ಅಥವಾ

ಒಟ್ಟು 168 ಕಡೆಗಳಲ್ಲಿ , 48 ವಚನಕಾರರು , 152 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಕ್ಕಿ ಬೇಳೆ ಬೆಲ್ಲ ಉಪ್ಪು ಮೆಣಸು ಅಡಕೆ ಫಲ ರಸ ದ್ರವ್ಯ ಮುಂತಾದ ದ್ರವ್ಯಕ್ಕೆ ವ್ರತವೊ ? ಮುಟ್ಟುವ ತಟ್ಟುವ ಸೋಂಕುವ ಚಿತ್ತಕ್ಕೆ ವ್ರತವೊ ? ಇವು ಬಾಹ್ಯದಲ್ಲಿ ಮಾಡುವ ಸೌಕರಿಯವಲ್ಲದೆ ವ್ರತಕ್ಕೆ ಸಲ್ಲ. ವ್ರತವಾವುದೆಂದಡೆ ತನ್ನಯ ಸ್ವಪ್ನದಲ್ಲಿ ತನಗಲ್ಲದುದ ಕಂಡಡೆ, ತಾ ಮುಟ್ಟದುದ ಮುಟ್ಟಿದಡೆ, ತಾ ಕೊಳ್ಳದುದ ಕೊಂಡಡೆ, ಆ ಸೂಕ್ಷ್ಮತನುವಿನಲ್ಲಿ ಆ ತನುವಂ ಬಿಟ್ಟು ನಿಂದುದು ವ್ರತ. ಸ್ಥೂಲತನುವಿನಲ್ಲಿ ಸರ್ವರ ನಿಂದೆಗೊಡಲಾಗದೆ, ಮಾಡಿಕೊಂಡ ನೇಮಕ್ಕೆ ಕೇಡುಬಂದಲ್ಲಿ ಆ ಅಂಗಕ್ಕೆ ಓಸರಿಸದೆ ನಿಂದುದು ಆಚಾರ. ಇಂತೀ ಅಂತರಂಗದಲ್ಲಿ ವ್ರತ, ಬಹಿರಂಗದಲ್ಲಿ ಆಚಾರ, ಇಂತೀ ಉಭಯ ಸಿದ್ಭವಾಗಿ ನಡೆವುದೆ ವ್ರತ ಆಚಾರz ಇಂತಿವನರಿದು ಮರೆದಲ್ಲಿ, ತಾ ಮಾಡಿಕೊಂಡ ಕುತ್ತಕ್ಕೆ ಹಾಡಿ ಮದ್ದನರೆದಂತೆ, ಜಗಕ್ಕೆ ಭಕ್ತನಾಗಿ ಆತ್ಮಂಗೆ ಅನುಸರಣೆಯಾದಲ್ಲಿ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಸಲ್ಲದ ನೇಮ.
--------------
ಅಕ್ಕಮ್ಮ
ಸರ್ವಾಚಾರಸಂಪತ್ತನರಿದಲ್ಲದೆ ನಿರವಯಲಪದವ ಕಾಣಬಾರದು ನೋಡಾ ಆರಿಗೆಯು. ಸರ್ವಾಚಾರಸಂಪತ್ತು ಎಂತೆನಲು, ಷಡ್‍ಭೂತಂಗಳಲ್ಲಿ ಷಡ್ವಿಧ ಮಂತ್ರಂಗಳ ನೆಲೆಗೊಳಿಸಿ, ಆ ಷಡ್ವಿಧ ಮಂತ್ರಂಗಳನೆ ಷಡ್ವಿಧಚಕ್ರಂಗಳೆಂದು ತಿಳಿದು, ಆ ಷಡ್ವಿಧ ಚಕ್ರಂಗಳಿಗೆ ಷಡ್ವಿಧ ಅದ್ಥಿದೈವಂಗಳನೆ ಷಡ್ವಿಧ ಅಂಗವೆಂದಾಧಾರಗೊಳಿಸಿ, ಆ ಷಡ್ವಿಧ ಅಂಗಕ್ಕೆ ಷಡ್ವಿಧ ಕರಣಂಗಳನೆ ಷಡ್ವಿಧ ಹಸ್ತಂಗಳೆಂದು ಅರಿದಳವಡಿಸಿಕೊಂಡು, ಆ ಷಡ್ವಿಧ ಹಸ್ತಂಗಳಿಗೆ ಷಡ್ವಿಧ ಲಿಂಗಂಗಳನಳವಡಿಸಿಕೊಂಡು, ಆ ಷಡ್ವಿಧ ಲಿಂಗಕ್ಕೆ ಷಡ್ವಿಧೇಂದ್ರಿಯಂಗಳನೆ ಷಡ್ವಿಧ ಪದಾರ್ಥಂಗಳೆಂದರಿದು, ಆ ಷಡ್ವಿಧ ಪದಾರ್ಥಂಗಳನು ಷಡ್ವಿಧ ಭಕ್ತಿಯಿಂದೆ ಷಡ್ವಿಧ ಲಿಂಗಮುಖಂಗಳಿಗೆ ಸಮರ್ಪಿಸಲು, ಒಳಹೊರಗೆಲ್ಲ ಆ ಷಡ್ವಿಧ ಲಿಂಗದ ಬೆಳಗು ತುಂಬಿ ತೊಳಗಿ ಬೆಳಗುತಿರ್ಪುದು ನೋಡಾ. ಎಡೆದೆರಹಿಲ್ಲದೆ ಆ ಷಡ್ವಿಧ ಲಿಂಗದ ಬೆಳಗಿನೊಳಗೆ ತನ್ನ ಷಡ್ವಿಧಾಂಗದ ಕಳೆಗಳನೆಲ್ಲವನಡಗಿಸಿ, ತಾನೆಂಬ ಕುರುಹುದೋರದಿರ್ದಡೆ ಅದೇ ಸರ್ವಾಚಾರಸಂಪತ್ತು ನೋಡಾ. ಇಂತಪ್ಪ ಸರ್ವಾಚಾರಸಂಪತ್ತು ನಿಮ್ಮ ಪೂರ್ಣ ಒಲುಮೆಯ ಶರಣರಿಗಲ್ಲದೆ ಉಳಿದವರಿಗಳವಡದಯ್ಯಾ ಅಖಂಡೇಶ್ವರಾ ?
--------------
ಷಣ್ಮುಖಸ್ವಾಮಿ
ತ್ರೈಮೂರ್ತಿಗಳು ನಿನ್ನ ಸಾಕಾರದ ಶಾಖೆ. ತ್ರೈಮೂರ್ತಿಗಳು ನಿನ್ನ ಅಪ್ಪುವಿನ ಅಂಕುರ ಶಕ್ತಿ. ಇಂತೀ ಸರ್ವಗುಣ ಸಂಪನ್ನನಾಗಿ ಬ್ರಹ್ಮಂಗೆ ಅಂಡವ ಕೊಟ್ಟು ವಿಷ್ಣುವಿಗೆ ಪಿಂಡವ ಕೊಟ್ಟು ರುದ್ರಂಗೆ ಕಂಡೆಹವ ಕೊಟ್ಟು ಹಿಂಗಿದೆ. ನೀನಿದರಂದವನೊಲ್ಲದೆ ಅಂಗಕ್ಕೆ ಮಯ ನೀನೇ, ನಿರಂಗಕ್ಕೆ ಸಂಗ ನೀನೇ. ಹಿಂಗೂದಕ್ಕೆ ನಿನ್ನಂಗ ಅನ್ಯ ಬ್ಥಿನ್ನವಲ್ಲ. ಮುಕುರದ ಮರೆಯಲ್ಲಿ ತೋರುವ ಪ್ರತಿರೂಪಿನಂತೆ ಸಕಲದೇವರ ಚೈತನ್ಯಭಾವ ನಿನ್ನ ಉಷ್ಣ ಬಿಂದು, ಸಕಲದೇವರ ಶಾಂತಿ ನಿನ್ನ ಸಮಾನ ಬಿಂದು, ಇಂತಿವ ಹೇಳುವಡೆ ವಾಙ್ಮನಕ್ಕತೀತ ಅತ್ಯತಿಷ್ಠದ್ದಶಾಂಗುಲ ನಾರಾಯಣ ನಯನಪೂಜಿತ ಪ್ರಿಯ ರಾಮೇಶ್ವರಲಿಂಗ ನಾ ನೀನಾದೈಕ್ಯ.
--------------
ಗುಪ್ತ ಮಂಚಣ್ಣ
ಬರಿಹುಂಡನ ಗಡಿವಾಡದಲ್ಲಿರಿಸಿದಂತೆ, ಒಡೆಯರಿಲ್ಲದ ಮನೆಯ ತುಡುಗುಣಿ ಹೊಕ್ಕು, ಗಡಬಡಿಯ ಮಾಡಿದಂತೆ, ಅಂಗಕ್ಕೆ ಕುರುಹಿಲ್ಲದೆ, ಮನಕ್ಕರಿವಿಲ್ಲದೆ ತ್ರಿಭಂಗಿಯಲ್ಲಿ ನೊಂದವಂಗೆ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವಿಲ್ಲಾ ಎಂದೆ.
--------------
ಶಿವಲೆಂಕ ಮಂಚಣ್ಣ
ಕಾಯವ ಬಿಟ್ಟು ಪ್ರಾಣಹೋದ ಮತ್ತೆ, ಆ ಕಾಯಕ್ಕೆ ಆ ಪ್ರಾಣ ಪುನರಪಿಯಾಗಿ ಒಪ್ಪುದೆ ? ಅಂಗವ ಬಿಟ್ಟು ಲಿಂಗ ಬಿದ್ದ ಮತ್ತೆ, ಮತ್ತಾ ಅಂಗಕ್ಕೆ ಲಿಂಗವುಂಟೆ ? ಲಯವೆಂದಿದ್ದಡೂ ತಪ್ಪದು. ಪ್ರಾಯಶ್ಚಿತವೆಂದು ಪ್ರಕಾರವ ಮಾಡಿ, ಶ್ವಾನನ ಕಾಲಿನಲ್ಲಿ ಸೋಮಪಾನವನೆರೆದು, ಪಾಯಸ ಶುದ್ಧವಾಯಿತ್ತೆಂದು ಕೊಂಬವನಂತೆ, ಈ ಗುಣವ ಕಾಬುದಕ್ಕೆ ಮೊದಲೆ ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಧರೆ ಸಲಿಲ ಅನಲ ಅನಿಲ ಆಕಾಶ ಮುಂತಾದ ಭೇದಂಗಳ ಕಲ್ಪಿಸುವಲ್ಲಿ, ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವಮೂರ್ತಿಗಳು ಕುರುಹುಗೊಂಬಲ್ಲಿ, ನಾದಬಿಂದುಕಳೆ ಲಕ್ಷಿಸುವಲ್ಲಿ, ಆ ಪರಶಿವತತ್ವದ ಅಂಗ ಗುರುರೂಪಾಗಿ, ಆ ಪರತತ್ವದ ಅಂಗ ಲಿಂಗವಾಗಿ, ಆ ಪರತತ್ವದ ಅಂಗ ಜಂಗಮವಾಗಿ, ಆ ಜಂಗಮ ಲಿಂಗದಲ್ಲಿ ಲೀಯವಾಗಿ, ಆ ಲಿಂಗ ಗುರುವಿನಲ್ಲಿಲೀಯವಾಗಿ, ಆ ಗುರು ಉಭಯಸ್ಥಲವ ಗಬ್ರ್ಥೀಕರಿಸಿ, ಗುರುವೆಂಬ ಭಾವ ತನಗಿಲ್ಲದೆ ತರು ಫಲವ ಹೊತ್ತಂತೆ, ಫಲ ರಸವ ಇಂಬಿಟ್ಟುಕೊಂಡಂತೆ, ಅಂಗಕ್ಕೆ ಆತ್ಮತೇಜವರತು, ಭಾವಕ್ಕೆ ಬ್ಥೀಷ್ಮ ನಿಂದು, ಮನ ಮಹವನೊಡಗೂಡಿದಲ್ಲಿ, ಆತ ಸದ್ಗುರುಮೂರ್ತಿಯ ಕರದಲ್ಲಿ ಬಂದ ಲಿಂಗ, ಕರ್ಣದಲ್ಲಿ ಹೇಳಿದ ಮಂತ್ರ, ಕಪಾಲವ ಮುಟ್ಟಿದ ತಂತ್ರ. ಆದು ಸದ್ಗುರು ಕಾರುಣ್ಯ, ಆ ಶಿಷ್ಯಂಗೆ ಜೀವನ್ನುಕ್ತಿ. ಇದು ಆಚಾರ್ಯಮತ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಮಲವ ಕಳೆವಲ್ಲಿ, ಜಲವ ಬಿಡುವಲ್ಲಿ, ರುಜೆರೋಗಂಗಳು ಬಿಡುವಲ್ಲಿ, ಸಕಲಸುಖಭೋಗಂಗಳ ಹಿಡಿವಲ್ಲಿ, ಅಧಮ ವಿಶೇಷವೆಂಬ ಭಾವಂಗಳು ಅಂಗವ ಮುಟ್ಟುವಲ್ಲಿ, ಅಂಗಕ್ಕೆ ಕಟ್ಟು, ಆತ್ಮಂಗೆ ವ್ರತ, ಏಲೇಶ್ವರಲಿಂಗದ ಕೂಟ ತಪ್ಪದಿರಬೇಕು.
--------------
ಏಲೇಶ್ವರ ಕೇತಯ್ಯ
ಭಕ್ತನಲ್ಲಿಯ ಐಕ್ಯಂಗೆ ಪೃಥ್ವಿಯಲ್ಲಿಯ ಆತ್ಮನೆ ಅಂಗ, ಆ ಅಂಗಕ್ಕೆ ಸುಚಿತ್ತದಲ್ಲಿಯ ಭಾವವೇ ಹಸ್ತ. ಆ ಹಸ್ತಕ್ಕೆ ಆಚಾರಲಿಂಗದಲ್ಲಿಯ ಮಹಾಲಿಂಗವೇ ಲಿಂಗ. ಆ ಮಹಾಲಿಂಗಮುಖದಲ್ಲಿ ಎಲ್ಲಾ ಗಂಧದ್ರವ್ಯವನು ಸಮರ್ಪಣವಂ ಮಾಡಿ ತೃಪ್ತಿಯನೆ ಭೋಗಿಸುವನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಆ ಪ್ರಾಣಲಿಂಗಿಯಲ್ಲಿಯ ಶರಣಂಗೆ ವಾಯುವಿನಲ್ಲಿಯ ಆಕಾಶವೇ ಅಂಗ. ಆ ಅಂಗಕ್ಕೆ ಸುಮನದಲ್ಲಿಯ ಸುಜ್ಞಾನವೇ ಹಸ್ತ. ಆ ಹಸ್ತಕ್ಕೆ ಜಂಗಮಲಿಂಗದಲ್ಲಿಯ ಪ್ರಸಾದಲಿಂಗವೇ ಲಿಂಗ. ಆ ಪ್ರಸಾದಲಿಂಗದಮುಖದಲ್ಲಿ ಮಿಶ್ರವಾದ ಸ್ಪರ್ಶನದ್ರವ್ಯವನು ಸಮರ್ಪಣವಂ ಮಾಡಿ, ತೃಪ್ತಿಯನೆ ಭೋಗಿಸುವನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಗುರುಸ್ಥಲ ಮೂರಾಗಿ ನಡೆವ ಭೇದವನಾರೂ ಅರಿಯರಲ್ಲಾ. ಭವಿಗೆ ಲಿಂಗವ ಕೊಡುವಲ್ಲಿ, ಲಿಂಗವಂತಂಗೆ ಹರರೂಪ ಮಾಡುವಲ್ಲಿ, ಹರರೂಪಿಂಗೆ ಅರಿವ ಹೇಳುವಲ್ಲಿ, ತ್ರಿವಿಧ ಗುರುರೂಪಾಯಿತ್ತು. ಅಂಗಕ್ಕೆ ಲಿಂಗವ ಕೊಡುವಲ್ಲಿ, ಜಂಗಮಸ್ಥಲವ ಮಾಡುವಲ್ಲಿ, ಆತ್ಮಬೋಧನೆಯ ಹೇಳುವಲ್ಲಿ, ಲಿಂಗಕ್ಕೆ ಆಚಾರ, ಸಮಯಕ್ಕೆ ದರಿಸಿನ, ಆತ್ಮಕ್ಕೆ ಬೋಧೆ, ಇಂತಿವನಾಧರಿಸಿ ಮಾಡಬೇಕು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಭಕ್ತನಲ್ಲಿಯ ಪ್ರಸಾದಿಗೆ ಪೃಥ್ವಿಯಲ್ಲಿಯ ಅಗ್ನಿಯೇ ಅಂಗ. ಆ ಅಂಗಕ್ಕೆ ಸುಚಿತ್ತದಲ್ಲಿಯ ನಿರಹಂಕಾರವೇ ಹಸ್ತ, ಆ ಹಸ್ತಕ್ಕೆ ಆಚಾರಲಿಂಗದಲ್ಲಿಯ ಶಿವಲಿಂಗವೇ ಲಿಂಗ. ಆ ಶಿವಲಿಂಗಮುಖದಲ್ಲಿ ಚಿಗುರು ಮೊದಲಾದ ಪತ್ರೆಯ ಗಂಧದ್ರವ್ಯಮಂ ಸಮರ್ಪಣವ ಮಾಡಿ ತೃಪ್ತಿಯನೆ ಭೋಗಿಸುವನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಮಹದೈಶ್ವರ್ಯವು ಕೈಗೂಡುವಡೆ ಶ್ರೀ ವಿಭೂತಿಯಿಂದಲ್ಲದೆ ಇಲ್ಲ ನೋಡಾ. ಪರಮಪವಿತ್ರನೆನಿಸಬೇಕಾದಡೆ ಶ್ರೀ ವಿಭೂತಿಯಿಂದಲ್ಲದೆ ಇಲ್ಲ ನೋಡಾ. ಸರ್ವೈಶ್ವರ್ಯ ಸರ್ವಸಿದ್ಧಿ ದೊರೆಕೊಂಬುವಡೆ ಶ್ರೀ ವಿಭೂತಿಯಿಂದಲ್ಲದೆ ಇಲ್ಲ ನೋಡಾ. ಮಹಾಪುಣ್ಯದ ಫಲವು ಪ್ರಾಪ್ತಿಸುವಡೆ ಶ್ರೀ ವಿಭೂತಿಯಿಂದಲ್ಲದೆ ಇಲ್ಲ ನೋಡಾ. ದಿನದಿನಕ್ಕೆ ಪಾಪ ಪಲ್ಲಟವಪ್ಪಡೆ ಶ್ರೀ ವಿಭೂತಿಯಿಂದಲ್ಲದೆ ಇಲ್ಲ ನೋಡಾ. ಅಂಗಕ್ಕೆ ಶ್ರೀ ವಿಭೂತಿಯೇ ಶೃಂಗಾರ ನೋಡಾ. ಅದೆಂತೆಂದೊಡೆ : `` ಶ್ರೀಕರಂ ಚ ಪವಿತ್ರಂ ಚ ಹಾರಾದ್ಯಾಭರಣಂ ತಥಾ | ಲೋಕವಶ್ಯಕರಂ ಪುಣ್ಯಂ ಪಾಪನಾಶಂ ದಿನೇ ದಿನೇ ||'' ಎಂದುದಾಗಿ, ಇಂತಪ್ಪ ಶ್ರೀ ವಿಭೂತಿಯ ಅಂತರಂಗದಲ್ಲಿ ವಿಶ್ವಾಸ ತುಂಬಿ ಧರಿಸಿದ ಮನುಜರಿಗೆ ಅನಂತಕೋಟಿ ಪಾತಕಂಗಳು ಪರಿಹಾರವಾಗಿ ಮುಂದೆ ಶಿವಸಾಯುಜ್ಯಪದವು ದೊರೆಕೊಂಬುದು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಕಾಯ ಜೀವದ ನಡುವೆ ಒಂದ ಭಾವಿಸಿ, ಇಷ್ಟಲಿಂಗವೆಂದು ಕೊಡುವಾಗ, ಆ ಲಿಂಗ ಕಾಯಕ್ಕೋ, ಜೀವಕ್ಕೋ ? ಕಾಯಕ್ಕೆಂದಡೆ ಕಾಯದೊಳಗಾಗಿ ಪೂಜಿಸಿಕೊಂಬುದು. ಜೀವಕ್ಕೆಂದಡೆ ನಾನಾ ಭವಂಗಳಲ್ಲಿ ಬಪ್ಪುದು. ಆ ಲಿಂಗ ಉಭಯಕ್ಕೆಂದಡೆ ಇನ್ನಾವುದು ಹೇಳಾ ? ಅಂಗಕ್ಕೆ ಲಿಂಗವಾದಡೆ ಬಣ್ಣ ಬಂಗಾರದಂತೆ ಇರಬೇಕು. ಜೀವಕ್ಕೆ ಲಿಂಗವಾದಡೆ ಅನಲ ಅನಿಲನಂತೆ ಇರಬೇಕು. ಉತ್ಪತ್ಯಕ್ಕೂ ನಷ್ಟಕ್ಕೂ ಉಭಯದ ಒಡಲನರಿತಲ್ಲಿ, ಅದು ಅಂಗಲಿಂಗಸಂಬಂಧ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಆ ಐಕ್ಯನಲ್ಲಿಯ ಮಾಹೇಶ್ವರಂಗೆ ಆತ್ಮನಲ್ಲಿಯ ಅಪ್ಪುವೇ ಅಂಗ. ಆ ಅಂಗಕ್ಕೆ ಭಾವದಲ್ಲಿಯ ಸುಬುದ್ಧಿಯೇ ಹಸ್ತ. ಆ ಹಸ್ತಕ್ಕೆ ಮಹಾಲಿಂಗದಲ್ಲಿಯ ಗುರುಲಿಂಗವೇ ಲಿಂಗ. ಆ ಗುರುಲಿಂಗದಮುಖದಲ್ಲಿ ರಸತೃಪ್ತಿದ್ರವ್ಯವನು ಸಮರ್ಪಣವಂ ಮಾಡಿ, ತೃಪ್ತಿಯನೇ ಭೋಗಿಸುವನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಬೆಟ್ಟದ ಲಿಂಗವ ಹಿರಿದುಮಾಡಿ, ತನ್ನ ಇಷ್ಟಲಿಂಗವ ಕಿರಿದುಮಾಡುವ ಮೂಳಹೊಲೆಯರಿರಾ, ಅಣುರೇಣುತೃಣಕಾಷ್ಠ ಮೊದಲಾದ ಬ್ರಹ್ಮಾಂಡ ಪರಿಪೂರ್ಣವಾದ ಮಹಾಲಿಂಗವೆ ಅಂಗಕ್ಕೆ ಗುರುವು ಎಂದು ಸಂಬಂದ್ಥಿಸಿ ಸರ್ವಸಂ[ಕು]ಲವ ತೋರಿದ ಬಳಿಕ, ಇಂತಪ್ಪ ಮೋಕ್ಷಕ್ಕೆ ಕಾರಣವಾದ ಲಿಂಗವನು ಅಡಿಮಾಡಿ ನಟ್ಟ ಕಲ್ಲಿಂಗೆ ಅಡ್ಡಬೀಳುವ ಹೊಲೆಯರಿಗೆ ಲಿಂಗ ಕಟ್ಟುವುದು ಕಿರಿದು, ಗೊಡ್ಡೆಮ್ಮೆಗೆ ಲಿಂಗವದು ಕರ ಲೇಸು. ಇಂಥ ಮೂಳ ಹೊಲೆಯರು ಶಿವಭಕ್ತರೆಂದು ನುಡಿವ ಭ್ರಷ್ಟರನು ಕತ್ತೆಯನೇರಿಸಿ ಕೆರಹಿನಟ್ಟೆಯಲಿ ಹೊಡೆಯೆಂದಾತ ನಮ್ಮ ಅಂಬಿಗರ ಚೌಡಯ್ಯನೆಂಬ ನಿಜಶರಣನು.
--------------
ಅಂಬಿಗರ ಚೌಡಯ್ಯ
ಇನ್ನಷ್ಟು ... -->