ಅಥವಾ

ಒಟ್ಟು 4 ಕಡೆಗಳಲ್ಲಿ , 3 ವಚನಕಾರರು , 4 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹಸಿವ ಮುಂದಿಟ್ಟುಕೊಂಡು ಸುಳಿವಾತ ಜಂಗಮವಲ್ಲ. ಹಸಿವ ಮುಂದಿಟ್ಟುಕೊಂಡು ಸುಳಿಯಲದೇಕೊ ? ಹಸಿವೆಂಬುದೆ ತನುಗುಣಲಕ್ಷಣಕೆ ಚೈತನ್ಯವಾಗಿಹುದು. ಆ ತನುಗುಣಲಕ್ಷಣ ಹಿಂಗಿದಲ್ಲದೆ ಜಂಗಮವಲ್ಲ. ಅದಕ್ಕೆ ಏನಾಯಿತ್ತು ? ಹಸಿವ ಮುಂದಿಟ್ಟು ಸುಳಿವುದಕ್ಕೆ ತೆರನುಂಟು. ಉಂಡರೆ ಹಂಗಿಗನೆ ಶಿವಯೋಗಿ ? ಅನುವರಿದುಣಬಲ್ಲಡೆ ಎನ್ನವನೆಂಬೆನು. ಅನುವನರಿಯದೆ ಭಕ್ತನ ಹರುಷವ ಮುರಿದು ಉಂಡರೆ, ಕೊಂಡರೆ ಬ್ರಹ್ಮನವನಲ್ಲದೆ ಅವ ನಮ್ಮವನಲ್ಲ. ಅನುವನರಿಯದೆ ಭಕ್ತನ ಭ್ರಮೆಗೊಳಿಸಿ ಉಂಡರೆ, ಕೊಂಡರೆ ಹರಿಯವನಲ್ಲದೆ ನಮ್ಮವನಲ್ಲ. ಅನುವನರಿಯದೆ ಭಕ್ತರಿಗೆ ಕೋಪವ ಹುಟ್ಟಿಸಿ ಉಂಡರೆ, ಕೊಂಡರೆ ರುದ್ರನವನಲ್ಲದೆ ನಮ್ಮವನಲ್ಲ. ಇಂತೀ ತ್ರಿವಿಧ ತೆರೆನನರಿಯದೆ ಉಂಬವರೆಲ್ಲರು ತ್ರಿವಿಧ ಭಾಜನರು ಕಾಣಾ ಗುಹೇಶ್ವರಾ !
--------------
ಅಲ್ಲಮಪ್ರಭುದೇವರು
ನಾನು ಘನ ತಾನು ಘನವೆಂಬ ಹಿರಿಯರುಂಟೆ ಜಗದೊಳಗೆ ? ಹಿರಿದು ಕಿರಿದೆಂದಲ್ಲಿ ಏನಾಯಿತ್ತು ? ಹಿರಿದು ಕಿರಿದೆಂಬ ಶಬ್ದವಡಗಿದರೆ, ಆತನೆ ಶರಣ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಅನಾದಿ ಮಹಾಬೆಳಗಿನಿಂದೆ ಬೆಳಗ ಕೊಂಡು ಬೆಳೆಯೊಳಿರ್ಪ ಭೇದಾಭೇದ ಗತಿಶೂನ್ಯಶರಣರ ಬಳಿವಿಡಿದು ಬಂದ ಭಕ್ತ ಮಹೇಶ್ವರರೆಂದು ಹೇಳಿಕೊಂಡು ಬಳಿಕ ಹೊನ್ನು ಹೆಣ್ಣು ಮಣ್ಣು ವಿಡಿದು ತಾನೊಂದು ಕಾಯಕವ ಮಾಡಿ ನಡೆವಲ್ಲಿ ಜಂಗಮಲಿಂಗಸನ್ನಿಹಿತವಾಗಿರಬೇಕಲ್ಲದೆ ಉಳಿದು ಬದುಕಲಾಗದು. ಅದೇನು ಕಾರಣವೆಂದೊಡೆ: ಜಂಗಮವಿರಹಿತವಾದಲ್ಲಿ ಆ ಹೊನ್ನು ಹೆಣ್ಣು ಮಣ್ಣು ಮಲವಾಗಿರ್ಪುದು. ಆ ಜಂಗಮವನುಳಿದು ನೀರಕುಡಿದರೆ ಏನಾಯಿತ್ತು ನೋಡಿ? ಅಲ್ಲಿ ಅನ್ನವನಂಡರೇನಾಯಿತ್ತು ನೋಡಿ? ಅಲ್ಲಿ ಸಕಲ ಭೋಗವ ಮಾಡಿದರೇನಾಯಿತ್ತು ನೋಡಿ? ಅಲ್ಲಿರ್ದು ಗುರುನಿರಂಜನ ಚನ್ನಬಸವಲಿಂಗದ ಬೆಳಗುಕೂಡವೆನೆಂದರೆ ಕತ್ತಲೆಯು ಕಾಣಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ವೈರಾಗ್ಯ ವೈರಾಗ್ಯವೆಂತೆಂದು ಹೆಸರಿಟ್ಟುಕೊಂಡು ನುಡಿವ ಅಣ್ಣಗಳಿರಾ ನೀವು ಕೇಳಿರೊ. ಆ ವೈರಾಗ್ಯದ ಭೇದವೆಂತೆಂದರೆ ಬಲ್ಲರೆ ಹೇಳಿ, ಅರಿಯದಿರ್ದಡೆ ಕೇಳಿ. ನಿಮ್ಮ ಅಂಗ ಕುಲ ಚಲ ಸೂತ್ರಕವೆಂಬ ಕಂಬವನ್ನು ತನ್ನ ಕೈಯಲ್ಲಿ ಹಿಡಿದುಕೊಂಡು ಕುಲದೈವ ಮನೆದೈವವೆಂಬ ಗುಡಿಯ ಹಳಿಯ ಹೊತ್ತು, ಕುಲಗುರುವೆಂಬ ಲಿಂಗದ ಪೂಜೆಯನೆ ಮಾಡಿ, ಕುಲನೀತಿಯೆಂಬ ಧರ್ಮಶಾಸ್ತ್ರವ ನೋಡಿಕೊಂಡು ಹಲವು ಜಾತಿಗಳೆಲ್ಲ ಅರಿದೆನೆಂದು, ತನ್ನ ದ್ವಾರವಟ್ಟಕ್ಕೆ ಬಂದು ನಿಂದರೆ, ತನ್ನ ಮನ ಒಲ್ಮೆಯಿಂದ ಅನ್ನವನು ನೀಡಿ, ಉಮ್ಮಾಯದಲ್ಲಿ ನಿಂದು ತನ್ನ ಮನ ವೈರಾಗ್ಯವಾದರೆ ವಾರ ತಿಥಿ ನಕ್ಷತ್ರ ಯೋಗ ಕರಣ ಇಂತಿವೈದನು ಪಂಚಾಂಗದಲ್ಲಿ ತಿಳಿದು ನೋಡಿ, ಬ್ರಹ್ಮ ಕಲ್ಯಾಣಿಯೊಳು ಪತ್ರವ ಕೊಂಡು ಇದ್ದು ನಾಳೆ ಸಂದುಹೋದೆನೆಂಬುವನು ಮುಂದಲಿತ್ತು ತನ್ನ ಕುಲಬಾಂಧವರಿಗೆ ಹೇಳಿ ಬಲಾತ್ತಾಗಿ ಹೋಗಬಲ್ಲರೆ ಆತನಿಗೆ `ವೈರಾಗ್ಯದದೇವರೆಂದು' ಎನ್ನಬಹುದು ಕಾಣಿರೊ. ಇಂತೀ ವೈರಾಗ್ಯದ ಭೇದವನರಿಯದೆ ಕಾಕುಮನುಜರು ತಮ್ಮ ಕುಲಛಲವೆಂಬುವ ಕಂಬವ ಕೈಹಿಡಿದು ಕುಲದೈವ ಮನೆದೈವವೆಂಬ ಗುಡಿಯ ಹಳಿಯ ಕೆಡವಿಬಿಟ್ಟು ಕುಲಗುರುವೆಂಬ ಲಿಂಗಪೂಜೆಯನು ಬಿಟ್ಟು ಕುಲನೀತಿಯೆಂಬ ಧರ್ಮದ ಶಾಸ್ತ್ರದ ಪತ್ರವನು ಹರಿದುಬಿಟ್ಟು ಪಾಷಂಡಿಮತದ ರಾಶಿಯೊಳಗಾದ ಮನುಜರ ಕೈಯಲ್ಲಿ ದೀಕ್ಷೆಯನು ಮಾಡಿಕೊಂಡು, ಕಾವಿ ಅರಿವೆಯ ಹೊದ್ದುಕೊಂಡು, ದೇವರೊಳಗೆ ದೇವರಾದೆನೆಂದು ಭಕ್ತರ ಕೂಡೆ ಶರಣಂಗೊಟ್ಟು, ನಾನು ವೈರಾಗ್ಯದ ದೇವರೊಳಗೆ ದೇವರೆಂದು ಹೆಸರಿಟ್ಟುಕೊಂಡು, ನುಡಿವಾಚಾರರೂಪದ ಸೂಳೆಯರು ಏನಾಯಿತ್ತು ಎಂದರೆ, ಜ್ಞಾನಶ್ರವಣರ ವಾಹನಕ್ಕೆ ಹುಟ್ಟಿದಂಥ ಕುನ್ನಿ ತೊತ್ತಿನ ಮಕ್ಕಳಾಗಿರ್ದ ವೆಂದಾತ ಸಿದ್ಧಮಲ್ಲನದಾತ ಮೇಗಣಗವಿಯ ಗುರುಸಿದ್ಧೇಶ್ವರಪ್ರಭುವೆ.
--------------
ಸಿದ್ಧಮಲ್ಲಪ್ಪ
-->