ಅಥವಾ

ಒಟ್ಟು 129 ಕಡೆಗಳಲ್ಲಿ , 1 ವಚನಕಾರರು , 128 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾತಕ ಹೊಲೆಯೆಂದರಿದು ಬಿಟ್ಟಲ್ಲಿ, ಮತ್ತಾ ಗುಣ ಸ್ವೀಕರಿಸಬಹುದೆ ? ಇವೆಲ್ಲ ಅಲ್ಲಾ ಎಂದು ಬಲ್ಲತನವ ತಾನರಿದು, ಮತ್ತೆಲ್ಲರಲ್ಲಿ ಬೆರಸಬಹುದೆ ? ಒಡೆದ ಹಂಚಿಂಗೆ, ಹಿಡಿದು ಬಿಟ್ಟ ವ್ರತಕ್ಕೆ, ಮತ್ತಿವ ಒಡಗೂಡಬಹುದೆ ? ಇಂತೀ ಬಿಡುಗಡೆಯನರಿದಲ್ಲಿ, ಅನುಸರಣೆಯ ಮಾಡಿದಡೆ, ಎನ್ನೊಡೆಯ ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವಾದಡೂ ಹರಶರಣರಿಗೆ ದೂರ.
--------------
ಶಿವಲೆಂಕ ಮಂಚಣ್ಣ
ಧರೆ ಆಕಾಶವಿಲ್ಲದಿರೆ, ಆಡುವ ಘಟಪಟ, ಚರಸ್ಥಾವರ, ಆಡುವ ಚೇತನಾದಿಗಳಿರಬಲ್ಲವೆ ? ವಸ್ತುವಿನ ಸಾಕಾರವೆ ಭೂಮಿಯಾಗಿ, ಆ ವಸ್ತುವಿನ ಆಕಾಶವೆ ಶಲಾಕೆ ರೂಪಾಗಿ, ಸಂಘಟಿಸಲಾಗಿ ಜೀವಕಾಯವಾಯಿತ್ತು. ಇಂತೀ ರೂಪಿಂಗೆ ರೂಪುಪೂಜೆ, ಅರಿವಿಂಗೆ ಜ್ಞಾನಪೂಜೆ. ಉಭಯವು ನಿಂದಲ್ಲಿ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗ, ಏನೂ ಎನಲಿಲ್ಲ.
--------------
ಶಿವಲೆಂಕ ಮಂಚಣ್ಣ
ತನುವಿಗೆ ರುಜೆಯಡಸಿದಲ್ಲಿ ಆತ್ಮಕ್ಕೆ ಅವಗಡೆ ಬಂದಿತ್ತು. ಅದು ಉಭಯದ ಕೇಡೊ ? ಒಂದರ ಕೇಡೊ ? ಎಂಬುದನರಿತಲ್ಲಿ , ಲಿಂಗ ಜಂಗಮದ ಪ್ರಸಾದವೊಂದೆಯಾಯಿತ್ತು. ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವನರಿಯಲಾಗಿ, ಸ್ವಯಂಭವಾಯಿತ್ತು.
--------------
ಶಿವಲೆಂಕ ಮಂಚಣ್ಣ
ಬಾಹ್ಯವ್ರತ, ಭ್ರಮೆವ್ರತ, ಸೀಮೋಲ್ಲಂಘನವ್ರತ, ಉಪಚರಿಯಕೂಟಸ್ಥವ್ರತ, ಸಮಕ್ರೀ ಭೋಜನವ್ರತ, ಇಷ್ಟಸಂಬಂಧಕೂಟವ್ರತ, ದ್ರವ್ಯ ಉಪಚರಿಯ ಸಂಪದವ್ರತ, ಅಹುದಲ್ಲವೆಂಬ ಸಂದೇಹ ಸಂಕಲ್ಪವ್ರತ, ತಿಲ ಮಧುರ ಕ್ರಮಕ ಲವಣ ಪರಿಪಾಕ ವಿಸರ್ಜನವ್ರತ, ಗಮನ ಸುಮನ ಸಮತೆ ನೇಮ ಸಂತೋಷವ್ರತ. ಇಂತೀ ಸೀಮೆಯೊಳಗಾದ ಅರುವತ್ತನಾಲ್ಕು ಶೀಲವನರಿದಡೇನು? ಪರವಧುವಿಂಗೆ ಪಲ್ಲಟಿಸದೆ, ಪರಧನಕ್ಕೆ ಕೈದುಡುಕದೆ, ಅನರ್ಪಿತಕ್ಕೆ ಮನ ಮುಟ್ಟದೆ, ತಾ ಕೊಂಡ ಸೀಮೆಯಲ್ಲಿ ಭಾವಭ್ರಮೆಯಿಲ್ಲದೆ, ಮನ ವಚನ ಕಾಯದಲ್ಲಿ ಕೊಂಡ ವ್ರತಕ್ಕೆ ಪೂಜಿಸುವ. ಗುರುಲಿಂಗಜಂಗಮಕ್ಕೆ ಉಭಯದೋರದೆ ನಿಂದುದು, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್ಕೆ ಸಂದುದು.
--------------
ಶಿವಲೆಂಕ ಮಂಚಣ್ಣ
ವಾಗದ್ವೈತದಲ್ಲಿ ನಿಂದು, ಸ್ವಯಾದ್ವೆ ೈತವನರಿಯಬೇಕು. ಆ ಗುಣ ಸ್ವಯವಾಗಿ ನಿಂದು, ಗುರುಮೂರ್ತಿಯಾಗಬೇಕು. ಗುರುಮೂರ್ತಿ ನಿಶ್ಚಯವಾಗಿ ನಿಂದು, ಚರಲಿಂಗದಲ್ಲಿ ನಿಃಪತಿಯಾಗಿ ನಿಂದುದು ದ್ವೈತ. ಎರಡಳಿದು ಒಂದೆನಿಸಿ ನಿಂದುದು, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ತಾನೆ.
--------------
ಶಿವಲೆಂಕ ಮಂಚಣ್ಣ
ಕಾಯ ಲಿಂಗದರುಶನವನರಿದಲ್ಲಿ, ಮನವನರಿದು ತನುವೊಪ್ಪುವಂತೆ, ತನು ಸೋಂಕಿದ ಸುಖವ, ಆತ್ಮನರಿದು ಅರ್ಪಿಸುವಂತೆ, ಜಾಹೆಯಲ್ಲಿ ಮರೆದೊರಗಿರಲಾಗಿ, ತನುವ ತಟ್ಟಿದಡೆ, ಆತ್ಮನೆಚ್ಚರುವಂತೆ ಇಪ್ಪುದು, ಇಷ್ಟಪ್ರಾಣಸಂಬಂಧಯೋಗ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವನರಿದಲ್ಲಿ.
--------------
ಶಿವಲೆಂಕ ಮಂಚಣ್ಣ
ಕಾಯವಿದಲ್ಲದೆ ಜೀವಕ್ಕೆ ಬೆಲೆಯಿಲ್ಲ, ಜೀವವಿದ್ದಲ್ಲದೆ ಜ್ಞಾನಕ್ಕೆ ಕುರುಹಿಲ್ಲ. ಜ್ಞಾನವಿದ್ದಲ್ಲದೆ ಬೆಳಗಿಗೆ ಒಡಲಿಲ್ಲ. ಒಂದಕ್ಕೊಂದ ಹಿಂಗಿ ಕಾಬ ಠಾವ ಹೇಳಾ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವೆ.
--------------
ಶಿವಲೆಂಕ ಮಂಚಣ್ಣ
ವ್ಯಾಧನ ಚಿತ್ತದಂತೆ, ಸಾಧನೆಯಯ್ಯನ ಮೈ ಲಾಗಿನಂತೆ, ಭೇದಿಸಿಯೈದುವ ಪನ್ನಗನಂತೆ, ಇಡುವ ತೊಡುವ, ಕೊಡುವ ಕೊಂಬಲ್ಲಿ, ಲಿಂಗಪ್ಪನ ಒಡಗೂಡಬೇಕು. ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗ, ಬೆಚ್ಚಂತಿರಬೇಕು.
--------------
ಶಿವಲೆಂಕ ಮಂಚಣ್ಣ
ಬರಿಹುಂಡನ ಗಡಿವಾಡದಲ್ಲಿರಿಸಿದಂತೆ, ಒಡೆಯರಿಲ್ಲದ ಮನೆಯ ತುಡುಗುಣಿ ಹೊಕ್ಕು, ಗಡಬಡಿಯ ಮಾಡಿದಂತೆ, ಅಂಗಕ್ಕೆ ಕುರುಹಿಲ್ಲದೆ, ಮನಕ್ಕರಿವಿಲ್ಲದೆ ತ್ರಿಭಂಗಿಯಲ್ಲಿ ನೊಂದವಂಗೆ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವಿಲ್ಲಾ ಎಂದೆ.
--------------
ಶಿವಲೆಂಕ ಮಂಚಣ್ಣ
ಅರ್ಥಪ್ರಾಣವ ಕೊಟ್ಟಲ್ಲಿ, ಅಪಮಾನಕ್ಕೆ ಮುಚ್ಚಳನಿಕ್ಕುವ ಲೆಂಕನುಂಟೆ ಅಯ್ಯಾ ? ತಲೆಯ ಮಾರಿದವಂಗೆ ಕಣ್ಣು ಹೊರಗಾದುದುಂಟೆ ? ಭಕ್ತನಾದಲ್ಲಿ ಸತ್ಯ ಬೇಕಾದಡೆ, ಅರ್ಥ ಪ್ರಾಣ ಅಪಮಾನಕ್ಕೆ ಹೊರಗಾಗಬೇಕು. ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವನರಿವುದಕ್ಕೆ.
--------------
ಶಿವಲೆಂಕ ಮಂಚಣ್ಣ
ವಟವೃಕ್ಷದ ಘಟದ ಮಧ್ಯದಲ್ಲಿ ಒಂದು ಮಠವಿಪ್ಪುದು. ಆ ಮಠಕ್ಕೆ ಹಿಂದೆಸೆಯಿಂದ ಬಂದು, ಮುಂದಳ ಬಾಗಿಲ ತೆಗೆದು, ವಿಚ್ಛಂದದ ಕೋಣೆಯ ಕಂಡು, ಕಿಡಿ ನಂದದೆ ದೀಪವ ಕೊಂಡು ಹೊಕ್ಕು, ನಿಜದಂಗದ ಓಗರದ ಕುಂಭವ ಕಂಡು, ಬಂಧವಿಲ್ಲದ ಓಗರವನುಂಡು, ಸದಮಲಲಿಂಗವೆ ತಾನಾದ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ಸ್ವಯಂಭುವಾದ.
--------------
ಶಿವಲೆಂಕ ಮಂಚಣ್ಣ
ಕಾಲಿನಲ್ಲಿ ನಡೆವುದು, ಕೈಯಲ್ಲಿ ಮುಟ್ಟುವುದು, ಕಣ್ಣಿನಲ್ಲಿ ನೋಡುವುದು, ಕಿವಿಯಲ್ಲಿ ಕೇಳುವುದು, ಮೂಗಿನಲ್ಲಿ ವಾಸಿಸುವುದು. ಬಾಯಲ್ಲಿ ಉಂಬ ಭೇದದಿಂದ ಅಯಿದರಾಟಿ, ಆರರ ಕೂಟ, ಏಳರ ಬೇಟ, ಎಂಟರ ಮದ, ಹದಿನಾರರ ಕಳೆ. ಇಂತಿವೆಲ್ಲವು ಮೂರ ಮರೆದಲ್ಲಿ ನಿಂದವು. ಮೂರನರಿದಲ್ಲಿ ಸಂದವು. ಇಂತಿವು ಉಳ್ಳನ್ನಕ್ಕ ಪೂಜಿಸಬೇಕು. ನಾ ನೀನೆಂಬನ್ನಕ್ಕ ಅರ್ಪಿಸಬೇಕು. ಅದಳಿಯೆ ಮತ್ತೇನೂ ಎನಲಿಲ್ಲ. ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವೆಂಬದಕ್ಕೆ ಎಡೆಯಿಲ್ಲ.
--------------
ಶಿವಲೆಂಕ ಮಂಚಣ್ಣ
ತನುವಿಂಗೆ ಗುರುಲಿಂಗ, ಮನಕ್ಕೆ ಆಚಾರಲಿಂಗ, ಆಚಾರಕ್ಕೆ ಅರಿವೆ ಲಿಂಗವಾಗಿ, ಅರಿವೇ ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವೆಂಬುದಕ್ಕೆ ಕುರುಹಾಯಿತ್ತು .
--------------
ಶಿವಲೆಂಕ ಮಂಚಣ್ಣ
ಏಕಮಯ ವಸ್ತು ತನ್ಮಯ ರೂಪಾದಲ್ಲಿ , ಪಂಚಭೂತಿಕಂಗಳು ನಾಮರೂಪಾಯಿತ್ತು. ಆ ಪರಬ್ರಹ್ಮ ಪರವಸ್ತುವಾದಲ್ಲಿ, ಪರವಶವಾಯಿತ್ತು ಪಂಚಬ್ರಹ್ಮ. ಆ ಬ್ರಹ್ಮ ಬ್ರಹ್ಮನ ಕುಕ್ಷಿಗೆ ಹೊರಗಾದಲ್ಲಿ, ವಸ್ತು ನಿರ್ಧರವಾಯಿತ್ತು , ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗದಲ್ಲಿ.
--------------
ಶಿವಲೆಂಕ ಮಂಚಣ್ಣ
ಪಿಪೀಲಿಕ ಮಧುರವ ಕಾಂಬಂತೆ, ಮರ್ಕಟ ಲಂಘನವ ಕಾಂಬಂತೆ, ವಿಹಂಗ ಆಕಾಶವನಡರುವಂತೆ, ತ್ರಿವಿಧದ ಭೇದ. ಜ್ಞಾನವನರಿತು, ಕಾಯಬಿಂದು, ಜೀವಬಿಂದು, ಜ್ಞಾನಬಿಂದು, ತ್ರಿವಿಧಬಿಂದುವಿನಲ್ಲಿ ನಿಂದು ಕಂಡು, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗದಲ್ಲಿ, ಸ್ವಯಂಭುವನರಿಯಬೇಕು.
--------------
ಶಿವಲೆಂಕ ಮಂಚಣ್ಣ
ಇನ್ನಷ್ಟು ... -->