ಅಥವಾ

ಒಟ್ಟು 5 ಕಡೆಗಳಲ್ಲಿ , 4 ವಚನಕಾರರು , 5 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಂಡಲತ್ರಯದ ಚಿತ್ತದೊಳಗೆ ನೀರಮುಖದ ಶೇಷನಿರ್ಪುದು. ಆ ಶೇಷನ ಮಸ್ತಕದ ಮಾಣಿಕದ ನೆರಳಿನಲ್ಲಿ ಈರೇಳುಲೋಕ ಇರ್ಪುದು. ಆ ಮಾಣಿಕದ ಪ್ರಕಾಶದಲ್ಲಿ ತಾನಡಗಿ ತನ್ನ ಪ್ರಕಾಶದಲ್ಲಿ ಮಾಣಿಕವನಡಗಿಸಿಕೊಳ್ಳಬಲ್ಲಾತನೇ ಅಸುಲಿಂಗಿ ನೋಡಾ, ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಮತ್ರ್ಯಕ್ಕೆ ಸಂಗನಬಸವಣ್ಣ ಬಾಹಲ್ಲಿ, ಮೂರು ಮಹಾರತ್ನವ ಕಂಡು, ಒಂದ ಸಿರಿಯ ಕೈಯಲ್ಲಿ ಕೊಟ್ಟ, ಒಂದ ಗಿರಿಯ ಕೈಯಲ್ಲಿ ಕೊಟ್ಟ, ಒಂದ ಉರಿಯ ಕೈಯಲ್ಲಿ ಕೊಟ್ಟ. ಇಂತೀ ಮೂರು ರತ್ನಕ್ಕೆ ಲಯ ಈರೇಳುಲೋಕ ಹದಿನಾಲ್ಕುಭುವನವೆಲ್ಲವೂ ಆ ಮೂರು ರತ್ನದ ಬೆಳಗಿನಲ್ಲಿ, ತೊಳಗಿ ಆಡುತ್ತಿಪ್ಪವರ ನೋಡಾ. ಒಂದು ರತ್ನ ಬಂದ ಬೆಳಗು, ಒಂದು ರತ್ನ ಮಂದ ಬೆಳಗು, ಒಂದು ರತ್ನ ಸಂದೇಹ ಬೆಳಗು. ಇಂತೀ ರತ್ನವ ತಂದು, ಸಂಗನಬಸವಣ್ಣ ಸಂಗಮೇಶ್ವರದೇವರಲ್ಲಿ ಐಕ್ಯವಾದೆಹೆನೆಂದು ಹರ್ಷಂಬಡುತ್ತಿಹ. ಇದ ಕಂಡು, ಎನ್ನ ಮನಕ್ಕೆ ನಾಚಿಕೆಯಾಯಿತ್ತು. ವರ್ಮವನರಿಯದೆ ಇಕ್ಕಿ ಕೆಟ್ಟನೆಂದು, ತನ್ನ ಕಾಯ್ದು, ಇದಿರ ಕಾಯ್ದ ಶೂರನಂತಿರಬೇಕು. ತಾರಣದಲ್ಲಿ ನಿಂದು, ಅಂಜಿ ಹೋಗುತ್ತಿರ್ಪವರ ಕಂಡು, ಅಂಜದಿರೆಂದು ಹೇಳುವ ಧೀರನಂತಿರಬೇಕು. ಇಂತೀ ವರ್ಮವನರಿಯದೆ ಮಾಡಿ, ಧರ್ಮಕ್ಕೊಳಗಾದ ಬಸವಣ್ಣನ ಹಾದಿಯಂ ಬಿಡಿಸಿ, ಚೆನ್ನಬಸವಣ್ಣನ ಹಾದಿಯ ತೋರು ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಈರೇಳುಲೋಕ, ಹದಿನಾಲ್ಕು ಭುವನವಳಯದಲ್ಲಿ ಜಂಬೂದ್ವೀಪ ನವಖಂಡ ಪೃಥ್ವಿ ಹಿಮಸೇತು ಮಧ್ಯದೊಳಗಾದ ಖಂಡಮಂಡಲ ಯುಗಜುಗಂಗಳು, ಪಂಚಭೌತಿಕ ಪಂಚವಿಂಶತಿತತ್ವ ಸಕಲವಾಸಂಗಳೆಲ್ಲವು ತನ್ನ ಸಾಕಾರದಲ್ಲಿ ತೋರುವುದು. ಉತ್ತಮ ಕನಿಷ* ಮಧ್ಯಮವೆಂಬ ಸುಕ್ಷೇತ್ರವಾಸ, ತನ್ನಂಗದಲ್ಲಿ ಸುಳಿದಾಡುವ ಮಂಗಳಮಯದಿರವ, ಸಕಲೇಂದ್ರಿಯವ ಬಂಧಿಸದೆ ಕೂಡಿ, ಅವರವರ ಅಂಗದ ಮುಖದಲ್ಲಿ ಲಿಂಗಕ್ಕೆ ಕೊಟ್ಟು, ಸುಸಂಗಿಯಾಗಿ ವಸ್ತುವಿನ ಅಂಗದಲ್ಲಿ ಬೆರಸು. ನೀನರಿದನೆಂಬುದಕ್ಕೆ ಬೇರೊಂದು ಕಡೆಯಿಲ್ಲ. ನೀ ಮರೆದನೆಂಬುದಕ್ಕೆ ಬೇರೊಂದು ಮನವಿಲ್ಲ. ವಸ್ತು ದ್ರವ್ಯವ ತೋರಿ ಅಳಿದ ಮತ್ತೆ ವಸ್ತುವ ಕೂಡಿದಂತೆ, ಜಗಕ್ಕೆ ಭಕ್ತಿಯ ತೋರಿ ವಸ್ತು ಲೇಪ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗವು ಐಕ್ಯಲೇಪವಾದ.
--------------
ಸಗರದ ಬೊಮ್ಮಣ್ಣ
ಇಂತೀ ಕ್ರಮವನರಿದು ದೀಕ್ಷೋಪದೇಶವ ಮಾಡಬಲ್ಲಡಾತನೇ ಅನಾದಿಗುರುವೆಂಬೆ. ಇಂತೀ ವಿಚಾರವ ತಿಳಿದು ದೀಕ್ಷೋಪದೇಶವ ಹಿಡಿಯಬಲ್ಲಡಾತನೇ ಅನಾದಿಶಿಷ್ಯನೆಂಬೆ. ಇಂತಿದರನುಭವ ತಿಳಿದು ಅನುಭಾವವ ಹೇಳಬಲ್ಲಡಾತನೇ ಅನಾದಿಜಂಗಮವೆಂಬೆ. ಇಂತಿದರ ಭೇದವ ತಿಳಿದು ದೀಕ್ಷೋಪದೇಶವ ಕೇಳಬಲ್ಲಡಾತನೇ ಅನಾದಿಭಕ್ತನೆಂಬೆ. ಇಂತೀ ಕ್ರಮವನರಿದು ದೀಕ್ಷೋಪದೇಶವ ಮಾಡುವವರು, ಇಂತೀ ಭೇದವ ತಿಳಿದು ದೀಕ್ಷೋಪದೇಶವ ಪಡೆವವರು, ಈ ಉಭಯತರು ಇಹಲೋಕಕ್ಕೆ ಸಲ್ಲರು, ಪರಲೋಕಕ್ಕೆ ಸಲ್ಲರು. ಈರೇಳುಲೋಕ ಮೊದಲಾದ ಆವಾವ ಲೋಕಕ್ಕೆ ಸಲ್ಲರು ಎಂದನಯ್ಯ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ನಾನೆ ಕರ್ತನೆಂದು ಹಾಡಿದೆನು ವಚನವ. ನಾನೆ ನಿತ್ಯನೆಂದು ಕಟ್ಟಿದೆನು ಬಿರಿದ. ನಾನೆ ನಿರವಯಸ್ಥಲದಲ್ಲಿ ನಿಂದು ಓದಿದೆನು ವಚನವ. ನಾ ಓದಿದುದೆಲ್ಲಾ ನೀ ಓದಿದುದು; ನಾ ಕಟ್ಟಿದ ಬಿರಿದು ನಿನ್ನ ಬಿರಿದು. ನಾನರಿದ ಅರಿವೆಯಲ್ಲಾ ನಿನ್ನರಿವು. ನಾ ಕಟ್ಟಿದ ಬಿರಿದಿಂಗೆ ಹಿಂದೆಗೆವನಲ್ಲ. ಅಮುಗೇಶ್ವರಲಿಂಗಕ್ಕೂ ಎನಗೂ ಪ್ರಭುದೇವರೆ ಗುರುವಲ್ಲದೆ ಈರೇಳುಲೋಕ ಹದಿನಾಲ್ಕುಭುವನದಲ್ಲಿ ಆರನೂ ಕಾಣೆ
--------------
ಅಮುಗೆ ರಾಯಮ್ಮ
-->