ಅಥವಾ

ಒಟ್ಟು 12 ಕಡೆಗಳಲ್ಲಿ , 3 ವಚನಕಾರರು , 8 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭವಭವದಲ್ಲಿ ಎನ್ನ ಮನವು ಸಿಲುಕದೆ ಭವಭವದಲ್ಲಿ ಎನ್ನ ಮನವು ಕಟ್ಟದೆ ಭವಸಾಗರದಲ್ಲಿ ಮುಳುಗದೆ ಭವರಾಟಳದೊಳು ತುಂಬದೆ ಕೆಡಹದೆ ಭವವಿರಹಿತ ನೀನು, ಅವಧಾರು ಕರುಣಿಸು ಕೂಡಲಸಂಗಮದೇವಾ. 68
--------------
ಬಸವಣ್ಣ
ದೇವ, ದೇವಾ ಬಿನ್ನಹ ಅವಧಾರು; ವಿಪ್ರ ಮೊದಲು, ಅಂತ್ಯಜ ಕಡೆಯಾಗಿ ಶಿವಭಕ್ತರಾದವರನೆಲ್ಲನೊಂದೆ ಎಂಬೆ. ಹಾರುವ ಮೊದಲು, ಶ್ವಪಚ ಕಡೆಯಾಗಿ ಭವಿಯಾದವರನೆಲ್ಲರನೊಂಬೆ ಎಂಬೆ. ಹೀಂಗೆಂದು ನಂಬೂದೆನ್ನ ಮನ. ಈ ನುಡಿದ ನುಡಿಯೊಳಗೆ ಎಳ್ಳ ಮೊನೆಯಷ್ಟು ಸಂದೇಹವುಳ್ಳಡೆ ಹಲುದೋರೆ ಮೂಗ ಕೊಯಿ, ಕೂಡಲಸಂಗಮದೇವಾ.
--------------
ಬಸವಣ್ಣ
ಎಲ್ಲರ ನೆನಹಿನ ಆಯುಷ್ಯದ ಪುಂಜವೆ, ಅವಧಾರು ಅವಧಾರು; ಅಯ್ಯಾ ಎನ್ನ ನೆನಹಿನ ಮಂಗಳನೆ, ಅವಧಾರು ಅವಧಾರು, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಕಾಯಸಂಗ ನಿಸ್ಸಂಗವಾಗಿ ಇನ್ನಾವ ಸಂಗವನರಿಯೆನಯ್ಯಾ. ಮಿಗೆ ಒಲಿದೆನಾಗಿ ಅಗಲಲಾರೆ. ನಗೆಮೊಗದರಸ, ಅವಧಾರು. ಕೂಡಲಸಂಗಮದೇವಾ, ಬಗಿದು ಹೊಗುವೆನು ನಾ ನಿಮ್ಮ ಮನವನು. 488
--------------
ಬಸವಣ್ಣ
ಅಯ್ಯಾ, ನಿನ್ನ ಆಜ್ಞೆಯಲ್ಲಿ ಇರದವರಾರು? ಬ್ರಹ್ಮೇಂದ್ರಾದಿ ದೇವತೆಗಳೆಲ್ಲ! ಅಯ್ಯಾ, ನಿಮ್ಮಾಜ್ಞೆಯಲ್ಲಿ ಆಗದವರಾರು? ವಿಷ್ಣು ಮೊದಲಾದ ಮನುಜರೆಲ್ಲ! ಸರ್ವ ಚೈತನ್ಯಾತ್ಮ ಮುಖಲಿಂಗವೆ ಅವಧಾರು ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಘನವಪ್ಪ ಪರಿಯಾಣದಲ್ಲಿ ಒಂದನುವಿನ ಬೋನವನಳವಡಿಸಿ, ಪರಿಪರಿಯ ಪದಾರ್ಥಂಗಳು ಬಗೆಬಗೆಯಿಂದ ಬರಲು, ನೋಡದ ಮುನ್ನವೆ ರೂಪವರ್ಪಿತವಾಯಿತ್ತು. ಮುಟ್ಟದ ಮುನ್ನವೆ ಸೋಂಕರ್ಪಿತವಾಯಿತ್ತು. ರುಚಿಸದ ಮುನ್ನವೆ ಸುಖವರ್ಪಿತವಾಯಿತ್ತು. ಅವಧಾರು ಅವಧಾರು ಲಿಂಗವೆ, ನಿನ್ನ ಮನಕ್ಕೆ ಬಂದ ಪದಾರ್ಥವ ನಿನ್ನ ಘನಕ್ಕೆ ನೀನರ್ಪಿಸಿದಡೆ ಎನ್ನ ಮನಕ್ಕೆ ಬಂದ ಪದಾರ್ಥವ ನಾ ನಿನಗರ್ಪಿಸುವೆನು. ಗುಹೇಶ್ವರಾ ನಿನಗೆ ಭರಿತ ಬೋನವನಳವಡಿಸಿ ನೀಡಬಲ್ಲವನಾಗಿ ಎನಗೂ ನಿನಗೂ ಸಂಗನಬಸವಣ್ಣನ ಪ್ರಸಾದ_ ಆರೋಗಿಸು ದೇವಾ.
--------------
ಅಲ್ಲಮಪ್ರಭುದೇವರು
ಕರ್ಮವೆಂಬ ಅಂಕದೊಡನೆ ತೊಡರಿದೆ. ಬಿನ್ನಪ ಅವಧಾರು ! ನಿಮ್ಮಾಳಿನ ಭಾಷೆಯ; ಕಡೆಗಳಕ್ಕೆ ನೂಂಕುವೆ, ಕೆಡಹುವೆನಂಕವ. ಕರೆದಡೋ ಎನಿಸದಡೆ ನಿಮ್ಮಾಳಲ್ಲ. ಶಿವಶರಣೆಂಬ ದಂಡೆಯ ಹೂಡಿ ಗಣಮೇಳಾಪವೆಂಬ ಅಲಗಿನಿಂದಿರಿವೆ, ಕೂಡಲಸಂಗಮದೇವಾ.
--------------
ಬಸವಣ್ಣ
ಕರಮನದಲ್ಲಿ ತನುವಾದೆ ಅಯ್ಯ, ಮನದ ಮಧ್ಯಸ್ಥಾನ ನೀನು. ತನು ಪ್ರಾಣ ಇಷ್ಟವಾದೆ. ಮನದ ಮಂಗಳನೆ ಅವಧಾರು ತನುಗುಣದೂರನೆ ನಮೋ, ಕಪಿಲಸಿದ್ಧಮಲ್ಲಿಕಾರ್ಜುನ
--------------
ಸಿದ್ಧರಾಮೇಶ್ವರ
-->