ಅಥವಾ

ಒಟ್ಟು 16 ಕಡೆಗಳಲ್ಲಿ , 1 ವಚನಕಾರರು , 16 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾಷಾಣದುದಕ ಏತರಿಂದ ದ್ರವ ? ಪಾಷಾಣದ ಪಾವಕ ಅದೇತರಿಂದ ಕ್ರೋಧ ? ಅಪ್ಪುವಿನ ಸಂಚಾರದ ರೂಪು ಅದೇತರ ಒಪ್ಪದಿಂದ ? ಅರಿದರುಹಿಸಿಕೊಂಬ ಅರ್ಕೇಶ್ವರಲಿಂಗನ ಇರವು ಅದೇತರಿಂದ?
--------------
ಮಧುವಯ್ಯ
ಶಿಲೆಯೊಳಗಣ ಉರಿ ಅಡಗಿಪ್ಪಂತೆ, ಬಲುಗೈಯನ ಕೋಲೆ ಉಡುಗಿಪ್ಪಂತೆ, ಸಲೆ ಗರಳ ಕೊರಳೊಳಗೆ ಹೊರಹೊಮ್ಮದಂತೆ, ಅರ್ಕೇಶ್ವರಲಿಂಗನ ತೊಡಿಗೆ ಹೀಗಾಗಬೇಕು.
--------------
ಮಧುವಯ್ಯ
ಪೂಜಿಸಿಕೊಂಡೆಹೆವೆಂದು, ಘನಗಂಬ್ಥೀರದಲ್ಲಿ ರಾಗಿಸಿಕೊಂಡಿಪ್ಪ ಆತ್ಮ ತೇಜದ ಮಾತಿನ ವೇಷದ ಗರ್ವಿಗಳು, ಆಡುವ ವಾಚಕ, ಭೇಕನ ಬಾಯಲ್ಲಿ ಸಿಕ್ಕಿದ ಮಕ್ಷಿಕ, ಶ್ರೋಣಿತದಾಸೆಗೆ ಮಚ್ಚಿದಂತೆ. ಮತ್ತುಂಟೆ ಅರ್ಕೇಶ್ವರಲಿಂಗನ ಕೂಟ ?
--------------
ಮಧುವಯ್ಯ
ಮೊದಲು ಬೀಜ ಬಲಿದು, ಕಡೆಯಲ್ಲಿ ಬೀಜ ಅಳಿದಲ್ಲದೆ ಅಂಕುರವಾಗದು. ಕ್ರೀಯಲ್ಲಿ ಆಚರಿಸಿ, ಅರಿವಿನಲ್ಲಿ ವಿಶ್ರಮಿಸಿ, ತುರೀಯ ಆತುರ ಸಮನವೆಂಬ ತ್ರಿವಿಧ ಲೇಪವಾಗಿ ಕಂಡ ಉಳುಮೆ, ಅರ್ಕೇಶ್ವರಲಿಂಗನ ಅರಿಕೆ.
--------------
ಮಧುವಯ್ಯ
ನಾ ನಿನ್ನನರಿವಲ್ಲಿ, ನೀನೆನ್ನ ಕೈಯಲ್ಲಿ ಅರಿಯಿಸಿಕೊಂಬಲ್ಲಿ, ಅದೇನು ಭೇದ ? ನಾನೆಂದಡೆ ನಿನ್ನ ಸುತ್ತಿದ ಮಾಯೆ. ನೀನೆಂದಡೆ ನನ್ನ ಸುತ್ತಿದ ಮಾಯೆ. ನಾ ನೀನೆಂಬಲ್ಲಿ ಉಳಿಯಿತ್ತು, ಅರ್ಕೇಶ್ವರಲಿಂಗನ ಅರಿಕೆ.
--------------
ಮಧುವಯ್ಯ
ಧಾರೆ ಮೊನೆ ಕಟ್ಟಿದಂತೆ, ಮೀರಿ ತಾಗಬಲ್ಲುದೆ ಅಸಿಕೂರಲಗು ? ನಿಪುಣ ಕ್ರೀಭಾವ ಶುದ್ಧವಾಗಿಯಿದ್ದವಂಗೆ ಬೇರೆ ಇಂದ್ರಿಯಂಗಳು ಗತಿಗೆಡಿಸಬಲ್ಲವೆ ? ಅವು, ಅರ್ಕೇಶ್ವರಲಿಂಗನ ಗೊತ್ತ ಮುಟ್ಟಲರಿಯವು.
--------------
ಮಧುವಯ್ಯ
ಕಂಜನಾಭನ ಸುತನ ರಂಜಿಸಿದಲ್ಲಿಯೆ ಕಾಯಗುಣ ಕೇಡಾಯಿತ್ತು. ಮನಸಿಜನ ಪಿತನ ಹಾಯವ ಬಿಟ್ಟಾಗಲೆ ಸುಖ ಲಯವಾಯಿತ್ತು. ಚಿತ್ತ ವಿಶ್ರಾಂತಿಯನೆಯ್ದಿದಲ್ಲಿ[ಯೆ] ಸುಳಿದಾಡುವನ ಲಯ ಕೆಟ್ಟಿತ್ತು. ತ್ರಿವಿಧ ಲೇಪವಾದಲ್ಲಿಯೆ ಅರ್ಕೇಶ್ವರಲಿಂಗನ ಭಾವ, ಬ್ರಹ್ಮಕ್ಕೊಳಗಾಯಿತ್ತು.
--------------
ಮಧುವಯ್ಯ
ಮಾತಿನ ನಿಪುಣರೆಲ್ಲರೂ ಸೋತು ಕುಳಿತರು ಅವಳ ಪೀಠಕ್ಕಾಗಿ. ಪೀಠದ ಆಟದವರು ಅರ್ಕೇಶ್ವರಲಿಂಗನ ಕೂಟವ ಬಲ್ಲರೆ ?
--------------
ಮಧುವಯ್ಯ
ಪರಮೂರ್ತಿಯಾದಡೆ ಪರಮನ ಸಂಚವನರಿಯಬೇಕು. ವಿರಕ್ತನಾದಡೆ ಇಹಪರ ನಾಸ್ತಿ, ಪರಮ ಪರಿಣಾಮಿಯಾಗಿರಬೇಕು. ಜ್ಞಾನಿಯಾದಡೆ ಸರ್ವಜೀವದ ಚೇತನವನರಿಯಬೇಕು. ಸಾಕು ಮಾತಿನ ಮಾಲೆಯ ನೀತಿಯ ನುಡಿ. ಅರ್ಕೇಶ್ವರಲಿಂಗನ ಬೆಚ್ಚಂತೆ ಇರಬೇಕು.
--------------
ಮಧುವಯ್ಯ
ಮಾಡುವ ಕ್ರೀ ಕರ್ಮಕಾಂಡ, ಅರಿವ ಚಿತ್ತ ಭಾವಕಾಂಡ. ಉಭಯ ಲೇಪವಾಗಿ ನಿಂದಲ್ಲಿ ಜ್ಞಾನಕಾಂಡ. ತ್ರಿವಿಧ ಲಯವಾದಲ್ಲಿ, ಅರ್ಕೇಶ್ವರಲಿಂಗನ ಕೂಡವ ಕೂಟ.
--------------
ಮಧುವಯ್ಯ
ಓಗರ ಹಸಿದು ಆಪ್ಯಾಯನವನುಂಡುದನಾರೂ ಅರಿಯರು. ನೀರು ಬಾಯಾರಿ ಭೂಮಿಯ ಕುಡಿದುದನಾರೂ ಅರಿಯರು. ದೇವರು ರೂಪಾಗಿ ಸಕಲರೊಳಗೆ ಗತಿಗೆಡುವುದನಾರೂ ಅರಿಯರು. ವಿಪರೀತ ಕುರುಹಾಯಿತ್ತು, ಅರ್ಕೇಶ್ವರಲಿಂಗನ ಗೊತ್ತಿಗೆ ಬಂದ ಕಾರಣ.
--------------
ಮಧುವಯ್ಯ
ಕಂಜನಾಭಿಯಲ್ಲಿ ಕುಂಜರ ಬಂದು, ಮಂದಿರದವರೆಲ್ಲರ ಕೊಂದಿತ್ತು. ಕುಂಜರನ ಬೆಂಬಳಿಯವರಲ್ಲದೆ ಕುಂಜರನ ಸಂದ ಮುರಿವರಿಲ್ಲ. ಅರ್ಕೇಶ್ವರಲಿಂಗನ ಒಲುಮೆಯಿದ್ದವರಿಗಲ್ಲದೆ ಸಾಧ್ಯವಾಗದು.
--------------
ಮಧುವಯ್ಯ
ಬಾಹ್ಯ ರಚನೆಯಲ್ಲಿ ಸತ್ಕಿøಯಾಮಾರ್ಗ, ಅಂತರಂಗ ಮಾರ್ಗದಲ್ಲಿ ಕರಣಂಗಳ ಸಂಚ ವಿಸಂಚವನರಿಯಬೇಕು. ಇದು ವಸ್ತುವ ಮುಂಚುವ ಭೇದ, ಅರ್ಕೇಶ್ವರಲಿಂಗನ ಸಂಚಿತದ ಅಂಗ.
--------------
ಮಧುವಯ್ಯ
ಬೆತ್ತಲೆಯ ಹುತ್ತದಲ್ಲಿ ಕತ್ತಲೆಯ ಹೆಡೆಯ ಸರ್ಪ, ತೆಕ್ಕೆ ಮಡಿಯಲರಿಯದೆ ಸಿಕ್ಕಿ, ಅದೇ ಹುತ್ತದ ಬಾಯಲ್ಲಿ ಕಪ್ಪೆ ಹರಿದು ಬಂದು, ಸರ್ಪನ ನುಂಗಿತ್ತು. ಹುತ್ತ ಬಚ್ಚಬಯಲಾಯಿತ್ತು, ಅರ್ಕೇಶ್ವರಲಿಂಗನ ಗೊತ್ತು.
--------------
ಮಧುವಯ್ಯ
ತ್ರಿವಿಧ ಘಟಿಸಿ ಕುರುಹಾದಲ್ಲಿ, ಕುರುಹು ಅರಿವನರಿದುದಿಲ್ಲ. ಆ ಅರಿವಿಂದ ಕುರುಹ ಪ್ರಮಾಣಿಸಿ, ಮಧುರದಂಡದಂತೆ ಉಭಯವನರಿ. ಅರಿದಲ್ಲಿ ಅರ್ಕೇಶ್ವರಲಿಂಗನ ಭಾವದ ಕೂಟ.
--------------
ಮಧುವಯ್ಯ
ಇನ್ನಷ್ಟು ... -->