ಅಥವಾ

ಒಟ್ಟು 13 ಕಡೆಗಳಲ್ಲಿ , 9 ವಚನಕಾರರು , 13 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹಿಂದೆ ನೀ ಬಂದೆ ನಾನಾ ಭವಂಗಳಲ್ಲಿ, ನಾನಾ ವ್ಯಾಪಾರಕ್ಕೆ ನೀನೊಡೆಯನಾಗಿ. ಮತ್ರ್ಯದ ಸುಖದುಃಖ ನಿನಗೆ ನಿಶ್ಚಿಂತವಾಗಿಪ್ಪುದು. ಹಿಂದೆ ನಿನ್ನಂತೆ ನಾ ಬಂದು ನೊಂದುದಿಲ್ಲ. ಬಂದೆ ನಾ ಬಸವಣ್ಣನ ಕಥನದಿಂದ, ನಾ ತಂದ ಪದಾರ್ಥವೆಲ್ಲವ ನಿಮಗಿತ್ತೆ. ನಾನಿನ್ನಂಜುವೆ ಗುರುಲಿಂಗಜಂಗಮದಲ್ಲಿ ಪ್ರತ್ಯುತ್ತರಕ್ಕೆ. ಎನಗೆ ಮತ್ರ್ಯದ ಮಣಿಹ, ಕೃತ್ಯವಿನ್ನೆಷ್ಟು ದಿನ ಹೇಳಾ. ಅಂದು ನೀವು ಕೊಟ್ಟ ಒಪ್ಪದ ಚೀಟನೊಪ್ಪಿಸಿದೆ. ಮತ್ತೆ ಇನ್ನು ಸಂದೇಹವೆ, ಹೇಳಾ ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ರಾಜ್ಯ ಹೋದಲ್ಲಿ ರಾಯತನ ಉಂಟೆ? ಪೂಜೆ ಅಡಗಿದಲ್ಲಿ ಪುಣ್ಯದ ಹಂಗುಂಟೆ? ಮಾಟಕೂಟ ನಷ್ಟವಾದಲ್ಲಿ ಮಹಾಮನೆಯ ಎಡೆಯಾಟವುಂಟೆ? ಸಟ್ಟೆಯನೊಪ್ಪಿಸಿದವಂಗೆ ಮತ್ತೆ ಒಪ್ಪದ ಚೀಟುಂಟೆ? ಭಕ್ತನಾಗಿ ಮಾಡಿ ಕಂಡೆ, ಭೃತ್ಯನಾಗಿ ಕಾಯಿದು ಕಂಡೆ ಮತ್ತೆ ನೀ ನೀವೊಪ್ಪಿ ಕೊಟ್ಟಿರಿ. ಎನ್ನಂಗದಲ್ಲಿ ಮತ್ರ್ಯರೂಪನ ರೂಪ ನಿಮಗೆ ಒಪ್ಪಿಸಿದೆಯೆಂಬುದಕ್ಕೆ ಮೊದಲೇ ಬಚ್ಚಬಯಲಾಯಿತ್ತು. ಪುಣ್ಯಾರಣ್ಯದಹನ ಬ್ಥೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಒಪ್ಪದ ಕಪ್ಪೆ ಸರ್ಪನ ನುಂಗಿತ್ತ ಕಂಡೆ. ತುಪ್ಪುಳು ಬಾರದ ಮರಿ ಹೆತ್ತ ತಾಯ ನುಂಗಿತ್ತ ಕಂಡೆ. ಕೊಂಬಿನ ಮೇಲಣ ಕೋಡಗ ಕೊಂಬ ನುಂಗಿತ್ತ ನೋಡಾ. ಬೀಸಿದ ಬಲೆಯ ಮತ್ಸ್ಯ ಗ್ರಾಸವ ಕೊಂಡಿತ್ತು ನೋಡಾ. ಅರಿದೆಹೆನೆಂಬ ಅರಿವ, ಮರೆದೆಹೆನೆಂಬ ಮರವೆಯ ಕಳೆದುಳಿದ ಪರಿಯಿನ್ನೆಂತೊ ? ಅರಿವುದೆ ಮರವೆ, ಮರೆವುದೆ ಅರಿವು. ಅರಿವು ಮರವೆ ಉಳ್ಳನ್ನಕ್ಕ ಕುರಿತು ಮಾಡುವುದೇನು ? ಕುರುಹಿಂಗೆ ನಷ್ಟ, ಆ ಕುರುಹಿನಲ್ಲಿ ಅರಿದೆಹೆನೆಂಬ ಅರಿವು ತಾನೆ ಭ್ರಮೆ. ಆರೆಂಬುದ ತಿಳಿದಲ್ಲಿ, ಕೂಡಿದ ಕೂಟಕ್ಕೆ ಒಳಗಲ್ಲ ಹೊರಗಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ದಿವಕ್ಕೆ ಪರಬ್ರಹ್ಮ ರಾತ್ರಿಗೆ ಕೌಗ್ರ ಬ್ರಹ್ಮ. ಅಧರಪಾನ ಒಳಗಾಗಿದ್ದ ಬಹು ಚೇಷ್ಟೆಗಳಲ್ಲಿ ಸಂಚಾರಿಸುತ್ತ ಇಪ್ಪುದು ದೇವಪದಕ್ಕೆ ಹೊರಗು. ಕಾಲಾಂತಕ ಭೀಮೇಶ್ವರಲಿಂಗವು ಒಪ್ಪದ ಭಾವ.
--------------
ಡಕ್ಕೆಯ ಬೊಮ್ಮಣ್ಣ
ತೋರುವ ತೋರಿಕೆ ಸಬರೆ ಮುಟ್ಟಾಗಿ, ಭಾವಭ್ರಮೆ ಸರ್ವತ್ರವ್ಯಾಪಾರ ವಿದಳ ಧಾನ್ಯವಾಗಿ, ಚಿತ್ತವನರಿಯದ ಭಾವ ಎತ್ತಾಗಿ, ಜಗವ ಸಿಕ್ಕಿಸುವ ವೇಷ ಲಾಂಛನಧಾರಿ ಸೆಟ್ಟಿಯಾಗಿ, ಸರ್ವಪ್ರಕೃತಿ ದೇಶದಲ್ಲಿ ಬೆವಹಾರವ ಮಾಡುತ್ತಿರಲು, ನಿರಾಸಕ ಕೋಲುಕಾರ ತನುವಿನ ಸೆಟ್ಟಿಯ ತಡೆ ಬಿಟ್ಟಿತ್ತು. ಗತವಾಗಿ, ಕಾಲದ ಮಂದಿರಕ್ಕೆ ಒಪ್ಪದ ಚೀಟಲ್ಲದೆ, ಬಂಕೇಶ್ವರಲಿಂಗಕ್ಕೆ ಸುಂಕಲಾಭವಾಯಿತ್ತು.
--------------
ಸುಂಕದ ಬಂಕಣ್ಣ
ಸರ್ಪಂಗೆ ಪಿಕಂಗೆ ಒಪ್ಪದ ಮನೆ ಉಂಟೆ? ಎನಗಾ ಹೆಚ್ಚು ಕುಂದೆಂಬ ಮಿಥ್ಯದ ಭಾವವಿಲ್ಲ. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ.
--------------
ಘಟ್ಟಿವಾಳಯ್ಯ
ವ್ರತಿಗಳ ಮನೆಗೆ ವ್ರತಿಗಳು ಬಂದಲ್ಲಿ ಎನ್ನ ಮನೆಗೆ ಇವರು ಬಂದರೆಂದು ಭಿನ್ನಭಾವವಾದಾಗಲೆ ವ್ರತಕ್ಕೆ ದೂರ, ಆಚಾರಕ್ಕೆ ಕೊರತೆ. ತಮ್ಮ ಮನೆಗೆ ತಾವು ಬಂದರೆಂದು ಅನ್ಯಭಿನ್ನವಿಲ್ಲದೆ ಅರ್ಥ ಪ್ರಾಣ ಅಭಿಮಾನವೆಂದು ಕಟ್ಟುಮಾಡಿದಡೆ ಸಮಯಾಚಾರಕ್ಕೆ ದೂರ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಒಪ್ಪದ ನೇಮ.
--------------
ಅಕ್ಕಮ್ಮ
ಪರಪಾಕದ್ರವ್ಯವ ಬಿಟ್ಟಲ್ಲಿ ಬಹುಜಲ, ಹರಿವ ಜಲ ಮುಂತಾದ ಬಹು ನಿರೀಕ್ಷಣೆಯಾದ ಜಲಂಗಳ ಮುಟ್ಟಲಿಲ್ಲ. ಇಂತೀ ಪಾಕ ತಮ್ಮಾಯತ[ವೆ], ಉದಕ ಅನ್ಯರಾಯತವೆ? ಮೊಲೆಯ ಮುಚ್ಚಿ ಸೀರೆಯ ತೆರೆದಲ್ಲಿ ಅಪಮಾನವೆಲ್ಲಿ ಅಡಗಿತ್ತು? ಇಂತೀ ವ್ರತದಂಗವ ನೀವೆ ಬಲ್ಲಿರಿ. ಇದು ಏಲೇಶ್ವರಲಿಂಗಕ್ಕೆ ಒಪ್ಪದ ಕ್ರೀ.
--------------
ಏಲೇಶ್ವರ ಕೇತಯ್ಯ
ರಕ್ಕಸಿಯ ಕೋರೆದಾಡೆಯಲ್ಲಿ, [ಕ]ಪ್ಪುಹಲ್ಲಿನ ಮಧ್ಯದಲ್ಲಿ ಒಂದು ಒಪ್ಪದ ಶಿಶು ಹುಟ್ಟಿತ್ತು. ಅವಳು ಕಚ್ಚುವ ಜೀವವ ತಪ್ಪಲಿಕ್ಕೂದು. ಅವಳು ಅಡಗ ಕಡಿವಲ್ಲಿ, ದಾಡೆಯಲ್ಲಿ ಅಡಗಿ ಅಗಿಯಲೀಸದು. ಅವಳು ಶಿಶುವನಗಿದೆಹೆನೆಂದಡೆ, ದಾಡೆಯೊಳಗಡಗಿ ಉಗಳೂದಕ್ಕೆ ಅಸಾಧ್ಯ. ತನ್ನ ತಲೆಯಳಿದಲ್ಲದೆ, ಶಿಶುವಿನ ಹಗೆ ಬಿಡದು. ಬಂಕೇಶ್ವರಲಿಂಗ ನೀ ಮಾಡಿದ ಮಾಯೆ, ಇದಾರಿಗೂ ಅಸಾಧ್ಯ.
--------------
ಸುಂಕದ ಬಂಕಣ್ಣ
ಹರಿವ ಮನ ತುರಗ, ಅಹಂಕಾರ ಗಜ, ಮೂಢಚಿತ್ತ ಒಂಟೆಯಾಗಿ, ಜೀವಗಳು ವ್ಯವಹಾರಿಯಾಗಿ, ಅಂಗವೆಂಬ ಭೂಮಿಯಲ್ಲಿ ಬೆವಹಾರವ ಮಾಡಲಾಗಿ, ಚಿತ್ತವೆಂಬ ಸೂಳುಗಾರ ಒಪ್ಪದ ಚೀಟ ತೋರಿಯೆಂದಲ್ಲಿ ಸಿಕ್ಕಿದ. ಜೀವವೆಂಬ ಸೆಟ್ಟಿ ಭವದ ತಕ್ಕೆಯ ಸೆರೆ ಸಾಲಿಯಲ್ಲಿ ಕೆಟ್ಟಿತ್ತು ಸುಂಕ, ಬಂಕೇಶ್ವರಲಿಂಗಕ್ಕೆ ನಷ್ಟ ಬಂದುದಿಲ್ಲ.
--------------
ಸುಂಕದ ಬಂಕಣ್ಣ
ಭರಿತಾರ್ಪಣವೆಂದು ಅಪೇಕ್ಷಿಸುವಲ್ಲಿ ಸೂಚನೆಯರತು ಒಂದನೊಂದು ಇರಿಸೆಂದು ಸಂದಣಿಗೊಳುತ್ತ, ಬಂದ ದ್ರವ್ಯವೆಯ್ದದೆಂದು ತಂದು ಸುರಿಯೆನುತ್ತ, ಸಂದ ದ್ರವ್ಯವ ಮತ್ತೆ ಉಲ್ಲಂಘಿಸಿ ಇರುತ್ತ, ಮತ್ತೆ ಮಿಶ್ರದಿಂದ ದ್ರವ್ಯಂಗಳು ಬಿಸುರಿಬಂದು ಸೋಂಕಲಿಕೆ ಮತ್ತಿರಿಸಬಹುದೆ ? ಕಟ್ಟಳೆಯ ಮೀರಿ ಸೋಂಕಿದುದ ಮತ್ತೆ ಅರ್ಪಿಸಬಹುದೆ? ಇದು ಕಾರಣದಲ್ಲಿ ಕೆರಹಿನಳತಕ್ಕೆ ಕಾಲ ಕಡಿಸಿಕೊಳ್ಳದೆ, ಬಸುರಿಂಗಾಗಿ ಬಣಬೆಯ ಸುಡದೆ, ಕಿಂಚಿತ್ತು ವಿಷಯಲಂಪಟಕ್ಕಾಗಿ ಸಹಪಂಕ್ತಿಗಳಲ್ಲಿ ವಿಶೇಷವನೆಂದೂ ಮುಟ್ಟದೆ, ಅವರು ತಮ್ಮಾಳಿಯನರಿದು ಮಾಡಿದಂತೆ, ತಾ ತನ್ನ ವೇಳೆಯನರಿದು ಅರ್ಪಿತವ ಮಾಡಿಕೊಂಡು ಮಹಾನದಿಗಳಲ್ಲಿ ಸ್ಥೂಲ ಸೂಕ್ಷ್ಮ ಅತಿಸೂಕ್ಷ್ಮ ಕುಂಭಗಳನದ್ದಿ ತೆಗೆದಲ್ಲಿ ಕುಂಭಕ್ಕೆ ತಕ್ಕ ಅಂಬು, ಅಂಗಕ್ಕೆ ತಕ್ಕ ದ್ರವ್ಯಪದಾರ್ಥಂಗಳ ಅಂಗೀಕರಿಸುವುದು ಭರಿತಾರ್ಪಣದ ಸಂಗ. ಇದು ಲಿಂಗಸೋಂಕಿನ ಅಂಗದ ವಿವರ. ಹೀಂಗಲ್ಲದೆ ತಂದು ಸುರಿಯಿಸಿಕೊಂಡು, ಕೊಂಡಷ್ಟ ಕೊಂಡು, ಇಂತೀ ಭರಿತಾರ್ಪಣಲಿಂಗಪ್ರಸಾದವ ಕಂಡವರು ಕೊಂಡುಹೋಗಿ ಎಂದು ಕೊಡುವ ಭಂಡನ ಭರಿತಾರ್ಪಣ ಲಿಂಗಕ್ಕೆ ಸಲ್ಲದಾಗಿ. ಇದು ಕಾರಣದಲ್ಲಿ ತುಂಬಿದ ಸಕಟಕ್ಕೆ ಅಂಗುಲದಷ್ಟು ತೃಣಭಾರವಾದಂತೆ. ಇದು ಶಿವಲಿಂಗಾಂಗಿಗಳು ಒಪ್ಪದ ತೆರ. ಇಂತೀ ಗುಣ ಭರಿತಾರ್ಪಣಂಗಳಲ್ಲಿ ನಿಂದುದ ಸಂದುದ ಬಂಧಂಗಳಲ್ಲಿ ಆತ್ಮವಿಚ್ಛಂದವಿಲ್ಲದೆ ಆ ಲಿಂಗಘಟಕ್ಕೆ ಸಲುವ ಪ್ರಮಾಣಂಗಳನರಿದು ಅರ್ಪಿತವ ಮಾಡುವುದು ಭರಿತಾರ್ಪಣ. ಈ ಗುಣ ಭೋಗಬಂಕೇಶ್ವರಲಿಂಗಕ್ಕೆ ಸಮರ್ಪಣ.
--------------
ಶ್ರೀ ಮುಕ್ತಿರಾಮೇಶ್ವರ
ಒಪ್ಪಿಪ್ಪ ಭೇದವನು, ಅಪ್ಪು ರೂಪಾದುದನು, ತಪ್ಪದೆ ತ್ವಮಸಿಯೆನಿಸುವ ಭೇದವ, ಗುರುವಿನ ಒಪ್ಪದ ಕಂಡೆ ಕಾಣಾ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಭಕ್ತಿಯಂ ಮಾಡಿ ವಸ್ತುವಂ ಕಾಣಬೇಕೆಂಬರು ಕರ್ಮಕಾಂಡಿಗಳು. ಭಕ್ತಿಯಿಲ್ಲದೆ ಚಿತ್ತದ ಗೊತ್ತನರಿಯಬೇಕೆಂಬರು ಆಧ್ಯಾತ್ಮಭಾವಕಾಂಡಿಗಳು. ದರ್ಪಣದಲ್ಲಿಪ್ಪ ಒಪ್ಪದ ಭೇದವ, ಅದರ ಇಷ್ಟವಿಲ್ಲದೆ ದೃಷ್ಟವ ಕಾಬ ಪರಿಯಿನ್ನೆಂತೊ? ಮುಕುರದ ಅಂಗವಿದ್ದು, ಪ್ರಕೃತಿತನು ಮುಸುಕಿದಲ್ಲಿ, ಮುಖದ ಸುಖದ ಸುಖನೆಲೆಯ ವಿಚಾರಿಸಬಹುದೆ ? ಸಕಲವೆಂದಡೆ ಇಷ್ಟ, ನಿಷ್ಕಲವೆಂದಡೆ ಅದರ ಅಭೀಷ್ಟ, ಈ ಉಭಯದ ತಟ್ಟಿಗಾರದೆ, ಹೊತ್ತು ಹೋರುವರ ಮಾತಿನ ಕತ್ತಿಯ ಬಾಯಿಧಾರೆಯ ಗಾಯಕ್ಕೆ, ಇನ್ನೇತರ ಮದ್ದೆಂದೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
-->