ಅಥವಾ

ಒಟ್ಟು 11 ಕಡೆಗಳಲ್ಲಿ , 8 ವಚನಕಾರರು , 10 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮೆಟ್ಟಿದ ಅಡಿಯ ದೃಢವಾಗಿ ಮೆಟ್ಟಿ, ಆಚೆಯಲ್ಲಿ ಕಿತ್ತಡಿಯಿಡಬೇಕು. ಮುಂದಕ್ಕೆ ಒದಗು, ಹಿಂದಕ್ಕೆ ದೂರವಾಯಿತ್ತು. ಇಷ್ಟದಲ್ಲಿ ಚಿತ್ತ ನೆಮ್ಮಿ, ಮತ್ತೆ ಪ್ರಾಣನ ಪಥ್ಯವನರಿಯಬೇಕು. ಫಲದ ತೊಡಪು ಕೈಗೆ ತಾಹಂತೆ, ಘಟಜ್ಞಾನಕ್ಕೆ ಬ್ಥಿನ್ನವಿಲ್ಲ, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ಬೀಜ ಕೊಳೆತಾಗ ಅಂಕುರ ನಷ್ಟವಾಯಿತ್ತು. ಸಸಿಯಿಲ್ಲದ ಫಲವುಂಟೆ ಅಯ್ಯಾ ? ಇಷ್ಟದ ಅರ್ಚನೆ ಅರತು, ಚಿತ್ತ ದೃಷ್ಟವ ಕಾಬುದಕ್ಕೆ ಗೊತ್ತಾವುದು ಹೇಳಯ್ಯಾ ? ಅದು ಮುಟ್ಟಿದ ಮುಟ್ಟಿನಲ್ಲಿ ಒದಗು, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ಬಂಗಾರದ ರೂಪಿದ್ದಲ್ಲದೆ ಬಣ್ಣ ವನವಗವಿಸದು. ಬಣ್ಣ ರಂಜನೆಯಾಗಿ ರಂಜಿಸುತ್ತಿರೆ ಎಲ್ಲರ ಕಣ್ಣಿಗೆ ಮಂಗಲ. ಇಂತೀ ಕಾಯ ಜೀವ ಜ್ಞಾನದ ಬೆಳಗು. ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗದ ಒದಗು.
--------------
ಶಿವಲೆಂಕ ಮಂಚಣ್ಣ
ಹೂವ ಕೊಯ್ಯುವರಲ್ಲದೆ, ಹೂವಿನ ಗಂಧವ ಕೊಯ್ದವರುಂಟೆ ಅಯ್ಯಾ? ಮಾತನಾಡುವರಲ್ಲದೆ, ಮಾತಿನ ಭೇದದ ವಾಸನೆಯ ಕಂಡವರುಂಟೆ ಅಯ್ಯಾ? ಇದು ನೀತಿಯ ಒದಗು, ಕ್ರೀಯ ನಿಹಿತವಾಗಿ ಮಾಡುವಲ್ಲಿ ಭಾವಶುದ್ಧವಾಗಿರಬೇಕು. ಮಾತನರಿದಾಡುವಲ್ಲಿ, ಮಾತಿನ ರೀತಿಗೆ ತಾ ಒದಗು ನಿಹಿತವಾಗಿರಬೇಕು. ಅದು ಕೂಟಸ್ಥ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ.
--------------
ಸಗರದ ಬೊಮ್ಮಣ್ಣ
ಸರ್ವಜೀವಕ್ಕೆ ದಯವೆ ಮೂಲಮಂತ್ರ. ಸರ್ವರ ಭೂತಹಿತವೆ ದಿವ್ಯಜ್ಞಾನ. ಇಂತೀ ಉಭಯವನರಿತಲ್ಲಿ ಸದಮಲಪೂಜೆ. ಹೀಗಲ್ಲದೆ ಬೆನ್ನ ತಡಹಿ, ಅನ್ನವನಿಕ್ಕಿ, ತಿನ್ನು ಕೊಲ್ಲು ಎಂಬವನ ಪೂಜೆ. ಅವನನ್ನದ ಹಿರಣ್ಯದ ಒದಗು. ಅವನ ಮಾಟದ ಮರುಳಾಟ, ಏತದ ಕೂನಿಯ ಘಾತದ ವೆಜ್ಜದಂತೆ, ಅವನ ನೀತಿಯ ಇರವು, ಬಂಕೇಶ್ವರಲಿಂಗಾ.
--------------
ಸುಂಕದ ಬಂಕಣ್ಣ
ಲಾಭವ ಕಾಬ ಬೆವಹಾರಿ ನಷ್ಟಕ್ಕೆ ಸಿಕ್ಕುವನೆ? ಅದು ತನ್ನ ಸಿಕ್ಕಿನ ಬಹುದ ತಾನರಿಯ. ಈ ಉಭಯವ ತಿಳಿದಲ್ಲಿ ಲಾಭ ನಷ್ಟ ದಿವರಾತ್ರಿಯಂತೆ ಮಾಟ ಕೂಟದ ಒದಗು. ವಿಶ್ವಾಸದಲ್ಲಿ ಲಾಭಾ, ಅದು ಹೀನವಾದಲ್ಲಿ ನಷ್ಟ. ಇಂತೀ ನಷ್ಟ ಲಾಭವ ಬಿಟ್ಟು ಸುಚಿತ್ತ ನಿರ್ಮಲಾತ್ಮಕನಾಗಿ ಅರಿದು ಕರಿಗೊಳ್ಳಬೇಕು. ನಾರಾಯಣಪ್ರಿಯ ರಾಮನಾಥನಲ್ಲಿ ಚಿತ್ತಶುದ್ಧನಾಗಿರಬೇಕು.
--------------
ಗುಪ್ತ ಮಂಚಣ್ಣ
ಕರೆವ ಪಶುವಿಂಗೆ ತೃಣ ದವಸ ಎಯ್ದಾದಲ್ಲಿ ಹಾಲ ವೆಗ್ಗಳವ ಕಾಬಂತೆ, ಕ್ರೀಶುದ್ಧತೆಯಾಗಿ ಮನ ವಚನ ಕಾಯ ತ್ರಿಕರಣ ಶುದ್ಧವಾಗಿ ಇದ್ದಲ್ಲಿಯೆ ವಸ್ತುವಿನ ಹೆಚ್ಚುಗೆಯ ಒದಗು, ಅನಿತ್ಯವ ನೀಗಿ ನಿಂದ ಬೆಳಗು, ಸದಾಶಿವಮೂರ್ತಿಲಿಂಗದ ಸಂಗದ ಸಂತೋಷದ ಇರವು.
--------------
ಅರಿವಿನ ಮಾರಿತಂದೆ
ಕ್ರೀವಂತಂಗೆ ಅಂಗ ಭವಿ, ನಿಃಕ್ರೀವಂತಂಗೆ ಮನ ಭವಿ, ವೇಷವ ಹೊತ್ತು ತಿರುಗವ ಜಂಗಮಕ್ಕೆ ಆಶೆ ಭವಿ. ಇನ್ನಾನೇವೆನಯ್ಯಾ ? ಹಿಡಿವ ಎಡೆ ಕಾದ ಮತ್ತೆ ಪಿಡಿವುದಿನ್ನಾವುದೋ ? ಆತ್ಮನು ಅಲಗಾದ ಮತ್ತೆ ಕೊಲುವ ಹಗೆ ಬೇರಿಲ್ಲವಾಗಿ, ಹೇಳುವ ಜ್ಞಾನಿ ಸಂಸಾರಿಯಾದ ಮತ್ತೆ, ಕೆಳೆಗೊಂಡವ ಕೆಟ್ಟ ನೋಡಾ. ಸಾಧನೆಯಿಂದ ಬಂದ ಒದಗು, ಕಳನೇರಿ ಕೈ ಮರೆದಂತೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಬಹುಜಲವಂ ಬಿಟ್ಟಲ್ಲಿ ಅದು ಶೀಲವಲ್ಲ. ಪರಪಾಕ ಮುಂತಾದ ದ್ರವ್ಯವ ಬಿಟ್ಟಲ್ಲಿ ಶೀಲವಂತನಲ್ಲ. ಅದೆಂತೆಂದಡೆ ; ಅದು ಮನದ ಅರೋಚಕ, ಆ ಗುಣ ಜಗದ ಮಚ್ಚು, ಸರ್ವರ ಭೀತಿ, ದ್ರವ್ಯದ ಒದಗು ; ಈ ಗುಣ ವ್ರತಕ್ಕೆ ಸಲ್ಲ. ವ್ರತವಾವುದೆಂದಡೆ ; ಪರಾಪೇಕ್ಷೆಯ ಮರೆದು, ಪರಸತಿಯ ತೊರೆದು, ಗುರುಲಿಂಗಜಂಗಮದಲ್ಲಿ ತಾಗು ನಿರೋಧಮಂ ತಾಳದೆ, ಹೆಣ್ಣು ಹೊನ್ನು ಮಣ್ಣಿಗಾಗಿ ತಪ್ಪಿ ನುಡಿಯದೆ, ಒಡೆಯರು ಭಕ್ತರಲ್ಲಿ ತನ್ನ ಕುರಿತ ಗೆಲ್ಲ ಸೋಲಕ್ಕೆ ಹೋರದೆ, ತನಗೊಂದು ಬೇಕೆಂದು ಅನ್ಯರ ಕೈಯಲ್ಲಿ ಹೇಳಿಸದೆ, ಬಹು ಢಾಳಕತನವಂ ಬಿಟ್ಟು ಸರ್ವರ ಆತ್ಮ ಚೇತನವನರಿತು, ತಾ ಮರೆದುದ ಅರಿದು ಎಚ್ಚತ್ತು ನೋಡಿ, ಅಹುದಾದುದ ಹಿಡಿದು ಅಲ್ಲದುದ ಬಿಟ್ಟು, ಬಹುದುಃಖಮಂ ಮರೆದು ಇಂತೀ ಸರ್ವಗುಣಸಂಪನ್ನನಾಗಿ ಆತ್ಮಂಗೆ ಅರಿವಿನ ಶೀಲವ ಮಾಡಿ, ಕಾಯಕ್ಕೆ ಮರವೆ ಇಲ್ಲದ ಆಚಾರವನಂಗೀಕರಿಸಿ, ಇಂತೀ ಕಾಯ, ಮನ, ಅರಿವಿನ ಆಚಾರದಲ್ಲಿ ನಿಂದಲ್ಲಿ ನಿಂದು, ಏತಕ್ಕೂ ಮರವೆಯಿಲ್ಲದೆ ಸರ್ವ ಅವಧಾನಂಗಳಲ್ಲಿ ಹೊರಗಣ ಮಾಟ ಒಳಗಣ ಕೂಟ ಉಭಯ ಶುದ್ಧವಾದಲ್ಲಿ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ಜಿಡ್ಡು ಹರಿಯಿತ್ತು.
--------------
ಅಕ್ಕಮ್ಮ
ಭಕ್ತ ಮಾಹೇಶ್ವರ ಪ್ರಸಾದಿ ಈ ಮೂರು ಭಕ್ತನಂಗ. ಪ್ರಾಣಲಿಂಗಿ ಶರಣ ಐಕ್ಯ ಈ ಮೂರು ಜಂಗಮದಂಗ. ಮೂರಕ್ಕಾರು ಸತಿಪತಿಭೇದವನರಿವುದು. ಆ ಆರರ ಒದಗು ಇಪ್ಪತ್ತೈದರ ಬೀಜ. ಈ ಭೇದವನರಿದ ಮತ್ತೆ ನೂರೊಂದು ಆರರಲ್ಲಿ ಅಡಗಿ, ಆ ಆರು ಐದರಲ್ಲಿ ನಿಂದು, ಐದು ಮೂರರಲ್ಲಿ ನಿಂದು ಭೇದಿಸಿ, ಮೂರು ಒಂದರಲ್ಲಿ ನಿಂದು ಸಂದೇಹವಳಿಯಿತ್ತು. ಇಂತು ಎನ್ನ ಭ್ರಮೆ ಹಿಂಗಿತ್ತು. ಇಂತಿವರ ನಾನಾ ಸ್ಥಳ ಕುಳಂಗಳೆಲ್ಲವು ಆದಿಗತೀತವಾದ ಮತ್ತೆ ಭಾವದ ಗುರುವೆನಲೇಕೆ ? ಅವತಾರದ ಲಿಂಗವೆನಲೇಕೆ ? ಅರಿದು ಮರೆದವ ಜಂಗಮವೆನಲೇಕೆ ? ಇಂತಿವ ಕಂಡೂ ಕಾಣದ, ನಂಬಿಯೂ ನಂಬದ ಸಂದೇಹಿಗೇಕೆ, ಗುರು ಲಿಂಗ ಜಂಗಮ ? ಪ್ರಥಮ ಕ್ರಿಯೆಯಲ್ಲಿ ಮೋಸ, ಜ್ಞಾನಕ್ಕೆ ಲಾಭವೆ ? ಇದು ದೃಷ್ಟದ ದರ್ಪಣದ ಒಳಹೊರಗಿನಂತೆ ತಿಳಿದು ನೋಡೆ, ಉಭಯಸ್ಥಲವೈಕ್ಯ ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
-->