ಅಥವಾ

ಒಟ್ಟು 258 ಕಡೆಗಳಲ್ಲಿ , 56 ವಚನಕಾರರು , 182 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂಬರದಲಾಡುವ ಪಕ್ಷಿ ಕೊಂಬಿನ ಮೇಲಣ ಕೋಡಗವ ನುಂಗಿ ತುಂಬಿಯ ಒಡಲೊಳಡಗಿತ್ತು. ತುಂಬಿ ಅಂಬರದಲಡಗಿ, ಅಂಬರ ತುಂಬಿಯಲಡಗಿ ಎರಡು ಒಂದಾಗಿ ತುಂಬಿಯಂಬರವಿಲ್ಲದೆ ಹೋಯಿತ್ತು. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮಲ್ಲಿ.
--------------
ಸ್ವತಂತ್ರ ಸಿದ್ಧಲಿಂಗ
ಭಿತ್ತಿ ಮೂರರ ಮೇಲೆ ಚಿತ್ರ ಬರೆಯಿತ್ತು; ಪ್ರಥಮ ಭಿತ್ತಿಯ ಚಿತ್ರ ಚಿತ್ರದಂತೆ ಇದ್ದಿತ್ತು; ಎರಡನೆಯ ಭಿತ್ತಿಯ ಚಿತ್ರ ಹೋಗುತ್ತ ಬರುತ್ತ ಇದ್ದಿತ್ತು, ಮೂರನೆಯ ಭಿತ್ತಿಯ ಚಿತ್ರ ಹೋಯಿತ್ತು ಮರಳಿ ಬಾರದು. ಗುಹೇಶ್ವರಾ_ನಿಮ್ಮ ಶರಣ ತ್ರಿವಿಧದಿಂದತ್ತತ್ತಲೆ !
--------------
ಅಲ್ಲಮಪ್ರಭುದೇವರು
ಹಾಳಾಹಳವೆಂಬ ಮಾಳಿಗೆಯ ಹೊಕ್ಕು, ಕೋಳಾಹಳ ತಾ ಕಾದಿ, ಇಡಾ ಪಿಂಗಳ ಸುಷುಮ್ನ ನಾಡಿಗಳೆಂಬ ಅಂಬುಗಂಡಿಯ ಮುಚ್ಚಿ, ಅಷ್ಟಮದವೆಂಬ ಕೋಟೆಯನೊಡೆದು, ಪಂಚೇಂದ್ರಿಯವೆಂಬ ಹೂಡೆಯವಂ ಕಿತ್ತು, ಸಕಳೇಂದ್ರಿಯವೆಂಬ ನಿಗಳಂ ಮುರಿದು, ಅಹಂಕಾರವೆಂಬ ಅಗಳಂ ಹೂಣಿ, ಉಂಟಿಲ್ಲವೆಂಬ ಚಾರುಗದಪಂ ಕಿತ್ತು, ಸತ್ವರಜವೆಂಬ ನಿಲವಂ ಕಡಿದು, ತಮವೆಂಬ ಅಗುಳಿಯಂ ಮುರಿದು, ಆಧಾರ ಸ್ವಾಧಿಷಾ*ನ ಮಣಿಪೂರಕ ಅನಾಹತ ವಿಶುದ್ಧಿ ಆಜ್ಞೇಯೆಂಬ ನೆಲಗಟ್ಟಂ ಮೆಟ್ಟಿ, ಸ್ಥೂಲಸೂಕ್ಷ್ಮ ಕಾರಣವೆಂಬ ಮೇಲುಜಂತಿಯಂ ಕಿತ್ತು, ಪ್ರಪಂಚೆಂಬ ಮೇಲು ಮಣ್ಣಂ ತೆಗೆದುಹಾಕಿ, ಹೋಯಿತ್ತು ಮಾಳಿಗೆ, ನಾಮ ನಷ್ಟವಾಗಿ. ಮಾಳಿಗೆಯನಾಳಿದವ ಬಾಳದೆ ಹೋದ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಹೊರಗನೆ ಕೊಯ್ದು ಹೊರಗನೆ ಪೂಜಿಸಿ ಹೊರಗಾಗಿ ಹೋಯಿತ್ತು ತ್ರೈಜಗವೆಲ್ಲ. ಆನದನರಿಯದಂತೆ ಲಿಂಗವ ಪೂಜಿಸ ಹೋದಡೆ, ಕೈ ಲಿಂಗದಲ್ಲಿ ಸಿಲುಕಿತ್ತಲ್ಲಾ ! ಮನ ದೃಢದಿಂದ ನಿಮ್ಮ ನೆನೆದಿಹೆನೆಂದಡೆ ತನು ಸಂದಣಿಸಿತ್ತು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ನೇಮಸ್ತನರಿವು ಪ್ರಪಂಚಿನಲ್ಲಿ ಹೋಯಿತ್ತು. ಭಕ್ತನ ಅರಿವು ಸಮಾಧಾನದಲ್ಲಿ ಹೋಯಿತ್ತು. ಜಂಗಮದ ಅರಿವು ಬೇಡಿದಲ್ಲಿ ಹೋಯಿತ್ತು. ಇಂತು_ಕ್ರಿಯಾಗಮದೊಳಗೆ ಅವಂಗವೂ ಇಲ್ಲ. ಗುಹೇಶ್ವರಾ ನಿಮ್ಮ ಶರಣರಪೂರ್ವ.
--------------
ಅಲ್ಲಮಪ್ರಭುದೇವರು
ಶಬ್ದಶಾಸ್ತ್ರ ತರ್ಕಾಗಮಂಗಳ ಹೇಳಿ ಕೇಳಿ, ಕಲಿತುಲಿದವರೆಲ್ಲಾ ವಿದ್ಯಾಗೂಡಾದರಲ್ಲದೆ, ಲಿಂಗಗೂಡಾದುದಿಲ್ಲ ನೋಡಯ್ಯಾ. ಕಲಿಕಲಿತು ಉಲಿವ ಅಭ್ಯಾಸದ ಮಾತಿಂಗೆ ಮರುಳಪ್ಪರೆ ನಮ್ಮ ಶಿವಶರಣರು. ಆದಿ ಅನಾದಿಗಭೇದ್ಯವಾದ ನಿಜವ ಭೇದಿಸಲರಿತು ಮನ ಘನದಲ್ಲಿ ನಿವಾಸಿಯಾಗಬೇಕು. ಮನ ಘನದಲ್ಲಿ ನಿವಾಸಿಯಾಗದೆ ಸೌರಾಷ್ಟ್ರ ಸೋಮೇಶ್ವರಲಿಂಗವ ಬಲ್ಲೆನೆಂದು ನುಡಿವ ಬರಿ ಮಾತಿನ ಬಾಯ ಬಣ್ಣದ ಸೊಲ್ಲು, ಸಲ್ಲದೆ ಹೋಯಿತ್ತು.
--------------
ಆದಯ್ಯ
ನಾಳದ ಮರೆಯ ನಾಚಿಕೆ, ನೂಲಮರೆಯಲ್ಲಿ ಅಡಗಿತ್ತೆಂದು ಅಂಜುವರು, ಅಳುಕುವರು. ಮನ ಮೆಚ್ಚಿದಭಿಮಾನಕ್ಕೆ ಆವುದು ಮರೆ ಹೇಳಾ ? ಕಾಯ ಮಣ್ಣೆಂದು ಕಳೆದ ಬಳಿಕ, ದೇಹದಭಿಮಾನ ಅಲ್ಲಿಯೇ ಹೋಯಿತ್ತು. ಪ್ರಾಣ ಬಯಲೆಂದು ಕಳೆದ ಬಳಿಕ, ಮನದ ಲಜ್ಜೆಯಲ್ಲಿಯೆ ಹೋಯಿತ್ತು. ಚೆನ್ನಮಲ್ಲಿಕಾರ್ಜುನನ ಕೂಡಿ ಲಜ್ಜೆಗೆಟ್ಟವಳ ಉಡಿಗೆಯ ಸೆಳೆದುಕೊಂಡಡೆ, ಮುಚ್ಚಿದ ಸೀರೆ ಹೋದರೆ ಅಂಜುವರೆ ಮರುಳೆ ?
--------------
ಅಕ್ಕಮಹಾದೇವಿ
ಸತಿಭಾವದಿಂದ ಭಕ್ತಿಯ ಮಾಡುವೆನೆಂದು ಬರೆಬರೆದಲ್ಲಿ ಹಿತ ತಪ್ಪಿ ಹೋಯಿತ್ತು ನೋಡಾ. ವ್ರತಗೆಟ್ಟು ನಿಂದ ನಿಲವು ಮರವೆಯ ಮನೆಯೊಳಗೆ ಪರಿಪರಿ ಭೋಗ ಭುಕ್ತತ್ವವನೈದಿ, ತಾನಾರೆಂಬುವದನರಿಯದೆ ಸಮ್ಮುಖಸ್ನೇಹ ಮರೆದು ತಾಯಿ ತಂದೆಯ ಸುಖದೊಳಗಾಗದೆ ಮಾಯಾನಿಲವ ಧರಿಸಿದ ಮರುಳ ಕಂಡು ಮರೆದಿರ್ದನು ನಮ್ಮ ಶಾಂತ ಐದುವರ್ಣಸಂಜ್ಞೆದೇವನು.
--------------
ದೇಶಿಕೇಂದ್ರ ಸಂಗನಬಸವಯ್ಯ
ತ್ರಿಭುವನದಗ್ರದಲ್ಲಿ ಮೂವತ್ತಾರು ಲೋಕ. ಅದರ ಮಧ್ಯದಲ್ಲಿ ಇಪ್ಪತ್ತೈದು ಮಹಾಮೇರುವೆ. ಹದಿನಾರು ವರ್ತನದ ಕೊಂಡಿಗರು. ಲಘುವೆಂಬ ತಾರುಗದ, ಅದಕ್ಕೆ ಅಗುಳಿ ದಿವಾರಾತ್ರಿಯೆಂಬವೆರಡು. ಅಗುಳಿಯ ಸನ್ನರ್ಧವಾಗಿ ಬಲಿದವನ ನೋಡಾ. ಅವನ ನಖದ ಕೊನೆಯಲ್ಲಿ ಲಕ್ಷ ಅಲಕ್ಷವೆಂಬ ಭೇದ. ಆ ಭೇದವೆಂಬ, ಜರನಿರ್ಜರವೆಂಬ, ಅಹುದಲ್ಲವೆಂಬ, ಆಗುಚೇಗೆಯೆಂಬ, ಶಂಕೆ ಸಂತೋಷವೆಂಬ, ಕಾಂಕ್ಷೆ ನಿಃಕಾಂಕ್ಷೆಯೆಂಬ, ಜೀವ ಪರಮವೆಂಬ ಇಂತೀ ದ್ವಂದ್ವಂಗಳೆಲ್ಲ ದ್ವಾರಸಂಚಾರಕ್ಕವಧಿಯಾದವು. ಇದಕ್ಕಿಂದ ಮುನ್ನವೆ ಭುವನ ಕೆಟ್ಟಿತ್ತು. ಕೋಟೆ ಕೋಳು ಹೋಯಿತ್ತು, ಹಿರಿಯರಸು ಸಿಕ್ಕಿದ, ಪ್ರಧಾನನ ತಲೆ ಹೋಯಿತ್ತು, ತಳವಾರನ ಕಣ್ಣು ಕಳೆಯಿತ್ತು. ಎಕ್ಕಟಿಗನ ಮಕ್ಕಳೆಲ್ಲರೂ ನಷ್ಟಸಂತಾನವಾದರು. ಸೃಷ್ಟಿಯೊಳಗೆಲ್ಲ ರಣಮಯವಾಯಿತ್ತು. ರಣಮಧ್ಯದಲ್ಲೊಂದು ವೃಕ್ಷವ ಕಂಡೆ, ಸತ್ತವನಿರ್ದ, ಇರ್ದವಸತ್ತ. ಇವರಿಬ್ಬರ ಮಧ್ಯದಲ್ಲೊಂದು ವೃಕ್ಷವ ಕಂಡೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಎನಗಾದ ಮಹಾಪದವನರಿಯದೆ ನಾನು ಬಳಲಿದೆನಯ್ಯಾ, ಎನ್ನ ಪದವ ಈಗ ಅರಿದೆನು, ಬಳಲಿಕೆ ಹೋಯಿತ್ತು ಪರಿಣಾಮವಾಯಿತ್ತು. ಶಿವ ಶಿವಾ, ಶಿವನೆ ಕರ್ತನು, ನಾನು ಭೃತ್ಯನು ಮಿಕ್ಕುವೆಲ್ಲಾ ಮಿಥ್ಯವೆಂದರಿದು ಈ ಮಹಾಜ್ಞಾನಪದಕ್ಕೆ ಈ ಘನತರಸುಖಕ್ಕೆ ಈ ಮಹಾಪರಿಣಾಮಕ್ಕೆ ಇನ್ನಾವುದೂ ಸರಿಯಲ್ಲ. ಉಪಮಾತೀತ ವಾಙ್ಮನೋತೀತ ನೀನೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಕಂಗಳಸೂತಕ ಹೋಯಿತ್ತು, ನಿಮ್ಮಂಗದ ದರ್ಶನದಿಂದ. ಮನದ ಸೂತಕ ಹೋಯಿತ್ತು, ನಿಮ್ಮ ನೆನಹು ವೇಧಿಸಿ. ಸಕಲಸೋಂಕಿನ ಭ್ರಾಂತು ಬಿಟ್ಟಿತ್ತು, ನಿಮ್ಮ ಹಿಂಗದ ಅರಿಕೆಯಲ್ಲಿ. ಇಂತೀ ನಾನಾವಿಧದ ಭೇದೋಪಭೇದಂಗಳೆಲ್ಲವು, ನಿಮ್ಮ ಕಾರುಣ್ಯದಲ್ಲಿಯೆ ಲಯ, ಸಗರದಬೊಮ್ಮನೊಡೆಯ ತನುಮನ ಸಂಗಮೇಶ್ವರಾ.
--------------
ಸಗರದ ಬೊಮ್ಮಣ್ಣ
ಸುಖದುಃಖದ ನಡುವೆ ಒಂದು ಅತಿರೇಕದ ಕೂಸು ಹುಟ್ಟಿ, ಹಾಲನೊಲ್ಲದೆ ಮೂರು ಕೂಳ ಬೇಡುತ್ತದೆ. ಕೂಳು ಕುದಿಯುವುದಕ್ಕೆ ಮೊದಲೆ ಗಂಜಿಯ ಕುಡಿದು ಕೂಸು ಹೇಳದೆ ಹೋಯಿತ್ತು, ಸದಾಶಿವಮೂರ್ತಿಲಿಂಗವನರಿದು.
--------------
ಅರಿವಿನ ಮಾರಿತಂದೆ
ನಾ ಮಾಡಿದ ಪೂಜಾಫಲ ಅಂತಿಂತಲ್ಲ. ಬಾಣ ಪೂಜಿಸಿದ ಫಲ ಬಾಗಿಲ ಕಾಯಲ್ಲಿ ಹೋಯಿತ್ತು. ಮಯೂರ ಪೂಜಿಸಿದ ಫಲ ವಿದ್ಯಾದಾನದಲ್ಲಿ ಹೋಯಿತ್ತು. ಹನುಮಂತ ಪೂಜಿಸಿದ ಫಲ ವಜ್ರ ದೇಹದಲ್ಲಿ ಹೋಯಿತ್ತು. ನಾ ಪೂಜಿಸಿದ ಫಲ ಕೊಟ್ಟು ಕೊಟ್ಟು ತೀರದೆ ನಿಂತ್ತು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಶಕ್ತಿ ಸಮೇತವಾಗಿ ಇಹನ್ನಕ್ಕ ಬಿಂದುವಿನ ಸತ್ವ ಕೂಟಸ್ಥಬಿಂದು ಜಾರಿದಲ್ಲಿ ನಿಂದಿತ್ತು ಸತ್ವ ಅರಿವು ಮುಖದಿಂದ ಕ್ರಿಯಾಶಕ್ತಿಯ ಕೂಟ ಆರಿವು ಜಾರಿದಲ್ಲಿ ಮರೆದು ಹೋಯಿತ್ತು ಕ್ರಿಯಾಭೇದ. ನಾನರಿವುದಕ್ಕೆ ಅರಿವ ತೋರು ನೋಡುವುದಕ್ಕೆ ಕುರುಹ ತೋರು ನಾನಡುಗುವುದಕ್ಕೆ ಗುಡಿಯ ತೋರು ಗೋಪತಿನಾಥ ವಿಶ್ವೇಶ್ವರಲಿಂಗಾ.
--------------
ತುರುಗಾಹಿ ರಾಮಣ್ಣ
ಹಿಂದೆ ಮುನ್ನೂರರವತ್ತು ಸಾವಿರ ಯುಗ ಹೋಯಿತ್ತು. ಮುಂದೆ ಮುನ್ನೂರರವತ್ತು ಸಾವಿರ ಯುಗ ಹೋಯಿತ್ತು. ಇನ್ನೂ ಕೊಯ್ದಾನೆ ಪುಷ್ಪಂಗಳನು. ಉನ್ನತನೆಂಬ ಗಣೇಶ್ವರನ ಕರಡಗೆ ತುಂಬದು ನೋಡಾ ! ಇನ್ನೂ ಕೊಯ್ದಾನೆ ಪುಷ್ಪಂಗಳನು_ಆ ಕುಲಗಿರಿಗೆ ಮೇರುಗಿರಿ ಘನವೆಂದರಿಯರು. ಗುಹೇಶ್ವರಾ, ನಿಮ್ಮ ಮಹಿಮೆಯ ಹರಿಬ್ರಹ್ಮಾದಿಗಳೂ ಅರಿಯರು.
--------------
ಅಲ್ಲಮಪ್ರಭುದೇವರು
ಇನ್ನಷ್ಟು ... -->