ಅಥವಾ

ಒಟ್ಟು 35 ಕಡೆಗಳಲ್ಲಿ , 1 ವಚನಕಾರರು , 35 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮರನನೇರಿ ಹಣ್ಣನರಸಹೋದಡೆ ಮರ ಮುರಿದುಬಿದ್ದ ಮರುಳುಮಾನವನಂತೆ, ಕೆಸರಿನೊಳಗಣ ಹುಲ್ಲ ಮೇಯಹೋದ ಪಶುವಿನಂತೆ, ಕೊಂಬೆ ಕೊಂಬೆಗೆ ಹಾರುವ ಕೋಡಗನಂತೆ, ಉಂಡ ಮನೆಯ ದೂರುವ ಒಡೆಕಾರನಂತೆ, ಹಳ್ಳ ಹಳ್ಳ ತಿಬ್ಬಳಿ ತಿರುಗುವ ಬಳ್ಳುವಿನಂತೆ, ಮಾತಿನಲ್ಲಿ ಬ್ರಹ್ಮವ ನುಡಿವ ವೇಷಧಾರಿಗಳ ಲಿಂಗಾಂಗಿಗಳೆಂದಡೆ ಮಾರಿಗೆತಂದ ಹಂದಿಯ ನಾಯಿ ನರಿ ತಿಂಬಂತೆ ಕಾಣಾ ಅಮುಗೇಶ್ವರಾ.
--------------
ಅಮುಗೆ ರಾಯಮ್ಮ
ಮೂಗಿಲ್ಲದವಂಗೆ ಕನ್ನಡಿಯ ತೋರಲೇಕೆ ? ಕೈಯಿಲ್ಲದವಂಗೆ ಕುದುರೆಯನೇರಲೇಕೆ ? ಕಾಲಿಲ್ಲದವಂಗೆ ನಿಚ್ಚಣಿಗೆಯನೇರಲೇಕೆ ? ಭಕ್ತಿ ಜ್ಞಾನ ವೈರಾಗ್ಯವಿಲ್ಲದವಂಗೆ ಇಷ್ಟಲಿಂಗವೇಕೆ ಅಮುಗೇಶ್ವರಾ ?
--------------
ಅಮುಗೆ ರಾಯಮ್ಮ
ಅರಿಯಬಲ್ಲಡೆ ವಿರಕ್ತನೆಂಬೆನು. ಆಚಾರವನರಿದಡೆ ಅಭೇದ್ಯನೆಂಬೆನು. ಸ್ತುತಿ ನಿಂದೆಗೆ ಹೊರಗಾದಡೆ ಸುಮ್ಮಾನಿ ಎಂಬೆನು. ಘನತತ್ವವನರಿದು ಶಿಶುಕಂಡ ಕನಸಿನಂತೆ ಇದ್ದಡೆ ಶಿವಜ್ಞಾನಿ ಎಂಬೆನಯ್ಯಾ ಅಮುಗೇಶ್ವರಾ.
--------------
ಅಮುಗೆ ರಾಯಮ್ಮ
ಉತ್ತಮತೇಜಿಯಮರಿಗೆ ಸುಪ್ಪತ್ತಿಗೆಯಲ್ಲದೆ ಕತ್ತೆಯ ಮರಿಗೆ ಸುಪ್ಪತ್ತಿಗೆಯ ಹಾಸುವರೆ ? ಅಜ್ಞಾನಿಗಳ ಹೃದಯದಲ್ಲಿ ಪರಮಾಮೃತವ ಸುರಿದಡೆ ಪರರ ಕಾಡಿ ಬೇಡದೆ ಮಾಣ್ಬರೆ ? ಕುಂಜರನ ವೇಷವ ತೊಟ್ಟು ಹಂದಿಯಂತೆ ತಿರುಗುವ ಅಜ್ಞಾನಿಗಳನೇನೆಂಬೆ ಅಮುಗೇಶ್ವರಾ ?
--------------
ಅಮುಗೆ ರಾಯಮ್ಮ
ವೇಷವ ತೊಟ್ಟು ಗ್ರಾಸಕ್ಕೆ ತಿರುಗುವ ವೇಷಧಾರಿಗಳ ಕಂಡಡೆ ನಾಚಿತ್ತೆನ್ನ ಮನ. ಲಿಂಗವನರಿಯದೆ ಲಿಂಗೈಕ್ಯರೆಂಬ ಅಂಗವಿಕಾರಿಗಳ ಕಂಡಡೆ ಹೊದ್ದದು ಎನ್ನ ಮನ, ಅರಿದು ಆಚರಿಸಿದೆನೆಂಬ ಅಜ್ಞಾನಿಗಳ ಕಂಡಡೆ ಮೃಡನ ಶರಣರು ಮೆಚ್ಚುವರೆ ಅಮುಗೇಶ್ವರಾ ? ಲಿಂಗವನರಿಯದಿರ್ದಡೆ ಎಂತು ಲಿಂಗೈಕ್ಯರೆಂಬೆನಯ್ಯಾ ?
--------------
ಅಮುಗೆ ರಾಯಮ್ಮ
ಅರೆಯಮೇಲೆ ಮಳೆ ಹೊಯಿದಂತೆ, ಅರಿವುಳ್ಳವರಲ್ಲಿ ಅಗಮ್ಯವುಂಟೆ ? ವಾಯು ರೂಪಾದುದುಂಟೆ ? ಸರ್ವಸಂಬಂಧವ ಅರಿದ ಶರಣನ ಕಣ್ಣಿನಲ್ಲಿಕಂಡವರುಂಟೆ ? ತಿಪ್ಪೆಯ ಮೇಲಣ ಅರುವೆಯ ಸುಟ್ಟಡೆ ದಗ್ಧವಾದಂತೆ ಇರಬೇಕು. ಹೀಂಗಿರಬಲ್ಲಡೆ ಅನುಭಾವಿ ಎಂಬೆನಯ್ಯಾ, ಅಭೇದ್ಯರೆಂಬೆನಯ್ಯಾ, ಅಂಗಲಿಂಗ ಸಂಬಂದ್ಥಿಗಳೆಂಬೆನಯ್ಯಾ. ಲಿಂಗೈಕ್ಯರೆಂಬೆ ನಿಜವಿರಕ್ತರೆಂಬೆನಯ್ಯಾ. ಹೀಂಗಲ್ಲದೆ ಆತ್ಮತೇಜಕ್ಕೆ ಹೋರಾಡುವ ಘಾತಕರ ನಿಜವಿರಕ್ತರೆಂಬರೆ ಅಮುಗೇಶ್ವರಾ ?
--------------
ಅಮುಗೆ ರಾಯಮ್ಮ
ಅನುಭಾವಿಗೆ ಅಂಗಶೃಂಗಾರವುಂಟೆ ? ಅನುಭಾವಿಗೆ ಕಾಮಕ್ರೋಧವುಂಟೆ ? ಅನುಭಾವಿಗೆ ನಾಹಂ ಕೋಹಂ ಸೋಹಂ ಎಂಬ ಭ್ರಾಂತಿನ ಭ್ರಮೆಯುಂಟೆ ? ಅನುಭಾವಿಗೆ ನನ್ನವರು ತನ್ನವರೆಂಬ ಗನ್ನಗದಕಿನ ಮಾತುಂಟೆ ? ಅನುಭಾವಿಗಳೆಂಬವರು ಅಲ್ಲಿಗಲ್ಲಿಗೆ ತಮ್ಮ ಅನುಭಾವಂಗಳ ಬೀರುವರೆ ? ಅನುಭಾವಿಗಳ ಪರಿಯ ಹೇಳಿಹೆ ಕೇಳಿರಣ್ಣಾ ; ನೀರಮೇಲಣ ತೆಪ್ಪದಂತೆ, ಸಮುದ್ರದೊಳಗಣ ಬೆಂಗುಂಡಿನಂತೆ ಇರಬಲ್ಲಡೆ ಅನುಭಾವಿಗಳೆಂಬೆನಯ್ಯಾ. ವಚನಂಗಳ ಓದಿ ವಚನಂಗಳ ಕೇಳಿ ಕಂಡ ಕಂಡ ಠಾವಿನಲ್ಲಿ ಬಂಡುಗೆಲೆವ ಜಗಭಂಡರ, ಆತ್ಮತೇಜಕ್ಕೆ ತಿರುಗುವ ವೇಷಧಾರಿಗಳ ಕಂಡು ಅನುಭಾವಿಗಳೆಂದಡೆ ಅಘೋನರಕ ತಪ್ಪದು ಕಾಣಾ, ಅಮುಗೇಶ್ವರಾ.
--------------
ಅಮುಗೆ ರಾಯಮ್ಮ
ಮಾಯಾಯೋನಿಯಲ್ಲಿ ಹುಟ್ಟುವ ಮರುಳರೆಲ್ಲರು ಮಹಾಜ್ಞಾನಿಗಳಪ್ಪರೆ ? ಕಾಮವಿಕಾರಕ್ಕೆ ತಿರುಗುವ ಜೀವಗಳ್ಳರು ಅನಾದಿವಸ್ತುವನರಿವರೆ ? ಮಾತಿನಲ್ಲಿ ಮಹಾಜ್ಞಾನಿಗಳೆಂಬ ವೇಷಧಾರಿಗಳ ಕಂಡು ನಾಚುವೆ ಕಾಣಾ ಅಮುಗೇಶ್ವರಾ
--------------
ಅಮುಗೆ ರಾಯಮ್ಮ
ಶೀಲವಂತನಾದಡೆ ಜಾತಿಯ ಬಿಡಬೇಕು. ಶಿವಜ್ಞಾನಿಯಾದಡೆ ಸಮಯವ ಬಿಡಬೇಕು. ಹೀಂಗಲ್ಲದೆ ಜಗದಲ್ಲಿ ನಡೆವ ಭ್ರಾಂತರ ಸುದ್ದಿಯೇಕೆ ನಿಭ್ರಾಂತನಾದ ಶರಣಂಗೆ ಅಮುಗೇಶ್ವರಾ ?
--------------
ಅಮುಗೆ ರಾಯಮ್ಮ
ಮುಂಡವ ಹೊತ್ತುಕೊಂಡು ತಿರುಗುವ ಮೂಕೊರೆಯರ ಮುಖವ ನೋಡೆ. ಸತ್ತಕರುವ ಹೊತ್ತುಕೊಂಡು ತಿರುಗುವ ಭವವಿಕಾರಿಗಳ ಮುಖವ ನೋಡೆ. ನಿತ್ಯನಾದ ಬಳಿಕ, ಅನಿತ್ಯರ ಕೂಡೆ ಅಮುಗೇಶ್ವರಾ.
--------------
ಅಮುಗೆ ರಾಯಮ್ಮ
ಮುಂಡದಲ್ಲಿ ತಿರುಗುವವರು ಕೋಟ್ಯಾನುಕೋಟಿ; ತಲೆಯಲ್ಲಿ ತಿರುಗುವವರನಾರನೂ ಕಾಣೆ. ಅಂಗದಲ್ಲಿಪ್ಪ ಮಲಿನವ ಕಳೆವರು ಕೋಟ್ಯಾನುಕೋಟಿ; ಮನದಲ್ಲಿಪ್ಪ ಮಲಿನವ ಕಳೆವವರನಾರನೂ ಕಾಣೆ ಅಮುಗೇಶ್ವರಾ.
--------------
ಅಮುಗೆ ರಾಯಮ್ಮ
ಗರುಡಿಯಲ್ಲಿ ಸಾಮುವ ಮಾಡುವರಲ್ಲದೆ, ಕಾಳಗದಲ್ಲಿ ಸಾಮುವ ಮಾಡುವರೆ ? ಆದ್ಯರ ವಚನಂಗಳ, ಅರಿವುಸಂಬಂಧಿಗಳಲ್ಲಿ ಅರಿದಬಳಿಕ ಬಿಡಬೇಕು. ಅವರು ಕಡುಗಲಿಗಳಾಗಿ ಆಚರಿಸುವ ನಿಜವಿರಕ್ತರ ಎನಗೊಮ್ಮೆ ತೋರಾ ಅಮುಗೇಶ್ವರಾ.
--------------
ಅಮುಗೆ ರಾಯಮ್ಮ
ಕಾಗೆಯಮರಿ ಕೋಗಿಲೆಯಾಗಬಲ್ಲುದೆ ? ಆಡಿನಮರಿ ಆನೆಯಾಗಬಲ್ಲುದೆ ? ಸೀಳನಾಯಿ ಸಿಂಹದ ಮರಿಯಾಗಬಲ್ಲುದೆ ? ಅರಿವು ಆಚಾರ ಸಮ್ಯಜ್ಞಾನವನರಿಯದೆ ನಾಮವ ಹೊತ್ತುಕೊಂಡು ತಿರುಗುವ ಗಾವಿಲರ ಮುಖವ ನೋಡಲಾಗದು ಅಮುಗೇಶ್ವರಾ.
--------------
ಅಮುಗೆ ರಾಯಮ್ಮ
ಕತ್ತಲೆಯ ಮನೆಯಲ್ಲಿ ಸಕ್ಕರೆಯ ಸವಿದವನಂತಿರಬೇಕು. ಬಟ್ಟಬಯಲಲ್ಲಿ ನಿಂದು ಇಷ್ಟಲಿಂಗವ ಕಂಡವನಂತಿರಬೇಕು. ಇದಕ್ಕೆ ಗುರುವಿನ ಹಂಗೇಕೆ, ಲಿಂಗದಪೂಜೆ ಏಕೆ, ಸಮಯದ ಹಂಗೇಕೆ ? ತನ್ನ ತಾನು ಅರಿದವಂಗೆ ಏಣಾಂಕನಶರಣರ ಸಂಗವೇಕೆ ? ಇಷ್ಟವನರಿದವಂಗೆ ನಾನೇನು, ನೀನೇನು ಎಂಬ ಗೊಜಡಿನ ಭ್ರಮೆಯೇಕೆ ಅಮುಗೇಶ್ವರಾ ?
--------------
ಅಮುಗೆ ರಾಯಮ್ಮ
ಕರ್ಮೇಂದ್ರಿಯಂಗಳ ಜರಿದು ಕಡುಗಲಿಯಾದೆನು. ವರ್ಮವನತಿಗಳೆದು ನಿರ್ಮಳನಾದೆನು. ಅಣ್ಣಾ ಅಪ್ಪಾ ಎಂದು ಬಿನ್ನಾಣದ ಮಾತ ನುಡಿಯೆನು. ಅನ್ನ ಕೂಳಿಕ್ಕುವರ ಮನೆಯ ಕುನ್ನಿಗಳಾಗಿಪ್ಪವರ ಎನಗೆ ಸರಿ ಎಂಬೆನೆ ಅಮುಗೇಶ್ವರಾ ?
--------------
ಅಮುಗೆ ರಾಯಮ್ಮ
ಇನ್ನಷ್ಟು ... -->