ಅಥವಾ

ಒಟ್ಟು 16 ಕಡೆಗಳಲ್ಲಿ , 8 ವಚನಕಾರರು , 13 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆ ಪರಶಿವನ ನಿಜಸ್ವರೂಪವೇ ಬ್ರಹ್ಮಾಂಡವಾಗಿ, ಪಿಂಡಾಂಡವಾಗಿ, ಕರಣಂಗಳಾಗಿ, ಕರ್ಮಂಗಳಾಗಿ, ಸೃಷ್ಟಿ ಸ್ಥಿತಿ ಲಯಂಗಳಾಗಿ, ನೋವು ಸಾವುಗಳಾಗಿ, ತಾನೇ ಇದ್ದದ್ದು, ಸರ್ವವು ತಾನೆಂಬುದು ತಾನೇ ಮರೆತು, ಶಿಶುವು ತಾನಾಡುವ ಆಟದಲ್ಲಿ, ಕಲ್ಲಿಗೆ ಕಾಲ ತಗಲಿಸಿಕೊಂಡು ಅಳುವಂತೆ, ವಿಷಯದಿಚ್ಛೆಯಲ್ಲಿ ನೊಂದು ಶೋಕಿಸುತ್ತಿರಲು, ಆ ಶಿಶುವಿಗೆ ತಂದಿ ಬಂದು ಕಣ್ಣೀರೊರಸಿ, ಆ ಕಲ್ಲತಗಲಿದ ಕಾಲ್ನೋವಿಗೆ ಔಷದ್ಥಿಯ ಮಾಡಿ, ತನ್ನ ಹೆಂಡತಿಯ ಕರೆದು, ಮಗನ ಸಮಾಧಾನಮಾಡೆಂದು ಹೇಳಲು, ಆ ತಾಯಿಯೆತ್ತಿಕೊಂಡು, ಕಣ್ಣು, ಮೂಗು, ಕಿವಿ, ಬಾಯಿ, ಮೈ ಧೂಳವನ್ನೆಲ್ಲಾ ತಾ ಹೊದ್ದ ಮೇಲ್‍ಸೆರಗಿಲೊರಸಿ ಮೊಲೆಯುಣಿಸಿ, ತೊಟ್ಟಿಲೊಳು ಹಾಸಿ ಮಲಗಿಸಿ ಹೊಚ್ಚಿ ಹೆಂಗ ಮಂಗಲ ನುಡಿ, ನಮ್ಮಪ್ಪ ಅರಸ ಛೀಮಾರಿ ಛೀ ಛೀ ಛೀ ಅಳುಳುಳುಳುಳುಳೆಂದು ಹಾಡುತ್ತಿರಲು, ಆ ಶಿಶುವು ಆ ಔಷಧದಿಂದೆ ನೋವು ಹೋಗಿ, ತಾಯಿಯ ಮೊಲೆಹಾಲಿನಿಂದೆ ಹಸಿವು ಅಡಗಿ, ಆ ಜೋಗುಳಹಾಡಿಗೆ ಸೊಂಪುದೋರಿ ಸುಮ್ಮನಾಗಿ, ತೊಟ್ಟಿಲ ತೂಗುವುದರೊಳಗೆ ಜೋಕಬಂದು, ಸುಖನಿದ್ರೆಯೊಳ್ ಮೈಮರೆದಿರಲು, ಮಾಯೆಸರ್ಪನು ಬಂದು ಕಚ್ಚಿ ಕಾಣಿಸಿಕೊಳ್ಳದೆ ಹೋಗಲು, ಆ ತಾಯಿ ತಂದಿ ಉಂಡು ಮಂಚದಮ್ಯಾಲೆ, ರತಿಸಂಭೋಗಸುಖನಿದ್ರೆಯಲ್ಲಿರೆ, ಮಾಳಿಗೆ ಬಿದ್ದು ಮರಣವಾಗಲು, ಆ ತಾಯಿ ತಂದಿಯು ಮಗ ಈ ಮೂವರು ಮಾಳಿಗೆ ಬಿದ್ದು ಮರಣವಾದರೆಂಬುದಾಯಿತ್ತಲ್ಲದೆ, ಆ ಶಿಶುವಿನ ಸಾವು ಆರು ಅರಿಯರು. ಇದರ ಹಾಂಗೆ ತನ್ನ ವಿಷಯದಿಚ್ಛೆಗೆ ಓಡ್ಯಾಡಿ ಕಾಲನ ಬಾಧೆಗೆ ಬಿದ್ದು ಭವದುಃಖದೊಳಗಿರುವ ನರರಿಗೆ ತಾನೇ ಗುರುವಾಗಿ ಬಂದು, ಸಾನಂದಸಿದ್ಧರಾಮನು ಹೀನ ನರಕಿಗಳ ತಗೆದಂತೆ, ಆ ಶಿಷ್ಯನ ಕೈಹಿಡಿದೆತ್ತಿ ಸರ್ವಕರಣಗಳ ಶುದ್ಧಗೊಳಿಸಿ, ಶಿಕ್ಷೋಪದೇಶವಮಾಡಿ, ತನ್ನ ಚಿತ್‍ಶಕ್ತಿಯ ಕರಸಂಜ್ಞೆ ನುಡಿನೋಟದಿಂದೆ ತೋರಿ ಹೇಳಿ ಕಾಣಿಸಿಕೊಡಲು, ಆ ಚಿತ್‍ಶಕ್ತಿ ಹತಿಗೊಂಡು ನಿತ್ಯತ್ವದ ನುಡಿ ಮನದ ಮೈಲಿಗೆಯ ತೊಳೆದು ತನ್ನ ಮೇಲುಮುಸುಕಿದ ಮಹಾಜ್ಞಾನದ ಬೆಳಗಿನಲ್ಲಿ ಸರ್ವ ಅವಯವಂಗಳ ಕಸರು ಕಳೆದು, ಆತ್ಮಜ್ಞಾನದೊಳಗೆ ಅಖಂಡಜ್ಞಾನದಲ್ಲಿರಿಸಿ, ಬ್ರಹ್ಮಜ್ಞಾನವನಾಚ್ಛಾದಿಸಿ, ನಿಜಜ್ಞಾನದಲ್ಲಿ ಲೋಲ್ಯಾಡಿ, ಅರುವಿನ ಹರುಷದಲ್ಲಿ ಹಿಂದಿಂದು ಹೇಯವಾಗೆ ಮುಂದಿಂದು ಹಿತವಚನ ಮುಂದೆ ಅಲ್ಲಲ್ಲಾ, ಸರ್ವವು ಸುಳ್ಳು ಸುಳ್ಳೆಂಬ ಮಹದರುವಿನ ಅನುಭವದ ಶಿವೋಹಂ ಶಿವೋಹಂ ಶಿವೋಹಂ, ಸೋಹಂ, ಸೋಹಂ, ಸೋಹಂ, ನಮೋ ನಮೋ, ಓಂ ಓಂ ಓಂ ಓಂ ಓಂ ಓಂ ಓಂ ಓಂ ಓಂ ಓಂ ಏಂ ಏಂ ಏಂ ಏಂ ಏಂ ಎಂಬ ಮಹಾನಾದದೊಳಗೆ ಆ ಕಾಲನ ಬಾಧೆ ಹೋಗಿ, ಭವದುಃಖ ಹಿಂಗಿ, ಚಿತ್ತಚಿನ್ಮಯ ಸವಿಗೊಂಡು ನಿತ್ಯ ತೃಪ್ತನಾಗಿ, ನಿಜಲೀಲಾನುಭವದ ಶಬ್ದಕ್ಕೆ ಮುಗ್ಧನಾಗಿ, ಆತ್ಮಜ್ಞಾನದ ನಲಿಗಿನೊಳಗೆ ಲೋಲಗೊಂಡು, ಎಚ್ಚರಡಗಿ ಅಚ್ಚಸುಖದಲ್ಲಿ ಸಮರಸವಾಗಿರಲು, ಸಾವು ಬಂದು ಸಾವು ಸತ್ತು ಸಾವು ಸಾವಾಗಲು ಆ ಶರಣನ ಅಂಗ, ಮನ, ಭಾವ, ಆತ್ಮಸಂಗವೊಂದಾಗಿರೆ ಶ್ವಾಸ ಸುಳುಹುಗಳೆಲ್ಲಾ ನಿಂದು, ಚಿತ್ತ ಸತ್ತು ಸ್ವಸ್ಥವಾಗಲು, ನಿಜಶರಣನ ಅರುವು ಲಿಂಗದಲ್ಲಿ ಪರವಶರಾಗಿಹರೆಂಬುದು ಬಲ್ಲರಲ್ಲದೆ ಅರುವು ಮರೆಗೊಂಡಿರ್ಪ ನಿರ್ಬೈಲ ಆರೂ ಅರಿಯರೋ. ಆ ಶರಣ ತನ್ನರುವು ತಾನರಿಯ, ಸತ್ತ ಸುದ್ದಿ ಸತ್ತವ ಅರಿಯ, ಬದುಕಿದವ ಬಲ್ಲ. ಇದೇ ನಿಜಮುಕ್ತಿ ; ಇದನರಿಯದೆ, ತತ್ವವನೋದಿ ಗಾಳಿಗೊದರುವ ಒಡಕುಮಡಕಿಯ ಸ್ವರವ ಕಡಿಮಿಯಾದ ನಾದವನು ಆಲಿಸಿ, ನಾಹಂಬ್ರಹ್ಮವ ನುಡಿದು, ಕೋಹಂಬ್ರಹ್ಮವ ಬೆರೆತು, ಮುಂದೆ ಸೋಹಂ ಬ್ರಹ್ಮವ ಹುಡುಕದೆ, ದಾಸೋಹಂಬ್ರಹ್ಮವ ಕೂಡದೆ, ನಮಗೆ ಸಾವು ಇಲ್ಲಾ, ನಮ್ಮ ದೇಹ ಬೈಲು ಮಾಡುವೆವೆಂದು ಅದು ತಪ್ಪಲಿಕ್ಕೆ ಪಂಚತತ್ವದೇಹವು, ಪಂಚತತ್ವಕ್ಕೆ ಕೂಡಿಸುವೆವು ಎಂಬುವರು. ಅದು ಹಾಂಗಿರಲು, ಆ ದೇಹ ಬಯಲುವಾದರೇನು ? ಆ ಬಯಲಿಗೆ ಸಾವು ಇಲ್ಲವು. ತಾವು ಮಾಡಿದರೆ ಆಗುವುದೆ ? ತಾನೇ ಆಗಲರಿಯದು. ಎಷ್ಟು ನಿಜ ತಿಳಿದರೇನೋ ? ಅಷ್ಟು ತಾವಾಗದೇ, ಭ್ರಷ್ಟರಾಗಿ ಹೋದರೋ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಅಪ್ಪುವಿನ ಬಾವಿಗೆ ತುಪ್ಪದ ಘಟ; ಸಪ್ಪಗೆ, ಸಿಹಿ ಎಂಬ ಎರಡಿಲ್ಲದ ರುಚಿ, ಪರುಷ ಮುಟ್ಟದ ಹೊನ್ನು! ಕರೆಸದ ಬೊಜಗನು ಬೆರಸದೆ ಬಸುರಾಯಿತ್ತ ಕಂಡೆನಾಹಾ! ಅರುವಿನ ಆಪ್ಯಾಯನ ಮರಹಿನ ಸುಖವೊ! ಇದು ಕಾರಣ ಮೂರು ಲೋಕವಳಿಯಿತ್ತು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಪರಮಪವಿತ್ರ ಹರಗಣಸಾಕ್ಷಿಯಾಗಿ, ಸೂತ್ರ ಗೋತ್ರ ಪರಿಪೂಜ್ಯತ್ವವುಳ್ಳಂಥ ಕ್ರಿಯಾಶಕ್ತಿಯ ಸರ್ವೇಂದ್ರಿಮುಖದವಯವಂಗಳನು ಕೂನಗಳ ವಿಚಾರಕತ್ವದಿಂ ಘನಲಿಂಗಮೂರ್ತಿ ಶ್ರೀಗುರುವಿನ ಕರುಣಕಟಾಕ್ಷ ಶಿವದೀಕ್ಷೆಗಳಿಂದ ಪವಿತ್ರಕಾಯವೆನಿಸಿ, ಶಿವಧರ್ಮಾಂತರಾಳವೆಂಬ ದಂಡಕಮಂಡಲಗಳೆ ಕಂಭ ಕುಂಭ ಹಂದರ ಮುತ್ತೈದೆ ಬಾಸಿಂಗದೆ ಸಾಕ್ಷಿಯಾಗಿ, ಪಂಚಕಳಸ ಆರಾಧ್ಯಗಣಸಮೂಹವೆಲ್ಲ ಸಂತೋಷಂಗೈದು, ಇಷ್ಟಲಿಂಗವೆಂಬ ರಮಣಂಗೆ ಪ್ರಾಣಲಿಂಗವೆಂಬ ರಮಣಿಗೆ ಸುಹಸ್ತಗಳ ಕೂಡಿಸಿ, ಅರ್ಚಿಸಿ, ನವಸೂತ್ರವೆಂಬ ಕಂಕಣವ ಕಟ್ಟಿ, ಸ್ಥಿರಸೇಸೆಯನೆರೆದು, ಭಾವಭರಿತವಾಗಿ, ಸಮರಸಾಚರಣೆಗಳಿಂದ ಪರತತ್ವಲಿಂಗಲೋಲುಪ್ತರಾಗಿ, ಜಂಗಮಾರಾಧನೆ ದಾಸೋಹಂಭಾವದಿಂದ ಶಿವಯೋಗಸಂಪನ್ನರಾಗಿರಿಯೆಂದು ಅಭಯಕರವಿತ್ತು ಶರಣಮಹಾರುದ್ರ ಗಂಟೆಹೊಡೆದಂಥ ಕ್ರಿಯಾಶಕ್ತಿಗಳೆಷ್ಟಾದರೂ ರತಿವಿರತಿಗಳೊಳ್ ಬಳಸಿಬ್ರಹ್ಮವಾಗಿರ್ಪುದೆ ಸತ್ಯಸದ್ಧರ್ಮಿಗಳ ಸನ್ಮಾರ್ಗವು. ಈ ಸನ್ಮಾರ್ಗವನುಳಿದು, ವಿಷಯಾತುರ ಹೆಚ್ಚಿ, ಒಬ್ಬರು ಭೋಗಿಸಿದ ಎಂಜಲಸ್ತ್ರೀಯರ ಆಲಿಂಗಿಸಿ, ತನ್ನ ರಾಣಿಯೆಂದು ನುಡಿಗಣದಿಂದ ಭಾವಿಸುವುದೊಂದು ದುರಾಚಾರ. ಜಿಹ್ವೆಯಿಂದ ಮಾತುಮಾತಿಗೆ ಹೆಂಡತಿ ಅಕ್ಕ ಅವ್ವ ತಂಗಿಯೆಂದು ಬೊಗಳುವುದೊಂದು ದುರಾಚಾರ. ಪರಪುರಷಂಗೆ ರಾಣಿಯಾದ ಸ್ತ್ರೀಯಳ ಹಾವಭಾವ ವಿಲಾಸಗಳ ನೋಡಿ, ವಿಭ್ರಮಣೆಗೊಂಡು, ಅಂತರಂಗದಲ್ಲಿ ಕಳವಳಿಸಿ, ಹಾಸ್ಯರಹಸ್ಯವ ಮಾಡಬೇಕೆಂಬುದೊಂದು ದುರಾಚಾರ. ಇಂತು ತ್ರಿವಿಧರತಿಗಳಿಂದ ವರ್ತಿಸುವುದೆ ದ್ವಿತೀಯಪಾತಕ. ಇದಕ್ಕೆ ಹರನಿರೂಪ ಸಾಕ್ಷಿ : ``ಪರಸ್ತ್ರೀಣಾಂ ಚ ಸಂಸರ್ಗಾತ್ ಮೋಕ್ಷೋ ನಾಸ್ತಿ ವರಾನನೇ | ಜಪಹಾನಿಃ ತಪೋಹಾನಿಃ ರೌರವಂ ನರಕಂ ವ್ರಜೇತ್ ||'' ``ಹರಿಣಪಾದಮಾತ್ರೇಣ ಬಂಧಿತಂ ಚ ಜಗತ್ರಯಂ | ತತ್ಸುಖಂ ಬಿಂದುಮಾತ್ರೇಣ ದುಃಖಂ ಪರ್ವತಮೇವ ಚ ||'' ಇಂತೆಂಬ ಹರಗುರುವಾಕ್ಯ ಪ್ರಮಾಣವಾಗಿ, ಸದ್ಭಕ್ತ ಮಹೇಶ್ವರರು ಪರರೆಂಜಲಸ್ತ್ರೀಯಳ ಭೋಗಿಸಿದಡೆ ಹಿಂದಣ ಭವಪಾಶ ಬೆನ್ನಬಿಡದುಯೆಂದು ದ್ವಿತೀಯ ಪಾತಕಂಗಳ ನಿರಸನಂಗೈದು, ತ್ರಿಕರಣಶುದ್ಧವಾಗಿ, ನಡೆದಂತೆ ನುಡಿದು, ನುಡಿದಂತೆ ನಡೆದು, ದೃಢಚಿತ್ತರಾಗಿ, ಜಾಗ್ರ ಜಾಗ್ರ ಇನ್ನು ತಿರುಗಿ ಭವಕ್ಕೆ ಬಂದಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆಯೆಂದು ತ್ರಿವಿಧಬಿಂದುಗಳ ತಡೆದು, ಸಾಕ್ಷಿ : ``ಕಾಮಃ ಕ್ರೋಧಶ್ಚ ಲೋಭಶ್ಚ ದೇಹೇ ತಿಷ*ಂತಿ ತಸ್ಕರಾಃ | ಜ್ಞಾನರತ್ನಾಪಹಾರಾಯ ತಸ್ಮಾತ್ತ್ವಂ ಜಾಗೃತೋ ಭವ ||'' ಎಂದರಿದು, ಅರುವಿನ ಮಹಾಜ್ಞಾನರತ್ನವ ಕಳೆದು, ಮತಿಭ್ರಷ್ಟ ಕ್ರಿಮಿಕೀಟ ಜನ್ಮಕ್ಕೆ ಬೀಳದಂತೆ ನಿಜೇಷ್ಟಲಿಂಗಾಂಗಸಮರತಿಯುಳ್ಳ ನಿಷ್ಟನಾಗಿ, ಪರರ ಸಂಗವ ಭವಸಂಗವೆಂದರಿದಾನಂದದಿಂದ ಸತ್ಯಶುದ್ಧನಾಗಿ, ಗುರುಹಿರಿಯರಿಗೆ ಖೊಟ್ಟಿಯಾಗದೆ, ಕಾಲಕಾಮರಟ್ಟುಳಿಯ ಕಾಡಾರಣ್ಯಕ್ಕೆ ಮಹಾಜ್ಞಾನವೆಂಬ ಕಿಚ್ಚನಿಕ್ಕಿ, ಚಿತ್ಪ್ರಭಾಬೆಳಗಿಂಗೆ ಮಹಾಬೆಳಗಾಗಿರ್ಪುದು ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
--------------
ಮೂರುಸಾವಿರ ಮುಕ್ತಿಮುನಿ
ಅರುವಿನ ಮನೆಯೊಳಗೆ ಕುರುವಾದ ಸೂಳಿಯು ಐವರ ಕೂಡಿಕೊಂಡು ಒಂದು ಶಿವಾಲಯಕ್ಕೆ ಹೋಗಿ, ಲಿಂಗಾರ್ಚನೆಯ ಮಾಡಿ ನಿಷ್ಪತಿಯಾದುದ ಕಂಡೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅರುವಿನ ಮಂದಿರದೊಳಡಗಿರ್ದ ಅಜಗಣ್ಣ ಮೂರುತಿಯ ಮೂಜಗದ ಮೇಲೆ ಸ್ಥಾಪಿಸಿ, ಗಜಬಜೆಯ ಬೆಳಗ ಹರಹಿದಲ್ಲಿ ಶ್ರದ್ಧೆಯೆಡೆಗೊಂಡಿತ್ತು, ನಿಷೆ*ಯಾವರಿಸಿತ್ತು, ಸಾವಧಾನ ಸಮವೇದಿಸಿತ್ತು, ಅನುಭಾವ ಮುಸುಗಿತ್ತು, ಆನಂದ ತಲೆದೋರಿತ್ತು. ಸಮರಸದಲ್ಲಿ ನಿಂದು ಪರವಶನಾದಲ್ಲಿ ಮುಂದೆ ಗುರುನಿರಂಜನ ಚನ್ನಬಸವಲಿಂಗವೆನ್ನ ಕೈಪಿಡಿದ ಮಹಾಲಿಂಗವಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಂಗದ ಕಳವಳ, ಮನದ ಸಂಚಲ, ಭಾವದ ಭ್ರಾಂತು, ಅರುವಿನ ಮರಹು, ಭಕ್ತಿಯ ಭಿನ್ನ, ಜ್ಞಾನದ ಕಳಂಕು ಪ್ರಾಣನ ಪ್ರಕೃತಿ, ಸ್ಥಾನಮಾನವೆಂಬ ಲಕ್ಷ, ಇಹಪರಂಗಳ ತೃಷ್ಣೆ, ಭವರೋಗಂಗಳ ಬಂಧ, ಇಂದ್ರಿಯಂಗಳಿಚ್ಛೆ, ತಾಪತ್ರಯಂಗಳ ಸುಖದುಃಖ, ಮಲತ್ರಯಂಗಳಾಸೆ, ಪಂಚಮಲಂಗಳ ಸಂಚ, ಅಷ್ಟಮದಂಗಳ ಘಟ್ಟಿ, ಷಡೂರ್ಮಿಗಳ ವಿಕಾರ ಇಂತಪ್ಪ ಅಖಿಳದೊಳು ಸಿಲುಕದ ಅಕಳಂಕರಪ್ಪ, ಸಮ್ಯಜ್ಞಾನ, ಸಹಜಸಮಾಧಾನಯೋಗದೊಳಿರ್ಪ, ಮಹಾಶರಣರ ತೋರಿಸಿ ಬದುಕಿಸಾ, ಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಆದಯ್ಯ
ಭೂಮಿ ಜಲ ಅಗ್ನಿ ಗಾಳಿ ಆಕಾಶ ಇವು ಮೊದಲಾದ ಪಂಚಕದಿಂದುದಿಸಿದುದೆ ಬ್ರಹ್ಮಾಂಡವೆನಿಸಿತ್ತು. ಅದರ ಸೂತ್ರವಿಡಿದು ಬಂದದ್ದೇ ಪಿಂಡಾಂಡವೆನಿಸಿತ್ತು. ರವಿ ಚಂದ್ರ ಆತ್ಮದಿ ಅಂಗವೆನಿಸಿತ್ತು. ಪಿಂಡಾಂಡದಿ ತೋರುವ ಕಾಯವೇ ಗುರುವಾಗಿ, ಪ್ರಾಣವೆ ಲಿಂಗವಾಗಿ, ಜ್ಞಾನವೆ ಜಂಗಮವಾಗಿ, ಮುಂದೆ ಕಾಯದೊಳು ಕಾಂಬ ಅರುವಿನ ಬೆಳಗೆ ವಿಭೂತಿ, ಅರುವಿನ ಕರಣವೇ ಪಾದೋದಕ, ಅರುವಿನ ಆನಂದವೇ ಪ್ರಸಾದ, ಅರುವಿನ ಕೃಪೆಯೇ ರುದ್ರಾಕ್ಷಿ, ಅರುವು ತಾನೇ ಆಗು ಮೆರೆದುದೇ ಮಂತ್ರ ಇಂತು ಪಿಂಡಾಂಡಪಂಚಕ ಅಷ್ಟತನು ಒಳಗೊಂಡು ಕಾಂಬುದೊಂದೀಪರಿಯ ಅಷ್ಟಾವರಣವಾದ ಶ್ರೇಷ*ಗುರುವೆ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಮನಸಿಜನ ಇರವುಳ್ಳನ್ನಕ್ಕ ಶೃಂಗಾರವ ಹಾರಬೇಕು. ಅವರಂಗವುಳ್ಳನ್ನಕ್ಕ ಅಂಗನೆಯರ ಸಂಗಬೇಕು. ಸಂಗಸುಖಕ್ಕೊಡಲಹನ್ನ ಬರ ಶಿವಲಿಂಗ ಪೂಜೆಯ ಮಾಡಬೇಕು. ಅದು ಅರುವಿನ ಗೊತ್ತು, ಜ್ಞಾನದ ಚಿತ್ತು, ಪರಬ್ರಹ್ಮದ ಕೂಟ, ಶಿವಪೂಜೆಯ ಮಾಟ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವನರಿವುದಕ್ಕೆ.
--------------
ಶಿವಲೆಂಕ ಮಂಚಣ್ಣ
ಅಯ್ಯ ! ಗಮನಿಯಲ್ಲ ನಿರ್ಗಮನಿಯಲ್ಲ ನೋಡ ! ನಿರವಯ ಶೂನ್ಯಲಿಂಗಮೂರ್ತಿ ಸುಚಿಂತನಲ್ಲ, ದುಶ್ಚಿಂತನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ ಕುಟಿಲನಲ್ಲ ಕುಹಕನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ ಬೂಟಕನಲ್ಲ ಚಾಟಕನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ ದಿಟದವನಲ್ಲ ಸಟೆಯವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ ಸಂಚಲನಲ್ಲ ವಂಚಲನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ ಪ್ರಪಂಚನಲ್ಲ ಪ್ರಮಾಣನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ ಗಣಿತನಲ್ಲ ಅಗಣಿತನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ ಖಂಡಿತನಲ್ಲ ಅಖಂಡಿತನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ ಚರಿತನಲ್ಲ ಅಚರಿತನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ ಭರಿತನಲ್ಲ ಸುರಿತನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ ಚಾಡಿಯಲ್ಲ ಚಿತಾಲನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ ಗಾರುಡನಲ್ಲ (ಗಾಡಿಗನಲ್ಲ?) ಕುರೂಪನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ ಮರುಳನಲ್ಲ ದುರುಳನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ ಆಶಕನಲ್ಲ ಪಾಶಕನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ ಇಂತು ಉಭಯವಳಿದುಳಿದು ಸಂಗನ ಬಸವಣ್ಣನ ಅರುವಿನ ಮಧ್ಯದಲಿ ಬೆಳಗುವ ಜ್ಯೋತಿ ತಾನೆ ನೋಡ ! ಗುಹೇಶ್ವರಲಿಂಗವು ಚೆನ್ನಬಸವಣ್ಣ.
--------------
ಅಲ್ಲಮಪ್ರಭುದೇವರು
ಗುರುಕಾರುಣ್ಯವ ಪಡೆದು ಲಿಂಗಾನುಗ್ರಾಹಕನಾಗಿ ಅಂಗ ಲಿಂಗ ವೇಧೆಯಿಂದಿರಲು ಆ ಇಷ್ಟಲಿಂಗಕ್ಕೆ ಅಂಗವೇ ಅರ್ಪಿತ. ಮತ್ತಾ ಇಷ್ಟಲಿಂಗಕ್ಕೆ ಮನಕ್ಕೆ ವೇದ್ಯವಾಗಿ ಪ್ರಾಣನಲ್ಲಿ ಪ್ರವೇಶವಾಗಿ ಲಿಂಗವೇ ಪ್ರಾಣವಾಗಿರಲು ಆ ಪ್ರಾಣಲಿಂಗಕ್ಕೆ ಮನವೇ ಅರ್ಪಿತ. ಇಷ್ಟ ಪ್ರಾಣ ಸಂಗ ಸಂಯೋಗ ಸಮರಸಾನುಭಾವ ಲಿಂಗದನುವರಿತು, ಅರಿಕೆಯರತ ಅರುವಿನ ತೃಪ್ತಿಯೇ ಭಾವಲಿಂಗಾರ್ಪಿತ. ಇದಕ್ಕೆ ಶ್ರುತಿ: ಇಷ್ಟಲಿಂಗಾರ್ಪಿತಂ ಚಾಂಗಂ ಪ್ರಾಣಲಿಂಗಾರ್ಪಿತಂ ಮನಃ ಭಾವಲಿಂಗಾರ್ಪಿತಾ ತೃಪ್ತಿರಿತಿ ಭೇದೋ ವರಾನನೇ ಇಂತೆಂದುದಾಗಿ, ಇಷ್ಟ ಪ್ರಾಣ ತೃಪ್ತಿ ಸಮರಸಾದ್ವೈತವಾದಲ್ಲಿ ಸೌರಾಷ್ಟ್ರ ಸೋಮೇಶ್ವರಲಿಂಗ ಸನ್ನಹಿತ.
--------------
ಆದಯ್ಯ
ಅರಿವು ಉಳ್ಳವರು ನೀವು ಅರಿಯದವರೊಡನೆ ನುಡಿಯದಿರಿ. ಪೊಡವಿಯ ಶರಣರೆಂದು ನಿಮ್ಮ ಅರುವಿನ ಪ್ರಸಂಗವನುಸುರದಿರಿ. ವೇಷಪೂರಿತರಾದವರ ಕಂಡು ನುಡಿಯದಿರಿ, ಅಮುಗೇಶ್ವರನೆಂಬಲಿಂಗವನರಿದವರು.
--------------
ಅಮುಗೆ ರಾಯಮ್ಮ
ಅರುವಿನ ಕ್ರಿಯೆಯಲ್ಲಿ ತೊಳತೊಳಗಿ ಬೆಳಗುವ ಲಿಂಗೈಕ್ಯನು ಎಂತಿರ್ಪನೆಂದಡೆ: ಬಾವನ್ನದೊಳಗಿಪ್ಪ ಸುಗಂಧದಂತೆ, ಮಾಣಿಕ್ಯದೊಳಗಿಪ್ಪ ಸುರಂಗಿನಂತೆ, ಚಿನ್ನದೊಳಗಿಪ್ಪ ಬಣ್ಣದಂತೆ ಭೇದವಿಲ್ಲದಚಲನಯ್ಯಾ. ಸಂಪಗೆಯ ಕಂಪುಂಡ ಭ್ರಮರನಂತೆ ಸೌರಾಷ್ಟ್ರ ಸೋಮೇಶ್ವರಲಿಂಗದ ಪರಮಸುಖದೊಳಗೆ ಪರವಶನಾದ ಲಿಂಗೈಕ್ಯನು.
--------------
ಆದಯ್ಯ
ಹುರಿದು ಬಿತ್ತಿದ ಬೀಜ ಮೊಳೆದೋರದಂತೆ ಜ್ಞಾನಕಾಯಂಗೆ ಬನರುಫಕಾಯವಿಲ್ಲ. ಅರುವಿನ ಮುಂದಣ ಕುರುಹು ಅರಿವನವಗ್ರಹಿಸಿ ಜ್ಞಾನ ನಿಷ್ಪತ್ತಿಯಾಗಿತ್ತು. ಸೌರಾಷ್ಟ್ರ ಸೋಮೇಶ್ವರಲಿಂಗವೆಂಬ ಕುರುಹು ಮರೆದ ಕಾರಣ
--------------
ಆದಯ್ಯ
-->