ಅಥವಾ

ಒಟ್ಟು 24 ಕಡೆಗಳಲ್ಲಿ , 14 ವಚನಕಾರರು , 23 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎನ್ನ ಕಣ್ಣೊಳಗಣ ಕಟ್ಟಿಗೆಯ ಮುರಿವವರನಾರನೂ ಕಾಣೆ. ಎನ್ನ ಕಾಲೊಳಗಣ ಮುಳ್ಳ ತೆಗೆವವರನಾರನೂ ಕಾಣೆ. ಎನ್ನ ಅಂಗದಲ್ಲಿದ್ದ ಅಹಂಕಾರವ ಸುಡುವವರನಾರನೂ ಕಾಣೆ. ಎನ್ನ ಮನದಲ್ಲಿಪ್ಪ ಮಾಯಾ ಪ್ರಪಂಚುವ ಕೆಡಿಸುವವರನಾರನೂ ಕಾಣೆನಯ್ಯಾ. ಆದ್ಯರ ವೇದ್ಯರ ವಚನಂಗಳಿಂದ ಅರಿದೆವೆಂಬವರು ಅರಿಯಲಾರರು ನೋಡಾ. ಎನ್ನ ಕಣ್ಣೊಳಗಣ ಕಟ್ಟಿಗೆಯ ನಾನೆ ಮುರಿಯಬೇಕು. ಎನ್ನ ಕಾಲೊಳಗಣ ಮುಳ್ಳ ನಾನೆ ತೆಗೆಯಬೇಕು. ಎನ್ನ ಅಂಗದಲ್ಲಿಪ್ಪ ಅಹಂಕಾರವ ನಾನೆ ಸುಡಬೇಕು. ಎನ್ನ ಮನದಲ್ಲಿಪ್ಪ ಮಾಯಾಪ್ರಪಂಚವ ನಾನೆ ಕಳೆಯಬೇಕು. ಅಮುಗೇಶ್ವರಲಿಂಗವ ನಾನೆ ಅರಿಯಬೇಕು.
--------------
ಅಮುಗೆ ರಾಯಮ್ಮ
ಎನ್ನ ಗರ್ವ ಅಹಂಕಾರವ ಕೆಡಿಸಯ್ಯ ಎನ್ನ ಮನ ಪ್ರಾಣಂಗಳ ಸುತ್ತಿದ ಆಶಾಪಾಶದ ತೊಡರ ಗಂಟ ಬಿಡಿಸಯ್ಯ. ಎನ್ನ ಸತ್ಯ ಸದಾಚಾರದಲ್ಲಿ ನಡೆಸಯ್ಯ. ಎನ್ನ ಪರಮಶಿವಾನುಭಾವವ ನುಡಿಸಯ್ಯ. ಎನಗೆ ಭಕ್ತಿ ಜ್ಞಾನ ವೈರಾಗ್ಯವೆಂಬ ಭೂಷಣವ ತೊಡಿಸಿ ನಿಮ್ಮ ಕರುಣದ ಕಂದನೆಂದು ಸಲುಹಯ್ಯ ಎನ್ನ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಜನ್ಮದ ಭವಬಂಧನವ ತೊಡೆಯಬಲ್ಲಡೆ ಷಡಕ್ಷರವೇ ಬೀಜಮಂತ್ರ, ಕಾಲಕರ್ಮದ ದೆಸೆಯನೊರಸಬಲ್ಲಡೆ ಶಿವನ ತನುಧೂಳಿತಮಪ್ಪ ಶ್ರೀವಿಭೂತಿ, ಸಟೆ ಕುಹಕ ಪ್ರಪಂಚ ಗೆಲಬಲ್ಲಡೆ ಮಹಂತರ ಸಂಗ, ಶುಕ್ಲಶೋಣಿತದ ತನುವಿನ ಕಲ್ಮಷವ ತೊಡೆಯಬಲ್ಲಡೆ ಜಂಗಮದ ಪಾದೋದಕ ಪ್ರಸಾದ, ಮನ ಬುದ್ಧಿ ಚಿತ್ತ ಅಹಂಕಾರವ ಗೆಲುವಡೆ ಏಕೋಭಾವನಿಷ್ಠೆ. ಇವು ತಾನೆ ತನ್ನೊಳಗಾಗೆ ಬೇರಾವುದೂ ಘನವಿಲ್ಲ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಜಂಗಮದಿಂಗಿತಾಕಾರವ ನೋಡಿ ಲಿಂಗವೆಂದರಿದ ಭಕ್ತರು ಮನ ಮನ ಬೆರಸಿದಡೆ, ಕೂರ್ಮದ ಶಿಶುವಿನ ಸ್ನೇಹದಂತೆ ಮುನ್ನವೆ ತೆರಹಿಲ್ಲದಿರಬೇಕು ನೋಡಾ. ಬಂದ ಬರವನರಿಯದೆ ನಿಂದ ನಿಲವ ನೋಡದೆ ಕೆಮ್ಮನೆ ಅಹಂಕಾರವ ಹೊತ್ತಿಪ್ಪವರ ನಮ್ಮ ಗುಹೇಶ್ವರಲಿಂಗನು ಒಲ್ಲ ಕಾಣಾ.
--------------
ಅಲ್ಲಮಪ್ರಭುದೇವರು
ಲಿಂಗಸ್ವರೂಪಕ್ಕೆ ಪಂಚಸೂತ್ರ ಲಕ್ಷಣವನರಿತು ವರ್ತುಳ ಖಂಡಿಕಾದಂಡ ಗೋಮುಖ ಗೋಳಕಾಕಾರವಪ್ಪ ಲಿಂಗಮೂರ್ತಿಯಿಂದ ಶಶಿ ರವಿ ಪವನ ಪಾವಕ ಆತ್ಮ ಮುಂತಾದ ಭೇದಂಗಳನರಿದು ಪಂಚಸೂತ್ರದಿಂದ ಪ್ರಯೋಗಿಸಿ, ಅಚೇತನವಪ್ಪ ಶಿಲೆಯ ಕುಲವಂ ಹರಿದು, ತಾ ಶುಚಿರ್ಭೂತನಾಗಿ ಆ ಇಷ್ಟಲಿಂಗವ ತನ್ನ ಕರಸ್ಥಲದಲ್ಲಿ ಮೂರ್ತಿಗೊಳಿಸಿ ತನು ಕರಗಿ ಮನ ರೆುsುೂಂಪಿಸಿ ಪುಳಕಿತದಿಂದ ಆನಂದಾಶ್ರು ಉಣ್ಮಿ ನಿಧಾನಿಸಿ ನಿಕ್ಷೇಪವ ಕಾಬವನಂತೆ ಬಯಲ ಬಂದಿವಿಡಿವವನಂತೆ ಶಿಲೆಯಲ್ಲಿ ರಸವ ಹಿಳವವನಂತೆ ರತ್ನದ ಕಳೆಯ ಗಂಟನಿಕ್ಕಿ ಕಟ್ಟಿ ತಾಹವನಂತೆ ಮುತ್ತಿನೊಳಗಡಗಿದ ಅಪ್ಪುವಿನ ವಿರಾಳದಿಂದ ಶೋದ್ಥಿಸಿ ಮುಚ್ಚಿತಾಹವನಂತೆ ಜ್ಯೋತಿಗೆ ಪ್ರತಿಹಣತೆಯಿಂದ ಆ ಬೆಳಗ ಮುಟ್ಟಿಸಿ ಕಾಹವನಂತೆ, ಇಂತೀ ನಿರವಯದ ಸುವಸ್ತುವಿನ ಪ್ರಯೋಗದಿಂದ ದಿವ್ಯಪ್ರಕಾಶನ ತನ್ನ ಕರತಳಾಮಳಕದಂತೆ ಮೂರ್ತಿಗೊಂಡಿದ್ದ ಶಿವಲಿಂಗಮೂರ್ತಿಗೆ ಧ್ಯಾನದ ಕೈಯಿಂದ ಆ ಸ್ವರೂಪಕ್ಕೆ ಮೂರ್ತಿಗೊಳಿಸಿ ಷೋಡಶಕಳೆಯಿಂದ ಉಪಚರಿಸಿ ನವಕಳಶ ಪ್ರಯತ್ನ ಪ್ರಯೋಗವ ಮಾಡಿ ಚತುರ್ವಿಧ ಆಚಾರ್ಯರ ಕೂಡಿ ಅಷ್ಟದೆಸೆಗಳಲ್ಲಿ ಕರ್ತೃಕಳಶ ನಾಲ್ಕು, ಭೃತ್ಯಕಳಶ ನಾಲ್ಕು, ಶ್ರೀಗುರುಕಳಶ ಮಧ್ಯದಲ್ಲಿ ನಾಲ್ಕು ವರ್ಣಕ್ರೀ ಮುಂತಾದ ಪ್ರಾಣಲಿಂಗವೆಂದು ಉಪೇಕ್ಷಿಸಿ ಧಾರಣವ ಮಾಡುವಲ್ಲಿ ಗುರು ನಾನೆಂಬುದ ಮರೆದು ಅಹಂಕಾರವ ತೊರೆದು ಆತ್ಮತೇಜವ ಹರಿದು ಮುಂದಣ ತ್ರಿವಿಧ ಸೇವೆಯ ತೋರಿ ಮಂತ್ರಾಬ್ಥಿಷೇಕ ತೀರ್ಥಮಂ ತಳೆದು ಶ್ರೀವಿಭೂತಿಯಲ್ಲಿ ಸರ್ವಾಂಗ ಧೂಳಿತವಂ ಮಾಡಿ ತ್ರಿಕರಣ ಶುದ್ಧವಂ ಮಾಡಿ ಕಪಾಲಕ್ಕೆ ಕರವನಿಟ್ಟಲ್ಲಿ ಪರುಷರಸ ಪಾಷಾಣ ಲೋಹದ ಮೇಲೆ ಬಿದ್ದಂತೆ ನಂಜೇರಿದಂಗೆ ಸಂಜೀವನ ಸಂದ್ಥಿಸಿದಂತೆ ಇಂತೀ ಕಪಾಲಕ್ಕೆ ಕರವನಿಟ್ಟು ಕರ್ಣಕ್ಕೆ ಮಂತ್ರವ ಹೇಳಿದಲ್ಲಿ ಹುಸಿ ಕೊಲೆ ಕುಹಕ ಪಾರದ್ವಾರ ಚೋರತ್ವ ಪಿಸುಣತನವಂಬಿಟ್ಟು ಅರುವತ್ತುನಾಲ್ಕು ಶೀಲ, ಐವತ್ತೆರಡು ನೇಮ, ಮೂವತ್ತರೊಳಗಾದ ನಿತ್ಯಕೃತ್ಯ, ಆರುಸ್ಥಲದೊಳಗಾದ ಆಚಾರ, ಇಪ್ಪತ್ತೈದರೊಳಗಾದ ತತ್ತ್ವ ಇಂತಿವರೊಳಗಾದವರಲ್ಲಿ ಸತ್ವಕ್ಕೆ ತಕ್ಕ ಸಾಮಥ್ರ್ಯದಲ್ಲಿ ನಿಶ್ಚೆ ೈಸಿ ನಡೆಯೆಂದು ಲಿಂಗಧಾರಣವ ಮಾಡುವದಿದು ಗುರುದೀಕ್ಷಾ ನಿರ್ವಾಹ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 82 ||
--------------
ದಾಸೋಹದ ಸಂಗಣ್ಣ
ಗುರುವನರಿಯದ ಕಾರಣ ತನು ಸವೆಯಬೇಕೆಂಬರು. ಲಿಂಗವನರಿಯದ ಕಾರಣ ಮನ ಸವೆಯಬೇಕೆಂಬರು. ಜಂಗಮವನರಿಯದ ಕಾರಣ ಧನ ಸವೆಯಬೇಕೆಂಬರು. ಇಂತೀ ತ್ರಿವಿಧವನರಿಯದ ಕಾರಣ ಮಾಟಕೂಟಕ್ಕೆ ಮನೆಗಟ್ಟಿ ಮಾಡುತ್ತಿರ್ದರಯ್ಯಾ ಮಹಾಗಣಂಗಳು, ತಾವು ಸ್ವಇಚ್ಫಾಪರರಲ್ಲದೆ. ಬ್ರಹ್ಮನ ಹಂಗಿಂದ ಬಂದ ಗುರುವನರಿಯರಾಗಿ, ವಿಷ್ಣುವಿನ ಹಂಗಿಂದ ಬಂದ ಲಿಂಗವನರಿಯರಾಗಿ, ರುದ್ರನ ಹಂಗಿಂದ ಬಂದ ಜಂಗಮವನರಿಯರಾಗಿ, ಅಹಂಕಾರವ ಮರೆದಲ್ಲಿಯೆ ಗುರುವನರಿದವ, ಚಿತ್ತದ ಪ್ರಕೃತಿಯ ಹರಿದಲ್ಲಿಯೆ ಲಿಂಗವನರಿದವ, ಮಾಟಕೂಟದ ಅಲಸಿಕೆಯ ಮರೆದಾಗವೆ ಜಂಗಮವನರಿದವ. ಇಂತೀ ತ್ರಿವಿಧಸ್ಥಲನಿರತಂಗಲ್ಲದೆ ವರ್ಮವಿಲ್ಲಾ ಎಂದೆ. ಖ್ಯಾತಿ ಲಾಭಕ್ಕೆ ಮಾಡುವಾತನ ಭಕ್ತಿ, ಅಗ್ನಿಯಲ್ಲಿ ಬಿದ್ದ ಬಣ್ಣವನರಸುವಂತೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಇನ್ನು ಜಂಗಮಭಕ್ತಿಯ ವಿವರ ಅದೆಂತೆಂದಡೆ : ಶುದ್ಧವಹ ಪಾಕಪ್ರಯತ್ನಂಗಳಿಂದ, ಪ್ರಿಯವಾಕ್ಯಂಗಳಿಂದ, ಬಾಹ್ಯಪರಿಚಾರಂಗಳಿಂದ, ಸಹಜಹಸ್ತದಿಂದ, ಕುಲ ಛಲ ಧನ ಯವ್ವನ ರೂಪು ವಿದ್ಯೆ ರಾಜ್ಯ ತಪವೆಂಬ ಅಷ್ಟಮದಂಗಳ ಬಿಟ್ಟು, ಅಹಂಕಾರವಂ ಬಿಟ್ಟು ನಿರಹಂಕಾರಭರಿತನಾಗಿ, ಉಪಾಧಿಯ ಬಿಟ್ಟು ನಿರುಪಾಧಿಕನಾಗಿ, ದೇಹಾದಿಗುಣಂಗಳ ಬಿಟ್ಟು ನಿರ್ದೇಹಿಕನಾಗಿ, ಅಪೇಕ್ಷೆಯಂ ಬಿಟ್ಟು ನಿರಾಪೇಕ್ಷಿತನಾಗಿ, ಜಂಗಮವೇ ಲಿಂಗವೆಂದು ಮನಶುಚಿಯಿಂದ ಮಾಡುವುದೀಗ ಜಂಗಮಭಕ್ತಿ ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಕಡೆನಾಡಲಿಂಗವ ನಡುನಾಡಿಗೆ ತಂದೆನೆಂಬ ಅಹಂಕಾರವ ಮುಂದುಗೊಂಡಿದ್ದೆಯಲ್ಲಾ ಎಂಬತ್ತುನಾಲ್ಕುಲಕ್ಷ ಶಿವಾಲಯವೆಂಬ ಬಯಲಭ್ರಮೆ ಇದೆಲ್ಲಿಯದು ಹೇಳಾ ? ಮಹಾಘನಲಿಂಗಕ್ಕೆ ಜಗದ ಜೀವರಾಶಿಗಳು ಶಿವಾಲಯವಾಗಬಲ್ಲವೆ ? ನಿನ್ನ ಲಕ್ಷದ ಮೇಲೆ ತೊಂಬತ್ತಾರುಸಾವಿರ ಲಿಂಗವ ನಿನ್ನ ಎದೆಯಲ್ಲಿ ಇರಿದುಕೊಳ್ಳಾ. ಗುಹೇಶ್ವರಲಿಂಗವು ನಿನ್ನ ತಪ್ಪಿಸಿ ಹೋದುದ ಮರೆದೆಯಲ್ಲಾ ಮರುಳ ಸಿದ್ಧರಾಮಯ್ಯಾ
--------------
ಅಲ್ಲಮಪ್ರಭುದೇವರು
ನೇತ್ರದಲ್ಲಿ ಷಡುವರ್ಣಸಂಬಂಧವಹ ಪವಿತ್ರ ಅಪವಿತ್ರವ ನೋಡಿ ಅರಿದು ಮಹಾಪವಿತ್ರವ ಮಾಡಿ ನೇತ್ರದ ಕೈಯಲೂ ಲಿಂಗನೇತ್ರಕ್ಕೆ ಅರ್ಪಿಸುವಲ್ಲಿ ನೇತ್ರೋದಕವು. ಶ್ರೋತ್ರದಲ್ಲು ಶಬ್ದ ಕುಶಬ್ದವನರಿದು ಮಹಾಶಬ್ದದಲ್ಲು ವರ್ತಿಸಿ ಶ್ರೋತ್ರದ ಕೈಯಲೂ ಲಿಂಗಶ್ರೋತ್ರಕ್ಕೆ ಅರ್ಪಿಸುವಲ್ಲಿ ಶ್ರೋತ್ರೋದಕವು. ಘ್ರಾಣದಿಂ ಸುಗಂಧ ದುರ್ಗಂಧವನರಿದು ಮಹಾಗಂಧದಲೂ ವರ್ತಿಸಿ ಘ್ರಾಣದ ಕೈಯಲೂ ಲಿಂಗಘ್ರಾಣಕ್ಕೆ ಅರ್ಪಿಸುವಲ್ಲಿ ಘ್ರಾಣೋದಕವು. ಜಿಹ್ವೆಯಿಂ ಮಧುರ ಆಮ್ಲ ಲವಣ ತಿಕ್ತ ಕಟು ಕಷಾಯವೆಂಬ ಷಡುರುಚಿಯನರಿದು ಮಹಾರುಚಿಯನರಿದು ರುಚಿಮಾಡಿ ಲಿಂಗಜಿಹ್ವೆಗೆ ಜಿಹ್ವೆಯ ಕೈಯಲೂ ಅರ್ಪಿಸುವಲ್ಲಿ ಜಿಹ್ವೋದಕವು. ಪರುಷನದಿಂ ಶೀತೋಷ್ಣವನರಿದು ಇಚ್ಚೆಯ ಕಾಲವನರಿದು ಪರುಷನದಿಂ ಲಿಂಗಪರುಷನಕ್ಕೆ ಅರ್ಪಿತವ ಮಾಡುವಲ್ಲಿ ಸ್ಪರ್ಶನೋದಕವು. ಸದ್ಭಕ್ತಿಯಿಂ ಪಾದಾರ್ಚನೆಯ ಮಾಡುವಲ್ಲಿ ಪಾದೋದಕವು. ಮಜ್ಜನಕ್ಕೆರೆವಲ್ಲಿ ಮಜ್ಜನೋದಕವು. ಆರೋಗಣೆಯಲ್ಲಿ ಆರೋಗಿಸಲಿತ್ತುದು ಅರ್ಪಿತೋದಕವು. ಆರೋಗಣೆಯಲ್ಲಿ ಮೇಲೆ ಹಸ್ತಕ್ಕೆರೆದುದು ಹಸ್ತೋದಕವು. ಗುರುಲಿಂಗ ಶಿವಲಿಂಗ ಜಂಗಮಲಿಂಗ ಒಂದೆಂದರಿದು ಸರ್ವಕ್ರಿಯಾಕರ್ಮಕ್ಕೆ ಲಿಂಗಸಂಬಂಧವ ಮಾಡಿ ಪ್ರಯೋಗಿಸುವುದು ಲಿಂಗೋದಕವು. ಈ ದಶೋದಕ ಕ್ರೀಯನರಿದು ವರ್ತಿಸುವುದು ಆಗಮಾಚಾರ ಕ್ರಿಯಾಸಂಪತ್ತು. ಅಯ್ವತೊಂದಕ್ಷರದಿಂ ಪುಟ್ಟಿದಂತಹ ವೇದಾದಿವಿದ್ಯಂಗಳು ಮೊದಲಾದ ಸರ್ವಕ್ರೀ ಕುಶಲಶಬ್ದಂಗಳನೂ ಶ್ರೋತ್ರದಿಂ ಲಿಂಗಶ್ರೋತ್ರಕ್ಕೆ ಅರ್ಪಿತವ ಮಾಡಿ ಶಬ್ದಭೋಗವ ಭೋಗಿಸುವರಲ್ಲಿ ಶಬ್ದಪ್ರಸಾದ. ಮೃದು ಕಠಿಣ ಶೀತೋಷ್ಣಂಗಳನೂ ಅಷ್ಟತನು ನೆಳಲು ಬಿಸಿಲು ಮೊದಲಾದ ವಸ್ತುಗಳನೂ ಪರುಷನದಿಂ ಲಿಂಗಪರುಷನಕ್ಕೆ ಅರ್ಪಿತವ ಮಾಡಿ ಪರುಷನ ಭೋಗವ ಭೋಗಿಸುವಲ್ಲಿ ಪರುಷನ ಪ್ರಸಾದ. ಶ್ವೇತ ಪೀತ ಹರೀತ ಮಾಂಜಿಷ* ಕೃಷ್ಣ ಕಪೋತ ಷಡುವರ್ಣ ಮೊದಲಾದ ಚಿತ್ರವಿಚಿತ್ರವರ್ಣಂಗಳನೆಲ್ಲವನೂ ನೇತ್ರದಿಂ ಲಿಂಗನೇತ್ರಕ್ಕೆ ಅರ್ಪಿಸಿ ನಿರೀಕ್ಷಿಸಿ ಅರ್ಪಿಸುವಲ್ಲಿ ರೂಪಪ್ರಸಾದ. ಸಫಲ ಪಾಕಾದಿಗಳನೂ ಸರ್ವದ್ರವ್ಯಂಗಳನೂ ಷಡುರುಚಿ ಭಿನ್ನರುಚಿ ಮೂವತ್ತಾರನರಿದು ಜಿಹ್ವೆಯ ಕೈಯಲೂ ಲಿಂಗಜಿಹ್ವೆಗೆ ಅರ್ಪಿಸಲು ರಸಪ್ರಸಾದ. ಪುಷ್ಪಧೂಪ ನಾನಾ ಸರ್ವಸುಗಂಧವಸ್ತುಗಳನೂ ಘ್ರಾಣದಿಂ ಲಿಂಗಘ್ರಾಣಕ್ಕೆ ಅರ್ಪಿಸುವುದು ಸುಗಂಧಭೋಗವ ಭೋಗಿಸುವುದು ಗಂಧಪ್ರಸಾದ. ಈ ಪಂಚೇಂದ್ರಿಯದ ಕೈಯಲೂ ಪಂಚವಿಷಯಂಗಳ ಗುಣಂಗಳವಗುಣಂಗಳರಿದು ಅವಧಾನದಿಂದಪ್ರ್ಪಿಸಿ ಸರ್ವಭೋಗವ ಭೋಗಿಸುವಲ್ಲಿ ಸನ್ನಹಿತಪ್ರಸಾದ. ಗುರುವಿಗೆ ತನು ಮನ ಧನವನರ್ಪಿಸಿ ಪ್ರಸನ್ನತೆಯ ಪಡೆವಲ್ಲಿ ಶುದ್ಧಪ್ರಸಾದ. ಲಿಂಗಕ್ಕೆ ತನು ಮನ ಧನವನರ್ಪಿಸಿ ಪ್ರಸನ್ನತೆಯ ಪಡೆವಲ್ಲಿ ಸಿದ್ಧಪ್ರಸಾದ. ಜಂಗಮಕ್ಕೆ ತನು ಮನ ಧನವನರ್ಪಿಸಿ ಪ್ರಸನ್ನತೆಯ ಪಡೆವಲ್ಲಿ ಪ್ರಸಿದ್ಧಪ್ರಸಾದ. ಗುರು ಲಿಂಗ ಜಂಗಮಕ್ಕೆ ಸರ್ವಪದಾರ್ಥ ಸರ್ವಭೋಗಂಗಳ ಭೋಗಿಸಲಿತ್ತು ಶೇಷಪ್ರಸಾದವ ಭೋಗಿಸುವುದು ಪದಾರ್ಥಪ್ರಸಾದ. ಕಾಮಾದಿಸರ್ವಭೋಗಂಗಳನೂ ಮನ ಬುದ್ಧಿ ಚಿತ್ತ ಅಹಂಕಾರವ ಏಕೀಭವಿಸಿ ಭಾವಲಿಂಗಕ್ಕೆ ಅರ್ಪಿಸಿ ಭೋಗಿಸುವುದು ಭಾವಪ್ರಸಾದ. ಪ್ರಾಣಲಿಂಗಕ್ಕೆ ಕಾಯವೆಂಬ ಭಕ್ತನು ಭಿನ್ನದೋರದೆ ಅವಿನಾಭಾವದಿಂ ಸರ್ವಕ್ರಿಯೆ ಲಿಂಗಕ್ರೀಯಾಗಿ ಏಕಾದಶಮುಖವರಿದು ಅರ್ಪಿಸಿ ಲಿಂಗಭೋಗೋಪಭೋಗಿಯಾಗಿಹುದೆ ಏಕಾದಶಪ್ರಸಾದ. ಇಂತೀ ಏಕಾದಶಪ್ರಸಾದವರಿದು ವರ್ತಿಸುವುದು ಸಹಜಶಿವಾಗಮಾಚಾರಕ್ರಿಯಾಸಂಪತ್ತು. ಇವೆಲ್ಲವನು ಮೀರಿ ಅತ್ಯಶಿಷ್ಟದ್ಧಶಾಂಗುಲಲಿಂಗಕ್ಕೆ ಕಾಯವಾಗಿ ಆ ಲಿಂಗವೇ ಪ್ರಾಣವಾಗಿಪ್ಪ ಶರಣನು ವೇದ ಶಾಸ್ತ್ರಾಗಮ ಪುರಾಣಕ್ಕೆ, ದೇವ ದಾನವ ಮಾನವರಿಗೆ ಅತ್ಯತಿಷ್ಟದ್ಧಶಾಂಗುಲವೆನಿಸಿ `ಲಿಂಗಮಧ್ಯೇ ಶರಣಃ ಶರಣಮಧ್ಯೇ ಲಿಂಗಂ' ಎಂದೆನಿಸಿಪ್ಪ ಅವಿನಾಭಾವಸರ್ವಾಂಗಲಿಂಗಕ್ರೀಯ ನೀನೇ ಬಲ್ಲೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಪಂಚಾಂಗ ಪಂಚಾಂಗವೆಂದು ಕಳವಳಗೊಂಡು ಜೋಯಿಸನ ಕರೆಯಿಸಿ, ಕೈಮುಗಿದು ಕಾಣಿಕೆಯನಿಕ್ಕಿ ಎಲೆ ಅಡಿಕೆಯಂ ಕೊಟ್ಟು, ಜೋಯಿಸನ ವಾಕ್ಯವು ಸಕಲ ಕಾರ್ಯಕ್ಕೆ ಸಿದ್ಧಿಯೆಂದು, ಅವನ ಬಾಯ ತೊಂಬುಲವ ತಿಂಬ ಹಂದಿಗಳಿರಾ ಎತ್ತ ಬಲ್ಲಿರಯ್ಯಾ ಶಿವಾಚಾರದ ಪದ್ಧತಿಯನು ? ಪಂಚಾಂಗವೆಂಬ ಶಬ್ದಕ್ಕೆ ಅರ್ಥವ ಹೇಳಲರಿಯದೆ ಜೋಯಿಸರು ಕೆಟ್ಟರು ; ಕೇಳಲರಿಯದೆ ಅನಂತ ಹಿರಿಯರು ನರಕಕ್ಕೆ ಇಳಿದರು. ಪಂಚಾಂಗವೆಂದರೆ ಹೇಳಿಹೆ ಕೇಳಿರಣ್ಣಾ. ಪಂಚ ಅಂದರೆ ಐದು ; ಅಂಗವೆಂದರೆ ದೇಹ, ಪೃಥ್ವಿ ಅಪ್ಪು ತೇಜ ವಾಯು ಆಕಾಶ- ಈ ಐದು ಕೂಡಿ ದೇಹವಾಯಿತ್ತು. ಆ ದೇಹದೊಳಗೆ ಕಾಮ ಕ್ರೋಧ ಲೋಭ ಮೋಹ ಮದ ಮತ್ಸರದಚ್ಚು ಮುರಿಯುವುದೇ ಪಂಚಾಂಗ. ಸತ್ವ ರಜ ತಮವೆಂಬ ಅಹಂಕಾರವ ತುಳಿವುದೆ ಪಂಚಾಂಗ. ಆಣವಮಲ ಮಾಯಾಮಲ ಕಾರ್ಮಿಕಮಲವ ಮುಟ್ಟದಿರುವುದೇ ಪಂಚಾಂಗ. ತನ್ನ ಸತಿಯ ಸಂಗವಲ್ಲದೆ ಪರಸತಿಯರ ಮುಟ್ಟದಿರುವುದೇ ಪಂಚಾಂಗ. ತನ್ನ ಇಷ್ಟಲಿಂಗವಲ್ಲದೆ ಭೂಮಿಯ ಮೇಲೆ ಇಟ್ಟು ಪೂಜೆಯ ಮಾಡುವ ದೇವರಿಗೆ ಕೈಮುಗಿಯದಿರುವುದೆ ಪಂಚಾಂಗ. ಜಾತಿಸೂತಕ ಜನನಸೂತಕ ಉಚ್ಫಿಷ್ಟಸೂತಕ ಮೃತ್ಯುಸೂತಕ ರಜಸ್ಸೂತಕ - ಈ ಪಂಚಸೂತಕವ ಶರಣರು ಕಳೆವರಾಗಿ, ನಮ್ಮ ಶಿವಭಕ್ತರಿಗೆ ಸಲ್ಲದೆಂಬುದೆ ಪಂಚಾಂಗ. ಸೂತಕ ನಾಸ್ತಿಯಾದುದೆ ಪಂಚಾಂಗ. ಗುರು ಲಿಂಗ ಜಂಗಮ ಪಾದೋದಕ ಪ್ರಸಾದವೆ ಪಂಚಾಂಗ. ಲಿಂಗಾಚಾರ ಸರ್ವಾಚಾರ ಭೃತ್ಯಾಚಾರ ಶಿವಾಚಾರ ಗಣಾಚಾರವೆ ಪಂಚಾಂಗ. ಗುರುಪ್ರಸಾದ, ಲಿಂಗಪ್ರಸಾದ, ಜಂಗಮಪ್ರಸಾದ, ಗಣಪ್ರಸಾದ, ಮಹಾಪ್ರಸಾದವ ಕೊಂಬುವುದೆ ಪಂಚಾಂಗ. ಇಂತೀ ಪಂಚಾಂಗದ ನಿಲವನರಿಯದೆ ಪಂಚಸೂತಕದೊಳಗೆ ಹೊಡೆದಾಡುವ ಪಂಚಮಹಾಪಾತಕರ ಎನಗೊಮ್ಮೆ ತೋರದಿರಯ್ಯ ನಿಸ್ಸಂಗ ನಿರಾಳ ನಿಜಲಿಂಗಪ್ರಭುವೆ.
--------------
ನಿರಾಲಂಬ ಪ್ರಭುದೇವ
ಜಲದ್ಲಪ್ಪ ಜಲವ ನೋಡಾ; ಮನೆಯ್ಲಪ್ಪ ಮನೆಯ ನೋಡಾ; ಅಹಂಕಾರದ್ಲಪ್ಪ ಅಹಂಕಾರವ ನೋಡಾ. ಇವೆಲ್ಲ ಬಯಲ್ಲ ನಿಂದಡೆ ತೋರ್ಪವು. ಬಯಲ್ಲ ನಿಂದು ಬಯಲ ಬಯಲ ಮಹಾಬೆಳಗಿನ ಬೆಳಗ ನೋಡಬಲ್ಲಡೆ ಶರಣ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಲಿಂಗದೊಳಗೆ ಜಂಗಮ, ಜಂಗಮದೊಳಗೆ ಲಿಂಗ ಎಂದು ಅರಿದು ಮರೆದು ಬರುದೊರೆವೋದವರು, ಜಂಗಮವನಿನ್ನು ಬೇರೆ ಅರಸಲೇಕಯ್ಯಾ ? ಆ ಲಿಂಗದೊಳಗೆ ಜಂಗಮವ ಅರಸಿಕೊಂಬುದು. ಲಿಂಗಾರ್ಚನೆಯ ಅವಸರಕ್ಕೆ ಜಂಗಮ ಮನೆಗೆ ಬಂದಡೆ ಲಿಂಗಾರ್ಚನೆಯ ಮಾದು, ಜಂಗಮಕ್ಕೆ ಇದಿರೆದ್ದು ವಂದಿಸಿ ಭಕ್ತಿಯ ಮಾಡಬಲ್ಲಾತನೆ ಭಕ್ತ._ಆ ಜಂಗಮ ಹೊರಗಿರಲು ಲಿಂಗಾರ್ಚನೆಯ ಮಾಡುತ್ತಿಪ್ಪಾತನೇತರ ಭಕ್ತ ? ಜಂಗಮದ ಮುಂದೆ ಲಿಂಗವ ಕೈಯಲ್ಲಿ ಹಿಡಿದುಕೊಂಡು ಸಹಪಂಕ್ತಿಯಲ್ಲಿ ಕುಳ್ಳಿರ್ದು ಪೂಜಿಸುವಾತ ಭೃತ್ಯಾಚಾರದ್ರೋಹನು. ಆ ಭಕ್ತನ ಮನೆಯ ಹೋಗುವ ಜಂಗಮ ಅಜ್ಞಾನಿ. ನಮ್ಮ ಗುಹೇಶ್ವರನ ಶರಣರ ಕೂಡ ಅಹಂಕಾರವ ಹೊತ್ತಿಪ್ಪವರ ಕಂಡಡೆ ನಾನೊಲ್ಲೆ ಕಾಣಾ ಸಂಗನಬಸವಣ್ಣಾ.
--------------
ಅಲ್ಲಮಪ್ರಭುದೇವರು
ನಿಮ್ಮಲ್ಲಿ ಭಕ್ತಿಯುಂಟು, ತಮ್ಮಲ್ಲಿ ಭಕ್ತಿಯುಂಟು ಎಮ್ಮಲ್ಲಿ ಭಕ್ತಿಯುಂಟು ಎಂದಡೆ ಶಿವಶರಣರು ಮೆಚ್ಚುವರೆ ? ಹೂಸಿ ಹುಂಡನೆ ಮಾಡಿ ಬಾಯ ಸವಿಯ ನುಡಿವರೆಲ್ಲಾ ಭಕ್ತರಪ್ಪರೆ ? ಮಾತಿನ ಅದ್ವೈತವ ಕಲಿತು ಮಾರುಗೋಲ ಬಿಡುವರೆಲ್ಲ ಭಕ್ತರಪ್ಪರೆ ? ಬೆಳ್ಳಿಗೆಯ ಮಕ್ಕಳೆಂದಡೆ ಬಳ್ಳವಾಲ ಕರೆವವೆ ಮರುಳೆ ? ಸಂಗನಬಸವಣ್ಣನೆಂದರೆ ಮಾತಿನ ಮಾತಿಂಗೆಲ್ಲ ಭಕ್ತಿಯುಂಟೆ ? ಬಂದ ಜಂಗಮದ ಇಂಗಿತಾಕಾರವನರಿದು, ಇದಿರೆದ್ದು ವಂದಿಸಿ, ಕೈಮುಗಿದು ನಡುನಡುಗಿ ಕಿಂಕಿಲನಾಗಿ, ಭಯಭೀತಿ ಭೃತ್ಯಾಚಾರವಾಗಿ ಇರಬಲ್ಲಡೆ ಅದು ಭಕ್ತಿ, ಅದು ವರ್ಮ ! ಬಂದವರಾರೆಂದರಿಯದೆ, ನಿಂದ ನಿಲವರಿಯದೆ ಕೆಮ್ಮನೆ ಅಹಂಕಾರವ ಹೊತ್ತುಕೊಂಡಿಪ್ಪವರ ನಮ್ಮ ಗುಹೇಶ್ವರಲಿಂಗನೊಲ್ಲ ನೋಡಾ !
--------------
ಅಲ್ಲಮಪ್ರಭುದೇವರು
ಪೃಥ್ವಿ ಅಪ್ಪು ತೇಜ ವಾಯು ಆಕಾಶವೆಂಬ ಪಂಚಭೌತಿಕದ ಪಂಚವಿಂಶತಿಗುಣಂಗಳಿಂದಾದ ದೇಹವ ದೇವರೆಂಬರು ; ಆ ದೇಹವು ದೇವರಲ್ಲ ನೋಡಾ. ಸಕಲೇಂದ್ರಿಯಕ್ಕೂ ಒಡೆಯನಾಗಿಹ ಮನವ ದೇವರೆಂಬರು ; ಆ ಮನ ದೇವರಲ್ಲ ನೋಡಾ. ಆ ಮನದಿಂದಾದ ಬುದ್ಧಿಯ ದೇವರೆಂಬರು ; ಆ ಬುದ್ಧಿ ದೇವರಲ್ಲ ನೋಡಾ. ಆ ಬುದ್ಧಿಯಿಂದಾದ ಚಿತ್ತವ ದೇವರೆಂಬರು ; ಆ ಚಿತ್ತ ದೇವರಲ್ಲ ನೋಡಾ. ಆ ಚಿತ್ತದಿಂದಾದ ಅಹಂಕಾರವ ದೇವರೆಂಬರು ; ಆ ಅಹಂಕಾರ ದೇವರಲ್ಲ ನೋಡಾ. ಆ ಅಹಂಕಾರದಿಂದ ಜೀವನಾಗಿ ಅಳಿವ ಜೀವವ ದೇವರೆಂಬರು ; ಆ ಅಳಿವ ಜೀವ ದೇವರಲ್ಲ ನೋಡಾ. ಇವೆಲ್ಲ ಅಳಿವವಲ್ಲದೆ ಉಳಿವವಲ್ಲ ; ದೇವರಿಗೆ ಅಳುವುಂಟೆ ? ಅಳಿವಿಲ್ಲದ ಪರಶಿವತತ್ವವ ತಾನೆಂದರಿದಡೆ, ತಾನೇ ದೇವ ನೋಡಾ ಅಪ್ರಮಾಣಕೂಡಲಸಂಗಮದೇವ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅಯ್ಯಾ, ನಿಮ್ಮ ಕಂಡ ಕಾಣಿಕೆಯಲ್ಲಿ ನಂಬಿ ನಚ್ಚಿ. ಶರಣುಹೋಗಲರಿಯದೆ ಕೆಮ್ಮನೆ ಕೆಟ್ಟೆ; ಅಹಂಕಾರವ ಹೊತ್ತುಕೊಂಡು ಕೆಟ್ಟೆ ನೋಡಯ್ಯಾ. ಕೆಡಿಸಿ, ಮರುಗಿ, ಮರಸಿಹೆನೆಂಬ ಮರುಳು ನಾನಯ್ಯಾ. ಕಪಿಲಸಿದ್ಧಮಲ್ಲಿನಾಥಯ್ಯಾ, ಹಾಲಲದ್ದು, ನೀರಲದ್ದು ; ನೀನೇ ಗತಿ ಮತಿ!
--------------
ಸಿದ್ಧರಾಮೇಶ್ವರ
ಇನ್ನಷ್ಟು ... -->