ಅಥವಾ

ಒಟ್ಟು 15 ಕಡೆಗಳಲ್ಲಿ , 2 ವಚನಕಾರರು , 11 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಐನಾಯೆಂಬ ಅಕ್ಷರದ ಭೇದವನರಿತಡೆ ಅಪ್ಪುದರಿದೊಂದೂ ಇಲ್ಲ. ಸೀಮೆಯ ಮೀರಿದ ಸಂಬಂಧ ಸಂಬಂಧವ ಮೀರಿದ ಸೀಮೆ, ಅನುಮತದ ಮೀರಿದ ಆದ್ಥಿಕ್ಯ ಅಕ್ಷರವೆರಡರ ಅದ್ಥಿಕಾರ ಕಪಿಲಸಿದ್ಧಮಲ್ಲಿಕಾರ್ಜುನನ ಸಂಯೋಗ.
--------------
ಸಿದ್ಧರಾಮೇಶ್ವರ
ಅಕ್ಷರದ ಆದಿಮೂಲವನರಿಯಬಲ್ಲರೆ ಪ್ರಾಣಲಿಂಗದ ಅಕ್ಷರದ ಹುಟ್ಟಾವಳಿಯು ಸ್ಥೂಲದಲ್ಲಿಹುದು. ಅಕ್ಷರದ ನಿಲವು ಸೂಕ್ಷ್ಮದಲ್ಲಿಹುದು. ಮಾತಿಗೆ ಮೊದಲು ಶಬ್ದಮುಗ್ಧವಾಗಿರಲು ಕಾರಣದಲ್ಲಿಹುದು. ಇಂತೀ ತ್ರಿವಿಧಪರಿಯ ಭೇದಾಭೇದಂಗಳ ಸಂಬಂದ್ಥಿಸಿಕೊಂಡು ಪ್ರಾಣಲಿಂಗಸಾಹಿತ್ಯವಾದ ಕಾರಣ ಭಕ್ತರ ಶ್ರೀಚರಣಕ್ಕೆ ನಮೋ ನಮೋ ಎನುತಿರ್ದೆ ಕಾಣಾ ಗೊಹೇಶ್ವರಪ್ರಿಯ ನಿರಾಳಲಿಂಗ.
--------------
ಗುಹೇಶ್ವರಯ್ಯ
ಹದಿನಾರು ಅಕ್ಷರದ ಹವಣ ಬಲ್ಲವರಾರು ಅಜಲೋಕದಿಂ ಕೆಳಗೆ ತಾನೆ. ಅರಸೂಸದ ಮದದ ಹದಿನಾರು ಕಳೆಯ ಮತ್ತೆರಡೆಂಟು ಉಳಿಯಬಲ್ಲಡೆ ಆತ ಬ್ರಹ್ಮನಾದಾ ನಾದಬಿಂದುವಿನಲ್ಲಿ, ಸಾದ್ಥಿಸಿದ ಸುಧೆಯದು. ಅದ ಹರಿವಿಷ್ಣುಗಳಿಗಳವಲ್ಲದು ಮೂದೇವರೊಡೆಯ ಕಪಿಲಸಿದ್ಧಮಲ್ಲಿಕಾರ್ಜುನನ ಭೇದಿಸಿದ ಭಕ್ತಂಗೆ ಪಥ್ಯ ತಾನು.
--------------
ಸಿದ್ಧರಾಮೇಶ್ವರ
ಕವಿಗಳುಯೆಂದು ಹೆಸರಿಟ್ಟುಕೊಂಡು ನುಡಿವ ಅಣ್ಣಗಳು ನೀವು ಕೇಳಿರೊ. ಪ್ರಥಮ ಶಿವಾಲ್ಯದಲ್ಲಿ ಮೂಲಸ್ಥಾನದ ಲಿಂಗವನರಿದು ಅಲ್ಲಿದ್ದ ವಿಮಳವಾದ ಗಂಟ ಕೊಯಿದು, ಸಕಲ ಪರಿಮಳ ದ್ರವ್ಯಂಗಳ ಆ ಮೂಲಲಿಂಗಕ್ಕೆ ಕೊಡಬಲ್ಲಡೆ ಕ ಎಂಬ ಅಕ್ಷರದ ಭೇದವ ಬಲ್ಲನೆಂದೆನ್ನಬಹುದು. ಪರಬ್ರಹ್ಮನ ಆಶ್ರೈಸಬಲ್ಲಡೆ ವಿ ಎಂಬ ಅಕ್ಷರದ ಭೇದವ ಬಲ್ಲಡೆ ನಿಮ್ಮ ಹೆಸರ ನೀವೇ ಇಟ್ಟುಕೊಂಡು, ಕವಿಯೆಂಬ ಎರಡಕ್ಷರದ ಬೇದವನರಿಯದೆ ವಾದ ತರ್ಕವ ಮಾಡಿ ಗುರುಗುಡುವುದು ಕಾರಣವಲ್ಲ. ಬಲ್ಲರೆ ಹೇಳಿ, ಅರಿಯದಿದ್ದರೆ ಕೇಳಿ. ಕವಿಯೆಂಬ ಎರಡು ಐವತ್ತೆರಡು ಅಕ್ಷರದ ಭೇದವ ಅಷ್ಟದಳಕಮಲವ ವಿಚಾರಿಸುವುದು, ಅಲ್ಲದ ಕಾರಣ (?) ನಮ್ಮ ಗೊಹೇಶ್ವರಪ್ರಿಯ ನಿರಾಳಲಿಂಗ.
--------------
ಗುಹೇಶ್ವರಯ್ಯ
ಆ ಅಕ್ಷರದ ಭೇದವನರಿಯದವರ ಎಂತಯ್ಯಾ ಭಕ್ತರೆಂದೆಂಬೆ? ಆನಂದ ತನುಮನಕರಸ್ಥಳದ ಬಹಳವರಿಯದವರಿಗೆ ನೀನೇಕೊಲಿವೆಯಯ್ಯಾ? ಕಪಿಲಸಿದ್ಧಮಲ್ಲಿಕಾರ್ಜುನ
--------------
ಸಿದ್ಧರಾಮೇಶ್ವರ
ಆಜ್ಞಾಸಿದ್ಧನನರ್ಚಿಸಿ[ಹೆ]ನೆಂದೆಂಬೆ, ಆ ಅಕ್ಷರದ ಪವಣೆಂತುಟು? ಮುನ್ನ ಮುವತ್ತಾರು ತನ್ನ ಸ್ಥಲದೊಳಗೊಪ್ಪಿ ಇನ್ನು ನಾ ನೀನೆಂದೆಂಬ ಸಂದಿಲ್ಲವಯ್ಯಾ. ಅನಂಗವಿದಾರಣ ಕಪಿಲಸಿದ್ಧಮಲ್ಲಿಕಾರ್ಜುನ ಮಂಗಳದ ಬಯಲೊಳಗೆ ಬೆಳಗುತಾನೆ.
--------------
ಸಿದ್ಧರಾಮೇಶ್ವರ
ಕಂಜಕರ್ಣಿಕೆ ನಿನ್ನ ರಂಜನೆಯ ಪರಿ ಹೊಸತು, ಭಂಜಿಸುತ್ತದೆ ಲೋಕವೀರೇಳನು ಕಂಜನಾಳದ ಒಳಗೆ ಕುಂಜರನ ಗಮನದ ರಂಜಿಸುತ್ತದೆ ಸ್ಥೂಲಸೂಕ್ಷ್ಮದಲ್ಲಿ. ಆಯಂಜನಾನಾಯೆಂಬ ಅಕ್ಷರದ ಹತ್ತಾರ ರಂಜಿಸಲ್ಕೆ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಭ್ರಮಣವಿಡಿದ ಭ್ರಮಿತರು ಕಮಳದ ಎಸಳ ಅಕ್ಷರದ ವರ್ಣವ ಕಂಡೆಹೆನೆಂಬರಯ್ಯಾ. ಕಾಬ ಕಾಣಿಕೆ ಯಾರಿಗೂ ಸಾಧ್ಯವಲ್ಲ, ಕಂಡ ಕಂಡ ನಮ್ಮ ಕಪಿಲಸಿದ್ಧಮಲ್ಲಿನಾಥನಲ್ಲಿ ಚೆನ್ನಬಸವಣ್ಣ.
--------------
ಸಿದ್ಧರಾಮೇಶ್ವರ
ಅಕ್ಷರತ್ರಯದ ಗುಂಡಿನಲ್ಲಿ ಸಕಲಾಕ್ಷರ ಮೂರ್ತಿ ಮನೆಯ ಮಾಡಿಕೊಂಡಿದೆ. ಅಕ್ಷರವರಿಯಬಾರದು; ಅರಿದ ಬಳಿಕ ಜನನ ಮರೆಯಬಾರದು; ಮರೆದ ಬಳಿಕ ಅಕ್ಷರದ ಧ್ಯಾನ ನೆಲೆಗೊಳಿಸಬಾರದು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಗುಹೇಶ್ವರ ಎಂಬ ಅಕ್ಷರದ ಭೇದವು : ವರಕಂಬವೆ ಕಾಲು, ತೊಡಿಯೇ ಬೋದಿಗೆ, ಸಾರಣ ಚರ್ಮ, ಕರಯೆರಡು ಮದನಧ್ವಜಯೆರಡು, ಸ್ತುತಿಬಾಯಿ ಬಾಗಿಲು, ಎರಡು ಶ್ರೋತ್ರವೇ ಬೆಳಕಂಡಿಯು, ಮೂಗೇ ಜಾಳಿಂದ್ರ, ಆಲಿಗಳೆ ಸೋಪಾನ, ಶಿರವೇ ಕಲಶ, ಭಸಿತವೆ ಪತಾಕೆ | ಇಂತೀ ಪಂಚಗುಹೇಶ್ವರನೆಂಬ ದೇಗುಲ. ಇನ್ನು ಅದಕ್ಕೆ ಸ್ವರವಾವುದೆಂದಡೆ : ಗುಹೇಶ್ವರನೆ ಸ್ವರ, ಆ ದೇಗುಲಕ್ಕೆ ಲಿಂಗವೇ ಪೀಠ. ಪಂಚವಿಷಯವೆಂಬ ಪೂಜೆ, ಜ್ಞಾನವೆಂಬುದ ಹಿಡಿದು ಅಜ್ಞಾನವ ದೂಡಿ, ತಾನೆ ತನ್ನೊಳು ತಿಳಿದುದೆ ಭಂಡಾರ. ಅದಕ್ಕೆ ಮನವೆ ಕಿವಿ, ನಿರ್ಮನವೆಂಬ ಕದವ ತೆರೆದು ಸುಖವೆಂಬುದೆ ನೈವೇದ್ಯ, ಜಿಹ್ವೆಯೇ ಪೂಜಾರಿ, ನಿತ್ಯವೇ ಪ್ರಸಾದ, ಮನದಿಚ್ಛೆಗೆ ಪೊಸಪಂಚಾಕ್ಷರಿಯ ಗಸಣೆ, ಷಡಾಕ್ಷರವೆ ಶ್ರೀಗಂಧ, ಜ್ವಾಲೆಯೇ ಧೂಪ, ಸ್ಥಳವೇ ಹರಿವಾಣ, ಬೋನವು ತಾನೆ, ಪೂಜಿಸುವಾತನು ತಾನೆ, ಪುಜೆಗೊಂಬಾತನು ತಾನೆ. ಇಂತೀ ಪರಮಾನಂದವೆಂಬ ಸಂಗಗಳ ಕೂಡಲಂದೆ ಚಿತ್ಸೂರ್ಯರ ಕೋಟಿಪ್ರಕಾಶವಾಗಿ ತೋರುತ್ತಿಹ ಗೊಹೇಶ್ವರಪ್ರಿಯ ನಿರಾಳಲಿಂಗ.
--------------
ಗುಹೇಶ್ವರಯ್ಯ
ಸ್ಥಳವೊಂದರಲ್ಲಿ ಕೂಪಂಗಳು ಹಲವಾಗಿ ಭವಿಸುತ್ತೈದಾವೆ. ಮೊದಲಲ್ಲ್ಲಿ ಮೂರು, ಅಂತರದಲ್ಲಿ ಆರು, ಪರಸ್ಥಾನದಲ್ಲಿ ಒಂಬತ್ತು. ವೈನೈಯೆಂಬ ಅಕ್ಷರದ ಮೊದಲ ಬಹುಶ್ರುತವಪ್ಪ ಕಮಲ ವಿಚಿತ್ರಾಂದೋಳನೆಂಬ ಭ್ರಮರ ಪರಿಮಳವ ಸೂಸಿ ಬೀಸರವೋಗಲೀಯದೆ ಕಪಿಲಸಿದ್ಧಮಲ್ಲಿಕಾರ್ಜುನಯ್ಯಗೆ ಸರ್ವಸ್ವವನರ್ಪಿಸಿ ಸುಖಿಯಾಯಿತು.
--------------
ಸಿದ್ಧರಾಮೇಶ್ವರ
-->