ಅಥವಾ

ಒಟ್ಟು 13 ಕಡೆಗಳಲ್ಲಿ , 6 ವಚನಕಾರರು , 13 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲ್ಲರೂ ಕೂಡಿ ಬೀರನ ಚಪ್ಪರಕ್ಕೆ ಬಂದ ಅಜಗಾಹಿಗಳಂತೆ. ದ್ವೇಷದಲ್ಲಿ , ಅಸಿಯ ಒಡಲಲ್ಲಿ ಗಸಣಿಗೊಂಡಡೆ, ಅದು ಮಿಸುಕದಂತೆ. ಕೂಟದಲ್ಲಿ ಕೂಡಿ, ಮಾತಿನಲ್ಲಿ ನಿಜವಿಲ್ಲದೆ, ಅದೇತರ ಭಕ್ತಿಯ ವ್ರತ? ನಿಜನೀತಿಯ ನಿಚ್ಚಟಂಗೆ ಬಳಕೆಯ ಬಳಸುವ ನೀತಿಯ ಅರ್ತಿಕಾರರಿಗಿಲ್ಲ, ನಿಚ್ಚಟಂಗಲ್ಲದೆ. ಬಂಕೇಶ್ವರಲಿಂಗದ ಒಲುಮೆ ಎಲ್ಲರಿಗೆಲ್ಲಿಯದೊ !
--------------
ಸುಂಕದ ಬಂಕಣ್ಣ
ಬಯಲಲ್ಲಿ ಒಂದು ಪಕ್ಷಿ ಗೂಡನಿಕ್ಕುವುದ ಕಂಡೆನಯ್ಯ. ಆ ಪಕ್ಷಿಯ ಒಡಲಲ್ಲಿ ಮೂರು ಹಂಸಗಳು ಹುಟ್ಟಿ, ಒಂದು ಹಂಸ ಪಾತಾಳಲೋಕಕ್ಕೆ ಮತ್ರ್ಯಲೋಕಕ್ಕೆ ಹೋಯಿತ್ತು. ಒಂದು ಹಂಸ ಸ್ವರ್ಗಲೋಕಕ್ಕೆ ತತ್ಪುರುಷಲೋಕಕ್ಕೆ ಹೋಯಿತ್ತು. ಒಂದು ಹಂಸ ಈಶಾನ್ಯಲೋಕಕ್ಕೆ ಅಂಬರಲೋಕಕ್ಕೆ ಹೋಯಿತ್ತು. ಆ ಪಕ್ಷಿಯ ನಿರ್ವಯಲು ನುಂಗಿತ್ತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಒಡಲಲ್ಲಿ ಹುಟ್ಟಿತ್ತು ಭ್ರಮೆಯಿಂದ ಬೆಳೆಯಿತ್ತು. ಒಡನೆ ಹುಟ್ಟಿತ್ತು ತನ್ನನರಿಯದ ಕಾರಣ. ಇದು ಒಂದು ಸೋಜಿಗವ ಕಂಡೆ. ಕೂಡೆ ಭರಿತವೆಂದರಿಯಲು ಅಂಗದಲಳವಟ್ಟಿತ್ತು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಆದಿ ಅನಾದಿಯೆಂಬವು ನಾದಕ್ಕೆ ಬಾರದ ಮುನ್ನ, ಶೂನ್ಯ ನಿಃಶ್ಶೂನ್ಯ ಸುರಾಳವೆಂಬವು ಸುಳುಹುದೋರದ ಮುನ್ನ, ಬೆಳಗು ಕತ್ತಲೆಯಿಲ್ಲದ ಮುನ್ನ, ಅಳಿವು ಉಳಿವು ಸುಳುವು ಸೂತ್ರ ಜಂತ್ರ ಜಡ ಅಜಡವಿಲ್ಲದ ಮುನ್ನ, ಕಡೆ ನಡು ಮೊದಲಿಲ್ಲದ ಅಡಿಯಲಾಧಾರ ಹಿಡಿವರೆ ರೂಹಿಲ್ಲದ ಮುನ್ನ, ಒಡೆಯನಿಲ್ಲ ಬಂಟನಿಲ್ಲ ನಡೆಯಿಲ್ಲ ನುಡಿಯಿಲ್ಲ ಬೆಡಗಿಲ್ಲ ಒಡಲಿಲ್ಲದ ಮುನ್ನ, ಪೃಥ್ವಿ, ಅಪ್ಪು, ತೇಜ, ವಾಯು, ಆಕಾಶ, ಚಂದ್ರ, ಸೂರ್ಯರು ತಲೆದೋರದ ಮುನ್ನ, ದೇವನಿಲ್ಲ ಭಕ್ತನಿಲ್ಲದ ಮುನ್ನ, ನೀನು ನಾನುಯಿಲ್ಲದ ಮುನ್ನ, ಆಕಾರ ನಿರಾಕಾರವೇನೂಯಿಲ್ಲದ ಮುನ್ನ, ತಾನು ತಾನೆಂಬ ತಲ್ಲಣವಿಲ್ಲದಂದು, ಆ ಬಟ್ಟಬಯಲ ಬ್ರಹ್ಮವೆ ಘಟ್ಟಿಯಾದ ಘನವೆಂತೆಂದಡೆ: ನಿಮ್ಮನುವ ನೀವರಿದ ಘನಮಹಿಮರು ತಿಳಿದು ನೋಡಿರಣ್ಣ. ಆ ಬಟ್ಟಬಯಲೆಂದಡಾರು ಬಸವ, ಆ ಬಸವನೆಂದಡಾರು ಬಟ್ಟಬಯಲು. ಆ ಬ್ರಹ್ಮನೆಂದಡಾರು ಬಸವ, ಬಸವನೆಂದಡಾರು ಬ್ರಹ್ಮ. ಅಂತಪ್ಪ ಬಸವನ ಆ ಮೂಲವ ಬಲ್ಲವರು ನೀವು ಕೇಳಿರಣ್ಣ. ಬಸವ ಎಂಬ ಮೂರಕ್ಷರವೆ ಮೂಲಪ್ರಣವ. ಅದೆಂತೆಂದಡೆ:ಬಯೆಂಬುದೆ ಚಿನ್ನಾದ ಆಕಾರವಾಯಿತ್ತು, ಸಯೆಂಬುದೆ ಚಿದ್ಬಿಂದುವಾಯಿತ್ತು, ಮತ್ತಂ ಬಯೆಂಬುದೆ ಅಕಾರವಾಯಿತ್ತು, ಸ ಎಂಬುದೆ ಉಕಾರವಾಯಿತ್ತು. ವಾ ಯೆಂಬುದೆ ಚಿತ್ಕಳೆಯಾಯಿತ್ತು. ಮತ್ತಂ ಬಯೆಂಬುದೆ ಆಕಾರವಾಯಿತ್ತು, ಸ ಎಂಬುದೆ ಉಕಾರವಾಯಿತ್ತು. ವಾಯೆಂಬುದೆ ಮಕರವಾಯಿತ್ತು. ಮತ್ತೆ ಬಯೆಂಬುದೆ ನಾದವಾಯಿತ್ತು, ಸಯೆಂಬುದೆ ಬಿಂದುವಾಯಿತ್ತು, ವಾಯೆಂಬುದೆ ಕಳೆಯಾಯಿತ್ತು. ಮತ್ತೆ ಬ ಎಂಬುದೆ ಗುರುವಾಯಿತ್ತು, ಸಯೆಂಬುದೆ ಅಂಗವಾಯಿತ್ತು, ವಾ ಎಂಬುದೆ ಜಂಗಮವಾಯಿತ್ತು. ಬ ಎಂಬ ನಾದವೆತ್ತಲು, ಸ ಎಂಬ ಬಿಂದು ಕೂಡಲು, ವಾಯೆಂಬ ಕಳೆ ಬೆರೆಯಲು, ಗೋಳಕಾಕಾರವಾಗಿ ಆದಿಪ್ರಣಮವೆನಿಸಿತ್ತು. ಆದಿಪ್ರಣಮ, ಅನಾದಿಪ್ರಣಮ, ಅಂತ್ಯಪ್ರಣಮವೆಂಬವು ನಮ್ಮ ಬಸವಣ್ಣನ ಸ್ಥೂಲ ಸೂಕ್ಷ್ಮ ಕಾರಣ ಕಾಣಿರೆ. ಇಂತಪ್ಪ ಬಸವಣ್ಣ ಬಯಲಬ್ರಹ್ಮವನೆ ಮೆಯಿದು, ಮೆಲುಕಿರಿದು ಗೋಮಯವಿಕ್ಕಲು ಪೃಥ್ವಿಯಾಯಿತ್ತು. ಇಂತಪ್ಪ ಬಸವಣ್ಣ ಜಲವ ಬಿಡಲು ಅಪ್ಪುಮಯವಾಯಿತ್ತು. ಇಂತಪ್ಪ ಬಸವಣ್ಣನ ತೇಜವೆ ಅಗ್ನಿಯಾಯಿತ್ತು. ಇಂತಪ್ಪ ಬಸವಣ್ಣನ ಉಚ್ಛ್ವಾಸ ನಿಶ್ವಾಸವೆ ವಾಯುವಾಯಿತ್ತು. ಇಂತಪ್ಪ ಬಸವಣ್ಣನ ಶಬ್ದವೆ ಆಕಾಶವಾಯಿತ್ತು. ಇಂತಪ್ಪ ಬಸವಣ್ಣನ ಕಂಗಳ ಬೆಳಗೆ ಚಂದ್ರ ಸೂರ್ಯರಾದರು. ಇಂತಪ್ಪ ಬಸವಣ್ಣನ ಬುದ್ಧಿಯೆ ಆತ್ಮವೆನಿಸಿ, ಅಷ್ಟತನುಮೂರ್ತಿಯೆ ತನುವೆನಿಸಿ, ಪಿಂಡ ಬ್ರಹ್ಮಾಂಡ ಕೋಟ್ಯಾನುಕೋಟಿ ಅಂಡಪಿಂಡಾಂಡಂಗಳಿಗೆ ಒಡಲಾಗಿ, ಅಡಿಮುಡಿಗೆ ತಾನೆ ಆದಿಯಾಗಿ, ಸರ್ವವೂ ನಮ್ಮ ಬಸವಣ್ಣನ ಒಡಲಲ್ಲಿ ಹುಟ್ಟುತ್ತ ಬೆಳೆಯುತ್ತ ಅಳಿವುತಿಪ್ಪವು ಕಾಣಿರೆ. ಇಂತಪ್ಪ ಸಕಲಪ್ರಾಣಿಗಳಿಗೆ ನಮ್ಮ ಬಸವಣ್ಣನ ಗೋಮಯದಲ್ಲಿ ಹುಟ್ಟಿದ ಪೃಥ್ವಿಯೆ ಪದಾರ್ಥವೆ ಆದಿಜಲದಿಂದ ಹುಟ್ಟಿದ ಉದಕವೆ ಸಾರ. ತೇಜದಿಂದ ಹುಟ್ಟಿದ ಅಗ್ನಿಯೆ ಕಳೆ. ಉಚ್ಛ್ವಾಸ ನಿಶ್ವಾಸದಿಂದ ಹುಟ್ಟಿದ ಚಂದ್ರಸೂರ್ಯರೇ ಅರಿವು ಮರವೆ. ಬುದ್ಧಿಯಿಂದ ಹುಟ್ಟಿದ ಆತ್ಮನೆ ಚೈತನ್ಯಾತ್ಮ. ಇಂತೀ ಸರ್ವಪ್ರಾಣಿಗಳಿಗೆ ನಮ್ಮ ಬಸವಣ್ಣನೆ ಆದಿ ಕಾಣಿರೇ. ಆದಿಯಲ್ಲಿ ಹುಟ್ಟಿ, ಮಧ್ಯದಲ್ಲಿ ಬೆಳೆದು, ಅಂತ್ಯದಲ್ಲಿ ಲಯವನೆಯ್ದಿದರೆ, ಮತ್ತೆ ನಿಲ್ಲುವದಕ್ಕೆ ನಮ್ಮ ಬಸವಣ್ಣನೆ ಆದಿ ಕಾಣಿರೆ. ಇಂತೀ ಒಳ ಹೊರಗೆ ಕೈಕೊಂಬರೆ, ದೇವರು ಬೇರೊಬ್ಬರುಂಟಾದರೆ ಬಲ್ಲರೆ ನೀವು ಹೇಳಿ ತೋರಿರೆ. ಅಲ್ಲದಿರ್ದರೆ ನಿಮ್ಮ ವೇದಾಗಮಶಾಸ್ತ್ರಪುರಾಣಗಳ ಕೈಯಲ್ಲಿ ಹೇಳಿಸಿರೆ. ಇಂತೀ ಅನಾದಿಸಂಸಿದ್ಧ ಬಟ್ಟಬಯಲಬ್ರಹ್ಮವೆ ಬಸವನೆಂಬುದಂ ಕಾಣುತಿರ್ದು ಕೇಳುತಿರ್ದು ಹೇಳುತಿರ್ದು ಅರಿದಿರ್ದು, ಮತ್ತೆ ಕೀಳುದೈವಂಗಳನಾರಾಧಿಸಿ ಅರ್ಚನೆ ಪೂಜೆಯ ಹಲವು ಚಂದದಲ್ಲಿ ಮಾಡಿ, ಹಲವು ಜಾತಿ ಹಲವುದರುಶನವೆನಿಸಿಕೊಂಡುಸ ಹೊಲಬುದಪ್ಪಿದಿರಿ, ಹುಲುಮನುಜರಿರಾ. ಇನ್ನಾದರೂ ಅರಿದು ನೆನದು ಬದುಕಿ, ನಮ್ಮ ಬಸವಪ್ರಿಯ ಕೂಡಲ[ಚೆನ್ನ]ಸಂಗಮದೇವನ ಶ್ರೀಪಾದಪದ್ಮವ.
--------------
ಸಂಗಮೇಶ್ವರದ ಅಪ್ಪಣ್ಣ
ಕೂಗುವ ಕೋಗಿಲೆಯ ಒಡಲಲ್ಲಿ ಇಪ್ಪತ್ತೈದು ಶಿವಾಲಯವ ಕಂಡೆನಯ್ಯ. ಆ ಶಿವಾಲಯದೊಳಗೊಬ್ಬ ಪೂಜಕ ನಿಂದು ಆರಾರ ಲಿಂಗಾರ್ಚನೆಯ ಮಾಡಿ ನಿರ್ವಿಕಾರನಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಒಂದು ಲಿಂಗದ ಸಂಗದಿಂದ ಒಬ್ಬ ಭಾಮಿನಿಯು ಹುಟ್ಟಿದಳು ನೋಡಾ! ಆಕೆಯ ಒಡಲಲ್ಲಿ ಸ್ವರ್ಗ ಮತ್ರ್ಯ ಪಾತಾಳವ ಕಂಡೆನಯ್ಯ. ಈರೇಳುಭುವನ ಹದಿನಾಲ್ಕು ಲೋಕಂಗಳ ಕಂಡೆನಯ್ಯ. ಅಷ್ಟಕುಲಪರ್ವತವ ಕಂಡೆನಯ್ಯ. ಸಪ್ತೇಳು ಸಾಗರವ ಕಂಡೆನಯ್ಯ. ಹತ್ತು ಮೇರುವೆಯ ಮೀರಿ, ಕಡೆಯ ಬಾಗಿಲ ಮುಂದೆ ನಿಂದಿರುವುದ ಕಂಡೆನಯ್ಯ. ಅಲ್ಲಿಂದತ್ತತ್ತ ತನ್ನ ಗಮನವ ತಾನೇ ನುಂಗಿ, ನಿರ್ವಯಲಾದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಆಡಿನ ತತ್ತಿಯೊಳಗೊಂದು ಹೇರಡವಿಯಿದ್ದಿತ್ತು. ಆ ಹೇರಡವಿಯೊಳಗೆ ಮೇರುವಿದ್ದಿತ್ತು. ಆ ಮೇರುವಿನ ಒಡಲಲ್ಲಿ ಚತುರ್ದಶಭುವನ ಸಚರಾಚರಂಗಳೆಲ್ಲಾ ಇದ್ದಿತ್ತು. ತತ್ತಿ ಒಡೆಯಿತ್ತು ಅಡವಿ ಅಡಗಿತ್ತು. ಸೌರಾಷ್ಟ್ರ ಸೋಮೇಶ್ವರಲಿಂಗವಿಲ್ಲದಂತಿದ್ದಿತ್ತು.
--------------
ಆದಯ್ಯ
ಇರುವೆಯ ಒಡಲಲ್ಲಿ ಐವರು ಹುಟ್ಟಿದುದ ಕಂಡೆನಯ್ಯ. ಆ ಐವರು ಮೇರುವೆಯ ಗುಡಿಯ ಹತ್ತಿ ಇರುವೆಯ ಒಡಲ ಹರಿದು ನಿರವಯದಲ್ಲಿ ಅಡಗಿದ್ದ ಕಂಡೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಕಪ್ಪೆಯ ಒಡಲಲ್ಲಿ ಮುಪ್ಪಾಗಿ ಆರುಮಂದಿ ಸತ್ತಿರುವುದ ಕಂಡೆನಯ್ಯ. ನಿಷ್ಪತಿಯಾಗಿ ಸತ್ತವರ ಕಂಡು, ಆ ಕಪ್ಪೆಯ ಹಿಡಿದಲ್ಲದೆ ನಿಃಕಲಪರಬ್ರಹ್ಮಲಿಂಗವು ಕಾಣಿಸದು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಪಶುವಿನ ಒಡಲಲ್ಲಿ ಒಂದು ಶಿಶುವಿಪ್ಪುದ ಕಂಡೆನಯ್ಯ. ಆ ಶಿಶುವ ಒಬ್ಬ ಸತಿಯಳು ಹಿಡಿದು ಮಹಾಮೇರುವೆಗೆ ಹೋಗಿ ನಿರ್ವಯಲಾದ ವಿಚಿತ್ರವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ತಾಯ ಒಡಲಲ್ಲಿ ಒಂದು ಮರಿ ಹುಟ್ಟಿ, ಆ ಮರಿ ತಾಯ ನುಂಗಿರ್ದುದ ಕಂಡೆನಯ್ಯ. ಅರುಹು ಮರಹು ಪರವ ನುಂಗಿರ್ದುದ ಕಂಡೆನಯ್ಯ. ಪರಕ್ಕೆ ಪರವ ತಾನು ತಾನೇ ನುಂಗಿರ್ದುದ ಕಂಡೆನಯ್ಯ. ಇದು ಕಾರಣ ಇಂತಪ್ಪ ಭೇದವನರಿಯಬಲ್ಲರೆ ನಿಮ್ಮ ಶರಣನೆಂಬೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಮನೆಮನೆಗೆ ಹಾರುವ ಕೋಡಗನ ಒಡಲಲ್ಲಿ ಅರವತ್ತಾರು ಕೋಟಿ ನುಸುಳುಗುಂಡಿಯ ಕಂಡೆನಯ್ಯ. ಆ ಕೋಡಗನ ಒಂದು ಇರುವೆ ನುಂಗಿತು ನೋಡಾ ! ಆ ಇರುವೆಯ ತಲೆಯ ಮೇಲೆ ಒಂದು ಮೇರುವೆಯ ಕಂಡೆನಯ್ಯ. ಆ ಮೇರುವೆಯೊಳಗೊಬ್ಬ ಭಾಮಿನಿಯು ತನ್ನ ನಿಲವ ತಾನೆ ನೋಡಿ ನೋಡಿ ನಿಶ್ಚಿಯಿಸುತಿರ್ಪಳು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಬಂಜೆ ಬೇನೆಯನರಿವಳೆ ? ಬಲದಾಯಿ ಮದ್ದ ಬಲ್ಲಳೆ ? ನೊಂದವರ ನೋವ ನೋಯದವರೆತ್ತ ಬಲ್ಲರೊ ? ಚೆನ್ನಮಲ್ಲಿಕಾರ್ಜುನಯ್ಯನಿರಿದಲಗು ಒಡಲಲ್ಲಿ ಮುರಿದು ಹೊರಳುವೆನ್ನಳಲನು ನೀವೆತ್ತ ಬಲ್ಲಿರೆ, ಎಲೆ ತಾಯಿಗಳಿರಾ ?
--------------
ಅಕ್ಕಮಹಾದೇವಿ
-->