ಅಥವಾ

ಒಟ್ಟು 13 ಕಡೆಗಳಲ್ಲಿ , 1 ವಚನಕಾರರು , 13 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿರವಯಸ್ಥಲದಲ್ಲಿ ನಿಂದ ಬಳಿಕ ಹೊನ್ನ ಹಿಡಿಯೆನೆಂಬ ಭಾಷೆ ಎನಗೆ. ಹೆಣ್ಣು ಹೊನ್ನು ಮಣ್ಣು ಹಿಡಿದು ಲಿಂಗೈಕ್ಯನಾದೆನೆಂದಡೆ ಎನ್ನ ಅಂಗದ ಮೇಲೆ ಲಿಂಗವಿಲ್ಲ. ಪಟ್ಟೆಮಂಚ ಹಚ್ಚಡ ಬಂದಡೆ ದಿಟ್ಟಿಸಿ ನೋಡೆ. ಸಣ್ಣ ಬಣ್ಣಗಳು ಬಂದಡೆ ಕಣ್ಣೆತ್ತಿ ನೋಡೆನೆಂಬ ಭಾಷೆ ಎನಗೆ. ಎನ್ನ ಲಿಂಗಕ್ಕೆ ಸೆಜ್ಜೆ ಶಿವದಾರವ ಬಾಯೆತ್ತಿ ಭಕ್ತ ಜಂಗಮವ ಬೇಡಿದೆನಾದಡೆ, ಎನ್ನ ಅರುವಿಂಗೆ ಭಂಗ ನೋಡಾ. ಬಸವಣ್ಣ ಸಾಕ್ಷಿಯಾಗಿ, ಪ್ರಭುವಿಗರಿಕೆಯಾಗಿ. ಪ್ರಭುದೇವರ ಕಂಡು ಕೈಯಲ್ಲಿ ಕಟ್ಟಿದ ಬಿರಿದಿಂಗೆ ಹಿಂದೆಗೆದೆನಾದಡೆ ಎನಗೆ ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ, ಪಾದೋದಕ ಪ್ರಸಾದವೆಂಬುದು ಎಂದೆಂದಿಗೂ ಇಲ್ಲ. ಅಮುಗೇಶ್ವರನೆಂಬ ಲಿಂಗವು ಸ್ವಪ್ನದಲ್ಲಿ ಸುಳಿಯಲಿಲ್ಲ.
--------------
ಅಮುಗೆ ರಾಯಮ್ಮ
ಬಾವಿಯ ಉದಕವ ಕುಡಿವರ ಕಂಡೆ; ಬಾನಿನಲ್ಲಿಪ್ಪ ಉದಕವ ತರುವರ ಕಾಣೆ. ಹರವಿಯ ಅಗ್ಘವಣಿಯ ಕುಡಿವವರನಲ್ಲದೆ ಅಮುಗೇಶ್ವರನೆಂಬ ಲಿಂಗವನರಿವವರ ಕಾಣೆ.
--------------
ಅಮುಗೆ ರಾಯಮ್ಮ
ಆಸೆಯುಳ್ಳವಂಗೆ ಮಾಟಕೂಟವಲ್ಲದೆ, ನಿರಾಸೆಯುಳ್ಳವಂಗೆ ಮಾಟಕೂಟವೇಕೆ ? ಮನಪರಿಣಾಮಿಗೆ ಮತ್ಸರವೇಕೆ ? ಸುತ್ತಿದ ಮಾಯಾಪ್ರಪಂಚವ ಜರಿದವಂಗೆ ಅಂಗನೆಯರ ಹಿಂದು ಮುಂದೆ ತಿರುಗಲೇಕೆ ? ಅಮುಗೇಶ್ವರನೆಂಬ ಲಿಂಗವನರಿದವಂಗೆ ಅಷ್ಟವಿಧಾರ್ಚನೆ ಷೋಡಶೋಪಚಾರದ ಹಂಗೇಕೆ
--------------
ಅಮುಗೆ ರಾಯಮ್ಮ
ಸಮಯದೊಡನೆ ಸುಳಿದಾಡುವೆನೆಂಬ ಭಾವದ ಭ್ರಮೆಯವನಲ್ಲ. ಆತ್ಮತೇಜಕ್ಕೆ ಹರಿದಾಡುವೆನೆಂಬ ಭ್ರಾಂತಿನ ಭ್ರಮೆಯವನಲ್ಲ. ಅಮುಗೇಶ್ವರನೆಂಬ ಲಿಂಗವನರಿದ ಬಳಿಕ ನನ್ನವರು ತನ್ನವರು ಎಂಬ ಭ್ರಾಂತಿನವನಲ್ಲ.
--------------
ಅಮುಗೆ ರಾಯಮ್ಮ
ನಾನೆ ಗುರುವಾದಬಳಿಕ ಗುರುವೆಂಬುದಿಲ್ಲ. ನಾನೆ ಲಿಂಗವಾದಬಳಿಕ ಲಿಂಗವೆಂಬುದಿಲ್ಲ. ನಾನೆ ಜಂಗಮವಾದಬಳಿಕ ಜಂಗಮವೆಂಬುದಿಲ್ಲ. ನಾನೆ ಪ್ರಸಾದವಾದಬಳಿಕ ಪ್ರಸಾದವೆಂಬುದಿಲ್ಲ. ಅಮುಗೇಶ್ವರನೆಂಬ ಲಿಂಗವು ತಾನೆಯಾದಬಳಿಕ ಲಿಂಗವನರಿದೆನೆಂಬ ಹಂಗಿನವನಲ್ಲ.
--------------
ಅಮುಗೆ ರಾಯಮ್ಮ
ಹಿಡಿದ ಛಲವ ಬಿಡದೆ ನಡೆಸುವರ ಕಂಡಡೆ ಎನ್ನ ಕರ್ತು ಬಾರೆಂಬರಯ್ಯಾ ಮೃಡನ ಶರಣರು. ಎನ್ನೊಡೆಯ ಕಡುಗಲಿಯಾಗಿ ಬಿಡದೆ ಆಚರಿಸಿ ಬಳಲಿದಿರಯ್ಯಾ ಅಮುಗೇಶ್ವರನೆಂಬ ಲಿಂಗವನರಿದ ಶರಣರು.
--------------
ಅಮುಗೆ ರಾಯಮ್ಮ
ಗುರುವಿನಡಿಗೆರಗೆನೆಂಬ ಭಾಷೆ ರಿನಗೆ. ಲಿಂಗವ ಪೂಜಿಸಿ ವರವ ಬೇಡೆನೆಂಬ ಭಾಷೆ ಎನಗೆ. ಜಡೆಮುಡಿಯುಳ್ಳ ನಿಜಜಂಗಮವ ಕಂಡು ಅಡಿಗೆರಗದ ಭಾಷೆ ಎನಗೆ. ಹಿಡಿದ ಛಲವ ಬಿಡದೆ ನಡೆಸಿ ಮೃಡನ ಪಡೆದೆಹೆನೆಂಬ ಭಾಷೆ ಎನಗೆ. ಕಡುಗಲಿಯಾಗಿ ಆಚರಿಸಿ ಜಡಿದೆನು ಅಜ್ಞಾನಿಗಳ ಬಾಯ ಕೆರಹಿನಲ್ಲಿ. ಮಾತಿನಲ್ಲಿ ವೇಷಧಾರಿಗಳು ಮೃಡನ ಅರಿದೆಹೆನೆಂದು ಗಳಹುತಿಪ್ಪರೆ, ಕೆರಹಿನಟ್ಟೆಯಲ್ಲಿ ಹೊಯ್ಯದೆ ಮಾಣ್ಬನೆ ಅರಿವುಳ್ಳ ಘನಮಹಿಮನು ¯ ಅಮುಗೇಶ್ವರನೆಂಬ ಲಿಂಗವ ಅರಿದಿಪ್ಪ ಮಹಾಘನಮಹಿಮನ ನಾನೇನೆಂಬೆನಯ್ಯಾ ?
--------------
ಅಮುಗೆ ರಾಯಮ್ಮ
ನವನಾರಿಕುಂಜರ ಪಂಚನಾರಿತುರಂಗವೆಂಬವನ ಮೇಲೆ ಬಿರಿದ ಕಟ್ಟಿದ ಬಳಿಕ, ಪರಶಿವಂಗೆ ಸಾಕಾರವಾಗಿರಬೇಕು. ಬಸವಾದಿ ಪ್ರಮಥರಿಗೆ ಬಲುಗಯ್ಯನಾಗಿರಬೇಕು. ಬಸವಣ್ಣಂಗೆ ಲಿಂಗವಾಗಿರಬೇಕು. ಪ್ರಭುದೇವರಿಗೆ ಪ್ರಣವಸ್ವರೂಪವಾಗಿರಬೇಕು. ಅಮುಗೇಶ್ವರನೆಂಬ ಲಿಂಗವನರಿದಡೆ ನಿರ್ಭೇದ್ಯನಾಗಿ ನಿಜಲಿಂಗೈಕ್ಯನಾಗಿಪ್ಪನಯ್ಯಾ.
--------------
ಅಮುಗೆ ರಾಯಮ್ಮ
ಭಾವವಿಲ್ಲದ ಬಯಲೊಳಗೆ ಮನೆಯ ಮಾಡಿದಡೆ ಬೆಟ್ಟಬೆಟ್ಟಕ್ಕೆ ಜಗಳಬಂದು ಕಿಚ್ಚು ಹತ್ತಿತ್ತು. ಭಾವವಿಲ್ಲದ ಬಯಲೊಳಗಣ ಮನೆ ಬೆಂದಿತ್ತು. ಅಮುಗೇಶ್ವರನೆಂಬ ಲಿಂಗವರಿಯಬಂದಿತ್ತು.
--------------
ಅಮುಗೆ ರಾಯಮ್ಮ
ಕುಂಜರನ ಮರಿಯ ಸರಪಳಿಯಲ್ಲಿ ಕಟ್ಟುವರಲ್ಲದೆ, ಹಂದಿಯ ಮರಿಯ ಸರಪಳಿಯಲ್ಲಿ ಕಟ್ಟುವರೆ ಅಯ್ಯಾ ? ಸಿಂಹದ ಮರಿಯ ಕಂಡಡೆ ಸೋಜಿಗಬಡುವರಲ್ಲದೆ, ಸಿಂಗಳೀಕನ ಮರಿಯ ಕಂಡಡೆ ಸೋಜಿಗಬಡುವರೆ ಅಯ್ಯಾ ? ಕಸ್ತೂರಿಯಮೃಗವ ಕಂಡಡೆ ಆಶ್ಚರ್ಯಗೊಂಬರಲ್ಲದೆ ಕತ್ತೆಯಮರಿಯ ಕಂಡಡೆ ಕಣ್ಣಿನಲ್ಲಿ ನೋಡರು ನೋಡಾ ! ಲಿಂಗವನಪ್ಪಿ ಅಗಲದಿಪ್ಪ ಲಿಂಗೈಕ್ಯನ ಕಂಡಡೆ ಜಗವೆಲ್ಲಾ ಕೊಂಡಾಡುತಿಪ್ಪರು ನೋಡಾ ! ಅಮುಗೇಶ್ವರನೆಂಬ ಲಿಂಗವನರಿಯದ ಅಜ್ಞಾನಿಗಳ ಕಂಡಡೆ ಕತ್ತೆಯಮರಿಯೆಂದು ಕಣ್ಣುಮುಚ್ಚಿಕೊಂಡಿಪ್ಪರು ನೋಡಾ !
--------------
ಅಮುಗೆ ರಾಯಮ್ಮ
ಕುಲವನತಿಗಳೆದವಂಗೆ ಕುಲದ ಹಂಗೇತಕಯ್ಯಾ ? ಬಲ್ಲೆನೆಂಬವಂಗೆ ಗೆಲ್ಲಸೋಲದ ಹಂಗೇತಕಯ್ಯಾ ? ಅಮುಗೇಶ್ವರನೆಂಬ ಲಿಂಗವನರಿದ ಶರಣಂಗೆ ಈ ಸಮಯದ ಹಂಗೇತಕಯ್ಯಾ ?
--------------
ಅಮುಗೆ ರಾಯಮ್ಮ
ಕತ್ತೆಯನೇರಿ ಬಪ್ಪವರೆಲ್ಲಾ ನಿತ್ಯರಾಗಬಲ್ಲರೆ ? ಉಪ್ಪು ಹುಳಿಯ ಮುಟ್ಟುವರೆಲ್ಲ ಕರ್ತನ ಕಾಣಬಲ್ಲರೆ ? ಅಮುಗೇಶ್ವರನೆಂಬ ಲಿಂಗವನರಿದೆನೆಂಬವರು ಅರಿಯಲರಿಯರು ಆರಾರೂ.
--------------
ಅಮುಗೆ ರಾಯಮ್ಮ
ಸಿಂಹದಮರಿಯ ಸೀಳ್ನಾಯ ಸರಿ ಎನ್ನಬಹುದೆ ? ವರಹ ಕುಕ್ಕುಟನ ಸರಿ ಎನ್ನಬಹುದೆ ? ಹೊನ್ನು ಹೆಣ್ಣು ಮಣ್ಣ ಹಿಡಿದು ಲಿಂಗೈಕ್ಯರೆನಿಸಿಕೊಂಬ ಅಜ್ಞಾನಿಗಳೆಲ್ಲರು ಸೀಳ್ನಾಯಿಗಳೆಂಬೆನಯ್ಯಾ. ಸಮ್ಯಕ್‍ಜ್ಞಾನವ ಮುಂದುಗೊಂಡು ಸದಾಚಾರಿಯಾಗಿ ಭಕ್ತಿ ಭಿಕ್ಷವ ಬೇಡಬಲ್ಲಡೆ, ನಿತ್ಯಲಿಂಗೈಕ್ಯರೆಂಬೆ. ಅಮುಗೇಶ್ವರನೆಂಬ ಲಿಂಗಕ್ಕೆ ಅತ್ತತ್ತಲಾದ ಘನಮಹಿಮನೆಂಬೆನಯ್ಯಾ
--------------
ಅಮುಗೆ ರಾಯಮ್ಮ
-->