ಅಥವಾ

ಒಟ್ಟು 17 ಕಡೆಗಳಲ್ಲಿ , 1 ವಚನಕಾರರು , 17 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಿಶ್ವಾಸನೋಟ ಜಾರಿದಡೆ ಜಾರುವನಯ್ಯಾ ಶ್ರೀಗುರುವು. ವಿಶ್ವಾಸನೋಟ ಜಾರಿದಡೆ ಜಾರುವನಯ್ಯಾ ಶಿವಲಿಂಗವು. ವಿಶ್ವಾಸನೋಟ ಜಾರಿದಡೆ ಜಾರುವನಯ್ಯಾ ಪರಮಜಂಗಮವು. ವಿಶ್ವಾಸನೋಟ ಜಾರಿದಡೆ ಜಾರುವವಯ್ಯಾ ಪಾದೋದಕ ಪ್ರಸಾದಂಗಳು. ಇಂತೀ ಪಂಚವಿಧವು ಪರಬ್ರಹ್ಮವೆಂದು ನಂಬಿದ ಭಕ್ತರ ಹೃದಯದಲ್ಲಿ ಹೆರೆಹಿಂಗದೆ ನಿರಂತರ ನೆಲೆಸಿರ್ಪನು ನಮ್ಮ ಅಖಂಡೇಶ್ವರನು.
--------------
ಷಣ್ಮುಖಸ್ವಾಮಿ
ನಿತ್ಯ ಗುರುಲಿಂಗಜಂಗಮಕ್ಕೆ ಪೂಜೆಯ ಮಾಡಿ ನಿತ್ಯ ಮುಕ್ತಿಯ ಪಡೆಯಲರಿಯದೆ, ಮತ್ತತನದಿಂದೆ ಅನಿತ್ಯ ಫಲಭೋಗವ ಪಡೆದು ಮರ್ತ್ಯದ ಭವಜಾಲದಲ್ಲಿ ಸುತ್ತಿ ಸುತ್ತಿ ಸುಳಿದು ತೊಳಲಿ ಬಳಲುವ ವ್ಯರ್ಥರ ನೋಡಿ ನಗುತಿರ್ದನು ನಮ್ಮ ಅಖಂಡೇಶ್ವರನು.
--------------
ಷಣ್ಮುಖಸ್ವಾಮಿ
ಷಡೀಂದ್ರಿಯ ಸಪ್ತಧಾತುಗಳಲ್ಲಿ ಸಂಭ್ರಮಿಸಿ ತುಂಬಿರ್ಪುದು ಒಂದೇ ಪರವಸ್ತುವೆಂದರಿಯರು. ಷಡ್‍ಭೂತ ಷಟ್‍ಚಕ್ರಂಗಳಲ್ಲಿ ಇಡಿದು ತುಂಬಿರ್ಪುದು ಒಂದೇ ಪರವಸ್ತುವೆಂದರಿಯರು. ತನುತ್ರಯ ಮನತ್ರಯ ಭಾವತ್ರಯಂಗಳಲ್ಲಿ ಭರಿತವಾಗಿರ್ಪುದು ಒಂದೇ ಪರವಸ್ತುವೆಂದರಿಯರು. ಒಳಹೊರಗೆ ತೆರಹಿಲ್ಲದೆ ಪರಿಪೂರ್ಣವಾಗಿ ತುಂಬಿರ್ಪುದು ಒಂದೇ ಪರವಸ್ತುವೆಂದರಿಯರು. ವಿಪರೀತ ಭ್ರಾಂತಿಜ್ಞಾನದಿಂದೆ ಒಳಗೆ ಬೇರೆ ಪರವಸ್ತು ಉಂಟೆಂದು ಕಣ್ಣಮುಚ್ಚಿ ನೋಡಿ ಕಳವಳಗೊಂಡು ಪ್ರಳಯಕ್ಕೊಳಗಾಗಿ ಹೋದವರ ಕಂಡು ನಗುತಿರ್ಪನು ನಮ್ಮ ಅಖಂಡೇಶ್ವರನು.
--------------
ಷಣ್ಮುಖಸ್ವಾಮಿ
ಎನ್ನ ತನು ಎನ್ನ ಧನ ಎನ್ನ ಮನೆ ಎನ್ನ ಸತಿ ಸುತರೆಂಬ ಮನಕ್ಕೆ ಈಶ್ವರಭಕ್ತಿ ಭಿನ್ನವಾಯಿತ್ತು ನೋಡಾ! ತನ್ನಮರೆದು ಇದಿರನರಿದು ಒಡವೆಯಾತಂಗೆ ಒಡವೆಯ ಒಪ್ಪಿಸಿದೆಯಾದರೆ ಕೂಡಿಕೊಂಡಿರ್ಪನು ನೋಡಾ ನಮ್ಮ ಅಖಂಡೇಶ್ವರನು.
--------------
ಷಣ್ಮುಖಸ್ವಾಮಿ
ಆಧಾರದಲ್ಲಿ ಗುರುಸಂಬಂಧವು. ಸ್ವಾಧಿಷಾ*ನದಲ್ಲಿ ಲಿಂಗಸಂಬಂಧವು. ಮಣಿಪೂರಕದಲ್ಲಿ ಜಂಗಮಸಂಬಂಧವು. ಅನಾಹತದಲ್ಲಿ ಪಾದೋದಕಸಂಬಂಧವು. ವಿಶುದ್ಧಿಯಲ್ಲಿ ಪ್ರಸಾದಸಂಬಂಧವು. ಆಜ್ಞೇಯದಲ್ಲಿ ಅರುಹುಸಂಬಂಧವು. ಈ ಅರುಹುವಿಡಿದು ಗುರುವ ಕಂಡು, ಲಿಂಗವ ನೋಡಿ, ಜಂಗಮವ ಕೂಡಿ, ಪಾದೋದಕ ಪ್ರಸಾದದ ಘನವ ಕಾಂಬುದೆ ಅಂತರಂಗವೆನಿಸುವುದು. ಈ ಅಂತರಂಗದ ವಸ್ತುವು ಭಕ್ತಹಿತಾರ್ಥವಾಗಿ ಬಹಿರಂಗಕ್ಕೆ ಬಂದಲ್ಲಿ, ಗುರುಭಕ್ತಿ, ಲಿಂಗಪೂಜೆ, ಜಂಗಮಾರಾಧನೆ, ಪಾದೋದಕಪ್ರಸಾದ ಸೇವನೆಯ ಪ್ರೇಮವುಳ್ಳಡೆ ಬಹಿರಂಗವೆನಿಸುವುದು. ಇಂತೀ ಅಂತರಂಗ ಬಹಿರಂಗದ ಮಾಟಕೂಟವ ಬಿಡದಿರ್ಪ ಪರಮಪ್ರಸಾದಿಗಳ ಒಳಹೊರಗೆ ಭರಿತನಾಗಿರ್ಪನು ನಮ್ಮ ಅಖಂಡೇಶ್ವರನು.
--------------
ಷಣ್ಮುಖಸ್ವಾಮಿ
ಮೊಟ್ಟೆ ಮೊಟ್ಟೆ ಪತ್ರಿ ಪುಷ್ಪವ ತಂದು ಒಟ್ಟಿ ಒಟ್ಟಿ ಲಿಂಗವ ಪೂಜಿಸಿದಡೇನು, ತನುಮನದ ಕೆಟ್ಟತನವ ಹಿಂಗದನ್ನಕ್ಕರ ? ಹುಸಿ ಕಳವು ಪರದಾರ ವ್ಯವಹಾರದಲ್ಲಿ ಹರಿದಾಡುವ ದುರುಳಬುದ್ಧಿಯ ದುರಾಚಾರಿಗಳಿಗೆ ದೂರನಾಗಿರ್ಪನು ನೋಡಾ ನಮ್ಮ ಅಖಂಡೇಶ್ವರನು.
--------------
ಷಣ್ಮುಖಸ್ವಾಮಿ
ಲಿಂಗದೊಡನೆ ಸಹಭೋಜನ ಮಾಡುವ ಲಿಂಗವಂತರೆಲ್ಲ ನೀವು ಕೇಳಿರೊ ! ನಿಮ್ಮ ತನು ಸಂಸಾರವಿಷಯಪ್ರಪಂಚಿನಲ್ಲಿ ಮುಳುಗಿರ್ಪುದು. ನಿಮ್ಮ ಮನ ಮಾಯಾ ಮಲತ್ರಯಂಗಳಲ್ಲಿ ಸುತ್ತಿರ್ಪುದು. ನಿಮ್ಮ ಜೀವ ಭವಭವದಲ್ಲಿ ತೊಳಲುತಿರ್ಪುದು. ನೀವಿಂತು ಮಲಮಾಯಾಸ್ವರೂಪರಾಗಿರ್ದು ಭಯವಿಲ್ಲದೆ ಅಮಲಲಿಂಗದೊಡನೆ ಸಹಭೋಜನವ ಮಾಡಿದಡೆ ಅಘೋರ ನರಕದಲ್ಲಿಕ್ಕದೆ ಮಾಣ್ಬನೆ ನಮ್ಮ ಅಖಂಡೇಶ್ವರನು ?
--------------
ಷಣ್ಮುಖಸ್ವಾಮಿ
ಕುರುಹು ಉಂಟೇ ಮರುಳೆ ಲಿಂಗಕ್ಕೆ ? ತೆರಹು ಉಂಟೇ ಮರುಳೆ ಲಿಂಗಕ್ಕೆ ? ಎಲ್ಲೆಡೆಯೊಳು ಪರಿಪೂರ್ಣವಾದ ಪರಾತ್‍ಪರಲಿಂಗದ ನಿಲವನರಿಯದೆ ಹುಸಿಯನೆ ಕಲ್ಪಿಸಿ, ಹುಸಿಯನೆ ಪೂಜಿಸಿ, ಹುಸಿಯ ಫಲಪದವನುಂಡು ಹುಸಿಯಾಗಿ ಹೋದವರ ಕಂಡು ನಸುನಗುತಿಪ್ಪನಯ್ಯ ನಮ್ಮ ಅಖಂಡೇಶ್ವರನು.
--------------
ಷಣ್ಮುಖಸ್ವಾಮಿ
ಕೇಳಿ ಕೇಳಿರವ್ವಾ ನಮ್ಮ ಮನೆಯಾತನ ಒಂದು ಬೆಡಗು ಬಿನ್ನಾಣವ. ಎನ್ನ ಕಟ್ಟಿದ ಮುಡಿಯ ಸಡಿಲಿಸಿದ. ಎನ್ನ ಉಟ್ಟುದ ಸೆಳೆದುಕೊಂಡ. ಎನ್ನ ತೊಟ್ಟುದ ಬಿಡಿಸಿದ. ಎನ್ನ ಲಜ್ಜೆನಾಚಿಕೆಯ ತೊರೆಸಿದ. ಎನ್ನ ಮೌನದಲ್ಲಿರಿಸಿ ಎನ್ನ ಕರವಿಡಿದು ಕರೆದುಕೊಂಡು, ತಾನುಂಬ ಪರಿಯಾಣದಲ್ಲಿ ಎನ್ನ ಕೂಡಿಸಿಕೊಂಡು ಉಂಡನು ಕೇಳಿರವ್ವಾ ನಮ್ಮ ಅಖಂಡೇಶ್ವರನು.
--------------
ಷಣ್ಮುಖಸ್ವಾಮಿ
ಮನದಲ್ಲಿ ಆಸೆ ಮೊಳೆದೋರಿ ಮತ್ತೆ ಮತ್ತೆ ಬೇಕೆಂಬಲ್ಲಿ ಎನ್ನ ಮನ ಕಿರಿದಾಯಿತ್ತು. ನುಡಿಯಲ್ಲಿ ಉಪಾಧಿಕೆ ಮೊಳೆದೋರಿ ಸರ್ವರನು ಕೊಡು ಕೊಡು ಎಂದು ಬೇಡಿದಲ್ಲಿ ಎನ್ನ ನುಡಿ ಕಿರಿದಾಯಿತ್ತು. ಲಿಂಗದ ನೆನಹ ಜಂಗಮದ ಸೇವೆಯ- ತೊರೆದು ಅಂಗವಿಕಾರಕ್ಕೆ ಹರಿದಲ್ಲಿ ಎನ್ನ ನಡೆ ಕಿರಿದಾಯಿತ್ತು. ಇಂತೀ ತ್ರಿಕರಣಶುದ್ಧವಿಲ್ಲದೆ ಅಬದ್ಧಪಾಪಿ ಚಾಂಡಾಲ ದ್ರೋಹಿಗೆ ಅಖಂಡೇಶ್ವರನು ಎಂತೊಲಿವನೊ ಎನಗೆ?
--------------
ಷಣ್ಮುಖಸ್ವಾಮಿ
ಚಿತ್ತದೊಲ್ಲಭನ ಕಾಣದೆ ಚಿಂತೆಗೊಂಡಿತ್ತು ನೋಡಾ ಎನ್ನ ಮನವು. ಹೊತ್ತಿನ ಗೊತ್ತಿಗೆ ಬಾರದಿರ್ದಡೆ ಹೊತ್ತು ಹೋಗದು ಕೇಳಿರೆ. ಕರ್ತೃ ಅಖಂಡೇಶ್ವರನು ಬಾರದಿರ್ದಡೆ ಕತ್ತಲೆಯ ಕಳೆಯಲಾರೆನವ್ವಾ.
--------------
ಷಣ್ಮುಖಸ್ವಾಮಿ
ಕಾಯವಿಲ್ಲದ ಪುರುಷನು ಕಸವಿಲ್ಲದ ಭೂಮಿಯಲ್ಲಿ ಕಾಮಿತವಿಲ್ಲದ ಬೀಜವ ಬಿತ್ತಲು ಅದು ಅಂಕುರಿಸಿ ಎಲೆ ಎರಡಾಯಿತ್ತು. ಶಾಖೆ ಮೂರಾಯಿತ್ತು, ತಳಿರು ಆರಾಯಿತ್ತು, ಕುಸುಮ ಮೂವತ್ತಾರಾಯಿತ್ತು, ಕಾಯಿ ಇನ್ನೂರಹದಿನಾರಾಯಿತ್ತು, ಹಣ್ಣು ವಿಶ್ವಪರಿಪೂರ್ಣವಾಯಿತ್ತು . ಅದು ಅಖಂಡ ರಸತುಂಬಿ ಬಟ್ಟಬಯಲಲ್ಲಿ ತೊಟ್ಟುಬಿಟ್ಟಿತ್ತು. ಆ ಹಣ್ಣ ನಾನು ಕಣ್ಣಿಲ್ಲದೆ ನೋಡಿ, ಕೈಯಿಲ್ಲದೆ ಮುಟ್ಟಿ, ಬಾಯಿಲ್ಲದೆ ಸವಿದು, ಮನವಿಲ್ಲದೆ ಪರಿಣಾಮಿಸಿದೆನಾಗಿ, ಅಖಂಡೇಶ್ವರನು ತನ್ನೊಳಗೆ ಇಂಬಿಟ್ಟುಕೊಂಡನು.
--------------
ಷಣ್ಮುಖಸ್ವಾಮಿ
ಹೊರಗೆ ಹೊನ್ನ ಬಿಟ್ಟೆನೆಂದು ನುಡಿವುತಿರ್ಪೆನಲ್ಲದೆ ಒಳಗೆ ಬಿಟ್ಟು ನಿಶ್ಚಿಂತನಲ್ಲವಯ್ಯ ನಾನು. ಹೊರಗೆ ಹೆಣ್ಣ ಬಿಟ್ಟೆನೆಂದು ನುಡಿವುತಿರ್ಪೆನಲ್ಲದೆ, ಒಳಗೆ ಬಿಟ್ಟು ನಿಶ್ಚಿಂತನಲ್ಲವಯ್ಯ ನಾನು. ಹೊರಗೆ ಮಣ್ಣ ಬಿಟ್ಟೆನೆಂದು ನುಡಿವುತಿರ್ಪೆನಲ್ಲದೆ, ಒಳಗೆ ಬಿಟ್ಟು ನಿಶ್ಚಿಂತನಲ್ಲವಯ್ಯ ನಾನು. ಇಂತಪ್ಪ ಏಕಾಂತದ್ರೋಹಿ ಗುಪ್ತಪಾತಕಂಗೆ- ಅಖಂಡೇಶ್ವರನು ಒಲಿ ಎಂದೊಡೆ ಎಂತೊಲಿವನಯ್ಯ ಎನಗೆ ?
--------------
ಷಣ್ಮುಖಸ್ವಾಮಿ
ಪ್ರಾಣನ ಹಸಿವೆದ್ದು ದೇಹವನಂಡಲೆವಾಗ ಬಾಯ ಸವಿಯನುಂಬರಲ್ಲದೆ ಲಿಂಗದೇವನ ನೆನಹು ಎಲ್ಲಿಯದೊ ? ಆ ಲಿಂಗದ ನೆನಹ ಮರೆದು ಅಂಗಕ್ಕೆ ಕೊಂಡರೆ ಅದೇ ಎಂಜಲು ನೋಡಾ. ಅಂತಹ ಎಂಜಲೋಗರವ ಮರಳಿ ಲಿಂಗಕ್ಕೆ ಕೊಡಲಾಗದು ನೋಡಾ. ಅದೇನು ಕಾರಣವೆಂದೊಡೆ : ಕಂಡವರ ಕಂಡು ತಾನುಂಡು ಎಂಜಲವ ಮರಳಿ ಮರಳಿ ಭೋಜಿಯ ಕಟ್ಟಿ ಲಿಂಗಕ್ಕೆ ತೋರಿದಡೆ ಹುಳುಗೊಂಡದಲ್ಲಿಕ್ಕುವನು ನೋಡಾ ನಮ್ಮ ಅಖಂಡೇಶ್ವರನು.
--------------
ಷಣ್ಮುಖಸ್ವಾಮಿ
ಕಂಡರೆ ಸಂತೋಷ, ಕಾಣದಿರ್ದರೆ ಕಡುದುಃಖವೆನಗೆ ಹಿಂಡುದೈವದ ಗಂಡ ಮಂಡಲಾಧಿಪತಿ ಅಖಂಡೇಶ್ವರನು ನಿಮಿಷವಾದಡೂ ತಡೆದರೆ ಪ್ರಾಣ ಉಳಿಯದವ್ವಾ.
--------------
ಷಣ್ಮುಖಸ್ವಾಮಿ
ಇನ್ನಷ್ಟು ... -->