ಅಥವಾ

ಒಟ್ಟು 2 ಕಡೆಗಳಲ್ಲಿ , 1 ವಚನಕಾರರು , 2 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇನ್ನು ಆಧಾರ ಧಾರಣವೆಂತೆಂದಡೆ : ಪುಣ್ಯ-ಪಾಪ ಸ್ವರ್ಗ-ನರಕಾದಿಗಳಿಗೆ ಹೇತುಭೂತವಾಗಿಹ ಅನ್ನ ಪಾನಾದಿಗಳಂ ಬಿಟ್ಟು-ಸಿದ್ಧಾಸನದಲ್ಲಿ ಕುಳ್ಳಿರ್ದು, ಮೂಲಬಂಧ ಒಡ್ಡ್ಯಾಣಬಂಧ ಜಾಳಾಂದರಬಂಧಮಂ ಮಾಡಿ ಜಾಗ್ರ ಸ್ವಪ್ನ ಸುಷುಪ್ತಿ ತಲೆದೋರದೆ ಶಬ್ದ ಸ್ಪರ್ಶ ರೂಪ ರಸ ಗಂಧವೆಂಬ ಪಚೇಂದ್ರಿಯಂಗಳಲ್ಲಿ ಮನ ಪವನಮಂ ಸೂಸಲೀಯದೆ, ಏಕಾಗ್ರಚಿತ್ತನಾಗಿ ಮೂಲವಾಯುವಂ ಪಿಡಿದು ಆಕುಂಚನಂ ಮಾಡಿ, ಮೂಲಾಗ್ನಿಯನೆಬ್ಬಿಸಿ, ಆಧಾರಚಕ್ರ ಚತುರ್ದಳಪದ್ಮವ ಪೊಕ್ಕು ಸಾದ್ಥಿಸಿ, ಅಲ್ಲಿಹ ಮಂತ್ರ-ಪದ-ವರ್ಣ-ಭುವನ-ತತ್ವ-ಕಲೆಗಳಂ ಕಂಡು, ಅಲ್ಲಿ ಪಚ್ಚೆವರ್ಣವಾಗಿಹ ಜ್ಯೋತಿರ್ಮಯಲಿಂಗಮಂ ಬೆರಸಿ ಅಗ್ನಿಯಂ ಪಟುಮಾಡಿ, ಮನಮಂ ಏಕೀಕರಿಸಿ, ಅಲ್ಲಿಂದ ಮೇಲೆ ಸ್ವಾದ್ಥಿಷ್ಠಾನಚಕ್ರದ ಷಡುದಳಪದ್ಮವ ಪೊಕ್ಕನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಬ್ರಹ್ಮಚಕ್ರದ ಸಹಸ್ರದಳಪದ್ಮದೊಳು ದೇವರಿಹುದು, ಆ ದೇವರ ಕಂಡಿಹೆನೆಂದು ಸ್ವರ್ಗ ಮೋಕ್ಷಂಗಳಿಗೆ ಹೇತುವಾಗಿಹ ಅನ್ನಪಾನಾದಿಗಳಂ ಬಿಟ್ಟು ತನುವ ದಂಡಿಸಿ, ಸ್ವಸ್ತಪದ್ಮಾಸನದಲ್ಲಿ ಕುಳ್ಳಿರ್ದು, ಮಹಾವಾಯುವಂ ಪಿಡಿದು, ಬಹುಮೂಲಜ್ವಾಲೆಯನೆಬ್ಬಿಸಿ, ಸುಷುಮ್ನನಾಳದ ತುದಿಯನಡರಿಸಿ, ಅಮಳೋಕ್ಯದ್ವಾರದೊಳು ಜಿಹ್ವೆಯೇರಿಸಿ ಅಮೃತವನುಂಡು ಅಲ್ಲಿಹ ದೇವರ ಕಂಡಿಹೆನೆಂದು ಕಾಣದೆ ವಾತ ಪಿತ್ಥ ಶ್ಲೇಷ್ಮಂಗಳಂ ಕುಡಿದು ಸತ್ತ ಕರ್ಮಯೋಗಿಗಳು ಕೋಟಾನುಕೋಟಿ. ಅಲ್ಲಿಂದ ಮೇಲೆ ಶಿಖಾಚಕ್ರದ ದಶದಳಪದ್ಮದೊಳು ದೇವರಿಹುದು, ಆ ದೇವರ ಕಂಡೆಹೆನೆಂದು ಇಡಾ ಪಿಂಗಳ ಸುಷುಮ್ನ ನಾಳದಲ್ಲಿ ಸೂಸುವ ವಾಯುವ ಸೂಸಲೀಯದೆ ಕುಂಬಾರನ ಚಕ್ರ ಒಂದು ಸುತ್ತು ಬಾಹನ್ನಕ್ಕರ ಸಾವಿರ ಸುತ್ತು ಬಹ ಮನವ ನಿಲಿಸಿ ಆ ಮನ ಪವನ ಸಂಯೋಗದಿಂದ ಏಕಾಗ್ರಚಿತ್ತನಾಗಿ ಶಿಖಾಚಕ್ರದ ತ್ರಿದಳಪದ್ಮದ ಕರಣಿಕಾಮಧ್ಯದಲ್ಲಿಹ ದೇವರ ಧ್ಯಾನಿಸಿ ಕಂಡೆಹೆನೆಂದು ಆ ದೇವರ ಕಾಣದೆ ಸತ್ತ ಧ್ಯಾನಯೋಗಿಗಳು ಕೋಟಾನುಕೋಟಿ. ಅಲ್ಲಿಂದತ್ತ ಮೇಲೆ ಪಶ್ಚಿಮಚಕ್ರದೊಳು ಅಪ್ರದರ್ಶನ ವರ್ಣವಾಗಿಹ ಏಕದಳಪದ್ಮಸಿಂಹಾಸನದ ಮೇಲೆ ದೇವರ ಲಕ್ಷವಿಟ್ಟು ನೋಡಿ ಕಂಡಿಹೆನೆಂದು ಕಾಣದೆ ಸತ್ತ ಭ್ರಾಂತಯೋಗಿಗಳು ಕೋಟಾನುಕೋಟಿ. ಇಂತೀ ಕರ್ಮಯೋಗ, ಲಂಬಿಕಾಯೋಗ, ಧ್ಯಾನಯೋಗಗಳೆಂಬ ಯೋಗಂಗಳ ಸಾಧಿಸಿ ದೇವರ ಕಂಡಿಹೆನೆಂದು ಕಾಣದೆ ಸತ್ತ ಭ್ರಾಂತಿಯೋಗಿಗಳಿಗೆ ಕಡೆಯಿಲ್ಲ. ತನ್ನ ತಾನರಿದು ತಾನಾರೆಂದು ತಿಳಿದಡೆ ತಾನೆ ದೇವ ನೋಡಾ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
-->