ಅಥವಾ

ಒಟ್ಟು 5 ಕಡೆಗಳಲ್ಲಿ , 4 ವಚನಕಾರರು , 5 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾಲ್ಕುವೇದ, ಹದಿನಾರು ಶಾಸ್ತ್ರ, ಹದಿನೆಂಟು ಪುರಾಣ, ಇಪ್ಪತ್ತೆಂಟು ಆಗಮ, ಮೂವತ್ತೆರಡು ಉಪನಿಷತ್ತುಗಳೆಲ್ಲವೂ ಪಂಚಾಕ್ಷರದ ಸ್ವರೂಪವನರಿಯದೆ ನಿಂದವು. ಏಳುಕೋಟಿ ಮಹಾಮಂತ್ರಂಗಳಿಗೆ ತಾನೆ ಮೂಲಮಂತ್ರವಾಗಿ ಸುರತಿಗೆ ಅಣಿಮಾದಿಯ ಕೊಟ್ಟು ಶರಣರಿಗೆ ತ್ರಿಣಯನ ಕೊಟ್ಟುದು ಈ ಪಂಚಾಕ್ಷರ ಪ್ರಣವದೊಳಡಕವಾದ ಪಂಚಾಕ್ಷರವನರಿತಲ್ಲಿ ಸೌರಾಷ್ಟ್ರ ಸೋಮೇಶ್ವರಲಿಂಗಸಂಜ್ಞೆಯ ವರ್ಣವೆನ್ನ ಸರ್ವಾಂಗದಲ್ಲಡಗಿದವಯ್ಯಾ.
--------------
ಆದಯ್ಯ
ನಾಲ್ಕು ವೇದಂಗಳುಪಮೆ, ಹದಿನಾರು ಶಾಸ್ತ್ರಂಗಳುಪಮೆ, ಹದಿನೆಂಟು ಪೌರಾಣ, ಇಪ್ಪತ್ತೆಂಟು ದಿವ್ಯಾಗಮಂಗಳುಪಮೆ, ಮೂವತ್ತೆರಡುಪನಿಷತ್ತುಗಳುಪಮೆ, ಏಳುಕೋಟಿ ಮಹಾಮಂತ್ರಂಗಳುಪಮೆ, ಅನೇಕ ಶಬ್ದ, ಅನೇಕ ಶಾಸ್ತ್ರ, ಅನೇಕ ತರ್ಕವ್ಯಾಕರಣಂಗಳೆಲ್ಲಾ ಉಪಮೆ, ಅನೇಕ ಮಂತ್ರ ತಂತ್ರ ಯಂತ್ರಸಿದ್ಧಿ ಬದ್ಧಂಗಳೆಲ್ಲಾ ಉಪಮೆ, ಚೌಷಷಿ* ವಿದ್ಯಂಗಳುಪಮೆ, ಕಾಣದ ಕಾಂಬುದುಪಮೆ, ಕೇಳದ್ದ ಕೇಳುವುದುಪಮೆ, ಅಸಾಧ್ಯವ ಸಾಧಿಸುವುದುಪಮೆ, ಅಭೇದ್ಯವ ಭೇದಿಸುವುದುಪಮೆ, ಉಪಮೆ ನಿಸ್ಥಲವಾಗಿ ಉಪಮಾಬಂಧನ ಮೀರಿ ಉಪಮೆ ನಿರುಪಮೆಗಳೆಂಬ ಜಿಗುಡಿನ ಜಿಡ್ಡುಗಳಚಿ ತರಂಗ ನಿಸ್ತರಂಗಗಳೆಂಬ ಭಾವದ ಸೂತಕವಳಿದು, ಸೌರಾಷ್ಟ್ರ ಸೋಮೇಶ್ವರನ ನಿಜವನರಿಯದ ಉಪಮಾಬದ್ಧರು, ಉಪಮೆಯಿಂದುಪಮಿಸಿ ಉಪಮೆ[ಯಿಂ]ದಿಪ್ಪರಯ್ಯಾ.
--------------
ಆದಯ್ಯ
ವೇದ ಶಾಸ್ತ್ರ ಆಗಮ ಪುರಾಣಗಳಲ್ಲಿ ಶ್ರುತಿ ಸ್ಮೃತಿಗಳಲ್ಲಿ ನುಡಿವುದು ಪುಸಿ. ಪುರಾತನರ ವಚನಂಗಳಲ್ಲಿ ಇಷ್ಟಲಿಂಗ ಭಿನ್ನವಾಗಲು ಮತ್ತೊಂದು ಲಿಂಗವ ಧರಿಸಿಕೊಳ್ಳಬೇಕೆಂಬುದು ಇಲ್ಲ. ವೀರಶೈವವುಳ್ಳವರಿಗೆ ಇಷ್ಟಲಿಂಗ ಸಹಸ್ರಭಿನ್ನವಾಗಲು ಧರಿಸುವುದೆಂದು ಚಿತ್ಪಿಂಡಾಗಮ ವಾತುಲಾಗಮದಲ್ಲಿ ಸಂದೇಹವಿಲ್ಲವೆಂಬವರಿಗೆ ಏಳುಕೋಟಿ ಯುಗಂಗಳಲ್ಲಿ ನಾಯಕನರಕ ತಪ್ಪದು. ಕಟ್ಟಿದವರು ಚಂದ್ರಸೂರ್ಯರು ಪೃಥ್ವಿ ಅಪ್ಪುವುಳ್ಳ ಪರಿಯಂತರವು ನಾಯಕನರಕದಲ್ಲಿಪ್ಪರು ಕಾಣಾ, ಅಮುಗೇಶ್ವರಲಿಂಗವೆ; ನಿಮ್ಮ ಶರಣರು ಲಿಂಗಭಿನ್ನವಾಗಲು ಲಿಂಗದೊಡನೆ ಅಂಗವ ಬಯಲು ಮಾಡುವರಯ್ಯಾ.
--------------
ಅಮುಗೆ ರಾಯಮ್ಮ
ಮಂತ್ರವ ಬಲ್ಲೆವೆಂದು ಪರಮನುಜರಿಗೆ ಭೂತ ಪ್ರೇತ ಪಿಶಾಚಿಗಳು ಹೊಡೆದರೆ ಬಿಡಿಸುವ ಸಂತೆಸೂಳೆಯ ಮಕ್ಕಳು ನೀವು ಕೇಳಿರೋ. ನಿಮ್ಮ ತನುವಿನೊಳಿಹ ಪಂಚಭೂತಂಗಳು ನಿಮ್ಮ ತಿಂದು ತೇಗುತಿಹವು. ಅವನೇಕೆ ನೀವು ಬಿಡಿಸಿಕೊಳಲಾರದಾದಿರೊ ? ಆಳುವ ಪಂಚಭೂತಶರೀರದ ಹೊಲೆಯ ಕಳೆದು ಶಿವದೇಹಿಯಮಾಡುವುದೆ ಶಿವಪಂಚಾಕ್ಷರಿ. ಜನನ ಮರಣಗಳ ನಿಟ್ಟೊರಸುವುದೆ ಶ್ರೀಪಂಚಾಕ್ಷರಿ. ಕಾಲಮೃತ್ಯು ಅಪಮೃತ್ಯು ಮಾರಿಗಳನೋಡಿಸುವುದೆ ಶ್ರೀಪಂಚಾಕ್ಷರಿ. ನಿತ್ಯ ಮುಕ್ತಿಯ ತೋರುವುದೆ ಶ್ರೀಪಂಚಾಕ್ಷರಿ. ಸತ್ಯ ಜಗದೊಳಿರಿಸುವ ಶ್ರೀಪಂಚಾಕ್ಷರಿ. ಏಳುಕೋಟಿ ಮಹಾಮಂತ್ರಕೆ ತಾಯಿ ಶ್ರೀಪಂಚಾಕ್ಷರಿ ಎಂಬುದನರಿಯದೆ, ಕಳ್ಳಮಂತ್ರವ ಕಲಿತು, ಕಾಳುಭವಕೀಡಾಗಿ ಕಾಳೊಡಲ ಹೊರೆವ ಮಾನವರು ನೀವು ಕೇಳಿರೊ. ಸಾಕ್ಷಿ : ``ಸಪ್ತಕೋಟಿ ಮಹಾಮಂತ್ರಾ ಉಪಮಂತ್ರಾಸ್ತ್ವನೇಕಶಃ | ಪಂಚಾಕ್ಷರ್ಯಾಂ ಪ್ರಲೀಯಂತೇ ಪುನಸ್ತಥೈವ ನಿರ್ಗತಾಃ ||'' ಎಂದೆಂಬ ಮಂತ್ರವನರಿಯದೆ, ಅಂಧಕರಂತೆ ಕಾಣದೆ ಹುಡುಕುವ ಸಂದೇಹಿಗಳಿಗಹುದೇನಯ್ಯಾ `ನಮಃ ಶಿವಾಯ' `ನಮಃ ಶಿವಾಯ' ಎಂಬ ಮಂತ್ರ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ ?
--------------
ಹೇಮಗಲ್ಲ ಹಂಪ
ಏಳುಕೋಟಿ ಮಹಾಮಂತ್ರಗಳ ಉಪಮಂತ್ರ ಕೋಟ್ಯಾನುಕೋಟಿಗಳ ಕಲಿತು ತೊಳಲಿ ಬಳಲುವುದೇಕೋ ? ಭಾಳಾಕ್ಷನ ಮೂಲಮಂತ್ರ ಒಂದೇ ಸಾಲದೇ ! ಸಕಲವೇದಂಗಳ ಮೂಲವಿದು, ಸಕಲಶಾಸ್ತ್ರಂಗಳ ಸಾರವಿದು, ಸಕಲಾಗಮಂಗಳ ಅರುಹಿದು, ಸಕಲಮಂತ್ರಂಗಳ ಮಾತೆಯಿದು. ಇಂತಪ್ಪ ಶಿವಮಂತ್ರವೆಂಬ ಸಂಜೀವನವು ಎನ್ನಂಗಕ್ಕೆ ಸಂಗಿಸಲಾಗಿ ಎನಗೆ ಮರಣದ ಭಯ ಹಿಂಗಿತಯ್ಯಾ ಅಖಂಡೇಶ್ವರಾ !
--------------
ಷಣ್ಮುಖಸ್ವಾಮಿ
-->