ಅಥವಾ

ಒಟ್ಟು 4 ಕಡೆಗಳಲ್ಲಿ , 2 ವಚನಕಾರರು , 4 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಯ್ಯ, ಪ್ರಥಮದಲ್ಲಿ ಇಪ್ಪತ್ತೊಂದು ತೆರದ ದೀಕ್ಷೆಯ ಕರುಣಿಸೇವು ನೋಡ. ಅದರ ವಿಚಾರವೆಂತೆಂದಡೆ ಅಷ್ಟತನು, ಅಷ್ಟಭೋಗಂಗಳ ಅಭಿಲಾಷೆಯ ನೀಗಿ, ಸರ್ವಸಂಗ ಪರಿತ್ಯಾಗತ್ವದಿಂದ ನಿಜನೈಷ* ಕರಿಗೊಂಡು ಸಚ್ಚಿದಾನಂದದಿಂದ ನಿಂದ ನಿಜೋತ್ತಮಂಗೆ ಶ್ರೀಗುರುಲಿಂಗಜಂಗಮವು ಕೃಪಾದೃಷ್ಟಿಯಿಂದ ನೋಡಿ ಜನ್ಮ-ಜರೆ-ಮರಣಂಗಳಿಗಂಜಬೇಡವೆಂದು ಅಂಗ ಮನ ಪ್ರಾಣಂಗಳ ಮೇಲೆ ಅಭಯಹಸ್ತವಿತ್ತು. ಸಂಸಾರ ಪ್ರಪಂಚಿಗೊಳಗಾದ ಪಂಚಮಹಾಪಾತಕರಂತೆ ನಡೆಯಬೇಡವೆಂದು ಪಾದಕ್ಕೆ ಆಜ್ಞೆಯ ಮಾಡಿದರಯ್ಯ. ಜಡಮತ್ರ್ಯರು ನುಡಿದಂತೆ, ನುಡಿಯಬೇಡವೆಂದು ವಾಣಿಗೆ ಆಜ್ಞೆಯ ಮಾಡಿದರಯ್ಯ. ಪರದೈವ-ಪರದ್ರವ್ಯ-ಪರಸ್ತ್ರೀಯರ-ಮುಟ್ಟಬೇಡವೆಂದು ಪಾಣಿಗೆ ಆಜ್ಞೆಯ ಮಾಡಿದರಯ್ಯ. ಯೋನಿದ್ವಾರವ ಹೊಕ್ಕಡೆ ಅದರಲ್ಲಿ ಜನಿತ ತಪ್ಪದೆಂದು ಅದರಿಂದ ಬಿಟ್ಟು ಹುಳುಗೊಂಡವಿಲ್ಲವೆಂದು ಮಾಣಿಗೆ ಆಜ್ಞೆಯ ಮಾಡಿದರಯ್ಯ. ಇಂತು ಭವಿಮಾರ್ಗವನುಳಿದು ಸತ್ಯನಡೆ, ಸತ್ಯನುಡಿ, ಸತ್ಯಪಾಣಿ, ಸತ್ಯಮಾಣಿಯಾದಡೆ ನಿನ್ನ ಪಾದ ಮೊದಲಾಗಿ ಮಾಣಿಯ ಅಂತ್ಯವಾದ ಸರ್ವಾಂಗದಲ್ಲಿ ಚತುರ್ವಿಧ ಸಾರಾಯಸ್ವರೂಪ ಗುರುಲಿಂಗಜಂಗಮಪ್ರಸಾದವಾಗಿ ಕ್ಷೀರದೊಳಗೆ ಘೃತವಡಗಿದಂತೆ ಏಕಸ್ವರೂಪಿನಿಂದ ನಿಮಿಷಾರ್ಧವಗಲದೆ ನಿಜವಸ್ತು ಬೆರದಿರ್ಪುದು ನೋಡ. ಎಂದು ಅನುಭಾವಮಂಟಪದಲ್ಲಿ ಶ್ರೀಗುರು ನಿಷ್ಕಳಂಕ ಚಿನ್ನಬಸವರಾಜೇಂದ್ರನು ನಿರ್ಲಜ್ಜಶಾಂತಲಿಂಗದೇಶಿಕೋತ್ತಮಂಗೆ ಗಣಸಾಕ್ಷಿಯಾಗಿ ಆಜ್ಞೋಪದೀಕ್ಷೆಯ ಮಾಡಿದರು ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಅಯ್ಯಾ, ಒಂದು ಅನಾದಿ ಮೂಲಪ್ರಣಮವೆ ಸಾಕಾರಲೀಲೆಯಧರಿಸಿ, ಚಿದಂಗ-ಚಿದ್ಘನಲಿಂಗವಾಗಿ, ಆ ಒಂದಂಗ-ಲಿಂಗವೆ ತ್ರಿವಿಧಾಂಗ ತ್ರಿವಿಧಲಿಂಗವಾಗಿ, ಆ ತ್ರಿವಿಧಲಿಂಗಾಂಗವೆ ಷಡ್ವಿಧಲಿಂಗಾಂಗವಾಗಿ, ಆ ಷಡ್ವಿಧಲಿಂಗಾಂಗವೆ ಛತ್ತೀಸಲಿಂಗಾಂಗವಾಗಿ, ಆ ಛತ್ತೀಸ ಲಿಂಗಂಗಳನೆ ಶ್ರದ್ಧಾದಿ ಛತ್ತೀಸಭಕ್ತಿಗಳಲ್ಲಿ ಕೂಟವ ಮಾಡಿ, ಇಂತು ಲಿಂಗಾಂಗ ಭಕ್ತಿಗಳನೆ ಸತ್ಕ್ರಿಯಾ, ಸಮ್ಯಜ್ಞಾನ, ಸತ್ಕಾಯಕ, ಸತ್ಪಾತ್ರಭಿಕ್ಷದಲ್ಲಿ ಸಮರಸವ ಮಾಡಿ, ಆ ಮಹಾಜ್ಞಾನವ ಸಾಧಿಸಿ, ಆ ಮಹಾಜ್ಞಾನದ ಬಲದಿಂದ ಪೃಥ್ವೀಸಂಬಂಧವಾದ ಕರ್ಮೇಂದ್ರಿಯಂಗಳು, ಅಪ್ಪುತತ್ವಸಂಬಂಧವಾದ ಜ್ಞಾನೇಂದ್ರಿಯಂಗಳು, ಅಗ್ನಿತತ್ವಸಂಬಂಧವಾದ ವಿಷಯಂಗಳು. ವಾಯುತತ್ವಸಂಬಂಧವಾದ ಪ್ರಾಣವಾಯುಗಳು, ಆಕಾಶತತ್ವಸಂಬಂಧವಾದ ಕರಣಂಗಳು, ಭಾನುತತ್ವÀಸಂಬಂಧವಾದ ಉದರವೆಂಬ ಭುತಂಗಳು, ಶಶಿತತ್ವಸಂಬಂಧವಾದ ಶ್ವೇತವರ್ಣ ಮೊದಲಾದ ವರ್ಣಂಗಳು, ಆತ್ಮತತ್ವಸಂಬಂಧವಾದ ಸಮಸ್ತನಾದಂಗಳು ಇಂತು ಸಮಸ್ತತತ್ವಂಗಳು ಕೂಡಲಾಗಿ ನಾಲ್ವತ್ತುತತ್ವವೆನಿಸುವವು. ಈ ತತ್ವಂಗಳ ಶಿವತತ್ವ, ಅನಾದಿಶಿವತತ್ವ, ಅನಾದಿನಿಷ್ಕಲಪರಶಿವತತ್ವ, ಅನಾದಿ ನಿಷ್ಕಲಪರಾತ್ಪರಶಿವತತ್ವವೆಂಬ, ಚತುರ್ವಿಧ ತತ್ವಸ್ವರೂಪ ಗುರು-ಲಿಂಗ-ಜಂಗಮ-ಪ್ರಸಾದವ ಕೂಡಿಸಿ, ಆ ಮಹಾಜ್ಞಾನದಿಂ ನೋಡಿದಲ್ಲಿ ನಾಲ್ವತ್ತುನಾಲ್ಕು ತತ್ವಸ್ವರೂಪಿನಿಂದ ಒಂದು ಚಿದಂಗವೆನಿಸುವುದಯ್ಯ. ಆ ಚಿದಂಗದ ಷಟ್ಚಕ್ರಂಗಳಲ್ಲಿ ಶ್ರೀಗುರುಲಿಂಗಜಂಗಮ ಕೃಪೆಯಿಂದ ಮೂರ್ತಿಗೊಂಡಿರುವ ಐವತ್ತಾರು ಪ್ರಣಮಂಗಳೆ ಸಾಕಾರಲೀಲೆಯಧರಿಸಿ, ನವಕೃತಿಸಂಬಂಧವಾದ ಅನಾದಿಮೂಲಪ್ರಣಮವ ಕೂಡಿ ಏಕಸ್ವರೂಪಿನಿಂದ ಐವತ್ತೇಳುಲಿಂಗಸ್ವರೂಪಪ್ರಣಮವನೊಳಕೊಂಡು ಒಂದು ಚಿದ್ಘನಲಿಂಗವೆನಿಸುವುದಯ್ಯ. ಇಂತು ಅಂಗಲಿಂಗವೆಂಬ ನೂರೊಂದು ಸ್ಥಲಕುಳಂಗಳ ವಿಚಾರಿಸಿ, ಶರಣರೂಪಿನಿಂದ ತನ್ನಾದಿ ಮಧ್ಯಾವಸಾನವ ತಿಳಿದು, ಕರ್ತುಭೃತ್ಯತ್ವದ ಸದ್ಭಕ್ತಿಯ ವಿಚಾರವನರಿದು, ದ್ವಾದಶಾಚಾರದ ವರ್ಮವನರಿದು, ಕರ್ತುಭೃತ್ಯತ್ವಾಚಾರ ಸದ್ಭಕ್ತಿಯೆಂಬ ನಿಜಸಮಾಧಿಯಲ್ಲಿ ನಿಂದು, ನಿರವಯಲ ಕೂಡುವಂಥಾದೆ ತತ್ತ್ವದೀಕ್ಷೆ. ಇಂತುಟೆಂದು ಶ್ರೀಗುರು ನಿಷ್ಕಳಂಕ ನಿಜಚೈತನ್ಯಮೂರ್ತಿ ಚೆನ್ನಬಸವರಾಜೇಂದ್ರನು ನಿರ್ಲಜ್ಜ ಶಾಂತಲಿಂಗದೇಶಿಕೋತ್ತಮಂಗೆ ನಿರೂಪಮಂ ಕೊಡುತಿರ್ದರು ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಅಯ್ಯ ! ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ, ಕ್ಷುತ್ತು, ಪಿಪಾಸೆ, ಶೋಕ, ಮೋಹ, ಜನನ ಮರಣಂಗಳ, ಅಡಿಮೆಟ್ಟಿ ನಿಂದು, ಅಷ್ಟವಿಧಾರ್ಚನೆ_ಷೋಡಶೋಪಚಾರಂಗಳ ಮಾಡಿ ಶಿವನನಂತ ಲೀಲೆಗಳನರ್ಚಿಸಿ ಫಲ_ಪದ_ಮೋಕ್ಷಂಗಳ ಪಡೆಯಬೇಕೆಂಬ ಬಯಕೆಯನುಳಿದು, ಅಂತರಂಗದ ಜ್ಞಾನ, ಬಹಿರಂಗದ ಸತ್ಕ್ರಿಯಾಚಾರಂಗಳಲ್ಲಿ ದೃಢ ಚಿತ್ತದಿಂದ ನಿಂದು, ಹಿಂದೆ ಹೇಳಿದ ಸದ್ಭಕ್ತ_ಮಹೇಶ್ವರ_ಪ್ರಸಾದಿ_ಪ್ರಾಣಲಿಂಗಿ_ಶರಣಸ್ಥಲಂಗಳನೊಳಗು ಮಾಡಿಕೊಂಡು, ಪರಾತ್ಪರ ನಿತ್ಯತೃಪ್ತಾನಂದ ಮೂರ್ತಿಯಾಗಿ, ಝಗಝಗಿಸುವ ನಿಜೈಕ್ಯನಂತರಂಗದಲ್ಲಿ ಚಿದ್ರೂಪಲೀಲೆಯಿಂ ಸಾಕಾರ_ನಿರಾಕಾರ; ಸಕಲ_ನಿಃಕಲತತ್ತ್ವಂಗಳನೊಳಕೊಂಡು, ಹದಿಮೂರು ಸ್ಥಲಂಗಳ ಗರ್ಭೀಕರಿಸಿಕೊಂಡು, ಎಂಟುನೂರ ಆರುವತ್ತನಾಲ್ಕು ಮಂತ್ರಮಾಲಿಕೆಗಳ ಪಿಡಿದುಕೊಂಡು, ಇಪ್ಪತ್ತುನಾಲ್ಕು ಸಕೀಲಗರ್ಭದಿಂ ಜ್ಯೋತಿ ಜ್ಯೋತಿ ಕೂಡಿ ಭಿನ್ನ ದೋರದ ಹಾಂಗೆ ಏಕಸ್ವರೂಪಿನಿಂದ ವೇದಸ್ವರೂಪ ಮಹಾಲಿಂಗವಾಗಿ ನೆಲಸಿರ್ಪುದು ನೋಡ ! ನಿರವಯಶೂನ್ಯಲಿಂಗಮೂರ್ತಿ ಗುಹೇಶ್ವರಲಿಂಗವು ಚೆನ್ನಬಸವಣ್ಣ.
--------------
ಅಲ್ಲಮಪ್ರಭುದೇವರು
ಅಯ್ಯ ! ಸಮಸ್ತ ಆತ್ಮರು ರತಿಸಂಯೋಗದಿಂದ ಗರ್ಭಿಣಿಯಾದಲ್ಲಿ ಹೆಣ್ಣು ಗಂಡೆಂಬ ನಾಮ_ರೂಪ_ಕ್ರಿಯೆಗಳು ಕಾಣಿಸಿಕೊಳ್ಳದಂತೆ; ಬಾಲ ಶಿಶುವಿನೊಳಗೆ ಯೌವನವಡಗಿರ್ಪಂತೆ; ಆ ಯೌವನದೊಳಗೆ ಮುಪ್ಪು ಅಡಗಿರ್ಪಂತೆ; ಆ ಮುಪ್ಪಿನೊಳಗೆ ಜನನ-ಮರಣ_ಸ್ಥಿತಿ ಅಡಗಿರ್ಪಂತೆ; ಆ ಜನನ ಮರಣ ಸ್ಥಿತಿಯೊಳಗೆ ಸಕಲ ಭೋಗಂಗಳಡಗಿರ್ಪಂತೆ; ಸರ್ವಜೀವದಯಾಪರತ್ವವುಳ್ಳ ಸದ್ಭಕ್ತ ಶಿವಶರಣಗಣಂಗಳಲ್ಲಿ ಮುಗಿಲ ಮರೆಯ ಸೂರ್ಯನಂತೆ ನೆಲದ ಮರೆಯ ನಿಧಾನದಂತೆ; ಒರೆಯ ಮರೆಯ ಅಲಗಿನಂತೆ; ಹಣ್ಣಿನ ಮರೆಯ ರಸದಂತೆ ಪರಮ ಪಾವನಮೂರ್ತಿ ನಿರವಯಘನವನೊಡಗೂಡಿ ಏಕಸ್ವರೂಪಿನಿಂದ ಗುಹೇಶ್ವರಲಿಂಗವು ತಾನು ತಾನಾಗಿರ್ದುದನೇನೆಂಬೆನಯ್ಯ ಚೆನ್ನಬಸವಣ್ಣ.
--------------
ಅಲ್ಲಮಪ್ರಭುದೇವರು
-->