ಅಥವಾ

ಒಟ್ಟು 13 ಕಡೆಗಳಲ್ಲಿ , 5 ವಚನಕಾರರು , 10 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಸತ್ತೆ ಸಂಸಾರಸಂಗಕ್ಕೆ, ಬೇಸತ್ತೆ ಸಂಸಾರಸಂಗಕ್ಕೆ. ಸಂಸಾರಸಂಗದಿಂದ ಓಸರಿಸಿ ಒಯ್ಯನೆ ಕಂದಿ ಕುಂದಿ, ಭವಗಿರಿಯ ಸುತ್ತುತ್ತಿದ್ದೆನಯ್ಯಾ. ಅಯ್ಯಾ, ಅಯ್ಯಾ ಎಂದು ಒಯ್ಯನೆ ಒದರಿದರೆ `ಓ' ಎನ್ನಲೊಲ್ಲೇಕೆಲೊ ಅಯ್ಯ ? ನೀ ಪಡೆದ ಸಂಸಾರ ಸುಖ ದುಃಖ, ನೀನೆ ಬೇಗೆಯನಿಕ್ಕಿ, ನೀನೊಲ್ಲೆನೆಂದರೆ ನಾ ಬಿಡೆ, ನಾ ಬಿಡೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಅಯ್ಯಾ, ನಾನೆಂಬುದನು ಒಯ್ಯನೆ ಒಯ್ಯನೆ ಮರೆದೆ. ಅಯ್ಯಾ, ನೀ ಗುರುರಾಗಿ ಕರುಣದಿಂದ ಒಯ್ಯನೆ ಬಂದೆನ್ನ `ಅಯ್ಯೊ ಮಗನೆ' ಎಂದು ಕೈವಿಡಿದು ತೆಗೆದೆನ್ನ ಸಲಹಿರಿ ಕರುಣದಿಂದ. ಆನೀಗ ನಿಮ್ಮ ಅವ್ಯಯದ ಪದಕಾನು ಮೂಲನಾದೆ ಕಪಿಲಸಿದ್ಧಮಲ್ಲಿಕಾರ್ಜುನ
--------------
ಸಿದ್ಧರಾಮೇಶ್ವರ
ಪ್ರಸಾದತತ್ವದ ಪ್ರಾದೇಶಿಕನು ನೀನೆ, ಸಾದಾಖ್ಯತತ್ವಗಳ ಸಮನಿಸದಿಹ ನಾದಬಿಂದುಕಳೆಯ ಆಮಧ್ಯಾವಸಾನ ಮೂದೇವರಿಗೆ ತಾನು ಶಕ್ತವಲ್ಲಾ. ಅವ್ವೆಯ ಕರದಲ್ಲಿ ಅವ್ಯಯ ತಾನಿಪ್ಪ ಒಯ್ಯನೆ ನಡೆಯಯ್ಯ ಮಠದೊಳಯಿಂಕೆ. ಮಠದೊಳಗಣ ಭೇದ ಕುಟಿಲಕ್ಕೆ ಇಂಬಿಲ್ಲ, ಮಠವ ಶುದ್ಧಿಯ ಮಾಡೆಲೆ ಮರುಳು ತಾಯೆ. ಅಡಿಗಡಿಗೆ ಸಂಗಮದ ನುಡಿಯ ನೀನಾಡಿ ಒಡಗೂಡವ್ವಾ ಕಪಿಲಸಿದ್ಧಮಲ್ಲಿಕಾರ್ಜುನನಾ.
--------------
ಸಿದ್ಧರಾಮೇಶ್ವರ
ಓಡ ಹಿಡಿದವನ ಕೈ ಮಸಿಯೆಂಬುದ ನಾಡೆಲ್ಲ ಬಲ್ಲರು. ಅವನ ಕೂಡೆ ಆಡಲಾಗದು ಅಯ್ಯಾ, ತನಗಾ ಮಸಿ ಹತ್ತೂದಾಗಿ. ಲಿಂಗವಿರೋಧಿಯ ಕೈವಿಡಿದಾಡುವವ ಮುನ್ನವೆ ವ್ರತಗೇಡಿ. ಅಂಥವನ ಸಂಗ ಬೇಡಯ್ಯಾ, ತನಗಾ ಭಂಗ ಬಂದುದಾಗಿ. ಅದೆಂತೆಂದಡೆ : ಜಗದ ಕರ್ತ ಶಿವನ ವಿರೋಧವ ಮಾಡಿ ದಕ್ಷನೊಬ್ಬ ಯಾಗವನಿಕ್ಕಲು, ತೆತ್ತೀಸಕೋಟಿದೇವರ್ಕಳೆಲ್ಲಾ ತೊತ್ತಳದುಳಿಸಿಕೊಂಡು, ನುಚ್ಚುನುರಿಯಾಗಿ ಹೋದರು ನೋಡಾ, ಅವನಂಗ ಸಂಗದಲ್ಲಿದ ಕಾರಣ. ಗೆಲ್ಲ ಸೋಲಕೆ ಇಕ್ಕು ಮುಂಡಿಗೆ, ಏರು ಮುಂಡಿಗೆಯೆಂಬ ಮಚ್ಚರಕ್ಕೆ ಮುಂದುವಿಡಿದು ಮುಡುಹಿಕ್ಕಿ ಕೆಲದಾಡುವರೆಲ್ಲಾ. ತಮ್ಮ ಮನದಲ್ಲಿ ತಾವರಿದು ಒಯ್ಯನೆ ತೊಲಗುವರು. ಮೇಲೆ ಲಿಂಗ ನಿರೂಪದಿಂದ ಬಂದ ಕಾರ್ಯಕ್ಕೆ ಅಂಜರು, ಏಕಾಂಗವೀರರು. ವಾಯದ ಹರೆಮಾತಿನ ಮಾಲೆಗೆ ಬೆದರಿ ಬೆಚ್ಚಿ ಓಡುವನಲ್ಲ, ಏಕೋಭಾವ ನಿಷೆ* ನಿಬ್ಬೆರಗು ಗಟ್ಟಿಗೊಂಡ ದೃಢಚಿತ್ತವುಳ್ಳ ಸದ್ಭಕ್ತ. ಇಂತಪ್ಪ ಉಲುಹಡಗಿದ ಶರಣರ ಸಂಗದಲ್ಲಿರಿಸಿ ಬದುಕುವಂತಿರಿಸಯ್ಯಾ, ವರದ ಶಂಕರೇಶ್ವರಾ.
--------------
ವರದ ಸಂಕಣ್ಣ
ಅಯ್ಯಯ್ಯಾ ನೀ ಬಾರಯ್ಯ ಬಾರಯ್ಯ. ಆನಂದದಾದಿಯಲ್ಲಿ ಬಂದೆನ್ನ ಕರದಲ್ಲಿ ನಿಲ್ಲಯ್ಯ. ಅಯ್ಯಯ್ಯಾ, ಒಯ್ಯನೆ ಕೈಯಗುಡಯ್ಯ. ಕಂಗೆಟ್ಟ ಪಶುವಾದೆನು ಎಲೆ ಅಯ್ಯಾ ಕಪಿಲಸಿದ್ಧಮಲ್ಲಿಕಾರ್ಜುನಯ್ಯ ಕರುಣಿಸು ನಿಮ್ಮ ಧರ್ಮ.
--------------
ಸಿದ್ಧರಾಮೇಶ್ವರ
ಕರ್ಪರದ ಕರದಲ್ಲಿ ಇದ್ದ ಮೂಜಗವೆಲ್ಲವು ತಪ್ಪತಿ ಸಿದ್ಧಾಂತವನು ಭೇದಿಸಿ, ಶಬ್ದಬ್ರಹ್ಮವು ಮೀರಿದತ್ತ ಬ್ರಹ್ಮಾಂಡವು ಇತ್ತೆರವು ಕಂದೊಳಲು ಮೂಲೋಕಕೆ. ಅಯ್ಯ ಕೇಳಯ್ಯ, ನಿನ್ನಮೃತಹಸ್ತವನೊಮ್ಮೆ ಒಯ್ಯನೆ ನೀಡಿ ಪರಮಪದದಲ್ಲಿ ಕೈಯೈದರಲ್ಲಿ ಮುಖವು, ನಯನದಲ್ಲಿ ಜಿಹ್ವೆ ತಾನುಣುತಪ್ಪ ಕರಮುಖದಲ್ಲಿ ಚೋದ್ಯವ ಬೆಳಗಿನಲ್ಲಿ ಗುರುಕರಣವಿಡಿಪ್ಪ ಭಾವ ಸಜ್ಜನ ಶುದ್ಧ ಸದ್ಭಕ್ತರ ಇಂದ್ರಿಯಂ ಐದು ನಿನ್ನುಂಬ ಜಿಹ್ವೆಯಾಗಿ ಸಂದಣಿಪ ಕರಣ ನಿನ್ನಯ ಚೇತನ. ಇಂತು ಭಕ್ತಂಗೆ ಪ್ರಾಣವು ಶೂನ್ಯ ನಿನಗೀಗ ಅಂತರಿಪ ಕಾಯವಿಲ್ಲದ ಪರಿಯನು, ಇಂತು ವಿಚಾರಿಸುವಡೆ ಭಕ್ತ ಕಾರಣ ಪರಶಿವನು ಸಂತತಂ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಅಂಗದ ಕೊನೆಯ ಮೇಲಣ ಕೋಡಗ ಕೊಂಬಿಗೆ ಹಾರಿತ್ತು, ಅಯ್ಯಾ ಇದು ಸೋಜಿಗ !_ ಕಯ್ಯ ನೀಡಲು ಮೈಯೆಲ್ಲವನು ನುಂಗಿತ್ತು ಒಯ್ಯನೆ ಕರೆದಡೆ ಮುಂದೆ ನಿಂತಿತ್ತು ಮುಯ್ಯಾಂತಡೆ ಬಯಲಾಯಿತ್ತು_ಗುಹೇಶ್ವರಾ !
--------------
ಅಲ್ಲಮಪ್ರಭುದೇವರು
ಏಕೆನ್ನ ಸಿರಿಗಳು ಕೆರೆಗಳು ಮರಗಳು ಫಲಗಳು ಬೀಯದ ಮುನ್ನ ಒಯ್ಯನೆ ಮಾಡಿ ಭೋ, ಹಾಲುಳ್ಳಲ್ಲಿ ಹಬ್ಬವನು. ಎನ್ನ ಭಕ್ತಿ-ಮುಕ್ತಿ ಸವೆಯದ ಮುನ್ನ ಲಿಂಗವೆ ಜಂಗಮವೆಂದು ಮಾಡಿ ಭೋ. ಸ್ವಾತಂತ್ರಯ್ಯ ತನ್ನನೀವ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಸತ್ತು ಚಿತ್ತಾನಂದ ನಿತ್ಯ ಪರಿಪೂರ್ಣ ವಸ್ತು ತನ್ನ ವಿನೋದಕ್ಕೆ ತಾನೆ ಕರ್ತೃ ಭೃತ್ಯನಾದ ಭೇದಮಂ ಪೇಳ್ವೆ, ಅದೆಂತೆಂದಡೆ : ಒಂದು ಎರಡಾದ ಭೇದಮಂ ತಿಳುಹುವೆ. ಅದು ತಾನೆ ಸಂಗನಬಸವಣ್ಣನೆಂದು, ಚೆನ್ನಬಸವಣ್ಣನೆಂದು ಎರಡು ನಾಮ ಅಂಗ-ಪ್ರಾಣದ ಹಾಂಗೆ. ಚನ್ನಬಸವಣ್ಣನಿಂದ ಸಂಗನಬಸವಣ್ಣ ಧನ್ಯನಪ್ಪನು. ಈ ಎರಡು ವಸ್ತುವನೊಳಕೊಂಡು ಆಚರಿಸುವ ಜ್ಞಾನಿಜಂಗಮದ ನಿಲವೆಂತೆಂದೊಡೆ : ಆವನಾನೊಬ್ಬನು ಭಸಿತಮಂ ಪಿಡಿದು ಅಯ್ಯಾ ಶರಣಾರ್ಥಿ ಎಂದು ಕರೆಯಲು, ಒಯ್ಯನೆ ನಿರೀಕ್ಷಿಸುವುದೆ ಜ್ಞಾನಿಜಂಗಮಕ್ಕೆ ಕರ್ತೃತ್ವ. ಇದಲ್ಲದೆ, ನಡೆಯದೆ ಜಂಗಮ ಎಲವೋ ಎಂದು ಕರೆವುತ್ತಿರಲು ನಸುಗೆಂಪಿನ ಭಾವವೇರಿ ಹೋದರೆ ಭಸಿತಕ್ಕೆ ದೂರ. ಸಾಕ್ಷಿ : ವರ್ಣಿ ವಕಾಪೋಸೋವಾಸಿ ಶೂದ್ರೋಪಿ ಯದಿ ಭೂತಿದಃ| ಸಾ ಭೂತಿಃ ಸರ್ವಥಾ ಗ್ರಾಹ್ಯಾ ನೋ ಚೇದ್ಧ್ರೋಹಿ ಮಮೈವ ನಃ || ದುರಾಯ ಲೆಕ್ಕಕ್ಕೆ ಹರಣವ ಕೊಟ್ಟವರುಂಟು. ವಿಶ್ವಾಸಕ್ಕೆ ಅಂಗಕ್ಕೆ ಅರಿವನರಸುವ ಪರಿಯಂತರ ಇದೇ ದೃಷ್ಟ. ಲಿಂಗದೇವನು ಮನವ ನೋಡಬೇಕೆಂದು ಭಕ್ತಿಯೆಂಬ ಭಿನ್ನಹಕ್ಕೆ ಅವಿಶ್ವಾಸದಿಂದ ಅಡ್ಡಬರಲು ಇದರ ವಿಶ್ವಾಸವನರಿದು ವಿಚಾರಿಸಬೇಕು. ಕಿಚ್ಚು ಹತ್ತಿದಲ್ಲಿ ಊರಡವಿ ಕಾಡಡವಿಯೆಂದುಂಟೆ? ಚಿದಗ್ನಿ ಸ್ವರೂಪಮಪ್ಪ ಶ್ರೀಭಸಿತವ ಕಂಡಲ್ಲಿ ಹೋಗಲಮ್ಮೆನು, ಆವನಾದರಾಗಲಿ ಶ್ರೀ ಮಹಾದೇವನ ನೆನವನೆ ದೇವನೆಂದುದಾಗಿ, ಭವಿಯಾದರಾಗಲಿ ಹೋಗಲಮ್ಮೆನು. ಇದು ಎನಗೆ ಚೆನ್ನಬಸವಣ್ಣನಿಕ್ಕಿದ ಕಟ್ಟು. ಭವಿಯಾದರೆ ಕರೆದು ಒಡಂಬಡಿಸೂದು. ಭಕ್ತನಾದರೆ ಬಿನ್ನಹವ ಕೈಕೊಂಬುದು. ಆವನಾದರಾಗಲಿ ಶ್ರೀ ಮಹಾದೇವನ ನೆನವವನೆ ದೇವನೆಂದುದಾಗಿ, ಭವಿಯಾದರೆ ಹಾಲು ಹಣ್ಣು ಕಾಯಿ ವಸ್ತ್ರವ ಕೈಕೊಂಬುದು. ಮತ್ತಾ ಭಸಿತಕ್ಕೆ ಶರಣೆಂದು ಅವನ ಕಳುಹುವುದು. ಭಕ್ತನಾದರೆ ಬಿನ್ನಹವ ಕೈಕೊಂಡು ಆತನ ತ್ರಿವಿಧಕ್ಕೆ ತಾ ಕರ್ತನಾಗಿ ಆತನ ತನ್ನೊಳಗೆ ಇಂಬಿಟ್ಟುಕೊಂಬುದು ಜ್ಞಾನಜಂಗಮದ ಲಕ್ಷಣ. ಇನ್ನು ಕ್ರಿಯಾಮಾಹೇಶ್ವರ ಭೇದಮಂ ಪೇಳ್ವೆ : ಶಿವಭಕ್ತರು ಬಂದು ಬಿನ್ನಹವ ಕೈಕೊಳ್ಳಿಯೆಂದು ಉದಾಹರಣೆಯಿಂದ ಬಿನ್ನವಿಸುತ್ತಿರಲ ಅದಕ್ಕೆ ಒಡಂಬಟ್ಟು ಕೈಕೊಂಬುದು ; ಅಲ್ಲದಿರ್ದಡೆ ಕಳುಹುವುದು. ಇದಲ್ಲದೆ ಬಾಯಿಗೆ ಬಂದಂತೆ ನುಡಿದು ಅಡ್ಡ ಮೋರೆಯ ಹಾಕೋದು ಜಂಗಮಕ್ಕೆ ಕರ್ತೃತ್ವವಲ್ಲ. ಜ್ಞಾನಿಜಂಗಮ ತ್ರಿವಿಧಪದಾರ್ಥವ ಕೈಕೊಂಬುದು. ಕ್ರಿಯಾಜಂಗಮ ಎರಡು ಪದಾರ್ಥವಂ ಬಿಟ್ಟು ಒಂದು ಪದಾರ್ಥವ ಕೈಕೊಂಬುದು. ಭಾವಜಂಗಮ ಇಂತೆರಡ ಮೀರಿ ತ್ರಿವಿಧರಹಿತವಾಗಿ ತೋರ್ಪುದು. ಗೋಣಿಯ ಮರೆಯ ಕೇಟೇಶ್ವರಲಿಂಗವು ತ್ರಿವಿಧಜಂಗಮದ ನಿಲವಿನ ನಿರುಗೆಯ ನಿರೂಪಿಸಿದರು.
--------------
ಬೊಕ್ಕಸದ ಚಿಕ್ಕಣ್ಣ
ಎಂದಪ್ಪುದಯ್ಯಾ ಶಿವಭಕ್ತಿರಸ? ಎನಗೆಂದಪ್ಪುದಯ್ಯಾ ನಿಮ್ಮ ಕರುಣ? ಕ್ರಿಯಾಕಾರಕ್ಕೆ ತಾನೆ ಮೂಗನಾದೆ. ಮೊದಲುಗೆಟ್ಟೆನು ಶುದ್ಧಮೂಲದಲ್ಲಿ. ನಿರ್ವಾಣದೀಕ್ಷೆಯಲಿ ಒಯ್ಯನೆ ಮುಖದೋರೆ ಅಯ್ಯಾ ನೀನೆಯ್ದಿಕೊ ಮನ ಮಧ್ಯವ. ಮಥನದಲಿ ಸಂಗಮಿಸಿ ಯಥಾ ಕಥನಕ್ಕೆ ತಾನಾಗಿ ಸದಮಳ ಜ್ಞಾನಕ್ಕೆ ಮಾತೆಯಾಗಿ ಅತಿಶಯದ ರೂಪ ನಿನ್ನ ನೆನಹಿನ ನಿರ್ಮಳದಲ್ಲಿ ಲೀಯ್ಯವಾದೆ ಕಪಿಲಸಿದ್ಧಮಲ್ಲಿಕಾರ್ಜುನ
--------------
ಸಿದ್ಧರಾಮೇಶ್ವರ
-->