ಅಥವಾ

ಒಟ್ಟು 8 ಕಡೆಗಳಲ್ಲಿ , 8 ವಚನಕಾರರು , 8 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸುಖ ದುಃಖ ಭೋಗಾದಿ ಭೋಗಂಗಳೆಲ್ಲವೂ ಗುರು ಲಿಂಗ ಜಂಗಮದ ಒಡಲಾಗಿ ಬೆಳೆವುತ್ತಿಹವು. ತಾನವ ಒಡಲುಗೊಂಡು ಮಾಡುವ ಕಾರಣ ತನ್ನ ಬೆಂಬಳಿಯ ಮಾಯೆ. ಅವ ಹಿಂಗಿ ತನ್ನ ತಾನರಿತಲ್ಲಿ ಚನ್ನಬಸವಣ್ಣಪ್ರಿಯ ಚಂದೇಶ್ವರಲಿಂಗವ ಕಾಣಬಂದಿತ್ತು.
--------------
ನುಲಿಯ ಚಂದಯ್ಯ
ಒಡಲುಗೊಂಡು ಹುಟ್ಟಿದ ಘಟ್ಟಕ್ಕೆ ಅಷ್ಟೋತ್ತರಶತವ್ಯಾಧಿ. ಅದಕ್ಕೆ ನಾನಾ ಔಷಧಿಯ ತಂದು ಹೊರೆವರು, ಆ ಪರಿಯ ನಾನದ ಹೊರಿಯೆನು. ಅದೇನು ಕಾರಣವೆಂದೆಡೆ : ಭವರೋಗವೈದ್ಯ, ಭವಹರನೆಂಬ ಬಿರಿದು ನಿಮ್ಮದಾಗಿ. ಇದು ಕಾರಣ ಕೂಡಲಸಂಗಮದೇವಾ, ನಿಮ್ಮ ಪುರಾತನರ ಪ್ರಸಾದವಲ್ಲದೆ ಕೊಂಡಡೆ ನಿಮ್ಮಾಣೆ.
--------------
ಬಸವಣ್ಣ
ಗುರುವಿಲ್ಲವೆಂದೆ, ಶಿಕ್ಷೆಯೊಳಗಣ ನಿಳಯವನರಿಯನಾಗಿ. ಲಿಂಗವಿಲ್ಲವೆಂದೆ, ಜಂಗಮದ ತ್ರಿಕರಣವನರಿಯನಾಗಿ. ಜಂಗಮವಿಲ್ಲವೆಂದೆ, ಗುರುವಿನ ಅನಾದಿಸಂಸಿದ್ಧಿಯನರಿಯನಾಗಿ. ಈ ತ್ರಿವಿಧವಿಲ್ಲವೆಂದೆ, ತನ್ನ ತಾನರಿಯನಾಗಿ. ತನ್ನ ತಾನರಿದಲ್ಲಿಯೆ, ನಿಃಕಳಂಕ ಮಲ್ಲಿಕಾರ್ಜುನನ ಒಡಲುಗೊಂಡು, ಕುರುಹಾದ ಭೇದ.
--------------
ಮೋಳಿಗೆ ಮಾರಯ್ಯ
ಒಡಲುಗೊಂಡವ ಹಸಿವ; ಒಡಲುಗೊಂಡವ ಹುಸಿವ ಒಡಲುಗೊಂಡವನೆಂದು ನೀನೆನ್ನ ಜರಿದೊಮ್ಮೆ ನುಡಿಯದಿರ! ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ! ರಾಮನಾಥ.
--------------
ಜೇಡರ ದಾಸಿಮಯ್ಯ
ಒಡಲುಗೊಂಡು, ಕಾಯವ ಬಳಿಗೊಂಡು, ಸಂಸಾರದ ಕುರುಹಿನ ಹೆಸರಲ್ಲಿ ಕರೆದಡೆ, ಓ ಎನುತಿಪ್ಪವರು ನರರೆ ? ಬರಿದೆ ಸಂಸಾರವ ಬಳಸುವಂತಿಪ್ಪರು, ಸಕಳೇಶ್ವರದೇವಾ, ನಿಮ್ಮ ಶರಣರು.
--------------
ಸಕಳೇಶ ಮಾದರಸ
ಅಡಿಗಡಿಗೆ ನಿಮ್ಮ ಶರಣರಡಿಗೆರಗಿ ಶರಣೆಂಬೆ. ನುಡಿಯ ಬೋಧೆಯ ಮಾತು, ಅನ್ಯನುಡಿ ಸಮನಿಸದು. ಓಡುದೇಹದ ಶಿರಬಿಗಿದು, ಮಡುಗಟ್ಟಿ ಕಂಬನಿಯ ಕಡಲೊಳಗೆ ತೇಲಾಡುತೆಂದಿಪ್ಪೆನೊ ? ಮೃಡ ಶರಣು ಶರಣೆಂಬೆ ಶಬ್ದ ಒಡಲುಗೊಂಡು ಶಂಭುಜಕ್ಕೇಶ್ವರದೇವರಿಗೆ ಶರಣೆನುತ ಮೈಮರೆದೆಂದಿಪ್ಪೆನೊ ?
--------------
ಸತ್ಯಕ್ಕ
ತನು ಒಡಲುಗೊಂಡು ನಿಂದಲ್ಲಿಯೆ ಗುರುವಿಂಗೆ ಹಂಗಾಯಿತ್ತು. ಲಿಂಗ ಸಾಕಾರವಾಗಿ ಬಂದಲ್ಲಿಯೆ ಜಂಗಮಕ್ಕೆ ಹಂಗಾಯಿತ್ತು. ಮನವು ಮಹವನರಿಯದೆ ಸಕಲ ಜೀವಕ್ಕೆ ಹಂಗಾಯಿತ್ತು. ಅಂಗ ಜೀವದ, ಸಂದೇಹವನರಿತಲ್ಲಿ, ದಂದುಗಕ್ಕೆ ಮೊದಲೆ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಜನಿತವಿಲ್ಲದ [ಜನಿತ]ನಾದ ಹರನೆ, ನೀನು ನಿರೂಪನು. ಎನ್ನ ಭಕ್ತರು ರೂಪರುಯೆಂದಹರೆ ಅಲ್ಲಲ್ಲ, ಎನ್ನ ಭಕ್ತರೆ ನಿರೂಪರು. ಹೆಸರಿಲ್ಲದ ವಸ್ತುವ ತಂದು ಹೆಸರಿಟ್ಟು ಕರುಹುಗೊಂಡುದಿದೆಂದು ಅರಿಯಬಾರದಾತನ ತಂದು ಕುರುಹಿಟ್ಟು ಪಾಲಿಸಿದರಾದಕಾರಣ ದೇವನಾದೆ. ಒಡಲುಗೊಂಡವರ ಜರಿಯಲೇತಕೆ? ನೀನೊಮ್ಮೆ ಒಡಲುಗೊಂಡು ನೋಡಾ. ಜಾಗ್ರತ್‍ಸ್ವಪ್ನಸುಷುಪ್ತಿಯಲ್ಲಿ ನಿನ್ನ ಧ್ಯಾನವಲ್ಲದೆ ಅನ್ಯಧಾನ್ಯವುಂಟೆ ಎನ್ನವರಿಗೆ? ನಿನ್ನ ಹೊಗಳಿ ಹೊಗಳಲಾರದೆ ಆ ವೇದಂಗಳು ವಾಙ್ಮನಕ್ಕಗೋಚರನೆಂದವು, ಕಾಣಬಾರದ ಶೂನ್ಯನೆಂದವು. ಇಂತೀ ಪರಿಯಲಿ ಶ್ರುತಿಗಳು ಹೊಗಳಿದವು. `ಯಜ್ಞೇನ ಯಜ್ಞಮಯಜನ್ತ ದೇವಾಃ ತಾನಿ ಧರ್ಮಾಣಿ ಪ್ರಥಮಾನ್ಯಾಸನ್ ತೇ ಹ ನಾಕಂ ಮಹಿಮಾನಸ್ಸಚಂತೇ ಯತ್ರಪೂರ್ವೇ ಸಾಧ್ಯಾಸ್ಸಂತಿ ದೇವಾಃ ಎಂದವು ಶ್ರುತಿ. ನಿನ್ನಾಯತವ ಎಮ್ಮ ಶರಣರೇ ಬಲ್ಲರು. ಆಗಮ ಶ್ರುತಿ ಪುರಾಣಂಗಳ ಹಾಂಗೆ ಶೂನ್ಯವ ಹೇಳುವರೆ ನಿಮ್ಮ ಶರಣರು? .ನಿತ್ಯನೆಂದು ದಿಟಪುಟ ಮಾಡಿ ಸದ್ಭಕ್ತರ ಹೃದಯ ಮನ ಶಾಸನ ಮಾಡಬಲ್ಲ ಶರಣರು, ಶಿವಂಗೆ ಜನಕರು ಕಾಣಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
-->