ಅಥವಾ

ಒಟ್ಟು 46 ಕಡೆಗಳಲ್ಲಿ , 1 ವಚನಕಾರರು , 45 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹಗಲು ಹನ್ನೆರಡುತಾಸು ತನ್ನ ಹಂಬಲದಲ್ಲಿ ವೇಳೆಕಳೆವುತಿರ್ದೆನವ್ವಾ. ಇರುಳು ಹನ್ನೆರಡುತಾಸು ತನ್ನನೇ ಎದ್ದೆದ್ದು ನೋಡುತಿರ್ದೆನವ್ವಾ. ಅಖಂಡೇಶ್ವರನೆಂಬ ನಲ್ಲನ ಹಂಬಲದಿಂದೆ ಸರ್ವಸಂಗವ ತೊರೆದೆನು ನೋಡಿರವ್ವಾ.
--------------
ಷಣ್ಮುಖಸ್ವಾಮಿ
ಬಾರನೇತಕವ್ವಾ ನಮ್ಮನೆಯಾತ ? ತೋರನೇತಕವ್ವಾ ತನ್ನ ದಿವ್ಯರೂಪವ ? ಬೀರನೇತಕವ್ವಾ ಅತಿಸ್ನೇಹವ ? ಇನ್ನೆಂತು ಸೈರಿಸುವೆನವ್ವಾ. ಹೇಗೆ ತಾಳುವೆನವ್ವಾ. ತನು ತಾಪಗೊಳ್ಳುತ್ತಿದೆ, ಮನ ತಲ್ಲಣವಾಗುತ್ತಿದೆ. ಅಖಂಡೇಶ್ವರನೆಂಬ ನಲ್ಲನ ತೋರಿಸಿ ಎನ್ನ ಪ್ರಾಣವನುಳುಹಿಕೊಳ್ಳಿರವ್ವಾ.
--------------
ಷಣ್ಮುಖಸ್ವಾಮಿ
ಮೂರ್ತಿಯಿಲ್ಲದ ಬಯಲು, ಅಮೂರ್ತಿಯಿಲ್ಲದ ಬಯಲು, ಸಗುಣವಿಲ್ಲದ ಬಯಲು, ನಿರ್ಗುಣವಿಲ್ಲದ ಬಯಲು, ಅಖಂಡೇಶ್ವರನೆಂಬ ಮಹಾಬಯಲೊಳಗೆ ನಾನೆತ್ತ ಹೋದೆನೆಂದರಿಯೆ.
--------------
ಷಣ್ಮುಖಸ್ವಾಮಿ
ಬಚ್ಚಬರಿಯ ಬಯಲೊಳಗೊಂದು ಅಚ್ಚ ಅಂಕುರ ಹುಟ್ಟಿ ಅಣುಚಕ್ರವೆನಿಸಿತ್ತು. ಆ ಅಣುಚಕ್ರದಿಂದಾಯಿತ್ತು ಪಶ್ಚಿಮಚಕ್ರ. ಆ ಪಶ್ಚಿಮಚಕ್ರದಿಂದಾಯಿತ್ತು ಶಿಖಾಚಕ್ರ. ಆ ಶಿಖಾಚಕ್ರದಿಂದಾಯಿತ್ತು ಬ್ರಹ್ಮಚಕ್ರ. ಆ ಬ್ರಹ್ಮಚಕ್ರದಿಂದಾಯಿತ್ತು ಆಜ್ಞಾಚಕ್ರ. ಆ ಆಜ್ಞಾಚಕ್ರದಿಂದಾಯಿತ್ತು ವಿಶುದ್ಧಿಚಕ್ರ. ಆ ವಿಶುದ್ಧಿಚಕ್ರದಿಂದಾಯಿತ್ತು ಅನಾಹತಚಕ್ರ. ಆ ಅನಾಹತಚಕ್ರದಿಂದಾಯಿತ್ತು ಮಣಿಪೂರಕಚಕ್ರ. ಆ ಮಣಿಪೂರಕಚಕ್ರದಿಂದಾಯಿತ್ತು ಸ್ವಾದ್ಥಿಷ್ಠಾನಚಕ್ರ. ಆ ಸ್ವಾದ್ಥಿಷ್ಠಾನಚಕ್ರದಿಂದಾಯಿತ್ತು ಆಧಾರಚಕ್ರ. ಆ ಆಧಾರಚಕ್ರಕ್ಕೆ ಚತುರ್ದಳ. ಆ ಚತುರ್ದಳದಲ್ಲಿ ಚತುರಕ್ಷರಂಗಳು. ಆ ಚತುರಕ್ಷರಂಗಳ ಮಧ್ಯ ಬೀಜಾಕ್ಷರವೇ ನಕಾರಪ್ರಣವ. ಆ ನಕಾರಪ್ರಣವಪೀಠದ ಮೇಲೆ ಬೆಳಗುತಿರ್ಪುದು ಆಚಾರಲಿಂಗ. ಅದರಿಂದ ಮೇಲೆ ಸ್ವಾದ್ಥಿಷ್ಠಾನಚಕ್ರವಿರ್ಪುದು. ಆ ಚಕ್ರಕ್ಕೆ ಷಡುದಳ. ಆ ಷಡುದಳಂಗಳಲ್ಲಿ ಷಡಕ್ಷರಂಗಳು. ಆ ಷಡಕ್ಷರಂಗಳ ಮಧ್ಯ ಬೀಜಾಕ್ಷರವೇ ಮಕಾರಪ್ರಣವ. ಆ ಮಕಾರಪ್ರಣವಪೀಠದ ಮೇಲೆ ಬೆಳಗುತಿರ್ಪುದು ಗುರುಲಿಂಗ. ಅದರಿಂದ ಮೇಲೆ ಮಣಿಪೂರಕಚಕ್ರವಿರ್ಪುದು. ಆ ಚಕ್ರಕ್ಕೆ ದಶದಳ. ಆ ದಶದಳಂಗಳಲ್ಲಿ ದಶಾಕ್ಷರಂಗಳು. ಆ ದಶಾಕ್ಷರಂಗಳ ಮಧ್ಯ ಬೀಜಾಕ್ಷರವೇ ಶಿಕಾರಪ್ರಣವ. ಆ ಶಿಕಾರ ಪ್ರಣವ ಪೀಠದ ಮೇಲೆ ಬೆಳಗುತಿರ್ಪುದು ಶಿವಲಿಂಗ. ಅದರಿಂದ ಮೇಲೆ ಅನಾಹತಚಕ್ರವಿರ್ಪುದು. ಆ ಚಕ್ರಕ್ಕೆ ದ್ವಾದಶದಳ. ಆ ದ್ವಾದಶದಳಂಗಳಲ್ಲಿ ದ್ವಾದಶಾಕ್ಷರಂಗಳು. ಆ ದ್ವಾದಶಾಕ್ಷರಂಗಳ ಮಧ್ಯ ಬೀಜಾಕ್ಷರವೇ ವಕಾರಪ್ರಣವ. ಆ ವಕಾರಪ್ರಣವಪೀಠದ ಮೇಲೆ ಬೆಳಗುತಿರ್ಪುದು ಜಂಗಮಲಿಂಗ. ಅದರಿಂದ ಮೇಲೆ ವಿಶುದ್ಧಿಚಕ್ರವಿರ್ಪುದು. ಆ ಚಕ್ರಕ್ಕೆ ಷೋಡಶದಳ. ಆ ಷೋಡಶದಳಂಗಳಲ್ಲಿ ಷೋಡಶಾಕ್ಷರಂಗಳು. ಆ ಷೋಡಶಾಕ್ಷರಂಗಳ ಮಧ್ಯ ಬೀಜಾಕ್ಷರವೇ ಯಕಾರಪ್ರಣವ. ಆ ಯಕಾರಪ್ರಣವಪೀಠದ ಮೇಲೆ ಬೆಳಗುತಿರ್ಪುದು ಪ್ರಸಾದಲಿಂಗ. ಅದರಿಂದ ಮೇಲೆ ಆಜ್ಞಾಚಕ್ರವಿರ್ಪುದು. ಆ ಚಕ್ರಕ್ಕೆ ದ್ವಿದಳ. ಆ ದ್ವಿದಳಂಗಳಲ್ಲಿ ದ್ವಯಾಕ್ಷರಂಗಳು. ಆ ದ್ವಯಾಕ್ಷರಂಗಳ ಮಧ್ಯ ಬೀಜಾಕ್ಷರವೇ ಒಂಕಾರಪ್ರಣವ. ಆ ಓಂಕಾರಪ್ರಣವಪೀಠದ ಮೇಲೆ ಬೆಳಗುತಿರ್ಪುದು ಮಹಾಲಿಂಗ. ಅದರಿಂದ ಮೇಲೆ ಬ್ರಹ್ಮಚಕ್ರವಿರ್ಪುದು. ಆ ಚಕ್ರಕ್ಕೆ ಸಹಸ್ರದಳ. ಆ ಸಹಸ್ರದಳಂಗಳಲ್ಲಿ ಸಹಸ್ರಾಕ್ಷರಂಗಳು. ಆ ಸಹಸ್ರಾಕ್ಷರಂಗಳ ಮಧ್ಯ ಬೀಜಾಕ್ಷರವೇ ನಿಷ್ಕಲಪ್ರಣವ. ಆ ನಿಷ್ಕಲಪ್ರಣವಪೀಠದ ಮೇಲೆ ಬೆಳಗುತಿರ್ಪುದು ನಿಷ್ಕಲಲಿಂಗ. ಅದರಿಂದ ಮೇಲೆ ಶಿಖಾಚಕ್ರವಿರ್ಪುದು. ಆ ಚಕ್ರಕ್ಕೆ ತ್ರಿದಳ. ಆ ತ್ರಿದಳಂಗಳಲ್ಲಿ ತ್ರಯಾಕ್ಷರಂಗಳು. ಆ ತ್ರಯಾಕ್ಷರಂಗಳ ಮಧ್ಯ ಬೀಜಾಕ್ಷರವೇ ಶೂನ್ಯಪ್ರಣವ. ಆ ಶೂನ್ಯಪ್ರಣವಪೀಠದ ಮೇಲೆ ಬೆಳಗುತಿರ್ಪುದು ಶೂನ್ಯಲಿಂಗ. ಅದರಿಂದ ಮೇಲೆ ಪಶ್ಚಿಮಚಕ್ರವಿರ್ಪುದು. ಆ ಚಕ್ರಕ್ಕೆ ಏಕದಳ. ಆ ಏಕದಳದಲ್ಲಿ ಸರ್ವರಂಜನೆಯನೊಳಕೊಂಡು ವಾಚಾತೀತವೆನಿಸುವ ನಿರಂಜನಪ್ರಣವ. ಆ ನಿರಂಜನ ಪ್ರಣವಪೀಠದ ಮೇಲೆ ಬೆಳಗುತಿರ್ಪುದು ನಿರಂಜನಲಿಂಗ. ಇಂತೀ ತರುವಾಯದಿಂದೆ ಆಧಾರ ಸ್ವಾದ್ಥಿಷ್ಠಾನದಲ್ಲಿ ಲಯ, ಆ ಸ್ವಾದ್ಥಿಷ್ಠಾನ ಮಣಿಪೂರಕದಲ್ಲಿ ಲಯ. ಆ ಮಣಿಪೂರಕ ಅನಾಹತದಲ್ಲಿ ಲಯ. ಆ ಅನಾಹತ ವಿಶುದ್ಧಿಯಲ್ಲಿ ಲಯ. ಆ ವಿಶುದ್ಧಿ ಆಜ್ಞೆಯಲ್ಲಿ ಲಯ. ಆ ಆಜ್ಞೆ ಬ್ರಹ್ಮಚಕ್ರದಲ್ಲಿ ಲಯ. ಆ ಬ್ರಹ್ಮಚಕ್ರ ಶಿಖಾಚಕ್ರದಲ್ಲಿ ಲಯ. ಆ ಶಿಖಾಚಕ್ರ ಪಶ್ಚಿಮಚಕ್ರದಲ್ಲಿ ಲಯ. ಆ ಪಶ್ಚಿಮಚಕ್ರ ಅಣುಚಕ್ರದಲ್ಲಿ ಲಯ. ಆ ಅಣುಚಕ್ರ ನಿರವಯಲಲ್ಲಿ ಲಯ. ಆ ನಿರವಯಲು ನಿಜವ ಕೂಡಿ ಸಹಜವಾದಲ್ಲಿ ಅಖಂಡೇಶ್ವರನೆಂಬ ಶಬ್ದ ಮುಗ್ಧವಾಯಿತ್ತು.
--------------
ಷಣ್ಮುಖಸ್ವಾಮಿ
ಘುಲ್ಲುಘುಲ್ಲೆಂದಡೆ ನಲ್ಲ ಬರುತಾನೆಂದು ಎಲ್ಲ ಹಾದಿಯ ಮೆಟ್ಟಿ ನೋಡುತಿರ್ದೆನವ್ವಾ. ನಲ್ಲನ ಸೊಲ್ಲನಾಲಿಸಿ ಕೇಳುತಿರ್ದೆನವ್ವಾ. ಅಖಂಡೇಶ್ವರನೆಂಬ ನಲ್ಲನ ಕಂಡರೆ ಮಹಾಸಂತೋಷವು, ಕಾಣದಿರ್ದರೆ ಕಡುದುಃಖ ಕೇಳಿರವ್ವಾ ಎನಗೆ.
--------------
ಷಣ್ಮುಖಸ್ವಾಮಿ
ಮನಕ್ಕೆ ಮನೋಹರವಾದ ದೇವನ ಕಂಡೆನಯ್ಯ ಎನ್ನ ಕರಸ್ಥಲದಲ್ಲಿ. ಕಂಗಳಿಗ ಮಂಗಳವಾದ ದೇವನ ಕಂಡೆನಯ್ಯ ಎನ್ನ ಕರಸ್ಥಲದಲ್ಲಿ. ಪ್ರಾಣಕ್ಕೆ ಪರಿಣಾಮವಾದ ದೇವನ ಕಂಡೆನಯ್ಯ ಎನ್ನ ಕರಸ್ಥಲದಲ್ಲಿ. ತನುವಿಂಗೆ ತರಹರವಾದ ದೇವನ ಕಂಡೆನಯ್ಯ ಎನ್ನ ಕರಸ್ಥಲದಲ್ಲಿ. ಅಗಮ್ಯ ಅಗೋಚರನಾದ ಅಖಂಡೇಶ್ವರನೆಂಬ ಲಿಂಗಯ್ಯನ ಕಂಡೆನಯ್ಯ ಎನ್ನ ಕರಸ್ಥಲದಲ್ಲಿ.
--------------
ಷಣ್ಮುಖಸ್ವಾಮಿ
ಮನವ ನಿಲಿಸಿಹೆನೆಂದು ನುಡಿವ ಅಣ್ಣಗಳ ಕಣ್ಣಗೆಡಿಸಿ ಬಣ್ಣಗುಂದಿಸಿ ಬಂಧನಕ್ಕೊಳಗುಮಾಡಿ ಭವದಲ್ಲಿ ಸೆರೆಹಿಡಿದಿರ್ಪುದು ನೋಡಾ ಮನವು. ಅದೆಂತೆಂದೊಡೆ : ವ್ರತವುಳ್ಳವರ ಭ್ರಾಂತುಗೆಡಿಸಿತ್ತು ನೋಡಾ ಮನವು. ಯತಿಗಳೆಂಬವರ ಮತಿಹೀನರ ಮಾಡಿತ್ತು ನೋಡಾ ಮನವು. ಕಣ್ಣುಮುಚ್ಚಿ ಧ್ಯಾನಿಸುವ ಅಣ್ಣಗಳ ಕಳವಳಗೊಳಿಸಿತ್ತು ನೋಡಾ ಮನವು. ಏಕಾಂತವಾಸಿಗಳೆಲ್ಲರ ಹಿಡಿತಂದು ಲೋಕದ ಮಧ್ಯದೊಳಗಿರಿಸಿ ಕಾಕುತನದಲ್ಲಿ ಕಾಡಿ ಏಡಿಸಿತ್ತು ನೋಡಾ ಮನವು. ಯೋಗಿಗಳೆಂಬವರ ಭೋಗಕ್ಕೊಳಗುಮಾಡಿ ಕಾಡಿತ್ತು ನೋಡಾ ಮನವು. ಇಂತೀ ಮನವ ನಿಲಿಸಿಹೆವೆಂದು ನುಡಿದು ಮತಿಗೆಟ್ಟು ಮಣ್ಣುಮಸಿಯಾಗಿ ಹೋದರು ನೋಡಾ ಹಲಕೆಲಬರು. ಅವರಂತಿರಲಿ. ಇನ್ನು ಮನವ ನಿಲಿಸುವ ಭೇದವ ಹೇಳಿಹೆ ಕೇಳಿರೆ. ಆದಿ-ಅನಾದಿ, ಸುರಾಳ-ನಿರಾಳ, ಶೂನ್ಯ-ನಿಃಶೂನ್ಯ, ಸಾಕಾರ-ನಿರಾಕಾರ, ಸಗುಣ-ನಿರ್ಗುಣ, ಮೂರ್ತಿ-ಅಮೂರ್ತಿ, ಶಿವ-ಶಕ್ತಿ, ನಾಮ-ರೂಪು-ಕ್ರಿಯೆ ಸಕಲ ಬ್ರಹ್ಮಾಂಡ ಸಚರಾಚರಾದಿ ನಾನಾ ತೋರಿಕೆಯೆಲ್ಲವು ತಾನೆ ಎಂದು ತಿಳಿಯಲು ಆ ತಿಳಿದಮಾತ್ರದಲ್ಲಿಯೆ ಮನದ ಕಲ್ಪಿತವಳಿದು ಕಾಯಿ ಹಣ್ಣಾದಂತೆ, ಆ ಮನವು ಮಹಾಘನಪರಬ್ರಹ್ಮವೆ ಅಪ್ಪುದು. ಆ ಮನವು ಮಹಾಘನವಾದಲ್ಲಿಯೆ ಶರಣನ ಹುಟ್ಟು ಹೊಂದು ನಷ್ಟವಾಗಿರ್ಪುದು. ಆ ಶರಣನ ಹುಟ್ಟು ಹೊಂದು ನಷ್ಟವಾದಲ್ಲಿಯೆ ಅಖಂಡೇಶ್ವರನೆಂಬ ಕುರುಹು ನಿರ್ವಯಲು ನೋಡಾ.
--------------
ಷಣ್ಮುಖಸ್ವಾಮಿ
ಗಂಡನುಳ್ಳ ಗರತಿಯರೆಲ್ಲರು ನಿಮ್ಮ ಗಂಡನ ಕುರುಹ ನೀವು ಹೇಳಿರೆ ; ನೀವರಿಯದಿರ್ದಡೆ ನಾವು ನಮ್ಮ ಗಂಡರ ಕುರುಹ ಹೇಳಿಹೆವು ಕೇಳಿರೆ. ಹೊಳೆವ ಕೆಂಜೆಡೆಗಳ, ಬೆಳಗುವ ಭಾಳಲೋಚನದ, ಥಳಥಳಿಪ ಸುಲಿಪಲ್ಲಿನ, ಕಳೆದುಂಬಿ ನೋಡುವ ಕಂಗಳ ನೋಟದ, ಸೊಗಸಿಂದೆ ನಗುವ ಮುಗುಳುನಗೆಯ, ರತ್ನದಂತೆ ಬೆಳಗುವ ರಂಗುದುಟಿಯ, ಚಂಪಕದ ನಗೆಯಂತೆ ಸೊಂಪಾದ ನಾಸಿಕದ, ಶಶಿಯಂತೆ ಬೆಳಗುವ ಎಸೆವ ಕದಪಿನ, ಮಿಸುಪ ಎದೆ ಭುಜ ಕಂಠದ, ಶೃಂಗಾರದ ಕುಕ್ಷಿಯ, ಸುಳಿದೆಗೆದ ನಾಭಿಯ, ತೊಳಪ ತೊಡೆಮಣಿಪಾದಹರಡಿನ, ನಕ್ಷತ್ರದಂತೆ ಹೊಳೆವ ನಖದ ಪಂಕ್ತಿಯ ಚರಣಕಮಲದಲ್ಲಿ ಹರಿಯ ನಯನದ ಕುರುಹಿನ. ಸಕಲಸೌಂದರ್ಯವನೊಳಕೊಂಡು ರವಿಕೋಟಿಪ್ರಭೆಯಂತೆ ರಾಜಿಸುವ ರಾಜಾಧಿರಾಜ ನಮ್ಮ ಅಖಂಡೇಶ್ವರನೆಂಬ ನಲ್ಲನ ಕುರುಹು ಇಂತುಟು ಕೇಳಿರವ್ವಾ.
--------------
ಷಣ್ಮುಖಸ್ವಾಮಿ
ಅರಳಿಯ ಮರದೊಳಗಿರುವ ಅರಗಿಳಿಗಳಿರಾ, ನಮ್ಮ ಅಖಂಡೇಶ್ವರನ ಕಂಡರೆ ಹೇಳಿರೆ ! ಮಾವಿನ ಮರದೊಳಗೆ ಕೂಗುವ ಕೋಗಿಲೆ ಹಿಂಡುಗಳಿರಾ, ನಮ್ಮ ನಾಗಭೂಷಣನ ಕಂಡಡೆ ಹೇಳಿರೆ! ಕೊಳನ ತೀರದಲಾಡುವ ಕಳಹಂಸಗಳಿರಾ, ನಮ್ಮ ಎಳೆಯಚಂದ್ರಧರನ ಕಂಡಡೆ ಹೇಳಿರೆ! ಮೇಘಧ್ವನಿಗೆ ಕುಣಿವ ನವಿಲುಗಳಿರಾ, ನಮ್ಮ ಅಖಂಡೇಶ್ವರನೆಂಬ ಅವಿರಳಪರಶಿವನ ಕಂಡಡೆ ಹೇಳಿರೆ!
--------------
ಷಣ್ಮುಖಸ್ವಾಮಿ
ಸಕಲ ಗಣಂಗಳು ತಮ್ಮ ವಚನಾನುಭಾವವೆಂಬ ಪರಮಾಮೃತವನು ಎನ್ನ ಕರ್ಣವೆಂಬ ಕುರುಹ ಕಟ್ಟಿ ಎರಕವೆರೆಯಲು, ಅದು ಮನದಲ್ಲಿ ಮೂರ್ತಿಯಾಗಿ ಒಳಗೆ ಪ್ರಾಣಲಿಂಗವಾಯಿತ್ತು ; ಹೊರಗೆ ಇಷ್ಟಲಿಂಗವಾಯಿತ್ತು. ಎನ್ನೊಳಹೊರಗೆ ಭರಿತವಾದ ಅಖಂಡೇಶ್ವರನೆಂಬ ಪರಶಿವನು ನುಡಿಸಿದಂತೆ ನುಡಿದೆನಲ್ಲದೆ ಎನ್ನ ಮನಕ್ಕೆಬಂದಂತೆ ನುಡಿಯಲಿಲ್ಲ ಕೇಳಿರೆ.
--------------
ಷಣ್ಮುಖಸ್ವಾಮಿ
ಬಯಲ ಸ್ತ್ರೀಯಳ ನಿರವಯಲ ಪುರುಷ ಬಂದು ಕೂಡಲು ಚಿದ್‍ಬಯಲೆಂಬ ಶಿಶು ಹುಟ್ಟಿತ್ತು. ಆ ಶಿಶುವನು ಮಹಾಬಯಲೆಂಬ ತೊಟ್ಟಿಲಲ್ಲಿ ಮಲಗಿಸಿ ನಿರಾಳ ನಿಃಶೂನ್ಯವೆಂಬ ನೇಣ ಕಟ್ಟಿ ತೂಗಿ ಜೋಗುಳವಾಡಲು, ಆ ಶಿಶುವು ತನ್ನಿಂದ ತಾನೇ ತಂದೆ ತಾಯಿಗಳಿಬ್ಬರನೂ ನುಂಗಿತ್ತು. ಆ ತಂದೆ ತಾಯಿಗಳ ನುಂಗಲೊಡನೆ ಜೋಗುಳದ ಉಲುಹು ಅಡಗಿತ್ತು. ಆ ಜೋಗುಳದ ಉಲುಹು ಅಡಗಿದೊಡನೆ ನಿರಾಳ ನಿಃಶೂನ್ಯವೆಂಬ ನೇಣು ಹರಿಯಿತ್ತು. ಆ ನಿರಾಳ ನಿಃಶೂನ್ಯವೆಂಬ ನೇಣು ಹರಿಯಲೊಡನೆ ಆ ಶಿಶು ತೊಟ್ಟಿಲಸಹವಾಗಿ ಬಟ್ಟಬಯಲಾಯಿತ್ತು. ಆ ಶಿಶು ತೊಟ್ಟಿಲಸಹವಾಗಿ ಬಟ್ಟಬಯಲಾಗಲೊಡನೆ ಅಖಂಡೇಶ್ವರನೆಂಬ ಬಯಲಿನ ಬಯಲ ಬಚ್ಚಬರಿಯ ಘನಗಂಭೀರ ಮಹಾಬಯಲೊಳಗೆ ನಾನೆತ್ತ ಹೋದೆನೆಂದರಿಯೆ.
--------------
ಷಣ್ಮುಖಸ್ವಾಮಿ
ಅಡಿಮುಡಿಯಿಲ್ಲದ ಪ್ರಸಾದ, ನಡುಕಡೆಯಿಲ್ಲದ ಪ್ರಸಾದ, ಎಡೆಬಿಡುವಿಲ್ಲದ ಪ್ರಸಾದ, ಅಖಂಡೇಶ್ವರನೆಂಬ ಮಹಾಘನ ಪರಾತ್ಪರ ಪರಿಪೂರ್ಣಪ್ರಸಾದದೊಳಗೆ ಮನವಡಗಿ ನೆನಹುನಿಷ್ಪತ್ತಿಯಾಗಿ ಏನೆಂದರಿಯದಿರ್ದೆನಯ್ಯಾ.
--------------
ಷಣ್ಮುಖಸ್ವಾಮಿ
ಆದಿಯಿಲ್ಲದ ಬಯಲು, ಅನಾದಿಯಿಲ್ಲದ ಬಯಲು, ಶೂನ್ಯವಿಲ್ಲದ ಬಯಲು, ನಿಃಶೂನ್ಯವಿಲ್ಲದ ಬಯಲು, ಸುರಾಳವಿಲ್ಲದ ಬಯಲು, ನಿರಾಳವಿಲ್ಲದ ಬಯಲು, ಸಾವಯವಿಲ್ಲದ ಬಯಲು, ನಿರಾವಯವಿಲ್ಲದ ಬಯಲು, ಅಖಂಡೇಶ್ವರನೆಂಬ ಬಯಲಿನ ಬಯಲು ಮಹಾಘನ ಬಚ್ಚಬರಿಯ ಬಯಲೊಳಗೆ ಎಚ್ಚರವಡಗಿ ನಾನೆತ್ತ ಹೋದೆನೆಂದರಿಯೆನು.
--------------
ಷಣ್ಮುಖಸ್ವಾಮಿ
ಅಣುವಿಂಗೆ ಅಣು ಮಹತ್ತಿಂಗೆ ಮಹತ್ತೆಂದೆನಿಸುವ ಲಿಂಗದೇವನ ಕಂಡೆನಯ್ಯ ಎನ್ನ ಕರಸ್ಥಲದಲ್ಲಿ. ಉಪಮಾತೀತ ವಾಙ್ಮನಕ್ಕಗೋಚರನೆಂದೆನಿಸುವ ಲಿಂಗದೇವನ ಕಂಡೆನಯ್ಯ ಎನ್ನ ಕರಸ್ಥಲದಲ್ಲಿ. ಶ್ರುತಿತತಿಯ ಶಿರದ ಮೇಲೆ ಅತ್ಯತಿಷ*ದ್ದಶಾಂಗುಲನೆಂದೆನಿಸುವ ಲಿಂಗದೇವನ ಕಂಡೆನಯ್ಯ ಎನ್ನ ಕರಸ್ಥಲದಲ್ಲಿ. ಭಾವಭರಿತ ಜ್ಞಾನಗಮ್ಯನೆಂದೆನಿಸುವ ಲಿಂಗದೇವನ ಕಂಡೆನಯ್ಯ ಎನ್ನ ಕರಸ್ಥಲದಲ್ಲಿ. ಅಖಂಡೇಶ್ವರನೆಂಬ ಅನಾದಿಪರಶಿವನ ಕಂಡೆನಯ್ಯ ಎನ್ನ ಕರಸ್ಥಲದಲ್ಲಿ.
--------------
ಷಣ್ಮುಖಸ್ವಾಮಿ
ನಲ್ಲನ ಕಾಣದೆ ತಲ್ಲಣಗೊಳತಿರ್ಪುದು ನೋಡಾ ಎನ್ನ ಮನವು. ಜಾಗ್ರಾವಸ್ಥೆಯಲ್ಲಿ ನಲ್ಲನ ಚಿಂತೆಯಿಂದ ಸುಳಿವುತಿರ್ದೆನವ್ವಾ. ಸ್ವಪ್ನಾವಸ್ಥೆಯಲ್ಲಿ ನಲ್ಲನ ಚಿಂತೆಯಿಂದೆ ಕಳವಳಿಸುತಿರ್ದೆನವ್ವಾ. ಸುಷುಪ್ತಾವಸ್ಥೆಯಲ್ಲಿ ನಲ್ಲನ ಚಿಂತೆಯಿಂದೆ ಮೈಮರೆದಿರ್ದೆನವ್ವಾ. ಸರ್ವಾವಸ್ಥೆಯಲ್ಲಿ ಅಖಂಡೇಶ್ವರನೆಂಬ ನಲ್ಲನ ಕೂಡಬೇಕೆಂಬ ಭ್ರಾಂತಿಯಿಂದೆ ಬಡವಾಗುತಿರ್ದೆನವ್ವಾ.
--------------
ಷಣ್ಮುಖಸ್ವಾಮಿ
ಇನ್ನಷ್ಟು ... -->