ಅಥವಾ

ಒಟ್ಟು 6 ಕಡೆಗಳಲ್ಲಿ , 4 ವಚನಕಾರರು , 6 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭರಿತಾರ್ಪಣ ಸಹಭೋಜನ ನೈವೇದ್ಯ ಸಹ ಇಂತೀ ತ್ರಿವಿಧಭೇದಂಗಳ ಅಂಗೀಕರಿಸಿದ ಮತ್ತೆ ಕರುಳಿಲ್ಲದ ಕಲಿಯಂತೆ, ಒಡಲಿಲ್ಲದ ಅಂಗದಂತೆ, ಸಂಗವಿಲ್ಲದ ನಿರಂಗದಂತೆ, ದಗ್ಧಪಟದಂತೆ, ಒಂದನೂ ಹೊದ್ದದ ಬಹುವರ್ಣದಂತೆ, ಅಂಗವಿದ್ದೂ ಅಳಿದು ತೋರುವ ನಿರಂಗಿಗಲ್ಲದೆ ಈ ತ್ರಿವಿಧ ವ್ರತ ಪ್ರಸಾದವಿಲ್ಲ. ನಾನು ಎನಗೆ ಬಂದ ಕುತ್ತಕ್ಕೆ ಹಾಡಿ ಹರಸಿ ಮದ್ದನರೆವುತ್ತಿದ್ದೇನೆ, ಎನ್ನ ಕಾಡಬೇಡ. ಕ್ರೀ ತಪ್ಪದೆ ಎನ್ನ ಕೂಡಿಕೊ, ಚೆನ್ನ ಚೆನ್ನ ಕೂಡಲ ರಾಮೇಶ್ವರಲಿಂಗ ಸಂಗ.
--------------
ಭರಿತಾರ್ಪಣದ ಚೆನ್ನಬಸವಣ್ಣ
ಉಂಬೆಡೆಯಲ್ಲಿ ಭರಿತಾರ್ಪಣವೆಂದು ಮಿಕ್ಕಾದ ವಿಷಯೇಂದ್ರಿಯಂಗಳಲ್ಲಿ ಭರಿತಾರ್ಪಣದ ಸಂದನಳಿದು ಅರ್ಪಿಸಬಲ್ಲಡೆ, ಆ ಗುಣ ಉಭಯಭರಿತಾರ್ಪಣಭೇದ. ಇದನರಿಯದೆ ಲಿಂಗಕ್ಕೆ ಸಂದಲ್ಲದೆ, ತಾನೊಂದು ದ್ರವ್ಯವ ಮುಟ್ಟೆನೆಂಬ ಸಂದೇಹದ ಸಂಕಲ್ಪವಲ್ಲದೆ, ಭರಿತಾರ್ಪಣಾಂಗಿಯ ಲಿಂಗಾಂಗಿಯ ಮುಟ್ಟಲ್ಲ. ಭರಿತಾರ್ಪಣವಾವುದೆಂದಡೆ : ತಾ ಕಂಡುದ ಮುಟ್ಟದೆ, ತಾ ಮುಟ್ಟಿದುದನರ್ಪಿಸದೆ, ತಾ ಕಾಣದುದ ಮುನ್ನವೆ, ತಾ ಕಂಡುದ ಮುಟ್ಟದ ಮುನ್ನವೆ ಅರ್ಪಿತವಾದುದ ದೃಷ್ಟಾಂತವನರಿದು, ಭರಿತಾರ್ಪಣವೆಂಬ ಪರಿಪೂರ್ಣತ್ವವಂ ಕಂಡು, ಅಂಗಸಹಿತವಾಗಿ ಮುಟ್ಟದೆ, ಮನಸಹಿತವಾಗಿ ನೆನೆಯದೆ, ಇಂದ್ರಿಯಂಗಳು ಸಹಿತವಾಗಿ ಒಂದನೂ ಅನುಭವಿಸದೆ ಲಿಂಗವೆ ಅಂಗವಾಗಿ, ಅಂಗವೆ ಲಿಂಗವಾಗಿ ಅಂದಂದಿಗೆ ಕಾಯ ಹಿಂಗಬೇಕೆಂಬುದನರಿದಾಗವೆ ಭರಿತಾರ್ಪಣ, ಚೆನ್ನ ಚೆನ್ನ ಕೂಡಲ ರಾಮೇಶ್ವರಲಿಂಗದ ಸಂಗ.
--------------
ಭರಿತಾರ್ಪಣದ ಚೆನ್ನಬಸವಣ್ಣ
ಕನ್ನಡಕ ಒಂದು, ಕರ್ಣದಡಕ ಆರು. ನಾಸಿಕದಡಕ ಓಸರವೆರಡು. ಜಿಹ್ವೆಯಡಕವಗಿಡದವೆಂಟು, ಅಡಗದವೆಂಟು. ಎಂಟರೊಳಗೆಂಟಡಗಿ ಹದಿನಾರು ಚಿಪ್ಪು ಒಡಗೂಡಿದವು. ಎರಡರಲ್ಲಿ ಒಂದ ಸಂದಿಸಿ, ಸಂದುಗೂಡಿ ಹೊಲಿಸುವುದಕ್ಕೆ ಒಂದನೂ ಕಾಣೆ. ಇಂತೀ ಪಂಚೇಂದ್ರಿಯದಂಗವ ಬಲ್ಲಡೆ, ಪ್ರಸನ್ನ ಕಪಿಲಸಿದ್ಧ ಮಲ್ಲಿಕಾರ್ಜುನಲಿಂಗವ ಬಲ್ಲವ.
--------------
ಸೂಜಿಕಾಯಕದ ಕಾಮಿತಂದೆ
ಚಂದ್ರ ಸೂರ್ಯಾದಿಗಳು ಭವಿಯೆಂದಲ್ಲಿ ಅವೆರಡರ ಸಂಸಂಧಿಯ ಜಗದಲ್ಲಿ ಇರಬಹುದೆ? ಇದರಂದವ ಹೇಳಿರಯ್ಯಾ. ತಾ ಕೊಂಡ ನೇಮದ ಸಂದೇಹವಲ್ಲದೆ, ಅವರಂದದ ಇರವ ವಿಚಾರಿಸಲಿಲ್ಲ, ಅದೆಂತೆಂದದಡೆ : ತಾನಿಹುದಕ್ಕೆ ಮುನ್ನವೆ ಅವು ಪುಟ್ಟಿದವಾಗಿ, ನೀರು ನೆಲ ಆರೈದು ಬೆಳೆವ ದ್ರವ್ಯಂಗಳೆಲ್ಲವು ಆಧಾರ ಆರೈಕೆ. ಇಂತೀ ಗುಣವ ವಾರಿಧಿಯನೀಜುವನಂತೆ ತನ್ನಿರವೆ ತನ್ನ ಸಂದೇಹಕ್ಕೆ ಒಡಲಾಗಿ ನಿಂದುದೆ ತನ್ನ ನೇಮ. ತನ್ನ ಹಿಂಗಿದುದೆ ಜಗದೊಳಗು ಎಂಬುದನರಿದ ಮತ್ತೆ ಸಂದೇಹದ ವ್ರತವ ಸಂದೇಹಕ್ಕಿಕ್ಕಲಿಲ್ಲ. ತಾ ಕೊಂಡುದೆ ವ್ರತ, ಮನನಿಂದುದೆ ನೇಮ. ಇದಕ್ಕೆ ಸಂದೇಹವೆಂದು ಒಂದನೂ ಕೇಳಲಿಲ್ಲ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವೆ ನೀನೆ ಬಲ್ಲೆ.
--------------
ಅಕ್ಕಮ್ಮ
ಅಂಗಕ್ಕೊಂದು ಸುಗುಣ ದುರ್ಗುಣ ಸೋಂಕುವಲ್ಲಿ ಸೋಂಕಿದ ಕಲೆ ಅಂಗಕ್ಕೋ ಆತ್ಮಂಗೋ ? ಅಂಗಕ್ಕೆಂದಡೆ ಚೇತನವಿಲ್ಲದೆ ಒಂದನೂ ಮುಟ್ಟದಾಗಿ, ಆತ್ಮಂಗೆಂದಡೆ ಒಂದು ಲಕ್ಷ್ಯದ ಮರೆಯಲಲ್ಲದೆ ಲಕ್ಷಿಸಿಕೊಳದು. ಇಂತೀ ಕಾಯವೂ ಆ[ತ್ಮ]ನೂ ಒಡಗೂಡಿ ಅರಿವಲ್ಲಿ ಆ ಅರಿವು ಲಿಂಗವನೊಡಗೂಡಿಯಲ್ಲದೆ ಬೇರೆ ಒಡಲುವಿಡಿಯದು. ಇಂತೀ ಅಂಗ ಆತ್ಮ ಲಿಂಗಮೂರ್ತಿ ತ್ರಿವಿಧ ಸಂಗವಾದಲ್ಲದೆ ಮುಂದಣ ಅರಿವಿನ ಕುರುಹು ನಿರಿಗೆಯಾಗದು. ಆ ನಿರಿಗೆಯ ಅಂಗ ಸುಸಂಗವಾದಲ್ಲಿ ಭೋಗಬಂಕೇಶ್ವರಲಿಂಗವು ಅಂಗಸೋಂಕಿನಲ್ಲಿ ಅಡಗಿದ ತೆರ.
--------------
ಶ್ರೀ ಮುಕ್ತಿರಾಮೇಶ್ವರ
ಎಂಬತ್ತುನಾಲ್ಕು ಲಕ್ಷ ವ್ರತದೊಳಗಾದ ಶೀಲ ಸಂಭವಿಸಿ ನಿಂದುದು ಅರುವತ್ತುನಾಲ್ಕು. ಅರುವತ್ತುನಾಲ್ಕರಲ್ಲಿ ಸಂಭವಿಸಿ ನಿಂದುದು ಮೂವತ್ತಾರು. ಮೂವತ್ತಾರರಲ್ಲಿ ಸಂಭವಿಸಿ ನಿಂದುದು ಇಪ್ಪತ್ತೈದು. ಇಪ್ಪತ್ತೈದರೊಳಗಾಗಿ ಸಂಭವಿಸಿನಿಂದುದು ಮೂರೆಯಾಯಿತ್ತು. ಮೂರು ವ್ರತಕ್ಕೆ ಮುಕುತವಾಗಿ, ತಬ್ಬಿಬ್ಬುಗೊಳ್ಳುತ್ತಿದ್ದೇನೆ. ನಾ ಹಿಡಿದ ಒಂದು ನೇಮಕ್ಕೆ ಸಂದೇಹವಾಗಿ, ಒಂದನೂ ಕಾಣದಿದ್ದೇನೆ. ಒಂದರ ಸಮಶೀಲಕ್ಕೆ ಸತಿಪುತ್ರರು ಎನ್ನಂಗದೊಳಗಿರರು. ಎನ್ನಂಗದ ಜೀವಧನ ಹೊಂದಿ ಹೋದಾಗ ಎನ್ನಂಗದ ವ್ರತ ಅಲ್ಲಿಯೆ ಬಯಲು. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ಶೀಲ ಕಡೆ ನಡು ಮೊದಲಿಲ್ಲ.
--------------
ಅಕ್ಕಮ್ಮ
-->