ಅಥವಾ

ಒಟ್ಟು 17 ಕಡೆಗಳಲ್ಲಿ , 12 ವಚನಕಾರರು , 17 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರಿತು ಜನ್ಮವಾದವರಿಲ್ಲ ಸತ್ತು ಮರಳಿ ತೋರುವರಿಲ್ಲ. ದುರಭಿಮಾನವ ಹೊತ್ತು ಅಘಟಿತ ಘಟಿತವ ನುಡಿವಿರಿ. ಈ ದೇಹವಿಡಿದು ನುಡಿವ ಪ್ರಪಂಚಿಗಳನೇನೆಂಬೆ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಅಗಜೇಶ ಅಜಹರಿಸುರರೊಂದ್ಯ, ಜಗದಗಲಾತ್ಮ ಅಮೃತಕರ ಅಘಗಿರಿಗೊಜ್ರ ಅನಲಾಕ್ಷ ಅನಾಮಯ ಅಚಲ ಅಗಣಿತ ಅತಿಸತ್ಯ ಅಭವ ಅಭಂಗ ಅತಿಪರಾಕ್ರಮ ಆನಂದ ಅಪರಂಪಾರ ಆದಿಸ್ವಯಂಭೂ ಆಧ್ಯಾತ್ಮಪರಂಜ್ಯೋತಿ ಅಕಳಂಕ ಅಮಲ ಅದೃಶ್ಯ ಅಕಲ್ಪ ಅಭವ ಅರುಣೋದಯ ಅನುಪಮ ಅಘಟಿತ ಅಚರಿತ್ರ ಐಶ್ವರ್ಯ ಅದ್ಭುತ ಆದ್ಯ ಆರಾಧ್ಯ ಅಂಗಸಂಗ ಅಮರಗಣವಂದ್ಯ ರಕ್ಷಿಪುದೆಮ್ಮ ಜಯಜಯ ಹರಹರ ಶಿವಶಿವ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಅಘಟಿತ ಘಟಿತನೆ ವಿಪರೀತ ಚರಿತ್ರನೆ, ಸಾವರ ಕೈಯಲ್ಲಿ ಪೂಜೆಗೊಂಬರೆ ಲಿಂಗಯ್ಯಾ ? ಸಾವರ ನೋವರ ಕೈಯಲ್ಲಿ ಪೂಜೆಗೊಂಬುದು ಲಜ್ಜೆ ಕಾಣಾ _ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಇರುವೆಯ ಮಸ್ತಕದ ಮೇಲೆ ಇರುತಿಪ್ಪ ಶಿವಾಲಯವ ಕಂಡೆನಯ್ಯ. ಆ ಶಿವಾಲಯದೊಳಗೆ ಅಘಟಿತಲಿಂಗವಿಪ್ಪುದು ನೋಡಾ. ಆ ಲಿಂಗದ ಕಿರಣದೊಳಗೆ ರಾಜಬೀದಿಯ ಕಂಡೆನಯ್ಯ. ಆ ರಾಜಬೀದಿಯಲ್ಲಿ ಒಬ್ಬ ಪುರುಷನು ಐವರ ಕೂಡಿಕೊಂಡು ಮಹಾಮೇರುವೆಯ ಹತ್ತಿ, ಅಘಟಿತ ಲಿಂಗಾರ್ಚನೆಯ ಮಾಡುತಿಪ್ಪನು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಸಕಲಕ್ರಿಯೆಗಳಿಗಿದು ಕವಚ, ಸಕಲವಶ್ಯಕ್ಕಿದು ಶುಭತಿಲಕ, ಸಕಲಸಂಪದಕ್ಕೆ ತಾಣವಿದು, ಅಘಟಿತ ಘಟಿತವೆನಿಸುವ ಅನುಪಮ ತ್ರಿಪುಂಡ್ರ. ಅಣುಮಾತ್ರ ವಿಭೂತಿಯ ಪಣಿಯೊಳಿಡೆ ಎಣಿಕೆಯಿಲ್ಲದ ಭವಪಾಶ ಪರಿವುದು. ತ್ರಿಣಯ ನೀನೊಲಿದು ಧರಿಸಿದೆಯೆಂದೆನೆ, ಆನು ಧರಿಸಿ ಬದುಕಿದೆ ಕೂಡಲಸಂಗಯ್ಯಾ.
--------------
ಬಸವಣ್ಣ
ಅಘಟಿತ ಘಟಿತನ ಒಲವಿನ ಶಿಶು ಕಟ್ಟಿದೆನು ಜಗಕ್ಕೆ ಬಿರಿದನು. ಕಾಮ ಕ್ರೋಧ ಲೋಭ ಮೋಹ ಮದ ಮತ್ಸರಂಗಳಿಗೆ ಇಕ್ಕಿದೆನು ಕಾಲಲಿ ತೊಡರನು. ಗುರುಕೃಪೆಯೆಂಬ ತಿಗುರನಿಕ್ಕಿ ಮಹಾಶರಣೆಂಬ ತಿಲಕವನಿಕ್ಕಿ ನಿನ್ನ ಕೊಲುವೆ ಗೆಲುವೆ ಶಿವಶರಣೆಂಬ ಅಲಗ ಕೊಂಡು. ಬಿಡು ಬಿಡು ಕರ್ಮವೆ, ನಿನ್ನ ಕೊಲ್ಲದೆ ಮಾಣೆನು. ಕೆಡಹಿಸಿಕೊಳ್ಳದೆನ್ನ ನುಡಿಯ ಕೇಳಾ. ಕೆಡದ ಶಿವಶರಣೆಂಬ ಅಲಗನೆ ಕೊಂಡು ನಿನ್ನ ಕೊಲುವೆ ಗೆಲುವೆ ನಾನು. ಬ್ರಹ್ಮಪಾಶವೆಂಬ ಕಳನನೆ ಸವರಿ, ವಿಷ್ಣು ಮಾಯೆಯೆಂಬ ಎಡೆಗೋಲನೆ ನೂಕಿ, ಎನ್ನೊಡೆಯ ಚೆನ್ನಮಲ್ಲಿಕಾರ್ಜುನಯ್ಯ ತಲೆದೂಗಲಿ ಕಾದುವೆನು ನಾನು.
--------------
ಅಕ್ಕಮಹಾದೇವಿ
ಅಂತರಂಗದ ಬೆಳಗಿನೊಳು ನಿಂತಾತನೆ ನಿರ್ಮಳಜ್ಞಾನಿ ನೋಡಾ. ಆ ನಿರ್ಮಳಜ್ಞಾನಿಯ ಸಂಗದಿಂದ ಅಗಮ್ಯ ಅಗೋಚರ ಅಘಟಿತ ಅಪ್ರಮಾಣ ಲಿಂಗವು ತೋರಲುಪಟ್ಟಿತ್ತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಹಸಿವ ಕೊಂದಿಹೆವೆಂದು ತುಪ್ಪ ಹಾಲು ಸಕ್ಕರೆ ಹಣ್ಣು ಮುಂತಾದ ಫಲಾಹಾರಮಂ ಕೊಂಡು, ಫಲಕ್ಕೆ ಬಾರೆವೆಂದು ಬಲೋತ್ತರವ ನುಡಿದು, ಬಲ್ಲವರಾದೆವೆಂಬ ಗೆಲ್ಲಗೂಳಿಗಳು ನೀವು ಕೇಳಿರೊ. ಉರಿವ ಬೆಂಕಿಗೆ ತರಿದುಪ್ಪ ತಿಲ ಮೊದಲಾದವರು ಹಾಕಿ, ಅನಲನ ಕೆಡಿಸಿಹೆವೆಂಬ ಕಲಿಕೆಯ ಮಾತಿನ ನೆರೆ ಬಾಲಕರ ಕಂಡು, ಇವರಿಗೆ ಅರಿಕೆಯಿಲ್ಲವೆಂದೆ. ಗರಿಕೆಯನಗೆದು ಕೊರಡನಿರಿಸಿದಂತೆ, ಇದಾರಿಗೆಯೂ ಅಘಟಿತ ನೋಡಾ. ಪ್ರಕಟದೂರ ಸಕೀಲಸಾರ ಮುಕುರಗುಣನಿಧಿಯೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅಸಿ ಕೃಷಿ ಮಸಿ ಯಾಚಕ ವಾಣಿಜ್ಯತ್ವವ ಮಾಡುವುದು ಲೇಸು. ಹುಸಿ ವೇಷವ ತೊಟ್ಟು ಅಸುವ ಹೊರೆವವನ ಘಟ ಪಿಸಿತದ ತಿತ್ತಿಯಂತೆ ಅಘಟಿತ, ಅವನನೊಲ್ಲ ಅರ್ಕೇಶ್ವರಲಿಂಗ.
--------------
ಮಧುವಯ್ಯ
ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವ ಪರಶಿವರೆಂಬ ಷಡ್ವಿಧಮೂರ್ತಿಗಳಿಂದತ್ತತ್ತ, ಅಗಮ್ಯ ಅಪ್ರಮಾಣ ಅಗೋಚರ ಅಘಟಿತ ತಾನೇ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಂಗೈಯಗಲದ ಪಟ್ಟಣದೊಳಗೆ ಆಕಾಶದುದ್ದ ಎತ್ತು ತಪ್ಪಿತ್ತು. ಅರಸಹೋಗಿ ಹಲಬರು ಹೊಲಬುದಪ್ಪಿ, ತೊಳಲಿ ಬಳಲುತ್ತೈದಾರೆ. ಆರಿಗೆ ಮೊರೆಯಿಡುವೆ, ಅಗುಸಿಯನಿಕ್ಕುವೆ. ಜಲಗಾರನ ಕರೆಸಿ, ಜಲವ ತೊಳೆಯಿಸಿ ಅಘಟಿತ ಘಟಿತ ನಿಜಗುರು ಭೋಗೇಶ್ವರಾ, ಅರಸಿಕೊಂಡು ಬಾರಯ್ಯಾ.
--------------
ಭೋಗಣ್ಣ
ಲೋಕವ ಕುರಿತಲ್ಲಿ ಆಚಾರದ ಮಾತು. ತನ್ನ ಕುರಿತಲ್ಲಿ ಅನಾಚಾರದ ಮಾತು. ಆಚಾರಸಂಪನ್ನರನ್ನೆಲ್ಲಿಯೂ ಕಂಡೆ. ಅನಾಚಾರಸಂಪನ್ನರನ್ನೆಲ್ಲಿಯೂ ಕಾಣೆ. ಭಕ್ತ ಭವಿಯಾಗಬಹುದಲ್ಲದೆ, ಭವಿ ಭಕ್ತನಾಗಬಾರದು. ಬೆಣ್ಣೆಗೆ ತುಪ್ಪವಲ್ಲದೆ ತುಪ್ಪ ಬೆಣ್ಣೆಯಪ್ಪುದೆ? ತರು ಬೆಂದಲ್ಲಿ ಕರಿಯಲ್ಲದೆ, ಕರಿ ಬೆಂದಲ್ಲಿ ತರು ಉಂಟೆ? ಇದು ಅಘಟಿತ, ಅನಾಮಯ, ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಅಜ್ಞಾನಿಗಳಪ್ಪವರ ಎನ್ನವರೆಂದಡೆ, ಅಘಟಿತ ನಿಮ್ಮಾಣೆ, ಕೇಳಾ ತಂದೆ. ಕರ್ತೃವೆ ಎನ್ನ ಮನದಲ್ಲಿ ಬುದ್ಧಿಗೊಡಾ ಎಂದು ಉತ್ತರಗೊಡುವ ತಂದೆ. ನಿನಗೆ ಶರಣೆಂದು ನಂಬಿದವರನು, ಎನ್ನವರೆಂಬೆನು ಕೇಳಾ, ಶ್ರೀಮಲ್ಲಿಕಾರ್ಜುನ ತಂದೆ.
--------------
ಮಲ್ಲಿಕಾರ್ಜುನ ಪಂಡಿತಾರಾಧ್ಯ
ಅಯ್ಯಾ, ನಿಮ್ಮ ಶರಣರ ನಿಲವ ಸ್ವರ್ಗ ಮತ್ರ್ಯ ಪಾತಾಳದೊಳಗೆ ಬಲ್ಲವರಿಲ್ಲವಯ್ಯಾ, ಅಘಟಿತ ಘಟಿತರು, ಅಖಂಡಿತ ಮಹಿಮರು, ನಿಜದಲ್ಲಿ ನಿರ್ಲೇಪ ಭಾವಕರು. ಕೂಡಲಸಂಗಮದೇವಾ, ನಿಮ್ಮ ಶರಣರ ನಿಲವನರಿವಡೆ ನಾನೇತರವನಯ್ಯಾ.
--------------
ಬಸವಣ್ಣ
ಉದುಮದಾಕ್ಷರದಲ್ಲಿ ಉರಿದು ಸಾವ ಪ್ರಾಣಿಗಳು ಅಖಂಡ ಪರಿಪೂರ್ಣಜ್ಞಾನವನವರೆತ್ತ ಬಲ್ಲರೊ? ಕುಲುಮೆಯಾಕಾರಕ್ಕೆ ಬಾಯಿಗೆ ಬಹವರೆಲ್ಲಾ ಕಾಲನ ಕಮ್ಮಟ್ಟಕ್ಕೆ ಗುರಿಯಾದರು. ತತ್ವ ತೂರ್ಯಾತೀತದಿಂದತ್ತತ್ತಲಾದ ಅಘಟಿತ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎನುತಿದ್ದನು.
--------------
ಘಟ್ಟಿವಾಳಯ್ಯ
ಇನ್ನಷ್ಟು ... -->