ಅಥವಾ

ಒಟ್ಟು 5 ಕಡೆಗಳಲ್ಲಿ , 5 ವಚನಕಾರರು , 5 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎನ್ನ ತನುವೆ ಬಸವಣ್ಣ, ಎನ್ನಾತ್ಮವೆ ಮಡಿವಾಳಯ್ಯ, ಎನ್ನ ಪ್ರಾಣವೆ ಚೆನ್ನಬಸವಣ್ಣ, ಎನ್ನ ಇಂದ್ರಿಯಂಗಳೆ ಪ್ರಭುದೇವರು, ಎನ್ನ ವಿಷಯಂಗಳೆ ಮೋಳಿಗೆ ಮಾರಿತಂದೆ ಎನ್ನ ಪ್ರಕೃತಿಯೆ ಅಜಗಣ್ಣದೇವರು. ಎನ್ನ ಅಂಗಕರಣಂಗಳೆ ಅಸಂಖ್ಯಾತ ಮಹಾಗಣಂಗಳು. ಎನ್ನ ಮನವೆ ಮಹಾದೇವಿಯಕ್ಕ, ಎನ್ನ ಬುದ್ಧಿಯೆ ಮೋಳಿಗಯ್ಯನ ರಾಣಿ, ಎನ್ನ ಚಿತ್ತವೆ ನೀಲಲೋಚನೆಯಮ್ಮ. ಎನ್ನ ಅಹಂಕಾರವೆ ತಂಗಟೂರ ಮಾರಯ್ಯನ ರಾಣಿ. ಎನ್ನ ಅರುಹೆ ಅಕ್ಕನಾಗಾಯಕ್ಕ. ಎನ್ನ ಅರುಹಿನ ವಿಶ್ರಾಂತಿಯೆ ಮುಕ್ತಾಯಕ್ಕ. ಎನ್ನ ನೇತ್ರದ ದೃಕ್ಕೆ ಸೊಡ್ಡಳ ಬಾಚರಸರು. ಎನ್ನ ಪುಣ್ಯದ ಪುಂಜವೆ ಹಡಪದಪ್ಪಣ್ಣ. ಎನ್ನ ಕ್ಷುತ್ತು ಪಿಪಾಸೆಯೆ ಘಟ್ಟಿವಾಳಯ್ಯ. ಎನ್ನ ಶೋಕ ಮೋಹವೆ ಚಂದಿಮರಸರು. ಎನ್ನ ಜನನ ಮರಣವೆ ನಿಜಗುಣದೇವರು. ಎನ್ನ ಯೋಗದ ನಿಲುಕಡೆಯೆ ಸಿದ್ಧರಾಮೇಶ್ವರರು. ಎನ್ನ ಅಂಗಕರಣವೆ ಏಳ್ನೂರೆಪ್ಪತ್ತಮರಗಣಂಗಳು. ಇಂತಿವನರಿದೆನಾಗಿ ಬೋಳಬಸವೇಶ್ವರನ ಕೃಪೆಯಿಂದ ಸಿದ್ಧೇಶ್ವರನೆಂಬ ಪರುಷ ಸಾಧ್ಯವಾಯಿತ್ತಯ್ಯ. ಪರಂಜ್ಯೋತಿ ಮಹಾಲಿಂಗಗುರು ಸಿದ್ಧಲಿಂಗಪ್ರಭುವಿನಲ್ಲಿ ಅಂಗ ಮಿಥ್ಯಭಾವವನರಿಯದೆ ನಿಮ್ಮ ಕೃಪಾನಂದದೊಳಗೆ ಮುಳುಗಿರ್ದೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಗುಮ್ಮಳಾಪುರದ ಸಿದ್ಧಲಿಂಗ
ಎನ್ನ ಕಾಯದ ಕದಳಿಯೆ ಸಂಗನಬಸವಣ್ಣನು, ಎನ್ನ ಜೀವದ ಸುಮನವೆ ಚೆನ್ನಬಸವಣ್ಣನು. ಎನ್ನ ಭಾವದ ಬಲುಹೆ ಪ್ರಭುದೇವರು, ಎನ್ನ ತನುವಿನ ಮೂರ್ತಿಯೆ ಚಂದಯ್ಯನು, ಎನ್ನ ಮನದ ನಿಶ್ಚಯವೆ ಮಡಿವಾಳಯ್ಯನು, ಎನ್ನ ಪ್ರಾಣದ ಪರಿಣಾಮವೆ ಹಡಪದಪ್ಪಣ್ಣನು, ಎನ್ನ ಅರುಹಿನ ನೈಷೆ*ಯೆ ಸೊಡ್ಡಳ ಬಾಚರಸನು, ಎನ್ನಾಚಾರದ ದೃಢವೇ ಮೋಳಿಗೆಯ ಮಾರಯ್ಯನು, ಎನ್ನ ನೋಟದ ನಿಬ್ಬೆರಗೆ ಅನುಮಿಷದೇವರು, ಎನ್ನ ಶ್ರೋತ್ರದ ಕೇಳಿಕೆಯೆ ಮರುಳಶಂಕರದೇವರು, ಎನ್ನ ಹೃದಯದ ಜ್ಯೋತಿಯೆ ಘಟ್ಟಿವಾಳಯ್ಯನು, ಎನ್ನಂತರಂಗದ ಬೆಳಗೆ ಅಜಗಣ್ಣಯ್ಯನು, ಎನ್ನ ಬಹಿರಂಗದ ನಿರಾಳವೆ ನಿಜಗುಣದೇವರು, ಎನ್ನ ಸರ್ವಾಂಗದ ಕಳೆಯೆ ಸಿದ್ಧರಾಮಯ್ಯನು, ಎನ್ನ ಗತಿಮತಿಚೈತನ್ಯವೇ ಏಳ್ನೂರೆಪ್ಪತ್ತಮರಗಣಂಗಳು. ಭೋಗಬಂಕೇಶ್ವರಾ, ನಿಮ್ಮ ಶರಣರ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು.
--------------
ಶ್ರೀ ಮುಕ್ತಿರಾಮೇಶ್ವರ
ಬಸವಣ್ಣನೆ ಗುರುಮೂರ್ತಿಯಾಗಿ ಎನ್ನ ಕರಸ್ಥಲಕ್ಕೆ ಬಂದನಯ್ಯಾ. ಚೆನ್ನಬಸವಣ್ಣನೆ ಲಿಂಗಮೂರ್ತಿಯಾಗಿ ಎನ್ನ ಕರಸ್ಥಲಕ್ಕೆ ಬಂದನಯ್ಯಾ. ಸಿದ್ಧರಾಮಯ್ಯನೆ ಜಂಗಮಮೂರ್ತಿಯಾಗಿ ಎನ್ನ ಕರಸ್ಥಲಕ್ಕೆ ಬಂದನಯ್ಯಾ. ಮರುಳಶಂಕರದೇವರೆ ಪ್ರಸಾದಮೂರ್ತಿಯಾಗಿ ಎನ್ನ ಕರಸ್ಥಲಕ್ಕೆ ಬಂದರಯ್ಯಾ. ಪ್ರಭುದೇವರೆ ಜ್ಞಾನಮೂರ್ತಿಯಾಗಿ ಎನ್ನ ಹೃದಯಸ್ಥಲಕ್ಕೆ ಬಂದರಯ್ಯಾ. ಇವರು ಮುಖ್ಯವಾದ ಏಳ್ನೂರೆಪ್ಪತ್ತಮರಗಣಂಗಳು, ಎನ್ನ ಸರ್ವಾಂಗದಲ್ಲಿ ಮೂರ್ತಿಗೊಂಡರು, ಸರ್ವತೋಮುಖವಾಗಿ. ಆಹಾ ಎನ್ನ ಪುಣ್ಯವೆ, ಆಹಾ ಎನ್ನ ಭಾಗ್ಯವೆ, ಆಹಾ ಎನ್ನ ಸತ್ಯವೆ, ಆಹಾ ಎನ್ನ ನಿತ್ಯವೆ. ಹರಹರಾ, ಶಿವಶಿವಾ ಮಹಾದೇವಾ ಮಹಾದೇವಾ, ತ್ರಿಕಾಲದಲ್ಲಿಯೂ ನಿಮ್ಮ ಶರಣರ ಶ್ರೀಪಾದವ ನೆನೆವುತಿರ್ದೆನಯ್ಯಾ, ವೀರಬಂಕೇಶ್ವರಾ.
--------------
ಸುಂಕದ ಬಂಕಣ್ಣ
ಭಕ್ತಿಸ್ಥಲವನರಿದು ತಮ್ಮ ಭಕ್ತಿ ಸ್ಥಲದಲ್ಲಿ ಬಯಲಾದರು ಸಂಗನ ಬಸವರಾಜದೇವರು. ಮಾಹೇಶ್ವರ ಸ್ಥಲವನರಿದು ತಮ್ಮ ಮಾಹೇಶ್ವರ ಸ್ಥಲದಲ್ಲಿ ಬಯಲಾದರು ಮಡಿವಾಳ ಮಾಚಿತಂದೆಗಳು. ಪ್ರಸಾದಿಸ್ಥಲವನರಿದು ತಮ್ಮ ಪ್ರಸಾದಿಸ್ಥಲದಲ್ಲಿ ಬಯಲಾದರು ಬಿಬ್ಬಬಾಚಯ್ಯಗಳು. ಪ್ರಾಣಲಿಂಗಿಸ್ಥಲವನರಿದು ತಮ್ಮ ಪ್ರಾಣಲಿಂಗಿಸ್ಥಲದಲ್ಲಿ ಬಯಲಾದರು ನುಲಿಯ ಚಂದಯ್ಯಗಳು. ಶರಣಸ್ಥಲವನರಿದು ಶರಣಸ್ಥಲದಲ್ಲಿ ಬಯಲಾದರು ಘಟ್ಟಿವಾಳಯ್ಯಗಳು. ಐಕ್ಯಸ್ಥಲವನರಿದು ತಮ್ಮ ಏಕ್ಯಸ್ಥಲದಲ್ಲಿ ಬಯಲಾದರು ಅಜಗಣ್ಣಯ್ಯಗಳು. ಇಂತೀ ಷಡ್ವಿಧಸ್ಥಲವನರಿದು ತಮ್ಮ ಷಡ್ವಿಧಸ್ಥಲದಲ್ಲಿ ಬಯಲಾದರು ಚೆನ್ನ ಬಸವೇಶ್ವರ ದೇವರು. ನಿಜಸ್ಥಲನರಿದು ತಮ್ಮ ನಿಜಸ್ಥಲದಲ್ಲಿ ಬಯಲಾದರು ಅಲ್ಲಮಪ್ರಭುದೇವರು. ನಿರ್ವಯಲಸ್ಥಲವನರಿದು ತಮ್ಮ ನಿರ್ವಯಲಸ್ಥಲದಲ್ಲಿ ಬಯಲಾದರು ಏಳ್ನೂರೆಪ್ಪತ್ತಮರಗಣಂಗಳು. ಇಂತಿವರ ಒಕ್ಕುಮಿಕ್ಕ ಬಯಲಪ್ರಸಾದವ ಕೊಂಡು ನಾನು ಬಯಲಾದೆನು ಕಾಣಾ ಮಹಾಲಿಂಗ ತ್ರಿಪುರಾಂತಕದೇವಾ.
--------------
ಕಿನ್ನರಿ ಬ್ರಹ್ಮಯ್ಯ
ಪ್ರಥಮದಲ್ಲಿ ರುದ್ರತ್ವ; ಅದು ಘಟಿಸಿದಲ್ಲಿ ಈಶ್ವರತ್ವ. ಈ ಎರಡು ಕೂಡಿದಲ್ಲಿ ಸದಾಶಿವತತ್ವ. ಇಂತೀ ತ್ರಿವಿಧಲೀಲೆ ಏಕಾರ್ಥವಾದಲ್ಲಿ ಪರಶಿವತತ್ತ್ವದ ಪರಮಪ್ರಕಾಶ. ಇದರಿಂದ ಮೀರುವ ತೆರನುಂಟಾದಡೆ ನೀವು ಹೇಳಿ ನಾ ಮಾರ್ಕೊಳ್ಳೆನು. ನೀವು ಹೇಳಿದಂತೆ ನಾ ಪ್ರಸಾದವೆಂಬೆನು. ಆರು ಶೈವದ ಭೇದ, ಮೂರು ಶೈವದ ಭಜನೆ, ಷಡುದರ್ಶನದ ತರ್ಕ ಇವನೆಲ್ಲವನುದ್ಧರಿಸಬಂದ ಪ್ರಭುದೇವರು, ಬಸವಣ್ಣ, ಚೆನ್ನಬಸವಣ್ಣ ಇವರೊಳಗಾದ ಏಳ್ನೂರೆಪ್ಪತ್ತಮರಗಣಂಗಳು, ಸ್ವತಂತ್ರ ಸಂಬಂಧಿಗಳಪ್ಪ ಪ್ರಥಮರು ಶಿವಾಚಾರ ಚಕ್ರವರ್ತಿಗಳು, ಸತ್ಯರು ನಿತ್ಯರು ಸದ್ಯೋನ್ಮುಕ್ತರು ಸುಮನರು ವಿಮಲರು ಪೂರ್ಣರು ಪರಿಪೂರ್ಣರು ಮೇಖಲೇಶ್ವರಲಿಂಗದಲ್ಲಿ ಮಹಾನುಭಾವಿಗಳು.
--------------
ಕಲಕೇತಯ್ಯ
-->