ಅಥವಾ

ಒಟ್ಟು 14 ಕಡೆಗಳಲ್ಲಿ , 10 ವಚನಕಾರರು , 12 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯೋಗವನರಿದೆನೆಂಬೆ, ಯೋಗವನರಿದೆನೆಂಬೆ ; ಯೋಗದ ನೆಲೆಯನಾರು ಬಲ್ಲರು? ಯೋಗದ ನೆಲೆಯ ಹೇಳಿಹೆ ಕೇಳಾ- ತಾತ್ಪರ್ಯಕರ್ಣಿಕೆಯ ಮಸ್ತಕದಲ್ಲಿದ್ದ ಕುಂಭದೊಳಗೆ ತೋರುತ್ತದ್ಞೆ; ಹಲವು ಬಿಂಬ ಹೋಗುತ್ತಿದೆ, ಹಲವು ರೂಪ ಒಪುತ್ತಿದೆ ; ಏಕ ಏಕವಾಗಿ ಆನಂದಸ್ಥಾನದಲ್ಲಿ ಅನಿಮಿಷವಾಗುತ್ತಿದೆ ; ಪೂರ್ವಾಪರ ಮಧ್ಯ ಶುದ್ಧ ಪಂಚಮವೆಂಬ ಸ್ಥಾನಂಗಳಲ್ಲಿ ಪ್ರವೇಶಿಸುತ್ತಿದೆ ತಾನು ತಾನೆಯಾಗಿ. ಅರಿಯಾ ಭೇದಂಗಳ- ಬಿಂದು ಶ್ವೇತ ಪೂರ್ವಶುದ್ಧ ಆನಂದ ಧವಳ ಅನಿಮಿಷ ಸಂಗಮ ಶುದ್ಧ ಸಿದ್ಧ ಪ್ರಸಿದ್ಧ ತತ್ವವೆಂಬ ಪರಮಸೀಮೆ ಮುಖಂಗಳಾಗಿ, ಅಜಲೋಕದಲ್ಲಿ ಅದ್ವಯ, ನೆನಹಿನ ಕೊನೆಯ ಮೊನೆಯಲ್ಲಿ ಒಪ್ಪಿ ತೋರುವ ಧವಳತೆಯ ಬೆಳಗಿನ ರಂಜನ ಪ್ರವಾಹ ಮಿಗಿಲಾಗಿ, `ತ್ವಂ' ಪದವಾಯಿತ್ತು, ಮೀರಿ `ತ್ವಮಸಿ'ಯಾಯಿತ್ತು ಕಪಿಲಸಿದ್ಧಮಲ್ಲಿಕಾರ್ಜುನನೆಂಬ ನಾಮವ ನುಂಗಿಲೀಯವಾಯಿತ್ತು.
--------------
ಸಿದ್ಧರಾಮೇಶ್ವರ
ಶಿವಧ್ಯಾನದ ಕಡೆಯಲ್ಲಿ ಒಪ್ಪಿ ತೋರುವ ಸಂವಿತ್ತಿನ ತೃಪ್ತಿಯಂದ ತನ್ನ ಮರೆದ ಶರಣನು ಪರಮ ಪ್ರಕಾಶರೂಪನಾದ ಶಿವನ ಕೂಡಿ ಸರ್ವಜೀವರ ಹೃದಯದಲ್ಲಿದ್ದು, ಅವಕ್ಕೆ ಅರಿವ ಅರುಹಿಸಿ ಕೊಡುತ್ತ ಎಲ್ಲ ಕಡೆಯಲ್ಲಿ ಸುಖರಾಶಿಯಾದ ಚೈತನ್ಯಸ್ವರೂಪ ಪರಬ್ರಹ್ಮವೇ ತಾನಾಗಿಹನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣನು.
--------------
ಸ್ವತಂತ್ರ ಸಿದ್ಧಲಿಂಗ
ಮುತ್ತ ತೆತ್ತಿಸಿದ ಪದಕವೆನ್ನ ಕೊರಳಲ್ಲಿ ಕಟ್ಟಿದನಯ್ಯಾ. ಸೂತ್ರವನೆತ್ತಿದರೆ ಮುತ್ತಿಂಗಾರು ಅದರೊಳಗಾರು? ಒತ್ತೆಯ ಒಡವಿಂಗೆ ನಿತ್ಯವಾಗಿ ಒಪ್ಪಿ, ಸತ್ಯವಾಗೆತ್ತಿಕೊಂಡನು ತನ್ನೊಡಲೊಳಗೆ ಗುರುನಿರಂಜನ ಚನ್ನಬಸವಲಿಂಗ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಲ್ಲೆಂದಡೆ ಉಂಟೆಂಬುದೀ ಮಾಯೆ; ಒಲ್ಲೆನೆಂದಡೆ ಬಿಡದೀ ಮಾಯೆ ಎನಗಿದು ವಿಧಿಯೆ! ಚೆನ್ನಮಲ್ಲಿಕಾರ್ಜುನಯ್ಯಾ, ಒಪ್ಪಿ ಮರೆವೊಕ್ಕಡೆ ಮತ್ತುಂಟೆ ಕಾಯಯ್ಯಾ ಶಿವಧೋ !
--------------
ಅಕ್ಕಮಹಾದೇವಿ
ಎಲೆ ಕರುಣಿ, ಜನನಿಯ ಜಠರಕ್ಕೆ ತರಬೇಡವಯ್ಯ. ತಂದರೆ ಮುಂದೆ ತಾಪತ್ರಯಕ್ಕೊಳಗಾದ ತರಳೆಯ ದುಃಖದ ಬಿನ್ನಪವ ಕೇಳಯ್ಯ. ಆಚಾರಲಿಂಗಸ್ವರೂಪವಾದ ಘ್ರಾಣ, ಗುರುಲಿಂಗಸ್ವರೂಪವಾದ ಜಿಹ್ವೆ, ಶಿವಲಿಂಗಸ್ವರೂಪವಾದ ನೇತ್ರ, ಜಂಗಮಲಿಂಗಸ್ವರೂಪವಾದ ತ್ವಕ್ಕು, ಪ್ರಸಾದಲಿಂಗಸ್ವರೂಪವಾದ ಶ್ರೋತ್ರ, ಮಹಾಲಿಂಗಸ್ವರೂಪವಾದ ಪ್ರಾಣ, ಪಂಚಬ್ರಹ್ಮ ಸ್ವರೂಪವಾದ ತನು, ಇಂತಿವೆಲ್ಲವು ಕೂಡಿ ಪರಬ್ರಹ್ಮಸ್ವರೂಪ ತಾನೆಯಾಗಿ, ಆನೆಯ ರೂಪತಾಳಿ ಕೇರಿಯ ನುಸುಳುವ ಹಂದಿಯಂತೆ, ಮೆಟ್ಟುಗುಳಿಯೊತ್ತಿನ ಉಚ್ಚೆಯ ಬಚ್ಚಲೆಂಬ ಹೆಬ್ಬಾಗಿಲ ದಿಡ್ಡಿಯಲ್ಲಿ, ಎಂತು ನುಸುಳುವೆನಯ್ಯ?. ಹೇಸಿ ಹೇಡಿಗೊಂಡೆನಯ್ಯ, ನೊಂದೆನಯ್ಯ, ಬೆಂದೆನಯ್ಯ. ಬೇಗೆವರಿದು ನಿಂದುರಿದೆನಯ್ಯ. ಎನ್ನ ಮೊರೆಯ ಕೇಳಯ್ಯ ಮಹಾಲಿಂಗವೇ. ಎನ್ನ ಭವಕ್ಕೆ ನೂಂಕಬೇಡಯ್ಯ. ನಾನು ಅನಾದಿಯಲ್ಲಿ ಭೋಗಕ್ಕಾಸೆಯ ಮಾಡಿದ ಫಲದಿಂದ, ಅಂದಿಂದ ಇಂದು ಪರಿಯಂತರ ನಾನಾ ಯೋನಿಯಲ್ಲಿ ಬಂದು, ನಾಯಿಯುಣ್ಣದ ಓಡಿನಲ್ಲಿ ಉಂಡು, ನರಗೋಟಲೆಗೊಂಡೆನಯ್ಯ. ಎನಗೆ ಹೊನ್ನು ಬೇಡ, ಹೆಣ್ಣು ಬೇಡ, ಮಣ್ಣು ಬೇಡ, ಫಲವು ಬೇಡ, ಪದವು ಬೇಡ ನಿಮ್ಮ ಶ್ರೀಪಾದವನೊಡಗೂಡಲೂಬೇಡ, ಎನಗೆ ಪುರುಷಾಕಾರವೂ ಬೇಡವಯ್ಯ. ಎನ್ನ ಮನ ಒಪ್ಪಿ, ಪಂಚೈವರು ಸಾಕ್ಷಿಯಾಗಿ, ನುಡಿಯುತ್ತಿಪ್ಪೆನಯ್ಯಾ. ನಿಮ್ಮಾಣೆ, ಎನಗೊಂದ ಕರುಣಿಸಯ್ಯ ತಂದೆ, ಡೋಹರ ಕಕ್ಕಯ್ಯ, ಮಾದಾರ ಚೆನ್ನಯ್ಯ, ಅಂಬಿಗರ ಚೌಡಯ್ಯ ಇಂತಪ್ಪ ಶಿವಶರಣರ ಮನೆಯ ಬಾಗಿಲ ಕಾವ ಶುನಕನ ಮಾಡಿ ಎನ್ನ ನೀ ನಿಲಿಸಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಮಹಾವಿಂಧ್ಯಪರ್ವತದಲ್ಲಿ ಜ್ಯ್ಕೋರ್ಮಯವೆಂಬ ಪ್ರಜ್ವಲ ಸ್ಫಟಿಕ ಘಟದಲ್ಲಿ ಒಪ್ಪಿ ತೋರುವ ಜ್ಯೋತಿರ್ಮಯ ಲಿಂಗವೇ ನೀನು, ಸೂಕ್ಷ ್ಮವೇ ನೀನು. ಉರುತರ ಸಕಲ ಬ್ರಹ್ಮಾಂಡಂಗಳೆಲ್ಲ ನಿನ್ನ ರೋಮಕೂಪದ ಕೊನೆಯ ಮೊನೆಯ ಮೇಲೆ. ಸಕಲ ವ್ಯಾಪಿಯಡಗಿಪ್ಪಂಥ ಬ್ರಹ್ಮಾಂಡಂಗಳನ್ನು ಧರಿಸಿಪ್ಪ ನಿನ್ನ ಅನಂತ ವೇದಂಗಳೆಲ್ಲವು ನಿನ್ನೊಳಗೆ. ನೀನು ಸರ್ವವ್ಯಾಪ್ತಿಗೆ ಒಳಗಾದುದಿಲ್ಲ. ನಿನ್ನ ಮೀರಿದ ಆಧಿಕ್ಯ ಒಂದೂ ಇಲ್ಲ. ಘನತರಲಿಂಗವೆ ಗುರುಕರುಣದಿಂದ ಎನ್ನ ಕರಸ್ಥಲಕ್ಕೆ ಬಂದು ಸೂಕ್ಷ ್ಮವಾದೆಯಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ
--------------
ಸಿದ್ಧರಾಮೇಶ್ವರ
ಬಣ್ಣ ನುಂಗಿದ ಬಂಗಾರದಂತಾಯಿತ್ತು, ಈ ಅಂಗ. ಶಿಥಿಲವನವಗವಿಸಿದ ಸುರಾಳದಂತಾಯಿತ್ತು, ಈ ಅಂಗ. ಪಳುಕದ ಗಿರಿಯ ಉರಿ ನೆರೆದಂತಾಯಿತ್ತು, ಈ ಅಂಗ. ಸರಸಮಾಧಾನವನೆಯ್ದೆ ಬೆರೆದು ನೆರೆದಂತಾಯಿತ್ತು, ಈ ಅಂಗ. ಬಯಲು ಬಯಲೊಳಗಡಗಿ, ವಸ್ತು ವಸ್ತುವ ಕೂಡಿ, ಅರ್ಕೇಶ್ವರಲಿಂಗದಲ್ಲಿ ಒಪ್ಪಿ ಹೋಯಿತ್ತು, ಈ ಅಂಗ.
--------------
ಮಧುವಯ್ಯ
ಇಷ್ಟ ಬಿದ್ದಲ್ಲಿ ಎತ್ತಿ ಕಟ್ಟಿಕೊಳಲಾಗದು. ವ್ರತ ಕೆಟ್ಟುದ ಕಂಡು, ಇನ್ನು ತಪ್ಪೆನೆಂದಡೆ ಒಪ್ಪಿ ಕೂಡಿಕೊಳ್ಳಬಾರದು. ಸತಿ ಕೆಟ್ಟು ನಡೆದುದ ಕಂಡು ಆ ಗುಣ ಶುನಕಸ್ವಪ್ನದಂತೆ. ಇಂತೀ ಇವ ಕಂಡು ಮತ್ತೆ ಹಿಂಗದಿದ್ದೆನಾದಡೆ ಇಹಪರಕ್ಕೆ ಹೊರಗು, ಏಲೇಶ್ವರಲಿಂಗಕ್ಕೆ ದೂರ.
--------------
ಏಲೇಶ್ವರ ಕೇತಯ್ಯ
ಇತ್ತಲಾಗಿ,ಅದೇ ನಿರಾಕಾರಪರಿಪೂರ್ಣ ಪರಶಿವಮೂರ್ತಿಯೆ ನಿಜಗುರುಲಿಂಗಜಂಗಮಲೀಲೆಯ ಧರಿಸಿ, ಪಾವನಾರ್ಥವಾಗಿ ಪಂಚಮಹಾಪಾತಕಸೂತಕಂಗಳ ಬಾಹ್ಯಾಂತರಂಗಳಲ್ಲಿ ಮಹಾಜ್ಞಾನ ಕ್ರಿಯಾಚರಣದಿಂದ ಕಡಿದು ಕಂಡರಿಸಿ, ಬಿಡುಗಡೆಯನುಳ್ಳ ಹರಗಣಂಗಳಿಗೆ ನಿಜೇಷ*ಲಿಂಗ ಭಸಿತ ರುದ್ರಾಕ್ಷಿಗಳ ಕಾಯವೆನಿಸಿ, ಸತ್ಕ್ರಿಯಾಚಾರ ಭಕ್ತಿ ಸಾಧನೆಯ ನಿರ್ವಾಣಪದವಿತ್ತರು ನೋಡಾ. ಅಲ್ಲಿಂದ ಚಿತ್ಪಾದೋದಕ ಪ್ರಸಾದ ಮಂತ್ರವೆ ಪ್ರಾಣವೆನಿಸಿ, ಶಿವಯೋಗಾನುಸಂಧಾನದಿಂದ ಮಹಾಜ್ಞಾನದ ಚಿದ್ಬೆಳಗನಿತ್ತರು ನೋಡಾ. ಆ ಬೆಳಗೆ ತಾವಾದ ಶರಣಗಣಾರಾಧ್ಯ ಭಕ್ತಮಹೇಶ್ವರರು, ಅನ್ಯಮಣಿಮಾಲೆಗಳ ಧರಿಸಿ, ಅನ್ಯಜಪಕ್ರಿಯೆಗಳ ಮಾಡಲಾಗದು. ಅದೇನು ಕಾರಣವೆಂದಡೆ : ಹಿಂದೆ ಕಲ್ಯಾಣಪಟ್ಟಣದಲ್ಲಿ ಚೆನ್ನಮಲ್ಲಿಕಾರ್ಜುನಾರಾಧ್ಯರು, ಉಡುತಡಿ ಮಹಾದೇವಿಗಳು ಪುರುಷನ ಬಿಡುಗಡೆಯ ಮಾಡಿ, ವೈರಾಗ್ಯದೊಳ್ ಅಲ್ಲಮಪ್ರಭುವಿದ್ದೆಡೆಗೆ ಬಂದು ಶರಣಾಗತರಾಗಲು, ಆ ಪ್ರಭುಸ್ವಾಮಿಗಳು ಅವರೀರ್ವರ ಭಕ್ತಿಜ್ಞಾನವೈರಾಗ್ಯ ಸದಾಚಾರಕ್ರಿಯಾವರ್ತನೆಯ ನೋಡಿ ಸಂತೋಷಗೊಂಡು, ಇಂತಪ್ಪ ಸದ್ಧರ್ಮಿಗಳಂ ದಂಡನಾಥ ಮೊದಲಾಗಿ ಅಕ್ಕನಾಗಾಂಬಿಕೆಯು ಮೊದಲಾದ ಪ್ರಮಥಗಣಾದ್ಯರಿಗೆ ದರುಶನ ಸ್ಪರುಶನ ಸಂಭಾಷಣೆ ಪಾದೋದಕ ಪ್ರಸಾದಾನುಭಾವವೆಂಬ ಷಡ್ರಸಾಮೃತವ ಕೊಡಿಸಬೇಕೆಂದು, ತಮ್ಮ ಭಾವದ ಕೊನೆಯಲ್ಲಿ ಅಚ್ಚೊತ್ತಿ , ಹರುಷಾನಂದ ಹೊರಚೆಲ್ಲಿ , ಆಗವರೀರ್ವರಂ ಕೈವಿಡಿದು ಕಲ್ಯಾಣಪಟ್ಟಣಕ್ಕೆ ಹೋಗಿ, ಅನಾದಿ ಪ್ರಮಥಗಣಾಧೀಶ್ವರರ ಸಂದರ್ಶನವಾಗಬೇಕೆಂದು ಕರೆದಲ್ಲಿ , ಆಗ ಮಹಾದೇವಿಯಮ್ಮನು ಸಂತೋಷಂಗೊಂಡು, ಹರಹರಾ ಸ್ವಾಮಿ ಅವರಲ್ಲಿ ಸನ್ಮಾರ್ಗ ನಡೆನುಡಿಗಳೇನೆಂದು ಬೆಸಗೊಳಲು, ಅವರು ಕೇವಲ ಪರಿಪೂರ್ಣಜ್ಯೋತಿರ್ಮಯ ಲಿಂಗಜಂಗಮದಲ್ಲಿ ಕೂಟಸ್ಥರಾಗಿ, ಬಾಹ್ಯಾಂತರಂಗದೊಳ್ ಪರಮಪಾತಕ ಸೂತಕ ಅನಾಚಾರ ಅಜ್ಞಾನ ಅಪಶೈವ ಅಸತ್ಯವಿರಹಿತರಾಗಿ, ನಿರ್ವಂಚಕ ನಿಃಪ್ರಪಂಚ ನಿರ್ವಾಣ ನಿಃಕಾಮ ಸತ್ಯಶುದ್ಧಕಾಯಕ ಸದಾಚಾರ ಕ್ರಿಯಾಜ್ಞಾನಾನಂದ ನಡೆನುಡಿಯುಳ್ಳ ಸದ್ಧರ್ಮ ಅಪಾತ್ರ ಸತ್ಪಾತ್ರವರಿದ ಶಿವಸನ್ಮಾನಿತರು, ನಿಜಾನಂದಯೋಗತೂರ್ಯರು, ಕೇವಲ ಪರಶಿವನಪ್ಪಣೆವಿಡಿದು ಚಿಚ್ಛಕ್ತಿಗಳೊಡಗೂಡಿ ಪಾವನಾರ್ಥ ಅಷ್ಟಾವರಣ ನಿಜವೀರಶೈವಮತೋದ್ಧಾರಕ ಮಹಿಮರ ಚರಣದ ದರುಶನಮಾತ್ರದಿಂದಿವೆ ಜ್ಯೋತಿರ್ಮಯ ಕೈವಲ್ಯಪದವಪ್ಪುದು ತಪ್ಪದುಯೆಂದು ಅಲ್ಲಮನುಸುರಲು, ಆಗ ಸಮ್ಯಕ್‍ಜ್ಞಾನಿ ಮಹಾದೇವಿಯರು ಸತ್ಕ್ರಿಯಾಮೂರ್ತಿ ಚೆನ್ನಮಲ್ಲಿಕಾರ್ಜುನಗುರುವರನು ಸಂತೋಷಗೊಂಡು, ತ್ರಿವಿಧರು ಕಲ್ಯಾಣಕ್ಕೆ ಅಭಿಮುಖವಾಗಲು, ಆ ಪ್ರಶ್ನೆಯು ಹಿರಿಯ ದಂಡನಾಥಂಗೆ ಲಿಂಗದಲ್ಲಿ ಪ್ರಸನ್ನವಾಗಲು, ಆಗ ಸಮಸ್ತಪ್ರಮಥರೊಡಗೂಡಿ, ಆ ಅಲ್ಲಮರು ಸಹಿತ ತ್ರಿವಿಧರು ಬರುವ ಮಾರ್ಗಪಥದಲ್ಲಿ ಅಡಿಯಿಡುವುದರೊಳಗೆ, ಇಳೆಯಾಳ ಬ್ರಹ್ಮಯ್ಯನೆಂಬ ಶಿವಶರಣನು ಈ ತ್ರಿವಿಧರಿಗೆ ಲಿಂಗಾರ್ಚನಾರ್ಪಣಕ್ಕೆ ಶರಣಾಗತನಾಗಿರಲು, ಅವರು ಅರ್ಚನಾರ್ಪಣಕ್ಕೆ ಬಪ್ಪದೆ ಇರ್ಪಷ್ಟರೊಳಗೆ ಹಿರಿದಂಡನಾಥ ಪ್ರಮಥರೊಡಗೂಡಿ, ಅಲ್ಲಮ ಮೊದಲಾದ ತ್ರಿವಿಧರಿಗೆ ವಂದಿಸಿ, ಲಿಂಗಾರ್ಚನಾರ್ಪಣಕ್ಕೆ ಶರಣುಶರಣಾರ್ಥಿಯೆನಲು, ಆಗ ಮಹಾದೇವಿಯಮ್ಮನವರು ಒಂದು ಕಡೆಗೆ ಕೇಶಾಂಬರವ ಹೊದೆದು, ಶರಣುಶರಣಾರ್ಥಿ ನಿಜವೀರಶೈವ ಸದ್ಧರ್ಮ ದಂಡನಾಥ ಮೊದಲಾದ ಸಮಸ್ತ ಗಣಾರಾಧ್ಯರುಗಳ ಶ್ರೀಪಾದಪದ್ಮಂಗಳಿಗೆಯೆಂದು ಸ್ತುತಿಸುವ ದನಿಯ ಕೇಳಿ, ಸಮಸ್ತ ಗಣಸಮ್ಮೇಳವೆಲ್ಲ ಒಪ್ಪಿ ಸಂತೋಷಗೊಂಡು, ಶರಣೆಗೆ ಶರಣೆಂದು ಬಿನ್ನಹವೆನಲು, ನಿಮಗಿಂದ ಮೊದಲೆ ಶರಣುಹೊಕ್ಕ ಶಿವಶರಣೆಗೆ ಏನಪ್ಪಣೆ ಸ್ವಾಮಿಯೆನಲು, ಆಗ ಆ ಬ್ರಹ್ಮಯ್ಯನು ಅಲ್ಲಮಪ್ರಭು ಚನ್ನಮಲ್ಲಿಕಾರ್ಜುನ ದಂಡನಾಥ ಮೊದಲಾದ ಸಮಸ್ತಪ್ರಮಥಗಣ ಸಮ್ಮೇಳಕ್ಕೆ ಶರಣುಶರಣಾರ್ಥಿ, ಈ ತನು-ಮನ-ಧನವು ನಿಮಗೆ ಸಮರ್ಪಣೆಯಾಗಬೇಕೆಂದು ಅಭಿವಂದಿಸಲು, ಆಗ ಕಲಿಗಣನಾಥ ಕಲಕೇತಯ್ಯಗಳು ನೀವು ನಿಮ್ಮ ಪ್ರಮಥರು ಅರೆಭಕ್ತಿಯಲ್ಲಾಚರಿಸುತ್ತಿಪ್ಪಿರಿ, ನಿಮ್ಮ ಗೃಹಕ್ಕೆ ನಿರಾಭಾರಿವೀರಶೈವಸಂಪನ್ನೆ ಮಹಾದೇವಿಯಮ್ಮನವರು ಬರೋದುಯೆಂಥಾದ್ದೊ ನೀವೆ ಬಲ್ಲಿರಿ. ಆ ಮಾತ ನೀವೆ ವಿಚಾರಿಸಬೇಕೆಂದು ನುಡಿಯಲು, ಆಗ ಬ್ರಹ್ಮಯ್ಯಗಳು ತಮ್ಮ ಕರ್ತನಾದ ಕಿನ್ನರಿಯ ಬ್ರಹ್ಮಯ್ಯನ ಕಡೆಗೆ ದೃಷ್ಟಿಯಿಟ್ಟು ನೋಡಲು, ಆ ಕಿನ್ನರಿಯ ಬ್ರಹ್ಮಯ್ಯನು ಹರಹರಾ, ಶರಣುಶರಣಾರ್ಥಿ, ನಮಗೆ ತಿಳಿಯದು, ನಿಮ್ಮ ಕೃಪೆಯಾದಲ್ಲಿ ನಮ್ಮ ಅರೆಭಕ್ತಿಸ್ಥಲವನಳಿದುಳಿದು, ನಿಮ್ಮ ಸದ್ಧರ್ಮ ನಿಜಭಕ್ತಿಮಾರ್ಗವ ಕರುಣಿಸಿ, ದಯವಿಟ್ಟು ಪ್ರತಿಪಾಲರ ಮಾಡಿ ರಕ್ಷಿಸಬೇಕಯ್ಯಸ್ವಾಮಿಯೆಂದು ಅಭಿವಂದಿಸಲು, ಅಯ್ಯಾ, ನಿಮ್ಮಿಬ್ಬರಿಂದಲೇನಾಯ್ತು ? ಇನ್ನೂ ಅನೇಕರುಂಟುಯೆಂದು ಕಲಿಗಣ ಕಲಕೇತರು ನುಡಿಯಲು, ಹರಹರಾ, ಪ್ರಭುಸ್ವಾಮಿಗಳೆ ನಿಮ್ಮಲ್ಲಿ ನುಡಿ ಎರಡಾಯಿತ್ತು , ಅದೇನು ಕಾರಣವೆಂದು ಮಹಾದೇವಿಯಮ್ಮನವರು ಪ್ರಭುವಿನೊಡನೆ ನುಡಿಯಲು, ಆಗ ಆ ಪ್ರಭುಸ್ವಾಮಿಗಳು ಅಹುದಹುದು ತಾಯಿ ನಾವು ನುಡಿದ ನುಡಿ ದಿಟ ದಿಟವು. ನಿಮ್ಮಂಶವಲ್ಲವಾದಡೆ ನಿಮಗಡಿಯಿಡಲಂಜೆಯೆಂದು ನುಡಿಯಲು, ಹರಹರಾ, ಹಾಗಾದೊಡೆ ಅವರ ಬಿನ್ನಹಂಗಳ ಕೈಕೊಂಡು ಅವರಲ್ಲಿರುವ ಅಸತ್ಯಾಚಾರದವಗುಣಗಳ ನಡೆನುಡಿಗಳ ಪರಿಹರಿಸಬೇಕು. ಮುಸುಂಕೇತಕೆ ಸ್ವಾಮಿಯೆಂದು ಮಹಾದೇವಮ್ಮನವರು ನುಡಿಯಲು, ಆಗ ಹಿರಿದಂಡನಾಥನು ಹರಹರಾ ನಮೋ ನಮೋಯೆಂದು ಕಲಿಗಣನಾಥ ಕಲಕೇತರೆ ನಮ್ಮವಗುಣಂಗಳ ಪರಿಹರಿಸಿ, ನಿಮ್ಮ ಕವಳಿಗೆಗೆ ಯೋಗ್ಯರಾಗುವಂತೆ ಪ್ರತಿಜ್ಞೆಯ ಮಾಡಿ, ನಮ್ಮ ಬಿನ್ನಪವನವಧರಿಸಿ ಲಿಂಗಾರ್ಚನಾರ್ಪಣಗಳ ಮಾಡಬೇಕು ಗುರುಗಳಿರಾಯೆಂದು ಅಭಿವಂದಿಸಲು, ಆ ನುಡಿಗೆ ಸಮಸ್ತಗಣ ಪ್ರಮಥಗಣಾರಾಧ್ಯರೆಲ್ಲ ಅಭಿವಂದಿಸಿ, ನಮ್ಮರೆಭಕ್ತಿ ನಿಲುಕಡೆಯೇನೆಂದು ಹಸ್ತಾಂಜುಲಿತರಾಗಿ ಇದಿರಿಗೆ ನಿಲಲು, ಆಗ ಆ ಕಲಿಗಣನಾಥ ಕಲಕೇತಯ್ಯಗಳು ನುಡಿದ ಪ್ರತ್ಯುತ್ತರವು ಅದೆಂತೆಂದೊಡೆ: ಅಯ್ಯಾ, ಕೈಲಾಸದಿಂದ ಪರಶಿವಮೂರ್ತಿ ನಿಮಗೆ ಅಷ್ಟಾವರಣ ಪಂಚಾಚಾರ ಸತ್ಯಶುದ್ಧ ನಡೆನುಡಿ ವೀರಶೈವಮತ ಸದ್ಭಕ್ತಿ ಮಾರ್ಗವ ಮತ್ರ್ಯಲೋಕದ ಮಹಾಗಣಗಳಿಗೆ ತೋರಿ, ಎಚ್ಚರವೆಚ್ಚರವೆಂದು ಬೆನ್ನಮೇಲೆ ಚಪ್ಪರಿಸಿ, ನಿಮ್ಮ ತನುಮನಧನವ ಶ್ರೀಗುರುಲಿಂಗಜಂಗಮಕ್ಕೆ ಸಮರ್ಪಿಸಿ, ವರಗುರುಲಿಂಗಜಂಗಮದ ಮಹಾಬೆಳಗಿನೊಳಗೆ ಬನ್ನಿರೆಂದು ಪ್ರತಿಜ್ಞೆಯ ಮಾಡಿ, ಪಂಚಪರುಷವ ಕೊಟ್ಟು, ಆ ಜಡಶಕ್ತಿಸಮ್ಮೇಳನೆನಿಸಿ ಕಳುಹಿಕೊಟ್ಟಲ್ಲಿ, ನೀವು ಬಂದು, ಎರಡುತೆರದಭಕ್ತಿಗೆ ನಿಂದುದೆ ಅರೆಭಕ್ತಿಸ್ಥಲವೆಂದು ನುಡಿಯಲು, ಆ ಎರಡುತೆರದ ಭಕ್ತಿ ವಿಚಾರವೆಂತೆಂದಡೆ : ಒಮ್ಮೆ ನಿಮ್ಮ ತನು-ಮನ-ಧನ, ನಿಮ್ಮ ಸತಿಸುತರ ತನುಮನಧನಂಗಳು ಶೈವಮತದವರ ಭೂಪ್ರತಿಷಾ*ದಿಗಳಿಗೆ ನೈವೇದ್ಯವಾಗಿರ್ಪವು. ಆ ನೈವೇದ್ಯವ ತಂದು ಶ್ರೀಗುರುಲಿಂಗಜಂಗಮಕ್ಕೆ ನಮ್ಮ ತನುಮನಧನವರ್ಪಿತವೆಂದು ಹುಸಿ ನುಡಿಯ ನುಡಿದು, ಎರಡು ಕಡೆಗೆ ತನುಮನಧನಂಗಳ ಚೆಲ್ಲಾಡಿ, ಅಶುದ್ಧವೆನಿಸಿ ಶುದ್ಧಸಿದ್ಧಪ್ರಸಿದ್ಧಪ್ರಸಾದ ನಮ್ಮ ತನುಮನಧನಂಗಳೆಂದು, ಕಾಯಾರ್ಪಣ ಕರಣಾರ್ಪಣ ಭಾವಾರ್ಪಣವೆಂದು ಒಪ್ಪವಿಟ್ಟು ನುಡಿವಲ್ಲಿ, ನೀವು ವೀರಶೈವಸಂಪನ್ನರೆಂತಾದಿರಿ ? ನಿಮ್ಮಲ್ಲಿ ಲಿಂಗಾರ್ಚನಾರ್ಪಣವೆಂತಾಗಬೇಕು ? ಹೇಳಿರಯ್ಯ ಪ್ರಮಥರೆಯೆಂದು ನುಡಿಯಲು, ಆಗ್ಯೆ ಏಳುನೂರಾಯೆಪ್ಪತ್ತು ಅಮರಗಣಂಗಳೆಲ್ಲ ಬೆರಗಾಗಿ, ಆ ಹರಹರಾ ಅಹುದಹುದೆಂದು ಬಂದ ನುಡಿ ತಪ್ಪಿ ನಡೆದೆವೆಂದು ಒಪ್ಪಿ ಒಡಂಬಟ್ಟು, ಅರೆಭಕ್ತಿ ಮಾಡುವವರ ವಿಚಾರಿಸಿ, ಕಡೆಗೆ ತೆಗೆದು ಗಣಿತವ ಮಾಡಿದಲ್ಲಿ, ಮುನ್ನೂರರವತ್ತು ಗಣಂಗಳಿರ್ಪರು. ಆ ಗಣಂಗಳ ಸಮ್ಮೇಳವ ಕೂಡಿಸಿ ಒಂದೊಡಲಮಾಡಿ, ನಿಮ್ಮೊಳಗಣ ಪ್ರೀತಿಯೇನೆಂದು ಮಹಾದೇವಮ್ಮನವರು ನುಡಿದು ಹಸ್ತಾಂಜುಲಿತರಾಗಿ ಬೆಸಗೊಳಲು, ಆಗ ಮುನ್ನೂರರವತ್ತು ಗಣಂಗಳು ನುಡಿವ ಪ್ರತ್ಯುತ್ತರ ಅದೆಂತೆಂದಡೆ : ಹರಹರಾ, ನಾವು ಬಂದ ಬಟ್ಟೆ ಅಹುದಹುದು, ಇಲ್ಲಿ ನಿಂದ ನಡೆ ಅಹುದಹುದು. ನಾವು ಕ್ರಿಯಾಮಾರ್ಗವ ಬಿಟ್ಟು ಮಹಾಜ್ಞಾನಮಾರ್ಗವ ಭಾವಿಸಿದೆವು, ಎಡವಿಬಿದ್ದೆವು, ತಪ್ಪನೋಡದೆ, ಒಪ್ಪವಿಟ್ಟು ಉಳುಹಿಕೊಳ್ಳಿರಯ್ಯ. ನಡೆಪರುಷ, ನುಡಿಪರುಷ, ನೋಟಪರುಷ, ಹಸ್ತಪರುಷ, ಭಾವಪರುಷರೆ ತ್ರಾಹಿ ತ್ರಾಹಿ, ನಮೋ ನಮೋಯೆಂದು ಅಭಿವಂದಿಸಲು, ಆಗ ಚೆನ್ನಮಲ್ಲಾರಾಧ್ಯರು, ನೀವು ತಪ್ಪಿದ ತಪ್ಪಿಗೆ ಆಜ್ಞೆಯೇನೆಂದು ನುಡಿಯಲು, ಆಗ್ಯೆ ಮುನ್ನೂರರವತ್ತು ಗಣಂಗಳು ನುಡಿದ ಪ್ರತ್ಯುತ್ತರವದೆಂತೆಂದೊಡೆ : ಅಯ್ಯಾ, ನಾವು ತಪ್ಪಿದ ತಪ್ಪಿಂಗೆ ಕ್ರಿಯಾಲೀಲೆಸಮಾಪ್ತಪರ್ಯಂತರವು ನಾವು ಮುನ್ನೂರರವತ್ತು ಕೂಡಿ, ನಿತ್ಯದಲ್ಲು ನಿಮಗೆ ಗುರುಲಿಂಗಜಂಗಮಕ್ಕೆ ಆರಾಧನೆಯ ಮಾಡಿ, ಕೌಪ ಕಟಿಸೂತ್ರ ಹುದುಗು ಶಿವದಾರ ವಿಭೂತಿ ವಸ್ತ್ರ ಪಾವುಡ ರಕ್ಷೆ ಪಾವುಗೆಗಳ ಪರುಷಕೊಂದು ಬಿನ್ನಹಗಳ ಸತ್ಯಶುದ್ಧ ಕಾಯಕವ ಮಾಡಿ, ಋಣಪಾತಕರಾಗದೆ, ನಿಮ್ಮ ತೊತ್ತಿನ ಪಡಿದೊತ್ತೆನಿಸಿರಯ್ಯಯೆಂದು ಅಭಿವಂದಿಸಲು, ಆಗ ಅಲ್ಲಮಪ್ರಭು ಮೊದಲಾದ ಘನಗಂಭೀರರೆಲ್ಲ ಒಪ್ಪಿ, ಶೈವಾರಾಧನೆಗಳಂ ಖಂಡಿಸಿ, ವೀರಶೈವ ಗುರುಲಿಂಗಜಂಗಮ ಭಕ್ತರೆ ಘನಕ್ಕೆ ಮಹಾಘನವೆಂದು ನುಡಿ ನಡೆ ಒಂದಾಗಿ, ಚೆನ್ನಮಲ್ಲಾರಾಧ್ಯರ ನಿರೂಪದಿಂದ ದಂಡನಾಥನ ಭಕ್ತಿಪ್ರಿಯರಾದ ಲಕ್ಷದಮೇಲೆ ತೊಂಬತ್ತಾರುಸಾವಿರ ಘನದೊಳಗೆ ಮಾರ್ಗಕ್ರಿಯೆ ಮೀರಿದ ಕ್ರಿಯಾಚರಣೆಸಂಬಂಧ ಸ್ವಸ್ವರೂಪ ಜ್ಞಾನಾಚಾರ ನಡೆನುಡಿ ಅಚ್ಚಪ್ರಸಾದ ನಿಚ್ಚಪ್ರಸಾದ ಸಮಯಪ್ರಸಾದವೆ ತಮಗೆ ಅಂಗ ಮನ ಪ್ರಾಣವಾಗಿ, ಮೊದಲಾದ ಚಿತ್ಕಲಾಪ್ರಸಾದ ಸಲ್ಲದ ಗಣಂಗಳ ಕಲಿಗಣನಾಥ ಕಲಕೇತರು ಖಂಡಿಸಿ ಆ ಹನ್ನೆರಡುಸಾವಿರಮಂ ತೆಗೆದು ಚೆನ್ನಮಲ್ಲಾರಾಧ್ಯರಿಗೆ ತೋರಲು, ಅವರು ಗಣಸಮೂಹಂಗಳೆಲ್ಲ ಸಂತೋಷದಿಂದ ಸನ್ಮತಂಬಟ್ಟು ಒಪ್ಪಿದ ತದನಂತರದೊಳು, ಪ್ರಭುಸ್ವಾಮಿಗಳು ಅಯ್ಯಾ, ದಂಡನಾಥ ಮೊದಲಾದ ಅಸಂಖ್ಯಾತ ಪ್ರಮಥಗಣಂಗಳೆ ಇನ್ನು ಹಿಂದಣ ಅರೆಭಕ್ತಿಸ್ಥಲವ ಮೆಟ್ಟಿದ ಪುತ್ರ ಮಿತ್ರ ಕಳತ್ರರ ಒಡಗೂಡಿ ಬಳಸಿದೊಡೆ, ಅಷ್ಟಾವರಣ ಪಂಚಾಚಾರಕ್ಕೆ ಹೊರಗೆಂದು ನಿಮ್ಮ ಗಣ ಮೆಟ್ಟಿಗೆಯಲಿ ಪಾವುಡವ ಕೊರಳಿಗೆ ಸುತ್ತಿ, ಭವದತ್ತ ನೂಂಕಿ, ಕಾಮಕಾಲರ ಪಾಶಕ್ಕೆ ಕೊಟ್ಟೆವೆಂದು ನುಡಿಯಲು, ಆ ಮಾತಿಗೆ ದಂಡನಾಥ ಮೊದಲಾದ ಅಚ್ಚಪ್ರಸಾದಿ ನಿಚ್ಚಪ್ರಸಾದಿ ಸಮಯಪ್ರಸಾದಿ ಚಿತ್ಕಲಾಪ್ರಸಾದಿಗಣಂಗಳೆಲ್ಲ ಎದ್ದು , ಹಸ್ತಾಂಜುಲಿತರಾಗಿ, ಹಸಾದ ಹಸಾದವೆಂದು ಕೈಕೊಂಡು, ಪರಮಪಾತಕಸೂತಕನಾಚರಂಗಳಂ ವಿಡಂಬಿಸಿ, ಶಿವಲಿಂಗಲಾಂಛನಯುಕ್ತರಾದ ಶಿವಜಂಗಮದ ಭಿಕ್ಷಾನ್ನದ ಶಬ್ದಮಂ ಕೇಳಿ, ಕ್ಷುಧೆಗೆ ಭಿಕ್ಷೆ, ಸೀತಕ್ಕೆ ವಸನಮಂ ಸಮರ್ಪಿಸಿ ಹಿರಿಕಿರಿದಿನ ನೂನಕೂನಂಗಳಂ ನೋಡದೆ ಶಿವರೂಪವೆಂದು ಭಾವಿಸಿ, ಅಲ್ಲಿ ಚೆನ್ನಮಲ್ಲಿಕಾರ್ಜುನಾರಾಧ್ಯ ಕಲಿಗಣನಾಥ ಕಲಕೇತರು ಖಂಡಿಸಿದ ಹನ್ನೆರಡುಸಾವಿರ ಪರಶಿವಜಂಗಮದೊಡನೆ ತೀರ್ಥಪ್ರಸಾದಾನುಭಾವ ಸಮರಸದಾಚರಣೆಯಂ ಬಳಸಿ ಬ್ರಹ್ಮಾನಂದರಾಗಿ, ಚಿತ್ಕಲಾಪ್ರಸಾದಿ ಜಂಗಮದೊಡವೆರೆದು, ಅಚ್ಚಪ್ರಸಾದಿಗಳು ಅಚ್ಚಪ್ರಸಾದಿಗಳೊಡವೆರೆದು, ನಿಚ್ಚಪ್ರಸಾದಿ ನಿಚ್ಚಪ್ರಸಾದಿಗಳೊಡವೆರೆದು, ಸಮಯಪ್ರಸಾದಿ ಸಮಯಪ್ರಸಾದಿಗಳೊಡವೆರೆದು ಒಂದೊಡಲಾಗಿ, ಚಿತ್ಕಲಾಪ್ರಸಾದಿಗಳು ತಮ್ಮಾನಂದದಿಂದ ಅಚ್ಚಪ್ರಸಾದಿಸ್ಥಲವನಾಚರಿಸಿದೊಡೆ ಬಹುಲೇಸು, ನಿಚ್ಚಪ್ರಸಾದಿ ಸಮಯಪ್ರಸಾದಿಗಳು ಅಚ್ಚಪ್ರಸಾದಿಸ್ಥಲವನಾಚರಿಸಿದೊಡೆ ಉತ್ತಮಕ್ಕುತ್ತಮ, ಅಚ್ಚಪ್ರಸಾದಿ ನಿಚ್ಚಪ್ರಸಾದಿಸ್ಥಲಕೆ ನಿಂದಡೆ ಅಯೋಗ್ಯವೆನಿಸುವುದು. ನಿಚ್ಚಪ್ರಸಾದಿ ಸಮಯಪ್ರಸಾದಿಸ್ಥಲಕೆ ನಿಂದೊಡೆ ಅಯೋಗ್ಯರೆನಿಸುವರು. ಈ ವರ್ಮಾದಿವರ್ಮಮಂ ತ್ರಿಕರಣದಲ್ಲಿ ಅರಿದು ಮರೆಯದೆ ಸಾವಧಾನದೆಚ್ಚರದೊಡನೆ ಲಿಂಗಾಂಗಸಮರಸೈಕ್ಯದೊಡನೆ ಕೂಡಿ ಎರಡಳಿದಿರಬಲ್ಲಾತ ನಿರವಯಪ್ರಭು ಮಹಾಂತ ತಾನೆ ಕಾಣಾ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
--------------
ಮೂರುಸಾವಿರ ಮುಕ್ತಿಮುನಿ
ಅಪ್ಪು ಫಲವ ನುಂಗಿ, ಫಲ ಅಪ್ಪುವ ನುಂಗಿ, ಒಪ್ಪಿ ಗಟ್ಟಿಗೊಂಡ ಭೇದ[ವೆ] ಭಕ್ತಿಜ್ಞಾನ. ರುಚಿಯ ಜಿಹ್ವೆ ನುಂಗಿ, ಜಿಹ್ವೆಯ ರುಚಿ ನುಂಗಿ, ಈ ಉಭಯ[ದ] ಭೇದವೆಲ್ಲಿ[ಯೂ] ಭಿನ್ನವಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ನಿಜ ನಿಶ್ಚಯವಾದಲ್ಲಿ ಚಿಲುಮೆ ಜಲ, ಸಕಲರುಚಿ, ವಿಚ್ಛಂದವಾಗಿ ಬಯಕೆಯ ಬಿಟ್ಟುದೆ ಲವಣನಾಸ್ತಿ. ಸರ್ವಕರಣೇಂದ್ರಿಯಂಗಳ ಸಂಸರ್ಗಕ್ಕೆ ಮನವನೀಯದಿದುದೆ ಭವಿ ವಿರೋಧ. ಉಚಿತ ತತ್ಕಾಲಂಗಳಲ್ಲಿ ಅಪ್ಯಾಯನವರಿತು ವಿಶ್ರಮಿಸೂದೆ ಕೃತ್ಯದ ಕಟ್ಟಣೆ. ಮನಬಂದಂತೆ ನುಡಿದು, ತನುಬಂದಂತೆ ಆಡಿ, ನಿಂದಿಹ ಸ್ಥಿತಿಯ ತಾನಾಡಿ, ಹಲಬರ ಕೈಯಲ್ಲಿ ಕೇಳಿ, ಇಂತೀ ಗುಣಕ್ಕೆ ಒಪ್ಪಿ, ಭಕ್ತನೆಂಬ ಕೃತ್ಯದ ಮತ್ತರನೊಪ್ಪ ಬಂಕೇಶ್ವರಲಿಂಗ.
--------------
ಸುಂಕದ ಬಂಕಣ್ಣ
ಅಂಗಕ್ಕೆ ಆಚರಣೆ, ಮನಕ್ಕೆ ನಿರ್ಮಲ ಮನೋಹರವಾಗಿ, ಸಕಲದ್ರವ್ಯಪದಾರ್ಥಂಗಳ ಬಾಹ್ಯದಲ್ಲಿ ಕಂಡು, ಅಂತರಂಗದಲ್ಲಿ ಪ್ರಮಾಣಿಸಿ, ತನ್ನ ಭಾವಕ್ಕೆ ಒಪ್ಪಿದುದ ಒಪ್ಪಿ, ಅಲ್ಲದುದ ಬಿಟ್ಟ ನಿಶ್ಚಯ ನಿಜವ್ರತಾಂಗಿ ಜಗದ ಹೆಚ್ಚು ಕುಂದಿನವರ ಭಕ್ತರೆಂದು ಒಪ್ಪುವನೆ? ಏಲೇಶ್ವರಲಿಂಗವಾಯಿತ್ತಾದಡು ಕಟ್ಟಳೆಯ ವ್ರತಕ್ಕೆ ಕೃತ್ಯದೊಳಗಾಗಿರಬೇಕು.
--------------
ಏಲೇಶ್ವರ ಕೇತಯ್ಯ
-->