ಅಥವಾ

ಒಟ್ಟು 15 ಕಡೆಗಳಲ್ಲಿ , 9 ವಚನಕಾರರು , 14 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾಷಾಣವ ಹಿಡಿದು ಮಾರಿಯ ಸಂಗವ ಮಾಡುವಿರಿ, ಘಾಸಿಯಾಗಿ ಜನ್ಮಜನ್ಮಕ್ಕೆ [ಬ]ಹಿರಿ. ಈಶನ ಕಂಡೆನೆಂಬುದು ಅಳಿಯಾಸೆ. ಈ ದೋಷಿಗಳಿಗೆ ಆನಂದಸಿಂಧು ರಾಮೇಶ್ವರ ಹೇಸುವ.
--------------
ನಾಚೇಶ್ವರ
ತನುಗುಣಗಳನತಿಗಳೆದ ಪ್ರಸಾದಿ; ತಾಮಸಂಗಳ ಮೀರಿದ ಪ್ರಸಾದಿ; ವರ್ಗಂಗಳ ದಾಂಟಿದ ಪ್ರಸಾದಿ; ಇಂದ್ರಿಯಂಗಳು ಈಶನ ಮುಖವಾದ ಪ್ರಸಾದಿ; ಕಪಿಲಸಿದ್ಧಮಲ್ಲಿಕಾರ್ಜುನನ ಕೂಡಿದ ಪ್ರಸಾದಿ.
--------------
ಸಿದ್ಧರಾಮೇಶ್ವರ
ಈಶ್ವರರೂಪ ತಾಳಿ ಜಗ ಜೀವಾಳರುಗಳ ಬಾಗಿಲಲ್ಲಿ ಬೆಳುಗರೆವನ್ನಬರ ಹೋಯಿತ್ತು, ವೇಷವಾಟದಲ್ಲಿ . ಈ ಆಸೆಯ ಬಿಟ್ಟು, ಈಶನ ರೂಪ ತಾಳಿದ ವಸ್ತು, ಆತ ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ತಾನೆ.
--------------
ಶಿವಲೆಂಕ ಮಂಚಣ್ಣ
ಮಧುರದ ಗುಣ ಬದರಿಯಿಂದಳಿಯಿತ್ತು, ಶರಧಿಯ ಗುಣ ಸಾಗಲಾಗಿ ಅಳಿಯಿತ್ತು, ಬೇಟದ ಗುಣ ಕೂಟದಿಂದಳಿಯಿತ್ತು, ಸಾರದ ಗುಣ ಕಠಿನದಿಂದಳಿಯಿತ್ತು, ಕಠಿನದ ಗುಣ ಪಾಕದಿಂದಳಿಯಿತ್ತು, ಕಾಯದ ಗುಣ ಪ್ರಾರಬ್ಧದಿಂದಳಿಯಿತ್ತು, ವಿಷದ ಗುಣ ನಿರ್ವಿಷದಿಂದಳಿಯಿತ್ತೆಂಬುದಜನ ಸಿದ್ಧಾಂತವಾಗಿ ನುಡಿವುತ್ತಿದೆ. ಎನ್ನ ಗುಣ ನಿನ್ನಿಂದಲ್ಲದೆ ಅಳಿಯದಯ್ಯಾ. ಕಾಲಕ್ಕಂಜಿ, ಕರ್ಮಕಂಜಿ, ವಿಧಿವಿಧಾಂತನಿಗಂಜಿ, ಹಿರಿಯರೆನಿಸಿಕೊಂಬ ಗ್ರಾಸವಾಸಿಗಳು ನೀವು ಕೇಳಿರಯ್ಯಾ. ರುದ್ರನ ಪಸರವ ಹೊತ್ತು, ಆಶೆಯೆಂಬ ಕಂಥೆಯಂ ತೊಟ್ಟು, ಜಗದಾಟವೆಂಬ ವೇಷವ ಧರಿಸಿ, ಈಶನ ಶರಣರೆಂದು ಭವಪಾಶದಲ್ಲಿ ತಿರುಗುವ ದೇಶಿಗರ ಕಂಡು ನಾಚಿದೆ. ಭಾಷೆಗೆ ತಪ್ಪದ ನಿರ್ಗುಣ ನಿರಾಶಕ, ನಿಃಕಳಂಕ ಮಲ್ಲಿಕಾರ್ಜುನನಲ್ಲದಿಲ್ಲ, ನಿಲ್ಲು ಮಾಣಿರೊ.
--------------
ಮೋಳಿಗೆ ಮಾರಯ್ಯ
ಈಶನ ಶರಣರು ವೇಶಿಯ ಹೋದಡೆ ಮೀಸಲೋಗರವ ಹೊರಗಿರಿಸಿದಡೆ ಹಂದಿ ಮೂಸಿ ನೋಡಿದಂತೆ ರಾಮನಾಥ.
--------------
ಜೇಡರ ದಾಸಿಮಯ್ಯ
ಕ್ಷೀರಕ್ಕೆ ವಾರಿ ಅರತಲ್ಲದೆ ಮಧುರಗುಣವಿಲ್ಲ. ಶರೀರವಿಡಿದಿದ್ದಲ್ಲಿ ಅಂಗಕ್ಕೆ ಆಸೆ ಅರತು, ರೋಷ ಹಿಂಗಿ, ಈಷಣತ್ರಯದ ಲೇಸು ಕಷ್ಟವನರಿತು, ಈಶನ ವೇಷದ ಭಾಷೆಗೆ ತಪ್ಪದೆ ಇಪ್ಪುದು ಗುರುಚರಮತ, ಸದಾಶಿವಮೂರ್ತಿಲಿಂಗವನರಿವುದಕ್ಕೆ.
--------------
ಅರಿವಿನ ಮಾರಿತಂದೆ
ಪಂಚೇಂದ್ರಿಯವೆಂಬ ಸೊಣಗ ಮುಟ್ಟದ ಮುನ್ನ ಮನ ನಿಮ್ಮನೆಯ್ದುವಂತೆ ಮಾಡಯ್ಯಾ. ಮೀಸಲು ಬೀಸರವೋಗದ ಮುನ್ನ ನೀ ನಿತ್ಯವಾಗಿ ಪ್ರಯೋಗಿಸಯ್ಯಾ. ಎನ್ನಾಸುರದ ಸ್ನೇಹವಿಂಗಿಹೋಗದ ಮುನ್ನ ಈಶನ ನೀ ಕೂಡಿಕೊಳ್ಳಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಅರಿದೊಡೆ ಶರಣ, ಮರೆದೊಡೆ ಮಾನವ. ಪಾತಕನು, ಹೊಲೆಯನು, ನಾನೇತಕ್ಕೆ ಬಾತೇ ? ಹೊತ್ತಿಂಗೊಂದೊಂದು ಪರಿಯ ಗೋಸುಂಬೆಯಂತೆ ಈಶನ ಶರಣರ ಕಂಡುದಾಸೀನವ ಮಾಡುವ ದಾಸೋಹವನರಿಯದ ದೂಷಕನು ನಾನಯ್ಯ. ಏಸು ಬುದ್ಧಿಯ ಹೇಳಿ ಬೇಸತ್ತೆನೀ ಮನಕೆ, ಈಶ ನೀ ಸಲಹಯ್ಯಾ, ಉರಿಲಿಂಗತಂದೆ.
--------------
ಉರಿಲಿಂಗದೇವ
ಲೆಕ್ಕದಲ್ಲಿ ಲೇಪಿತವಾದವರಿಗೇಕೆ ಅಜಾತನ ಸುದ್ದಿ ? ಪ್ರಖ್ಯಾತದಲ್ಲಿ ನೀತಿಯ ಹೇಳಿಹೆನೆಂದು ವೇಷದಲ್ಲಿ ಸುಳಿವರಿಗೇಕೆ ಪರದೋಷನಾಶನ ಸುದ್ದಿ ? ಇವರೆಲ್ಲರೂ ಈಶನ ಭಾಷೆಯಲ್ಲಿ ಸಿಕ್ಕಿ, ಭೂಭಾರಕರಾದರು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಕಾಲಾಡಿಯಂತೆ ದೇಶದೇಶಕ್ಕೆ ತಿರುಗಲೇತಕ್ಕೆ ? ಪರಸಮಯದ ಜೈನನಂತೆ ನುಡಿಯಲೇತಕ್ಕೆ ? ಅರಿವುಳ್ಳವರ ಕಂಡು ಅಗಮ್ಯವ ನುಡಿಯಲೇತಕ್ಕೆ ? ಲಿಂಗವನಪ್ಪಿದ ನಿಜಮಹಿಮರ ಮಾತ ಕಲಿತು ಮಂಡೆಯ ಬೋಳಿಸಿಕೊಂಡು ಈಶನ ವೇಷವ ತೊಟ್ಟು, ಗ್ರಾಸಕ್ಕೆ ತಿರುಗುವ ವೇಷಧಾರಿಗಳ ಲಿಂಗೈಕ್ಯರೆಂದಡೆ ಅಘೋರನರಕ ತಪ್ಪದು ಕಾಣಾ, ಅಮುಗೇಶ್ವರಾ.
--------------
ಅಮುಗೆ ರಾಯಮ್ಮ
ಆಸೆಗಾಗಿ ವೇಷವ ಹೊತ್ತು ತಿರುಗುವ ವೇಷದ ಗಂಡ, ಈಷಣತ್ರಯಕ್ಕಾಗಿ ಈಶನ ಪೂಜಿಸುವ ದಾಸರ ಗಂಡ, ಇಷ್ಟನರಿದು ತನುವಿಗೆ ಆಸೆಯ ಮಾಡುವ ಭಾಷೆವಂತರ ಗಂಡ. ನಾನಂಜುವೆ ತ್ರಿವಿಧದ ಹಂಗಳಿದವರಿಗೆ, ನಾನವರಿಗಿಳಿದ ಬಂಟ. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆನು.
--------------
ಘಟ್ಟಿವಾಳಯ್ಯ
ನಯನೇಂದ್ರಿಯಂಗಳು ಮುಟ್ಟದೆ, ಶ್ರೋತ್ರೇಂದ್ರಿಯಂಗಳು ಮುಟ್ಟದೆ, ಘ್ರಾಣೇಂದ್ರಿಯಂಗಳು ಮುಟ್ಟದೆ, ಜಿಹ್ವೇಂದ್ರಿಯಂಗಳು ಮುಟ್ಟದೆ, ತ್ವಗಿಂ್ರಯಂಗಳು ಮುಟ್ಟದೆ- ಇಂತು ಇಂದ್ರಿಯಂಗಳು ಹಲವ ಹರಿಯದೆ, ಇವು ಈಶನಮುಖವೆಂದರ್ಪಿಸಾ ಸೂಸಲೀಯದೆ, ಸರ್ವಕರಣಂಗಳು ಈಶನ ಕರಣಂಗಳೆಂದರ್ಪಿಸಾ. ಎಲೆ ಅಯ್ಯಾ, ನಿನಗೆ ಗುರುಕರುಣವಾದ ಬಳಿಕ, ಸರ್ವಾಂಗ ಲಿಂಗಾಂಗವೆಂದರ್ಪಿಸಿ ಕಪಿಲಸಿದ್ಧಮಲ್ಲಿಕಾರ್ಜುನಯ್ಯನೆಂಬ ನಿತ್ಯವ ಕೂಡಾ ಅಯ್ಯಾ
--------------
ಸಿದ್ಧರಾಮೇಶ್ವರ
ಗುರುವೆಂಬ ಅಂಗವ ಧರಿಸಿದಡೇನು? ಚಿತ್ರದ ಸತಿಯ ಕೈಯ ದೀಪಕ್ಕೆ ಮೊತ್ತದ ತಮ ಹರಿದುದುಂಟೆ? ನಿಃಕಳೆಯ ಲಿಂಗವ ಧರಿಸಿದಲ್ಲಿ ಫಲವೇನು? ಮೃತ್ತಿಕೆಯ ಬೊಂಬೆಯ ಕೈಯಲ್ಲಿ ನಿಶ್ಚಯದ ಖಂಡೆಯವಿರೆ, ಕುಟ್ಟಬಲ್ಲುದೆ? ವಿಧಾಂತ ರೂಪು ಲಾಂಛನದ ತೊಟ್ಟು, ಬಹುರೂಪಿಯಾದಲ್ಲಿ ನೆರೆ ಈಶನ ಯುಕ್ತಿಯ ವಿರಕ್ತಿ ಜಂಗಮವಾಗಬಲ್ಲನೆ? ಇಂತೀ ಮಾತಿನ ಬಳಕೆಯ ವೇಷವ ಬಿಟ್ಟು, ನಿಜತತ್ವದ ಸಾಕಾರವೆ ಮೂರ್ತಿಯಾದ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ತಾನೆ.
--------------
ಶಿವಲೆಂಕ ಮಂಚಣ್ಣ
ಭಕ್ತರ ನುಡಿ ಅಭವನಲ್ಲದೆ ಅನ್ಯವ ನುಡಿಯದು, ಅನ್ಯಕೆ ಎಡೆಯಾಗದು. ಆತನ ಶ್ರೋತ್ರ ತ್ವಕ್ಕು ನೇತ್ರ ಜಿಹ್ವೆ ಘ್ರಾಣವೆಂಬ ಪಂಚೇಂದ್ರಿಯಂಗಳು ಆತನ ಐದು ಮುಖಂಗಳಯ್ಯಾ! ಆತ ಪತಿ, ಆತ ಸತಿ: ಆತನ ಕರಣಂಗಳೆಲ್ಲವು ಈಶನ ಉಪಕರಣಗಳು. ಆತನ ಕರಣಂಗಳೆಲ್ಲವು ಈಶನ ಹೇಮಶೈಲ. ಆತ ನಿತ್ಯವೂ ಲಿಂಗಾರ್ಚನೆಯ ಮಾಡುವ ಕಾರಣ, ಆತಂಗೊಂದೂ ಇದಿರಿಲ್ಲ; ಆತ ಲೋಕಕ್ಕೆ ಉಪದೇಶಿಕ, ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಕೂಡಿದ ತಾತ್ಪರ್ಯ ಭಕ್ತಿ.
--------------
ಸಿದ್ಧರಾಮೇಶ್ವರ
-->