ಅಥವಾ

ಒಟ್ಟು 4 ಕಡೆಗಳಲ್ಲಿ , 3 ವಚನಕಾರರು , 4 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೇವ ದಾನವ ಮಾನವ ಋಷಿಜಂಗಳೆಲ್ಲರನು ಮಹಾಲಿಂಗವ ಕಂಡೆಹೆವೆಂದು ಅನೇಕಕಾಲಂಗಳಲ್ಲಿ ತಪವ ಮಾಡಿ, ಧ್ಯಾನವ ಮಾಡಿ, ಜಪವ ಮಾಡಿಯೂ ಕಾಣಲರಿಯದೆ ಬಳಲುತ್ತೈದಾರೆ. ಅವರಲ್ಲಿ ಸಮರ್ಥಪುರುಷರು ಕಂಡಡೆಯೂ ಕಂಡರೇನು ಫಲ? ಲಿಂಗಕ್ಕೆ ಒಲಿಯರು, ಲಿಂಗವನೊಲಿಸಿಕೊಳಲರಿಯರು, ಕೂಡಲರಿಯರು. ಅಲ್ಪಭೋಗಂಗಳನಿಚ್ಛೈಸಿ, ಆ ಭೋಗಪದವ ಪಡೆದು, ಪುಣ್ಯಪಾಪಂಗಳ ಬಲೆಯೊಳು ಬೀಳುತ್ತಿಹರು. ಅವರುಗಳ ಪರಿಯಿಲ್ಲ, ಎನಗೆ. ಶಿವ ಶಿವಾ ಮಹಾದೇವ, ಮಹಾಲಿಂಗನ ಕರುಣವನು ಏನೆಂದುಪಮಿಸಬಹುದು ಶ್ರೀಗುರುವಾಗಿ ಕರುಣಿಸಿ ಶ್ರೀಹಸ್ತದಿಂದೆನಗೆ ಜನನವ ಮಾಡಿ ಮಾತಾಪಿತನು ತಾನೆಯಾದನು. ಮಹಾದೀಕ್ಷೆಯ ಮಾಡಿ ಶ್ರೀಗುರು ತಾನೆಯಾದನು. ಮಹಾಮಂತ್ರೋಪದೇಶವ ಮಾಡಿ ಮಂತ್ರರೂಪಾಗಿ ಕರ್ಣದಲ್ಲಿ ಭರಿತವಾದನು, ಪ್ರಸಾದರೂಪಾಗಿ ಜಿಹ್ವೆಯಲ್ಲಿ ಭರಿತವಾದನು, ಮಹಾವಿಭೂತಿಯಾಗಿ ಬಾಳದಲ್ಲಿ ಭರಿತವಾದನು, ಸರ್ವಾಂಗಭರಿತವಾದನು. ಮತ್ತೆ ಮತ್ತೆ ಮಹಾಚೋದ್ಯ, ಶ್ರೀಗುರು ಲಿಂಗಮೂರ್ತಿಯನು ಪ್ರಾಣವನೇಕೀಭವಿಸಿ ಪ್ರಾಣಲಿಂಗವಾದನಾಗಿ ಅಂಗದ ಮೇಲೆ ಬಿಜಯಂಗೈದು ಅಂಗಲಿಂಗವಾದನು. ಮಹಾಲಿಂಗವಾಗಿ ಕರಸ್ಥಲದಲ್ಲಿ ನಿರಂತರ ಪೂಜೆಗೊಳ್ಳುತ್ತಿದ್ದನು, ಇದೂ ವಿದಿತ. ಸುಜ್ಞಾನವನೂ ಪ್ರಸಾದವನೂ ಕರುಣಿಸಲೆಂದು ಶರಣಭರಿತನಾಗಿ ಬಂದು ಕರುಣಿಸಿದನು. ಇಂತು, ಶ್ರೀಗುರು ಲಿಂಗಜಂಗಮರೂಪಾಗಿ ಕರುಣಿಸಿ, ಪ್ರಸನ್ನನಾಗಿ ಮಹಾಪ್ರಸಾದವ ಕರುಣಿಸಿ, ಪ್ರಸಾದರೂಪವಾಗಿ ಸಲುಹಿದನು. ಸಾಲೋಕ್ಯ ಸಾಮೀಪ್ಯ ಸಾರೂಪ್ಯ ಸಾಯುಜ್ಯ ಚತುರ್ವಿಧಪದಕ್ಕೆ ಘನಪದದಾಸೋಹದಲ್ಲಿರಿಸಿದನು. ಸರ್ವಪದ ಮಹಾಪದಕ್ಕೆ ವಿಶೇಷ ಲಿಂಗಪದದಲ್ಲಿರಿಸಿದೆನು. ಶಿವ ಶಿವಾ ಮಹಾಪದವ ನಾನೇನೆಂದುಪಮಿಸಲರಿಯೆ. ಸದ್ಗುರುಕೃಪೆ, ವಾಙ್ಮನೋತೀತ. ಮಹಾಘನಪರಿಣಾಮಸುಖವನು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ತಾನೆ ಬಲ್ಲ.
--------------
ಉರಿಲಿಂಗಪೆದ್ದಿ
ಗತಿಮತಿಯೊಳೊಡವೆರೆದ ಪರಮಾನಂದ ಶರಣ ಪುತ್ರ ಮಿತ್ರ ಕಳತ್ರಾದಿಗಳನರಿಯ ನೋಡಾ. ಜಾತಿ ಗೋತ್ರ ಕುಲ ಆಶ್ರಮ ನಾಮ ವರ್ಣಂಗಳಿಲ್ಲದೆ ಭಕ್ತಾಂಗನೆ ಮುಕ್ತಾಂಗನೆಯ ನೆರೆದು ಯುಕ್ತಿಯನಳಿದುಳಿದು ಗುರುನಿರಂಜನ ಚನ್ನಬಸವಲಿಂಗದಲ್ಲಿ ತಾನು ತಾನಾದ ಭಾವಶೂನ್ಯನ ಏನೆಂದುಪಮಿಸಬಹುದು ಹೇಳಾ !
--------------
ದೇಶಿಕೇಂದ್ರ ಸಂಗನಬಸವಯ್ಯ
ಶುದ್ಧ ಸಿದ್ಧಾಸನದಲ್ಲಿ ಕುಳ್ಳಿರ್ದು ಅರ್ಧಾವಲೋಕನದಿಂದ ನಾಸಿಕಾಗ್ರದಲ್ಲಿ ಪ್ರಸಾದವ ಕಂಡುಂಡು, ಮುಕ್ತಿವನಿತೆಗೆ ಬೇಟವ ಮಾಡಿದಡೆ ಬೇಟಕ್ಕೆ ಮರುಳಾಗಿ ಕೂಡಿದಳಯ್ಯಾ. ಆರು ವನಿತೆಯರ ವಂಚಿಸಿ ಕೂಡಿದಳು, ಆರು ಒಗೆತನ ಕೆಟ್ಟಿತ್ತು. ಪುರುಷ ಸ್ತ್ರೀಯೊಳಗಡಗಿ, ಸ್ತ್ರೀ ಪುರುಷನೊಳಗಡಗಿ ಇಬ್ಬರೆನಿಸದೆ ಒಬ್ಬರಾದುದನು ಏನೆಂದುಪಮಿಸಬಹುದು ನಿರ್ವಿಕಲ್ಪಯೋಗವನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೆ ತಾನಾದ ಘನವನು?.
--------------
ಸ್ವತಂತ್ರ ಸಿದ್ಧಲಿಂಗ
ಶರಧಿಯ ಜಲವು ಒಂದಾಣತಿಯಿಂದ ಆಕಾಶದಲ್ಲಿ ಮೇಘವಾಗಿ ಸುರಿದಜಲ ಭೂಮಿವಿಡಿದು, ನದಿಗೂಡಿ ಹರಿದು ಸಮುದ್ರವನೊಡವೆರೆದಂತೆ ಮಹಾಘನ ಸಮುದ್ರದಿಂದಾದ ಚಿದಾನಂದ ಶರಣ ತನ್ನ ವಿನೋದಕಾರಣ ತನುವಿಡಿದು ಸರ್ವಾಚಾರಸಂಪತ್ತಿನೊಳುಬೆರೆದು ಮೀರಿದಕ್ರಿಯೆಯಿಂದೆ ಗುರುನಿರಂಜನ ಚನ್ನಬಸವಲಿಂಗದಲ್ಲಿ ಸಮರಸಾನಂದವ ಏನೆಂದುಪಮಿಸಬಹುದು.
--------------
ದೇಶಿಕೇಂದ್ರ ಸಂಗನಬಸವಯ್ಯ
-->