ಅಥವಾ

ಒಟ್ಟು 23 ಕಡೆಗಳಲ್ಲಿ , 15 ವಚನಕಾರರು , 22 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪರಮಾರ್ಥದಲ್ಲಿ ಪರೀಕ್ಷಿಸಿ ತಿಳಿದು ನೋಡುವಡೆ ಗುರುವಾರೂ ಇಲ್ಲ ಚೋಳ ತಪ್ಪಿಸಿ. ಪರಮಾರ್ಥದಲ್ಲಿ ಪರೀಕ್ಷಿಸಿ ತಿಳಿದು ನೋಡುವಡೆ ಭಕ್ತರಾರೂ ಇಲ್ಲ ಬಸವಣ್ಣ ತಪ್ಪಿಸಿ. ಪರಮಾರ್ಥದಲ್ಲಿ ಪರೀಕ್ಷಿಸಿ ತಿಳಿದು ನೋಡುವಡೆ ನಿರ್ವಾಣಿಗಳಾರೂ ಇಲ್ಲ ಅಕ್ಕಗಳು ತಪ್ಪಿಸಿ. ಪರಮಾರ್ಥದಲ್ಲಿ ಪರೀಕ್ಷಿಸಿ ತಿಳಿದು ನೋಡುವಡೆ ಹಿರಿಯರಾರೂ ಇಲ್ಲ ಚೀಲಾಳ ತಪ್ಪಿಸಿ. ಪರಮಾರ್ಥದಲ್ಲಿ ಪರೀಕ್ಷಿಸಿ ತಿಳಿದು ನೋಡುವಡೆ ಗಂಭೀರರಾರೂ ಇಲ್ಲ ಅಜಗಣ್ಣ ತಪ್ಪಿಸಿ. ಇಂತೀ ಐದು ತೆರದನುವು ಆರಿಗೂ ಇಲ್ಲವೆಂದೆನಬೇಡ. ಅವರ ಕರುಣ ಉಳ್ಳವರಿಗೆ ಆ ಮುಕ್ತಿಯುಂಟು. ಆ ಐವರ ಕಾರುಣ್ಯದ ಪ್ರಸಾದವ ಕೊಂಡು ನಾನು ಬಯಲಾದೆನು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಕಂಗಳ ತಿರುಳನುರುಹಿ, ಆದಿಯ ಬೀಜವ ವೇದವರಿಯಲ್ಲಿ ಸುಟ್ಟು, ಆ ಭಸ್ಮವ ಹಣೆಯಲ್ಲಿ ಧರಿಸಿ, ಅರಳಿಯ ಮರದೊಳಗಾಡುವ ಗಿಳಿಯ ಎಲೆ ನುಂಗಿತ್ತ ಕಂಡೆ. ಅರಳಿ ಹೂವಾಯಿತ್ತು, ಫಲ ನಷ್ಟವಾಯಿತ್ತು ನೋಡಾ. ಎಲೆ ಉದುರಿತ್ತು, ಆ ಮರದ ಮೊದಲಲ್ಲಿಗೆ ಕಿಚ್ಚನಿಕ್ಕಿ, ಬ್ರಹ್ಮನ ತಲೆಯಲ್ಲಿ ಬೆಣ್ಣೆಯ ಬೆಟ್ಟ ರುದ್ರಲೋಕಕ್ಕೆ ದಾಳಿ ಮಾಡಿ, ಗ್ರಾಮದ ಮಧ್ಯದೊಳಗೊಂದು ಕೊಂಡವ ಸುಟ್ಟು, ಯಜ್ಞ ಪುರುಷನ ಹಿಡಿದು, ಕೈ ಸಂಕಲೆಯನಿಕ್ಕಿ, ಗಂಗೆವಾಳುಕರಿಗೆ ಕೈವಲ್ಯವನಿತ್ತು, ಅಷ್ಟಮೂರ್ತಿಯೆಂಬ ನಾಮವ ನಷ್ಟವ ಮಾಡಿ, ವಿಶ್ವಮೂರ್ತಿಯ ಪಾಶವಂ ಪರಿದು, ಮುಕ್ತಿ ರಾಜ್ಯಕ್ಕೆ ಪಟ್ಟಮಂ ಕಟ್ಟಿ, ರುದ್ರಲೋಕಕ್ಕೆ ದಾಳಿ ಮಾಡಿ, ಆ ಮೂರ್ತಿಗಣೇಶ್ವರರಿಗೆ ಐಕ್ಯಪದವನಿತ್ತು, ಬಟ್ಟಬಯಲ ಕಟ್ಟಕಡೆಯೆನಿಪ ಸಿದ್ಭ ನಿಜಗುರು ಭೋಗಸಂಗನಲ್ಲಿ ಸಯವಾದ ಅಲ್ಲಮ ಅಜಗಣ್ಣ ಚೆನ್ನಬಸವ ಬಸವರಾಜ ಮುಖ್ಯವಾದ ಲಿಂಗಾಂಗಿಗಳ ಪಾದಕ್ಕೆ ನಮೋ ನಮೋ ಎಂದು ಬದುಕಿದೆ.
--------------
ಭೋಗಣ್ಣ
ಪಾದೋದಕ ಪಾದೋದಕವೆಂದು ಕೊಂಬಿರಿ, ಎಲ್ಲರಿಗೆ ಎಲ್ಲಿಹುದೋ ಪಾದೋದಕ ? ಈ ಪಾದೋದಕದ ಭೇದವ ಬಲ್ಲರೆ ಹೇಳಿರಿ, ಅರಿಯದಿದ್ದರೆ ಕೇಳಿರಿ. ಪಾದೋದಕವೆಂಬುದು ಪಾತಾಳಾದಿ ಪರಲೋಕಾಂತ್ಯಮಾದ ಅಖಿಳಕೋಟಿ ಬ್ರಹ್ಮಾಂಡಗಳ ಗಬ್ರ್ಥೀಕರಿಸಿಕೊಂಡಿರ್ದ ಪರಿಪೂರ್ಣತ್ವವೇ ಪಾದೋದಕ. ಪಾದೋದಕವೆಂಬುದು ಶರಣನ ಸರ್ವಾಂಗವನೊಳಕೊಂಡು ಥಳಥಳಿಸಿ ಹೊಳೆಯುವ ಚಿದ್ರಸವೇ ಪಾದೋದಕ. ಇಂತಪ್ಪ ಪಾದೋದಕದ ಭೇದ ಬಲ್ಲವರು ನಿಜಗುಣಸ್ವಾಮಿಗಳು ಅಜಗಣ್ಣ ತಂದೆಗಳು ನಿಜಮಂಚಣ್ಣ ಮೊದಲಾದ ಅಸಂಖ್ಯಾತ ಮಹಾಪ್ರಮಥಗಣಂಗಳು ಬಲ್ಲರಲ್ಲದೆ, ಸತ್ತುಹೋಗುವ ಹೇಸಿಮೂಳ ಕತ್ತಿಗಳೆತ್ತ ಬಲ್ಲರಯ್ಯಾ ? ಇಂತಪ್ಪ ಪರಾಪರ ನಾಮವನುಳ್ಳ ಪರಂಜ್ಯೋತಿಸ್ವರೂಪವಾದ ಪರತತ್ವ ಪಾದೋದಕವನರಿದು ಕೊಡಬಲ್ಲರೆ ಗುರುಲಿಂಗಜಂಗಮವೆಂದೆನ್ನಬಹುದು. ಇಂತೀ ವಿಚಾರವ ತಿಳಿದುಕೊಳ್ಳಬಲ್ಲರೆ ಸತ್ಯಸದ್ಭಕ್ತರೆಂದೆನ್ನಬಹುದು. ಇಂತಪ್ಪ ಭೇದವನರಿಯದೆ ಮತಿಭ್ರಷ್ಟ ಮರುಳಮಾನವರು ಆಣವಾದಿ ಕಾಮಿಕಾಂತ್ಯಮಾದ ಮಲತ್ರಯದ ಬಲೆಯಲ್ಲಿ ಶಿಲ್ಕಿ, ದೇಹಾದಿ ಮನಾಂತ್ಯಮಾದ ಅರುವತ್ತಾರುಕೋಟಿ ಕರಣಾದಿ ಗುಣಂಗಳು ಮೊದಲಾದ ಸಕಲಸಂಸಾರವಿಷಯಲಂಪಟದಲ್ಲಿ ಮಗ್ನರಾಗಿ, ಮಂದಮತಿ ಅಧಮ ಜಂಗಮದ ಕಾಲ ತ್ರಿಕಾಲದಲ್ಲಿ ಜಲದಿಂದ ತೊಳೆದು ಪಾದೋದಕವೆಂದು ಬಟ್ಟಲ ಬಟ್ಟಲ ತುಂಬಿ ನೀರ ಕುಡಿದು ತಮ್ಮ ದೇಹದ ಪ್ರಾಣಾಗ್ನಿಯ ತೃಷೆಯನಡಗಿಸಿಕೊಂಡು ಗಳಿಗೆ ತಾಸಿನ ಮೇಲೆ ಮೂತ್ರವಿಸರ್ಜಿಸಿ ಮಡಿಮೈಲಿಗೆಯೆಂದು ನುಡಿಯುವ ಮಲದೇಹಿಗಳ ಮೂಗ ತುಟಿತನಕ ಕೊಯ್ದು ಇಟ್ಟಂಗಿಯಲೊರಸಿ ಕಟಬಾಯಿ ಸೀಳಿ ಕನ್ನಡಿಯತೋರಿ ಮೇಲಮುಂದಾಗಿ ಅಟ್ಟೆಂದ ಕಾಣಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನ ಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ನಿಚ್ಚಪ್ರಸಾದ ಅಚಲನಿರ್ವಯಲಕ್ಕೆ ಪೆಸರು. ಅಚ್ಚಪ್ರಸಾದ ಅಚಲ-ಅದ್ವಯ-ಅಭಿನ್ನ-ಅಪ್ರಮಾಣಕ್ಕೆ ಪೆಸರು. ಈ ಉಭಯಸಂಬಂಧವೇ ಸುಮಯವೆನಿಸುವುದು. ಆ ಸಮಯಪ್ರಸಾದವೆ ಸಚ್ಚಿದಾನಂದ, ಸಮ್ಯಜ್ಞಾನ, ಸತ್ಕ್ರಿಯಾ ಸದಮಲಾನಂದಕ್ಕೆ ಪೆಸರು. ಈ ವಿಚಾರವ ಶ್ರುತಿ-ಗುರು-ಸ್ವಾನುಭಾವದಿಂದರಿದು ಈ ತ್ರಿವಿಧಪ್ರಸಾದವ ಭೋಗಿಸುವ ಶರಣನೆ ನಿಜಪ್ರಸಾದ ನೋಡ. ಈ ಚತುರ್ವಿಧಪ್ರಸಾದವ ಭೋಗಿಸಬಲ್ಲಾತನೆ ಸದ್ಗುರುಲಿಂಗಜಂಗಮ ಸ್ವರೂಪು. ಈ ಸ್ವರೂಪದಿಂದ ಪಡದನುಭವಿಸಬಲ್ಲಾತನೆ ಆದಿಪ್ರಸಾದಿ, ಅಂತ್ಯಪ್ರಾದಿ, ಸೇವ್ಯಪ್ರಸಾದಿ, ಮಹಾನಿಜಪ್ರಸಾದಿ ನೋಡ. ಈತನೇ ಪಿಂಡಬ್ರಹ್ಮಾಂಡ ಸಕಲಲೋಕಂಗಳಿಗೆ, ಸಕಲತತ್ವಂಗಳಿಗೆ ಸಕಲಾಗಮಶಾಸ್ತ್ರಂಗಳಿಗೆ, ಏಕಮೇವಪರಬ್ರಹ್ಮ ಸ್ವರೂಪ ನೋಡ. ಅವರಾರೆಂದಡೆ :ಬಸವಣ್ಣ, ಚನ್ನಬಸವಣ್ಣ, ಪ್ರಭುದೇವರು, ಮರುಳಶಂಕರ, ಸಿದ್ಧರಾಮಯ್ಯ, ಅಜಗಣ್ಣ ಮುಖ್ಯವಾದ ಅಸಂಖ್ಯಾತಮಹಾಗಣಂಗಳು ನೋಡಾ, ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಈ ಶಿವಷಡಕ್ಷರಮಂತ್ರದಿಂದೆ ಸಾನಂದಋಷಿಯು ನರಕಜೀವಿಗಳನ್ನೆಲ್ಲ ಹರನ ಓಲಗದಲ್ಲಿರಿಸಿದನು ನೋಡಾ. ಈ ಶಿವಷಡಕ್ಷರಮಂತ್ರದಿಂದೆ ತಿರುಜ್ಞಾನಸಂಬಂಧಿಗಳು ಕೂನಪಾಂಡ್ಯನ ವಾದವ ಗೆದ್ದರು ನೋಡಾ. ಈ ಷಡಕ್ಷರಮಂತ್ರದಿಂದೆ ಶಿವಜಾತಯ್ಯನ ಶಿಷ್ಯ ಮಂತ್ರಜಾತಯ್ಯನು ಮಹಾಬಯಲನೈದಿದನು ನೋಡಾ. ಈ ಶಿವಷಡಕ್ಷರಮಂತ್ರದಿಂದೆ ಅಜಗಣ್ಣ ತಂದೆಗಳು ನಿಜಲಿಂಗೈಕ್ಯರಾದರು ನೋಡಾ. ಇಂತಪ್ಪ ಶಿವಷಡಕ್ಷರಮಂತ್ರವನು ಎನ್ನಂತರಂಗದ ಅರುಹಿನ ಮನೆಯಲ್ಲಿ ಬಚ್ಚಿಟ್ಟುಕೊಂಡು ಓಂ ನಮಃಶಿವಾಯ, ಓಂ ನಮಃಶಿವಾಯ, ಓಂ ನಮಃಶಿವಾಯ ಎಂದೆನುತಿರ್ದೆನಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಅರುವಿನ ಮಂದಿರದೊಳಡಗಿರ್ದ ಅಜಗಣ್ಣ ಮೂರುತಿಯ ಮೂಜಗದ ಮೇಲೆ ಸ್ಥಾಪಿಸಿ, ಗಜಬಜೆಯ ಬೆಳಗ ಹರಹಿದಲ್ಲಿ ಶ್ರದ್ಧೆಯೆಡೆಗೊಂಡಿತ್ತು, ನಿಷೆ*ಯಾವರಿಸಿತ್ತು, ಸಾವಧಾನ ಸಮವೇದಿಸಿತ್ತು, ಅನುಭಾವ ಮುಸುಗಿತ್ತು, ಆನಂದ ತಲೆದೋರಿತ್ತು. ಸಮರಸದಲ್ಲಿ ನಿಂದು ಪರವಶನಾದಲ್ಲಿ ಮುಂದೆ ಗುರುನಿರಂಜನ ಚನ್ನಬಸವಲಿಂಗವೆನ್ನ ಕೈಪಿಡಿದ ಮಹಾಲಿಂಗವಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಚೆನ್ನಯ್ಯ ನನ್ನಯ್ಯ ಸುಜ್ಞಾನ ಅನ್ನದದೇವರಿಗೆ ಚೆನ್ನಬಸವಣ್ಣ ಚೇರಮರಾಯ ನಂಬೆಣ್ಣಗೆ ಅಲ್ಲಮ ಅಜಗಣ್ಣ ಜಗದೇವಯ್ಯ ಮಲುಹಣ ಮಲುಹಣಿಗೆ ಮಹಾದೇವನೊಲಿದ ಮಹಿಮ ಮಹಾತ್ಮರಿಗೆ ಶರಣು ಶರಣಾರ್ಥಿ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಪ್ರಸಾದ ಪ್ರಸಾದವೆಂದು ನುಡಿವಿರಿ; ಎಲ್ಲರಿಗೆಲ್ಲಿಹದೊ ಪ್ರಸಾದ ? ಈ ಪ್ರಸಾದದ ಭೇದವ ಬಲ್ಲರೆ ಚನ್ನಬಸವಣ್ಣ. ಈ ಪ್ರಸಾದದ ಭೇದವ ಬಲ್ಲರೆ ಬಸವಣ್ಣ. ಈ ಪ್ರಸಾದದ ಭೇದವ ಬಲ್ಲರೆ ಪ್ರಭುದೇವರು. ಈ ಪ್ರಸಾದದ ಭೇದವ ಬಲ್ಲರೆ ಮರುಳಶಂಕರದೇವ ಸಿದ್ಧರಾಮ ಅಜಗಣ್ಣ ಮುಕ್ತಾಂಗನೆ ಅಕ್ಕಮಹಾದೇವಿ. ಮಿಕ್ಕಿನ ಜಡಜೀವಜಾಳುಗಳಿಗೆಲ್ಲಿಹದೊ ಪ್ರಸಾದ ? ಗಡಿಗೆಯೊಳಗಿದ್ದಾಗ ಬೋನ, ಹರಿವಾಣಕ್ಕೆ ಬಂದಾಗ ನೈವೇದ್ಯ, ಜಂಗಮ ಮುಟ್ಟಿ ಗ್ರಹಿಸಿದಾಗಳೆ ಪ್ರಸಾದವೆಂದು ಕೊಂಡು, ತಮ್ಮ ಉದರಕ್ಕೆ ಹೊಂದಿದಲ್ಲಿಯೆ ದುರ್ಗಂಧವಾಯಿತ್ತೆಂದು, ಜಲ ಮಲವ ಬಿಟ್ಟುಬಂದೆವು ಹೊರಗಗ್ಘಣಿಯ ತನ್ನಿಯೆಂಬ ಹೊಲೆಮಾದಿಗರ ಮೂಗ ಕೊಯ್ದು, ನಿಂಬೆಹುಳಿಯ ಹಿಂಡದೆ ಮಾಣ್ಬನೆ [ನಿಮ್ಮ ಶರಣ] ಚನ್ನಯ್ಯಪ್ರಿಯ ನಿರ್ಮಾಯಪ್ರಭುವೆ ?
--------------
ಚೆನ್ನಯ್ಯ
ಅರುವತ್ತಾರುತತ್ವಂಗಳ ಮೇಲೆ ನಿನ್ನ ಅರಿವವರಿಲ್ಲ. ಮೂವತ್ತಾರುತತ್ವಂಗಳ ಮೇಲೆ ನೀನು ರಚ್ಚೆಗೆ ಬಂದವನಲ್ಲ. ಕೈಲಾಸಕ್ಕೆ ಬಂದು ನೀನು ಬ್ರಹ್ಮ ವಿಷ್ಣು ರುದ್ರನ ವಾದದಿಂದ ಮತ್ರ್ಯಕ್ಕೆ ಬಂದವನಲ್ಲ. ಅನಾದಿಯಿಂದ ಅತ್ತಲಾದ ಬಸವನಭಕ್ತಿಯ ನೋಡಲೆಂದು ಬಂದವನಲ್ಲದೆ ಮಾಯಾವಾದದಿಂದ ಮತ್ರ್ಯಕ್ಕೆ ಬಂದನೆಂದು ನುಡಿವವರ ನಾಲಗೆಯ ಕಿತ್ತು ಕಾಲು ಮೆಟ್ಟಿ ಸೀಳುವೆನು. ಹೊಟ್ಟೆಯ ಸೀಳಿ, ಮುಳ್ಳಿನ ರೊಂಪೆಯ ಮಡಗುವೆನು ; ಅದೇನು ಕಾರಣವೆಂದಡೆ ಬಸವಣ್ಣಂಗೆ ಭಕ್ತಿಯ ತೋರಲೆಂದು, ಚೆನ್ನಬಸವಣ್ಣಂಗೆ ಆರುಸ್ಥಲವನರುಹಲೆಂದು, ಘಟ್ಟಿವಾಳ, ಮಹಾದೇವಿ, ನಿರವಯಸ್ಥಲದಲ್ಲಿ ನಿಂದ ಅಜಗಣ್ಣ, ಬೊಂತಲಾದೇವಿ ಇಂತಿವರಿಗೆ ಸ್ವತಂತ್ರವ ತೋರಲೆಂದು ಬಂದೆಯಲ್ಲಾ. ಅಮುಗೇಶ್ವರಲಿಂಗಕ್ಕೂ ಎನಗೂ ಪರತಂತ್ರವ ತೋರದೆ ಸ್ವತಂತ್ರನ ಮಾಡಿ ನಿರವಯಸ್ಥಲದಲ್ಲಿ ನಿಲ್ಲಿಸಿದೆಯಲ್ಲಾ, ಪ್ರಭುವೆ
--------------
ಅಮುಗೆ ರಾಯಮ್ಮ
ಅಂಬರದಲಾಡುವ ತುಂಬಿಯ ಬಿಂಬದ ಕಂಬನಿಯೊಳಗಣ ರತ್ನದ ಬಯಕೆಯಾದ್ಯಂತವನೇನೆಂಬೆನಯ್ಯಾ ? ವೇದ ಶಾಸ್ತ್ರ ಶ್ರುತಿ ಸ್ಮೃತಿಗಳು ಸ್ತುತಿಸಲರಿಯವು. ನಾದವಲ್ಲ, ಸುನಾದದ ನಿಲವಲ್ಲ ಭೇದಿಸುವಡೆ ಅಗಮ್ಯ ನೋಡಾ ! ಸೊಲ್ಲಿಲ್ಲದ ಸೊಮ್ಮಿಲ್ಲದ ಘನವನೇನೆಂಬೆನು ? ಎಂತು ಮರೆವೆನಯ್ಯಾ ಎನ್ನ ಅಜಗಣ್ಣ ತಂದೆಯನು ?
--------------
ಮುಕ್ತಾಯಕ್ಕ
ನೀಲಲೋಚನೆಯಮ್ಮನ ಗರ್ಭದಿಂದುದಯವಾಗಿ ಬಂದವ ನಾನೆಂದು ಬಸವಣ್ಣನ ಮನೆಗೆ ಶರಣೆನ್ನಹೋದರೆ ಮಡಿವಾಳತಂದೆ, ಚನ್ನಬಸವಣ್ಣ, ಸಿದ್ಧರಾಮದೇವರು, ಪ್ರಭುಸ್ವಾಮಿ, ಅಜಗಣ್ಣಯ್ಯಗಳು ಸಹವಾಗಿ ಬಸವಣ್ಣನ ಪಾದದಲ್ಲಿ ಕಂಡು ಶರಣೆಂದು ಸುಖಿಯಾದೆನು. ಮಡಿವಾಳತಂದೆಯ ಮನೆಗೆ ಶರಣೆನ್ನ ಹೋದರೆ ಚನ್ನಬಸವಣ್ಣ, ಸಿದ್ಧರಾಮಯ್ಯ, ಪ್ರಭುದೇವರು, ಅಜಗಣ್ಣ ತಂದೆ, ಬಸವಣ್ಣ ಸಹವಾಗಿ ಮಡಿವಾಳ ತಂದೆಯ ಪಾದದಲ್ಲಿ ಕಂಡು ಶರಣೆಂದು ಸುಖಿಯಾದೆನು. ಚನ್ನಬಸವಣ್ಣನ ಮನೆಗೆ ಶರಣೆನ್ನಹೋದರೆ ಸಿದ್ಧರಾಮಯ್ಯತಂದೆ, ಪ್ರಭುದೇವರು, ಅಜಗಣ್ಣಯ್ಯಗಳು, ಬಸವರಾಜದೇವರು, ಮಡಿವಾಳಯ್ಯಗಳು ಸಹವಾಗಿ ಚನ್ನಬಸವಣ್ಣನ ಪಾದದಲ್ಲಿ ಕಂಡು ಶರಣೆಂದು ಸುಖಿಯಾದೆನು. ಸಿದ್ಧರಾಮಯ್ಯನ ಮನೆಗೆ ಶರಣೆನ್ನಹೋದರೆ ಪ್ರಭುದೇವ, ಅಜಗಣ್ಣಯ್ಯಗಳು, ಬಸವಣ್ಣ, ಮಡಿವಾಳಯ್ಯ, ಚನ್ನಬಸವಣ್ಣನವರು ಸಹವಾಗಿ ಸಿದ್ಧರಾಮಯ್ಯನ ಪಾದದಲ್ಲಿ ಕಂಡು ಶರಣೆಂದು ಸುಖಿಯಾದೆನು. ಪ್ರಭುವಿನ ಸ್ಥಲಕ್ಕೆ ಶರಣೆನ್ನಹೋದರೆ ಅಜಗಣ್ಣ, ಬಸವಣ್ಣ, ಮಡಿವಾಳ, ಚನ್ನಬಸವಣ್ಣ, ಸಿದ್ಧರಾಮಯ್ಯಗಳು ಸಹವಾಗಿ ಪ್ರಭುವಿನ ಪಾದದಲ್ಲಿ ಕಂಡು ಶರಣೆಂದು ಸುಖಿಯಾದೆನು. ಅಜಗಣ್ಣಯ್ಯನ ಮನೆಗೆ ಶರಣೆನ್ನಹೋದರೆ ಬಸವರಾಜ, ಮಡಿವಾಳತಂದೆ, ಚನ್ನಬಸವಣ್ಣ, ಸಿದ್ಧರಾಮ, ಪ್ರಭುದೇವರು ಸಹವಾಗಿ ಅಜಗಣ್ಣಯ್ಯಗಳ ಪಾದದಲ್ಲಿ ಕಂಡು ಶರಣೆಂದು ಸುಖಿಯಾದೆನು. ಇಂತು ಬಲ್ಲಂತೆ ಕಂಡು ಶರಣೆಂದು ಸುಖಿಯಾದೆನು ಗುರುನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಆಚಾರಭಕ್ತ ಮೂವತ್ತಾರುಭೇದವನೊಳಕೊಂಡು ನಕಾರವಾಗಿ ಲಿಂಗದ ಪೀಠದಲ್ಲಿ ಸಂಬಂಧವಾದನಯ್ಯ ಬಸವಣ್ಣ. ಗೌರವಮಾಹೇಶ್ವರ ಮೂವತ್ತಾರು ಭೇದವನೊಳಕೊಂಡು ಮಃಕಾರವಾಗಿ ಲಿಂಗದ ಮಧ್ಯದಲ್ಲಿ ಸಂಬಂಧವಾದನಯ್ಯ ಮಡಿವಾಳಯ್ಯ. ಲೈಂಗಿಪ್ರಸಾದಿ ಮೂವತ್ತಾರು ಭೇದವನೊಳಕೊಂಡು ಶಿಕಾರವಾಗಿ ಲಿಂಗದ ವರ್ತುಳದಲ್ಲಿ ಸಂಬಂಧವಾದನಯ್ಯ ಚೆನ್ನಬಸವಣ್ಣ. ಚರಪ್ರಾಣಲಿಂಗಿ ಮೂವತ್ತಾರು ಭೇದವನೊಳಕೊಂಡು ವಾಕಾರವಾಗಿ ಲಿಂಗದ ಗೋಮುಖದಲ್ಲಿ ಸಂಬಂಧವಾದನಯ್ಯಾ ಪ್ರಭುದೇವರು. ಪ್ರಸಾದಶರಣ ಮೂವತ್ತಾರು ಭೇದವನೊಳಕೊಂಡು ಯಕಾರವಾಗಿ ಲಿಂಗದ ನಾಳದಲ್ಲಿ ಸಂಬಂಧವಾದನಯ್ಯ ಉರಿಲಿಂಗಯ್ಯಗಳು. ಮಹಾಘನ ಐಕ್ಯ ಮೂವತ್ತಾರು ಭೇದವನೊಳಕೊಂಡು ಓಂಕಾರವಾಗಿ ಲಿಂಗದ ಗೋಳಕದಲ್ಲಿ ಸಂಬಂಧವಾದನಯ್ಯ ಅಜಗಣ್ಣ. ಇಂತಪ್ಪ ಇಷ್ಟಬ್ರಹ್ಮವೆ ಎನ್ನ ನವದ್ವಾರ ನವಚಕ್ರ ಅಂಗ ಮನ ಪ್ರಾಣ ಸರ್ವೇಂದ್ರಿಯದಲ್ಲಿ ಪ್ರಭಾವಿಸಿದ ಭೇದವನು ಸಿದ್ಧೇಶ್ವರನು ಶ್ರುತ ಗುರು ಸ್ವಾನುಭಾವದಿಂದ ಅರುಹಿದನಾಗಿ ಪರಂಜ್ಯೋತಿ ಮಹಾಲಿಂಗಗುರು ಸಿದ್ಧಲಿಂಗಪ್ರಭುವಿನಲ್ಲಿ ಎರಡರಿಯದೆ ಇದ್ದೆನಯ್ಯಾ, ಬೋಳಬಸವೇಶ್ವರ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಗುಮ್ಮಳಾಪುರದ ಸಿದ್ಧಲಿಂಗ
ಅನ್ಯದೇಹಿಯೆಂದು ಎನ್ನ ಕಳೆಯದಿರು, ಕರ್ಮದೇಹಿಯೆಂದು ಕೈಯ ಬಿಡದಿರು, ಮತ್ರ್ಯನೆಂದು ಮಾಯಕ್ಕೆ ಗುರಿಮಾಡದಿರು, ಮದಡನೆಂದು ಮನವಿಕಾರಕ್ಕೆ ಗುರಿಮಾಡದಿರು, ಅಜ್ಞಾನಿಯೆಂದು ಅಹಂಕಾರಕ್ಕೆ ಗುರಿಮಾಡದಿರು, ಮದದೇಹಿಯೆಂದು ಮಾಯಾತಮಂಧಕ್ಕೆ ಗುರಿಮಾಡದಿರು, ಜಲ ಅಗ್ನಿಯ ಗುಣವಿರಲೊ ಎನ್ನಯ್ಯ. ಅದು ಎಂತೆಂದೊಡೆ : ಜಲ ಹರಿವೆಡೆಯಲ್ಲಿ ಹೊಲಗೇರಿ ಉತ್ತಮಗೇರಿ ಅಮೇಧ್ಯದಗೇರಿಯೆಂದು ನೋಡಿ ಹರಿವುದೆ ? ಹರಿಯದು ; ಅದಕ್ಕೆಲ್ಲ ಸಮ. ಅಗ್ನಿ ಶ್ವಪಚರ ಮನೆ, ಗೃಹಸ್ಥರ ಮನೆ, ಬೇಡ ಮಾದಿಗ ಹದಿನೆಂಟು ಜಾತಿ ಎಂದು ಅಡಿಯಿಡಲು ಮುನಿವುದೆ ? ಮುನಿಯದು. ಎನ್ನ ಅನ್ಯದೇಹಿಯೆಂದು, ಕರ್ಮದೇಹಿಯೆಂದು, ಮತ್ರ್ಯದೇಹಿಯೆಂದು, ಮದಡದೇಹಿಯೆಂದು, ಅಜ್ಞಾನಿಯೆಂದು ಕಳೆದಡೆ ಹುರುಳಿಲ್ಲ. ಅತ್ತಿಯಹಣ್ಣು ಬಿಚ್ಚಿದರೆ ಬಲು ಹುಳು. ಎನ್ನ ಚಿತ್ತದೊಳವಗುಣವ ವಿಸ್ತರಿಸಿದರೇನು ? ಫಲವಿಲ್ಲ. ನೋಡದೆ ಕಾಡದೆ ಮಾಯಾತಮವಕಳೆದು ಜ್ಞಾನಜ್ಯೋತಿಯ ತೀವು. ಎನ್ನ ನಿಮ್ಮಯ ಶರಣರು ಚೆನ್ನಬಸವಣ್ಣ ಅಕ್ಕನಾಗಮ್ಮ ನೀಲಲೋಚನೆ ನಿಂಬವ್ವೆ ಮಹಾದೇವಿ ಮುಕ್ತಾಯಕ್ಕ ಅಜಗಣ್ಣ ಅಂಬಿಗರ ಚೌಡಯ್ಯ ಕಲಿಕೇತಯ್ಯ ಬ್ರಹ್ಮಯ್ಯ ನಿರ್ಲಜ್ಜಶಾಂತಯ್ಯ ನಿಜಗುಣದೇವರು ಸಿದ್ಧರಾಮಿತಂದೆ ಮರುಳಶಂಕರದೇವರು ಕಿನ್ನರಿಬ್ರಹ್ಮಯ್ಯ ವೀರಗಂಟೆಯ ಮಡಿವಾಳಯ್ಯ ಮೇದರ ಕೇತಯ್ಯಗಳು ಅರವತ್ತುಮೂವರು ಪುರಾತನರು ತೇರಸರು ಷೋಡಶರು ದಶಗಣರು ಮುಖ್ಯವಾದೈನೂರಾ ಎಪ್ಪತ್ತು ಅಮರಗಣಂಗಳ ಆಳಿನಾಳಿನಾ ಮನೆಯ ಕೀಳಾಳ ಮಾಡಿ ಅವರ ಲೆಂಕನಾಗಿ, ಅವರುಟ್ಟ ಮೈಲಿಗೆ, ಉಗುಳ್ದ ತಾಂಬೂಲ ಪಾದೋದಕ, ಅವರೊಕ್ಕ ಪ್ರಸಾದಕೆನ್ನ ಯೋಗ್ಯನಮಾಡೆ ಏಳೇಳು ಜನ್ಮದಲ್ಲಿ ಬರುವೆ ಕಂಡಾ, ಭವವಿರಹಿತ ತಂದೆ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಬಸವಣ್ಣ ಚೆನ್ನಬಸವಣ್ಣ ಪ್ರಭು ಮಡಿವಾಳ ನಿಜಗುಣ ಶಿವಯೋಗಿ ಸಿದ್ಧರಾಮ ಮೋಳಿಗೆಯ್ಯ ಆಯ್ದಕ್ಕಿಯ ಮಾರಯ್ಯ ಏಕಾಂತರಾಮಯ್ಯ ಅಜಗಣ್ಣ ಶಕ್ತಿಮುಕ್ತಿ ಮಹಾದೇವಿಯಕ್ಕ ಮುಂತಾದ ಏಳುನೂರೆಪ್ಪತ್ತು ಅಮರಗಣಂಗಳು ಕೊಟ್ಟ ವ್ರತಪ್ರಸಾದ, ಆ ಪ್ರಸಾದವೆನಗೆ ಪ್ರಸನ್ನ. ನಿಮಗೆ ಮತ್ರ್ಯದ ಮಣಿಹ ಹಿಂಗುವನ್ನಕ್ಕ ಎನ್ನ ವ್ರತದಲ್ಲಿ, ಎನ್ನ ಆಚಾರದಲ್ಲಿ, ನಾ ಹಿಡಿದ ನೇಮದಾ ಭಿಕ್ಷೆಯಲ್ಲಿ, ನಾ ತಪ್ಪಿದಡೆ, ತಪ್ಪು ಹೊತ್ತಲ್ಲಿ ನಿಮ್ಮ ಕೇಳಿದಡೆ, ನಾ ಸತ್ತಿಹೆನೆಂದು ಕೂಡಿದಡೆ, ಮತ್ತೆ ಶಸ್ತ್ರ ಸಮಾಧಿ ನೀರು ನೇಣು ವಿಷ ಔಷಧಿಯಿಂದ ಘಟವ ಬಿಟ್ಟಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ. ಕ್ರೀಭಿನ್ನ ಭಿನ್ನದೋರಿದಲ್ಲಿ ಆಚಾರವೆ ಪ್ರಾಣವಾದ [ಐಘಟದೂರ] ರಾಮೇಶ್ವರಲಿಂಗದಲ್ಲಿಯೇ ಲೀಯ.
--------------
ಮೆರೆಮಿಂಡಯ್ಯ
ಅಹುದಹುದು ಶಿವಶರಣರ ಮಹಿಮೆ ಆರಿಗೆಯೂ ಕಾಣಬಾರದು. ಕಬ್ಬುನ ಉಂಡ ನೀರಿನಂತೆ, ಕಬ್ಬಿಸಿಲುಂಡ ಅರಿಸಿನದಂತೆ, ಉರಿಯೊಳಡಗಿದ ಕರ್ಪುರದಂತೆ, ಬಯಲನಪ್ಪಿದ ವಾಯುವಿನಂತೆ ಇಪ್ಪ ನಿಲವು ನುಡಿದು ಹೇಳಿಹೆನೆಂಬ ಮಾತಿಂಗೆ ಅಳವಡುವುದೆ ? ಅರಿವಡೆ ಮತಿಯಿಲ್ಲ, ನೆನೆವಡೆ ಮನವಿಲ್ಲ ಎನ್ನ ಅಜಗಣ್ಣ ತಂದೆಯನೊಳಕೊಂಡಿಪ್ಪ ನಿಮ್ಮ ಮಹಿಮೆಗೆ ನಮೋ ನಮೋ ಎನುತಿರ್ದೆನು.
--------------
ಮುಕ್ತಾಯಕ್ಕ
ಇನ್ನಷ್ಟು ... -->