ಅಥವಾ

ಒಟ್ಟು 8 ಕಡೆಗಳಲ್ಲಿ , 2 ವಚನಕಾರರು , 5 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಗ್ಘವಣಿಯ ತಂದು ಮಜ್ಜನವ ಮರೆದವನ, ಪುಷ್ಪವ ತಂದು ಪೂಜೆಯ ಮರೆದವನ, ಓಗರವ ತಂದು ಅರ್ಪಿತವ ಮರೆದವನ, ಲಿಂಗವ ಕಂಡು ತನ್ನ ಮರೆದವನ, ಮಹಾಘನವ ಒಳಕೊಂಡಿತ್ತು ಗುಹೇಶ್ವರ.
--------------
ಅಲ್ಲಮಪ್ರಭುದೇವರು
ಹಿಂದಣ ಅನಂತವನೂ, ಮುಂದಣ ಅನಂತವನೂ ಒಂದು ದಿನ ಒಳಕೊಂಡಿತ್ತು ನೋಡಾ ! ಒಂದು ದಿನವನೊಳಕೊಂಡು ಮಾತಾಡುವ ಮಹಂತನ ಕಂಡು ಬಲ್ಲವರಾರಯ್ಯ ? ಆದ್ಯರು ವೇದ್ಯರು ಅನಂತ ಹಿರಿಯರು, ಲಿಂಗದಂತುವನರಿಯದೆ ಅಂತೆ ಹೋದರು ಕಾಣಾ ಗುಹೇಶ್ವರಾ !
--------------
ಅಲ್ಲಮಪ್ರಭುದೇವರು
ಮುಕ್ತಿಗೆ ಮುಖವಾಗಿ ಯುಕ್ತಿಗೆ ಹೊರಗಾಗಿ ಅರಿವಿಂಗೆ ಅರಿವಾಗಿಪ್ಪ ಭೇದವು ಎನಗೆ ಕಾಣಬಂದಿತ್ತು ನೋಡಾ. ನಿನ್ನ ಒಳಗ ಒರೆದು ನೋಡಿದಡೆ, ಒರೆದೊರೆಯಿಲ್ಲದ ಚಿನ್ನದ ಪರಿಮಳ ಎನ್ನ ಮನವನಾವರಿಸಿ ಪರಮಸುಖದ ಪರಿಣಾಮವನು ಒಳಕೊಂಡಿತ್ತು ನೋಡಾ. ಈ ಕುರುಹಿನ ಮೊಳೆಯ ಬರಿಯ ಬಯಲಲ್ಲಿ ನಿಲಿಸಿ ನೋಡಿ ಕೂಡಾ, ನಮ್ಮ ಗುಹೇಶ್ವರನ ಶರಣ ಅಜಗಣ್ಣನೊಳಗೆ ನೀನು ನಿರಾಳಸಂಗಿಯಾಗಿ.
--------------
ಅಲ್ಲಮಪ್ರಭುದೇವರು
ಸುಖದ ಸುಖಿಗಳ ಸಂಭಾಷಣೆಯಿಂದ, ದುಃಖ ವಿಶ್ರಾಮವಾಯಿತ್ತು. ಭಾವಕ್ಕೆ ಭಾವ ತಾರ್ಕಣೆಯಾದಲ್ಲಿ, ನೆನಹಕ್ಕೆ ವಿಶ್ರಾಮವಾಯಿತ್ತು. ಬೆಚ್ಚು ಬೆರಸಲೊಡನೆ ಮಚ್ಚು ಒಳಕೊಂಡಿತ್ತು, ಚೆನ್ನಬಂಕನಾಥನ ಮಾಹೇಶ್ವರಂಗೆ.
--------------
ಸುಂಕದ ಬಂಕಣ್ಣ
ಮನವ ಮರೆದು ಮಾಡಿದಡೆ ಲಿಂಗರೂಪವಾಯಿತ್ತು. ಧನವ ಮರೆದು ಮಾಡಿದಡೆ ಜಂಗಮರೂಪವಾಯಿತ್ತು. ತನುವ ಮರೆದು ಮಾಡಿದಡೆ ಪ್ರಸಾದರೂಪವಾಯಿತ್ತು. ಇಂತೀ ತ್ರಿವಿಧವನರಿದು ಮಾಡಿದಡೆ ಬಯಲು ರೂಪವಾಯಿತ್ತು. ಮನವನರಿಯನಾಗಿ, ಲಿಂಗವನರಿತ. ಧನವನರಿಯನಾಗಿ ಜಂಗಮವನರಿತ. ತನುವನರಿಯನಾಗಿ ಪ್ರಸಾದವನರಿತ_ ಈ ತ್ರಿವಿಧಸುಖವ ಮರೆದನಾಗಿ ಬಯಲೆಂದರಿತ. ಮನವ ಲಿಂಗ ಒಳಕೊಂಡಿತ್ತು. ಧನವ ಜಂಗಮ ಒಳಕೊಂಡಿತ್ತು. ತನುವ ಪ್ರಸಾದ ಒಳಕೊಂಡಿತ್ತು. ಇಂತೀ ತ್ರಿವಿಧರೂಪವನು ಬಯಲು ಒಳಕೊಂಡಿತ್ತು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
-->