ಅಥವಾ

ಒಟ್ಟು 16 ಕಡೆಗಳಲ್ಲಿ , 1 ವಚನಕಾರರು , 16 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕ್ರೀಗುಣ ಶುದ್ಧವಾದಲ್ಲಿ ಭಾವಗುಣ ಶುದ್ಧ. ಆ ಸದ್ಭಾವದ ದೆಸೆಯಿಂದ ವಿಮಲಜ್ಞಾನ. ಆ ಸುಜ್ಞಾನ ಸೂತ್ರವಾಗಿ ತ್ರಿವಿಧಭೇದವಾಯಿತ್ತು. ಆ ತ್ರಿವಿಧದ ಸೂತ್ರದಿಂದ ಷಡುಸ್ಥಲವಾಯಿತ್ತು. ಆ ಷಡುಸ್ಥಲದ ಭಾವಂಗಳೆ ಬ್ಥಿನ್ನಭಾವವಾಗಿ ನಾನಾ ಸ್ಥಲಭೇದ ವ್ರತವಾಯಿತ್ತು. ಆ ವ್ರತದ ಲಕ್ಷಣವನರಿತು ಆವಾವ ಕ್ರೀಯಲ್ಲಿ ಆವಾವ ಭಾವಶುದ್ಧವಾಗಿ, ಕೃತ್ಯಕ್ಕೆ ಕಟ್ಟಳೆಯಾಗಿ, ನೇಮಕ್ಕೆ ನಿಶ್ಚಯವಾಗಿ ವ್ರತದಾಳಿಯ ತಪ್ಪದಿಪ್ಪ ಭಕ್ತನಲ್ಲಿ ಏಲೇಶ್ವರಲಿಂಗವು ನಿಶ್ಚಯವಾಗಿಪ್ಪನು.
--------------
ಏಲೇಶ್ವರ ಕೇತಯ್ಯ
ತನುಶೀಲ ಗುರುಭಕ್ತಿ, ಮನಶೀಲ ಲಿಂಗಭಕ್ತಿ, ಧನಶೀಲ ಜಂಗಮಭಕ್ತಿ, ತ್ರಿವಿಧಶೀಲ ಮಹಾಭಕ್ತಿ. ಅಂಗ ಮನ ಭಾವ ಕರಣಂಗಳಲ್ಲಿ ವ್ರತದಂಗವೆ ಪ್ರಾಣವೆಂದು ಇಪ್ಪುದು ಛಲಭಕ್ತಿ. ಇಂತೀ ಭೇದಭಾವಂಗಳಲ್ಲಿ ಅಣುಮಾತ್ರ ತಪ್ಪ ಕ್ಷಣಮಾತ್ರ ಸೈರಿಸೆವೆಂಬುದು ನಿಶ್ಚಯಭಕ್ತಿ. ಇಂತೀ ವರ್ತಕಶುದ್ಧ ಸದ್ಭಕ್ತಂಗೆ ಮತ್ರ್ಯ-ಕೈಲಾಸವೆಂಬ ತತ್ತು ಗೊತ್ತಿಲ್ಲ. ಆತ ವ್ರತಲಕ್ಷಣಮೂರ್ತಿ, ಏಲೇಶ್ವರಲಿಂಗವು ತಾನೆ.
--------------
ಏಲೇಶ್ವರ ಕೇತಯ್ಯ
ವ್ರತಸ್ಥನಾಗಿದ್ದಾತ ಸಮೂಹಪ್ರಸಾದವ ಕೊಳಲಾಗದು. ಅದೆಂತೆಂದಡೆ: ಬಾಲರು ಭ್ರಾಮಕರು ಚೋರರು ಕಟುಕರು ಪಾರದ್ವಾರಿಗಳು ಜಾರರು ಪಗುಡಿ ಪರಿಹಾಸಕರು_ ಅವರಲ್ಲಿ ಪ್ರಸಾದದ ನಚ್ಚು ಮಚ್ಚುಂಟೆ? ಪ್ರಸಾದವ ಕೊಂಬಲ್ಲಿ ಸಮಶೀಲಸಂಪನ್ನರು, ಏಕಲಿಂಗನಿಷ್ಠವಂತರು. ಸರ್ವಾಂಗಲಿಂಗಪರಿಪೂರ್ಣರು, ಪರಮನಿರ್ವಾಣಪರಿಪೂರ್ಣರು. ಇಂತೀ ಇವರೊಳಗಾದ ಸರ್ವಗುಣಸಂಪನ್ನಂಗೆ ಗಣಪ್ರಸಾದವಲ್ಲದೆ ಕಾಗೆಯಂತೆ ಕರೆದು, ಕೋಳಿಯಂತೆ ಕೂಗಿ, ಡೊಂಬರಂತೆ ಕೂಡಿ ಆಡಿ, ಭಂಗ ಹಿಂಗದಿದ್ದಡೆ ಕೊಂಡಾಡುವ ಆ ಲಾಗ ನೋಡಿಕೊಳ್ಳಿ. ನಿಮ್ಮ ಭಾವಕ್ಕೆ ನಿಮ್ಮ ಭಾವವೆ ದೃಷ್ಟಸತ್ಯ, ಮರೆಯಿಲ್ಲ, ಭಕ್ತಿಗೆ ಇದಿರೆಡೆಯಿಲ್ಲ, ವ್ರತಗೆಟ್ಟವಂಗೆ ಆಚಾರಭ್ರಷ್ಟಂಗೆ ಕಟ್ಟು ಮೆಟ್ಟ ಮಾಡಲಿಲ್ಲ. ಇದು ಕಟ್ಟಾಚಾರಿಯ ದೃಷ್ಟ, ಏಲೇಶ್ವರಲಿಂಗವು ಸರ್ವಶೀಲವಂತನಾದ ಸಂಬಂಧಸಂಪದದಂಗ.
--------------
ಏಲೇಶ್ವರ ಕೇತಯ್ಯ
ವ್ರತಶುದ್ಧವಾಗಿ ನಡೆವಾತನೆ ಎನಗೆ ಅದ್ಥೀನದರಸು, ಪಂಚಾಚಾರ ಶುದ್ಧವಾಗಿ ನಡೆವಾತನೆ ಎನಗೆ ಸದ್ಗರುಮೂರ್ತಿ, ಆವಾವ ನೇಮಕ್ಕೂ ಭಾವಶುದ್ಧವಾಗಿ ಇಪ್ಪ ಮಹಾಭಕ್ತನೆ ಏಲೇಶ್ವರಲಿಂಗವು ತಾನೆ.
--------------
ಏಲೇಶ್ವರ ಕೇತಯ್ಯ
ಮೃತ್ತಿಕೆಯ ಲವಣ ಸ್ವಯಂಪಾಕ, ಮಿಕ್ಕಾದ ಲವಣ ಅಪ್ಪುಭೇದ. ಸಪ್ಪೆಯ ವ್ರತ ನಿಶ್ಚಿಂತ, ಅದು ದೋಷನಾಶನ, ಇಂತೀ ಉಭಯ ವ್ರತವೆ ಕಟ್ಟು. ಮಿಕ್ಕಾದ ಅರುವತ್ತೆರಡು ಶೀಲ ಸ್ವತಂತ್ರಸಂಬಂಧ, ಅವು ಎಂಭತ್ತನಾಲ್ಕು ಲಕ್ಷ ಜೀವವ್ರತದ ಸಂಬಂಧ. ವ್ರತವ ಹಿಡಿದಲ್ಲಿ, ಆ ವ್ರತಕ್ಕೆ ಅನುಸರಣೆ ಬಂದಲ್ಲಿ, ಬಂದಿತು ಬಾರದೆಂಬ ಸಂದೇಹಕ್ಕೆ ಮುನ್ನವೆ ಆತ್ಮ ನಿರಂಗವಾಗಬಲ್ಲುದೊಂದೆ ವ್ರತ. ಮತ್ತೆ ಮಿಕ್ಕಾದವೆಲ್ಲವೂ ಸಂದಣಿಯ ತಗಹು, ಪರಿಸ್ಪಂದದ ಕೊಳಕು, ಲಂದಣಿಗರ ಬಂಧದ ಮಾತಿನ ಮಾಲೆ. ಇಂತೀ ಸಂಗ ದುಸ್ಸಂಗವನರಿತು ಹಿಂಗುವದ ಹಿಂಗಿ, ತನ್ನ ಸಂಗಸುಖಕ್ಕೆ ಬಂದುದ ಕೂಡಿಕೊಂಡು, ವ್ರತಭಂಗಿತನಲ್ಲದೆ ನಿರುತ ಸ್ವಸಂಗಿಯಾದ ಸರ್ವಾಂಗಸಂಬಂಧ ಶೀಲವಂತಂಗೆ, ಬೇರೊಂದುವಿಲ್ಲ, ಏಲೇಶ್ವರಲಿಂಗವು ತಾನೆ.
--------------
ಏಲೇಶ್ವರ ಕೇತಯ್ಯ
ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನಮಪ್ಪ ಪ್ರಸಾದಂಗಳನರಿವಲ್ಲಿ, ಆಯತ ಸ್ವಾಯತ ಸನ್ನಿಹಿತ ಸಮಯೋಚಿತ ಪ್ರಸಾದವ ಕೊಂಬಲ್ಲಿ, ಗುರುಭಕ್ತನಾದಲ್ಲಿ ಆ ವಿವರವ ತಿಳಿಯಬೇಕು, ಲಿಂಗಭಕ್ತನಾದಲ್ಲಿ ಆ ಗುಣವನರಿಯಬೇಕು, ಜಂಗಮಭಕ್ತನಾದಲ್ಲಿ ಆ ಉಭಯವ ವಿವರಿಸಲಿಲ್ಲ. ಮಹಾಪ್ರಮಥರಲ್ಲಿ ಪ್ರಸನ್ನವಾಗಲಾಗಿ ಗುರುಲಿಂಗಜಂಗಮ ಮೂರೊಂದಾಯಿತು. ಆ ತ್ರಿವಿಧಪ್ರಸಾದವನರಿತು ಗಣಪ್ರಸಾದವ ಕೊಂಬುದು, ಆ ಗಣ ಸ್ವಸ್ಥವಾಗಿ ಮಹಾಪ್ರಸಾದವಾಯಿತ್ತು. ಆ ಪ್ರಸಾದವ ಕೊಂಡು ಏಲೇಶ್ವರಲಿಂಗವು ಸರ್ವಶೀಲವಂತನಾದ.
--------------
ಏಲೇಶ್ವರ ಕೇತಯ್ಯ
ನಾನಾ ಭಾವದ ವ್ರತಂಗಳನರಿವಲ್ಲಿ ಎಚ್ಚರಿಕೆ ವ್ಯವಧಾನ ಮುಂತಾಗಿ ತಟ್ಟು-ಮುಟ್ಟು ತಾಗು-ಸೋಂಕುಗಳಲ್ಲಿ ಎಚ್ಚರಿಕೆ ಗುಂದದೆ, ನಡೆವಲ್ಲಿ, ಒಂದ ಕುರಿತು ನುಡಿವಲ್ಲಿ, ಲಕ್ಷಿಸಿ ಅರಿವಲ್ಲಿ ಧರೆ ಜಲ ಅನಲ ಅನಿಲಂಗಳಲ್ಲಿ ದೃಕ್ಕು ದೃಶ್ಯ ಏಕವಾಗಿ ವರ್ತಿಸಿ ನಡೆವುದು ಖಂಡಿತನ ವ್ರತ. ಆತ ಸಂದೇಹವಿಲ್ಲದ ನಿರಂಗ ಏಲೇಶ್ವರಲಿಂಗವು ತಾನೆ.
--------------
ಏಲೇಶ್ವರ ಕೇತಯ್ಯ
ಭಕ್ತರಾಶ್ರಯಕ್ಕೆ ಭಕ್ತರು ಹೋಹಲ್ಲಿ ಅವರ ನಿತ್ಯಕೃತ್ಯವ ವಿಚಾರಿಸಿ, ತಮ್ಮ ನೇಮಕ್ಕೆ ಅವರ ಭಾವವೊಂದಾದಲ್ಲಿ ತಮ್ಮ ಕೃತ್ಯದ ಒಡೆಯರು ಮುಂತಾಗಿ ಹೋಗಬೇಕಲ್ಲದೆ, ಆ ಭಕ್ತರ ಆಶ್ರಯಕ್ಕೆ ಒಡೆಯರ ಕಟ್ಟಳೆ ಉಂಟೆಂದು, ತಮ್ಮ ಒಡೆಯರ ಬಿಟ್ಟು ತುಡುಗುಣಿತನದಲ್ಲಿ ಉಂಬವಂಗೆ_ ಇಂತಿ ಬಿಡುಮುಡಿಯ [ಭ]ಂಡರನೊಪ್ಪ ಏಲೇಶ್ವರಲಿಂಗವು.
--------------
ಏಲೇಶ್ವರ ಕೇತಯ್ಯ
ಲಿಂಗಭಕ್ತ ಗುರುಪ್ರಸಾದವ ಕೊಳಲಿಲ್ಲ, ಜಂಗಮಭಕ್ತ ಲಿಂಗಪ್ರಸಾದವ ಕೊಳಲಿಲ್ಲ, ಮಹಾಭಕ್ತ ಜಂಗಮಪ್ರಸಾದವ ಕೊಳಲಿಲ್ಲ, ನೇಮದ ಕೃತ್ಯದ ಮಹಾವ್ರತಿ ಗಣಪ್ರಸಾದವ ಕೊಳಲಿಲ್ಲ. ಅದೆಂತೆಂದಡೆ: ಗುರುಭಕ್ತಂಗೆ ಗುರುವಿನಲ್ಲಿಯೆ ಮುಕ್ತಿ, ಲಿಂಗಭಕ್ತಂಗೆ ಲಿಂಗದಲ್ಲಿಯೆ ಮುಕ್ತಿ, ಜಂಗಮಭಕ್ತಂಗೆ ಜಂಗಮದಲ್ಲಿಯೆ ಮುಕ್ತಿ. ಮಹಾಭಕ್ತಂಗೆ ಶರಣರಲ್ಲಿಯೆ ಮುಕ್ತಿ ಸಂಬಂಧ. ಇಂತೀ ಸಮಯ [ಗ]ಣಸಮೂಹ ಕೂಡಿದಲ್ಲಿ ಆ ಕಾರುಣ್ಯವೆ ಮಹಾಮುಕ್ತಿ. ಆ ಮುಕ್ತಿಯೆ ಅವಿಮುಕ್ತಿಕ್ಷೇತ್ರಂಗಳಾದಲ್ಲಿ ಪ್ರಸನ್ನಪ್ರಸಾದವಾಯಿತ್ತು. ಆ ಲಿಂಗವ್ರತದಂಗವ ತಾಳಲಾಗಿ ಏಲೇಶ್ವರಲಿಂಗವು ಸರ್ವಶೀಲವಂತನಾದ.
--------------
ಏಲೇಶ್ವರ ಕೇತಯ್ಯ
ಅನ್ನ-ಉದಕಕ್ಕೆ, ನನ್ನಿಯ ಮಾತಿಗೆ, ಚೆನ್ನಾಯಿತ್ತು ಒಡೆಯರ ಕಟ್ಟಳೆ. ಮಿಕ್ಕಾದವಕ್ಕೆ ಗನ್ನವ ಮಾಡಿ- ಈ ಬಣ್ಣ ಬಚ್ಚಣೆಯ[ಲ್ಲಿ] ನಡೆವ ಕನ್ನಗಳ್ಳರ ಶೀಲ ಇಲ್ಲಿಗೆ ಅಲ್ಲಿಗೆ ಮತ್ತೆಲ್ಲಿಗೂ ಇಲ್ಲ. ಏಲೇಶ್ವರಲಿಂಗವು ಅವರವೊಲ್ಲನಾಗಿ.
--------------
ಏಲೇಶ್ವರ ಕೇತಯ್ಯ
ಭಕ್ತಂಗೆ ಗುರುಪ್ರಸಾದ, ಮಾಹೇಶ್ವರಂಗೆ ಲಿಂಗಪ್ರಸಾದ, ಪ್ರಸಾದಿಗೆ ಜಂಗಮಪ್ರಸಾದ, ಪ್ರಾಣಲಿಂಗಿಗೆ ಜ್ಞಾನಪ್ರಸಾದ, ಶರಣಂಗೆ ಪ್ರಸನ್ನ ಪ್ರಸಾದ, ಐಕ್ಯಂಗೆ ನಿಜಪ್ರಸಾದ. ಹೀಂಗಲ್ಲದೆ ರಣದ ವೀರರಂತೆ ಸೂರೆಗೂಳಿನಲ್ಲಿ ಅದಾರ ಪ್ರಸಾದ ಹೇಳಾ? ತ್ರಿವಿಧಶೇಷಪ್ರಸಾದವ ಕೊಂಬಲ್ಲಿ ಸಮಭೇದವನರಿತು, ಪ್ರಸಾದದ ಕ್ರಮಭೇದವ ಕಂಡು, ಆಯತ ಸ್ವಾಯತ ಸನ್ನಹಿತವೆಂಬ ತ್ರಿವಿಧ ಕ್ರೀಯ ವಿಚಾರಿಸಿ ನಡೆವುದು ಷಟ್ಸ್ಥಲದ ಕ್ರೀ, ಆಚಾರಕ್ಕೆ ಇಕ್ಕಿದ ಗೊತ್ತು, ಏಲೇಶ್ವರಲಿಂಗವು ವ್ರತಸ್ಥನಾದ ಯುಕ್ತಿ.
--------------
ಏಲೇಶ್ವರ ಕೇತಯ್ಯ
ಚಿನ್ನ ಲೋಹಾದಿಗಳು ಕರಗಿ ಒಂದುಗೂಡುವುದಲ್ಲದೆ ಮಣ್ಣು ಬೆಂದು ಹಿಂಗಿ ಓಡಾದುದು ಸರಿಯಿಂದ ಸಂದುಗೂಡುವುದೆ? ಅರಿಯದ ಮರವೆಯ ಒಡಗೂಡಬಹುದಲ್ಲದೆ ಅರಿತು ಹೇಳಿ ಕೇಳಿ ಮತ್ತರಿಯೆನೆಂದು ಅಹಂಕಾರದಲ್ಲಿ ನುಡಿವವನ ಒಡಗೂಡಬಹುದೆ? ಇಂತೀ ಗುಣವ ಅರಿದು ಒಪ್ಪಿದಡೆ ಪರಕ್ಕೆ ದೂರ, ಅಲ್ಲ- ಅಹುದೆಂದಡೆ ಶರಣರ ಗೆಲ್ಲ ಸೋಲದ ಹೋರಾಟ. ಇಂತಿವರೆಲ್ಲರೂ ಕೂಡಿ ನೊಂದಡೆ ನೋಯಲಿ, ನಾ ಕೊಂಡ ವ್ರತದಲ್ಲಿಗೆ ತಪ್ಪೆನು. ಇದು ವ್ರತಾಚಾರವ ಬಲ್ಲವರ ಭಾಷೆ. ಏಲೇಶ್ವರಲಿಂಗವು ಕುಲ್ಲತನವಾದಡೂ ಒಲ್ಲೆನು.
--------------
ಏಲೇಶ್ವರ ಕೇತಯ್ಯ
ಆತ ಅಂಗವ ತೊಟ್ಟಡೇನು? ಪರಾಂಗನೆಯರ ಸೋಂಕ. ಕರವಿದ್ದಡೇನು? ಮತ್ತೊಂದ ಅಪಹರಿಸಿ ತೆಗೆಯ. ಕರ್ಣವಿದ್ದಡೇನು? ಮತ್ತೊಂದು ಅನ್ಯಶಬ್ದವ ಕೇಳ. ಕಣ್ಣಿದ್ದಡೇನು? ಲಿಂಗವಲ್ಲುದದ ನೋಡ ನಾಸಿಕವಿದ್ದಡೇನು? ಅರ್ಪಿತವಲ್ಲದುದ ವಾಸಿಸ. ಜಿಹ್ವೆಯಿದ್ದಡೇನು? ಪ್ರಸಾದವಲ್ಲದುದ ಸ್ವೀಕರಿಸ. ಇಂತಿವೆಲ್ಲರಲ್ಲಿ ಸರ್ವವ್ಯವಧಾನಿಯಾಗಿ ನಡೆನುಡಿ ಅರಿವು ಶುದ್ಧಾತ್ಮನು ಏಲೇಶ್ವರಲಿಂಗವು ತಾನೆ.
--------------
ಏಲೇಶ್ವರ ಕೇತಯ್ಯ
ಭಾಂಡ ಭಾಜನ ಉಪಕರಣ ವಸ್ತ್ರ ಮುಂತಾದ ಸಕಲದ್ರವ್ಯಂಗಳ ಮನದ ಕಟ್ಟಿಂಗೆ ತಟ್ಟು-ಮುಟ್ಟನರಿತು ಅಹುದಾದುದನೊಪ್ಪಿ, ಅಲ್ಲದುದ ಬಿಟ್ಟು, ಇದಿರು ಮೆಚ್ಚುವಂತೆ ಕಪಟ ಅನುಕರಣೆಗೆ ಒಳಗಾಗದೆ, ಲಿಂಗ ಮೆಚ್ಚುವಂತೆ, ಶರಣರು ಒಪ್ಪುವಂತೆ ನಿಂದ ಸದ್ಭಕ್ತನಂಗವೆ ಏಲೇಶ್ವರಲಿಂಗವು.
--------------
ಏಲೇಶ್ವರ ಕೇತಯ್ಯ
ಮನಕ್ಕೆ ಬಂದಂತೆ ನೇಮವ ಮಾಡಲಿಲ್ಲ, ಆರಾರ ಅನುವ ಕಂಡು ಆ ನೇಮವನನುಕರಿಸಲಿಲ್ಲ. ತಾನಾಚರಿಸುವ ಸತ್ವ, ತಾ ಹಿಡಿದ ವ್ರತನೇಮದ ನಿಸ್ಚಯ. ಇಷ್ಟನರಿಯದೆ ದೃಷ್ಟವ ಕಂಡು ಘಟ್ಟಿಯ ತನದಲ್ಲಿ ಹೋರುವ ಮಿಟ್ಟೆಯ ಭಂಡರನೊಪ್ಪ ಏಲೇಶ್ವರಲಿಂಗವು.
--------------
ಏಲೇಶ್ವರ ಕೇತಯ್ಯ
ಇನ್ನಷ್ಟು ... -->