ಅಥವಾ

ಒಟ್ಟು 13 ಕಡೆಗಳಲ್ಲಿ , 1 ವಚನಕಾರರು , 13 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೋಡುವಲ್ಲಿ ನೆರೆ ಶೃಂಗಾರವಲ್ಲದೆ, ಕೂಡುವಲ್ಲಿ ಉಂಟೆ ? ನುಡಿವಲ್ಲಿ ಮಾತಿನ ಬಲುಮೆಯಲ್ಲದೆ, ಸಂಸಾರವ ಸಾಧನವ ಮಾಡುವಲ್ಲಿ ಮುಟ್ಟದಿಪ್ಪುದುಂಟೆ ? ನಡೆ ನುಡಿ ಸಿದ್ಧಾಂತವಾದ ಶರಣಂಗೆ ಪಡಿಪುಚ್ಚವಿಲ್ಲ, ಗುಡಿಯೊಡೆಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗದಲ್ಲಿ ಐಕ್ಯವಾದ ಶರಣಂಗೆ.
--------------
ಮನುಮುನಿ ಗುಮ್ಮಟದೇವ
ಕಂಗಳ ಸೂತಕ ಹಿಂಗಿಯಲ್ಲದೆ ಭಕ್ತನಾಗಬಾರದು. ಕಾಯದ ಸೂತಕ ಹಿಂಗಿಯಲ್ಲದೆ ಮಾಹೇಶ್ವರನಾಗಬಾರದು. ಮನದ ಸೂತಕ ಹಿಂಗಿಯಲ್ಲದೆ ಪ್ರಸಾದಿಯಾಗಬಾರದು. ಜ್ಞಾನದ ಸೂತಕ ಹಿಂಗಿಯಲ್ಲದೆ ಪ್ರಾಣಲಿಂಗಿಯಾಗಬಾರದು. ತೋರಿ ಅಡಗುವ ಭ್ರಾಂತು ಹಿಂಗಿಯಲ್ಲದೆ ಶರಣನಲ್ಲ, ಐಕ್ಯನಲ್ಲ. ಆರಡಗಿ ಮೂರರಲ್ಲಿ ಮುಗ್ಧನಾಗಿ, ಮೀರಿ ಕಾಬುದಕ್ಕೆ ಏನೂ ಇಲ್ಲದೆ, ಅದು ತಾನೆ ಯೋಗಲಿಂಗಾಂಗ, ಗುಡಿಯ ಗುಮ್ಮಟನಾಥನ ಒಡೆಯ ಅಗಮ್ಯೇಶ್ವರಲಿಂಗದಲ್ಲಿ ಐಕ್ಯವಾದ ಶರಣಂಗೆ.
--------------
ಮನುಮುನಿ ಗುಮ್ಮಟದೇವ
ಆತುರ ಹಿಂಗದವಂಗೆ ವೇಶೆಯ ಪೋಷಿಸಲೇಕೆ ? ಈಶ್ವರನನರಿಯದವಂಗೆ ಸುಕೃತದ ಪೂಜೆಯ ಪುಣ್ಯವದೇಕೆ ? ಹೇಳಿ ಹೊಕ್ಕು ಹೋದ ಮತ್ತೆ ವೇಷದ ಒಲವರವೇಕೆ ? ಭವವಿರೋದ್ಥಿಯ ಭಾವದಲ್ಲಿ ನೆಲಸಿದ ಮತ್ತೆ, ಇದಿರಿಂಗೆ ಸಂಪದಪದವೇಕೆ ? ಒಡಗೂಡಿದಲ್ಲಿ ಅಂಗದ ತೊಡಕೇಕೆ ? ಬಿಡು, ಶುಕ್ಲದ ಗುಡಿಯ ಸುಡು. ಗುಮ್ಮಟನೆಂಬ ನಾಮವ ಅಡಗು, ಅಗಮ್ಯೇಶ್ವರಲಿಂಗದಲ್ಲಿ ಗುಪ್ತನಾಗಿ, ಒಡಗೂಡಿ ಲೇಪಾಂಗವಾಗಿರು.
--------------
ಮನುಮುನಿ ಗುಮ್ಮಟದೇವ
ಹಾದಿಯ ತೋರಿದವರೆಲ್ಲರು ಭಯಕ್ಕೆ ನಿರ್ಭಯವಂತರಾಗಬಲ್ಲರೆ ? ವೇದ ಶಾಸ್ತ್ರ ಪುರಾಣ ಆಗಮಂಗಳ ಹೇಳುವರೆಲ್ಲರು ವೇದಿಸಬಲ್ಲರೆ ನಿಜತತ್ವವ ? ಹಂದಿಯ ಶೃಂಗಾರ, ಪೂಷನ ಕಠಿಣದಂದ, ಅರಿವಿಲ್ಲದವನ ಸಂಗ, ಇಂತಿವರ ಬಿಡುಮುಡಿಯನರಿ. ಗುಡಿಯ ಗುಮ್ಮಟನಾಥನ ಒಡೆಯ ಅಗಮ್ಯೇಶ್ವರಲಿಂಗದಲ್ಲಿ, ಎಡೆಬಿಡುವಿಲ್ಲದೆ ಒಡಗೂಡು.
--------------
ಮನುಮುನಿ ಗುಮ್ಮಟದೇವ
ರೂಪ ಕಂಡಲ್ಲಿ ಇಷ್ಟಕ್ಕೆ, ರುಚಿಯ ಕಂಡಲ್ಲಿ ಪ್ರಾಣಕ್ಕೆ, ಉಭಯವ ಹೆರೆಹಿಂಗಿ, ಅರ್ಪಿತವನರಿವ ಪರಿಯಿನ್ನೆಂತೊ ? ಕುಸುಮ ಗಂಧದ ಇರವು, ಫಳರಸದಿರವು ಇಷ್ಟಪ್ರಾಣ. ಇಷ್ಟವನರಿತಡೆ ಅರ್ಪಿತ ಅವಧಾನಿ. ಗುಡಿಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗದಲ್ಲಿ ಅರ್ಪಿತ ಅವಧಾನಿ[ಯ] ಇರವು.
--------------
ಮನುಮುನಿ ಗುಮ್ಮಟದೇವ
ಅರಿದು ಮರೆಯಲಿಲ್ಲ, ಕುಕ್ಕುರಜ್ಞಾನವಾಗಿ. ಇದಿರ ಕಂಡು ತಾ ಕಾಣದಂತೆ ಇರಲಿಲ್ಲ, ಗತಿಜಿಹ್ವೆಯ ಚತುಃಪಾದಿಯಂತೆ. ಕಾಲವನರಿತು, ಆ ಕಾಲದಲ್ಲಿ ಹೋಹ ಕಾಲಜ್ಞಾನಿಯಂತೆ, ಕೂಗಿ ಕರೆದು, ಕೂಲಿಸಿಕೊಂಬ ಶತಬುದ್ಧಿಪತಿ ಶಿವನಂತೆ, ಮಾಡಿದ ಅಸಿ ಕಾರುಕನೆಂದಡೆ, ಹೊಯಿದಡೆ, ಅಸುವಿನ ನಿಸಿತವ ಕೊಳದೆ ? ತನ್ಮಯವಾದಡೆ, ಮರೆದಡೆ, ಎಳೆಯದೆ ಬಿಡದು, ನಿನ್ನ ಮಾಯೆ. ಆರಿ ನಂದದ ದೀಪದಂತೆ, ರವೆಗುಂದದ ಬೆಳಗಿನಂತೆ, ಹೊರಹೊಮ್ಮದ ದಿನಕರನಂತೆ, ಮಧುಋತು ಅರತ ಮಧುಕರನಂತೆ, ವಾಯು ಅಡಗಿದ ವಾರಿಧಿಯಂತೆ, ಅಸು ಅಡಗಿದ ಘಟಚಿಹ್ನದಂತೆ, ದಿಟಕರಿಸು, ಗುಡಿಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗದಲ್ಲಿ ಪರಿಪೂರಿತವಾಗಿರು.
--------------
ಮನುಮುನಿ ಗುಮ್ಮಟದೇವ
ಗುಡಿಯೊಡೆಯಂಗೆ ಕಂಬವೊಂದು, ಬಿಗಿಮೊಳೆಯೆಂಟು, ಕಂಬಕ್ಕೆ ಕಟ್ಟಿದ ಆಧಾರ ದಾರವೈದು, ಗುಡಿಯ ಸಂದು ಹದಿನಾರು. ಕೂಟದ ಸಂಪಿನ ಪಟ್ಟಿ ಇಪ್ಪತ್ತೈದು, ಒಂಬತ್ತು ಬಾಗಿಲು, ಮುಗಿಯಿತ್ತು ಗುಡಿ. ಗುಡಿಯ ಮೇಲೆ ಮೂರು ಕಳಸ, ಮೂರಕ್ಕೊಂದೆ ರತ್ನದ ಕುಡಿವೆಳಗು. ಬೆಳಗಿದ ಪ್ರಜ್ವಲಿತದಿಂದ ಗುಡಿ ಒಡೆಯಿತ್ತು. ಗುಡಿಯೊಳಗಾದವೆಲ್ಲವು ಅಲ್ಲಿಯೆ ಅಡಗಿತ್ತು. ಕಳಸದ ಕಳೆ ಹಿಂಗಿತ್ತು, ಮಾಣಿಕದ ಬೆಳಗಿನಲ್ಲಿ. ಆ ಬೆಳಗಡಗಿತ್ತು, ಅಗಮ್ಯೇಶ್ವರಲಿಂಗದಲ್ಲಿ ಒಡಗೂಡಿತ್ತು.
--------------
ಮನುಮುನಿ ಗುಮ್ಮಟದೇವ
ತೃಷ್ಣೆ ಹಿಂಗಿದ ಲಿಂಗಾಂಗಿಯ ಅಂಗದ ಇರವು. ಬಸುರಿಯ ಗರ್ಭದಲ್ಲಿ ತೋರುವ ಶಿಶುವಿನ ದೆಸೆಯ ಇರವು. ಅನ್ನರಸಕೆ ಭಿನ್ನವಾಗಿ ಬಾಯಿಯಿಲ್ಲದೆ, ತಾಯ ಪಥ್ಯದಲ್ಲಿ ಆತ್ಮಂಗೆ ಸುಖವಾಗಿ ಇಪ್ಪುದು. ಘಟಮಟ ಭಿನ್ನವಹನ್ನಕ್ಕ ಸುಖದುಃಖ. ಶಿಶುವ ತಾಳಿದ್ದ ಆ ತೆರ, ಲಿಂಗದ ಎಸಕವನರಿವವೊಲು, ಇಷ್ಟಪ್ರಾಣ ಹೆರೆಹಿಂಗದ ಮೂರ್ತಿ ಧ್ಯಾನ ನೆಲೆಗೊಂಡು, ಕಂಗಳು ಗರ್ಭ, ಮನ ಶಿಶುವಾಗಿ, ಲಿಂಗವೆಂಬ ಅಂಗದ ತೊಟ್ಟಿಲಲ್ಲಿ ವಿಶ್ವಾಸ ಘನಲಿಂಗ ಇಂಬಿಟ್ಟು ಕಂಡೆ, ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗದಲ್ಲಿ.
--------------
ಮನುಮುನಿ ಗುಮ್ಮಟದೇವ
ನೋಡುವ ನಯನ ತೆರಪಾದಡೇನು, ಆಡುವ ಬೊಂಬೆಯಿಲ್ಲದ ಮತ್ತೆ ? ಗಾಡದ ಘಟ ಇದ್ದಡೇನು, ಮಾತಾಡುವ ಆತ್ಮನಿಲ್ಲದಂತೆ. ರೂಢಿಯಲ್ಲಿ ಬೋಧಕರಿದ್ದಡೇನು, ನಿಗಮಗೋಚರನ ವೇದಿಸಬೇಕು. ಇದು ಬೋಧಕ ಗುರುವಿನ ಅರಿವು, ಇದು ಸಿದ್ಧ. ಗುಡಿಯ ಗುಮ್ಮಟನಾಥನ ಒಡೆಯ ಅಗಮ್ಯೇಶ್ವರಲಿಂಗದಲ್ಲಿ ಗುರುನಿರ್ವಾಣಸ್ಥಲ.
--------------
ಮನುಮುನಿ ಗುಮ್ಮಟದೇವ
ಸಂಸಾರದಲ್ಲಿ ತೋರುವ ಸುಖದುಃಖಭೋಗಾದಿಭೋಗಂಗಳು ಇವಾರಿಂದಾದವೆಂದು ಅರಿದ ಮತ್ತೆ, ಬಾಗಿಲ ಕಾಯ್ದು ಕೂಗಿಡಲೇಕೆ ? ಎಲೆ ಅಲ್ಲಾಡದು, ಅವನಾಧೀನವಲ್ಲದಿಲ್ಲಾ ಎಂದು ಎಲ್ಲರಿಗೆ ಹೇಳುತ ಭವಬಡಲೇಕೆ ? ಹೋಯಿತ್ತು ಬಾಗಿಲಿಗೆ ಬಂದಾಗ ಭಾವಜ್ಞಾನ. ಭಾವ ಗುಡಿಯೊಡೆಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗದಲ್ಲಿ ಅರಿದು, ಹರಿದು ಬದುಕಿರಣ್ಣಾ.
--------------
ಮನುಮುನಿ ಗುಮ್ಮಟದೇವ
ಬಯಲು ಬ್ರಹ್ಮಾಂಡಂಗಳಿಲ್ಲದಲ್ಲಿ, ಯುಗಜುಗಂಗಳು ತಲೆದೋರದಲ್ಲಿ, ಅಲ್ಲಿಂದಾಚೆ ಹುಟ್ಟಿತ್ತು. ಕರಚರಣಾದಿ ಅವಯವಂಗಳಿಲ್ಲದ ಶಿಶು. ಬಲಿವುದಕ್ಕೆ ಬಸಿರಿಲ್ಲ, ಬಹುದಕ್ಕೆ ಯೋನಿಯಿಲ್ಲ, ಮಲಗುವುದಕ್ಕೆ ತೊಟ್ಟಿಲಿಲ್ಲ. ಹಿಂದು ಮುಂದೆ ಇಲ್ಲದ, ತಂದೆ ತಾಯಿಯಿಲ್ಲದ ತಬ್ಬಲಿ. ನಿರ್ಬುದ್ಧಿ ಶಿಶುವಿಂಗೆ ಒಸೆದು ಮಾಡಿಹೆನೆಂಬವರು ವಸುಧೆಯೊಳಗೆ ಇದು ಹುಸಿಯೆಂದೆ. ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗದಲ್ಲಿ ಭರಿತನಾದವಂಗಲ್ಲದಿಲ್ಲ.
--------------
ಮನುಮುನಿ ಗುಮ್ಮಟದೇವ
ಆರೂ ಇಲ್ಲದ ಮನೆಯಲ್ಲಿ ಹಾದರಿಗ ಹೊಕ್ಕು, ಹೆಂಡತಿಯಿಲ್ಲದ ಪುಂಡ ಬಂದು ಅವನಂಗವ ಹೊಯ್ಯಲಾಗಿ, ಕಂಡರು ಗ್ರಾಮದ ಪುಂಡೆಯರೆಲ್ಲರೂ ಕೂಡಿ. ಮಿಂಡನೊಬ್ಬನೆ ಸತ್ತ. ಅಂಗವಿಲ್ಲದ ಕಳವು, ಹೆಂಗೂಸು ಇಲ್ಲದ ಹಾದರ, ಈ ಊರ ಅಂಗವಲ್ಲಾ ಎಂದು, ಲಿಂಗವಂತರೆಲ್ಲರೂ ಕೂಡಿ ಕೊಂಡಾಡುತ್ತಿದ್ದುದ ಕಂಡೆ. ಗೂಡಿನ ಗುಮ್ಮಟನಾಥನ ಒಡೆಯ ಅಗಮ್ಯೇಶ್ವರಲಿಂಗದಲ್ಲಿ, ನಂಬಲರಿಯದ ಸಂದೇಹಿಗಳಿಗುಂಟೆ ಮಹಾಸಂಗದ ಕೂಟ ?
--------------
ಮನುಮುನಿ ಗುಮ್ಮಟದೇವ
ಹೇಮದ ಬಣ್ಣ, ನಾನಾ ಬಗೆಯಲ್ಲಿ ತೋರುವ ಪರಿಕೂಟದ ಕಪಟದಿಂದ, ಕಪಟವ ಕಳೆದು ನಿಂದಲ್ಲಿ, ಅದೇತರ ಗುಣ ? ಒಂದಲ್ಲದೆ ಈ ಪಥ ತಪ್ಪದು, ಗುಡಿಯೊಡೆಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗದಲ್ಲಿ ಅಂಗವ ಕಳೆದು ಉಳಿದ ಶರಣಂಗೆ.
--------------
ಮನುಮುನಿ ಗುಮ್ಮಟದೇವ
-->