ಅಥವಾ

ಒಟ್ಟು 8 ಕಡೆಗಳಲ್ಲಿ , 3 ವಚನಕಾರರು , 6 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಲೌಕಿಕದಲ್ಲಿ ಒಬ್ಬ ಪುರುಷಂಗೆ ಸ್ತ್ರೀಯರು ಒಬ್ಬರು, ಇಬ್ಬರು, ಮೂವರು, ನಾಲ್ವರು, ಐವರು ಪರಿಯಂತರ ಸತಿಯರುಂಟು. ಒಬ್ಬ ಸ್ತ್ರೀಯಳಿಗೆ ಐವರು ಪುರುಷರುಂಟೆ? ಇಲ್ಲೆಂಬ ಹಾಗೆ, ಎನಗೆ ಎನ್ನ ತಾಯಿತಂದೆಗಳು ಮೂರಾರು ಗಂಡರ ಮದುವೆ ಮಾಡಿ ಒಗತನ ಮಾಡೆಂದು ಸಕಲಗಣಂಗಳ ಸಾಕ್ಷಿಯಾಗಿ ಎನಗೆ ಕೊಟ್ಟರು. ಆ ನಿರೂಪವ ಕೈಕೊಂಡು ಗಂಡನ ಸಂಗವ ಮಾಡದೆ ಅವರ ಸಂಗವ ಬಿಡದೆ ರಂಗಮಂಟಪದಲ್ಲಿ ಒಬ್ಬನ ಕುಳ್ಳಿರಿಸಿ, ನಡುಮನೆಯಲ್ಲಿ ಒಬ್ಬನ ಕುಳ್ಳಿರಿಸಿ, ಒಬ್ಬನ ಹಿರಿಮನೆಯಲ್ಲಿ ಕುಳ್ಳಿರಿಸಿ, ಷಡ್ವಿಧಸ್ಥಾನಗಳಲ್ಲಿ ಷಡ್ವಿಧರ ಕುಳ್ಳಿರಿಸಿ, ಇಂತೀ ಪುರುಷರ ಕೂಡಿ ಒಗತನವ ಮಾಡಿ, ಇವರಿಗೆ ಸಿಕ್ಕದೆ ಹೊಲೆಯನ ಕೂಡಿ ಕುಲಗೆಟ್ಟು ನಾಯೆತ್ತ ಹೋದೆನೆಂದರಿಯನಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಎನ್ನ ತಂದೆಯ ಬಸುರಲ್ಲಿ ಬಂದಳೆಮ್ಮವ್ವೆ ಎನ್ನ ತಂಗಿಯರಿಬ್ಬರೂ ಹೆಂಡಿರಾದರೆನಗೆ. ಎನ್ನ ಸತಿಯರು ಎನ್ನ ಮದವಳಗಿತ್ತಿಯ ಮಾಡಿ, ಎಮ್ಮಪ್ಪಗೆ ಮದುವೆಯ ಮಾಡಿದರು. ಎನ್ನ ಗಂಡನ ಮನೆಯೊಡವೆಯನೆನ್ನ ಉಗುರುಕಣ್ಣಿನಲ್ಲೆತ್ತಿ ಒಗತನವ ಮಾಡುವೆನು. ಎಮ್ಮಕ್ಕನ ಕೈಯಿಂದ ಎನ್ನ ಗಂಡನ ಹೆಂಡತಿಯೆನಿಸಿಕೊಂಬೆನು. ಎನ್ನ ಗಂಡ ಆಳಲಿ ಆಳದೆ ಹೋಗಲಿ ಪತಿಭಕ್ತಿಯ ಬಿಡೆ ಕಾಣಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಪುರುಷ ಸತ್ತಬಳಿಕ ಗಂಧ ಅಕ್ಷತೆ ಧರಿಸಿ ಒಗತನವ ಮಾಡಲಿಲ್ಲ. ಸತಿಯಳ ಕೊಂದು, ಸತ್ತಪುರಷನ ಸತಿಯಳ ಕೂಡಿ ಒಗತನವ ಮಾಡುತ್ತಿರ್ಪರು ನೋಡೆಂದ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಪುರುಷನನಗಲಿ ಪರಪುರುಷನ ನೆನೆದರೆ ಹಾದರ ಎಂಬರು. ಅದರಿಂದ ದೋಷಪ್ರಾಪ್ತಿಯಾಗುವುದು. ನಾನು ಪುರುಷನ ಅಗಲಿ ಹಾದರವ ಮಾಡಿ ದೋಷವ ಕಳೆದು ಪುರುಷನ ಕೊಂದು ಒಗತನವ ಮಾಡಿಕೊಟ್ಟು ಕಾಯಕವ ಮಾಡುತ್ತಿರ್ಪೆನು ನೋಡೆಂದನಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಹುಟ್ಟಿದೆ ಶ್ರೀಗುರುವಿನ ಹಸ್ತದಲ್ಲಿ, ಬೆಳೆದೆನು ಅಸಂಖ್ಯಾತರ ಕರುಣದೊಳಗೆ. ಭಾವವೆಂಬ ಹಾಲು, ಸುಜ್ಞಾನವೆಂಬ ತುಪ್ಪ, ಪರಮಾರ್ಥವೆಂಬ ಸಕ್ಕರೆಯನಿಕ್ಕಿದರು ನೋಡಾ. ಇಂತಪ್ಪ ತ್ರಿವಿಧಾಮೃತವನು ದಣಿಯಲೆರೆದು ಸಲಹಿದಿರೆನ್ನ. ವಿವಾಹವ ಮಾಡಿದಿರಿ, ಸಯವಪ್ಪ ಗಂಡಂಗೆ ಕೊಟ್ಟಿರಿ, ಕೊಟ್ಟ ಮನೆಗೆ ಕಳುಹಲೆಂದು ಅಸಂಖ್ಯಾತರೆಲ್ಲರೂ ನೆರೆದು ಬಂದಿರಿ. ಬಸವಣ್ಣ ಮೆಚ್ಚಲು ಒಗತನವ ಮಾಡುವೆ. ಚೆನ್ನಮಲ್ಲಿಕಾರ್ಜುನನ ಕೈವಿಡಿದು ನಿಮ್ಮ ತಲೆಗೆ ಹೂವ ತಹೆನಲ್ಲದೆ ಹುಲ್ಲ ತಾರೆನು. ಅವಧರಿಸಿ, ನಿಮ್ಮಡಿಗಳೆಲ್ಲರೂ ಮರಳಿ ಬಿಯಂಗೈವುದು, ಶರಣಾರ್ಥಿ.
--------------
ಅಕ್ಕಮಹಾದೇವಿ
ಗಂಡನಿಲ್ಲದ ಸ್ತ್ರೀಯರು ಗಂಡನ ಮದುವೆಯಾಗಿ, ಮನೆಯ ಗಂಡನ ಕೂಡ ಒಗತನವ ಮಾಡದೆ, ಪರಪುರುಷನ ಸಂಗವಮಾಡಿ ಬಹುಕಾಲಿರ್ಪರು. ಎನಗೆ ಗಂಡರಿಲ್ಲ. ಬಂದಲ್ಲಿ ಗಂಡರು ಮದುವೆಯಾಗಿ ಒಗತನವ ಮಾಡಿ ಗಂಡನ ಕೊಂದು ರಂಡೆಯಾಗಿ ಸೋಮೇಶ್ವರಲಿಂಗಕ್ಕೆ ಅರ್ಪಿತಮಾಡಿ ಕಾಯಕದಲ್ಲಿರ್ಪರು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
-->