ಅಥವಾ

ಒಟ್ಟು 7 ಕಡೆಗಳಲ್ಲಿ , 1 ವಚನಕಾರರು , 7 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಲವ ಕಳೆವಲ್ಲಿ, ಜಲವ ಬಿಡುವಲ್ಲಿ, ರುಜೆರೋಗಂಗಳು ಬಿಡುವಲ್ಲಿ, ಸಕಲಸುಖಭೋಗಂಗಳ ಹಿಡಿವಲ್ಲಿ, ಅಧಮ ವಿಶೇಷವೆಂಬ ಭಾವಂಗಳು ಅಂಗವ ಮುಟ್ಟುವಲ್ಲಿ, ಅಂಗಕ್ಕೆ ಕಟ್ಟು, ಆತ್ಮಂಗೆ ವ್ರತ, ಏಲೇಶ್ವರಲಿಂಗದ ಕೂಟ ತಪ್ಪದಿರಬೇಕು.
--------------
ಏಲೇಶ್ವರ ಕೇತಯ್ಯ
ಬೇಡಿ ಮಾಡುವ ಭಕ್ತನ ಇರವೆಂತೆಂದಡೆ: ಆ ಗಳಿಗೆಯಲ್ಲಿ ಆ ದ್ರವ್ಯ ಸಂದು ಈಗ-ಆಗವೆಂಬ ಬೈಕೆಯ ಮರೆದು, ಸತಿಸುತರಿಗೆಂದೆನ್ನದೆ, ಇಂತೀ ಭಕ್ತಿಯೆ ಗತಿಯಾಗಿ, ಸತ್ಯವೆ ಒಡಲಾಗಿ, ಇಂತೀ ಗುಣದಲ್ಲಿ ನಿತ್ಯ-ಅನಿತ್ಯವ ಅಳಿದು ಮಾಡುವ ಸದ್ಭಕ್ತ ಬೇಡಿ[ದ]ನೆಂಬ ಭಾವವಿಲ್ಲ. ಆ ದ್ರವ್ಯ ಏಲೇಶ್ವರಲಿಂಗದ ಬೈಚಿಟ್ಟ ಬಯಕೆ.
--------------
ಏಲೇಶ್ವರ ಕೇತಯ್ಯ
ತಾ ಹಿಡಿದ ವ್ರತಕ್ಕೆ ನಿಶ್ಚಯವ ಕಂಡು ನಡೆವಲ್ಲಿ ಸೋಂಕು ಬಹುದಕ್ಕೆ ಮುನ್ನವೆ ಸುಳುಹನರಿದು, ತಟ್ಟುಮುಟ್ಟು ಬಹುದಕ್ಕೆ ಮುನ್ನವೆ ಕಟ್ಟಣೆಯ ಮಾಡಿ, ಮೀರಿ ದೃಷ್ಟದಿಂದ ಶಿವಾಧಿಕ್ಯ ತಪ್ಪಿ ಬಂದಲ್ಲಿ ತನ್ನ ಕಟ್ಟಳೆಯ ವ್ರತಸ್ಥಭಕ್ತರು ಗಣಂಗಳು ಗುರುಲಿಂಗಜಂಗಮ ಮುಂತಾಗಿ ಎನ್ನ ವ್ರತದ ದೃಷ್ಟದ ಕಟ್ಟಳೆ ತಪ್ಪಿತ್ತೆಂದು ಮಹಾಪ್ರಮಥರಲ್ಲಿ ತಪ್ಪನೊಪ್ಪಿಸಿ, ಇನ್ನು ಘಟವಿಪ್ಪುದಿಲ್ಲಾಯೆಂದು ಬೀಳ್ಕೊಂಡು ಸತ್ಯಕ್ಕೊಪ್ಪಿದಂತೆ ತನ್ನ ಚಿತ್ತವಿದ್ದು ಪರಿಹರಿಸಿಕೊಂಬುದು ಮತ್ರ್ಯದ ಅನುಸರಣೆ. ತಪ್ಪಿದಲ್ಲಿಯೆ ಆತ್ಮವಸ್ತುವಿನಲ್ಲಿ ಕೂಡುವುದು ಕಟ್ಟಾಚಾರಿಯ ನೇಮ. ಇಂತೀ ಉಭಯವ ವಿಚಾರಿಸಿ ನಿಂದ ವ್ರತಕ್ಕೆ ನಿಮ್ಮ ಮನವೆ ಸಾಕ್ಷಿ. ಆಜ್ಞೆಯ ಮೀರಲಿಲ್ಲ, ಬಂಧನದಲ್ಲಿ ಅಳಿಯಲಿಲ್ಲ. ನೀವು ನೀವು ಬಂದ ಬಟ್ಟೆಯ ನೀವೆ ನೋಡಿಕೊಳ್ಳಿ. ಎನ್ನ ಬಟ್ಟೆ, ಏಲೇಶ್ವರಲಿಂಗದ ಗೊತ್ತು, ಕೆಟ್ಟಿಹಿತೆಂದು ಸೂಚನೆದೋರಿತ್ತು.
--------------
ಏಲೇಶ್ವರ ಕೇತಯ್ಯ
ಅಂಗ ಸರ್ವಾಂಗಭಾವವ ಮುಟ್ಟುವಲ್ಲಿ, ಆ ಭಾವ ತನ್ನಯ ಕ್ರೀಯ ನಿಬದ್ಧಿಸಿ ಹಿಡಿವಲ್ಲಿ, ಬಾಹ್ಯದ ಕ್ರೀ, ಅಂತರಂಗದ ಅರಿವು, ಉಭಯ ಏಕ ಸನ್ಮತವಾಗಿ, ಸರ್ವವ್ಯವಧಾನಂಗಳಲ್ಲಿ ಸರ್ವವ ಹಿಡಿದುಬಿಡುವಲ್ಲಿ, ತನ್ನ ಕ್ರೀಗೆ ಒಳಗಾದುದ ಒಡಗೂಡುವಲ್ಲಿ, ಸಹಭೋಜನದ ಸಮವನರಿತು, ಭರಿತಾರ್ಪಣವ ಅರ್ಪಿತವನರಿತು, ತಾ ಲಕ್ಷಿಸಿದ ವ್ರತದ ಕಟ್ಟಳೆಯ ಕಂಡು ತನು ಕ್ರೀಯಲ್ಲಿ ಶುದ್ಧವಾಗಿ, ಆತ್ಮ ಅರಿವಿನಲ್ಲಿ ಶುದ್ಧವಾಗಿ, ಅರಿವು ಆಚಾರದಲ್ಲಿ ಲೀಯವಾಗಿ, ಆ ಸದ್ಭಾವವೆ ಏಲೇಶ್ವರಲಿಂಗದ ವ್ರತದ ಸಂಬಂಧ.
--------------
ಏಲೇಶ್ವರ ಕೇತಯ್ಯ
ಸರ್ವವ್ಯವಧಾನಂಗಳಲ್ಲಿ ಆವಾವ ವ್ರತಭಾವವ ತಾನಂಗೀಕರಿಸಿದಲ್ಲಿ, ಒಡೆಯರು ಭಕ್ತರಠಾವಿನಲ್ಲಿ ಉಣೆಯಕ್ಕೆ ಎಡೆಗೊಡದೆ, ಕ್ರೀ ಮುಂಚು, ಅರಿವ ಆತ್ಮ ಹಿಂಚಾಗಿ, ಓಸರವಿಲ್ಲದ ತ್ರಾಸಿನಂತೆ, ಹಿಡಿದ ವ್ರತಕ್ಕೆ, ಆಚರಣೆಗೆ, ಒಡಗೂಡುವ ವಸ್ತುವಿಗೆ, ಬೇರೊಂದೆಡೆಯೆಂದು ಕಲ್ಪಿತ ಹಿಂಗಿದವಂಗೆ, ಕೊಂಡ ವ್ರತದಲ್ಲಿ ಆತ್ಮ ನಿಂದವಂಗೆ, ಆತನ ಸಂಗವೆ ಏಲೇಶ್ವರಲಿಂಗದ ಕೂಟ.
--------------
ಏಲೇಶ್ವರ ಕೇತಯ್ಯ
ಸರ್ವವ್ರತಸ್ಥರ ನೇಮಸ್ಥಲದ ಕಟ್ಟಳೆ: ಅಂಗವು ವ್ರತ, ಲಿಂಗವು ವ್ರತ, ಭಾವವು ವ್ರತ. ಇಂತೀ ತ್ರಿವಿಧವ್ರತವ ಆರೋಗಿಸಿ ನಡೆವಲ್ಲಿ ಬಾಹ್ಯಕ್ರೀಯಲ್ಲಿ ಲಿಂಗವ ಭಾವಿಸುವಲ್ಲಿ, ದೃಷ್ಟಿ ನಟ್ಟು ನೋಡುವಲ್ಲಿ ತನ್ನ ವ್ರತದಾಳಿ ಮಿಶ್ರವಿಲ್ಲದೆಯಿಪ್ಪುದು ಏಲೇಶ್ವರಲಿಂಗದ ವ್ರತದಂಗದ ಭಾವ.
--------------
ಏಲೇಶ್ವರ ಕೇತಯ್ಯ
ಗುರುಪ್ರಸಾದವ ಕೊಂಬಲ್ಲಿ ಇಹವನರಿಯಬೇಕು, ಲಿಂಗಪ್ರಸಾದವ ಕೊಂಬಲ್ಲಿ ಪರವನರಿಯಬೇಕು, ಜಂಗಮಪ್ರಸಾದವ ಕೊಂಬಲ್ಲಿ ಇಹಪರ ಉಭಯವನರಿತು ಸ್ವೀಕರಿಸಬೇಕು. ಗಣಪ್ರಸಾದವ ಸಮೂಹದಲ್ಲಿ ಕೊಂಬಲ್ಲಿ, ರಾಜಸ ತಾಮಸ ಸಾತ್ವಕವಂ ಅರಿದು ಕೊಂಬಲ್ಲಿ ತ್ರಿವಿಧವಂ ಮರೆದು, ಅಜೀರ್ಣ ಮನ ಮುಂತಾದ ಮಿಕ್ಕಾದ ತೊಡಕಿಂಗೆ ಒಡಲಲ್ಲದೆ, ವಡಬಾನಳನಂತೆ, ಉರಿಯ ಒಡಲಿನಂತೆ, ಆಕಾಶವನವಗವಿಸಿದ ಗೋಳಕಾಕಾರದಂತೆ, ಕುರುಹಿಂಗೆ ಒಡಲಿಲ್ಲದೆ ಕೊಂಡುದು ಗಣಪ್ರಸಾದ. ಹೀಂಗಲ್ಲದೆ ಹುಲಿ ಹಾಯಿದ ಗೋವ ಹಲವು ನರಿಗಳು ಕೊಂಡು ತಮ್ಮ ತಮ್ಮ ಹೊಲಗಳಿಗೆ ಹೋದಂತಾಗಬೇಡ. ಎನಗಿನಿತು ಒಲವರವೆಂದು ನೋಯಬೇಡ. ಇದು ಏಲೇಶ್ವರಲಿಂಗದ ವ್ರತದಂಗದ ಹೊಲಬಿನ ಹಾದಿ.
--------------
ಏಲೇಶ್ವರ ಕೇತಯ್ಯ
-->