ಅಥವಾ

ಒಟ್ಟು 5 ಕಡೆಗಳಲ್ಲಿ , 4 ವಚನಕಾರರು , 5 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವ್ರತಾಚಾರವ ಅವಧರಿಸಿದ ಭಕ್ತಂಗೆ ಕತ್ತಿ ಕೋಲು ಅಂಬು ಕಠಾರಿ ಈಟಿ ಕೊಡಲಿ ಮತ್ತಾವ ಕುತ್ತುವ ಕೊರವ ಹಾಕುವ, ಗಾಣ ಮುಂತಾಗಿ ದೃಷ್ಟದಲ್ಲಿ ಕೊಲುವ ಕೈದ ಮಾಡುತ್ತ, ಮತ್ತೆ ಅವ ವ್ರತಿಯೆಂದಡೆ ಮೆಚ್ಚುವರೆ ಪರಮಶಿವೈಕ್ಯರು ಇಂತಿವ ಶ್ರುತದಲ್ಲಿ ಕೇಳಲಿಲ್ಲ, ದೃಷ್ಟದಲ್ಲಿ ಕಾಣಲಿಲ್ಲ, ಅನುಮಾನದಲ್ಲಿ ಅರಿಯಲಿಲ್ಲ. ಸ್ವಪ್ನದಲ್ಲಿ ಕಂಡಡೆ ಎನ್ನ ವ್ರತಕ್ಕದೇ ಭಂಗ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವಾದಡೂ ಒಲ್ಲೆನು.
--------------
ಅಕ್ಕಮ್ಮ
ಮುನ್ನಿನ ಆದ್ಯರ ಪಥಂಗಳು ಇನ್ನಾರಿಗೂ ಅಳವಡವು ನೋಡಾ. ಬಲ್ಲೆನಾಗಿ ಒಲ್ಲೆನು ಅವರ, ಸಲ್ಲರು ಶಿವಪಥಕ್ಕೆ. ಒಳ್ಳಿಹ ಮೈಲಾರನ ಸಿಂಗಾರದಂತೆ, ವೇಶಿಯ ಬಾಯ ಎಂಜಲನುಂಬ ದಾಸಿಯ ಸಂಸಾರದಂತೆ, ಕೂಡಲಸಂಗನ ಶರಣರನರಿಯದೆ ಉಳಿದ ಭಂಗಿತರ.
--------------
ಬಸವಣ್ಣ
ಅಯ್ಯಾ ನಿಮ್ಮಲ್ಲಿ ಸಾರೂಪ್ಯವರವ ಬೇಡುವೆನೆ ? ಬ್ರಹ್ಮನ ಶಿರಸ್ಸುವ ಹೋಗಾಡಿದೆ. ಅಯ್ಯಾ ನಿಮ್ಮಲ್ಲಿ ಸಾಮೀಪ್ಯವರವ ಬೇಡುವೆನೆ ? ವಿಷ್ಣು ದಶಾವತಾರಕ್ಕೆ ಬಂದ. ಅಯ್ಯಾ ನಿಮ್ಮಲ್ಲಿ ಸಾಯುಜ್ಯವರವ ಬೇಡುವೆನೆ ? ರುದ್ರ ಜಡೆಯ ಹೊತ್ತು ತಪಸ್ಸಿರುತ್ತೈದಾನೆ. ಅಯ್ಯಾ ನಿಮ್ಮಲ್ಲಿ ಶ್ರೀಸಂಪತ್ತೆಂಬ ವರವ ಬೇಡುವೆನೆ ? ಲಕ್ಷಿ ್ಮೀ ಪರಾಂಗನೆ ಪರಸ್ತ್ರೀ ಸಕಳೇಶ್ವರಯ್ಯಾ ಆವ ವರವನೂ ಒಲ್ಲೆನು. ಚೆನ್ನಬಸವಣ್ಣನ ಶ್ರೀಪಾದದ ಹತ್ತೆ ಇಪ್ಪಂಥ ವರವಕೊಡು.
--------------
ಸಕಳೇಶ ಮಾದರಸ
ಚಿನ್ನ ಲೋಹಾದಿಗಳು ಕರಗಿ ಒಂದುಗೂಡುವುದಲ್ಲದೆ ಮಣ್ಣು ಬೆಂದು ಹಿಂಗಿ ಓಡಾದುದು ಸರಿಯಿಂದ ಸಂದುಗೂಡುವುದೆ? ಅರಿಯದ ಮರವೆಯ ಒಡಗೂಡಬಹುದಲ್ಲದೆ ಅರಿತು ಹೇಳಿ ಕೇಳಿ ಮತ್ತರಿಯೆನೆಂದು ಅಹಂಕಾರದಲ್ಲಿ ನುಡಿವವನ ಒಡಗೂಡಬಹುದೆ? ಇಂತೀ ಗುಣವ ಅರಿದು ಒಪ್ಪಿದಡೆ ಪರಕ್ಕೆ ದೂರ, ಅಲ್ಲ- ಅಹುದೆಂದಡೆ ಶರಣರ ಗೆಲ್ಲ ಸೋಲದ ಹೋರಾಟ. ಇಂತಿವರೆಲ್ಲರೂ ಕೂಡಿ ನೊಂದಡೆ ನೋಯಲಿ, ನಾ ಕೊಂಡ ವ್ರತದಲ್ಲಿಗೆ ತಪ್ಪೆನು. ಇದು ವ್ರತಾಚಾರವ ಬಲ್ಲವರ ಭಾಷೆ. ಏಲೇಶ್ವರಲಿಂಗವು ಕುಲ್ಲತನವಾದಡೂ ಒಲ್ಲೆನು.
--------------
ಏಲೇಶ್ವರ ಕೇತಯ್ಯ
ಸದ್ಭಕ್ತರಲ್ಲಿಗೆ ಹೋಗಿ, ಸಮಯೋಚಿತವ ಮಾಡುವನ, ಸದ್ಭಕ್ತರಿಗೆ ಉಣಲಿಕ್ಕಿ, ತನ್ನ ಹಸಿವ ಮರೆದಿಪ್ಪವನ, ಸದ್ಭಕ್ತರಿಗೆ ಉಳ್ಳುದೆಲ್ಲವ ಕೊಟ್ಟು, ಎಯ್ದದೆಂದು ಮರುಗುವ ಏಕೋಗ್ರಾಹಿ ನೆಟ್ಟನೆ ಶರಣ. ತೊಟ್ಟನೆ ತೊಳಲಿ, ಅರಸಿ ಕಾಣದೆ, ಮೂರು ತೆರನ ಮುಕ್ತಿಯ, ಹದಿನಾರುತೆರನ ಭಕ್ತಿಯ. ಇಂತಪ್ಪ ವರವ ಕೊಟ್ಟಡೆ ಒಲ್ಲೆನು. ಸಕಳೇಶ್ವರದೇವಾ, ನಿಮ್ಮ ಶರಣರ ತೋರಾ ಎನಗೆ.
--------------
ಸಕಳೇಶ ಮಾದರಸ
-->