ಅಥವಾ

ಒಟ್ಟು 18 ಕಡೆಗಳಲ್ಲಿ , 1 ವಚನಕಾರರು , 18 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸರ್ವಾಗಮ ಶ್ರುತಿ ಸ್ಮೃತಿ ಪುರಾಣ ಪಾಠಕನಾದಡೇನು ? ಸರ್ವಮಂತ್ರತಂತ್ರಸಿದ್ಭಿ ಮರ್ಮವರಿತಡೇನು ? ನಿತ್ಯಶಿವಾರ್ಚನೆ ತ್ರಿಕಾಲವಿಲ್ಲ; ನಿತ್ಯಪಾದೋದಕ ಪ್ರಸಾದ ಸೇವನೆಯಿಲ್ಲ. ಇದೇತರ ವೀರಶೈವವ್ರತ, ಇದೇತರ ಜನ್ಮಸಾಫಲ್ಯ ಅಮುಗೇಶ್ವರಲಿಂಗವೆ ?
--------------
ಅಮುಗೆ ರಾಯಮ್ಮ
ಕಾವಿ ಕಾಷಾಂಬರವ ಹೊದ್ದು ಕಾಮವಿಕಾರಕ್ಕೆ ತಿರುಗುವ ಕರ್ಮಿಗಳಮುಖವ ನೋಡಲಾಗದು. ಜಂಗಮವಾಗಿ ಜಗದಿಚ್ಫೆಯ ನುಡಿವ ಜಂಗುಳಿಗಳಮುಖವ ನೋಡಲಾಗದು. ಲಿಂಗೈಕ್ಯರೆನಿಸಿಕೊಂಡು ಅಂಗವಿಕಾರಕ್ಕೆ ತಿರುಗುವ ಲಿಂಗದ್ರೋಹಿಗಳ ಮುಖವ ನೋಡಲಾಗದು ಕಾಣಾ, ಅಮುಗೇಶ್ವರಲಿಂಗವೆ.
--------------
ಅಮುಗೆ ರಾಯಮ್ಮ
ವಿರಕ್ತನಾದ ಬಳಿಕ ವಿಷಯಕ್ಕೆ ದೂರನಾಗಿರಬೇಕು. ಒಣಗಿದ ಮರನ ವಾಯು ಅಪ್ಪಿದಂತಿರಬೇಕು. ಸಮುದ್ರದೊಳಗೆ ತರುಗಿರಿಗಳು ಮುಳುಗಿದಂತಿರಬೇಕು. ಮೂಗ ಕಂಡ ಕನಸಿನಂತಿರಬೇಕು. ಜಾಲಗಾರ ಕಂಡ ರತ್ನದಂತಿರಬಲ್ಲಡೆ, ವಿರಕ್ತನೆಂಬೆನು. ಹೀಂಗಲ್ಲದೆ ಅರುಹುಳ್ಳವರೆಂದು ತಮ್ಮ ಅಗಮ್ಯವ ಬೀರುವ ಅಜ್ಞಾನಿಯ ಭಕ್ತನೆಂದಡೆ, ಮಾಹೇಶ್ವರನೆಂದಡೆ, ಪ್ರಸಾದಿಯೆಂದಡೆ, ಪ್ರಾಣಲಿಂಗಿಯೆಂದಡೆ, ಶರಣನೆಂದಡೆ, ಐಕ್ಯನೆಂದಡೆ ಅಘೋರನರಕ ತಪ್ಪದು ಕಾಣಾ, ಅಮುಗೇಶ್ವರಲಿಂಗವೆ.
--------------
ಅಮುಗೆ ರಾಯಮ್ಮ
ಪೊಡವಿಯನಾಳುವರ ದೊರೆಗಳೆಂಬೆನೆ ? ಮೃಡನ ವೇಷವ ಧರಿಸಿದವರ ಕಡುಗಲಿಗಳೆಂಬೆನೆ ? ಅರಿವು ಆಚಾರವನರಿಯದವರ ಲಿಂಗೈಕ್ಯರೆಂಬೆನೆ ? ಎನ್ನೆನಯ್ಯಾ ಅಮುಗೇಶ್ವರಲಿಂಗವೆ.
--------------
ಅಮುಗೆ ರಾಯಮ್ಮ
ಎನ್ನ ದೇಹವ ದಗ್ಧವ ಮಾಡಯ್ಯಾ. ಎನ್ನ ಕಾಯದಲಿಪ್ಪ ಕರ್ಮವ ತೊಡೆಯಯ್ಯಾ. ಎನ್ನ ಭಾವದಲಿಪ್ಪ ಭ್ರಮೆಯ ಜರಿಯಯ್ಯಾ. ನಾ ಹಿಡಿದ ಛಲವ ಬಿಡದೆ ನಡೆಸಯ್ಯಾ ಅಮುಗೇಶ್ವರಲಿಂಗವೆ.
--------------
ಅಮುಗೆ ರಾಯಮ್ಮ
ಅನುಭಾವಿ ಅನುಭಾವಿಗಳೆಂಬ ಅಜ್ಞಾನಿಗಳ ಮುಖವ ನೋಡಲಾಗದು. ಕಂಗಳ ಮುಂದಣ ಕಾಮ, ಮನದ ಮುಂದಣ ಆಸೆ, ಅಂಗದಲ್ಲಿ ಅಹಂಕಾರವಾಗಿಪ್ಪವರ ಅನುಭಾವಿಗಳೆಂಬೆನೆ ? ಸೂಳೆಯ ಮನೆಯಲ್ಲಿಪ್ಪ ಗವುಡಿಯಂತೆ ತಮ್ಮ ತಮ್ಮ ಹಿರಿಯತನವ ಮುಂದುಗೊಂಡು ಕುರಿಗಳಂತೆ ತಿರುಗುವ ಜಡರುಗಳ ಅನುಭಾವಿಗಳೆಂಬೆನೆ ? ಹತ್ತೈದ ಕೂಡಿಕೊಂಡು ಇಕ್ಕಿ ಎರೆವವರ ಮನೆಗೆ ಹೋಗಿ, ಭಕ್ತಿಬಿನ್ನಹವ ಕೈಕೊಂಡಡೆ ಬೆಕ್ಕು ಹಾಲುಕುಡಿದಂತೆ. ಅತ್ಯತ್ತಿಷ್ಠದ್ದಶಾಂಗುಲನೆಂದು ಘಟವ ಹೊರೆವ ಮಿಟ್ಟೆಯ ಭಂಡರು ಕಟ್ಟಿಗೆ ಮಣ್ಣ ಹಾಕಿ ಹೊಟ್ಟೆಯ ಹೊರೆವವನಂತೆ. ಇಷ್ಟಲಿಂಗವನರಿಯದೆ ಸತ್ಯರೆಂದು ಘಟವ ಹೊರೆವ ಘಟಕರ್ಮಿಗಳ ಮುಖವ ನೋಡಲಾಗದು ಅಮುಗೇಶ್ವರಲಿಂಗವೆ.
--------------
ಅಮುಗೆ ರಾಯಮ್ಮ
ಇಷ್ಟಲಿಂಗವ ಪೂಜಿಸುವ ಗುಪ್ತಪಾತಕರನೊಲ್ಲೆ. ಅದೇನು ಕಾರಣವೆಂದಡೆ, ಆ ಲಿಂಗದ ಘನವನರಿದು ತ್ರಿಕಾಲಪೂಜೆಯ ಮಾಡಬಲ್ಲಡೆ ಮಹಾನುಭಾವಿಗಳೆಂಬೆ ಅಮುಗೇಶ್ವರಲಿಂಗವೆ.
--------------
ಅಮುಗೆ ರಾಯಮ್ಮ
ಇಷ್ಟಲಿಂಗ ಭಿನ್ನವಾಗಲೊಡನೆ ತೆತ್ತಿಗರ ಕಂಡಲ್ಲಿ ವಸ್ತುವ ಬಿಡುವುದು. ತೆತ್ತಿಗರ ಕಾಣದಿರ್ದಡೆ ನೀರು ನೇಣು ವಿಷ ಔಷಧಂಗಳಲ್ಲಿ ವಸ್ತುವಿನೊಡನೆ ವಸ್ತುವ ಬಿಡಬೇಕು, ಇದಕ್ಕೆ ಸಂದೇಹವಿಲ್ಲ. ಆವಾವ ಪ್ರಕಾರದಲ್ಲಿ ಹೋದಡೂ ಸಂದೇಹವಿಲ್ಲ ಲಿಂಗೈಕ್ಯಂಗೆ. ಅಮುಗೇಶ್ವರಲಿಂಗವೆ, ನಿಮ್ಮ ಶರಣರು ಈರೇಳುಭುವನ ಹದಿನಾಲ್ಕುಲೋಕದಲ್ಲಿ ಲಿಂಗಸಹಿತ ಒಪ್ಪುವರು.
--------------
ಅಮುಗೆ ರಾಯಮ್ಮ
ಅರಿವು ಆಚಾರವುಳ್ಳ ಸಮ್ಯಜ್ಞಾನಿಗೆ ಹೇಳುವೆನಲ್ಲದೆ, ಜಗದಲ್ಲಿ ನಡೆವ ಜಂಗುಳಿಗಳಿಗೆ ನಾ ಹೇಳುವನಲ್ಲ. ಆರುಸ್ಥಲವನರಿದ ಲಿಂಗೈಕ್ಯಂಗೆ ಅಂಗದಮೇಲಣ ಲಿಂಗ ಭಿನ್ನವಾಗಲು ಸಂದೇಹಗೊಳ್ಳಲಿಲ್ಲ, ಲಿಂಗ ಹೋಯಿತ್ತು ಎಂದು ನುಡಿಯಲಿಲ್ಲ. ವೃತ್ತ ಗೋಳಕ ಗೋಮುಖ ಈ ತ್ರಿವಿಧ ಸ್ಥಾನದಲ್ಲಿ ಭಿನ್ನವಾಗಲು ಲಿಂಗದಲ್ಲಿ ಒಡವೆರೆಯಬೇಕು. ಹೀಂಗಲ್ಲದೆ ಸಂದೇಹವೆಂದು ಘಟವ ಹೊರೆವ ಅಜ್ಞಾನಿ ಕೋಟಿಜನ್ಮದಲ್ಲಿ ಶೂರಕನಾಗಿ ಹುಟ್ಟುವ. ಸಪ್ತಜನ್ಮದಲ್ಲಿ ಕುಷ್ಟನಾಗಿ ಹುಟ್ಟುವ. ದಾಸೀ ಗರ್ಭದಲ್ಲಿ ಹುಟ್ಟಿ, ಹೊಲೆಯರ ಎಂಜಲ ತಿಂದು, ಭವಭವದಲ್ಲಿ ಬಪ್ಪುದು ತಪ್ಪದು ಕಾಣಾ, ಚೆನ್ನಬಸವಣ್ಣ ಸಾಕ್ಷಿಯಾಗಿ ಅಮುಗೇಶ್ವರಲಿಂಗವೆ.
--------------
ಅಮುಗೆ ರಾಯಮ್ಮ
ಶರಣನ ಅಂತರಂಗದಲ್ಲಿ ಪ್ರಾಣಲಿಂಗವಾಗಿ, ಬಹಿರಂಗದಲ್ಲಿ ಇಷ್ಟಲಿಂಗವಾಗಿಪ್ಪ ಭೇದವನರಿಯರಲ್ಲಾ! ಲೀಲೆಯಾದಡೆ ಉಮಾಪತಿಯಾಗಿಪ್ಪನು, ಲೀಲೆ ತಪ್ಪುಲೊಡನೆ ಸ್ವಯಂಭುವೆಯಾಗಿಪ್ಪ. ಶರಣಂಗೆ ಲಿಂಗ ಹೋಯಿತ್ತು ಎಂದು ನುಡಿವವರಿಗೆ ಕುಂಭೀಪಾತಕ ನಾಯಕನರಕ ತಪ್ಪದು. ಲಿಂಗೈಕ್ಯವಾದ ಶರಣನ ಸತ್ತನು ಎಂಬ ಭ್ರಷ್ಟರಿಗೆ ರೌರವನರಕ ತಪ್ಪದು ಕಾಣಾ, ಅಮುಗೇಶ್ವರಲಿಂಗವೆ, ನಿಮ್ಮ ಶರಣರು ಲಿಂಗೈಕ್ಯರು.
--------------
ಅಮುಗೆ ರಾಯಮ್ಮ
ಸಪ್ತಸಮುದ್ರಂಗಳೆಲ್ಲ ಬತ್ತಿಹೋದವಯ್ಯಾ. ಸಪ್ತವ್ಯಸನಂಗಳೆಲ್ಲ ಅರತುಹೋದವಯ್ಯಾ. ನಿತ್ಯರಾದೆವೆಂಬವರೆಲ್ಲ ಅನಿತ್ಯರಾದರಯ್ಯಾ ಮುಕ್ತಿಯೆಂಬುದು ಇನ್ನೆತ್ತಣದಯ್ಯಾ ಅಮುಗೇಶ್ವರಲಿಂಗವೆ ?
--------------
ಅಮುಗೆ ರಾಯಮ್ಮ
ವಿರಕ್ತ ವಿರಕ್ತ ಎಂಬ ಹಾದಿಕಾರರ ವಿರಕ್ತರೆನ್ನಬಹುದೆ ? ಕಾವಿಯ ಹೊದ್ದು ತಿರುಗುವ ಜೀವಗಳ್ಳರು ವಿರಕ್ತರೆ ? ನಾಮವ ಹೊತ್ತುಕೊಂಡು ತಿರುಗುವ ಗಾವಿಲರ ವಿರಕ್ತರೆಂದಡೆ, ಅಘೋರನರಕ ತಪ್ಪದು ಅಮುಗೇಶ್ವರಲಿಂಗವೆ.
--------------
ಅಮುಗೆ ರಾಯಮ್ಮ
ಭಕ್ತಿ ಜ್ಞಾನ ವೈರಾಗ್ಯದಿಂದ ವಿರಕ್ತನಾಗಿ ನನ್ನವರು ತನ್ನವರೆಂದು ನುಡಿವ ಕುನ್ನಿಗಳ ವಿರಕ್ತರೆಂಬೆನೆ ಅಯ್ಯಾ ? ಪಕ್ಷ ಪರಪಕ್ಷಂಗಳನರಿತು ಹೇಹಂಗಳ ಜರಿಯಬಲ್ಲಡೆ ವಿರಕ್ತನೆಂಬೆನು. ತ್ರಿವಿಧವನತಿಗಳೆದು ವಿರಕ್ತನಾದ ಬಳಿಕ ತ್ರಿವಿಧವ ಹಿಡಿದ ಗುರುವ ಕಂಡಡೆ, ಅವನ ಅಡಿಗೆರಗಿದೆನಾದಡೆ ಅಫ್ಸೋರ ನರಕ ತಪ್ಪದು, ಅದೇನು ಕಾರಣವೆಂದಡೆ ಭವಪಾಶಂಗಳ ಹರಿದು ಅವಿರಳನಾದ ಕಾರಣ, ವ್ರತಭ್ರಷ್ಟ ಲಿಂಗಬಾಹ್ಯನ ಮುಖವ ನೋಡೆನು. ಹೊನ್ನು ಹೆಣ್ಣು ಮಣ್ಣು ಹಿಡಿವರ ಕಂಡಡೆ, ಎನ್ನ ಗುರುವೆಂದು ಅಡಿಗೆರಗೆನು, ಬಸವಣ್ಣನೆ ಸಾಕ್ಷಿಯಾಗಿ ಅಮುಗೇಶ್ವರಲಿಂಗವೆ.
--------------
ಅಮುಗೆ ರಾಯಮ್ಮ
ಉಪಮಾತೀತನಾದ ಶರಣನ ಉಪಾಧಿಕನೆನ್ನಬಹುದೆ ? ತನ್ನ ತಾನರಿದ ಸಮ್ಯಗ್‍ಜ್ಞಾನಿಗೆ ನನ್ನವರು ತನ್ನವರೆಂಬ ಭಾವದ ಭ್ರಾಂತಿನಭ್ರಮೆ ಏತಕ್ಕೆ ? ಸಮ್ಯಜ್ಞಾನಿಯ ನಾನೇನೆಂಬೆನಯ್ಯಾ ಅಮುಗೇಶ್ವರಲಿಂಗವೆ. ?
--------------
ಅಮುಗೆ ರಾಯಮ್ಮ
ಹೆದರದಿರು ಮನವೆ, ಹಿಮ್ಮೆಟ್ಟದಿರು ಮನವೆ, ಹಿಡಿದ ಛಲವ ಬಿಡದಿರು ಮನವೆ. ಜರಿದರೆಂದು ಝಂಕಿಸಿದರೆಂದು ಶಸ್ತ್ರ ಸಮಾಧಿ ನೀರು ನೇಣು ವಿಷ ಔಷಧದಲ್ಲಿ ಘಟವ ಬಿಡದೆ ಗುರುವಾದಡು ಲಿಂಗವಾದಡು ಜಂಗಮವಾದಡು ನೊಸಲಲ್ಲಿ ಕಣ್ಣುಳ್ಳ ಪಶುಪತಿಯಾದಡು ತೆತ್ತಿಗರು ಕಂಡು ಒತ್ತಿ ನುಡಿದರೆಂದು ಘಟವ ಬಿಡುವ ಘಟಕರ್ಮಿಗಳು ಏಳೇಳು ಜನ್ಮದಲ್ಲಿ ಸೂಕರನ ಹೊಟ್ಟೆಯಲ್ಲಿ ಹುಟ್ಟಿ, ನೂರೊಂದು ಕುಲ ಹದಿನೆಂಟು ಜಾತಿಯ ಅಮೇಧ್ಯವ ತಿಂದು ಹೊಲೆಯರ ಮನೆಯ ಹೊಸ್ತಿಲ ಕಾಯ್ದುಕೊಂಡಿಪ್ಪರಯ್ಯಾ : ಅಮುಗೇಶ್ವರಲಿಂಗವೆ, ನಿಮ್ಮಾಣೆ ನಿಮ್ಮ ಪ್ರಮಥರಾಣೆ.
--------------
ಅಮುಗೆ ರಾಯಮ್ಮ
ಇನ್ನಷ್ಟು ... -->