ಅಥವಾ

ಒಟ್ಟು 15 ಕಡೆಗಳಲ್ಲಿ , 10 ವಚನಕಾರರು , 15 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾರದ್ವಾರವ ಮಾಡಬಂದವ ಅಬೆಯ ಗಂಡಗೆ ಕೂಪನೆ ? ಅವಳು ತನ್ನ ಪತಿಗೆ ಓಪಳೆ ? ಈ ಉಭಯದ ಮಾರ್ಗ ಅರಿವ ಅರಿವಿಂಗೆ, ಹೇಸಿ ತಿಂಬ ಕರಣಕ್ಕೆ ಒಡಗೂಡಿದ ಸ್ನೇಹವುಂಟೆ ? ಇದನರಿ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗವನರಿವುದಕ್ಕೆ.
--------------
ಸಗರದ ಬೊಮ್ಮಣ್ಣ
ತೃಣವತಿಶುಷ್ಕವಾದ ಪರ್ಣ ತರುವ ಹಿಡಿದ ಅನಲನ ನಡುವೆ ಎಡಗೈಯ ಬಲ್ಲದೆ ? ನಿರ್ಮಲ ಸುಚಿತ್ತನ ಪರಮವಿರಕ್ತನ ಭಾವ, ವಸ್ತುವ ಮುಟ್ಟಿದಲ್ಲಿ, ತ್ರಿವಿಧಮಲಕ್ಕೆ ಸಿಕ್ಕುವನೆ ? ಅವು ತನ್ನೊಳಗಿರ್ದಡೂ ತಾನವರೊಳಗಿರ್ದಡೂ ಗಾಜಿನ ಕುಪ್ಪಿಗೆಯ ನೀರೆಣ್ಣೆಯಂತೆ, ಸ್ಫಟಿಕದ ಮಧ್ಯದಲ್ಲಿ ಬಹುವರ್ಣವಾದ ಹೊರೆಯ ತೋರಿ ಹಿಡಿವವನಂತೆ, ಅದು ಸ್ವಯವಲ್ಲ, ಇದು ಸ್ವಯವಲ್ಲದಿಪ್ಪ ಬಾಹ್ಯಕ್ರಿಯಾವರ್ತಕನ ಲಕ್ಷಣದ ಬ್ಥಿತ್ತಿಯ ತೆರ ನಿಃಕಳಂಕ ಮಲ್ಲಿಕಾರ್ಜುನನ ಒಡಗೂಡಿದ ಪರಮವಿರಕ್ತನ ಭೇದ.
--------------
ಮೋಳಿಗೆ ಮಾರಯ್ಯ
ಮಾಡುವ ಮಾಟದಿಂದವೆ ಬೇರೊಂದ ಅರಿಯಬೇಕು ಅರಿವಿಂಗೆ ನೆಮ್ಮುಗೆ ಒಡಗೂಡಬೇಕು. ಅರಿವಿಂಗೆ ನೆಮ್ಮುಗೆ ಒಡಗೂಡಿದ ಬಳಿಕ ಬಯಲ ಭ್ರಮೆಯ ಕಳೆದು ನಮ್ಮ ಗುಹೇಶ್ವರಲಿಂಗದಲ್ಲಿ ನಿಜಪದವನೆಯ್ದುವುದು ಮಾರಯ್ಯಾ.
--------------
ಅಲ್ಲಮಪ್ರಭುದೇವರು
ಕಲ್ಲಿನ ಹೋಳ ಬೆಲ್ಲವೆಂದು ಮಕ್ಕಳ ಕೈಯಲ್ಲಿ ಕೊಟ್ಟಡೆ, ಹಲ್ಲಿನಲ್ಲಿ ಕಡಿದು, ನಾಲಗೆಯಲ್ಲಿ ನಂಜಿ, ಬೆಲ್ಲವಲ್ಲಾ ಎಂದು ಹಾಕಿ ಮನೆಯವರೆಲ್ಲರ ಕಾಡುವಂತೆ, ನಾನರಿಯದೆ ಕುರುಹ ಹಿಡಿದು, ಅದು ಎನ್ನ ಮರವೆಯ ಮನಕ್ಕೆ ತೆರಹಾಗದು. ನಾನರಿವಡೆ ಎನ್ನ ಒಡಗೂಡಿದ ತುಡುಗುಣಿ ಬೆನ್ನಬಿಡದು. ಒಡೆಯ ಸತುವಿಲ್ಲದೆ ಬಡವನ ಬಂಟನಾದ ಮತ್ತೆ ಬಾಯ ಹೊಡೆಯಿಸಿಕೊಂಬುದಕ್ಕೆ ಅಂಜಲೇಕೆ ? ಬಿಡು ಬಡವೊಡೆಯನ, ಬಿಡದಿದಡೆ ಕಲ್ಲೆದೆಯಾಗು. ಇವರೆಲ್ಲರ ವಿಧಿ ಎನಗಾಯಿತ್ತು, ಕೈಯಲ್ಲಿದ ಕಠಿಣವ ನಂಬಿ. ಇದರ ಬಲ್ಲತನವ ಹೇಳಾ, ಅಲೇಖನಾದ ಶೂನ್ಯ ಕಲ್ಲಿನ ಮರೆಯಾದವನೆ
--------------
ವಚನಭಂಡಾರಿ ಶಾಂತರಸ
ವೇಷಮಾತಿನ ಬಿನ್ನಾಣಿಗಳಿಗೆ ಗ್ರಾಸ ಉಂಟಲ್ಲದೆ ನಿಜವಿಲ್ಲ. ಇಂತೀ ಉಭಯವನತಿಗಳೆದ ನಿರತಿಶಯ ಲಿಂಗಾಂಗಿಗೆ ಗ್ರಾಸದಾಸೆಯಿಲ್ಲ. ಸರ್ವಸುಖದಾಲಯದ ಪಾಶದ ಕಟ್ಟಿಲ್ಲ. ಅವರವರ ಕಂಡಲ್ಲಿಯೆ ಸುಖಿ, ನಿಧಾನಿಸಿ ಕೂಡಿದಲ್ಲಿಯೆ ತೃಪ್ತ. ಆತ ತ್ರಿವಿಧಮಲದ ಹಂಗಿನವನಲ್ಲ. ಗ್ರಾಮ ನಿಳಯ ಬಂಧಂಗಳಿಲ್ಲ. ಮಾತಿನ ರಚನೆಯ ಪಾಶವನೊಲ್ಲ. ಆತ ಸರ್ವಾಂಗಲಿಂಗ ಸನ್ಮತ. ನಿಃಕಳಂಕ ಮಲ್ಲಿಕಾರ್ಜುನನ ಒಡಗೂಡಿದ ಪರಮವಿರಕ್ತನ ಭೇದ.
--------------
ಮೋಳಿಗೆ ಮಾರಯ್ಯ
ಒಡಲು ಪ್ರಾಣವನ್ನು ಇಕ್ಕಿ ಒಡಗೂಡಿದ ಶರಣರ ಒಡಗೂಡಿರಿಸಾ ಎನ್ನನು. ನುಡಿಯ ಬ್ರಹ್ಮಾಕ್ಕಾನಾರೆನು ಅಯ್ಯಾ ಎನ್ನ. ಅಡಿಗಡಿಗೆ ಎನ್ನ ಜರಿಯದೆ. ಎಲೆ ಮೃಡನೆ, ಶೂನ್ಯ ತಾನಾದ ಕರುಣನಾಗು ಕಪಿಲಸಿದ್ಧಮಲ್ಲಿನಾಥಯ್ಯ.
--------------
ಸಿದ್ಧರಾಮೇಶ್ವರ
ಕಾಣಿ ಕಡವರವ ಕಂಡು, ಶ್ರೇಣಿ ಸೇನೆಯ ನುಂಗಿ, ಕಳ್ಳ ಬೆಳ್ಳನ ಒಡಗೂಡಿದ. ಏಣಾಂಕಧರ ಸೋಮೇಶ್ವರಲಿಂಗವೆಂಬುದು ಎಲ್ಲಿಯೂ ಇಲ್ಲ.
--------------
ಬಿಬ್ಬಿ ಬಾಚಯ್ಯ
ಭರಿತವೆಂಬ ಶಬ್ದಕ್ಕೆ ಕಡೆಯಾಣಿ, ಭರಿತವೆಂಬ ಸೊಲ್ಲು ಪರಿಪೂರ್ಣತ್ವ ಕುರುಹಳಿದುದು. ಭರಿತಾರ್ಪಣವೆಂಬ ಭಕ್ಷ್ಯ ಮುಂದಕ್ಕೂ ಹಿಂದಕ್ಕೂ ಕಟ್ಟಿಲ್ಲದ ದೃಷ್ಟ, ಭರಿತಾರ್ಪಣವೆಂದು ಕೃತ್ಯದ ಕಟ್ಟ ಹೊತ್ತ ಮತ್ತೆ ಭರಿತಾರ್ಪಣ ಲಿಂಗ ಪ್ರಸಾದ ಕೊಂಡಲ್ಲಿ, ಆ ಮನ ಅರೋಚಕ ತಲೆದೋರಬಾರದು ಭರಿತಾರ್ಪಣವೆಂದು. ನೈವೇದ್ಯವೆಂದು ಸಂದಲ್ಲಿ ಉದಕ ಮುಂತಾದ ಆವ ದ್ರವ್ಯವೂ ಬೀಸರಿಸಿ, ಆ ಪ್ರಸಾದದಲ್ಲಿ ಬೆರೆಯಬಾರದು. ಬೆರೆದ ಮತ್ತೆ ಧರಿಸಬಾರದು, ಇರಿಸಬಾರದು. ಆ ಪ್ರಸಾದವ ಚೆಲ್ಲಿ ಸೂಸಲಿಲ್ಲ. ಮತ್ತೆ ಅರ್ಪಿಸಿಕೊಂಡೆಹೆನೆಂದಡೆ ಬೇರೆ ದೃಷ್ಟದಲ್ಲಿ ಬಂದುದಲ್ಲ. ಬೆರೆದ ದ್ರವ್ಯವ ಮತ್ತರ್ಪಿಸಿಹೆನೆಂದಡೆ ಆ ಪ್ರಸಾದದಲ್ಲಿ ಒಡಗೂಡಿದ ದ್ರವ್ಯ. ಆ ದ್ರವ್ಯ ಒಡಗೂಡಿದಡೆ ಕುರುಹಿಟ್ಟು ನಿಂದಲ್ಲಿ ಅರ್ಪಿಸಿ ಒಡಗೂಡಬಹುದು, ಮತ್ತೆ ವಿಚಾರಿಸಲಿಕಾಗಿ ತನ್ನ ವ್ರತದ ಕಟ್ಟಿನ ನೆಮ್ಮುಗೆಯನರಿತುಕೊಳಬಾರದು. ಬಿಡಬಾರದು ಎಂಬುದ ಒಳಗನರಿದು, ಇಂತೀ ಭರಿತಾರ್ಪಣ ಆರಿಗೂ ಸಾಧ್ಯವಲ್ಲ. ಒಬ್ಬಂಗೆ ಸಾಧ್ಯವಾಯಿತ್ತು. ಬಸವಣ್ಣ ಬೋನವಾಗಿ, ಚೆನ್ನಬಸವಣ್ಣ ಪದಾರ್ಥ ಸ್ವರೂಪವಾದಲ್ಲಿ, ಪ್ರಭುದೇವರು ಸಾಕು ಭರಿತವೆಂದಲ್ಲಿ ಅರ್ಪಿತವಾಯಿತ್ತು, ಭರಿತ ಸಲೆ ಸಂದಿತ್ತು. ಎನಗೆ ಭರಿತ ನೇಮ ಓಸರಿಸುತ್ತಿದೆ. ಪೂರ್ಣವ ಬಿಟ್ಟು, ಪರಿಪೂರ್ಣವ ಮಾಡು ಚೆನ್ನ ಚೆನ್ನಕೂಡಲ ರಾಮೇಶ್ವರಲಿಂಗ ಸಂಗ.
--------------
ಭರಿತಾರ್ಪಣದ ಚೆನ್ನಬಸವಣ್ಣ
ದೇಶ ಮಾತಿನ ಬಿನ್ನಾಣಿಗಳಿಗೆ ಗ್ರಾಸ ಉಂಟಲ್ಲದೆ ನಿಜವಿಲ್ಲ. ಇಂತೀ ಉಭಯವನತಿಗಳೆದ ನಿರತಿಶಯ ಲಿಂಗಾಂಗಿಗೆ ಗ್ರಾಸದಾಸೆ ಇಲ್ಲ. ಸರ್ವಸುಖದಾಲಯದ ಪಾಶದ ಕಟ್ಟಿಲ್ಲ. ಅವರವರ ಕಂಡಲ್ಲಿಯೇ ಸುಖಿ. ನಿಧಾನಿಸಿ ಕೂಡಿದಲ್ಲಿಯೇ ತೃಪ್ತಿ. ಆತ ತ್ರಿವಿಧಮಲದ ಹಂಗಿನವನಲ್ಲ. ಗ್ರಾಮ ನಿಳಯ ಬಂಧಂಗಳಿಲ್ಲ. ಮಾತಿನ ರಚನೆಯ ಪಾಶವನೊಲ್ಲ. ಆತ ಸರ್ವಾಂಗಲಿಂಗ ಸನ್ಮತ, ನಿಃಕಳಂಕ ಮಲ್ಲಿಕಾರ್ಜುನನ ಒಡಗೂಡಿದ ಪರಮವಿರಕ್ತನ ಭೇದ.
--------------
ಮೋಳಿಗೆ ಮಾರಯ್ಯ
ಕಾಯದ ಗುಣವನರಿಯದೆ ಕರ್ಮಯೋಗವ ಮಾಡಬಹುದೆ? ಕರ್ಮದ ಗುಣವನರಿಯದೆ ಆತ್ಮಯೋಗವ ಮಾಡಬಹುದೆ? ಆತ್ಮನ ಗುಣವನರಿಯದೆ ವರ್ಮಯೋಗವ ಕಾಣಬಹುದೆ? ನೀರಿನಿಂದಲಾದ ಕೆಸರ ನೀರಿಂದಲೆ ತೊಳೆವಂತೆ, ಮುಳ್ಳು ಮುಳ್ಳಿನಿಂದವೆ ಕಳೆವಂತೆ, ಕರ್ಮದಿಂದ ಸತ್ಕರ್ಮ ಮರ್ಮದಿಂದ ನಿಜಮರ್ಮ ಸೂಜಿಯ ಮೊನೆಯ ದಾರದಂತೆ ಇದು ಲಿಂಗ ಒಡಗೂಡಿದ ಕ್ರಿಯಾಪಥಯೋಗ. ಶಂಭುವಿನಿಂದಿತ್ತ ಸ್ವಯಂಭವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
--------------
ದಾಸೋಹದ ಸಂಗಣ್ಣ
ಸೂತ್ರದ ಸಂಚದಿಂದ ಉಭಯ ಬೊಂಬೆ ನಡೆದು ಹೊಡೆದಾಡಿ ಕೆಡದ ಮತ್ತೆ ಸಂಚದ ನೂಲು ಅಲ್ಲಿಗೆ ಲಕ್ಷ. ಇಷ್ಟ ಪ್ರಾಣ ಒಡಗೂಡಿದ ಮತ್ತೆ ಕೊಟ್ಟಿಹೆ ಕೊಂಡಿಹೆನೆಂಬ ಅರಿವು ದೃಷ್ಟವ ಕಂಡದರಲ್ಲಿ ನಷ್ಟ. ಇಂತೀ ಭೇದಂಗಳಲ್ಲಿ ವೇಧಿಸುವನ್ನಕ್ಕ ವೀರಶೂರ ರಾಮೇಶ್ವರಲಿಂಗವ ಉಜ್ಜುತ್ತ ಒರೆಸುತ್ತ ತೊಳೆವುತ್ತ ಹಿಳಿವುತ್ತ ಪೂಜಿಸಿ ಆಳುತ್ತ ಇರಬೇಕು.
--------------
ಬಾಲಬೊಮ್ಮಣ್ಣ
ಒಡಗೂಡಿದ ಒಚ್ಚತನವ ಬಿಡುಮನರು ಬಲ್ಲರೆ, ಮೃಡ ನಿಮ್ಮ ಶರಣರಲ್ಲದೆ? ಕಡಲೊಳಗಣ ಮುತ್ತಿಪ್ಪ ಕಡು ಪೂತದ ಭೇದವನು ಜಡಜೀವಿಗಳು ಬಲ್ಲರೆ, ಮೃಡ ನಿಮ್ಮ ಶರಣರಲ್ಲದೆ? ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಶರಣನಾದಡೆ ಸತಿಯಗೂಡಾಟವೇಕಯ್ಯಾ? ಇಂದ್ರಿಯಂಗಳು ಹರಿಯಲೇಕೆ? ತಾನೆ ಸತಿ ಲಿಂಗವೆ ಪತಿಯಾದ ಬಳಿಕ. ಸರ್ವ ಸಂಯೋಗಕ್ಕೆ ಲಿಂಗವೆ ಪತಿ, ತಾನೆ ಸತಿಯಾದಾತ ಅನ್ಯ ಸತಿಯರಿಗೆರಗ; ಕರಣಂಗಳ ಹರಿಯಲೀಯ; ಕಾರ್ಪಣ್ಯಕ್ಕೊದಗ, ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಒಡಗೂಡಿದ ಶರಣ
--------------
ಸಿದ್ಧರಾಮೇಶ್ವರ
ಕುಸುಮ ಕ್ರೀ ಗಂಧ ನಿಃಕ್ರೀಯೆಂದಲ್ಲಿ ಕುಸುಮವನಗಲಲಿಕ್ಕಾಗಿ ಒಡಗೂಡಿದ ಗಂಧ ಹಸುಕಾಗದೆ? ಗಂಧ ಸ್ವಯಂಭುವಾದಡೆ ಕುಸುಮವ ಹಿಸುಕಿದಲ್ಲಿಯೇ ಒಡಲುಗೊಂಡುದು ನೊಂದಿತ್ತೆಂದು ತಾ ಸ್ವಯವಾಗಿ ಎಂದಿನಂತಿದ್ದಿತ್ತೆ? ಇದು ಕ್ರೀಜ್ಞಾನ ಭೇಧ, ಸ್ವಾನುಭಾವ ಶುದ್ಧ, ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
--------------
ದಾಸೋಹದ ಸಂಗಣ್ಣ
ಎಲೆ ದೇವಾ, ಏತಕ್ಕೆ ನುಡಿಯೆ ಎನ್ನೊಳು? ನಿನ್ನಯ ಚಿತ್ತವ ನೀಕರಿಸಿ ನುಡಿವರೆಂದೆ? ನಿನ್ನಯ ನೋವು ಎನ್ನೊಳು ನೀ ಮಾಡುವ ಮಾಟ ಅನೇಕ. ಕುಟಿಲ ಯೋನಿಯ ಸುತ್ತಿ ಮುತ್ತಿದ ಹರಿತದ ಪಾಶದ ಮಲ ನಿನ್ನಲ್ಲಿ ಅನೇಕರ ಕೊಲುವ ಪಾಶ ಕೈಯಲ್ಲಿ, ಭವ ವೇಷ ಅಂಗದಲ್ಲಿ. ಭಕ್ತರ ಕೊಲುವ ದೋಷಕ್ಕೆ ಅಂಜಿದೆಯಾ? ನಿನಗದು ನೀತಿ, ರುದ್ರನ ವೇಷಕ್ಕೆ ಸಹಜ. ಅದ ಬಿಟ್ಟಾಡು, ನೀಕರಿಸು. ಉಮಾಪತಿಯ ವೇಷವ ಬಿಟ್ಟು ಸ್ವಯಂಭುವಾಗು. ಅದ ಬಿಟ್ಟು ಇಚ್ಛೆಯಲ್ಲಿ ನಿಂದು, ನಿರ್ಮಾಯ ಮಲನಾಸ್ತಿಯಾಗಿ, ಮುಕುರ ಪ್ರತಿಬಿಂಬಿಸುವಂತೆ ಎನ್ನಿರವು ನಿನ್ನಲ್ಲಿ ತೋರುತ್ತದೆ. ಅದೇಕೆ? ನಿರ್ಮಾಯನಾದ ಕಾರಣ ನಿನ್ನಿರವು ಎನ್ನಲ್ಲಿ ಕೂರ್ತು, ದರ್ಪಣದ ಆಕಾರ ಬೆಳಗಿನಲ್ಲಿ ತೋರುವ ನಿರಾಕಾರ ಎರಡಕ್ಕೂ ರೂಪು ನಿರೂಪು ಉಭಯ ಬಿನ್ನವಿಲ್ಲದಂತೆ. ಎನ್ನಂಗವಂತಿರಲಿ ಮನವ ಒಡಗೂಡಿಕೊ. ಉರದ ಮಾತಿಂಗೆ ಮಾರನ ಕೊಂದ ಮಲತ್ರಯ ದೂರ, ಅನಾಗತ ಸಂಸಿದ್ಧ ಭೋಗಮಯ ನಯನಚರಣವಿರಾಜಿತ, ಜೀಮೂತ ಮೃತ ದಗ್ಧ ಸರ್ವವ್ಯಾಪಕ ನಾಶನ, ಸರ್ವ ಅಂತರ್ಗತ ವಿಮಲತರಂಗ, ಕರುಣಾಬ್ಧಿ ಪೂರ್ಣಚಂದ್ರ ವಿಲಾಸಿತ, ಒಡಗೂಡಿದ ಭಕ್ತರ ಚಿತ್ತದ ಸಾಕಾರ ಪುಂಜವೆ, ಸರ್ವಾತುರಂಗಳ ವಿರೋಧಿ, ಆಜಾತ, ಶಂಭು ಮಾರೇಶ್ವರಾ.
--------------
ನಗೆಯ ಮಾರಿತಂದೆ
-->