ಅಪಾಂ ಶರ್ವ ಆಜ್ಞೇ ರುದ್ರಃ ವಾಯೋರ್ಭೀಮಃ | ಆಕಾಶ್ಶಾತ್ಯ ಮಹಾದೇವ ಸೂರ್ಯಸ್ಯೋಗ್ರಃ ಚಂದ್ರಸ್ಯ ಸೋಮಃ | ಆತ್ಮನಃ ಪಶುಪತಿರಿತಃ | ಎಂದೆನಲು, ಅಷ್ಟತನುಗಳು ಪಶುಗಳು, ಪತಿ ಶಿವನು ಕೇಳಿರೆ. ಇಂತೀ ಅಷ್ಟತನುಗಳು ಶಿವನಾಜ್ಞೆಯ ಮೀರಲರಿಯವೆಂಬುದಕ್ಕೆ ದೃಷ್ಟಾವಾರುಣಿಚೋಪನಿಷತ್ಸುಭೀಸ್ಮಾದ್ವಾತಃ ಪವತೇಶ್ಚಾಗ್ನಿಶ್ಚಭಿಷೋದೇತಿ ಸೂರ್ಯಃ ಭೀಷಾಂದ್ರರ ಮೃತ್ಯುರ್ಧಾವತಿ ಪಂಚಮಃ | ಇಂತಾಗಿ, ಆಕಾಶಃ ಪರಪರಮೇಶಸ್ಯ ಶಾಸನಾದೇವ ಸರ್ವದಾ ಪ್ರಾಣಾಪಾನಾದಿಭಿಶ್ಚಯ ಭೇದ್ಯದಂತಯಿರ್ಲಹಿರ್ಜಗತ್ ಭಿಬರ್ತಿ ಸರ್ವರೀ ಸರ್ವರೀ ಸರ್ವಸ್ಯ ಶಾಸನೇವ ಪ್ರಭಾಜನಾ || ಎಂದುದಾಗಿ, ಹವ್ಯಂ ವಹತಿ ದೇವಾನಾಂ ತವ್ಯಂ ತವ್ಯಾಶ ತಾಮಪಿ | ಪಾಕಾದ್ಯಂ ಚ ಕರೋತ್ಯಗ್ನಿಃ ಪರಮೇಶ್ವರ ಶಾಸನಾತ್ || ಸಂಜೀವನಾದ್ಯಂ ಸರ್ವಸ್ಯ ಕುರ್ವಂತ್ಯಾಪಸ್ತದಾಜ್ಞಯಾ | ವಿಶ್ವಂ ವಿಶ್ವಂಭರಾನ್ನಿತಂ ದತ್ತೇ ವಿಶ್ವೇಶ್ವರಾಜ್ಞಯಾ | ತ್ರಿಭಿಕಿ ತ್ರೈಜಗಭಿಬ್ರತೇಜೋಬಿರ್ವಿಷಮಾದದೇ | ವಿವಿಸ್ಸರ್ವಸ್ಯ ಸಭಾನು ದೇವದೇವಸ್ಯ ಶಾಸನಾತ್ | ಪುಷ್ಯತ್ಯೇಷದಿಜತಾನಿ ಭೂತಾ ನಿಹ್ಲಾದಯಂತ್ಯಪಿ | ದೇವೈಶ್ಯಪಿಯತೇ ಚಂದ್ರಶ್ಚಂದ್ರ ಭೂಷಣಂ ಶಾಸನಾತ್ | ತೇಸ್ಯಾಜ್ಞಾಂ ವಿನಾ ತೃಣಾಗ್ರಮಪಿ ನಚಲತಿ || ಇಂತೆಂದುದಾಗಿ, ಇದು ಕಾರಣ, ಆತ್ಮಸ್ವರ ಬಸವಪ್ರಿಯ ಕೂಡಲಚೆನ್ನಸಂಗಯ್ಯನೆಂದರಿಯರೆಲ್ಲರು. ಪಶುಗಳು ಪಾಶಬದ್ಧರೆಂದು ಎತ್ತಿ ತರ್ಜನಿಯವ ಉತ್ತರ ಕೊಡುವರುಳ್ಳರೆ ನುಡಿ ಭೋ.
--------------
ಸಂಗಮೇಶ್ವರದ ಅಪ್ಪಣ್ಣ
ಗುರು ಕರುಣಿಸಿಕೊಟ್ಟ ಮಂತ್ರವೆ ಸಕಲಬಯಕೆಯನುಂಟುಮಾಡುವುದಲ್ಲದೆ, ತನ್ನ ತಾ ನೆನೆದ ಮಂತ್ರವು ಸಿದ್ಧಿಯನುಂಟುಮಾಡದು ನೋಡಾ ! ಗುರುಕೊಟ್ಟ ಲಿಂಗವೆ ಮುಕ್ತಿಯನೀವುದಲ್ಲದೆ, ತನ್ನ ತಾನೆ ಕಟ್ಟಿಕೊಂಡ ಲಿಂಗವು ಮುಕ್ತಿಯನೀಯದು ನೋಡಾ ! ಇದು ಕಾರಣ, ಗುರೂಪದೇಶವ ಪಡೆಯಲರಿಯದೆ ಬರಿದೆ ಭಕ್ತರೆನಿಸಿಕೊಂಬ ಶೈವಮತದ ಭವಿಗಳಿಗೆ ಭವಜಾಲದಲ್ಲಿ ಬಪ್ಪುದು ತಪ್ಪದು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ವ್ರತವ ಮಾಡಿಕೊಂಡೆವೆಂದು ಗನ್ನಘಾತಕತನದಲ್ಲಿ ನಡೆವಧಿಕರ ನೋಡಾ. ತನುವಿಂಗೆ ವ್ರತವೋ, ಮನಕ್ಕೆ ವ್ರತವೋ ? ಮಡಕೆಗೆ ವ್ರತವೆಂದು ಸಡಗರಿಸುತ್ತಿರ್ಪ ಗತಿಹೀನರ ಕಂಡು ನಾಚಿತ್ತೆನ್ನ ಮನ. ದಿಟದ ವ್ರತವ ಹೇಳಿಹೆ ಕೇಳಿರಣ್ಣಾ. ಹುಸಿ ಕಳವು ಪಾರದ್ವಾರ ಕೊಲೆ ಅತಿಚಾಂಡಾಲಮಂ ಬಿಟ್ಟು, ಪರದ್ರವ್ಯಕ್ಕೆ ಕೈಯಾನದೆ, ಪರರ ಬಾಗಿಲಲ್ಲಿ ನಿಂದು, ನೆರೆ ಹೊಲಬುಗೆಟ್ಟು, ಅರಿವುಳ್ಳವರು ನಾವೆಂದು ಬರಿದೆ ಹಲಬುತ್ತಿರ್ಪರ ಮಾತಿಗೆ ಒಡಲಪ್ಪುದೆ ಶೀಲ್ಞೂ? ತನ್ನ ಸುಬುದ್ಧಿಯಿಂದ, ಸುಕಾಯಕದಿಂದ, ಗುರುಲಿಂಗಜಂಗಮಕ್ಕೆ ತನುಮನಧನವಂ ಸವೆಸಿ, ಚಿತ್ತಶುದ್ಧನಾಗಿ ಅಚ್ಚೊತ್ತಿದಂತಿದ್ದುದೆ ಶೀಲವ್ರತ. ಹಾಂಗಲ್ಲದೆ ಜಾತಿಗಾರನ ಕೈಯ ದೀಹದಂತೆ, ಬಾಲೆಯರ ಮನದ ಸೋಲುವೆಯಂತೆ, ಇಂತಿವರಾಳವಾಡಿ ಸಿಕ್ಕಿಸುವ, ಸೋಲುಗಾರರಿಗೆಲ್ಲಿಯದೊ ಸತ್ಯ, ನಿಃಕಳಂಕ ಮಲ್ಲಿಕಾರ್ಜುನಾ ?
--------------
ಮೋಳಿಗೆ ಮಾರಯ್ಯ
ಎನ್ನ ಸದ್ಗುರು ತನ್ನ ಕರಕ್ಕೆ ಮಹತ್ತಪ್ಪ ಲಿಂಗದೊಳಗೆ ಆ ಮಹಾಘನ ಗುರುವಪ್ಪ ಪರಶಿವ ಮೂರ್ತಿಗೊಂಡನು. ಆ ಮೂರ್ತಿಯ ನಿಶ್ಚೈಸಲೆಂದು ಪ್ರಸನ್ನಿಸಿದವು. ಶ್ರೀವಿಭೂತಿ ರುದ್ರಾಕ್ಷಿಗಳೆಂಬ ಜ್ಯೋತಿ ಲಿಪಿಯ ಮುದ್ರೆಗಳು. ಇಂತಪ್ಪ ದಿವ್ಯಸಾಧನವಿಡಿದು, ಆತನ ಕರಸ್ಥಲದೊಳೊಪ್ಪುತಿಪ್ಪ ದಿವ್ಯವಸ್ತುವ ಕಾಣಲೊಲ್ಲದೆ, ಅಜ್ಞಾನವಶದಿಂದ ಕೈವಶವಾದ ವಸ್ತುವ ಬಿಟ್ಟು, ಅತ್ತ ಬೇರೆ ವಸ್ತುವುಂಟೆಂದು ಬಯಲನಾಹ್ವಾನಿಸಿ, ಅಲ್ಲಿ ವಸ್ತುವಿನ ನಿಶ್ಚಯವ ಕಾಣದೆ, ಭವ ಭವದ ಲೆಂಕರಾಗಿ ಬರಿದೆ ಬಳಲುತ್ತಿಪ್ಪ ಈ ತಾಮಸಜೀವಿಗಳಿಗೆ ಲಿಂಗದ ಹಂಗಿನ್ನೇತಕಯ್ಯಾ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ.
--------------
ಸಂಗಮೇಶ್ವರದ ಅಪ್ಪಣ್ಣ
ಅಯ್ಯ ! ನಿರಾಳ ನಿಃಶೂನ್ಯ ಪರಮ ಭಕ್ತ_ಜಂಗಮ ತಾನಾಗಲರಿಯದೆ ಬರಿದೆ ಅಹಂಕರಿಸಿ ಮುಂದುಗೊಂಡು ಮೂರು ಮಲಗಳ ಸ್ವೀಕರಿಸಿ, ನಾವೆ ಭಕ್ತ_ಜಂಗಮವೆಂದು ನುಡಿವ ಕರ್ಮಕಾಂಡಿಗಳು ಕಾಶಿ, ಕೇತಾರ, ಶ್ರೀಶೈಲ, ಗಯಾ, ಪ್ರಯಾಗ, ಶಿವಗಂಗೆ, ಕಂಚಿ, ಕಾಳಹಸ್ತಿ, ಪಂಪಾಕ್ಷೇತ್ರ, ವೀರಣ್ಣ, ಬಸವಣ್ಣ, ಕಲ್ಲಣ್ಣ, ಮಲ್ಲಣ್ಣ, ಕಂಥೆ, ಕಮಂಡಲ, ಗದ್ದಿಗೆ, ಪಾವುಗೆ, ಭಸ್ಮ, ಘಂಟಿಕೆ, ಪುರಾಣ, ದಂಡಾಗ್ರ, ಗಿಳಿಲು, ಶಂಖು, ತಿಥಿ, ವಾರ, ನಕ್ಷತ್ರ, ಹುಣ್ಣಿವೆ, ಅಮಾವಾಸ್ಯೆ, ಸೂರ್ಯ, ಚಂದ್ರಾಗ್ನಿ, ದೀಪಾರತಿ ಗಂಗೆ, ಗೌರಿ, ವಿಘ್ನೇಶ್ವರ ಮೊದಲಾದವು ಇವು ದೈವಂಗಳೆಂದು ಕಲ್ಲು, ಮಣ್ಣು, ಮರದಿಂದ ರಚಿಸಿ, ಸಂದಿ-ಗೊಂದಿ_ಮಾಡು- ಜಗುಲಿಯ ಮಾಡಿಟ್ಟು, ಅದರ ತೊಳೆದ ನೀರು, ಎಂಜಲವ ತಿಂಬವರ ದೇವ_ಭಕ್ತರೆನಬಹುದೆ ? ಇಂತಪ್ಪ ಅನಾಚಾರಿ ಶ್ವಪಚರ, ಭಕ್ತ_ಜಂಗಮ_ದೇವರೆಂದು ಪೂಜಿಸಲಾಗದು. ನಿರಾಭಾರಿ ವೀರಶೈವಾಚಾರ ಕ್ರಿಯಾಜ್ಞಾನ ವೈರಾಗ್ಯ ಸದ್ಭಕ್ತಿಯುಳ್ಳ ಸದ್ಭಕ್ತ ಶಿವಶರಣನ ಪೂಜಿಸಿ ಪಾದೋದಕ_ಪ್ರಸಾದವ ಕೊಂಡಡೆ ಭವಪಾಶಕರ್ಮಂಗಳು ಮಾಣ್ಬವು ಕಾಣಾ ಗುಹೇಶ್ವರಲಿಂಗದಲ್ಲಿ ಚೆನ್ನಬಸವಣ್ಣ.
--------------
ಅಲ್ಲಮಪ್ರಭುದೇವರು
ಭಕ್ತಿಯ ಸ್ಥಳಕುಳವನರಿಯದೆ ಬರಿದೆ ಭಕ್ತರೆನಿಸಿಕೊಂಬ ಮುಕ್ತಿಗೇಡಿಗಳನೇನೆಂಬೆನಯ್ಯ. ಅನಾದಿಪರಶಿವನು ತನ್ನ ಲೀಲೆಯಿಂದೆ ತಾನೆ ಗುರುಲಿಂಗಜಂಗಮವಾಗಿ ಬಂದನೆಂದರಿದು ತನುಮನಧನವ ಸಮರ್ಪಿಸಿ ಘನಮುಕ್ತಿಯ ಪಡೆಯಲರಿಯದೆ, ಆಣವಮಲ ಮಾಯಾಮಲ ಕಾರ್ಮಿಕಮಲವೆಂಬ ಮಲತ್ರಯಂಗಳನೆ ಭುಂಜಿಸಿ, ಸಂಸಾರವಿಷಯರಸವೆಂಬ ನೀರನೆ ಕುಡಿದು, ಮಾಯಾಮೋಹವೆಂಬ ಮದವು ತಲೆಗೇರಿ ಸೊಕ್ಕಿದೆಕ್ಕಲನಂತೆ ತಿರುಗುವ ನರಕಜೀವಿಗಳ ಭಕ್ತರೆನಬಹುದೇ ಅಖಂಡೇಶ್ವರಾ ?
--------------
ಷಣ್ಮುಖಸ್ವಾಮಿ
ಅರಿಯಲಿಲ್ಲದ ಮರೆಯಲಿಲ್ಲದ ಕೂಡಲಿಲ್ಲದ ಶರಣನ ನಡತೆ ಹಿಡಿತೆ ಬಿಡಿತೆಗಳನರಿಯದೆ, ಅರಿದು ಮರೆದು ನೆರೆದ ಅಂಧಕರು ತಾವೊಂದು ಮರೆಯಲ್ಲಿ ಬಲ್ಲಂತೆ ಆಡುವರಯ್ಯಾ. ಅದು ಸಹಜವೇ? ಅಲ್ಲ. ಸೂರ್ಯ ಮೇಘದಲ್ಲಿ ಸಿಕ್ಕಿದನೆಂದಡೆ ನಿಜವೆನ್ನಲುಂಟೆ? ಬರಿದೆ ಕೇಡ ನುಡಿದರೆ ಸುರಿಯವೇ ಬಾಯಲ್ಲಿ ದುಷ್ಕ್ರಿಮಿಗಳು. ಈ ದುರಾಚಾರಿಗಳನೆನಗೊಮ್ಮೆ ತೋರದಿರಾ ಗುರುನಿರಂಜನ ಚನ್ನಬಸವಲಿಂಗ.
--------------
ದೇಶಿಕೇಂದ್ರ ಸಂಗನಬಸವಯ್ಯ
ಗುರುಹರ ವಚನ ಪ್ರಮಾಣದಿಂದೆ ಹಿಡಿದ ವ್ರತಶೀಲನೇಮಂಗಳ ಕಡೆತನಕ ಬಿಡದಿರಬೇಕು. ಜಾತಿ ವರ್ಣ ಆಶ್ರಮ ಕುಲ ಗೋತ್ರಂಗಳೆಂಬ ತನ್ನ ಪೂರ್ವಾಶ್ರಮ ಪದ್ಧತಿಯ ಮರೆಯಬೇಕು. ಇಂದಿಗೆ ಬೇಕು ನಾಳಿಗೆ ಬೇಕೆಂಬ ಆಸೆಯಾಮಿಷವ ಜರೆಯಬೇಕು. ಆಣವಮಲ ಮಾಯಾಮಲ ಕಾರ್ಮಿಕಮಲವೆಂಬ ಮಲತ್ರಯಂಗಳ ಬಲೆಯ ಹರಿಯಬೇಕು. ಅರುಹು ಆಚಾರ ಸತ್‍ಕ್ರಿಯಾಸಂಪನ್ನನಾಗಿರಬೇಕು. ಇಂತೀ ವರ್ಮವನರಿಯದೆ ಬರಿದೆ ದೇವಭಕ್ತರೆನಿಸಿಕೊಂಬ ಭವಪಾತಕರ ಎನಗೊಮ್ಮೆ ತೋರದಿರಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
-->