ಅಥವಾ

ಒಟ್ಟು 14 ಕಡೆಗಳಲ್ಲಿ , 11 ವಚನಕಾರರು , 14 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಗಜೇಶ ಅಜಹರಿಸುರರೊಂದ್ಯ, ಜಗದಗಲಾತ್ಮ ಅಮೃತಕರ ಅಘಗಿರಿಗೊಜ್ರ ಅನಲಾಕ್ಷ ಅನಾಮಯ ಅಚಲ ಅಗಣಿತ ಅತಿಸತ್ಯ ಅಭವ ಅಭಂಗ ಅತಿಪರಾಕ್ರಮ ಆನಂದ ಅಪರಂಪಾರ ಆದಿಸ್ವಯಂಭೂ ಆಧ್ಯಾತ್ಮಪರಂಜ್ಯೋತಿ ಅಕಳಂಕ ಅಮಲ ಅದೃಶ್ಯ ಅಕಲ್ಪ ಅಭವ ಅರುಣೋದಯ ಅನುಪಮ ಅಘಟಿತ ಅಚರಿತ್ರ ಐಶ್ವರ್ಯ ಅದ್ಭುತ ಆದ್ಯ ಆರಾಧ್ಯ ಅಂಗಸಂಗ ಅಮರಗಣವಂದ್ಯ ರಕ್ಷಿಪುದೆಮ್ಮ ಜಯಜಯ ಹರಹರ ಶಿವಶಿವ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಅತಕ್ರ್ಯ ಅಪ್ರಮಾಣ ಅನಾಮಯ ಅನುಪಮ ಸರ್ವಗತ ಸರ್ವಜ್ಞ ಸರ್ವೇಶ್ವರನಪ್ಪ ಪರಶಿವನು ಜಗತ್‍ಸೃಷ್ಟ್ಯರ್ಥವಾಗಿ ಸಮಸ್ತತತ್ವಂಗಳುತ್ಪತ್ತಿಗೆ ಮೂಲಿಗನಾಗಿ ತನ್ನಿಚ್ಛೆಯ ನೆನಹೆಂಬ ಚಿಂತಾಶಕ್ತಿಯ ಸಹಸ್ರದೊಳೊಂದಂಶದಲ್ಲಿ ಕುಂಡಲಿನಿಯಪ್ಪ ಪರೆ ಜನಿಸಿತ್ತು. ಆ ಪರಶಿವನಪ್ಪ ನಿಷ್ಕಲಬ್ರಹ್ಮವು ಈ ಕುಂಡಲಿನಿಯು [ತಾದಾತ್ಯ]ದಿಂ ಬ್ಥಿನ್ನವಿಲ್ಲದಿಹುದೆ ಸಕಲ ನಿಷ್ಕಲವಪ್ಪ ಸದಾಶಿವನು. ಆ ಸದಾಶಿವನು ತಾನೆ ಸಾದಾಖ್ಯದಿಂ ಪಂಚಬ್ರಹ್ಮಮೂರ್ತಿಯಾದುದು. ಎಂತೆಂದೊಡೆ: ಆ ಕುಂಡಲಿನಿಯಪ್ಪ ಪರೆಯ ಸಹಸ್ರದೊಳೊಂದಂಶಂದಲ್ಲಿ ಆದಿಶಕ್ತಿ ಜನಿಸಿತ್ತು. ಆದಿಶಕ್ತಿಯ ಸಹಸ್ರದೊಳೊಂದಂಶದಲ್ಲಿ ಇಚ್ಛಾಶಕ್ತಿ ಜನಿಸಿತ್ತು. ಇಚ್ಛಾಶಕ್ತಿಯ ಸಹಸ್ರದೊಳೊಂದಂಶದಲ್ಲಿ ಜ್ಞಾನಶಕ್ತಿ ಜನಿಸಿತ್ತು. ಜ್ಞಾನಶಕ್ತಿಯ ಸಹಸ್ರದೊಳೊಂದಂಶದಲ್ಲಿ ಕ್ರಿಯಾಶಕ್ತಿ ಜನಿಸಿತ್ತು. ಆ ನಿಷ್ಕಲವಪ್ಪ ಶಿವನ ನಿಷ್ಕಲೆಯಪ್ಪ ಕುಂಡಲಿನಿಯಪ್ಪ ಪರೆಯ ಹತ್ತರೊಳೊಂದಂಶದಲ್ಲಿ ಶಿವಸಾದಾಖ್ಯ ಜನಿಸಿತ್ತು. ಆದಿಶಕ್ತಿಯ ಹತ್ತರೊಳೊಂದಂಶದಲ್ಲಿ ಅಮೂರ್ತಿಸಾದಾಖ್ಯ ಜನಿಸಿತ್ತು. ಇಚ್ಛಾಶಕ್ತಿಯ ಹತ್ತರೊಳೊಂದಂಶದಲ್ಲಿ ಮೂರ್ತಿಸಾದಾಖ್ಯ ಜನಿಸಿತ್ತು. ಜ್ಞಾನಶಕ್ತಿಯ ಹತ್ತರೊಳೊಂದಂಶದಲ್ಲಿ ಕರ್ತೃಸಾದಾಖ್ಯ ಜನಿಸಿತ್ತು. ಕ್ರಿಯಾಶಕ್ತಿಯ ಹತ್ತರೊಳೊಂದಂಶದಲ್ಲಿ ಕರ್ಮಸಾದಾಖ್ಯ ಜನಿಸಿತ್ತು. ಆ ಕರ್ಮಸಾದಾಖ್ಯವಪ್ಪ ಮಾಹೇಶ್ವರನು ಸಕಲಸ್ವರೂಪದಿಂ ಸೋಮಧರ ಮೊದಲಾದ ಲಿಂಗೋದ್ಭವ ಕಡೆಯಾದ ಪಂಚವಿಂಶತಿಲೀಲೆಯ ತಾಳ್ದ ಸಕಲವಪ್ಪ ಮಾಹೇಶ್ವರನು ಸಕಲನಿಷ್ಕಲವಪ್ಪ ಸದಾಶಿವನು ನಿಷ್ಕಲವಪ್ಪ ಶಿವನೊಬ್ಬನಲ್ಲದೆ ಬೇರಲ್ಲವೆಂಬುದಕ್ಕೆ `ತತ್ಪರಂ ಬ್ರಹ್ಮೇತಿ, ಸ ಏಕೋ ರುದ್ರಸ ಈಶಾನಸ್ಸ ಭಗವಾನ್ ಶ್ರುತಿ: ಸ ಮಹೇಶ್ವರಸ್ಸ ಮಹಾದೇವ ಇತಿ ಇಂತೆಂದುದಾಗಿ, ಏಕಮೇವ ಅದ್ವಿತೀಯನಪ್ಪ ಸೋಮಧರನು, ಉಮಾಸಹವಾದ ಸೋಮನಿಂದ ವಾಯು, ಅಗ್ನಿ, ಪೃಥ್ವಿ, ರವಿ ಮೊದಲಾದ ಅಷ್ಟಮೂರ್ತಿಗಳು ದೇವರ್ಕಳು ಸುರಪ ಹರಿವಿರಿಂಚಿಗಳು ಜನಿಸಿದುದಕ್ಕೆ ಶ್ರುತಿ:ಸೋಮಃ ಪವತೇ ಜನಿತಾ ಮತೀನಾಂ ಜನಿತಾ ದಿವೋ ಜನಿತಾ ಪೃಥಿವ್ಯಾರ್ಜನಿತಾಗ್ನಿ ಸೂರ್ಯಸ್ಯ ಜನಿತೇಂದ್ರಸ್ಯ ಜನಿತಾಥ ವಿಷ್ಣೋಃ ಎಂದುದಾಗಿ, ತನ್ಮಹೇಶ್ವರಕೋಟ್ಯಂಶ ಬ್ರಹ್ಮವಿಷ್ಣುಸಮುದ್ಭವಂ ಋಷಯಃ ಕೃತವೋ ಕೋಟಿರ್ನಿಮಿಷೇಣ ಸಮುದ್ಭವಂ ಎಂದುದಾಗಿ, ಅಷ್ಟತನುವಿನೊಳಗಾದ ಜಗದ ರಚನೆ ಆರಿಂದ ರಚಿಸಿತ್ತು? ಅದ್ಥಿಕಾರ ಲಯ ಭೋಗಕ್ಕೆ ಅವನೊರ್ವ ಕರ್ತನು ಸೃಷ್ಟಿ, ಸ್ಥಿತಿ, ಸಂಹೃತಿ ತಿರೋಧಾನಾನುಗ್ರಹವಾವನಿಂದಹುದು; ಸರ್ವಜ್ಞತ್ವ ಕರ್ತೃತ್ವ ಅನಾದಿಬೋಧತ್ವ ಸ್ವತಂತ್ರತ್ವ ನಿತ್ಯತ್ವ ಅಲುಪ್ತಶಕ್ತಿತ್ವವಾವಗುಂಟು, ಆ ಶಿವನೆ ಘೃತಕಾಠಿಣ್ಯದಂತೆ, ನೀರಾಲಿಕಲ್ಲಂತೆ, ಸಕಲ ಸಕಲನಿಷ್ಕಲ ನಿಷ್ಕಲವಾದವನು, ಸೌರಾಷ್ಟ್ರ ಸೋಮೇಶ್ವರಲಿಂಗನೊಬ್ಬನೆ ಕಾಣಿರೆ.
--------------
ಆದಯ್ಯ
ಅದ್ವೈತನ ಕರಸ್ಥಲದೊಳಗೆ, ಅನಂತನೆಂಬ ಗಿಳಿ ಮೂರ್ತಗೊಂಡು ಅತೀತ ಅನಾಗತ ವರ್ತಮಾನವೆಂಬ ಕೊರೆಕೂಳನುಂಡು ಓದಿತ್ತು ಅಗಣಿತ ಪುರಾಣ(ವ), ಅನಾಮಯ ಶಾಸ್ತ್ರವನು, ಅನುಪಮ ವೇದವೆಂದು._ ನಿಃಸ್ಥಲವ ಸ್ಥಲವಿಡಲು, ನಿರ್ಮಳಾತ್ಮಂಗೆ ಇಹವಿಲ್ಲ ಪರವಿಲ್ಲ ! ಆದಿ ಮಧ್ಯಾಂತ ನಿರಾಳ ಗುಹೇಶ್ವರನ ಅನುಭವಿಗೆ ಸರ್ವಾಂಗ ಲಿಂಗವು !
--------------
ಅಲ್ಲಮಪ್ರಭುದೇವರು
ಲೋಕವ ಕುರಿತಲ್ಲಿ ಆಚಾರದ ಮಾತು. ತನ್ನ ಕುರಿತಲ್ಲಿ ಅನಾಚಾರದ ಮಾತು. ಆಚಾರಸಂಪನ್ನರನ್ನೆಲ್ಲಿಯೂ ಕಂಡೆ. ಅನಾಚಾರಸಂಪನ್ನರನ್ನೆಲ್ಲಿಯೂ ಕಾಣೆ. ಭಕ್ತ ಭವಿಯಾಗಬಹುದಲ್ಲದೆ, ಭವಿ ಭಕ್ತನಾಗಬಾರದು. ಬೆಣ್ಣೆಗೆ ತುಪ್ಪವಲ್ಲದೆ ತುಪ್ಪ ಬೆಣ್ಣೆಯಪ್ಪುದೆ? ತರು ಬೆಂದಲ್ಲಿ ಕರಿಯಲ್ಲದೆ, ಕರಿ ಬೆಂದಲ್ಲಿ ತರು ಉಂಟೆ? ಇದು ಅಘಟಿತ, ಅನಾಮಯ, ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಲಿಂಗನಾಮ, ಅನಂಗ ಅನಾಮಯ, ನೋಡುವರಿಗೆ ವಿರಾಮ. ಕರಗಿದವನು ಮರಳಿ ಕರಗಲಿಲ್ಲ. ಉರಗಾಭರಣನು ಉಣಲಿಕ್ಕಲಿಲ್ಲ , ಉಡಲಿಕ್ಕಲಿಲ್ಲ. ಅಂದು ಹಸುಬೆಯ ತೊಡಿಸಿದ ಹೊಸಬೆ ನಾನಯ್ಯಾ. ಆ ದೇಶ ಈ ದೇಶ ಸರಮಂಡಲವೆನಗೇಕಯ್ಯಾ. ರಮಹೆಣ ರುಂಡಮಾಲೆಯವನ ಮುಟ್ಟಿ, ಲಿಂಗ ಮನ ಮುಟ್ಟಿ, ಶಿಷ್ಯ ಆಚಾರ ಮುಟ್ಟಿ ಜಂಗಮವಯ್ಯ. ಆ ಜಂಗಮ ಸತ್ತು ಚಿತ್ತು ಲಿಂಗ ಆನಂದಗುರು. ಹೃದಯದ ಮಹಾಲಿಂಗವೆ ಇಷ್ಟಲಿಂಗವಾಗಿ, ಶರಣನಲ್ಲಿ ಅಚ್ಚೊತ್ತಿದ ಮುದ್ರೆಯೆಂದೆನಿಸಿತ್ತಯ್ಯಾ. ಮುಡುಹು ಮುಂಬಲ್ಲು ಕುರುಳು ಅಂಗುಲಿ ಗಂಟಲು ಕೈ ಬಾಯ್ಗೆ ಬಂದುಲಿವುಲಿವ, ಇಷ್ಟು ಮುಪ್ಪಡಸಿ, ರಜೆ ರುಣ, ನಡೆ ನುಡಿ ದಟ್ಟವಾಗಿ. ಸರ್ವಜಯಾಂಕುರ ನಷ್ಟ ನಾಲ್ಕು ಕೆಸರುಗಲ್ಲಿಂದೆ, ಈ ರೂಪುರಿದ. ಅಚ್ಚಬೆಟ್ಟಗರಳಗ್ರೀವತ್ತುತಳಾಯಳ ಸಂಧಿಯಿಂದೆದವಂಗಡರ್ಚುಮುವಿಲ್ಲ. ಹೆಣ್ಣಿಂಗೊಡೆತನವಿಲ್ಲೆಂ[ದು] ಬಣ್ಣಿಗಿದೆನೆಯ ಮಾಡಿ, ಕೊರಳ ನೀನರಿಯಯ್ಯಾ, ದೇವರಾಯ ಸೊಡ್ಡಳಾ.
--------------
ಸೊಡ್ಡಳ ಬಾಚರಸ
ನಿನ್ನ ಇರವು, ನಿನ್ನನರಿವಿನ ಇರವು ಮೃತ್ತಿಕೆಯ ಚಕ್ರದಂತೆ, ನಿನ್ನನರಿವಿನ ಇರವು ತರುಸಾರದ ಹೇಮದಾಶ್ರಯದಂತೆ, ನಿನ್ನನರಿವಿನ ಇರವು ಲೋಹದ ವಹ್ನಿಯ ಸಂಗದಂತೆ, ಇದಾರಿಗೂ ಅಸಾಧ್ಯ ನೋಡಾ. ಅಸಮಾಕ್ಷ ಅನಾಮಯ ನೀನೇ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅಯ್ಯ ! ನಿರವಯಶೂನ್ಯಮೂರ್ತಿ ಗುಹೇಶ್ವರಲಿಂಗಕ್ಕೆ ಎನ್ನ ಅಷ್ಟತನುವೆ ಅಷ್ಟ ವಿಧಾರ್ಚನೆಯಾಗಿ, ಎನ್ನ ಅಷ್ಟಾತ್ಮ-ಅಷ್ಟಕರಣಂಗಳೆ ಷೋಡಶೋಪಚಾರವಾಗಿ, ಶರಣಸತಿ-ಲಿಂಗಪತಿಯೆಂಬ ಉಭಯ ಭೇದವಳಿದು ಏಕವಾಗಿ ಎಲೆಗಳೆದ ವೃಕ್ಷದಂತೆ ಉಲುಹಡಗಿರ್ದೆನಯ್ಯ. ತೆರೆಯಳಿದ ಅಂಬುಧಿಯಂತೆ ಪರಮ ಚಿದ್ಘನಗುರು ಶಿವಸಾಗರದೊಳಗೆ ಮುಳುಗಿ ಪರಮ ಚಿದ್ಗಂಭೀರನಾಗಿರ್ದೆನಯ್ಯ ಘಟವನಳಿದ ಅವಕಾಶದಂತೆ ಬಚ್ಚಬರಿಯ ಬಯಲಾಗಿ ನಿಶ್ಚಲನಾಗಿರ್ದೆನಯ್ಯಾ ಪಟವನಳಿದ ಚಿತ್ರದಂತೆ ನಿರ್ಮಲ ನಿರಾವರಣನಾಗಿ ಶುದ್ಧ ಅಮಲಬ್ರಹ್ಮವಾಗಿ ಪ್ರತಿಯಿಲ್ಲದ ಅಪ್ರತಿಮ ಅನುಮಿಷ ಅನುಪಮ ಅಪ್ರಮಾಣ ಅನಾಮಯ ಅಗಣಿತ ಅಚಲಾನಂದ ನಿತ್ಯ ನಿಃಕಳಂಕ ನಿರ್ಮಾಯ ನಿರಾಲಂಬ ನಿರ್ಗುಣ ನಿತ್ಯಮುಕ್ತ ನಿತ್ಯತೃಪ್ತ ನಿಶ್ಚಿಂತ ನಿಃಕಾಮ್ಯ ನಿಜಷಡ್ಗುಣೈಶ್ವರ್ಯ ಮದ್ಗುರು ಸಂಗನಬಸವಣ್ಣನ ಚಿದ್ಬೆಳಗಿನ ಬಯಲೊಳಗೆ ಬಯಲಪ್ಪುದು ತಪ್ಪದು ! ನಿಮ್ಮ ಕೃಪೆಯಿಂದ ! ನೋಡ ! ಚೆನ್ನಬಸವಣ್ಣ.
--------------
ಅಲ್ಲಮಪ್ರಭುದೇವರು
ಪ್ರಥಮದಲ್ಲಿ ಪೀಠಿಕಾಸೂತ್ರವದೆಂತೆಂದೊಡೆ : ಶೈವಪಾಷಂಡಿಗಳು ಆಚರಿಸಿದ ಪಿಪೀಲಿಕಜ್ಞಾನ, ವಿಹಂಗಜ್ಞಾನ, ಮರ್ಕಟಜ್ಞಾನ, ಗಜಜ್ಞಾನ, ಕುಕ್ಕುಟಜ್ಞಾನ, ಶ್ವಾನಜ್ಞಾನ, ವೇದಾಂತಜ್ಞಾನ, ಸಿದ್ಧಾಂತಜ್ಞಾನ, ಭಿನ್ನಯೋಗ, ಚರ್ಯಾ-ಕ್ರಿಯಾ-ಕರ್ಮಜ್ಞಾನಂಗಳನ್ನು ತೊರೆದು ಕೇವಲ ಸುಜ್ಞಾನವೆ ಚಿತ್ಪಿಂಡಾಕೃತಿಯ ಧರಿಸಿ, ಆ ಪಿಂಡಮಧ್ಯದಲ್ಲಿ ಮಹಾಜ್ಞಾನವೆ ಚಿತ್ಪ್ರಾಣವಾಗಿ ಶೋಭಿಸಿ, ಅವೆರಡರ ಮಧ್ಯವೆ ಪರಿಪೂರ್ಣ ಸ್ವಾನುಭಾವ, ಉನ್ಮನಜ್ಞಾನವೇ ಸಾಕಾರಲೀಲೆಯ ಧರಿಸಿ, ಪರಮಜ್ಞಾನಾಂಜನ ಸದ್ವಾಸನಪರಿಮಳವೆ ಕ್ರಿಯಾಭಕ್ತಿ, ಜ್ಞಾನಭಕ್ತಿ, ಮಹಾಜ್ಞಾನಭಕ್ತಿ , ನಿರವಯಭಕ್ತಿ , ಸಚ್ಚಿದಾನಂದಭಕ್ತಿ, ಪರಿಪೂರ್ಣಭಕ್ತಿ ಮೊದಲಾದ ಷಡ್ವಿಧಭಕ್ತಿ ಯೆ ಅಂತರಂಗದ ಸುಚಿತ್ತ ಸುಬುದ್ಧಿ ನಿರಹಂಕಾರ ಸುಮನ ಸುಜ್ಞಾನ ಸದ್ಭಾವಂಗಳಲ್ಲಿ, ಕ್ಷೀರದೊಳು ಘೃತ, ಬೀಜದೊಳು ವೃಕ್ಷ, ಪಾಷಾಣದೊಳಗ್ನಿ ಅಡಗಿಪ್ಪಂತೆ, ಅಂಗಾಪ್ತಸ್ಥಾನ ಸದ್ಭಾವವೆಂಬ ಚತುರ್ವಿಧಭಕ್ತಿಯೆ ಸಾಕಲ್ಯವಾಗಿ, ಪುಷ್ಪದೊಳು ಪರಿಮಳ, ಫಲಾದಿಗಳಲ್ಲಿ ಫಳರಸವೆಸೆದಂತೆ, ಘಟಸರ್ಪ ತನ್ನ ಮಾಣಿಕ್ಯದ ಬೆಳಕಿನಲ್ಲಿ ಆಹಾರವ ಕೊಂಡಂತೆ, ಸಾಕಾರವಾಗಿ ಪರಿಶೋಭಿಸಿ, ಗುರುಚರಮಾರ್ಗದಿಂದ ಅಷ್ಟವಿಧಭಕ್ತಿವಿಡಿದು ಬೆಳಗುವ ಮಹಾಲಿಂಗಶರಣನ ವಿವರವೆಂತೆಂದಡೆ : ಮಹದರುವೆಂಬ ಗುರುವಿನಲ್ಲಿ ಶ್ರದ್ಧೆ, ಮಹಾಜ್ಞಾನವೆಂಬ ಲಿಂಗದಲ್ಲಿ ನೈಷೆ* , ಪೂರ್ಣಾನುಭಾವವೆಂಬ ಜಂಗಮದಲ್ಲಿ ಸಾವಧಾನ, ಕರುಣಾಮೃತವೆಂಬ ಪಾದೋದಕದಲ್ಲಿ ಅನುಭಾವ, ಕೃಪಾನಂದರಸವೆಂಬ ಪ್ರಸಾದದಲ್ಲಿ ಆನಂದ, ಚಿದ್ಬೆಳಗಿನ ಪ್ರಕಾಶವೆಂಬ ಭಸಿತದಲ್ಲಿ ಸಮರಸ, ದೃಗ್ದೃಷ್ಟಿ ಪುಂಜರಂಜನೆಯೆಂಬ ಮಣಿಮಾಲೆ ಕುಕ್ಷಿಗಳಲ್ಲಿ , ನಿಃಕಳಂಕ ಆನಂದಮಯವೆಂಬ ಚಿದ್ಘೋಷ ಮಂತ್ರದಲ್ಲಿ , ನಿರವಯಭಕ್ತಿ ಕಡೆಯಾದ ಅಷ್ಟವಿಧಭಕ್ತಿಯೆ ನಿಧಿನಿಧಾನವಾಗಿ, ಜಗಜಗಿಸಿ ಬೆಳಗುವ ಮಹಾಲಿಂಗಶರಣಚರಗುರುಗಳ ತನ್ನ ಸ್ವಾನುಭಾವಜ್ಞಾನದಿಂದರಿದು, ಅಂಗ ಮನಪ್ರಾಣಭಾವನಿಷಾ*ಚಾರದಲ್ಲಿ ಸಾಕಾರಲೀಲೆಗೆ ಪಾವನಾರ್ಥವಾಗಿ, ಷೋಡಶಭಕ್ತಿ ಜ್ಞಾನ ವೈರಾಗ್ಯ ಸ್ಥಳ ಕುಳ ಸಕೀಲ ಸಂಬಂಧಾಚರಣೆಯ ವೀರಶೈವ ಪರಿವರ್ತನೆ ಅರ್ಪಿತಾವಧಾನ ಕೊಟ್ಟುಕೊಂಬ ನಿಲುಕಡೆ, ಸಗುಣ ನಿರ್ಗುಣ ಸತ್ಯಶುದ್ಧಕಾಯಕ, ಸದ್ಧರ್ಮ ನಡೆನುಡಿ, ಘನಗಂಭೀರ ಪರುಷಸೋಂಕುಗಳೆ ಸಾರಿ ತೋರಿ ಬೀರಿ ಊರಿ ಜಾರಿ ಹಾರಿ ಸೈರೆಮೀರಿ ಮಹಾಬಯಲೊಳಗೆ ಬಯಲಾಗಿ ತೋರುವ ನಿಃಕಳಂಕ ನಿರಾಲಂಬ ನಿಃಪ್ರಪಂಚ ನಿರಾತಂಕ ನಿರುಪಾಧಿಕ ನಿರ್ಭೇದ್ಯ ನಿಶ್ಚಿಂತ ನಿಃಕಾಮ ನಿಃಫಲದಾಯಕ ನಿಃಕ್ರೋಧ ನಿರಾಸಿಕ ನಿರ್ವಾಣಿ ನಿರ್ಮರಣ ನಿರ್ಜಾತ ನಿಜಾನಂದಭರಿತಚರಿತ ನಿರಹಂಕಾರ ನಿರ್ದೇಹ ನಿರ್ಲಂಪಟ ನಿರ್ವ್ಯಸನಿ ನಿರ್ಭಾಗ್ಯ ನಿಃಸಂಸಾರಿ ನಿವ್ರ್ಯಾಪಾರಿ ನಿರ್ಮಲ ನಿಸ್ಸಂಗ ನಿಃಶೂನ್ಯ ನಿರಂಜನ ನಿರವಯ ಘನಗಂಭೀರ ಪರಾತ್ಪರ ಅಗಮ್ಯ ಅಪ್ರಮಾಣ ಅಗೋಚರ ಅನಾಮಯ ಅಗಣಿತ ಅಚಲಾನಂದ ಅಸಾಧ್ಯಸಾಧಕ ಅಭೇದ್ಯಭೇದಕ ಅನಾದಿಭಕ್ತ ಮಹೇಶ ಪ್ರಸಾದಿ ಪ್ರಾಣಲಿಂಗಿ ಶರಣೈಕ್ಯ ನಿರವಯಪ್ರಭು ಮಹಾಂತ ತಾನೇ ನೋಡಾ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
--------------
ಮೂರುಸಾವಿರ ಮುಕ್ತಿಮುನಿ
ಕಲ್ಲು ಕವಣೆಯ ನುಂಗಿ, ಇಡುವಾತನ ಹಣೆ ತಾಗಿತ್ತು. ಹಣೆ ಹನಿತು, ಮೂರು ಸೇ[ದೆ]ಯಾಯಿತ್ತು. ಸೇ[ದೆ]ಯಲ್ಲಿ ಆರುಮಂದಿ ಹುಟ್ಟಿ, ಮೂವರ ಕೊಂದು, ಮೂವರು ಆಲುತ್ತೈದಾರೆ. ಆಲುವೆಗೆ ಹೊರಗಾದ ಅನಾಮಯ ಅನುಪಮ, ಎನ್ನ ಗುಡಿಯ ಗುಮ್ಮಟೇಶ್ವರನೊಡೆಯ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ನೇಮವ ಮಾಡುವರೆಲ್ಲರೂ ಬ್ರಹ್ಮಪಾಶಕ್ಕೊಳಗಾದರು. ನಿತ್ಯವ ಮಾಡುವರೆಲ್ಲರು ವಿಷ್ಣುಪಾಶಕ್ಕೊಳಗಾದರು. ಜಪವ ಮಾಡುವರೆಲ್ಲರು ರುದ್ರಪಾಶಕ್ಕೊಳಗಾದರು. ತಪವ ಮಾಡುವರೆಲ್ಲರು ರತಿಪಾಶಕ್ಕೊಳಗಾದರು. ಇಂತಿವು ಮೊದಲಾದ ನಾನಾ ಕೃತ್ಯವ ಮಾಡುವ ಸಂಕಲ್ಪಜೀವಿಗಳೆಲ್ಲರು ನಾನಾ ಯೋನಿಸಂಭವದಲ್ಲಿ ಬರ್ಪುದಕ್ಕೆ ತಮ್ಮ ತಾವೇ ಲಕ್ಷವಿಟ್ಟುಕೊಂಡರು. ಅಲಕ್ಷ ಅತೀತ ಅನಾಮಯ ಅಮಲ ಅದ್ವಂದ್ವ ಕಾಲಭೇದಚ್ಫೇದನಕುಠಾರ ನಾನಾ ಶಾಸ್ತ್ರ ನಿರ್ಲೇಪ ಸಕಲ ಕೃತ್ಯ ಹೇತುದಾವಾನಲ ನಿಃಕಾರಣಮೂರ್ತಿ ಸಹಜಭರಿತಂಗೆ ಹಿಡಿಯಲ್ಲಿಲ್ಲಾಗಿ ಬಿಡಲಿಲ್ಲ, ಅರಿಯಲಿಲ್ಲಾಗಿ ಅರಿದೆನೆಂಬ ತೆರನಿಲ್ಲ. ಮತ್ತೆ ಕುರುಹಿನಿಂದ ಕಂಡ ಅರಿಕೆ ಇನ್ನೇಕೆ ? ಸಿಪ್ಪೆಯ ಕಳೆದು, ಸುಭಿಕ್ಷವ ಸೇವಿಸಿ, ಬಿತ್ತನುಳಿದೆ, ನಿತ್ಯವ ಪರಿದು, ಅನಿತ್ಯವ ಕಳೆದು, ಮತ್ತೇನು ಎನ್ನದಿರ್ಪುದೆ ಲಿಂಗೈಕ್ಯವು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಇನ್ನು ಲಿಂಗೋತ್ಪತ್ಯವದೆಂತೆಂದಡೆ : ಆ ಅಖಂಡ ಮಹಾಜ್ಯೋತಿಪ್ರಣಮದ ತಾರಕಸ್ವರೂಪ ಕುಂಡಲಾಕಾರ ಜ್ಯೋತಿಸ್ವರೂಪದಲ್ಲಿ ಉತ್ಪತ್ಯವಾದ ಅಕಾರ ಉಕಾರ ಮಕಾರ- ಈ ಮೂರು ಬೀಜಾಕ್ಷರ. ಅಕಾರವೇ ಶಿವನು, ಉಕಾರವೇ ಶಿವತತ್ವ, ಮಕಾರವೇ ಪರವು. ಅಕಾರವೇ ನಾದವು, ಉಕಾರವೇ ಬಿಂದು, ಮಕಾರವೇ ಕಲೆ. ಈ ಆರೂ ನಾಮಂಗಳು ನಿಃಕಲತತ್ವ. ಆ ಪರಶಿವಶಕ್ತಿಯ ಸಂಕಲ್ಪದಿಂದ ನಾದ-ಬಿಂದು- ಕಲೆಸಂಯುಕ್ತವಾಗಿ ಅಖಂಡಲಿಂಗವಾಯಿತ್ತು. ಅದಕ್ಕೆ ಕರ ಚರಣ ಅವಯವಂಗಳೆಲ್ಲ ಅಖಂಡಸ್ವರೂಪ. ಇದಕ್ಕೆ ಚಿತ್ಪಿಂಡಾಗಮೇ : ``ಓಂಕಾರ ತಾರಕಾರೂಪಂ ಅಕಾರಂ ಚ ಪ್ರಜಾಯತೇ | ಓಂಕಾರಂ ಕುಂಡಲಾಕಾರಂ ಉಕಾರಂ ಚ ಪ್ರಜಾಯತೇ || ಓಂಕಾರಂ ಜ್ಯೋತಿರೂಪಂ ಚ ಮಕಾರಂ ಚ ಪ್ರಜಾಯತೇ | ಇತ್ಯಕ್ಷರತ್ರಯಂ ದೇವೀ ಸ್ಥಾನಸ್ಥಾನೇಷು ಜಾಯತೇ || ಅಕಾರೇ ಚ ಉಕಾರೇ ಚ ಮಕಾರೇ ಚಾಕ್ಷರತ್ರಯಂ | ಅಕಾರಂ ನಾದರೂಪೇಣ ಉಕಾರಂ ಬಿಂದುರುಚ್ಯತೇ || ಮಕಾರಂತು ಕಲಾಶ್ಚೈವ ನಾದಬಿಂದುಕಲಾತ್ಮನೇ | ನಾದಬಿಂದುಕಲಾಮಧ್ಯೇ ವೇದಲಿಂಗಸಮುದ್ಭವಃ || ಅಖಂಡಗೋಳಕಾಕಾರಂ ವೇದಪಂಚಕಸಂಜ್ಞಕಂ | ಅಖಿಲಾರ್ಣವ ಲಯಾನಾಂ ಲಿಂಗಮುಖ್ಯಂ ಪರಂ ತಥಾ || ಪರಂ ಗೂಢಂ ಶರೀರಸ್ಥಂ ಲಿಂಗಕ್ಷೇತ್ರಮನಾದಿವತ್ | ಯದೀದಮೀಶ್ವರಂ ತೇಜಃ ತಲ್ಲಿಂಗಂ ಪಂಚಸಂಜ್ಞಕಂ ||'' ಇಂತೆಂದುದಾಗಿ, ಇದಕ್ಕೆ ಈಶ್ವರ ಉವಾಚ : ``ಅಕಾರೋಕಾರ ಸಂಯೋಗ ತನ್ಮಧ್ಯೇ ಲಿಂಗರೂಪಕಂ | ಅವ್ಯಕ್ತ ಲಿಂಗಮಕಲ್ಪಂ ಗೋಳಕಾಕಾರಸಂಜ್ಞಕಂ || ನಾದೋಲಿಂಗಮಿತಿ ಜ್ಞೇಯಂ ಬಿಂದುಃ ಪಿಂಡಮುದಾಹೃತಂ | ನಾದಬಿಂದು ಯುಕ್ತರೂಪಂ ಜಗತ್ಸ ೃಷ್ಟ್ಯರ್ಥಕಾರಣಂ || ಚಿದ್ವ್ಯೋಮಲಿಂಗಮಿತ್ಯಾಹ ಚಿದ್ಭೂಮಿಸ್ತಸ್ಯ ಪೀಠಿಕಾ | ಆಲಯಂ ಸರ್ವಭೂತಾನಾಂ ಲಯನಾಂ ಲಿಂಗಮುಚ್ಯತೇ || ಲೀಯತೇ ಗಮ್ಯತೇ ಯತ್ರ ಯೇನ ಸರ್ವಂ ಚರಾಚರಂ | ತದೇಲ್ಲಿಂಗಮಿತ್ಯುಕ್ತಂ ಲಿಂಗತತ್ವಪರಾಯಣೈಃ || ಲಿಂಗಃ ಶಂಭುರಿತಿ ಜ್ಞೇಯಂ ಶಕ್ತಿಃ ಪೀಠಮುದಾಹೃತಂ | ಶಿವೇನ ಶಕ್ತಿಸಂಯೋಗಃ ಸೃಷ್ಟಿಸ್ಥಿತಿಲಯಾವಹಃ || ಲಿಂಗೇನ ಜಾಯತೇ ತತ್ರ ಜಗತ್ಸ್ಥಾವರಜಂಗಮಂ | ತಸ್ಮಾಲ್ಲಿಂಗೇ ವಿಶೇಕ್ಷೀಣ ಲಿಂಗರೂಪಮುದಾಹೃತಂ || ಅಸಂಖ್ಯಾತಮಹಾವಿಷ್ಣು ಅಸಂಖ್ಯಾತಪಿತಾಮಹಃ | ಅಸಂಖ್ಯಾತಾ ಸುರೇಂದ್ರಾಶ್ಚ ಲೀಯಂತೇ ಸರ್ವದೇವತಾಃ || ವಿಷ್ಣು ಸಂಜ್ಞಾ ಅಸಂಖ್ಯಾತಾಃ ಅಸಂಖ್ಯಾತ ಕವಿಕಾಮಃ | ಅಸಂಖ್ಯಾ ದೇವಮುನಯೋ ಗಮ್ಯತೇ ಸರ್ವದೇವತಾಃ || ಲೀಯತೇ ಗಮ್ಯತೇ ಯತ್ರ ಯೇನ ಸರ್ವಂ ಚರಾಚರಂ | ತದೇತಲ್ಲಿಂಗಮಿತ್ಯಾಹುರ್ಲಿಂಗತತ್ವಪರಾಯಣೈಃ ||'' ಇಂತೆಂದುದಾಗಿ, ಇದಕ್ಕೆ ಪ್ರಣವಾನಂದ ಸೂಕ್ತಿ :ಶ್ರೀ ಮಹಾದೇವ ಉವಾಚ- ``ಆದಿ ಓಂಕಾರಪೀಠಂ ಚ ಅಕಾರಂ ಕಂಠ ಉಚ್ಯತೇ | ಉಕಾರಂ ಗೋಮುಖಂ ಚೈವ ಮಕಾರಂ ವರ್ತುಲಂ ತಥಾ || ನಾದಬಿಂದುಮಹಾತೇಜಂ ನಾದಂ ಅಖಂಡಲಿಂಗಕಃ | ಆದಿಮಧ್ಯಾಂತರಹಿತಂ ಅಪ್ರಮೇಯಂ ಅನಾಮಯಂ || ಅಸಂಖ್ಯಾತಸೂರ್ಯಚಂದ್ರಾಗ್ನಿ ಅಸಂಖ್ಯಾತ ತಟಿತ್ಕೋಟಿ ಪ್ರಭಃ | ಅವ್ಯಕ್ತಂ ಅಮಲಂ ಶೂನ್ಯಂ ಅಪ್ರಮಾಣಮಗೋಚರಂ || ನಿರ್ನಾಮಂ ನಿರ್ಗುಣಂ ನಿತ್ಯಂ ನಿರಂಜನಂ ನಿರಾಮಯಂ | ಇತಿ ಲಿಂಗಸ್ಥಲಂತು ದುರ್ಲಭಂ ಕಮಲಾನನೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅನಾಮಯ ಜಂಗಮಲಿಂಗವೇ, ಎಮ್ಮ ಗೃಹದಲ್ಲಿರ್ಪ ಸಕಲಸೈದಾನ ಎನ್ನ ಅರುಹಿಂಗೆ ಶರಣುಹೊಕ್ಕು ಮುಂದುವರಿಯುತಿರ್ದವು. ಎನ್ನ ಅರಿವು ಜ್ಞಾನಕ್ಕೆ ಶರಣುಹೊಕ್ಕು ಮುಂದುವರಿಯುತಿರ್ದವು. ಎನ್ನ ಜ್ಞಾನ ಮನಕ್ಕೆ ಶರಣುಹೊಕ್ಕು ಮುಂದುವರಿಯುತಿರ್ದವು. ಎನ್ನ ಮನ ಕಂಗಳಿಗೆ ಶರಣುಹೊಕ್ಕು ಮುಂದುವರಿಯುತಿರ್ದವು. ಎನ್ನ ಕಂಗಳು ಹಸ್ತಂಗಳಿಗೆ ಶರಣುಹೊಕ್ಕು ಮುಂದುವರಿಯುತಿರ್ದವು. ಎನ್ನ ಹಸ್ತಂಗಳು ನಿಮ್ಮ ಪದಕಮಲದ ಸೋಂಕಿನ ಸುಖವನೇ ಮುಂದುವರಿಯುತಿರ್ದವು. ಗುರುನಿರಂಜನ ಚನ್ನಬಸವಲಿಂಗ ಸನ್ನಿಹಿತ ಚಿತ್ತೈಸಬನ್ನಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಲಕ್ಷಿಸಿ ಕಂಡೆಹೆನೆಂದಡೆ ಅಲಕ್ಷ್ಯ, ಅನಾಮಯ. ಅದನುಳಿದು ಕಂಡೆಹೆನೆಂದಡೆ ಮಿಕ್ಕಾದವು ಮೃತಕಾಯ. ಉಭಯವನರಿದು ವಿಚಾರಿಸಬೇಕು, ಐಘಟದೂರ ರಾಮೇಶ್ವರಲಿಂಗವ.
--------------
ಮೆರೆಮಿಂಡಯ್ಯ
ಅಲಕ್ಷ ಅನಾಮಯ ಅಖಂಡ ನಿಲವು ಲಕ್ಷಕ್ಕೆ ಬಂದು ನಿಂದಲ್ಲಿ
--------------
ದೇಶಿಕೇಂದ್ರ ಸಂಗನಬಸವಯ್ಯ
-->